Friday, August 30, 2013

ಇನ್ನೂ ಬರಲಿಲ್ಲ ಕಳ್ಳ

ಪಾವ್ ನ ಒಂದು ದೊಡ್ಡ ತುಂಡು ನಿನಗಾಗಿಯೇ ತೆಗೆದಿಟ್ಟಿದ್ದೇನೆ ಬಾಲ್ಕನಿಯಲ್ಲಿ. ಸಣ್ಣ ವಾಟಿಯಲ್ಲಿ ನೀರೂ... ಅಲ್ಲ, ನಾ ಮರೆತರೆಡೈನಿಂಗ್ ಟೇಬಲ್ ಹಾದು ಪ್ಯಾಸೇಜು ಮೂಲಕ ಮಲಗುವ ಕೋಣೆಗೆ ಬಂದು,‘ ಯಾಕಿವತ್ತು ಏನೂ ಇಟ್ಟಿಲ್ಲ ಅನ್ನೋ ತರಹಗುರಾಯಿಸ್ತಾಯಿಲ್ಲ. ಯಾಕೆ ಇವತ್ತು ಬೆಳಗ್ಗಿಂದ ಸುದ್ದೀನೇ ಇಲ್ಲ! ನಿನ್ನೆ ಇಟ್ಟ ಮೊಳಕೆ ಬರಿಸಿದ ಕಾಳು ಸ್ವಾಹ! ಎಲ್ಲಿ ಹೋದೆಯೋ ?  ಇಡೀ ದಿನ ಹೊರಗಿದ್ದ ಪಾವ್ ಬಿಸಿಲಿಗೋ, ಗಾಳಿಗೋ ಗಟ್ಟಿಯಾಗುತ್ತೆ ಕಣೋ, ಬಂದು ತಿನ್ನೋ ಬೇಗ!

ಪುಣ್ಯಾತ್ಮ, ನೀನಾಗೇ ಬಂದು ಊಟ ತಿಂದು ಹೋಗ್ತೀಯಲ್ಲಾ? ಹೇಗೆ ಇದು ನನ್ನದೇ ಮನೆ ಅಂತ ಗುರುತು ಹಿಡಿಯುತ್ತೀ? ಹಿಂದಿನ ಜನ್ಮದ ಸಾಲ ಮರುವಸೂಲಿಗೆ ಬಂದಿದ್ದೀಯಾ? ಹೌದು, ಅವತ್ತು ನನ್ನ ಪುಟ್ಟನೊಡನೆ ನಡಕೊಂಡು ಬರುವಾಗ ರಸ್ತೆ ಮಧ್ಯದಲ್ಲಿ ಆರಾಮಾಗಿ ನಿಂತು ಎರಡೂ ಕೈಯಲ್ಲಿ  ದಾರಿಯಲ್ಲಿ ಬಿದ್ದ ಹಣ್ಣು ತಿಂತ ಇದ್ದವನು ನೀನೇನಾ? ಯಾವ ಹಣ್ಣೋ, ಏನು ಕಥೆಯೋ, ಯಾರೋ ನಿಂಗೆ ಅದನ್ನೆಲ್ಲಾ ತಿನ್ನಬಹುದು ಅಂತ ಹೇಳಿ ಕೊಟ್ಟಿದ್ದು ?ಅದು ಸರಿ, ನೀವೆಲ್ಲಾ ಒಂದೇ ಥರಾ ಕಾಣ್ತೀರಪ್ಪಾ! ಅದೇ ರೋಮ ಎದ್ದು ನಿಂತ ಗ್ರೇ ಶೇಡ್ ಫರ್ ಮೈ, ಚಿಕ್ಕ ಕಪ್ಪು ಕಣ್ಣುಗಳು, ರಾಮ ಎಳೆದ ಮೂರು ನಾಮ ಬೆನ್ನ ಮೇಲೆ! ನಾವೆಲ್ಲಾ ನಿನ್ನ ಕಣ್ಣಿಗೂ ಹಾಗೆಯೇ ಕಾಣುತ್ತೇವಾ ಮರಿ ? !?

Thursday, August 29, 2013

ಸ್ಮಶಾನವಲ್ಲ!

