Thursday, November 5, 2020

ಪರುಷ ಮಣಿ


(ಹಿಂದೆ ಯಾವತ್ತೋ ಬರೆದಿದ್ದ ಕತೆ, ಸಂಕಥನದಲ್ಲಿ ಪ್ರಕಟವಾಗಿತ್ತು)

 

ಬಚ್ಚಲಿನ ಪಕ್ಕದ ಬಾಣಂತಿ ಕೋಣೆಯ ಜಗಲಿಯಲ್ಲಿ ಅಡಿಕೆ ಸುಲಿಯುತ್ತಾ ಮಗಳು ಸೀತೆಯೊಡನೆ ಹರಟುತ್ತಾ ಕುಳಿತ ಭಾಗೀರಥಿ ಏತಕ್ಕೋ ತಲೆಯೆತ್ತಿ ಕಾಲುಹಾದಿಯೆಡೆ ಕಣ್ಣು ಹಾಯಿಸಿದರೆ ಆಡಿಕೆ ಮರಗಳ ಹಿನ್ನೆಲೆಯಲ್ಲಿ ಅಸ್ಪಷ್ಟವಾಗಿ ಗಂಡನ ಆಕೃತಿ ಕಾಣಿಸಿತು. ಗಡಿಬಿಡಿಯಿಂದ "ಬಾಯಾರಿಕೆಗೆ ತಂದಿಡು ಮಗಳೇ, ಅಕೋ ಅಲ್ಲಿ ಅಪ್ಪಯ್ಯ ಬಂದ್ರು" ಎಂದರು. ಅಷ್ಟರವರೆಗೂ ತಾಯಿಯ ಸಾನಿಧ್ಯದಿಂದ ಬೆಳಗಿದ್ದ ಸೀತೆಯ ಮುಖ ಕಪ್ಪಿಟ್ಟು, ಅವಳು ಬರಿದೇ ತಲೆಯಾಡಿಸಿ ಉಟ್ಟ ಸೀರೆಗೆ ಕೈಯೊರೆಸುತ್ತಾ ಒಳಧಾವಿಸಿದಳು. ಗಣಪಯ್ಯ ಹತ್ತಿರವಾದಂತೆಲ್ಲಾ ಅವರ ನಡೆಯುವ ಶೈಲಿಯಿಂದಲೇ ಏನು ನಡೆದಿರಬಹುದೆಂಬ ಸೂಚನೆ ಭಾಗೀರಥಿಗಾಗಲೇ ಸಿಕ್ಕಿತ್ತು. ದಪ ದಪ ಹೆಜ್ಜೆ ಹಾಕುತ್ತಾ ಬಂದವರೇ ಜಗಲಿಯಂಚಿಗೆ ಕುಸಿದು ಕೂತು, ಕೈಲಿದ್ದ ಬೈರಾಸಿನಿಂದ ಮುಖವೊರೆಸಿ " ಏ ಹೆಣ್ಣೇ, ಈ ಸಾಡೇಸಾತ್ ಶನಿ ಈ ಜನ್ಮದಲ್ಲಿ ನಮ್ಮ ಬೆನ್ನು ಬಿಡುವುದಿಲ್ಲ ಕಾಣ್ತದೆ. ಎಂತ ಸಾಯುವುದು! ಎಂತ, ಸತ್ತಾಳಾ ಹೇಗೆ!? ಒಂದು ಬಾಯಾರಿಕೆಗೆ ತರಲು ಹೇಳೇ" ಎಂದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳಿಗೂ ಕೇಳುವಂತೆ ತಮ್ಮ ದಪ್ಪ ಸ್ವರದಲ್ಲಿ ಬೊಬ್ಬಿರಿದರು. ಅದರಲ್ಲಿನ ತಿರಸ್ಕಾರ, ವ್ಯಂಗ್ಯ, ಅಸಹನೆ, ದ್ವೇಷಗಳು ಬಾಣಗಳಂತೆ ಒಂದರ ಹಿಂದೆ ಒಂದರಂತೆ ಹಾರಿ ಬಂದು ಭಾಗೀರಥಿಯ ಮನದಲ್ಲಿ ನೆಟ್ಟು ನೋಯಿಸತೊಡಗಿದವು. ಅಷ್ಟರಲ್ಲೇ ಮನೆಯಿಂದ ಬಂದ ಸೀತೆ, ಕೈಯಲ್ಲಿದ್ದ ಮಜ್ಜಿಗೆಯನ್ನು ಅಪ್ಪನ ಬಳಿಯಿಟ್ಟು ಒಂದು ಸಲವೂ ಅವರ ಕಡೆ ದೃಷ್ಟಿ ಹಾಯಿಸದೇ ತನ್ನ ಪಾಡಿಗೆ ತಾನು, ಸುಲಿಯುತ್ತಿದ್ದ ಅಡಕೆಯ ಬುಟ್ಟಿಯ ಹತ್ತಿರ ಕುಳಿತಳು.

ಅವಳನ್ನೇ ದುರುಗಟ್ಟಿ ನೋಡುತ್ತಿದ್ದ ಗಣಪಯ್ಯನ ಕೋಪ ನೆತ್ತಿಗೇರಿ ಅಲ್ಲೇ ಬಿದ್ದಿದ್ದ ಅಡಕೆ ಸೋಗೆಯನ್ನೆತ್ತಿಕೊಂಡು ಕೂತಿದ್ದವಳನ್ನು ಕೆಳಕ್ಕೆಳೆದು ಮನಸೋ ಇಚ್ಛೆ ಬಡಿದರು, ಬಿಡಿಸಲು ಬಂದ ಭಾಗೀರಥಿಗೂ ಒಂದಷ್ಟು ಬಡಿದು, ಅವಳನ್ನು ದೂಡಿ, ಅದೂ ಸಾಕಾಗದೆ ಸೋಗೆ ಬಿಸಾಡಿ, ಕೆಳಕ್ಕೆ ಬಿದ್ದ ಸೀತೆಯನ್ನು ಕಾಲಿನಿಂದ ಒದೆಯಲಾರಂಭಿಸಿದರು. ಅದರೊಂದಿಗೆ ಊರಿಡೀ ಕೇಳುವಂತೆ ಅಶ್ಲೀಲ ಬೈಗುಳಗಳ ಸುರಿಮಳೆ ಬೇರೆ.

