Saturday, March 31, 2012

ಇವತ್ತು ಅಜ್ಜನ ಮನೆಯಲ್ಲಿ ತುಂಬಾ ಶಾಂತಿ. ನಂಬಿಕೆ ಇಲ್ಲದಿದ್ದರೆ ಈ ಫೋಟೋ ನೋಡಿ...


ಮನವೇಕೋ ಭಾರ, ಕಣ್ಣಂಚೂ ಒದ್ದೆ
ಹೊಟ್ಟೆಯಲೂ ಸಂಕಟ, ತಲೆಯಲಿ ತಾಕಲಾಟ
ಬಯಸಿ ಬಯಸಿ ಪಡೆದುದು ಮತ್ತೋರ್ವರ ಸೊತ್ತು
ಅದ ಪಡೆಯಲು ಇಷ್ಟೆಲ್ಲಾ ಕಸರತ್ತು
ಆರಾರ ಶಾಪ-ನಿಟ್ಟುಸಿರು ತಗಲುತ್ತದೆಯೋ
ಬದುಕಿನ ಬಂಡಿ ಹೇಗೆ ಗುರಿ ಮುಟ್ಟುತ್ತದೆಯೋ

Thursday, March 29, 2012

ಚಿತ್ತ ವಿಭ್ರಮೆ

ಶೂನ್ಯದಲ್ಲೆಲ್ಲೋ ನೆಟ್ಟ ದೃಷ್ಟಿ, ಅಸ್ಪಷ್ಟ ಗೊಣಗಾಟ
ಬಳಲಿ ಬೆಂಡಾಗಿ ಹತ್ತಿಯಂತಾಗಿರುವ ದೇಹ
ಕಣ್ಣು ಮಿಲಾಯಿಸಿದೊಡನೆ ವಿಚಿತ್ರ ನಗು
ಅಸ್ತವ್ಯಸ್ತಗೊಂಡ ಮೈ ಮೇಲಣ ಅರಿವೆ
ವಿಕಾರಗೊಂಡ ಕಳಾಹೀನ ಮುಖ
ಕೈಕಾಲುಗಳ ವಿಚಿತ್ರ ಚಲನೆ
ದೇವಾ, ಯಾವ ಪಾಪಕ್ಕೆ ಈ ಶಿಕ್ಷೆ
ಜೀರ್ಣಗೊಂಡ ಮನಸು-ದೇಹಕ್ಕೆ ಯಾಕೀ ಯಾತನೆ ?

Wednesday, March 28, 2012


ನನ್ನ ಜೀವದ ಜೀವ ನೀನು
ನಿನ್ನ ಬಿಟ್ಟು ಇರುವೆನೇ ನಾನು?
ನನ್ನ ಕಣ್ಣಲಿ ನಿನ್ನ ಬಿಂಬ
ನಿನ್ನ ನಗುವಲಿ ನನ್ನ ಉಸಿರು
ನನ್ನ ಉಸಿರ ನಿಲ್ಲಿಸಬೇಡ ಗೆಳೆಯಾ
ನಗುತಿರಲು ನೀನು ಬದುಕುವೆ ನಾನು

Tuesday, March 20, 2012

ನಗು

ನಗುವಿನ ಒಡತಿ ನಾನೇ
ನಗು, ನನ್ನ ನೋಡಿ ನಗು ಕಲಿಯಿತು
ಅಳು, ನನ್ನ ನೋಡಿ ದುಃಖ ಮರೆಯಿತು
ಜನ ನನ್ನ ನೋಡಿ ನಕ್ಕರು
ಮನ, ಎಲ್ಲಾ ನೋಡಿ ಅತ್ತಿತು!

Monday, March 19, 2012

ದೇಶ ಪ್ರೇಮಿ


ಈಚೆಗೆ ಓದಿ ಮುಗಿಸಿದ್ದು.

ಕಂಬಾರರ ’ಶಿಖರಸೂರ್ಯ’, ಸೂರ್ಯನಾರಾಯಣ ಚಡಗರ ’ ಮನೆತನ ’, ಜಯಂತರ ’ಚಾರ್ ಮಿನಾರ್ ’, ಬೆಳೆಗೆರೆಯವರ ’ ರೇಷ್ಮೆ ರುಮಾಲು ’ , ಮಿತ್ರಾ ಅವರ ’ಮಾಯಕದ ಸತ್ಯ’ ಮತ್ತೆ ಗೋಪಾಲಕೃಷ್ಣ ಪೈ ಅವರ’ ಮೂರು ಮತ್ತಿಷ್ಟು’ ಈಚೆಗೆ ಓದಿ ಮುಗಿಸಿದ್ದು...ಮತ್ತಷ್ಟು ಬಾಕಿ ಇವೆ ಸಂಗ್ರಹದಲ್ಲಿ ಮುಗಿಸಲು! :) ಪುಸ್ತಕಕಿಂತ ಒಳ್ಳೆ ಗೆಳೆಯರಾರು ? ಪ್ರಪಂಚ ಮರೆಸಿಬಿಡುತ್ತವೆ.

Tuesday, March 13, 2012

ಈ ಮುದ್ದು ಮುಖಗಳು, ನಗು ನೂರು ನೋವ ನೀಗಬಲ್ಲದಲ್ಲವೇ ?
ಪ್ರೀತಿಸುವಿರಾ?


ಅವರನ್ನು ಇಡಿಯಾಗಿ ಪ್ರೀತಿಸಿ,ತುಂಡು-ತುಂಡಾಗಿ ಅಲ್ಲ. ಅವರ ಇಷ್ಟಗಳನ್ನು ಗೌರವಿಸಿ, ಪ್ರೀತಿ-ಪಾತ್ರರನ್ನು ಆದರಿಸಿ. ಅವರ ಮನಸ್ಸ ನೋಯಿಸಬೇಡಿ, ಚುಚ್ಚಿ ಮಾತಾಡಬೇಡಿ. ಪ್ರೀತಿಸುವ ಹೃದಯ ಸುಲಭದಲಿ ಸಿಗುವುದಿಲ್ಲ, ಸಿಕ್ಕವರನ್ನ ಕಳೆದುಕೊಳ್ಳಬೇಡಿ
ಕಣ್ಣ ರೆಪ್ಪೆಯಲ್ಲಿ ಕಾದಿಡಿ, ಹೃದಯದಲಿ ಬಚ್ಚಿಡಿ. ಜನ್ಮ ಪೂರ್ತಿ ಹುಡುಕಿದರೂ, ಜಗವೆಲ್ಲಾ ಜಾಲಾಡಿದರೂ ಒಮ್ಮೆ ಕಳಕೊಂಡ ಪ್ರೀತಿ ಮತ್ತೆ ಸಿಗಲಾರದು.....

Monday, March 12, 2012

ಬೆಟ್ಟಗಳೇ, ನಿಮ್ಮ ಸರದಿ....ಉತ್ತರ ನೀಡಿ...


