Monday, July 2, 2018

Bheemannana maga

' ನಾನು ಭೀಮಸೇನರ ಮಗ' ಎಂದು ಹೇಳಿದಾಗಲೂ ಅಲ್ಲಿದ್ದವರೊಬ್ಬರು 'ಹೌದೇನು? ಹೆಂಗ ನಂಬೋಣು?' ಎಂದು ಕೇಳಿದರು. ನಾನು ನಿರ್ವಿಕಾರನಾಗಿ 'ಭಾರತದೊಳಗ ಅಪ್ಪನ ಸುಳ್ಳ ಹೆಸರ ಹೇಳೋ ಪದ್ಧತಿ ಇಲ್ಲ' ಎಂದು ಹೇಳಿದೆ. 
ಭೀಮಸೇನ ಜೋಶಿ ಹಾಗೂ ಅವರ ಮೊದಲನೇ ಪತ್ನಿ ಸುನಂದರವರ ಹಿರಿಯ ಪುತ್ರ ರಾಘವೇಂದ್ರರ ಆತ್ಮಕಥನದ ಸಾಲುಗಳಿವು. ಲೋಕ ವಿಖ್ಯಾತ ಗಾಯಕ ತಂದೆಯ ಕುರಿತು ತನ್ನ ನೆನಪುಗಳು, ಅವರೆಡೆಗಿನ ಅತೀವ ಪ್ರೀತಿ, ಸಿಗದೇ ಹೋದಾಗ ಒದ್ದಾಡಿದ ರೀತಿ, ಪಟ್ಟ ಅವಮಾನಗಳು ಮತ್ತು ಎಲ್ಲವನ್ನೂ ಎದುರಿಸಿ ಬೆಳೆದ ರೀತಿಯನ್ನು ರಾಘವೇಂದ್ರರರು ನಿರ್ವಿಕಾರವಾಗಿ ಹೇಳುತ್ತಾ ಹೋದಂತೆ ಮನಸ್ಸು ವ್ಯಥೆಯಿಂದ ತುಂಬಿ ಹೋಯಿತು. 
ಭೀಮಸೇನರು ಎರಡನೇ ಮದುವೆಯಾದ ಮೇಲೆ ಮೊದಲ ಪತ್ನಿ ಹಾಗೂ ಅವರ ಮಕ್ಕಳು ಪಟ್ಟ ಯಾತನೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ ಈ ಪುಸ್ತಕ. ತಂದೆಯದೇ ರೂಪ ಅಚ್ಚು ಒತ್ತಿದಂತಿದ್ದರೂ ಪದೇ ಪದೇ ತಾನು ಅದೇ ತಂದೆಯ ಮಗ ಎನ್ನುವುದನ್ನು ಜೀವನದುದ್ದಕ್ಕೂ ಸಾರಿ ಸಾರಿ ಹೇಳಬೇಕಾಗಿ ಬಂತು. ಎಲ್ಲವೂ ಸುರಳೀತವಾಗಿದ್ದಲ್ಲಿ ಅವರೂ ತನ್ನ ತಂದೆಯವರಂತೆ ಶ್ರೇಷ್ಠ ಗಾಯಕರಾಗುತ್ತಿದ್ದರೋ ಏನೋ. ಹಾಗಾಗಲಿಲ್ಲ. ದೇವರು ಕೊಟ್ಟ ಸಿರಿ ಕಂಠವಿದ್ದರೂ, ಪ್ರಪಂಚದ ಅತ್ಯುತ್ತಮ ಗಾಯಕ ತಂದೆಯಿದ್ದರೂ ಕೊನೆಯವರೆಗೂ ಅವರಿಂದ ಗಾಯನ ಕಲಿಯಲಾಗಲೇ ಇಲ್ಲ. ಹೆತ್ತ ತಂದೆಯಿಂದ ಸಿಗಬೇಕಾದ ವಿದ್ಯೆ, ಆಸರೆ, ರಕ್ಷಣೆ ಇವೆಲ್ಲವೂ ಬೇರೆಯವರ ಪಾಲಾಗಿ, ಎಂದೋ ಒಮ್ಮೊಮ್ಮೆ ಸಿಕ್ಕಾಗ ಅದಷ್ಟೇ ಅದೃಷ್ಟ ಎಂದು ಸ್ವೀಕರಿಸಿ ಕಹಿಯಿಲ್ಲದೆ ಅವರನ್ನು 'ಶಾಪಗ್ರಸ್ತ ಗಂಧರ್ವ' ಎಂದೇ ನಂಬಿ, ಅವರದೇ ರಾಗಗಳಲ್ಲಿ ಮುಳುಗಿ ಏಳುತ್ತಾ ಬದುಕ ಕಟ್ಟಿಕೊಂಡ ರಾಘವೇಂದ್ರರು ಭೀಮಸೇನರಷ್ಟೇ ಗೌರವ ಹುಟ್ಟಿಸುತ್ತಾರೆ. ತಂದೆಯ ಬಗೆಗಿನ ಅಸಾಧ್ಯ, ಅಪರಿಮಿತ, unconditional ಪ್ರೀತಿಯಿಂದ ಓದುಗರಿಗೆ ಹತ್ತಿರವೂ ಆಗುತ್ತಾರೆ. ಹಿರಿಯ ಮಗನಾಗಿ ಅತೀ ಚಿಕ್ಕ ವಯಸ್ಸಿನಲ್ಲೇ ತಾಯಿಯ ಕಷ್ಟ ಅರಿತು ಅದಕ್ಕಾಗಿ ಅವರು ಹಾಕುವ ಪ್ರಯತ್ನಗಳು ಹಾಗೂ ತಾಯಿಯ ಸಂಕಟವನ್ನು ಅವರು ಬಣ್ಣಿಸುವ ಪದಗಳು ಮೂಕರನ್ನಾಗಿಸುತ್ತವೆ. ಜಲಶೋಧನೆಯನ್ನು ಒಲಿಸಿಕೊಂಡ ರಾಘವೇಂದ್ರರು, ಆಳವಾದ ಬಾವಿಯ ತಳಕ್ಕಿಳಿದು ಸ್ವತಃ ಡ್ರಿಲ್ಲಿಂಗ್ ಮಾಡುತ್ತಾ, ಧೂಳನ್ನು ಮೆತ್ತಿಕೊಳ್ಳುತ್ತಾ ಕಂಪ್ರೆಸ್ಸರಿನ ಧ್ವನಿಯಲ್ಲಿ ಸ್ವರಗಳನ್ನು ಮಿಳಿತಗೊಳಿಸಿ ಭೀಮಣ್ಣರ ಹಾಡುಗಳನ್ನೇ ಹಾಡುತ್ತಾ ಬದುಕ ಸವೆಸುತ್ತಾರೆ. ಅವರೇ ಹೇಳುವಂತೆ ಭೀಮಣ್ಣರಿಂದಲೇ ನೋವಾದಾಗ ಅವರದೇ ರಾಗಗಳ ಮುಲಾಮು ಹಚ್ಚಿಕೊಳ್ಳುತ್ತಾರೆ. ಅವಮಾನ, ದುಃಖದಲ್ಲೇ ಬದುಕಿದ ರಾಘವೇಂದ್ರರು ನೆಮ್ಮದಿ ಹೊಂದುತ್ತಿದ್ದದ್ದು ತಂದೆಯ ಪ್ರೀತಿ ತುಂಬಿದ ಕಣ್ಣೋಟ ಹಾಗೂ ಅವರ ಕಾಲ ಸ್ಪರ್ಶದಿಂದ. ಕೃತಿಯುದ್ದಕ್ಕೂ ಪದೇ ಪದೇ ಅದರ ಪ್ರಸ್ತಾಪ ಬರುತ್ತದೆ. ತನ್ನ ತಂಗಿ, ತಮ್ಮಂದಿರ, ತಾಯಿಯ ಅಸಹಾಯಕತೆ ನೋಡುತ್ತಲೇ ಅದರ ಬಗ್ಗೆ ಹೇಳುತ್ತಲೇ ಅದಕ್ಕೆ ಕಾರಣರಾದವರ ಮೇಲೆ ಯಾವುದೇ ಕೆಟ್ಟ ಪದಗಳನ್ನು ಬಳಸದೆ 'ಅವರು' ಎಂದಷ್ಟೇ ಸಂಬೋಧಿಸುತ್ತಾರೆ. ಸಾಮಾಜಿಕ, ಆರ್ಥಿಕ ಭದ್ರತೆಯಿಲ್ಲದೆ ಅವಮಾನಗಳನ್ನಷ್ಟೇ ಉಂಡ ಓರ್ವ ವ್ಯಕ್ತಿ ಅಷ್ಟು ಉತ್ತಮವಾಗಿ ಬೆಳೆಯಬಲ್ಲನೆಂದರೆ, ಉಳಿಯಬಲ್ಲನೆಂದರೆ ಅದೊಂದು ಸಾಧನೆಯೇ. 
