Saturday, March 3, 2012

ಪುಟ್ಟಮ್ಮನಿಗೆ...


ಪುಟ್ಟಿ, ನೀನೆಂದೂ ಅಳಬಾರದು, ಗಟ್ಟಿಯಾಗಿರಬೇಕು ಕಲ್ಲಿನಂತೆ
ನಿನ್ನ ಬದುಕು ಬರೆದಾಗಿದೆ ಬ್ರಹ್ಮ, ನಿಲ್ಲಬಾರದು ನಿಂತ ನೀರಿನಂತೆ
ಕಟ್ಟು-ಪಾಡುಗಳು ಶುರುವಾಗುವವು ಬಾಲ್ಯದಿಂದಲೇ ನಿನ್ನ ಬೆಂಬಿಡದ ಭೂತದಂತೆ
ನೀ ಹುಡುಗಿಯಮ್ಮ, ಹಾರಬಾರದು, ಜಿಗಿಯಬಾರದು ಹುಡುಗರಂತೆ
ನೀನಾಡಬಾರದು ಮರಕೋತಿ, ಮಾವಿನ ಕಾಯ ಕೊಯ್ಯಬಾರದು ಅಣ್ಣನಂತೆ
ನೀ ಧರಿಸಬೇಕು ಹಿಂಸೆಯಾಗುವಂತೆ ಮೈ ತುಂಬಾ ಬಟ್ಟೆ!
ನೀ ತಿರುಗಬಾರದು ಬಿಸಿಲಲ್ಲಿ, ನಾಳೆ ಖರ್ಚಾಗುವ ವಸ್ತು ನೀ, ಬಣ್ಣವುಳಿಸಿಕೊಳ್ಳಬೇಕು
ನೀ ಕಲಿಯಬೇಕು ಅಡುಗೆ, ಮನೆಕೆಲಸ, ಎಂದೋ ನಿನ್ನದಾಗುವ ಗಂಡನ ಮನೆಗಾಗಿ
ನೀ ದುಖ ನುಂಗವುದ ಕಲಿಯಬೇಕು, ನೋವ ನುಂಗಿ ನಗಬೇಕು
ನೀ ಮನಸ್ಸನ ಅಲೆಯಬಿಡಬಾರದು ಬಣ್ಣದ ಪಾತರಗಿತ್ತಿಯಂತೆ
ನೀ ನಗಬೇಕು ವಜ್ರದ ಪಂಜರದಲ್ಲಿದ್ದರೂ, ತುತ್ತು ಕೂಳಿಗೆ ಗತಿಯಿಲ್ಲದಿದ್ದರೂ
ನೀ ಆಸರೆಯಾಗಬೇಕು ಉಳಿದವರಿಗೆ, ನಿನಗಾಸರೆಯಿಲ್ಲದಿದ್ದರೂ
ನೀ ಕಣ್ಣಾಗಬೇಕು ನಿನ್ನ ಸುತ್ತಲಿರುವವರಿಗೆ, ನಿನ್ನ ಕಣ್ಣ ನೀ ಮುಚ್ಚಿದ್ದರೂ
ನೀ ಬದುಕಬೇಕು ಬೇರೆಯವರಿಗಾಗಿ, ನಿನ್ನ ಶವಯಾತ್ರೆ ನಡೆಯುತ್ತಿದರೂ
ನೀ ಉಸಿರಾಗಬೇಕು ನಿನ್ನ ಕಂದಮ್ಮನ ಬಾಳಿಗೆ, ನಿನ್ನಲ್ಲಿ ಉಸಿರದಿದ್ದರೂ.......

No comments:

Post a Comment