ಹಳೆಯ ನೆನಪುಗಳ
ಗೋರಿಗಳು ಇವು
ಸತ್ತ ಕನಸುಗಳ 
ಗೋರಿಗಳು ಇವು
ಇತ್ತೀಚೆಗಷ್ಟೇ ಸತ್ತ
ಕೊಳೆತು ನಾರುವ 
ಕನಸುಗಳೂ ಇವೆ...
ತೋರಿಸುತ್ತಾ ನಡೆದೆ ನೀನು ! 

ಅರೆ! ಮನಸ್ಸೆಂಬ ಮನಸಿದು 
ಗೋರಿಗಳು ಗುಂಪಾಗಿರುವ 
ಸ್ಮಶಾನವಲ್ಲ! 
ಗುಡಿಸಾಚೆ ಒಮ್ಮೆ
ಇಲ್ಲವೇ ಸುಟ್ಟೇ ಬಿಡು
ಎಲ್ಲವೂ ಮುಗಿಯತೆ? 

ಚೆಂದ ಕಟ್ಟೆ ಕಟ್ಟು
ಹೊಸ ಕನಸೆಂಬ ಬೀಜವಿದೆ ನನ್ನ ಬಳಿ 
ನೆಡೋಣವೆನು? 
ಹೆಮ್ಮರವಾದೀತು ಮರುಕ್ಷಣವೇ
ಚೆಂದ ಹೂಗಳೂ ನಕ್ಕೀತು...
ಒಣ ಹೂಗಳೂ, ತರಗಲೆಗಳೂ
ಬಿದ್ದೀತು, ತೊಂದರೆಯಿಲ್ಲ
ಅವಾಗವಾಗ ಗುಡಿಸಿದರಾಯಿತು ಅಲ್ಲವೇ? 


Done in Adobe Ideas

ನೀ ಬಿಟ್ಟು ಹೋದ ಹೆಜ್ಜೆ ಗುರುತುಗಳು...

Wednesday, August 28, 2013

Every human comes with a price tag!

ಸುತ್ತಲೂ ಮನುಜರು 
ಪ್ರತೀ ಮನುಜನಿಗೂ 
ಹುಟ್ಟಿನಿಂದಲೇ ಅಂಟಿಕೊಂಡ 
ದರಪಟ್ಟಿ! 
 ಹತ್ತಿರ ಹೋಗಿ ನೋಡಿ, 
 ಅಲ್ಲ, ನೀವಂದುಕೊಂಡಂತೆ 
 ಆ ದರ ದುಡ್ಡಲ್ಲ! 
 ಪ್ರತಿ ದರವೂ ಭಾವನೆಗಳಿಲ್ಲಿ 
 ಭಾವನೆಗಳಿಗೆ ಭಿಕರಿಯಾಗುವ 
ಶೂನ್ಯಾತ್ಮರಿವರು 
 ಕೆಲವರು ಅಹಂಕಾರಕ್ಕೆ 
ಕೆಲವರು ಸ್ವ- ಮರುಕಕ್ಕೆ 
ಕೆಲವರು ವಿಷಾದಕ್ಕೆ 
ಕೆಲವರು ದ್ವೇಷಕ್ಕೋ, ಮೋಹಕ್ಕೋ 
ಇನ್ನೂ ಕೆಲವರು ಸಾವೆಂಬ ಭಾವಕ್ಕೆ! Sunday, August 25, 2013

Monday, August 19, 2013

Tuesday, August 13, 2013

ಮೌನ

ಅದೋ ಅಲ್ಲಿ ಮೌನ, 
ಹಲೋ ನೀ ಮೌನವೆ?
ಉಹೂಂ, ಮೌನ ಹಲೋ ಹೇಳುವುದಿಲ್ಲ 
ಬದಲಿಗೆ ಹೌದು ಎಂಬಂತೆ ತಲೆಯಾಡಿತು. 