ಸಹಸ್ರಾರು ವರುಷಗಳಿಂದ ನಿಂತಿರುವಿರೇಕೆ ಸುಮ್ಮಗೆ ಮಳೆ-ಗಾಳಿ-ಬಿಸಿಲಿಗೆ ಅಂಜದೆ
ಹುಟ್ಟಿಸಿದ ದೇವ ಬರೆದಿರುವನೇ ನಿಮ್ಮ ಸಾವು?
ದಿನ ದಿನಕ್ಕೂ ಮಣ್ಣಾಗುವುದೇ ನಿಮ್ಮಯ ಹಣೆ ಬರಹವೇ ?
ನಿಮ್ಮ ನೋಡೇ ಗಾದೆ ಹುಟ್ಟಿತೋ, ದಿನಾ ಸಾಯುವವರಿಗೆ ಅಳೋರಾರು ಅಂತ?
ಕಲ್ಲು, ಮಣ್ಣು, ಮರ, ಗಿಡ, ಪಕ್ಷಿ ಸಂಕುಲ, ನಿಮ್ಮೊಡಲಾಳದಲ್ಲಿ ಏನುಂಟು, ಏನಿಲ್ಲ
ನಿಮ್ಮ ತಲೆಯ ಮೇಲೆ ಹತ್ತಲು ಮನುಷ್ಯನ ಪರದಾಟ, ಅದ ನೋಡಿ ನಗುವಿರೋ ಒಳಗೊಳಗೆ
ನೆತ್ತಿಯಲ್ಲೊಂದು ಪುಟ್ಟ ಗುಡಿ, ಗುಡಿಯಲೊಬ್ಬ ಏಕತಾರಿ ಹಿಡಿದ ಮುದುಕ
ನಿಮ್ಮೀ ಸಂಗಾತಿ ನಿಮ್ಮ ಬೇಸರ ಕಳೆಯಲೆಂದೇ ಹುಟ್ಟಿ ನಿಮ್ಮ ಬಳಿ ಬಂದನೇ
ಅಥವಾ ಅವನ ಕನಸುಗಳಿಗೆ ನುಗ್ಗಿ ಬಾಯೆಂದು ನೀವೇ ಕಾಡಿದಿರೇ?
ಅವನ ಉದರ ಪೋಷಣೆಗಾಗಿ ನೀವೇ ಮರಗಳ ಪೋಷಿಸಿದಿರೋ
ಆ ಶಿಲ್ಪಿಯ ಹೆಸರ ಹೇಳಬಲ್ಲಿರಾ, ಈ ಹೆಸರಿಲ್ಲದ ಮುದುಕನಿಗೆ ಸೂರು ಕೊಟ್ಟವನು
ಗುಡಿಯಲಿರುವ ರೂಪವಾವುದು, ಈಶನೋ ಅಲ್ಲಾ ಹನುಮನೋ
ಗುಡಿಯ ಕಮಾನು, ಕಂಬ ಬೀಳುತಿರೆ, ಅದೇ ದೇವಗೂ-ಮುದುಕನಿಗೂ ಸಮಾಧಿಯೇ
ಆ ಸುದಿನಕ್ಕೇ ಕಾಯುತ್ತಿರುವರೇ ಈರ್ವರು, ನಿಮ್ಮ ಮನ-ಕಣ್ಣು ಇದ್ದರೆ ನೀವೂ ಅಳುವಿರೆನೋ
ಕಾಡ್ಗಿಚ್ಚು ಹಬ್ಬಿದಾಗ ನಿಮ್ಮ ಅಂಗಾಂಗಳೂ ಸುಡುತ್ತವೆಯೇನು, ಆ ಬಾನಾಡಿಗಳೂ, ಮೃಗಗಳು ಸುಡುವಾಗ
ನಿಮ್ಮ ನೋವಿಗೆ ಮುಲಾಮು ಹಚ್ಚುವರಾರು ಆ ಪವನ ದೇವನೇ?

Wednesday, March 7, 2012

ಚೆಲುವೆ


ಸ್ತ್ರೀ


ಹುಚ್ಚು ಹಿಡಿದಂತೆ ಪ್ರೀತಿಸುವವಳು
ಹೊಟ್ಟೆ ಕಿಚ್ಚಲ್ಲಿ ಜಗಳವಾಡುವವಳು
ಬದುಕಲಿ ಖುಷಿ ಕೊಡಲೆಂದೇ ಬಂದವಳು
ತನ್ನ ಮೀರಿ ತನ್ನನ್ನೇ ಕೊಟ್ಟವಳು
ನೊಂದಾಗ ನೋಯುವವಳು
ನಗುವಾಗ ಸಂಭ್ರಮಿಸುವವಳು
ಪ್ರೀತಿ ಬಿಟ್ಟು ಬೇರೇನೂ ಬಯಸದ ಜೀವ
ಅಹಮಿನ ಕೋಟೆಯೊಡೆದು ತಲೆ ಬಾಗಿದವಳು
ನಿನ್ನೆ ತನಕ ಎಲ್ಲಿದ್ದೆ ಅಂತ ಪೀಡಿಸುವವಳು
ಪದೇ ಪದೇ ಸತ್ತು ಬದುಕುವವಳು
"ನಾನಲ್ಲವೇ ಸ್ತ್ರೀ ? "

