Wednesday, January 22, 2014


ದಾರಿ - ನಡಿಗೆ

ನನ್ನ ನಡಿಗೆ ಬಗ್ಗೆ ನೀ ಹೀಗೆಳೆಯಬೇಡ
ನಾ ನಡೆದ ದಾರಿಯಲ್ಲಿ ನೀ ನಡೆದಿಲ್ಲ 
ಅಂದವನಿಗೆ ನೀನು, 
ಹಾದಿ ತುಂಬಾ ಕಲ್ಲು ಮುಳ್ಳು ಇತ್ತಾ 
ಕಾಲು ಕಚ್ಚಿತಾ ಎಂದು ಕೀಟಲೆ ಮಾಡಿದೆಯಾ? 
ಇಲ್ಲ ಗೆಳತಿ, ಕಲ್ಲು, ಮುಳ್ಳು ಕಚ್ಚಲಿಲ್ಲ.
ಅಲ್ಲಿದ್ದಿದ್ದು ಅಂಬಿನ ಹಾಸಿಗೆ
ಮತ್ತು ನಾನದರ ಮೇಲೆ ನಡೆದೆ.
ಅರೆ! ನೋವಾಯಿತಾ ಎಂದು ಉದ್ಗರಿಸಿದೆಯೇನು?
ಇಲ್ಲ ಸಖಿ, ಕಾಲು ಸಂವೇದನೆಯ 
ಕಳೆದುಕೊಂಡಿತು ಲಕ್ಷ ಹೆಜ್ಜೆಗಳ ನಂತರ!
ಹೂಕಾರದೊಂದಿಗೆ ಗಾಳಿ, ಮಳೆ
ಅಥವಾ ಧಗೆಯ ಬಗ್ಗೆ ವಿಚಾರಿಸಿದೆಯೇನು?
ಇಲ್ಲವೇ ಹುಡುಗಿ, ಅದೇನೂ ಇರದ
ಪ್ರಾಣವೂ, ಗಾಳಿಯೂ, ಬಣ್ಣವೂ ಇರದ 
ಶುದ್ಧ, ನಿರ್ಜೀವ  ಹಿಮದ ದಾರಿಯದು.
ಆಶ್ಚರ್ಯದಿ ಕೇಳಿದೆಯಲ್ಲ, ಬೆಚ್ಚನೆಯ ಉಡುಪಿರಲಿಲ್ಲವೆಂದು
ಇಲ್ಲ ಮಿತ್ರೆ, ಅಮ್ಮ ಹೊಲೆದ ಹತ್ತಿಯ ತೆಳು ಅಂಗಿ
ಅಪ್ಪ ತಂದುಕೊಟ್ಟ ಬಟ್ಟೆಯ ಶರಾಯಿ 
ಎರಡೂ ಕೂರಲಗಿನ ಚಳಿಗೆ ಎಂದೋ ಚಿಂದಿಯಾದವು.
ನಾನೇ ತೂತುಗಳ ಸೇರಿಸಿ ಹೊಲಿದ
ಒರಟು ಗೋಣಿಚೀಲದ ಈ ನಿಲುವಂಗಿ
ಇಲ್ಲಿಯವರೆಗೆ ಬಂತು -ನನ್ನ ಕರೆ ತಂತು! 
ಪರಿತಾಪದಿ ಕೇಳಿದೆಯಲ್ಲ ಸಹ ಪಯಣಿಗರಲಿಲ್ಲವೆಂದು
ಇಲ್ಲ ಬಾಲೆ, ದೂರ ಕ್ರಮಿಸುತಾ, ಹಾದಿ ಕಳೆಯುತಾ 
ಇದ್ದ ಬಳಗ ಒಂದೊಂದೇ ಕಣ್ಣ ಮಂಜಲಿ ಮಾಯವಾಯಿತು. 
ಅನುಕಂಪದಿ ಬಳಿ ಸಾರಿ ಸಾಂತ್ವನದ ನಗೆ ನಕ್ಕೆಯೇನು?
ನಡೆಯುವೆಯಾ ಪ್ರಿಯೆ, ಜತೆಯಾಗಿ ಕೈ ಹಿಡಿದು
ಸಾಗೋಣ ಇನ್ನುಳಿದ ಅನತಿ ದೂರವ ನಗು ನಗುತಾ...

