Monday, February 19, 2018

ಓದಲಾರೆನೆಂದರೆ ಓದದಿರಲಿ ಹ್ಯಾಗೆ?

ಅದೆಲ್ಲಿ ಯಾವಾಗ ಶುರುವಾಯಿತು ನೆನಪಿಲ್ಲ, ಅದೊಂದು ತೀವ್ರ ನಶೆ. ಏನಾದರೂ ಓದದೇ ಹೋದರೆ ಸಾಯಬೇಕಿನ್ನಿಸುವಷ್ಟು. ಪ್ರತೀ ಪುಸ್ತಕದಲ್ಲಿಯೂ ಒಂದೊಂದು ಲೋಕ. ಈ ಲೋಕ ಬಿಟ್ಟು ಆ ಲೋಕದಲ್ಲಿ ಕಳೆದು ಹೋಗುವ ತೀವ್ರ ತವಕ.  ಎಷ್ಟು ಬಗೆ ಬಗೆಯ ಕಥೆಗಳು ನಡೆದಲ್ಲಿ, ಕೂತಲ್ಲಿ, ಹೊರಳಿದಲ್ಲಿ. ಬದುಕಿನದೇ ಕಥೆಗಳು ಪುಸ್ತಕದಲ್ಲಿವೆಯೋ, ಪುಸ್ತಕದ ಕಥೆಗಳು ಬದುಕಾಗಿವೆಯೋ, ಒಂದರೊಳಗೊಂದು ಹೊಸೆದ ಜಡೆ.  ಯಾವುದೋ ಕಾಡಿನ ಯಾವುದೋ ಹಕ್ಕಿಯ ಉಲಿತ, ಹುಲಿಯ ಹೆಜ್ಜೆಯ ಸದ್ದು, ಇದ್ಯಾವುದೋ ಕುಗ್ರಾಮದ ಬಡವನ ಹಸಿವಿನ ಅಳು, ಮಹಾ ಸಾಮ್ರಾಜ್ಯದ ರಾಣಿಯ ನಿಟ್ಟುಸಿರು, ಇಂಚಿಂಚು ತಿನ್ನುವ ರೋಗಕ್ಕೆ ಬಲಿಯಾದರೂ ಛಲ ಬಿಡದ ಗಟ್ಟಿ ಮನುಷ್ಯರ ನಗು, ಹಸಿವನ್ನೂ, ನಗುವನ್ನೂ ರಾಗವಾಗಿ ಹಾಡುವ ಕವನಗಳ ಸ್ವರ, ಶೋಷಣೆಗೆ ಬಲಿಯಾದವರು ಆಕ್ರೋಶ, ದ್ವೇಷಗಳಿಲ್ಲದೆ ಹೇಳುವ ಅತೀ ತಣ್ಣಗಿನ ಮಾತುಗಳು, ಅಘೋರಿಗಳ, ಸಾಧುಗಳ, ಮಾಟ ಮಂತ್ರಗಳ ಲೋಕದಿಂದ ಹೊರಹೊಮ್ಮುವ ಘೋಷಗಳು, ಪ್ರಪಂಚದ ಮೂಲೆ ಮೂಲೆಗಳಿಂದ ಕನ್ನಡೀಕರಣಗೊಂಡು ಇಲ್ಲೇ ಹರಿಯುವ ನದಿಗಳ ಜುಳು ಜುಳು ನಾದ! ಬದುಕು ಅದೆಷ್ಟು ದೊಡ್ಡದು ಎಂದು ಕ್ಷಣ ಕ್ಷಣ ತಿಳಿಸುವ ನೂರಾರು ಗುರುಗಳಿಗೆ ಸಹಸ್ರ ಕೋಟಿ ನಮನಗಳು. ತಿರುಗಲ ತಿಪ್ಪಿಯಂತಹ ಮನಸ್ಸು, ಸಾಕಷ್ಟು ಸುತ್ತಲೇ ಇಲ್ಲ, ಇನ್ನೂ ಏನೇನೋ ನೋಡಬೇಕಿತ್ತು, ಕಾಲ ಜಾರುತ್ತಿದೆ ಅನಿಸಿದಾಗೆಲ್ಲಾ ಹೇ, ನಾನಿದ್ದೀನಿ ಎಂದು ಹಾರಿ ಬಂದು ಕೈಯೊಳಗೆ ಕೂರುವ ಇವುಗಳು ನನ್ನಿಂದ ಎಂದೂ ಜಾರಿ ಹೋಗದಿರಲಿ. ಕೆ ಟಿ ಗಟ್ಟಿ ತಮ್ಮ ಆತ್ಮಕಥನ ತೀರದ ಮುನ್ನುಡಿಯಲ್ಲಿ ಹೇಳುತ್ತಾರೆ, ‘ ಮನುಷ್ಯನನ್ನು ಮನುಷ್ಯನನ್ನಾಗಿಸುವುದು ಪುಸ್ತಕಗಳು’ ಎಂದು. ಇನ್ನೂ ಮನುಷ್ಯಳಾಗುವುದು ಬಾಕಿ ಇದೆ, ಅಷ್ಟು ಓದುವಷ್ಟು ಆಯುಷ್ಯ, ಕಣ್ಣು, ಆರೋಗ್ಯ ಇದ್ದರೆ ಸಾಕಿತ್ತು. , ಕರೆದುಕೊಂಡು ಹೋಗಲು ಅದ್ಯಾರೋ ಮೂಲೆಯಲ್ಲಿ ಕೂತು ಕಾಯುತ್ತಿದ್ದಾರೆ, ಆದಷ್ಟು ಬೇಗ ಬೇಗ ಓದೋಣ ಅನ್ನುವ ಧಾವಂತ ಹುಟ್ಟಲಿ ಪ್ರತಿದಿನ ಪ್ರತಿಕ್ಷಣ ಮನಸ್ಸಿಗೆ. ಎಷ್ಟು ಓದಿದರೂ ಚೆನ್ನಾಗಿ ಬರೆಯಲಾರೆನೆಂಬ ಕೊರಗಿತ್ತು ಒಂದಿಷ್ಟು ದಿನ, ಇವಾಗ ಓದಿದಾಗ ಸಿಗುವ ಖುಷಿ, ನಶೆ ಅದನ್ನು ಮರೆಸಿದೆ. ಓದಿನ ಸಲುವಾಗಿಯೇ ಆತ್ಮೀಯವಾಗುವ ಆತ್ಮ ಬಂಧುಗಳು ಅದೆಷ್ಟೋ ...
ಇವನ್ನೆಲ್ಲಾ ಅನುಭವಿಸುವ ಮನಸ್ಸನ್ನು ರೂಪುಗೊಳಿಸಿದ ತಂದೆ, ತಾಯಿ, ಅಕ್ಕ ಮತ್ತು ಶಾಲೆಯ ಟೀಚರುಗಳಿಗೆ ಶರಣು. 
ಎಲ್ಲಕ್ಕೂ ಮುಖ್ಯವಾಗಿ ಎಷ್ಟು ಕಷ್ಟಪಟ್ಟು ಬರೆಯುವ ಲೇಖಕರು ಮತ್ತು ಉತ್ತಮ ಅಭಿರುಚಿಯ ಪುಸ್ತಕವೊಂದನ್ನು  ಹೊರತರಲು ಶ್ರಮಿಸುವ ಎಲ್ಲರೂ ಸುಖವಾಗಿರಲಿ. ಆ ಪುಸ್ತಕಗಳ ಮೇಲೆ ಸಿನೆಮಾ, ಧಾರವಾಹಿ, ಆಡಿಯೋ ಬುಕ್  ಮಾಡಿ ಇನ್ನಷ್ಟು ಜನರಿಗೆ ತಲುಪಿಸುವವರೂ ಹೆಚ್ಚಾಗಲಿ. 
ಓದಲಾರೆನೆಂದರೆ ಓದದಿರಲಿ ಹ್ಯಾಗೆ? 
(ಪುಸ್ತಕಗಳ ಮೈದಡುವುತ್ತಾ, ಸ್ಪರ್ಶ ಸುಖ ಅನುಭವಿಸುತ್ತಾ ಅನಿಸಿದ್ದು!)

No comments:

Post a Comment