ನೀನು


ಯಾರಿಗೂ ಬೇಕಿಲ್ಲದಿರಬಹುದು
ಯಾರಿಗೂ ಅರ್ಥವಾಗದಿರಬಹುದು
ಯಾರೂ ಇಷ್ಟಪಡದಿರಬಹುದು
ಯಾರಲ್ಲೂ ನೀ ಹಂಚಿಕೊಳ್ಳಲಾಗದಿರಬಹುದು
ಆದರೆ ಸನಿಹದಲ್ಲಿರುವ ನಾನು ಏಕೆ ಕಾಣಿಸುತ್ತಿಲ್ಲ ನಿನಗೆ?

Monday, March 5, 2012

ಕೋಟೆಯೊಳು ಸುತ್ತಿದಾಗ

ಇಲ್ಲೇ ಓಡಾಡಿರಬಹುದು ರಾಣಿಯೊಬ್ಬಳು, ಸದ್ದಿಲ್ಲದಂತೆ ಅತ್ತಿರಬಹುದು
ಸೇವಕಿಯೋರ್ವಳು ಗಂಧ ತೀಡಿರಬಹುದು, ರಾಣಿಯ ಬಗ್ಗೆ ಮರುಕಪಟ್ಟಿರಬಹುದು
ಯಾರದೋ ಕಣ್ಣಿನ ತಂಪ ನೆಳಲಲ್ಲಿ ಬೆಳೆದು ಕಟ್ಟುಪಾಡಿಗಳಿಲ್ಲದೆ
ಹಾರಿದ ಹಕ್ಕಿಯ ತಂದು ಚಿನ್ನದ ಪಂಜರದಲ್ಲಿರಿಸಹರಲ್ಲಾ
ಕಳೆದ ಕಾಲ ಕನಸೇ, ಮತ್ತೆಂದೂ ತಿರುಗಿ ಬಾರದಲ್ಲ ?
ಬದುಕು ಇಷ್ಟವಿಲ್ಲದನ್ನು ಮಾಡುವ ಬಲವಂತದ ಊಟವೇ 
ಇದೇ ಬಾವಿಗೆ, ಆ ಪಂಜರದಿಂದ ಹೊರಬಿದ್ದು ಹಾರಿರಬಹುದೇ ಯುವತಿ
ಹಾರುವಾಗ ಕಲ್ಲಿಗೆ ಬಡಿದ ಶಬ್ದಕ್ಕೆ ಕಿಂಚಿತ್ತಾದರೂ ಅಂಜಿರಬಹುದೇ ರಾಜನ ಹೃದಯ
ಅಂತ:ಪುರದ ತುಂಬಾ ರಾಣಿಯರ ಜಾತ್ರೆ, ಓರ್ವರಾದರೂ ಕೇಳಿರಬಹುದೇ ಅವರ ಮನದ ಯಾತನೆ
ಕೋಟೆ-ಕೊತ್ತಲಗಳೂ ಮಣ್ಣಾಗುತ್ತಿವೆ, ಯಾವ ವ್ಯಾಮೋಹವಿತ್ತೋ ಆ ಸಾಮ್ರಾಟನಲ್ಲಿ ತನ್ನ ಬಗ್ಗೆಯೇ
ತಾ ಇಲ್ಲವಾದರೆ ಅವರೂ ಸಾಯಗೊಡಬೇಕೆಂಬ ಕ್ರೂರತನ ಏಕೋ
ಬದುಕುವ ಆಸೆ ಅವರಿಗಿಲ್ಲವಾಗಿತ್ತೇ, ಅಥವ ಹೊತ್ತು ತಂದು ಅಗ್ನಿಗೆ ಆಹಾರವೀಯುತ್ತಿದರೇ
ಒಂದೇ ಒಂದು ಸುಳಿವು ನೀಡಿರಿ ಓ ಗೋಡೆಗಳೆ? ಏನೇನು ನಡೆದಿತ್ತು ಇಲ್ಲಿ
