Saturday, May 21, 2016

ಬೊಂಬೆ

 ಈ ಕಥೆ ಯುಗಾದಿ ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದಿದೆ.

ಪದಬಂಧ ಬಿಡಿಸುತ್ತಾ ಜಗಲಿ ಮೇಲೆ ಕೂತಿದ್ದ ಪೂರ್ಣಿಮಾ ಗೇಟಿನ ಸದ್ದಿಗೆ ತಲೆಯೆತ್ತಿದರೆ ಗೌರಿ ದನ ಬಂದು ನಿಂತಿದ್ದಾಳೆ, ' ಯಾವಾಗಲೂ ಸಂಜೆ ಅಕ್ಕಚ್ಚಿಗಾಗಿ ಬರುವವಳು  ಈವಾಗಲೇ ಬಂದಿದ್ದಾಳೆ್,  ನೀರಡಿಕೆಯಾಗಿರಬೇಕು' ಎಂದುಕೊಂಡು ಮನೆಯ ಎಡಪಾರ್ಶ್ವಕ್ಕಿದ್ದ, ನಳದ ಬಳಿ ನಡೆದು, ಬಕೆಟಿನಲ್ಲಿ ನೀರು ತಂದಳು. ಬಕೀಟು ನೋಡುತ್ತಿದ್ದಂತೆ, ಕುತ್ತಿಗೆ ಕೊಂಕಿಸಿ, ಬಾಲವನ್ನಾಡಿಸುತ್ತ ಆತುರ ತೋರಿಸಿದ ಗೌರಿ, ಬಕೇಟು ಕೆಳಗಿಳಿಸುವ ಮೊದಲೇ ಮೂತಿಯನ್ನು ನುಗ್ಗಿಸಿ ಶಬ್ದ ಮಾಡಿಕೊಂಡು ನೀರು ಕುಡಿಯತೊಡಗಿದಳು. ನೋಡುತ್ತಾ ನಿಂತವಳಿಗೆ ಬಿಸಿಲಿನ ಝಳ ತಟ್ಟಿತು. ' ಬೀದರಿನ ಬಿಸಿಲು ಅಂದರೆ ಸಾಮಾನ್ಯವೇ? ಎಂದುಕೊಳ್ಳುತ್ತಾ  ಮುಖ ಒರೆಸಿಕೊಳ್ಳುತ್ತಿದ್ದವಳ ಕಣ್ಣು  ರಸ್ತೆಯಂಚಿಗೆ ನಿಂತಿದ್ದ ತಗಡಿನ ಶೀಟು ಹೊದೆಸಿದ್ದ ರಾಮಲಕ್ಷ್ಮಿಯ ಮನೆಯ ಕಡೆ ಹರಿಯಿತು. ಆರು ತಿಂಗಳುಗಳೇ ಕಳೆಯಿತಲ್ಲಾ ಎಂದು ನಿಟ್ಟುಸಿರುಬಿಟ್ಟ ಪೂರ್ಣಿಮಾ , ಖಾಲಿಯಾಗಿದ್ದ ಬಕೆಟನ್ನೆತ್ತಿ ಹೊರಟಳು.

ಆಗಲೇ ಪುಟ್ಟ ಬರುವ ಸಮಯವಾಗಿತ್ತು, ಬಂದ ಕೂಡಲೇ ಅವನ ಬಡಬಡಕ್ಕೆಲ್ಲಾ ಅನ್ಯಮನಸ್ಕಳಾಗಿ ಹೂಂಗುಟ್ಟಿದಳು. ಅಮ್ಮ ಇವತ್ತ್ಯಾಕೆ ಹೀಗಿದ್ದಾಳೆ ಎಂದು ಪುಟ್ಟ ಕೇಳಿಯೂ ಬಿಟ್ಟ,  ಏನಿಲ್ಲ ಅಂದಳಷ್ಟೇ. ತನ್ನಷ್ಟಕ್ಕೆ ಊಟ ಮಾಡುತ್ತಾ ಡೋರೆಮಾನ್ ನೋಡುತ್ತಾ ಕುಳಿತ. ಅರ್ಧಕ್ಕೆ ಬಿಟ್ಟ ಪದಬಂಧವನ್ನು ಮಾಡುತ್ತಾ ಕುಳಿತವಳಿಗೆ ಹಿಂದಿದ್ದೆಲ್ಲಾ ನೆನಪು.

