Monday, July 2, 2018

Laura

ಚುಕ್ಕುಬುಕ್ಕುವಿಗಾಗಿ 4 ವರ್ಷದ ಹಿಂದೆ ಬರೆದಿದ್ದು.

ನನ್ನ ಲಾರಾ

ಲಾರಾ ನನ್ನ ಜೀವನಕ್ಕೆ ಬಂದು ಎಷ್ಟು ವರ್ಷಗಳಾದವೋ ನೆನಪಿಲ್ಲ. ನನ್ನ ಜೀವನದ ಭಾಗ ಅವಳು. ಮೊದಲು ನನಗೆ ಆ ಪುಸ್ತಕ ಸರಣಿಯ ಕೆಲವು ಭಾಗಗಳು ಮಾತ್ರ ದೊರಕಿದ್ದವು. ಅನಂತರ, ಮುದ್ರಣವಾಗಿರದ ಪುಸ್ತಕಗಳಿಗೆ ಅಲೆಯದ ಜಾಗವಿಲ್ಲ. ಯಾರ್ಯಾರ ಕಾಲು ಹಿಡಿದೆನೋ ನನಗೇ ತಿಳಿಯದು! ಉಡುಪಿಯಿಂದ ಮಂಗಳೂರು, ಮೂಡಿಗೆರೆ, ಮೈಸೂರು, ಬೀದರ್, ಬೆಂಗಳೂರು ಎಲ್ಲಾ ಜಾಲಾಡಿ ಮುಗಿಸಿದರೂ ಪುಸ್ತಕವೆಲ್ಲೂ ಸಿಗಲೇ ಇಲ್ಲ. ತುಂಬಾ ವರ್ಷಗಳು ಹುಡುಕಾಡಿದೆ ಲಾರಾಳಿಗಾಗಿ, ನೆನೆದಾಗೆಲ್ಲಾ ಬೇಸರವೆನಿಸುತ್ತಿತ್ತು. ನಾಲ್ಕು ವರ್ಷದ ಹಿಂದೆ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿಯವರು ಕೇವಲ ಮುಖಪರಿಚಯ ಮತ್ತು ಅವಾಗಲೇ ನೂರು ಸಲ ಪೀಡಿಸಿ ಪೀಡಿಸಿ ಇಟ್ಟಿದ್ದರಿಂದ ಅವರ ಬಳಿ ಹಳೇ ಕಾಪಿಗಳು ಇವೆ ಅಂದರು. ಅವರ ದಯೆಯಿಂದ ಅದನ್ನು ಜೆರಾಕ್ಸ್ ಮಾಡಿಸಿ (ಅವರು ನನಗೆ ಜೆರಾಕ್ಸ್ ಮಾಡಲು ಕೊಟ್ಟದ್ದೇ ನನ್ನ ಸಂತೋಷಕ್ಕೆ ಮಿತಿಯಲ್ಲದಂತಾಗಿತ್ತು, ನಾನ್ಯಾವತ್ತೂ ಋಣಿ ಅವರಿಗೆ) ಎಲ್ಲಾ ಪುಸ್ತಕಗಳನ್ನು ಒಟ್ಟಿಗೇ ಅಪ್ಪಿಕೊಂಡಾಗ ಆದ ಖುಷಿ ಹೇಳಲು ನನ್ನಲ್ಲಿ ಪದಗಳಿಲ್ಲ. ಅವನ್ನು ಓದಿ ಮುಗಿಸುವವರೆಗೆ ಮಾತು-ಕಥೆ ಎಲ್ಲಾ ಮರೆಯುತ್ತಿದ್ದೆ. ಇಂದಿಗೂ, ಲಾರಾ ಪುಸ್ತಕಗಳು ನನಗೆ ಚಟವಿದ್ದಂತೆ, ೨-೩ತಿಂಗಳಿಗೊಮ್ಮೆ ಓದದಿದ್ದರೆ ಏನೋ ಕಳಕೊಂಡ ಭಾವನೆ. ಸ್ವಭಾವತಃ ಪುಸ್ತಕ ಪ್ರ‍ೇಮಿಯಾದ ನನಗೆ ಈ ಪುಸ್ತಕಗಳು, ಅತೀ ಅಪರೂಪದ ಮಿಠಾಯಿಯೊಂದನ್ನು ಮುಚ್ಚಿಟ್ಟು ಪದೇ ಪದೇ ಕದ್ದು ಸವಿದ ಭಾವ. ಅಷ್ಟು ರುಚಿಯಾದ ಪುಸ್ತಕಗಳಿವು.