ಇನ್ನೇನು ಮಾತಾಡಲಿ ಇವಳ ಬಳಿ ? 
ಇವಳು ಗೆಳತಿಯಲ್ಲ 
ಆದರೆ ಜೀವಮಾನವಿಡಿ ಒಟ್ಟಿಗಿರುತ್ತಾಳೆ 

ಟಿ ವಿ ನೋಡುವಾಗ, ಪಕ್ಕದಲ್ಲಿ 
ಬಟ್ಟೆ ಮಡಚುವಾಗ ಎದುರಲ್ಲಿ 
ಅಡುಗೆ ಮನೆಯಲ್ಲಿ ಬೆನ್ನ ಹಿಂದೆಯೇ 
ಊಫ್! ಬೇಡದ ನೆರಳಿನಂತೆ ಸದಾ 

ಮಗು ಬಂದರೆ ಮಾಯ, 
ಫೋನಿನ ಸದ್ದಿಗೂ ಮಾಯ!
ಎಲ್ಲಿಗೆ ಹೋಗುತ್ತಾಳೋ ಮಹಾರ್ಯ್ತಿ! 

ಮಾತು ಬೆಳ್ಳಿ, ಮೌನ ಬಂಗಾರವಂತೆ
ಈ ಅಂತೆ, ಕಂತೆಗಳು ಎಲ್ಲವೂ
ಯಾವನೋ ಕಡು ವಾಚಾಳಿಯದ್ದಿರಬೇಕು!
Sunday, August 11, 2013

Zendala art, after 2 long years !

ತಂತಿ ಬೇಲಿಯ ಒಂಟಿ ಕಾಗೆ

ಜಯಶ್ರೀ ಆಂಟಿ ಮನೆಗೆ ಚುಕ್ಕುಬುಕ್ಕು ಟೀಂ ಹೊರಟಿತ್ತು. ಆದರೆ ಕೊನೆ ಘಳಿಗೆಯಲ್ಲಿ ನನ್ನ ಮೈಸೂರು ಫ್ರೆಂಡ್ಸ್ ಬಂದಿದ್ದರಿಂದ ನಾನು ಹೋಗಲಾಗಲಿಲ್ಲ. ಸಿದ್ ಮತ್ತೆ ರಘು ಹೋಗಿ ಆಂಟಿ ಮಾಡಿದ ಎಲ್ಲವನ್ನೂ ತಿಂದು ಅವರಿಬ್ಬರ ಹತ್ತಿರ ಚೆಂದ ಟೈಮ್ ಸ್ಪೆಂಡ್ ಮಾಡಿ ಬಂದ್ರು, ನನ್ನ ಹೊಟ್ಟೆ ಉರಿಸಿದ್ರು ಕೂಡ. ಆದರೆ ಆಂಟಿ ನನಗೋಸ್ಕರ ಮಾಡಿದ ಊರಿನ ಹಲಸಿನ ತಿಂಡಿ ಪಾರ್ಸೆಲ್ ಮಾಡಿ ಕಳಿಸಿದ್ದಲ್ಲದೆ ನನಗೆ ಅವರ ಈ ಪುಸ್ತಕವನ್ನೂ ಕಳಿಸಿದ್ದರು. ಸರಿ, ಚೆಂದದ ತಿಂಡಿ ತಿನ್ನುತ್ತಾ ಪುಸ್ತಕ ಶುರು ಮಾಡಿದೆ. ಎಲ್ಲಾ ಕಥೆಗಳೂ ಒಂದಕ್ಕಿಂತ ಒಂದು.  ಕಣ್ಣೆಲ್ಲಾ ಒದ್ದೆ. ಬರೆದ ರೀತಿಯಂತೂ ತುಂಬಾ ತುಂಬಾ ಆಪ್ತವಾಗಿದೆ.  ಪಬ್ಲಿಶ್ ಆದ ವರ್ಷ ಪುಣ್ಯಕ್ಕೆ ೨೦೧೨ ಆಗಿತ್ತು. ಚುಕ್ಕುಬುಕ್ಕುವಲ್ಲಿ ಹಾಕಲೇಬೇಕು ಎಂದು ಅವರ ಹತ್ತಿರ ವಿವರಗಳನ್ನು ಕೇಳಿದೆ, ಕೂಡಲೇ ಎಲ್ಲವನ್ನೂ ಕಳುಹಿಸಿ ಕೊಟ್ಟರು.  ನಿಮ್ಮ ವಿಶ್ವಾಸಕ್ಕೆ ನಾನು ಏನು ಹೇಳಲಿ ಗೊತ್ತಾಗ್ತಾ ಇಲ್ಲ.  ಥ್ಯಾಂಕ್ಸ್ ಆಂಟಿ....