ಮೂಕ ಸಾಕ್ಷಿಗಳಾಗಿ ಏಕೆ ನಿಂತಿದ್ದೀರಿ? ರಾಜಂದಿರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋದರು
ಇನ್ನಾದರೂ ಮಾತನಾಡಿ, ದೌರ್ಜನ್ಯವ ಹೇಳಲು ಇಷ್ಟವಿರದಿದ್ದಲ್ಲಿ ವೈಭವವನ್ನಾದರೂ ಹೇಳಿ
ಇಲ್ಲಿ ಆನೆ-ಕುದುರೆಗಳ ಹೆಜ್ಜೆ ಗುರುತಿಹುದಲ್ಲ, ಅವಾದರೂ ಸಂತಸದಲ್ಲಿದ್ದವೇ
ನೂರಾರು ನರ್ತಕಿಯರು-ವಿದೂಷಕರಿದ್ದರಲ್ಲ, ಅವರು ನಿಮ್ಮ ರಂಜಿಸಿದರೇ
ಅಥವಾ ಅವರ ಕಣ್ಣಲಿ ತುಂಬಿದ್ದ ವಿಷಾದದ ಛಾಯೆಯ ನೀವು ಕಂಡಿರಾ
ಕಾಲ ಚಕ್ರ ಒಮ್ಮೆ ಹಿಂತಿರುಗು, ನಡೆದಿದ್ದು ಏನೆಂದು ಒಂದು ತುಣುಕು ತೋರಿಸು.
ಅಮ್ಮನಿನ್ನ ನೆನಪು ಕಾಡುವುದು ಹಗಲಿರುಳೂ
ದುಸ್ವಪ್ನಗಳು ಬಿದ್ದು ಎಚ್ಚರವಾದರೆ ನಿನ್ನ ಮುಖ
ಯಾರ ಕೆಟ್ಟ ದೃಷ್ಟಿ ಬಿದ್ದಿತೋ, ಯಾರ ಶಾಪ ತಟ್ಟಿತೋ
ನಿನ್ನ ಸೆಳೆಯಿತು ಮರೆವಿನ ಮಹಾ ಮಾರಿ
ಪ್ರೀತಿಯ ನೀ ಅರಿಯಲಾರೆ
ನಾವೆಲ್ಲರೂ ನಿನಗೆ ಅಪರಿಚಿತರೆ ?
ದೇವಾ, ನಿಜ ಹೇಳು ಇದೊಂದು ಕೆಟ್ಟ ಕನಸು ತಾನೆ?
ಎಚ್ಚರವಾದರೆ ಅಮ್ಮ ಮೊದಲಂತಾಗುವರು ತಾನೆ ?

ಗೆಳೆಯಾ


ಕೆನ್ನೆಯಿಂದುರುಳುವ ಕಂಬನಿಯ ಹನಿಗಳಲ್ಲಿ
ಕಾಣುತ್ತಿಲ್ಲವೇ ನಿನ್ನ ಪ್ರತಿಬಿಂಬ ?
ಕಲ್ಲಾಗಬೇಡ ಗೆಳೆಯಾ ನನ್ನ ಕಷ್ಟಗಳಿಗೆ
ನೀನನಲ್ಲದೇ ಆರು ನನ್ನ ಜೀವ ?

ದೂರ ದೃಷ್ಟಿ....


Saturday, March 3, 2012

ಪುಟ್ಟಮ್ಮನಿಗೆ...