ಲಾರಾ ಕೊಡುವ ಜೀವನಾನುಭವ ತೀರಾ ದೊಡ್ಡದು, ಅವಳ ಬದುಕು, ಹೋರಾಟ, ಗಟ್ಟಿಗತನ ಎಂದೂ ಆದರ್ಶಪ್ರಾಯವೇ. ಅವಳ ಜೀವನ ಪಯಣ, ಆಗಿನ ಕಾಲದ ಜೀವನ ಶೈಲಿ, ಗೌರವಯುತ ನಡವಳಿಕೆ, ಮಕ್ಕಳಿಗೆ ಕಲಿಸುವ ಬಗೆ, ಮಕ್ಕಳು ಕಲಿಯುವ ಬಗೆ ಎಲ್ಲವನ್ನೂ ಒಂದೇ ಸಲಕ್ಕೆ ಹೇಳುವ ರೀತಿ ತೀರಾ ಆಪ್ತವೆನಿಸುತ್ತದೆ. ಓರ್ವ ತಾಯಿ ಅಥವಾ ತಂದೆಯ ಸ್ಥಾನದಲ್ಲಿ ನಿಂತು ನೋಡಿದಾಗ ಮಕ್ಕಳಿಗೆ ಒಳ್ಳೆಯ ವಿಚಾರ, ಶಿಸ್ತು, ಜೀವನ ಸಹಿಷ್ಣುತೆಯನ್ನು ಹೇಳುವ ಬಗೆಯನ್ನು ಅರ್ಥ ಮಾಡಿಕೊಡಿಸುವ ಈ ಕೃತಿ, ಮಕ್ಕಳ ಸ್ಥಾನದಲ್ಲಿ ನಿಂತು ನೋಡಿದಾಗ ಅವರ ಭಾವನೆಗಳು, ಅವರಿಗೆ ಹಿರಿಯರ ಭಾವಗಳು ಅರ್ಥವಾಗುವ ಪರಿಯನ್ನು ಎಳೆ ಎಳೆಯಾಗಿ, ಮೃದುವಾಗಿ ಬಿಡಿಸಿಕೊಡುತ್ತದೆ.  ಬಹುಶಃ ಅವಳು ಪಟ್ಟ ಪ್ರತಿಯೊಂದು ನೋವು-ನಲಿವುಗಳು ಎಂದಿಗೂ ಪ್ರಸ್ತುತವೆನಿಸುವ ಜೀವನ ಪಾಠಗಳು. ನೋವನ್ನು ವೈಭವೀಕರಿಸದೇ ನಲಿವನ್ನು ಎತ್ತಿ ಹಿಡಿಯುವ ಅವಳ ಬರಹ ಅನನ್ಯ. ಎಲ್ಲೂ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಭಾಗಗಳು ಅವಳೊಂದಿಗೆ ನಮ್ಮನ್ನೂ ದೊಡ್ಡ ಪ್ರಯರಿಯಲ್ಲಿ, ಸಿಲ್ವರ್ ಲೇಕ್ ದಡದಲ್ಲಿ, ವಿಸ್ಕಾನ್ಸ್ ಸನ್ನಿನಲ್ಲಿ, ದಟ್ಟ ಕಾಡುಗಳಲ್ಲಿ, ಪ್ಲಮ್ ನದಿ ತೀರದಲ್ಲಿ, ದೊಡ್ಡ ತೋಳಗಳೊಂದಿಗೆ, ಮಂಜಿನ ವಾತಾವರಣದಲ್ಲಿ ನಡೆದಾಡಿಸುತ್ತವೆ. ಹೆಜ್ಜೆ ಹೆಜ್ಜೆಗೂ ಅವಳ ಸಂತಸ, ದುಗುಡ, ಬಿದ್ದಲ್ಲೇ ಮತ್ತೆದ್ದು ನಡೆಯುವ ಛಲವನ್ನು ನಮ್ಮೊಳಗೇ ಪಡಿ ಮೂಡಿಸುತ್ತದೆ.