ಅಲ್ಲಲ್ಲಿ ನಿಂತು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು ತೋಟದಾಳುಗಳು, ಮುಂದೆ ಬಂದು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ. ಅಷ್ಟು ಹೊಡೆಸಿಕೊಂಡರೂ ಒಂಚೂರೂ ನರಳದೇ, ಅಳದೆ, ಪ್ರತಿಭಟಿಸದೇ ಸುಮ್ಮನಿದ್ದಳು ಸೀತೆ. ಹೋದ ಜನ್ಮದಲ್ಲಿ ಮಾಡಿದ್ದ ಪಾಪಕ್ಕೆ ಉಳಿದುಹೋದ ಕಂದಾಯ ಸಲ್ಲಿಸುವವಳಂತೆ ಮುದ್ದೆಯಾಗಿ ಬಿದ್ದಿದ್ದಳು. ಭಾಗೀರಥಿಗೆ ಒಡಲೆಲ್ಲಾ ಹತ್ತಿ ಉರಿದಂತಾಯ್ತು. ಇನ್ನೂ ಒದೆಯುತ್ತಾ, ಬೈಯುತ್ತಿದ್ದ ಗಂಡನನ್ನು, ಅವುಡುಗಚ್ಚಿ ಎಲ್ಲಿಲ್ಲದ ಶಕ್ತಿಯನ್ನು ತಂದುಕೊಂಡು ದೂಡಿಬಿಟ್ಟಳು. ಆಕೆ ದೂಡಿದ ರಭಸಕ್ಕೆ ಸಮತೋಲನ ಕಳೆದುಕೊಂಡರೂ ಬೀಳದಂತೆ ಸಾವರಿಸಿಕೊಂಡ ಗಣಪಯ್ಯ ನಿಬ್ಬೆರಗಾಗಿ ಅವಳನ್ನೇ ದಿಟ್ಟಿಸಿದರು. ಅವಳ ಮುಖದಲ್ಲಿ ಕಾಣುತ್ತಿದ್ದ ತಿರಸ್ಕಾರ, ಕೋಪ ಅವರನ್ನು ಒಂದರೆಗಳಿಗೆ ಹಿಮ್ಮೆಟಿಸಿತು. ಬೆರಗು ಕಳೆದಂತೆ, ಚೆಲ್ಲಾಡಿ ಹೋಗಿದ್ದ ಕೋಪ, ಅಹಂಕಾರ, ಶಕ್ತಿಯನ್ನು ಬಾಚಿ ಧರಿಸಿ ಮತ್ತೆ ಕ್ರೂರ ಕಣ್ಣುಗಳಿಂದ ನೋಡುತ್ತಾ ಬೈಯಲು ಬಾಯಿ ತೆಗೆದರು. ಆದರೆ ಸಾಕ್ಷಾತ್ ಕಾಳಿಯೇ ಅವತರಿಸಿದಂತಿದ್ದ ಭಾಗೀರಥಿ ಅದಕ್ಕೆ ಸೊಪ್ಪು ಹಾಕದೆ ಹೊಡೆಯಲೆಂದು ಎತ್ತಿದ್ದ ಅವರ ಕೈಯನ್ನು ಬಲವಾಗಿ ತಿರುಚಿಬಿಟ್ಟಳು, ಅಷ್ಟೇ ಅಲ್ಲದೆ ಮೊಣಕಾಲೆತ್ತಿ ಎಲ್ಲಿಗೆ ಒದೆಯಬೇಕೋ ಅಲ್ಲಿಗೆ ಒದ್ದೂ ಬಿಟ್ಟಳು. ಬಿದ್ದವನ ಬೆನ್ನಿಗೆ ಅಂಗಳದಲ್ಲಿ ಹಾಕಿದ್ದ ಕಲ್ಲು ಚಪ್ಪಡಿ ಬಲವಾಗಿಯೇ ಬಡಿಯಿತು. ಅಲ್ಲಿಗೆರಡು ದಶಕ ವಿರಾಜಮಾನವಾಗಿ ಮೆರೆದ ಗಣಪಯ್ಯನ ಕಿರೀಟ ನೆಲಕಚ್ಚಿತು. ನೋವು, ಹತಾಶೆ, ಅವಮಾನಗಳಿಂದ ಗಣಪಯ್ಯ ಕಿರುಚುತ್ತಿದ್ದರೆ, ಅಷ್ಟು ಹೊತ್ತು ಸುಮ್ಮನಿದ್ದ ಸೀತೆ, ಎದ್ದು ನಿಂತು ಕುಣಿಯುತ್ತಾ, ಚಪ್ಪಾಳೆ ತಟ್ಟುತ್ತಾ ವಿಕಾರವಾಗಿ ನಗಲಾರಂಭಿಸಿದಳು. ನೆಲದಲ್ಲಿ ಕುಸಿದು ಕೂತು ನೋವಿನಿಂದ ಒದ್ದಾಡುತ್ತಿದ್ದ ಗಂಡನನ್ನು ಉದ್ದೇಶಿಸಿ, " ಇನ್ನೊಂದು ಸಲ, ಇನ್ನೊಂದು ಸಲ ನನ್ನ ಮಗಳ ಮೇಲೆ ಕೈಯಿಟ್ಟರೆ ನೋಡು, ಆ ವೀರಭದ್ರನ ಆಣೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನನ್ನ, ಈ ಭಾಗೀರಥಿ ಮಗಳಿವಳು. ನಾನಿದ್ದೇನೆ ಅವಳ ರಕ್ಷಣೆಗೆ, ಆ ವೀರಭದ್ರನಿದ್ದಾನೆ. ತಿಳಿದುಕೋ, ನಿನ್ನ ಸಿಗಿದು ತೋರಣ ಕಟ್ಟಲಿಕ್ಕೂ ನಾನು ಸಿದ್ಧ!" ಎಂದವರೇ ಮಗಳ ಕೈ ಹಿಡಿದು ಒಳಗೆಳೆದುಕೊಂಡು ಹೋದರು. ಢವಗುಡುತ್ತಿದ್ದ ಎದೆ ಬಡಿತವನ್ನು ತಹಬಂದಿಗೆ ತರಲೆತ್ನಿಸುತ್ತಾ ಮಗಳ ಕೈಹಿಡಿದು ಮನೆಯೊಳಗೆ ನುಗ್ಗಿ ದಾರಂದ ಅಲ್ಲಾಡಿ ಹೋಗುವಷ್ಟು ಜೋರಾಗಿ ಬಾಗಿಲು ಹಾಕಿಕೊಂಡಳು. ಮತ್ತದೇ ಬಾಗಿಲಿಗೆ ಬೆನ್ನಾನಿಸಿ ಕುಸಿದು ಕೂತು ಅಳಲಾರಂಭಿಸಿದಳು, ಅವಳ ಕೈ ಹಿಡಿತದಲ್ಲೇ ಸಿಕ್ಕಿಕೊಂಡ ತನ್ನ ಕೈ ಬಿಡಿಸಿಕೊಳ್ಳಲಾಗದೆ ಇದ್ದ ಸೀತೆ ಕೂಡ ಅವಳೊಂದಿಗೆ ತಾರಾಡಿ ನೆಲಕ್ಕೆ ಬಿದ್ದಳು. ತಾಯ ಮಡಿಲಿಗೆ ತೆವಳಿ ಅಲ್ಲೇ ತಲೆಯಿಟ್ಟು ತಾಯ ಅಳುವಿನೊಂದಿಗೆ ತಾನೂ ದನಿ ಸೇರಿಸಿ ಅಳಲಾರಂಭಿಸಿದಳು. ತಾಯಿ, ಮಗಳ ಅಳು ಹಾಗೂ ಹೊರಗಿದ್ದ ಗಣಪಯ್ಯನ ಗೊಣಗಾಟ ಸೇರಿ ಆ ಮನೆಯ ಛಾವಣಿಯ ಮೇಲೆ ಹದ್ದಿನಂತೆ ಗಿರಕಿ ಹೊಡೆಯಲಾರಂಭಿಸಿತು. ನೋವಿನಿಂದ ನರಳುತ್ತಿದ್ದ ಗಣಪಯ್ಯನ ಉಸಾಬರಿ ಕೇಳಲು ಯಾವೊಬ್ಬ ಆಳೂ ಬರಲಿಲ್ಲ.

ತೋಟಕ್ಕೆ ಹರಡಿದ ಈ 'ಭಾಗೀರಥಿ ಮಹಾತ್ಮೆ' ಪ್ರಸಂಗ ವಿವಿಧ ರೆಕ್ಕೆ ಪುಕ್ಕಗಳೊಂದಿಗೆ ಬೇಗನೆ ಇಡೀ ಊರಿನಲ್ಲಿ ಹಾರತೊಡಗಿತು. ಕಂಡವರಿಗೆಲ್ಲಾ ವಿವಿಧ ವರ್ಣಗಳೊಂದಿಗೆ ಮನೋರಂಜನೆ ಒದಗಿಸಿದ ಈ ಪ್ರಸಂಗ ಗಣಪಯ್ಯನ ಆಪ್ತ ಮಿತ್ರ ಚಾಟು ಕಿವಿ ತಲುಪಿದೊಡನೆ ಆತ ಎದ್ದೆನೋ ಬಿದ್ದೇನೋ ಎಂಬAತೆ ಮಿತ್ರನ ರಕ್ಷಣೆಗೆ ಧಾವಿಸಿ ಅಲ್ಲಿ ಭಾಗೀರಥಿಯ ದರ್ಶನವಾದೊಡನೆ ಕಾಲಿಗೆ ಬುದ್ಧಿ ಹೇಳಿದ್ದೂ ಆಯಿತು. ಇದರಿಂದ ಮನೆಯಲ್ಲಿ ಭಾಗೀರಥಿ ಯಜಮಾನ್ತಿಯ ಪಟ್ಟಕ್ಕೇರಿದರೆ ಊರಿನ ಪತೀ ಪೀಡಿತ ಹೆಣ್ಣು ಮಕ್ಕಳಿಗೆ ನೂರಾನೆ ಬಲ ಬಂದಂತಾಯ್ತು.

ಭಾಗೀರಥಿ ಗಣಪಯ್ಯನ ಎರಡನೇ ಧರ್ಮಪತ್ನಿಯಾಗಿ ಕಾಲಿಟ್ಟಾಗಿನಿಂದ ಎಂದೂ ಹೊರಗೆ ಕಾಲಿಟ್ಟದ್ದೇ ಇಲ್ಲ, ಮನೆಯ ಹಿತ್ತಲು,ಅದಕ್ಕೆ ಅಂಟಿಕೊAಡAತೇ ಇದ್ದ ಪುಟ್ಟ ಕೆರೆ, ಕೊಟ್ಟಿಗೆ, ಬಚ್ಚಲುಮನೆ, ಅದರ ಪಕ್ಕದ ಹೊರಗಾದಾಗ ಕೂರುತ್ತಿದ್ದ ಬಾಣಂತಿ ಕೋಣೆ, ಅಂಗಳ, ಅನತಿ ದೂರದಲ್ಲಿದ್ದ ಬಾವಿ ಇವಿಷ್ಟೇ ಇವಳ ಜೀವನದ ಪರಿಧಿ. ತಂದೆ ತಾಯಿ, ಅಣ್ಣ, ತಮ್ಮ, ಅಕ್ಕ ಎಲ್ಲರೂ ಮೊದಮೊದಲ ಕೆಲದಿನಗಳಲ್ಲಿ ನೋಡಲು ಬಂದರಾದರೂ ಅಳಿಯ ದೇವರ ಅಸಹ್ಯ ನುಡಿಗಳು ಹಾಗೂ ಜಿಗುಪ್ಸೆ ಹುಟ್ಟಿಸುವ ವರ್ತನೆಗಳಿಗೆ ನೊಂದುಕೊಂಡು ಅದನ್ನೂ ನಿಲ್ಲಿಸಿದ್ದರು. ತವರಿನಿಂದಲೂ ದೂರವಾದ ಭಾಗೀರಥಿ, ವಿಕ್ಷಿಪ್ತ ಮನಸ್ಸಿನ ಗಣಪಯ್ಯನ ವಿಕೃತ ಕೃತ್ಯಗಳಿಗೆ ಬಲಿಪಶುವಾಗುತ್ತಲೇ ಹೋದಳು. ಮನೆ ಬಿಟ್ಟು ಎಲ್ಲೂ ಹೋಗುವಂತಿಲ್ಲ, ಯಾರನ್ನೂ ಮಾತನಾಡಿಸಲೂಬಾರದು.ಮನೆಯಲ್ಲಿ ಟಿವಿ, ರೇಡಿಯೋ, ಪೇಪರ್ಗಳ ಸುದ್ದಿ ಸುರಾಣವಿರಲಿಲ್ಲ, ಎಲ್ಲರೂ ಸಾಮಾನ್ಯವಾಗಿ ತೊಡುತ್ತಿದ್ದ ನೈಟಿಯನ್ನೂ ಹಾಕಲು ಬಿಡುತ್ತಿರಲಿಲ್ಲ. ಮದುವೆ, ಶಾಸ್ತ್ರಗಳು ಎಲ್ಲವನ್ನೂ ಮುಗಿಸಿ ತವರ ಬಿಟ್ಟು ಯಾವುದೇ ಸಂಭ್ರಮವಿಲ್ಲದೆ ಗಂಡನ ಮನೆ ಹೊಕ್ಕುತ್ತಿದ್ದಂತೆ ಓಡಿ ಬಂದು ಕಾಲ ತಬ್ಬಿದ್ದು ಗಣಪಯ್ಯನ ಮೊದಲನೇ ಹೆಂಡತಿ ಜಾನಕಿಯ ಒಂದೂವರೆ ವರ್ಷದ ಕೂಸು ಸೀತೆ. ದೈನ್ಯತೆಯ ಪುಟ್ಟ ರೂಪವಾಗಿದ್ದ ಅದನ್ನು ನೋಡಿದೊಡನೆ ಎತ್ತಿ ಬಾಚಿ ತಬ್ಬಿದ್ದಳು ಭಾಗೀರಥಿ. ಅಲ್ಲೇ ಕೂತು ಕುಟ್ಟಾಣಿಯಲ್ಲಿ ಎಲೆ ಅಡಿಕೆ ಕುಟ್ಟುತ್ತಿದ್ದ ಅತ್ತೆ ಎಂಬ ಮುದಿಜೀವ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು, ತನ್ನ ಕೆಲಸವಾಯಿತೆಂಬಂತೆ ಸೊಸೆ ಬಂದ ಎರಡೇ ತಿಂಗಳಲ್ಲಿ ಗೋಡೆ ಮೇಲಿನ ಪಟವಾಗಿತ್ತು. ತವರಲ್ಲಿ ಅಣ್ಣ, ಅಕ್ಕಂದಿರ ಮಕ್ಕಳನೊಡನಾಡಿ ಅವುಗಳ ಪ್ರೀತಿ ಸವಿದವಳಿಗೆ ಈ ಕಿಷ್ಕಿಂದೆಯಲ್ಲಿ ಅದೊಂದೇ ಸಂಜೀವಿನಿ. ಕೆಲಸ, ಮಗು, ದನ, ಕರುಗಳೊಂದಿಗೆ ಆರಾಮಾಗಿರುತ್ತಿದ್ದವಳಿಗೆ ಹೆದರಿಕೆ ಗಂಡನದ್ದೊಂದೇ, ಮನುಷ್ಯ ಹೀಗೂ ಇರಲು ಸಾಧ್ಯವೇ ಅನ್ನುವಷ್ಟು ಅಸಹ್ಯವಾಗಿ ವರ್ತಿಸುತ್ತಿದ್ದ. ಅವನ ಒರಟುತನ, ವಿಕೃತ ಬಯಕೆಗಳು, ಆ ಚಿಕ್ಕ ಮಗುವಿನ ಮೇಲೆ ಅವನಿಗಿದ್ದ ಅಸಾಧ್ಯ ದ್ವೇಷ, ಊಹೆಗೂ ಮೀರಿದ ಸಣ್ಣತನ, ದುರಾಸೆ ಮತ್ತು ಹಪಾಹಪಿ ಆತನನ್ನು ಇಡೀ ಮನುಷ್ಯಕುಲದಿಂದ ದೂರವಿರಿಸಿತ್ತು. ಆಳು, ಕಾಳುಗಳು ಹೋಗಲಿ ತಾಯಿ ಕೂಡ ಸೊಲ್ಲೆತ್ತಿಲ್ಲ ಎನ್ನುವುದು ಭಾಗೀರಥಿಗೆ ಅಂದಾಜಾಗಿತ್ತು. ನಿಧಾನಕ್ಕೆ ಹೆಣ್ಣಾಳುಗಳು ಒಂದಿಬ್ಬರು ಕದ್ದುಮುಚ್ಚಿ ಮಾತನಾಡಲಾರಂಭಿಸಿದ್ದರು. ಮತ್ತೆ ಮನುಷ್ಯ ಪ್ರಪಂಚಕ್ಕೆ ವಾಪಸು ಬಂದ ಹಾಗಾಗಿತ್ತು ಅವಳಿಗೆ. ಅದೆಷ್ಟು ಯತ್ನಿಸಿದರೂ ಸೀತೆ ಬೇರೆ ಮಕ್ಕಳಂತೆ ಸಹಜವಾಗಿ ಬೆಳೆಯಲೇ ಇಲ್ಲ, ಗಣಪಯ್ಯ ಅವಳನ್ನೆಷ್ಟು ದ್ವೇಷಿಸುತ್ತಿದ್ದನೋ ಅದಕ್ಕಿಂತ ಸಾವಿರಪಟ್ಟು ಅವಳು ಅವಳವನನ್ನ ದ್ವೇಷಿಸುತ್ತಿದ್ದಳು. ಪುಟ್ಟ ಮಗುವಿಗಿದ್ದ ಹೆದರಿಕೆ ಆಕೆ ಬೆಳೆದಂತೆ ತಿರಸ್ಕಾರ ಮತ್ತು ದ್ವೇಷಕ್ಕೆ ತಿರುಗಿತ್ತು. ಮೌನದಿಂದಲೇ ಹಗೆ ತೀರಿಸುತ್ತಿದ್ದ ಆಕೆಯ ವರ್ತನೆ ಗಣಪ್ಪಯ್ಯನಿಗೆ ನುಂಗಲಾರದ ತುತ್ತಾಗಿತ್ತು. ಕಾರಣವಿರಲಿ, ಬಿಡಲಿ ತಾಯಿ ಮಗಳಿಬ್ಬರಿಗೂ ನಿತ್ಯ ಕೊಳಕು ಮಾತುಗಳ, ಬೈಗುಳಗಳ ಪೂಜೆ ತಪ್ಪಿದ್ದಲ್ಲ. ಆಳುಗಳಿಗೆ ಕೊಟ್ಟಂತೆ ವರ್ಷಕ್ಕೆರಡು ಸಲ ಇವರಿಗೂ ಬಟ್ಟೆ-ಬರೆ ತರುತ್ತಿದ್ದ. ತೋಟದಾಳುಗಳು ಕೆಲವರು ಬೇರೆ ಕಡೆ ಕೆಲಸ ಸಿಗುತ್ತಿದ್ದಂತೆ ಬಿಟ್ಟು ಹೋಗಿ ಬಿಡುತ್ತಿದ್ದರು. ಒಂದೆರಡು ಹಿರಿ ತಲೆಗಳು ಬೇರೆ ಗತಿಯಿಲ್ಲದೆ ಬರುತ್ತಿದ್ದದ್ದು. ಒಟ್ಟಿನಲ್ಲಿ ಈ ಸರ್ವಾಧಿಕಾರಿಯ ಆಳ್ವಿಕೆಯಲ್ಲಿ ನರಳಿದವರೆಷ್ಟೋ ಜನ. ಭಾಗೀರಥಿ ಅದೆಷ್ಟು ಸಲ ಗರ್ಭ ಧರಿಸಿದಳೋ ಅವಳಿಗೆ ಗೊತ್ತಿಲ್ಲ, ಅದು ಗೊತ್ತಾಗುತ್ತಿದ್ದಂತೆ ದೈಹಿಕವಾಗಿ ಹಿಂಸಿಸಿ, ಒದ್ದು ಪ್ರತೀಸಲ ಮೈಯಿಳಿಯುವಂತೆ ಮಾಡುತ್ತಿದ್ದ ಆ ಮೃಗ. ಸೀತೆಯನ್ನು ಅವಳು ಹಚ್ಚಿಕೊಳ್ಳುವುದಂತೂ ಅವನಿಗೆ ಸಹಿಸಲಾಗುತ್ತಿರಲಿಲ್ಲ. ಅವನಿಲ್ಲದ ಸಮಯದಲ್ಲಿ ತಾಯಿ ಮಗಳು ಒಂದಿಷ್ಟು ನಿಮಿಷಗಳನ್ನು ಸಂತೈಸಿಕೊಂಡೋ, ಏನಾದರೂ ವಿಷಯಗಳಿದ್ದರೆ ಹಂಚಿಕೊಂಡೋ, ಬಾಸುಂಡೆ ಬಿದ್ದ ಜಾಗಗಳಿಗೆ ಕೊಬ್ಬರಿಯೆಣ್ಣೆ ಹಚ್ಚಿಕೊಂಡೋ ಇರುತ್ತಿದ್ದರು. ಬಾಯಿ ಬಾರದ ಮೂಕಪಶುಗಳೂ ನೆಕ್ಕಿಕೊಂಡು ಸಮಾಧಾನ ಮಾಡಿಕೊಳ್ಳುತ್ತಲ್ಲವೇ.

ಅವಾಗಾವಾಗ ಚಾಟುವಿನ ಸವಾರಿ ಅಲ್ಲಿಗೆ ಚಿತ್ತೈಸುತ್ತಿತ್ತು. ಅವಾಗೆಲ್ಲ ಭಾಗೀರಥಿ ಕುರುಕುಲು ತಿಂಡಿಗಳನ್ನು ಮಾಡಿ ಕೊಟ್ಟಿಗೆಯ ಪಕ್ಕದ ಬಚ್ಚಲುಮನೆಯ ಮೂಲೆಯಲ್ಲಿ ನಡೆಯುತ್ತಿದ್ದ ಅವರಿಬ್ಬರ ಪಾನಕೂಟಕ್ಕೆ ಸರಬರಾಜು ಮಾಡಬೇಕಾಗುತ್ತಿತ್ತು, ಚಾಟುವಿನ ತಲೆ ಕಂಡರಾಗುತ್ತಿರಲಿಲ್ಲ ಅವಳಿಗೆ, ಹೆಂಡತಿ ಚಂದ್ರಿಯನ್ನು ಊರವರಿಗೆ ತಲೆಹಿಡಿದು ಬದುಕುತ್ತಿದ್ದ ಆ ಮನುಷ್ಯ, ಸಹಿಸಿ ಸಹಿಸಿ ಸಾಕಾಗಿ ಚಂದ್ರಿ ಊರುಬಿಟ್ಟು ಹೋದಳು ಎಂದು ಮನೆಗೆಲಸದ ಅಪ್ಪಿ ಹೇಳಿದ್ದಳು. ಭಾಗೀರಥಿಯನ್ನು ಹಸಿದ ಕಣ್ಣುಗಳಿಂದ ನೋಡುತ್ತಾ ಅನಾವಶ್ಯಕವಾಗಿ ಹಲ್ಲು ಕಿರಿಯುತ್ತಾ "ಏನತ್ತಿಗೇ, ಆರಾಮ? " ಎನ್ನುತ್ತಿದ್ದ. ಸೀತೆಯನ್ನು ಅಪ್ಪಿ ತಪ್ಪಿಯೂ ಅವನೆದುರಿಗೆ ಬರಲು ಬಿಡುತ್ತಿರಲಿಲ್ಲ ಭಾಗೀರಥಿ. ಅದೊಂದು ದಿನ ಮಿಡಿ ಸೌತೆಯನ್ನು ತರಲು ಬೆಟ್ಟು ಗದ್ದೆಗೆ ಹೋಗಿದ್ದ ಸೀತೆಯನ್ನು ಅಕಸ್ಮಾತ್ತಾಗಿ ಕಿಟಕಿಯಿಂದ ನೋಡಿಬಿಟ್ಟ ಚಾಟು, ಪಾನಗೋಷ್ಠಿಗೆ ಉಪ್ಪಿನಕಾಯಿ ಬೇಕೆಂದು ಕೊಡಲು ಬಂದಿದ್ದ ಭಾಗೀರಥಿ ಆತ ಜೊಲ್ಲು ಸುರಿಸುವುದನ್ನು ನೋಡಿ ಕಂಗಾಲಾಗಿಬಿಟ್ಟಳು. ಅವಳು ಹೆದರಿದಂತೆಯೇ ಮರುದಿನವೇ ಮತ್ತೊಮ್ಮೆ "ಗಣಪಣ್ಣ ಒಳ್ಳೆ ಸೇಂದಿ ಸಿಕ್ತು, ಅದಕ್ಕೆ ಮತ್ತೆ ಬಂದೆ", ಅಂದವನೇ ಬಚ್ಚಲಿನ ಮೂಲೆ ಹಿಡಿದು ಕೂತುಬಿಟ್ಟ. ಅದೇನು ತಲೆತುಂಬಿದನೋ ಗಣಪಯ್ಯ, "ಆ ಶನಿ ಹತ್ತಿರ ತಿಂಡಿ ಕೊಟ್ಟು ಕಳಿಸೇ" ಎಂದು ಬೊಬ್ಬೆ ಹೊಡೆದ. ಎಲ್ಲಿಂದ ಧೈರ್ಯ ಬಂತೋ ಗೊತ್ತಿಲ್ಲ, ಭಾಗೀರಥಿ ತಾನೇ ತಿಂಡಿ, ಉಪ್ಪಿನಕಾಯಿ ಎಲ್ಲವನ್ನೂ ತೆಗೆದುಕೊಂಡು ತಾನೇ ಹೋಗಿದ್ದಳು, "ಅವಳು ಒಳಗಿಲ್ಲ" ಅಂದವಳೇ ಚಾಟುವಿನ ಗ್ರಹಚಾರ ಬಿಡಿಸುವವಳಂತೆ ಕ್ರೂರವಾಗಿ ದಿಟ್ಟಿಸಿದ್ದಳು. ಅದಾದ ನಂತರ ಚಾಟು ಪದೇ ಪದೇ ಎಡತಾಕುವುದು ಹೆಚ್ಚಾಗಿತ್ತು, ಆದರೆ ಅವಳು ಸೊಪ್ಪು ಹಾಕುತ್ತಿರಲಿಲ್ಲ.