ಪುಟ್ಟಿ, ನೀನೆಂದೂ ಅಳಬಾರದು, ಗಟ್ಟಿಯಾಗಿರಬೇಕು ಕಲ್ಲಿನಂತೆ
ನಿನ್ನ ಬದುಕು ಬರೆದಾಗಿದೆ ಬ್ರಹ್ಮ, ನಿಲ್ಲಬಾರದು ನಿಂತ ನೀರಿನಂತೆ
ಕಟ್ಟು-ಪಾಡುಗಳು ಶುರುವಾಗುವವು ಬಾಲ್ಯದಿಂದಲೇ ನಿನ್ನ ಬೆಂಬಿಡದ ಭೂತದಂತೆ
ನೀ ಹುಡುಗಿಯಮ್ಮ, ಹಾರಬಾರದು, ಜಿಗಿಯಬಾರದು ಹುಡುಗರಂತೆ
ನೀನಾಡಬಾರದು ಮರಕೋತಿ, ಮಾವಿನ ಕಾಯ ಕೊಯ್ಯಬಾರದು ಅಣ್ಣನಂತೆ
ನೀ ಧರಿಸಬೇಕು ಹಿಂಸೆಯಾಗುವಂತೆ ಮೈ ತುಂಬಾ ಬಟ್ಟೆ!
ನೀ ತಿರುಗಬಾರದು ಬಿಸಿಲಲ್ಲಿ, ನಾಳೆ ಖರ್ಚಾಗುವ ವಸ್ತು ನೀ, ಬಣ್ಣವುಳಿಸಿಕೊಳ್ಳಬೇಕು
ನೀ ಕಲಿಯಬೇಕು ಅಡುಗೆ, ಮನೆಕೆಲಸ, ಎಂದೋ ನಿನ್ನದಾಗುವ ಗಂಡನ ಮನೆಗಾಗಿ
ನೀ ದುಖ ನುಂಗವುದ ಕಲಿಯಬೇಕು, ನೋವ ನುಂಗಿ ನಗಬೇಕು
ನೀ ಮನಸ್ಸನ ಅಲೆಯಬಿಡಬಾರದು ಬಣ್ಣದ ಪಾತರಗಿತ್ತಿಯಂತೆ
ನೀ ನಗಬೇಕು ವಜ್ರದ ಪಂಜರದಲ್ಲಿದ್ದರೂ, ತುತ್ತು ಕೂಳಿಗೆ ಗತಿಯಿಲ್ಲದಿದ್ದರೂ
ನೀ ಆಸರೆಯಾಗಬೇಕು ಉಳಿದವರಿಗೆ, ನಿನಗಾಸರೆಯಿಲ್ಲದಿದ್ದರೂ
ನೀ ಕಣ್ಣಾಗಬೇಕು ನಿನ್ನ ಸುತ್ತಲಿರುವವರಿಗೆ, ನಿನ್ನ ಕಣ್ಣ ನೀ ಮುಚ್ಚಿದ್ದರೂ
ನೀ ಬದುಕಬೇಕು ಬೇರೆಯವರಿಗಾಗಿ, ನಿನ್ನ ಶವಯಾತ್ರೆ ನಡೆಯುತ್ತಿದರೂ
ನೀ ಉಸಿರಾಗಬೇಕು ನಿನ್ನ ಕಂದಮ್ಮನ ಬಾಳಿಗೆ, ನಿನ್ನಲ್ಲಿ ಉಸಿರದಿದ್ದರೂ.......

Thursday, March 1, 2012

ಸುಮ್ಮನೇ

ಒಡೆದ ಕನ್ನಡಿಯ ಚೂರುಗಳಾಗಿವೆ ನಿನ್ನ ಹೃದಯ
ಯಾವ ಚೂರಿನಲ್ಲೂ ನನ್ನ ಮುಖ ಕಾಣದು
ಎಲ್ಲಾ ಚೂರುಗಳಲ್ಲೂ ಬೇರೆಯದೇ ಬಿಂಬ
ಚೂರುಗಳ ಒಟ್ಟಿಗೆ ಜೋಡಿಸಿದರೂ ಅದರಲ್ಲಿ ನಾನು ಕಾಣಲೇ ಇಲ್ಲ...