ಬೇರೆ ದೇಶದ ಕಥೆಯಾದರೂ ನಮ್ಮ ನೆಲದ ಛಾಯೆ ಈ ಕತೆಗಳಲ್ಲಿ ಸುಳಿದಾಡುತ್ತಿರುತ್ತದೆ. ದನ-ಕರು ಸಾಕುವುದು, ಕಸೂತಿ-ಹೆಣಿಗೆ, ಬೆಣ್ಣೆ-ಮಜ್ಜಿಗೆ, ಕುಂಬಳಕಾಯಿಯ ಖಾದ್ಯಗಳು, ಚೀಸ್ ಮಾಡುವ ರೀತಿ, ಹಳೇ ಉಡುಪುಗಳಿಂದ ತಯಾರಿಸಿದ ಕರ್ಟನ್ ಗಳೂ, ಟೇಬಲ್ ಕ್ಲಾತ್ ಗಳೂ, ಲೇಸ್ ಗಳೂ, ಹೊರ ಜಗತ್ತಿಗೆ ಬರುವ ಮೊದಲು ಮನೆಯಿಂದ ಹೊರಡುವ ರೀತಿ, ಮನೆಯ ಹೊರಗಿನವರೊಂದಿಗೆ ನಡೆದುಕೊಳ್ಳಬೇಕಾದ ರೀತಿ-ನೀತಿಗಳು, ಊಟ-ತಿಂಡಿ, ಅದಕ್ಕೆ ಕೊಡಬೇಕಾದ ಗೌರವ, ಶಿಕ್ಷಣದ ಅಗತ್ಯತೆ ಮತ್ತು ಅದಕ್ಕೆ ಕೊಡುವ ಪ್ರಾಧಾನ್ಯತೆ ಹೀಗೆ ಎಲ್ಲವೂ, ಎಲ್ಲವೂ ನಮ್ಮದೇ ನೆಲದ ಕಥೆ ಅನಿಸಿಬಿಡುತ್ತದೆ.

ಅತೀ ಭೀಕರ ಚಳಿಗಾಲದ ಸುಳಿಯಲ್ಲಿ ಅವಳ ಕುಟುಂಬ ಸಿಕ್ಕಿಬಿದ್ದಾಗ ಪಡುವ ಕಷ್ಟಗಳು, ಹಕ್ಕಿಗಳ ಧಾಳಿ, ಬೆಳೆ ನಾಶವಾದಾಗ ಅವರು ಒದ್ದಾಡುವ ರೀತಿ ಇವೆಲ್ಲಾ ನಿಮ್ಮಲ್ಲಿ ಅನುಕಂಪ ಹುಟ್ಟಿಸುವುದಿಲ್ಲ, ಬದಲಿಗೆ ಅವರು ಜೀವನ ಎದುರಿಸುವ ರೀತಿಗೆ ಸಲಾಮ್ ಹೊಡೆಯುವಂತೆ ಮಾಡುತ್ತದೆ. ಪದೇ ಪದೇ ಅಂಕಲ್ ಸ್ಯಾಮ್(ಸರಕಾರ) ನ ಪಣ ತೀರಿಸಲು ಹೋರಾಡುವ ಪಾ ಮತ್ತು ಲಾರಾಳ ಪತಿ ಅಲ್ಮಾಂಜೋ ವೈಲ್ಡರ್, ಪತಿಗೆ ಸಹಕಾರ ನೀಡುವ ಮಾ ಮತ್ತು ಲಾರಾ ಅಷ್ಟೇ ಅಲ್ಲ, ತಂದೆ-ತಾಯಿಗೆ ಮನೆ ನಡೆಸಲು ಸಹಾಯಕಳಾಗಿ ನಿಲ್ಲುವ ಲಾರಾ ಭಾರತದ ಯಾವುದೇ ಸಂಸಾರದ ಬಿಂದುಗಳು ಅನಿಸುವುದರಲ್ಲಿ ಒಂದಿನಿತೂ ಅಚ್ಚರಿಯಿಲ್ಲ. ತಗಡಿನ ಲೋಟ, ಕಲ್ಕಂಡು ಮಿಠಾಯಿಗಳಿಂದ ಕ್ರಿಸ್ ಮಸ್ ಆಚರಿಸುವ ಬಗೆ, ವಾರದ ದಿನಗಳಲ್ಲಿ ಕೆಲಸದ ಹಂಚಿಕೆ, ಲಾರಾಳ ಚಾರ್ಲಟ್ - ಅದನ್ನು ಕಳೆದು ಮತ್ತೆ ಪಡೆದದ್ದು, ಜಾಕ್ ಮತ್ತು ಲಾರಾಳ ಬಂಧ, ಮೊದಲ ರೈಲಿನ ಪಯಣವನ್ನು ಮಿಠಾಯಿಯಿಂದ ಆಚರಿಸಿದ ರೀತಿ, ಮೇರಿಗೆ ಲಾರಾ ಬೆಳಕಾಗುವ ಪರಿ, ಓಹ್! ಒಂದೇ ಎರಡೇ ಯಾವುದನ್ನು ಯೋಚಿಸಿದರೂ  ನಿಜಕ್ಕೂ ವಿಭಿನ್ನ ರೀತಿಯ ಖುಷಿ, ಸ್ಪಂದನೆ, ಭಾವಗಳನ್ನು ಕೊಡುವ ಬರಹಗಳಿವು.

