Tuesday, July 30, 2013

ಸಂತೈಸುವುದು ?ಅಳುತ್ತಿದ್ದ ಹುಚ್ಚಿಯೋರ್ವಳ
ಸಂತೈಸಲು ಬಂದ ಕೈ
ಆಕೆ ವ್ಯಗ್ರವಾದೊಡನೆ
ಖಡ್ಗವಾಯಿತು.
ಆ ಖಡ್ಗ
ಅವಳ ಚುಚ್ಚಿ ಚುಚ್ಚಿ ನೋಯಿಸಿ
ಘಾಸಿಗೊಳಿಸಿತು.
ಮತ್ತೆ ವೇಷ ಬದಲಿಸಿ 
ಗುರಾಣಿಯಾಯಿತು.
ಗುರಾಣಿ, ಹುಚ್ಚಿಯ
ಗಾಯ ಮುಚ್ಚಿತು.
ಎಷ್ಟು ದಿನ ತಡೆದೀತು ಜೀವ
ಹುಣ್ಣಿನ ನೋವ
ದಿನಗಳೇ, ತಿಂಗಳೇ, ವರುಷಗಳೇ 
 ಹುಣ್ಣು ಹಣ್ಣಾಗಲೇಬೇಕು 
ಒಡೆಯಲೇಬೇಕು ಅದೊಂದು ದಿನ
ಕೀವು, ಕೆಟ್ಟ ರಕ್ತ ಸೋರೀತು 
ಹಾ!, ಸಿಡಿಯುವ ನೋವಿಲ್ಲ
ಉರಿ ಮಾತ್ರ. 
ಉರಿ ನಿಂತೀತು, ಆಗಲೋ ಈಗಲೋ
ಬೇಕಿರುವುದದಕ್ಕೆ ಸಮಯ ಮಾತ್ರ
ಗಾಯ ಮಾಯ್ದ ಮೇಲೆ 
ಮತ್ತೆ ಪ್ರಶಾಂತ ಮೌನ, 
ಈಗ ಬೇಕಿರುವುದು,
ಮತ್ತೊಮ್ಮೆ ಹುಣ್ಣಗಾದಂತೆ
ಸುಧೀರ್ಘ ಎಚ್ಚರಿಕೆ!

ನೆನಹು

ಮಡಚಿದ ಬೆರಳುಗಳಂತೆ
ವರ್ಷಗಳೂ ಮಡಚಿ ಮಕಾಡೆ ಬಿದ್ದವಲ್ಲ
ಎಣಿಕೆಗೂ ಮೀರಿದ ರಭಸದಲಿ
ಗುಡು ಗುಡು ಶಬ್ದಿಸುತಾ ಉರುಳಿ ಹೋದವು
ಬೆರಳುಗಳಲೂ, ಶಬ್ದದಲೂ 
ಹಿಡಿಯಬಹುದೇ ಅತೀ ಸೂಕ್ಷ್ಮ ನೆನಹುಗಳ ? 


Tuesday, July 23, 2013

ಬ ದು ಕು

ಏನು ಮಾಡುತ್ತೀರಾ ಸ್ವಾಮೀ
ಬಂದಿದ್ದು ಇಲ್ಲಿಗೆ, ಸುತಾರಾಂ ಇಚ್ಚೆಯಿಂದಲ್ಲ
ಇರಲೇ ಬೇಕಂತೆ ಇಲ್ಲಿ , ಹೋಗಬಾರದಂತೆ
ನಾವೇ ಸುತ್ತು  ಹಾಕಿಕೊಂಡ ಸಂಬಂಧಗಳ
ಉರುಳುಗಳ ನಡುವೆ ವಿಚಿತ್ರ ಒದ್ದಾಟ! 
ಯಾರ ಹಂಗಿಗೋ ವ್ಯರ್ಥ ಪಯಣ  
ನಗುವಿನ ಸೋಗು ಸರಿಯಂತೆ
ಅಳು ಮಾತ್ರ ಹೊರೆಯಂತೆ
ಸಮಾಜವಂತೆ, ಕಟ್ಟು ಪಾಡುಗಳಂತೆ
ಯಾರಿಗೂ ಸಲ್ಲದ ಕಿರೀಟ 'ಸಂತಸ'!
ಒಂದು ಸಲ ಎಡವಿದಿರೋ ಅಷ್ಟೇ 
ಮುಗಿಯಿತು ನಿಮ್ಮ ಕಥೆ
ಹುರಿದು ಮುಕ್ಕುತ್ತಾರೆ ಜನಗಳಿಲ್ಲಿ!
ನೀವ್ಯಾರು ನಿರ್ಧರಿಸಲು ಸರಿ ತಪ್ಪು, 
ಇದು ಬಲ, ಇದು ಎಡ 
ಯಾರಿಟ್ಟರು ಈ ಹೆಸರುಗಳ? 
ಹೆಸರುಗಳಿಲ್ಲದೆ ಅರ್ಥವೂ ಇಲ್ಲವೇ? 
ಹೆಸರಿಲ್ಲದ್ದಕ್ಕೆ ಅಸ್ತಿತ್ವವಿಲ್ಲವೇ? 
ಜಗಕ್ಕಲ ಹಾಸಿ ಹೊದೆಯುವ ಕಾರ್ಪಣ್ಯ 
ಅಷ್ಟು ಸಾಲದು, ತನ್ನಿ ಇನ್ನೊಂದು, 
ಮಗದೊಂದು  ಜೀವ ಈ ನರಕಕ್ಕೆ!  
ನರಳಾಡಿಸಿ, ಗೋಳಾಡಿಸಿ ಅದನ್ನ
ಅದು ನಗುವಾಗ ನಕ್ಕು 
ಅಳುವಾಗ ಅತ್ತು ಬಿಡಿ ಸ್ವಾಮೀ
ಇದೆಲ್ಲ ನಮ್ಮದೇ ಆದ
ಬ ದು ಕು! 
ಮುಗಿಯಲಿಲ್ಲ ಇಲ್ಲಿಗೆ, ತಡೆಯಿರಿ ಸಲ್ಪ, 
ಪುನರಪಿ ಜನನಂ, ಪುನರಪಿ ಮರಣಂ!