ಪುಸ್ತಕದ ಎಲ್ಲಾ ಕಥೆಗಳಲ್ಲಿ ಯಾವುದನ್ನು ಉಚಿತ ಭಾಗಕ್ಕೆ ಹಾಕೋದು ಅಂತ ಒದ್ದಾಡಿ ಹೋಗಿದ್ದೆ. ಕಂಬದ ಮೇಲಿನ ಚಿತ್ತಾರ ಅತೀ ಇಷ್ಟ ಆದುದ್ದು, ಅದಕ್ಕೆ ಅದನ್ನೇ ಹಾಕಿದೆ. 

ಓದಿ ನೋಡಿ...

Thursday, August 8, 2013

ಸೆಳೆತ

ಮನದ ಕಡಲಲಿ
ಭಾವಗಳ ಮೊರೆತ
ಮುಳುಗುವ ಹಡಗಲಿ
ಕುಳಿತವಗೆ ನಿನ್ನದೇ ಸೆಳೆತ

ಮುಕ್ತಾಯ

ನಿಮ್ಮ ಪದಕೋಶ ಮುಗಿಯಿತೇ? 
ಅಲ್ಲಿಗೆ ಮುಗಿಯಿತು  
ಸುಂದರ ಸಂಬಂಧವೂ....

Wednesday, August 7, 2013

:-)

ನನ್ನ ಪುಟ್ಟಣ್ಣ

ಆ ಕಡೆ ಒಂದು ಕೈ , ಈ ಕಡೆ ಒಂದು ಕೈ, ಬಹುಶ ಒಂದು ೩೦ ಮತ್ತೆ ಇನ್ನೊಂದು ೧೫೦ ಡಿಗ್ರಿಗಳಿರಬಹುದು. ಇನ್ನು  ಕಾಲೋ ಸೊಟ್ಟ ಪಟ್ಟ! ೧೦ ನಿಮಿಷಕ್ಕೊಂದು ಸಲ ಗಡಿಯಾರದ ಮುಳ್ಳುಗಳ ಥರ ಘಂಟೆ ತೋರಿಸೋದು. ಪುಣ್ಯಾತ್ಮನ್ನ ಎತ್ತಿ ಸರಿ ಮಲಗಿಸೋಕೆ ಹೋದ್ರೆ ಜೊಲ್ಲು ಸುರಿದ ಮುಖ ನನ್ನ ಮುಖದ ಹತ್ತಿರ ತಂದ. ಕೆನ್ನೆ ಮೇಲೆ ಮಲಗೋ ಉದ್ದ ಕಣ್ಣು ರೆಪ್ಪೆ, ಮುದ್ದು ಉಕ್ಕಿ ಮುತ್ತಿಕ್ಕಿ ಮಲಗಿಸಿದರೆ, ಒಂದೇ ನಿಮಿಷ, ಪುಟ್ಟ ಕಾಲು ನನ್ನ ಹೊಟ್ಟೆ ಮೇಲೆ, ಕೈ  ಮೂಗಿನ ಮೇಲೆ ಬಿಸಾಡಿ ಮಲಗಿದ. ಈ ಪುಟ್ಟ ಮರಿನ ಏನು ಮಾಡೊದು?  

Tuesday, August 6, 2013

Batman returns!

ನಗು

ನನ್ನ 
ನಗುವಿನ ಜಲಪಾತ
ನೀ ಕಾಣಲು
ದಾಟಬೇಕಿದೆ 
ಕಣ್ಣೀರ, ವ್ಯಥೆಯ ನದಿಯ
ನಿನ್ನ ಪ್ರೀತಿ, ಸಹನೆಯ
ತೆಪ್ಪದಲಿ

Friday, August 2, 2013

Thursday, August 1, 2013