ಲಾರಾ-ಮೇರಿಯಂತೆ ಹುಲ್ಲುಗಾವಲಿನಲ್ಲಿ ಬಿದ್ದು ಹೊರಳಾಡಬೇಕೆನಿಸುವ, ನದೀ ತೀರದಲ್ಲಿ ಪ್ಲಮ್ ಆರಿಸುವ, ಏಡಿಯೊಡನೆ ಆಟವಾಡುವ, ನದಿಯಲ್ಲಿ ಮೀನು ಹಿಡಿಯುವ, ಅಲ್ಮಾಂಜೋವಂತೆ ಬೇಸಿಗೆಯಲ್ಲಿ ಐಸ್ಕ್ರೀಮ್ ಮಾಡಿ ಸವಿಯುವ, ಅವನಂತೆ ಕುದುರೆ ಪಳಗಿಸುವ ಆಸೆ ಪ್ರತೀ ಸಲ ಓದುವಾಗ ನನ್ನಲ್ಲೂ ಉಕ್ಕುತ್ತದೆ. ಮಿ ಬೋಸ್ಟ್, ನೆಲ್, ರೆವೆರೆಂಡ್ ಆಲ್ಡೆನ್, ನೆಲ್ಲಿ, ಕ್ಯಾಪ್ ಗಾರ್ಲೆಂಡ್, ಐಡಾ, ಜಾಕ್, ಶೆಪ್, ಮಿಸ್ ವೈಲ್ಡರ್, ಬಿಗ್ ಸ್ಯಾಮ್ ಎಲ್ಲಾ ಪಾತ್ರಗಳೂ ಕಣ್ಣ ಮುಂದೆ ಹೋಗುತ್ತವೆ. ಆ ವ್ಯಕ್ತಿಗಳ ಜೊತೆ ಲಾರಾಳಂತೆ ನನಗೂ ಒಡನಾಟವಿದೆ. ಜಾಕ್ ಅಂತೂ ನನ್ನದೇ ಜತೆಗಾರನಾಗಿ ಬಿಟ್ಟಿದ್ದಾನೆ, ಅವನ ಪರಲೋಕ ಪಯಣ ಮನಸ್ಸನ್ನು ಪ್ರತೀಸಲ ಪೀಡಿಸುತ್ತದೆ.