ಇದಾದ ಮೇಲೆ ಸೀತೆಯ ಮದುವೆ ಮಾಡಬೇಕೆಂಬ ಹುಳ ಭಾಗೀರಥಿಯನ್ನು ಹೊಕ್ಕಿತ್ತು, ನಿಧಾನಕ್ಕೆ, ಗಣಪಯ್ಯನ ಮೂಡು ನೋಡಿಕೊಂಡು ಪ್ರಸ್ತಾಪ ಮಾಡಿದ್ದಳು. "ಅದಕ್ಕಿಷ್ಟು ದುಡ್ಡು ದಂಡ, ಇಲ್ಲೇ ಬಿದ್ದರಲಿ ದರಿದ್ರ " ಅಂದೆಲ್ಲಾ ಬೈದರೂ, ಹುಡುಗ ಹುಡುಕುವ ಪ್ರಹಸನ ಶುರುವಾಯ್ತು. ಗಣಪಯ್ಯನ ಮಗಳೆಂದೇ ಸಂಬಂಧಗಳು ಬರುತ್ತಿರಲಿಲ್ಲವಾದರೆ ಬಂದರೂ ಮಾತುಕತೆಯ ಹಂತದಲ್ಲೇ ಮುರಿದು ಬೀಳುತಿತ್ತು. ಭಾಗೀರಥಿ ಏನೆಲ್ಲಾ ಪಾಡುಪಟ್ಟರೂ ಗಣಪಯ್ಯನ 'ಕೆಲಸಕ್ಕೆ ಬಿಟ್ಟಿ ಜನ ಸಿಗುತ್ತೆ ನಿಮಗೆ, ಎರಡು ಹೊತ್ತು ಊಟ ಹಾಕಿದ್ರಾಯ್ತು, ವಧುದಕ್ಷಿಣೆ ಕೊಡಿ, ಖರ್ಚೆಲ್ಲಾ ನೀವೇ ನೋಡಿಕೊಳ್ಳಿ' ಎಂಬೆಲ್ಲಾ ವಾದಗಳಿಗೆ ಮಾತುಕತೆಗೆಂದು ಮನೆ ಬಾಗಿಲಿಗೆ ಬಂದವರೂ ಎದ್ದು ಹೋಗುತ್ತಿದ್ದರು. ಒಟ್ಟಾರೆ ಶನಿಯನ್ನು ಹೊರದೂಡುವಾಗಲಾದರೂ ಒಂದಿಷ್ಟು ದುಡ್ಡು ಮಾಡಿಕೊಳ್ಳಬಹುದು ಎಂಬ ಅವನಾಸೆ ಬರ ಬರುತ್ತಾ ನಿರಾಸೆಯಾದಂತೆ ಸೀತೆಯ ಪಾಲಿಗೆ ಜೀವನ ಇನ್ನಷ್ಟು ದುಸ್ತರವಾಗಲಾರಂಭಿಸಿತು. ಅದೆಷ್ಟು ಸಲ ಸೀರೆಯನ್ನು ಜಂತಿಗೆ ಬಿಗಿದಳೋ ಅವಳಿಗೇ ಗೊತ್ತಿಲ್ಲ, ಭಾಗೀರಥಿಯ ಕಣ್ಗಾವಲಿನಲ್ಲಿ ಅದಾಗಲೇ ಇಲ್ಲ. ಎಲ್ಲದರ ಮಧ್ಯೆಯೂ ಭಾಗೀರಥಿ ಮಗಳ ಒಳ್ಳೆ ಭವಿಷ್ಯದ ಕನಸ ನೇಯುವುದನ್ನು, ಅದನ್ನು ಮಗಳಿಗೆ ಹೇಳಿ ಅವಳಲ್ಲಿ ಕನಸು ಹುಟ್ಟು ಹಾಕುವುದನ್ನು ಬಿಡಲಿಲ್ಲ.

ಗಣಪಾಸುರ ಗರ್ವಭಂಗದ ಮರುದಿನದಿಂದ ಮನೆಯಲ್ಲಿ ಭಾಗೀರಥಿಯ ಆಳ್ವಿಕೆ ಶುರುವಾಯಿತು. ಗಣಪಯ್ಯ ಚಾವಡಿಯ ಒಂದು ಮೂಲೆಯಲ್ಲಿ ಬಿದ್ದಿರುತ್ತಿದ್ದ. ಊಟ, ತಿಂಡಿ ಅಲ್ಲಿಗೇ ಸರಬರಾಜಾಗುತ್ತಿತ್ತು. ಅಪ್ಪಿ ಹೇಳುವಂತೆ ಸಾಕ್ಷಾತ್ ಕಾಳಿಯೇ ಭಾಗೀರಥಿಯಲ್ಲಿ ನೆಲೆಸಿದಂತಾಯ್ತು. ಹೊಸ ಅಮ್ಮನನ್ನು ಮಾತನಾಡಿಸಲು ಆಳು-ಕಾಳುಗಳು ಬರುತ್ತಿದ್ದರು. ಅಸರಿಗೆ, ಅವರ ಊಟಕ್ಕೆ ಮತ್ತೊಂದು ಮಗದೊಂದಕ್ಕೆ ಎಂಬಂತೆ ಎಲ್ಲದರಲ್ಲೂ ಯಜಮಾನಿಕೆ ವಹಿಸಿ ಮಾತನಾಡುತ್ತಿದ್ದ ಭಾಗೀರಥಿ ಮತ್ತಷ್ಟು ಗಟ್ಟಿಯಾಗುತ್ತಾ, ಮಾಗುತ್ತಾ ತನ್ನ ಒಳ್ಳೆಯ ಆದರೆ ಸ್ಪಷ್ಟವಾದ ಮಾತುಗಳಿಂದ ಎಲ್ಲರ ವಿಶ್ವಾಸ ಗೆಲ್ಲುತ್ತಲೇ ಹೋದರೆ ಗಣಪಯ್ಯ ಮೂಲೆ ಹಿಡಿದ ಜೇಡದಂತಾದ. ಬಿದ್ದ ಪೆಟ್ಟು, ದೇಹಕ್ಕಷ್ಟೇ ಅಲ್ಲದೇ ಮನಸ್ಸಿಗೂ ಪರಿಣಾಮ ಬೀರಿತ್ತು. ಅಷ್ಟೆಲ್ಲಾ ಆದರೂ ದೇಹಕ್ಕಾದ ಪೆಟ್ಟು ಮಾಯುವವರೆಗೂ ತಿಂಗಳಾನುಗಟ್ಟಲೆ ಭಾಗೀರಥಿ ಮಾಡಿದ ಸೇವೆ ಅವನನ್ನು ಪೆಟ್ಟಿಗಿಂತ ಜಾಸ್ತಿ ನೋಯಿಸಿತ್ತು. ಪಂಡಿತರು ಕೊಟ್ಟ ಎಣ್ಣೆಯನ್ನು ಒಂದಿನಿತೂ ಬೇಸರಿಸದೆ ದಿನಕ್ಕೆರಡು ಸಲ ತಪ್ಪದೇ ಹಚ್ಚುತ್ತಿದ್ದಳು, ಅವನನ್ನು ನಿಧಾನಕ್ಕೆ ಏಳಿಸಿ ಹೊರಜಗಲಿಗೆ ತಂದು ಅಡಕೆ ಹಾಳೆಯನ್ನಿಟ್ಟು ಮಲ ಮೂತ್ರಗಳನ್ನೂ ಶುದ್ಧಿಗೊಳಿಸುತ್ತಿದ್ದಳು. ಸದಾ ಶೂನ್ಯದಲ್ಲಿ ದೃಷ್ಟಿ ಹಾಯಿಸಿ, ತನ್ನಷ್ಟಕ್ಕೆ ಸರಿ ತಪ್ಪುಗಳ ಬಗ್ಗೆ ಮಾತನಾಡುತ್ತಾ ಇಲ್ಲವೇ ಮಾಡಿದ ಅಷ್ಟೂ ವರ್ಷಗಳ ಪಾಪದ ಹೊರೆಯನ್ನು ಇಳಿಸುವಂತೆ ರಾಮನಾಮ ಹೇಳುತ್ತಾ ಕೂರುತ್ತಿದ್ದ. ಕೆಲವೊಮ್ಮೆ ತನ್ನ ತಂದೆ ತಾಯಿಯ ನೆನಪು ತೆಗೆದು, ಅವರ ಭಾವಚಿತ್ರಗಳನ್ನು ಕೈಲಿ ಹಿಡಿದು ಅಳುತ್ತಲೂ ಕೂರುತ್ತಿದ್ದ.