Tuesday, January 21, 2014

Mattidoo maatE

ಮತ್ತಿದೋ ಮಾತೇ

ಬಾಯಿಗಳು, ಬಾಯಿಗಳು ಮತ್ತು ಬಾಯಿಗಳು
ಸುತ್ತ ಮುತ್ತ, ಮೇಲೆ ಕೆಳಗೆ ಎಲ್ಲಿ ನೋಡಿದರೂ ಅವೇ
ಆಚೆ ತಿರುಗಿದರೆ ನೂರು ಮಾತು, ಕೂತರೆ ಸಾವಿರ

ತಾಳವಿಲ್ಲದ, ಲಯವಿಲ್ಲದ , ಅರ್ಥವಿಲ್ಲದ ಬರೀ ವ್ಯರ್ಥ ಶಬ್ದಗಳಿವು....
ಶಬ್ದ ಶಬ್ದ ತಾಕಲಾಟದಿ ಗುಡುಗೂ, ಸಿಡಿಲೂ ಮತ್ತೆ ಭೋರ್ಗರೆಯುವ ಹುಚ್ಚು  ಮಳೆ!

ಅರೆ ಅರೆ! ತಪ್ಪಿದೆ ಮಾತಲ್ಲ ರೀ ಅವು, ಕೂರಂಬುಗಳು
ರೋಮಗಳಿಲ್ಲ ಮೈಯಲ್ಲಿ ಅವೇ ತುಂಬಿವೆ ದಟ್ಟವಾಗಿ
ಉಸಿರಾಡಿದರೂ ಮಿಸುಕಾಡಿದರೂ ಕೊನೆಗೆ ತೆಗೆಯಲೆತ್ನಿಸಿದರೂ ನೋವು

ಮೌನ ಸಾಮ್ರಾಜ್ಯವೆಲ್ಲಿಹುದು ಕಂಡೀರ ಯಾರಾದರೂ?
ಕಂಡರೆ ತಿಳಿಸಿ, ಈ ಮಾತುಗಳಿಗಲ್ಲಿ ಗುಳೆ ಹೋಗೋಕೆ...

Thursday, January 2, 2014

ಉಡುಪಿ - ಬೆಂಗಳೂರು!ಪಕ್ಕದ ಕ್ಯಾಬಿನ್ ಒಳಗೊಂದು ಪುಟ್ಟ ಬೊಮ್ಮಟೆ
ನೆತ್ತಿಯೂ ಕೂಡಿಲ್ಲ ಅದಕೆ ಇನ್ನೂ
ಈ ಕುಲುಕುವ ಬಸ್ಸಲ್ಲಿ
ಅದು ಹೇಗೆ ಕಾಯುವಳೋ ಅದರಮ್ಮ
ಹೊಟ್ಟೆ ತುಂಬಾ ಹಾಲು ಕುಡಿದರೆ
ನಿದ್ದೆಯಾದರೂ ಮಾಡೀತು ಪಾಪ.

ಹಿಂದಿನ ಕ್ಯಾಬಿನ್ ಅಲ್ಲೊಂದು ವೃದ್ಧ ಜೋಡಿ
ವೃದ್ಧೆಗೆಕೋ ಮುನಿಸು ಅಜ್ಜನ ಮೇಲೆ
ಮಗಳಿಗೆ, ಮೊಮ್ಮಗಳಿಗೆ ಕೈಲಿ ದುಡ್ಡಿಟ್ಟರು ಎಂದೇ?
ಕೈ ಬೀಸಿದ ಮಗಳ ಕಣ್ಣಲ್ಲಿದ್ದ ನೀರೂ ಕಾಣಲಿಲ್ಲ ಈಕೆಗೆ
ಸಿಟ್ಟಲ್ಲಿ ಧುಮು ಧುಮು ಉರಿಯುತ್ತಿದ್ದರು ಈಕೆ ಬಸ್ಸು ಹತ್ತಿದ್ದಾಗ
ಅಜ್ಜನ ಮುಖದಲ್ಲಿ ಆತಂಕದ ನಡುವೆಯೂ ನಾ ಗುರುತಿಸಿದೆ
ಕಂಡೂ ಕಾಣದಂತೆ ಇಣುಕುತ್ತಿತ್ತು ಅದೇನೋ ಸಂತೃಪ್ತಿ!