Sunday, July 21, 2013

ಕೇವಲ ಮನುಷ್ಯರು

ಪೊರೆಗಳ ಹೊರೆ ಹೊತ್ತು ಸಂಚರಿಸುವವರು 
ಸನ್ನಿವೇಶಕ್ಕೆ ತಕ್ಕ ಪೊರೆ, ಕೆಲಸ ಮುಗಿಯಿತೋ 
ಮತ್ತೊಂದು ಸಿದ್ಧ
ಪೊರೆಗಳ ಕೆಳಗೆ ಇದೆಯೇ ನಿಜವಾದ ಚರ್ಮ ?
ಉಹ್ಮೂ, ಅಲ್ಲೂ ಇಲ್ಲ
ತೆವಳುವಾಗಷ್ಟೇ ಇದ್ದಿದ್ದು ಅದು
ನಿಧಾನಕ್ಕೆ ಪೊರೆಗಳು ಬೆಳೆಯಲು ಶುರು ಮಾಡಿದವು
ಪೊರೆಯಾವುದು, ಚರ್ಮ ಯಾವುದು ಈಗ? 
ಗೊತ್ತಿಲ್ಲ, ತಲೆ ಬುರುಡೆ ಸಿಡಿದ ಮೇಲೂ ತಿಳಿಯದು
ಮತ್ತೊಂದು ಶರೀರ, ಮತ್ತಿಷ್ಟು ಪೊರೆಗಳು
........................


Friday, July 19, 2013

ಹೆಜ್ಜೆಪಾಚಿಗಟ್ಟಿದ, ತೇವವಿರುವ ಹಾದಿಯಲಿ ಹೋದಾಕೆ ಹಿಂದೆ ಬರುವವಳ ಪಾಡು ಕಂಡು ಮತ್ತೆ ಅದೇ ಹಾದಿಯಲ್ಲಿ ತಿರುಗಿ ಬಂದು ಅಪರಿಚಿತಳ ಕೈ ಹಿಡಿದು ನಡೆಸಿದಳು. ಅವಳು ಜಾರಿದ, ತಡವರಿಸಿದ ಹಳೆಯ ಹೆಜ್ಜೆಗಳಲ್ಲಿ ಧೈರ್ಯದ ಹೊಸ ಎರಡು ಹೆಜ್ಜೆಗಳು ಮೂಡಿದವು.

ಭ್ರಮೆಭ್ರಮೆಯ ರೇಶಿಮೆ ಪರದೆಯ ಹರಿಯದೇ ಬಿಡು
ತೋರುತಿದೆ ಅದು ಸುಂದರ, ಸ್ನಿಗ್ಧ ಬಣ್ಣಗಳ
ನನಗೆ ಬಣ್ಣಗಳೇ ಜೀವನಾಧಾರ, ಬಣ್ಣಗಳಿರದೇ ಜಗವಿಲ್ಲ
ಭ್ರಮೆ ಸತ್ಯದ ಸಾವಲ್ಲ, ನೀ ಕಾಣದ ವಿರುದ್ಧ ದಿಕ್ಕಿನ ಬದುಕು
ಬದುಕಲು ಬಿಡು ನನ್ನ, ನೀ ಕಾಣದ ಜಗದಲಿ
ಅಲ್ಲಿಹುದು ನನ್ನಯ ಕನಸುಗಳೂ, ಬಣ್ಣಗಳೂ
ಉನ್ಮಾದವಿಳಿದ ಮೇಲೆ ಪ್ರತೀ ಪದವೂ ವ್ಯರ್ಥಾಲಾಪವೇ.