ಚಾಟುವಂತೂ ಈ ಕಡೆಗೆ ತಲೆ ಕೂಡಾ ಹಾಕುತ್ತಿರಲಿಲ್ಲ. ಸೀತೆಗೆ ಎಲ್ಲವೂ ಹೊಚ್ಚಹೊಸದು, ಎಲ್ಲಿ ಬೇಕೆಂದಲ್ಲಿ ಹೋಗಬಹುದಾದ ಸ್ವಾತಂತ್ರ್ಯ, ಜನರ ಮಾತುಗಳು, ನಗು, ಪ್ರೀತಿ ಎಲ್ಲವೂ ಜೀವನ ಪ್ರೀತಿಯನ್ನು ಹುಟ್ಟು ಹಾಕಿದ್ದವು. ಪಕ್ಕದ ಗದ್ದೆಯಂಚಿನವರೆಗೂ ನಡೆದುಹೋಗುತ್ತಿದ್ದಳು, ಗಂಟೆಗಟ್ಟಲೆ ನಿಂತು ಆಕಾಶ, ಹಕ್ಕಿಗಳನ್ನು ನೋಡುತ್ತಾ ನಿಲ್ಲುತ್ತಿದ್ದಳು. ಅಮ್ಮನ ಧೈರ್ಯ ಮಗಳಲ್ಲಿ ಹೊಸ ಲೋಕದ ಬಾಗಿಲನ್ನು ತೆರೆದಿತ್ತು. ದಿನಗಳೆದಂತೆ ಹಿಂದಣ ದಿನಗಳು ಅಸ್ಪಷ್ಟವಾಗುತ್ತಿದ್ದವು. ಅಮ್ಮನ ಯಜಮಾನಿಕೆಯಲ್ಲಿ ಗೇಣಿ ಲೆಕ್ಕ, ಅಡಕೆ ಮಾರಾಟ, ಆಳು-ಕಾಳುಗಳ ಸಂಬಳದ ಲೆಕ್ಕ, ವ್ಯವಹಾರ ಎಲ್ಲವನ್ನೂ ನಿಧಾನಕ್ಕೆ ಕಲಿಯುತ್ತಿದ್ದಳು. ಕಲಿತ ಅರ್ಧಂಬರ್ಧ ಶಾಲೆಯಿಂದ ಕಷ್ಟವಾದರೂ ಪಟ್ಟುಹಿಡಿದು ಎಲ್ಲವನ್ನೂ ಅರ್ಥ ಮಾಡಿಕೊಂಡಳು. ತಾಯಿ-ಮಗಳ ಜೀವನ ಒಂದು ಹಳಿಗೆ ಬಂದು ನಿಂತಿತ್ತು. ಗಣಪಯ್ಯನ ಕಡೆಗಿದ್ದ ಸೀತೆಯ ದ್ವೇಷ ಮಾತ್ರ ಕರಗಲೇ ಇಲ್ಲ.

ದಿನಗಳುರುಳಿ ಅದಾಗಲೇ ಎರಡು ವರ್ಷಗಳಾಗುತ್ತಾ ಬಂದಿತ್ತು, ಗಣಪಯ್ಯ ನಿಧಾನಕ್ಕೆ ಎದ್ದು ಬಾಗಿದ ಬೆನ್ನಿನೊಂದಿಗೆ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ, ಆಳುಗಳೊಂದಿಗೆ ಕೂತು ಅಡಿಕೆ ಸುಲಿಯುತ್ತಲೋ, ತೋಟದಲ್ಲಿ ಬಿದ್ದ ಅಡಿಕೆ, ಸೋಗೆ ಎತ್ತಿಕೊಂಡು ಬರುತ್ತಲೋ, ಕೊಟ್ಟಿಗೆ ಕೆಲಸ ಮಾಡುತ್ತಲೋ ಇರುತ್ತಿದ್ದ. ಭಾಗೀರಥಿಯೊಂದಿಗೆ ಅಲ್ಪಸಲ್ಪವಾದರೂ ಮಾತುಗಳಿತ್ತು, ಆದರೆ ಸೀತೆ ಮಾತು ಹೋಗಲಿ, ಅವನ ಮುಖವನ್ನೂ ನೋಡಲಿಷ್ಟಪಡುತ್ತಿರಲಿಲ್ಲ. ಅಪ್ಪಿ ಬರದಿದ್ದ ದಿನ, ಅಮ್ಮ ಹೊರಗಾದ ದಿನ ಅವನಿದ್ದಲ್ಲಿ ಹೋಗಿ ಅವನೆದುರು ತಟ್ಟೆಯನ್ನು ಕುಕ್ಕುತ್ತಿದ್ದಳೇ ಹೊರತು ಊಟಕ್ಕೆ ಬಾ ಎಂದೂ ಕರೆಯುತ್ತಿರಲಿಲ್ಲ. ಕಣ್ಣೆದಿರು ಕಾಣುತ್ತಿದ್ದ ಶಾಂತಿ, ಸಮಾಧಾನ, ನೆಮ್ಮದಿ, ಗೌರವದ ಬದುಕು ಗಣಪಯ್ಯನಂತ ಗಣಪಯ್ಯನಿಗೂ ಮೋಡಿ ಮಾಡಿತ್ತು. ಆಳುಗಳೂ ನಮ್ಮ ಧಣಿ ಬದಲಾದರಲ್ಲವೇ ಎಂದು ಮಾತನಾಡಿಕೊಳ್ಳುತ್ತಿದ್ದದ್ದು ಭಾಗೀರಥಿಯ ಕಿವಿಗೆ ಬಿದ್ದಾಗ ಅವಳ ತುಟಿಯಲ್ಲಿ ವಿಷಾದದ ನಗುವೊಂದು ಹಾದುಹೋಗಿತ್ತು. ಅದೊಂದು ಸಂಜೆ, ಬತ್ತಿ ಹೊಸೆಯುತ್ತಾ ಕೂತ ಭಾಗೀರಥಿಗೆ, ಆಳು ನಾಗ "ಅಮ್ಮ, ಯಾವುದೋ ಪತ್ರ ಬಂದಿತ್ತು, ನೋಡಿ" ಎಂದು ಕೊಟ್ಟ. ನನಗ್ಯಾರಪ್ಪ ಪತ್ರ ಬರೆಯುವವರು ಎಂದು ಬಿಚ್ಚಿಸಿ ನೋಡಿದರೆ ಮರತೇಹೋದಂತಿದ್ದ ತವರಿಂದ ಅಣ್ಣ ಬರೆದಿದ್ದ ಪತ್ರ. 'ಅಮ್ಮನಿಗೆ ತುಂಬಾ ಹುಷಾರಿಲ್ಲ, ನಿನ್ನ ನೋಡಲು ಆಸೆ ಮಾಡುತ್ತಿದ್ದಾರೆ, ಒಂದು ಸಲ ಬಂದು ಹೋಗು' ಎಂಬುದು ಅದರ ಸಾರಾಂಶ. ಎದೆಯಾಳದಲ್ಲೊಂದು ಅಲೆ ಕಲಕಿದಂತಾಗಿ ನೆನಪುಗಳು ನುಗ್ಗಿ ಬರಲಾರಂಭಿಸಿದವು. ಎಂದೂ ಬೈಯದೇ ಬರೀ ಪ್ರೀತಿಯನ್ನಷ್ಟೇ ಉಣಿಸಿದ ಜೀವವದು, ಅಷ್ಟು ಅಮೃತ ಕುಡಿದಿದ್ದರಿಂದಲೋ ಏನೋ ಇಷ್ಟೂ ವರ್ಷಗಳು ವಿಷವನ್ನು ಕುಡಿದು ಅರಗಿಸಿ ಬದುಕಲು ಸಾಧ್ಯವಾಯಿತು ಅನಿಸಿತು