ಎರಡೂವರೆ ವರ್ಷದ ಹಿಂದೆ, ನಾಲ್ಕು ವರ್ಷದ ಪುಟ್ಟನನ್ನು ಕರೆದುಕೊಂಡು ದೂರದ ಪುತ್ತೂರು ಬಿಟ್ಟು ಕರ್ನಾಟಕದ ತುಟ್ಟತುದಿಯ ಬೀದರಿಗೆ ಬಂದವಳಿಗೆ ಅತೀ ಬಿಸಿಲು, ಅತೀ ಚಳಿ, ಒಡೆಯುವ ಮೈ, ಕಪ್ಪು ಮಣ್ಣು, ಧೂಳು ಎಲ್ಲವೂ ಹೊಸದು. ಗಂಡ ಚಿದಾನಂದ ಸೀನಿಯರ್ ಸಿವಿಲ್ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದರಿಂದ ಮೂರು ವರ್ಷಗಳಿಗೊಮ್ಮೆ ಗಂಟುಮೂಟೆ ಕಟ್ಟಿ ಹೊರಡುವುದು ಇಷ್ಟವಿಲ್ಲದಿದ್ದರೂ ಅನಿವಾರ್ಯ ಕರ್ಮವಾಗಿತ್ತು. 
ದತ್ತ ಮಹಾರಾಜ್ ಕಾಲನಿಯಲ್ಲಿ ಮನೆ ಹಿಡಿದ ಚಿದಾನಂದನಿಗೆ ಕೋರ್ಟ್ ೮ ನಿಮಿಷದ ಹಾದಿಯಾದರೆ ಪುಟ್ಟನ ಜ್ಞಾನಸುಧಾ ಶಾಲೆಗೆ ೨೦ ನಿಮಿಷ. ಎದುರು ಮನೆಯ ನಿರ್ಮಲ ಆಂಟಿ, ಪಕ್ಕದ ಮನೆಯ ಮರಾಠಿ ಮಾತನಾಡುವ ಶೀಲಾ, ದೊಡ್ಡ ಗೇಟಿನ ಮನೆಯ ಪ್ರಮೀಳಾ ಆಂಟಿ, ಅವರ ಮಗಳು ಬಬಿತಾ ಎಲ್ಲರೂ ಪರಿಚಯವಾದರು. "ಓ, ಮಂಗಳೂರು ಕಡೆಯವರೇನ್ರೀ, ನಿಮ್ಮ್ ಕಡಿ ಭಾಳಾ ಶೆಕೆ ರೀ, ನೀವೂನೂ ಕೊಬ್ರಿ ಎಣ್ಣೆ ಬಳಸ್ತೀರೆನ್ರಿ ಮತ್ತೆ, ನಿಮ್ಮ್ ಸಾಂಬಾರ್, ಸಾರು ಮಸ್ತ್ ಇರ್ತದ " ಎನ್ನುತ್ತಾ ಇವಳಿಗೆ ಮಾರ್ಕೆಟ್, ಹೊಸದಾಗಿ ಪ್ರಾರಂಭವಾದ ಬಿಗ್ ಬಜಾರ್, ಕಿರಾಣಿ ಅಂಗಡಿ, ಕಿಲಾ, ಬಿದರಿ ಕಲೆ, ಗುರುದ್ವಾರ, ನಾನಕ್ ಝರಣಿ ಎಲ್ಲವನ್ನೂ ಪರಿಚಯಿಸಿದರು. "ಮನೆಕೆಲಸಕ್ಕೆ ಬಾಯಿ ಬೇಡೆನ್ ?" ಎಂದು ಪ್ರಮೀಳಾ ಆಂಟಿಯೇ ಅವರ ಮನೆಗೆ ಬರುವ ರಾಮಲಕ್ಷ್ಮಿಯನ್ನು ಕರ್ಕೊಂಡು ಬಂದು ಮಾತನಾಡಿ  ಸಂಬಳವನ್ನೂ ನಿಗದಿಪಡಿಸಿದಾಗ ಚೌಕಾಶಿ ಗೊತ್ತಿಲ್ಲದ ಪೂರ್ಣಿಮಾಳಿಗೆ ಮನಸ್ಸು ಹಗುರಾಗಿತ್ತು.

