Monday, March 12, 2012

ಬೆಟ್ಟಗಳೇ, ನಿಮ್ಮ ಸರದಿ....ಉತ್ತರ ನೀಡಿ...


ಸಹಸ್ರಾರು ವರುಷಗಳಿಂದ ನಿಂತಿರುವಿರೇಕೆ ಸುಮ್ಮಗೆ ಮಳೆ-ಗಾಳಿ-ಬಿಸಿಲಿಗೆ ಅಂಜದೆ
ಹುಟ್ಟಿಸಿದ ದೇವ ಬರೆದಿರುವನೇ ನಿಮ್ಮ ಸಾವು?
ದಿನ ದಿನಕ್ಕೂ ಮಣ್ಣಾಗುವುದೇ ನಿಮ್ಮಯ ಹಣೆ ಬರಹವೇ ?
ನಿಮ್ಮ ನೋಡೇ ಗಾದೆ ಹುಟ್ಟಿತೋ, ದಿನಾ ಸಾಯುವವರಿಗೆ ಅಳೋರಾರು ಅಂತ?
ಕಲ್ಲು, ಮಣ್ಣು, ಮರ, ಗಿಡ, ಪಕ್ಷಿ ಸಂಕುಲ, ನಿಮ್ಮೊಡಲಾಳದಲ್ಲಿ ಏನುಂಟು, ಏನಿಲ್ಲ
ನಿಮ್ಮ ತಲೆಯ ಮೇಲೆ ಹತ್ತಲು ಮನುಷ್ಯನ ಪರದಾಟ, ಅದ ನೋಡಿ ನಗುವಿರೋ ಒಳಗೊಳಗೆ
ನೆತ್ತಿಯಲ್ಲೊಂದು ಪುಟ್ಟ ಗುಡಿ, ಗುಡಿಯಲೊಬ್ಬ ಏಕತಾರಿ ಹಿಡಿದ ಮುದುಕ
ನಿಮ್ಮೀ ಸಂಗಾತಿ ನಿಮ್ಮ ಬೇಸರ ಕಳೆಯಲೆಂದೇ ಹುಟ್ಟಿ ನಿಮ್ಮ ಬಳಿ ಬಂದನೇ
ಅಥವಾ ಅವನ ಕನಸುಗಳಿಗೆ ನುಗ್ಗಿ ಬಾಯೆಂದು ನೀವೇ ಕಾಡಿದಿರೇ?
ಅವನ ಉದರ ಪೋಷಣೆಗಾಗಿ ನೀವೇ ಮರಗಳ ಪೋಷಿಸಿದಿರೋ
ಆ ಶಿಲ್ಪಿಯ ಹೆಸರ ಹೇಳಬಲ್ಲಿರಾ, ಈ ಹೆಸರಿಲ್ಲದ ಮುದುಕನಿಗೆ ಸೂರು ಕೊಟ್ಟವನು
ಗುಡಿಯಲಿರುವ ರೂಪವಾವುದು, ಈಶನೋ ಅಲ್ಲಾ ಹನುಮನೋ
ಗುಡಿಯ ಕಮಾನು, ಕಂಬ ಬೀಳುತಿರೆ, ಅದೇ ದೇವಗೂ-ಮುದುಕನಿಗೂ ಸಮಾಧಿಯೇ
ಆ ಸುದಿನಕ್ಕೇ ಕಾಯುತ್ತಿರುವರೇ ಈರ್ವರು, ನಿಮ್ಮ ಮನ-ಕಣ್ಣು ಇದ್ದರೆ ನೀವೂ ಅಳುವಿರೆನೋ
ಕಾಡ್ಗಿಚ್ಚು ಹಬ್ಬಿದಾಗ ನಿಮ್ಮ ಅಂಗಾಂಗಳೂ ಸುಡುತ್ತವೆಯೇನು, ಆ ಬಾನಾಡಿಗಳೂ, ಮೃಗಗಳು ಸುಡುವಾಗ
ನಿಮ್ಮ ನೋವಿಗೆ ಮುಲಾಮು ಹಚ್ಚುವರಾರು ಆ ಪವನ ದೇವನೇ?

No comments:

Post a Comment