ತಂದೆಯ ಬಾಲ್ಯದ ತುಣುಕುಗಳು, ಸಂಗೀತವನ್ನು ಅವರು ಹಠ ಕಟ್ಟಿ ಕಲಿತ ಪರಿ, ಸಂಸಾರದೊಂದಿಗೆ ಕಳೆದ ದಿನಗಳ, ಅವರ ಅವಲಕ್ಕಿ ಪ್ರೀತಿ, ಕಾರಿನ ವೇಗದ ಹುಚ್ಚು, ಕಬ್ಬಿಣದ ಸೌಟಿನ ಒಗ್ಗರಣೆ ಪ್ರೀತಿ, ಆರೋಗ್ಯದ ಬಗ್ಗೆ ಅವರಿಗಿದ್ದ ಕಾಳಜಿ, ಅಸಾಧ್ಯ ಜ್ಞಾನ ಇವೆಲ್ಲವನ್ನೂ ಹೇಳುತ್ತಾ ಭೀಮಸೇನರ ವ್ಯಕ್ತಿತ್ವದ ಮಜಲುಗಳನ್ನು ಪರಿಚಯಿಸುತ್ತಾರೆ. ಅವರ ನಿರ್ಧಾರದಿಂದ ಆದ ಘಟನೆಗಳು ಹಾಗೂ ಸಂಭಂದಪಟ್ಟ ಎಲ್ಲರೂ ಆಯುಷ್ಯವಿಡೀ ಒದ್ದಾಡಿದ ರೀತಿಗೆ ಅವರು ಒಳಗೊಳಗೇ ಪರಿತಪಿಸಿದ್ದನ್ನೂ ರಾಘವೇಂದ್ರರು ಗುರುತಿಸುತ್ತಾರೆ. 
"ಇವರೆಲ್ಲಾ ನನ್ನ ಒಂದು ಸಾಕಿದ ಕರಡಿ ಮಾಡಿ ಇಟ್ಟಾರ. ಕೂಡು ಅಂದಕೂಡ್ಲೆ ಮೋಟಾರ್ ಸೈಕಲ್ ಮೇಲೆ (ಅಂದ್ರ ಸ್ಟೇಜ್ ಮ್ಯಾಲೆ) ಕೂಡಬೇಕು ಮತ್ತು ಸುತ್ತು ಹಾಕಬೇಕು (ಅಂದ್ರ ಹಾಡಬೇಕು) "
"ನಾ ಹಾಡಿ ಮನೆಗೆ ರೊಕ್ಕ ತರಲಿಲ್ಲ ಅಂದ್ರ ನನ್ನ ( ಮನೆಯ ನಾಯಿ) ಅದರ ಜಾಗಕ್ಕ ಕಟ್ಟತಾರ"
ಇವು ಭಾರತ ರತ್ನ ಭೀಮಸೇನ ಜೋಶಿಯವರ ಮಾತುಗಳೆಂದರೆ ನಂಬಲಾದೀತೇ? ಭೀಮಣ್ಣನ ಕೊನೆಯ ದಿನಗಳ ನೋವು ಓದುಗನನ್ನು ಅತೀ ಸಂಕಟಗೊಳಿಸುತ್ತದೆ. ಭಾರತರತ್ನ ಪ್ರಶಸ್ತಿಯ ಪ್ರಧಾನದ ವಿವರಗಳಂತೂ ಯಾರಿಗೂ ದುಃಖ ತರಿಸೀತು. ಹರಕು ಜಮಖಾನದ ಮೇಲೆ ಮಲಗಿದ ಭೀಮಸೇನರ ಪಾರ್ಥಿವ ಶರೀರ, ಚಪ್ಪಲು ಕಾಲುಗಳಿಂದ ಸುತ್ತ ಓಡಾಡುತ್ತಿದ್ದ ಜನ....ಛೆ! ಆ ಗಾನ ಗಂಧರ್ವನಿಗೂ ಇಂತಹ ಯಾತನೆಗಳು ಬೇಕಿದ್ದವೇ? ಗೊತ್ತಿಲ್ಲ...
ಈ ಪುಸ್ತಕ ಓದುತ್ತಾ ನನಗೆ ಭೀಮಸೇನರ ಬಗ್ಗೆ, ಅವರ ನಿರ್ಧಾರಗಳ ಬಗ್ಗೆ ಸಾವಿರಾರು ಪ್ರಶ್ನೆಗಳು ಹುಟ್ಟಿದವೇ ಹೊರತು ಕೋಪ ಬರಲಿಲ್ಲ. ರಾಘವೇಂದ್ರರು ತನ್ನ ಸಾಧನೆಗಳು, ಪತ್ನಿ, ಮಕ್ಕಳು, ತಾಯಿ ಎಲ್ಲರ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಾರೆ. ಈ ತಂದೆ - ಮಗನ ಜುಗಲಬಂದಿಯಲ್ಲಿ ನಿಮಗ್ಯಾರು ಆಪ್ತರಾಗುತ್ತಾರೆ ಹೇಳುವುದು ಕಷ್ಟ.... ಬದುಕನ್ನು, ಮನುಷ್ಯರನ್ನು ಇನ್ನಷ್ಟು ಸರಳವಾಗಿ ನೋಡಲು, ರಾಗ ದ್ವೇಷಗಳಿಗೆ ಒಳಗಾಗದೆ ಇರಲು ಸಹಾಯ ಮಾಡಿತು ಈ ಕೃತಿ. ತಂದೆ ಮಗನ ವಾತ್ಸಲ್ಯವನ್ನು ಇದಕ್ಕಿಂತ ಚೆನ್ನಾಗಿ ವಿವರಿಸಿದ ಬೇರೆ ಪುಸ್ತಕ ನೆನಪಿಲ್ಲ ನನಗೆ

No comments:

Post a Comment