ಅವಳಿಗಾಕ್ಷಣ. ಅಪ್ಪ ಹೇಗಿರಬಹುದು. ಅವರಿಬ್ಬರಲ್ಲಿ ಜಗಳವನ್ನೇ ನೋಡಿರಲಿಲ್ಲವಲ್ಲ, ಎಷ್ಟೊಂದು ಪ್ರೀತಿಯಿತ್ತು. ಅಣ್ಣ ಮದುವೆಯಾದ ಮೇಲೆ ಅತ್ತಿಗೆಯ ಆಗಮನವಾಗುತ್ತಿದ್ದಂತೆ ಪರಿಸ್ಥಿತಿ ಹದೆಗಡಲಾರಂಭಿಸಿತು. ಮೂಲಾ ನಕ್ಷತ್ರದ ಪಟ್ಟ ಬೇರೆ ತಲೆ ಮೇಲೆ, ಇವಳೇ ಹಟ ಹಿಡಿದು ಎರಡನೇ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದಾಗ ಇಬ್ಬರೂ ಅದೆಷ್ಟು ನೊಂದುಕೊಂಡಿದ್ದರು, ಅಳಿಯನೂ ವಿಚಿತ್ರ ಸ್ವಭಾವದವನು ಎಂದು ತಿಳಿದಾಗಲೂ ಅವರ ದುಃಖ ಮೇರೆ ಮೀರಿತ್ತು. ಅವರ ಸಂಕಟ ನೋಡಲಾಗದೇ ಭಾಗೀರಥಿ ಸಂಬಂಧವನ್ನೇ ಕಡಿದು ಹಾಕುವಷ್ಟು ಕಲ್ಲಾಗಿ ಬದುಕುತ್ತಿದ್ದಳು. ಎಂದೋ ಒಂದು ಸಲ ಹಬ್ಬಕ್ಕೆ ಕರೆಯಲು ಬಂದವರು, ಕರುಳು ಕಿತ್ತು ಬರುವಂತೆ ಅತ್ತಿದ್ದರು. ಅದ್ಯಾವ ಘಳಿಗೆಯಲ್ಲಿ ಈ ಸಂಬಂಧಕ್ಕೆ ಒಪ್ಪಿದೆನೋ ಎಂದುಕೊಂಡು ನಿಟ್ಟುಸಿರುಬಿಟ್ಟಳು. ನೆನಪುಗಳ ಓಣಿಯಲ್ಲಿ ಸುತ್ತಾಡುತ್ತಿದ್ದವಳನ್ನು ಸೀತೆಯ ದನಿ ಎಚ್ಚರಿಸಿತು, "ಅಮ್ಮ, ನೋಡು ಎಷ್ಟು ಹೂವಿದೆ ಇವತ್ತು, ಕಟ್ಟಮ್ಮ" ಎಂದು ಉಡಿತುಂಬಾ ಜಾಜಿ ಹೂಗಳನ್ನು ತಂದಿದ್ದವಳು ಅಮ್ಮನೆದುರಿಗೆ ಸುರಿದಳು. ಕೋಣೆಯಿಡೀ ಹರಡಿದ ಸುಗಂಧ, ಕಣ್ಣಲ್ಲಿ ಕನಸುಗಳು ಮತ್ತು ನಳನಳಿಸುವ ಹರುಷದ ಮುಖ ನೋಡುತ್ತಿದ್ದಂತೆ ಅಷ್ಟು ಬೇಸರದ ಮಧ್ಯೆಯೂ ತಂಗಾಳಿಯೊಂದು ಸುಳಿದಂತಾಯ್ತು ಭಾಗೀರಥಿಗೆ. ಮಗಳಿಗೆ ಪತ್ರ ಕೊಟ್ಟು ಬಾಳೆನಾರಿನ ಹಗ್ಗದಿಂದ ಹೂವನ್ನು ಸುರಿಯತೊಡಗಿದಳು. "ಯಾರದಮ್ಮ ಪತ್ರ, ನಮಗ್ಯಾರು ಬರೆಯುವವರು" ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಾ ಓದತೊಡಗಿದವಳ ಮುಖ ಪತ್ರ ಮುಗಿಯುತ್ತಿದ್ದಂತೆ ಮ್ಲಾನವಾಯಿತು. "ನಾವಿಬ್ಬರೂ ಹೋಗೋಣ್ವಾ, ನಾನಾ ಅಜ್ಜ-ಅಜ್ಜಿಯನ್ನು ನೋಡಲೇ ಇಲ್ಲ" ಎಂದಳು. ಬರಿದೇ ತಲೆಯಾಡಿಸಿದ ಭಾಗೀರಥಿ "ತುಳಸಿಗೆ ದೀಪ ಹತ್ತಿಸು, ಕತ್ತಲಾಗ್ತಾ ಬಂತು, ಅಪ್ಪಯ್ಯನಿಗೆ ಕಷಾಯ ಕೊಟ್ಟಾಯ್ತಾ" ಎಂದು ಕೇಳಿದಳು. ಉತ್ತರ ನೀಡದೇ ಮುಖ ಹಿಂಡಿ ಬಚ್ಚಲಿಗೆ ಧಾವಿಸಿದ ಮಗಳನ್ನೇ ನೋಡಿದವಳು 'ಓಹ್! ಆಗಲೇ ತಿಂಗಳಾಯ್ತೇ, ಇನ್ನಿವಳನ್ನು ಕರೆದುಕೊಂಡು ಹೋಗಲಾಗುವುದಿಲ್ಲ, ಅಪ್ಪಿಯ ಮಗಳನ್ನು ಜೊತೆ ಮಾಡಿ ಬಿಟ್ಟು ಹೋಗಬೇಕಷ್ಟೆ' ಎಂದು ಲೆಕ್ಕ ಹಾಕಿದಳು. ಅಂತೆಯೇ ಅಪ್ಪಿಯ ಮಗಳು ಕಣ್ಣಿಯನ್ನು ಸೀತೆಯ ಜೊತೆ ಮಾಡಿದರೆ, ಅಪ್ಪಿ ಒಂದಿಷ್ಟು ಎಲ್ಲರಿಗೂ ಬೇಯಿಸಿ ಹಾಕುವುದಾಗಿಯೂ, ಭಾಗೀರಥಿ ನಾಗನೊಂದಿಗೆ ಬೆಳಗ್ಗೆ ಬಸ್ಸುಹಿಡಿಯುವುದಾಗಿಯೂ ನಿರ್ಧಾರವಾಯಿತು. ಬೆಳಗ್ಗೆ ಸೀತೆಗೊಂದು ಮಾತು ಹೇಳಲು ಬಾಣಂತಿಕೋಣೆಗೆ ಭಾಗೀರಥಿ ಬಂದಾಗ ಅವಳಿನ್ನೂ ಎದ್ದಿರಲಿಲ್ಲ, "ರಾತ್ರಿಯಿಡೀ ಹೊಟ್ಟೆನೋವಿಂದ ನರಳಿದರು ಸಣ್ಣಮ್ಮ" ಎಂದು ಕಣ್ಣಿ ಹೇಳಿದಳು. ಒಂದೂ ದಿನವೂ ಮಗಳನ್ನು ಬಿಟ್ಟು ಹೋಗದವಳಿಗೆ ಹೊರಡುವ ಗಳಿಗೆಗೆ ಒಂಥರಾ ಕಸಿವಿಸಿ, ಮಾತನಾಡಲೂ ಆಗಲಿಲ್ಲವಲ್ಲ ಎಂದುಕೊಂಡೇ ಹೊರಟಳು.