ಎದುರಲ್ಲಿ ಅದೋ ಕುಳಿತಿದ್ದಾಳೆ ಒಂಟಿ ಮಹಿಳೆ
ನಾಲ್ಕು ನಾಲ್ಕು ಸಲ ಅದೇನೋ ವಿಚಾರಿಸಿಯಾಯ್ತು ಕ್ಲೀನರಿನಲ್ಲಿ
ಬಹುಷಃ ಮಗಳ ಬಾಣಂತನಕ್ಕೆ ಹೊರಟವರಿರಬೇಕು
ಚೀಲದಲ್ಲಿದ್ದ ಲೇಹ್ಯದ ಕಂಪು ಇಡೀ ಬಸ್ಸಿಗೆ
ಅಷ್ಟರಲ್ಲೇ ರಿಂಗಣಿಸಿತು ಬ್ಯಾಗಿನ
ಯಾವುದೋ ಮೂಲೆಯಲ್ಲಿದ್ದ ಅವರ ಮೊಬೈಲು...
ಮೊದಲು ನಡುಗುವ ಸ್ವರದಲ್ಲಿ ಮಾತಾಡಿದವರು,
ಮತ್ತೆ ನಗೆಯಾಡಿದರು,
ಅಳಿಯ ದೇವರು ಬರುತಿರಬೇಕು ಕರೆದುಕೊಂಡು ಹೋಗಲು...

ಮೇಲಿನ ಸ್ಲೀಪರ್ ನಲ್ಲಿ ಬಿಸಿ ಬಿಸಿ ಚರ್ಚೆ,
ಹರೆಯದ ಮಗಳಿಗೂ, ಅಮ್ಮನಿಗೂ
ಕೊನೆ ಕ್ಷಣದವರೆಗೂ ಮಗಳ ಮನಸ್ಸು ಬದಲಾಯಿಸಲು
ಅಮ್ಮನ ಹುನ್ನಾರ.
ಮಗಳದು ಒಂದೇ ಪಟ್ಟು, ನನಗೆ ಕಂಪ್ಯೂಟರ್ ಸೀಟ್ ಬೇಡ
ನಾ ಆರ್ಕಿಟೆಕ್ಟ್ ಆಗಿಯೇ ಸಿದ್ಧ
ಅಪ್ಪನ ಎದುರು ಒಪ್ಪಿದ ನಾಟಕವಾಡಿದ್ದೀಯಲ್ಲಮ್ಮಾ?
ಅಮ್ಮನ ಮೆಲುದನಿಯಲಿ ಸಮಾಧಾನ
ಮತ್ತೆ ಬಂಧು-ಬಳಗದ ಸಾಫ್ಟ್ವೇರ್ ಇಂಜಿನಿಯರುಗಳ ನಾಮ ಸ್ಮರಣೆ
ಅಂತೂ ಅಮ್ಮ ಮಗಳಿಬ್ಬರದ್ದೂ ಈ ಘಾಟಿ ಪೂರ್ತಿ ಸೀಟು ಚರ್ಚೆ

ಅಂತೂ ಪಯಣ ಮುಗಿಯುವವರೆಗೆ
ನಾವೆಲ್ಲರೂ ಒಂದೇ ಕುಟುಂಬ
ಒಂದೇ ಸೂರಿನಡಿ ಬಂಧಿಗಳು

ಪ್ರತೀ ರಾತ್ರಿಯೂ ಈ ಕ್ಯಾಬಿನ್ಗಳು ಕಿವಿಯಾಗುತ್ತವೆ
ಕಥೆ ಕೇಳುತ್ತವೆ.
ಚೆಂದದ ಮಕ್ಕಳ ನಗು ಆಳುಗಳ ಸವಿದು
ಅದೆಷ್ಟೋ ನಿಟ್ಟುಸಿರ ತಮ್ಮಲ್ಲೇ ಹೀರಿಕೊಂಡು
ಹೊಸ ಪಯಣಿಗರಿಗೆ ತಾವೂ ಹೊಸಬರಂತೆ ಪೋಸು ಕೊಡುತ್ತವೆ.