ಮೂಲತಃ ಸಸ್ಯಾಹಾರಿಗಳಾದ ನಮಗೇ ಬಾಯಿಯಲ್ಲಿ ನೀರೂರಿಸುವಂತೆ ಮಾಡಿದ್ದಾಳೆ ಲಾರಾ, ಅವಳು ವಿವರಿಸಿದ ಹಂದಿ ಮಾಂಸವನ್ನು ಒಮ್ಮೆ ತಿನ್ನಬೇಕು ಅನಿಸಿತ್ತು ಎಂದು ಪ್ರಕಾಶ್ ಹಾಗೂ ಪ್ರಭಾ ದಂಪತಿಗಳು ನನ್ನಲ್ಲಿ ಹೇಳಿದ್ದು ನೆನಪಿದೆ. ಅಷ್ಟು ಚೆಂದದ ವಿವರಣೆ ಲಾರಳದ್ದು ಹಾಗೂ ನನಗೂ ಹಾಗೆಯೇ ಅನಿಸಿದ್ದು ಸುಳ್ಳಲ್ಲ! ಚೀಸ್, ಹಂದಿ ಮಾಂಸದ ಸಾಸೆಜ್,  ಹಿಕರಿ ಹೊಗೆಯಾಡಿಸಿದ ಜಿಂಕೆ ಮಾಂಸ, ಜಜ್ಜಿದ ಈರುಳ್ಳಿ, ಬೇಯಿಸಿದ ಬಿಳಿಯಾದ ಆಲೂಗಡ್ಡೆ, ಆಪಲ್ ಪೈ, ಕುಂಬಳ ಕಾಯಿ ಪೈ, ಬ್ಲಾಕ್ ಬರ್ಡ್ ಪೈ, ಟೊಮೇಟೊ ಮುರಬ್ಬ, ಕರಡಿ ಮಾಂಸ, ಕ್ಯಾರೆಟ್ ತುರಿಯಿಂದ ಬಣ್ಣಗೊಳಿಸಿದ ಹೊಂಬಣ್ಣದ ಬೆಣ್ಣೆ, ಕೆಂಪು ಕಪ್ಪು ಶುಂಠಿ ಖಾರ ಬಗೆ ಬಗೆ ಸ್ವಾದದ ಕಲ್ಕಂಡು ಮಿಠಾಯಿಗಳು, ಪ್ಲಂ ಹಣ್ಣುಗಳು, ಟರ್ನಿಪ್, ಮೇಪಲ್ ಸಕ್ಕರೆ, ಆಯಿಸ್ಟರ್ ಮೀನು-ಸೂಪು, ಪಾಪ್ ಕಾರ್ನ್ ಎಲ್ಲಾ ಬಿಡಿ ಕೊನೆಗೆ ಕೈಲ್ಲಿ ಬೀಸಿದ ಗೋಧಿಯಿಂದ ಮಾಡಿದ ಕಂದು ಒರಟು ಬ್ರೆಡ್ ಹೀಗೆ ಲಾರ ಬರೆದಿರುವ ತಿನಿಸುಗಳೆಲ್ಲವೂ ಓದುಗರ ಬಾಯಿಯಲ್ಲಿ ನೀರೂರಿಸುವಂತಿದೆ.

ಪ್ರತೀ ಮಗುವಿಗೂ, ತಾಯಿ-ತಂದೆಗೂ, ಗೆಳೆಯ-ಗೆಳತಿ ಯಾರಿಗೂ ಕೊಡಬಹುದಾದ ಅತೀ ಸುಂದರ ಉಡುಗೊರೆಯೆಂದರೆ ಈ ಪುಸ್ತಕಗಳು. ಎಷ್ಟು ಸಲ ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ, ಮತ್ತೂ ಹೊಸ ಹೊಸ ವಿಷಯಗಳನ್ನು ತಿಳಿಸಿಕೊಡುವ, ಕಷ್ಟಗಳ ಸರಮಾಲೆ ಎದುರಾದರೂ ಮುನ್ನುಗ್ಗಿ ನಡೆಯುವ ರೀತಿ ಹೇಳಿಕೊಡುವ ಅಪರೂಪದ ಪುಸ್ತಕಗಳಿವು.

ಅಂಕಿತ ಪುಸ್ತಕ ಸರಣಿಯ ಎಲ್ಲಾ ಪುಸ್ತಕಗಳನ್ನು ಮುದ್ರಿಸಿದೆ.

No comments:

Post a Comment