ಅಮ್ಮನಿಲ್ಲದೇ ಖಾಲಿಖಾಲಿ ಅನಿಸುತ್ತಿದ್ದ ಮನವನ್ನು ಸಂತೈಸಿಕೊಂಡೇ ಕಳೆದ ಸೀತೆಗೆ ಮನೆಯೊಳಗೆಯೂ, ಗದ್ದೆ ಸುತ್ತಲೂ ಹೋಗುವ ಹಾಗಿರಲಿಲ್ಲ, ಕಣ್ಣಿಯೊಡನೆ ಚೌಕಾಭಾರ ಆಡುತ್ತಾ, ಊರಿನ ಸುದ್ದಿ ಮಾತನಾಡುತ್ತಾ ದಿನ ಕಳೆದಳು. ಇಬ್ಬರು ಹರೆಯದ ಹುಡುಗಿಯರಿಗೆ ಮಾತಿನ ಬರವೇ? ದೀಪವಾರಿಸಿಯೂ, ಹಾಸಿಗೆಯ ಸುರುಳಿಗಳ ಮೇಲೆ ಬಿದ್ದುಕೊಂಡು ಅದೆಷ್ಟೋ ಹೊತ್ತು ಮಾತನಾಡುತ್ತಲೇ ಇದ್ದರು. ಅದು ಯಾವಾಗ ಕಣ್ಣೆಳಿಯಿತೊ, ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಬಚ್ಚಲಿನಿಂದ ಜೋರು, ಜೋರಾದ ಅಸ್ಪಷ್ಟ ಮಾತುಗಳು ಕೇಳಿಬಂದಂತಾಯ್ತು. ಸೀತೆ ಎದ್ದು ನಿಂತು ಮರದ ಅಡ್ಡಪಟ್ಟಿಗಳ ಕಿಟಕಿಗೆ ಮುಖವೊತ್ತಿ ಬಚ್ಚಲಿನ ಕಡೆ ಕಣ್ಣು ಹಾಯಿಸಿದರೆ ಮಂದಬೆಳಕಿನಲ್ಲಿ ಅಪ್ಪಯ್ಯ ಯಾರೊಡನೆಯೋ ಮಾತನಾಡುವುದು ಕಾಣಿಸಿತು. ಕಣ್ಣು ಕಿರಿದುಗೊಳಿಸಿ ನೋಡಿದರೆ ಚಾಟು, ಅಷ್ಟರಲ್ಲಿ ಕಣ್ಣಿಯೂ ಎದ್ದು ಇವಳ ಪಕ್ಕಕ್ಕೆ ಬಂದು ನಿಂತಿದ್ದವಳು "ಅರೇ!ಇದ್ಯಾಕೆ ಇಲ್ಲಿಗೆ ಬಂತು ಶನಿ?! ದೊಡ್ಡ ಅಮ್ಮ ಹೋಗಿದ್ದು ಇದಿಕ್ಕ್ಯಾರು ಹೇಳಿದ್ರೋ ಕಾಣೆ" ಎಂದು ಉದ್ಗರಿಸಿದಳು. ಯಾವುದರ ಬಗ್ಗೆಯೋ ಇಬ್ಬರಲ್ಲಿ ಚರ್ಚೆ ನಡೆದಿತ್ತು. ಬಾಗಿದ ಬೆನ್ನಿನ ಅಪ್ಪಯ್ಯನನ್ನು ನೋಡುತ್ತಿದ್ದಂತೆ ಸೀತೆಗೆ ಏನೋ ಅಸ್ಪಷ್ಟ ಭಾವನೆಯೊಂದು ಸುಳಿಯಿತು, ಅದೇನೆಂದು ಗೊತ್ತಾಗಲಿಲ್ಲ, ಆದರೆ ಚಾಟುವನ್ನು ನೋಡುತ್ತಿದ್ದಂತೆ ಹುಟ್ಟಿದ ಭಾವ ಮಾತ್ರ ಅಸಹ್ಯ, ಜಿಗುಪ್ಸೆ ಎಂಬುದು ಅರಿವಾಯಿತು. ಅವರೀರ್ವರ ಏರುದನಿಯ ಸಂಭಾಷಣೆ ಜಗಳಕ್ಕೆ ತಿರುಗಿ ಮೈಕೈ ಮಿಲಾಯಿಸುವ ಹಂತಕ್ಕಿಳಿಯಿತು, ಒಂದು ಹಂತದಲ್ಲಿ ಚಾಟು ಜೋರಾಗಿ ಅಪ್ಪಯ್ಯನನ್ನು ತಳ್ಳಿ ಅವರು ಇದ್ದ ಎರಡು ಮೆಟ್ಟಲಿನಿಂದ ಕೆಳಕ್ಕುರುಳಿದ್ದು ಕಂಡು ಸೀತೆ ಜೋರಾಗಿ ಕಿರುಚಿಕೊಂಡಳು. ತಿರುಗಿ ನೋಡಿದ ಚಾಟು, ಬಚ್ಚಲಿನಿಂದ ಇವರಿದ್ದ ಕೋಣೆಯ ಮಧ್ಯೆ ಇದ್ದ ಸಣ್ಣ ಕಟ್ಟೆಯನ್ನು ಹಾರಿಬಂದು ಕೋಣೆಯ ಬಾಗಿಲನ್ನು ಜೋರಾಗಿ ಒದ್ದ. ಒಳಗಿಂದ ಮರದ ಪಟ್ಟಿಯದೇ ಚಿಲಕ ಅಡ್ಡವಾಗಿದ್ದರಿಂದ ಬಾಗಿಲು ತೆರೆದುಕೊಳ್ಳಲಿಲ್ಲ. ಇಬ್ಬರು ಹುಡುಗಿಯರಿಗೂ ಅವನು ಒಳನುಗ್ಗುವ ಪ್ರಯತ್ನ ಮಾಡುತ್ತಿದ್ದಾನೆಂಬ ಅರಿವಾದಂತೆ "ಓಬಲಣ್ಣಾ, ಗೋಪಾಲಣ್ಣಾ, ರುಕ್ಮಿಣಿಯಕ್ಕ" ಎಂದು ಇದ್ದಬಿದ್ದವರ ಹೆಸರುಗಳನ್ನೆಲ್ಲಾ ಕಿರುಚಿ ಕರೆಯತೊಡಗಿದರು. ಅದೂ ಅಲ್ಲದೇ, ಸಮಯಪ್ರಜ್ಞೆಯಿಂದ ಕೋಣೆಯ ಮೂಲೆಯಲ್ಲಿ ಪೇರಿಸಿಟ್ಟ ಭಾರದ ನೇಗಿಲು, ಮತ್ತಿತ್ತರ ಮರದ ಸಾಮಾನುಗಳನ್ನು ತಂದು ಬಾಗಿಲಿಗೆ ಅಡ್ಡವಾಗಿಡಲಾರಂಭಿಸಿದರು. ಚಾಟುವಿನ ಮೈಯಲ್ಲಿ ರಾಕ್ಷಸ ಹೊಕ್ಕಿದ್ದ. ಎಲ್ಲಾ ಶಬ್ದಗಳು, ಕಿರುಚಾಟಕ್ಕೆ ರಾಜು ನಾಯಿಯೂ ಎದ್ದು ಬೊಗಳತೊಡಗಿದ, ಕೊಟ್ಟಿಗೆಯಲ್ಲಿದ್ದ ಹಸುಗಳೂ ಎದ್ದು ಅಂಬಾ ಎಂದು ಕರೆಯಲಾರಂಭಿಸಿದವು. ಇವರೆಲ್ಲರ ಸ್ವರಗಳನ್ನೂ ಮೀರಿಸುವ ಆರ್ಭಟವೊಂದು ಕೇಳಿಬಂತು, ಬಾಗಿಲಿನಿಂದ ಕಿಟಕಿಗೆ ಧಾವಿಸಿ ಸೀತೆ ನೋಡುತ್ತಾಳೆ, ಅಪ್ಪಯ್ಯ ಎದ್ದು ಬಂದು ನಿಂತಿದ್ದಾರೆ! ಮತ್ತೊಮ್ಮೆ ಸೂರು ಕಿತ್ತು ಹೋಗುವಂತೆ ಆರ್ಭಟಿಸಿದ ಅಪ್ಪಯ್ಯ, ಕೈಲಿದ್ದ ಅಡಿಕೆ ಮರಕ್ಕೆ ಔಷಧ ಹೊಡೆಯುವ ಸ್ಪ್ರೇಯರ್ ಟ್ಯಾಂಕಿನಿಂದ ಚಾಟು ತಲೆಗೆ ಜೋರಾಗಿ ಬಾರಿಸಿ, ಅವನ ತಲೆಯಿಂದ ರಕ್ತ ಕಾರಂಜಿಯಂತೆ ಚಿಮ್ಮಿತು. ಅದು ಗಣಪಯ್ಯನ ಮುಖವನ್ನು ನೆನಸಿದಂತೆ ನಿಧಾನಗತಿಯಲ್ಲಿ ಚಾಟು ಕೆಳಕ್ಕೆ ಕುಸಿದ. ಕೂಗಲೂ ಶಕ್ತಿಯಿಲ್ಲದೆ, ಅಪ್ಪಯ್ಯನನ್ನೇ ನೋಡುತ್ತಾ ಕಿಟಕಿಗೆ ಭಾರಹಾಕಿ ನಿಂತ ಸೀತೆಯ ಮೈ ನಡುಗುತ್ತಿತ್ತು, ನಿಧಾನಕ್ಕೆ ಕಣ್ಣಲ್ಲಿ ನೀರು ತುಂಬಲಾರಂಭಿಸಿತು.