ಹಾಗೆ ಮನೆಗೆ ಬಂದ ಮದನಪಲ್ಲಿ ಸತ್ಯ ಸಾಯಿ ರಾಮಲಕ್ಷ್ಮಿ ತೆಲುಗು ಮಿಶ್ರಿತ ಕನ್ನಡ ಮಾತನಾಡುತ್ತಾ, ಮನೆಯಿಡೀ ತನ್ನದೇ ಎಂಬಂತೆ ಕೆಲಸ ಮಾಡುತ್ತಾ ಪೂರ್ಣಿಮಾಳಿಗೆ ಹತ್ತಿರವಾಗುತ್ತಾ ಹೋದಳು. ಯಾವಾಗೆಂದರೆ ಆವಾಗ ರಜೆ ಹಾಕಿ ಮಾಯವಾಗುತ್ತಿದ್ದ ರಾಮಲಕ್ಷ್ಮಿ ವಾಪಸು ಬರುವವರೆಗೂ ಪೂರ್ಣಿಮಾಳಿಗೆ ಸಾಕುಬೇಕಾಗುತ್ತಿತ್ತು. ಹೆಚ್ಚಾಗೆ ತಂದ ದಿನಸಿ ಸಾಮಾನುಗಳು, ತರಕಾರಿಗಳು, ಊರಿನಿಂದ ತಂದೆ ಕೊರಿಯರ್ ಮಾಡುತ್ತಿದ್ದ ತಿಂಡಿ ತಿನಿಸುಗಳು, ಸಾರಿನ ಪುಡಿ ಎಲ್ಲದರಲ್ಲೂ ರಾಮಲಕ್ಷ್ಮಿಗೆ ಪಾಲಿರುತ್ತಿತ್ತು. ಅವಳ ತಿಂಗಳ ದಿನಗಳಲ್ಲಿ ಹೊಟ್ಟೆ ನೋವಿನಿಂದ ಒದ್ದಾಡುವಾಗೆಲ್ಲಾ ಊರಿನಿಂದ ತಂದ ಚಂದ್ರಪ್ರಭಾ ವಟಿಯನ್ನು ಬಲವಂತವಾಗಿ ನುಂಗಿಸುತ್ತಿದ್ದಳು. ಯಾವುದೇ ಎಕ್ಸಿಬಿಷಿನ್ನಿಗೆ ಹೋದರೂ   ಮಣಿ ಸರ, ಮಕ್ಕಳಿಗಾಗಿ ಆಟಿಕೆಗಳನ್ನು ತರುವುದನ್ನು ಪೂರ್ಣಿಮಾ ಮರೆಯುತ್ತಿರಲಿಲ್ಲ. ಚಿದಾನಂದನ ಕಣ್ಣು ತಪ್ಪಿಸಿಯೇ ಅವಳು ಇದನ್ನೆಲ್ಲಾ ಮಾಡಬೇಕಿತ್ತು. ಅವಳ ಈ ಸ್ವಭಾವವನ್ನು ಅತಿಯಾಗಿ ದ್ವೇಷಿಸುತ್ತಿದ್ದ ಚಿದಾನಂದ, "ಯಾರನ್ನು ಎಲ್ಲಿಡಬೇಕೋ ಅಲ್ಲಿಡಬೇಕು, ಅತೀ ಸಲಿಗೆ ನೀ ಕೊಡೋದು ನೋಡಿದ್ರೆ ಮೈಯೆಲ್ಲಾ ಉರಿಯುತ್ತೆ, ಒಳ್ಳೆಯವಳು ಅನಿಸಿಕೊಳ್ಳೊ ಚಟ ನಿಂಗೆ" ಎಂದೆಲ್ಲಾ ಚುಚ್ಚುತ್ತಿದ್ದ. ಆವಾಗೆಲ್ಲ ಅವಳ ಮುಖ ಬಾಡಿದರೂ, ತುಸು ವೇಳೆಯಲ್ಲೇ, ಸಂಜೆ ಬರುವ ಬೀಡಾಡಿ ದನ ಗೌರಿಗಾಗಿ ಅನ್ನ ಬಸಿದ ನೀರು, ತರಕಾರಿ, ಹಣ್ಣಿನ ಸಿಪ್ಪೆಗಳನ್ನು ಎತ್ತಿಡುವುದರಲ್ಲಿ ಮಗ್ನಳಾಗುತ್ತಿದ್ದಳು. ಅಕ್ಕ ಪಕ್ಕದವರೂ " ನೀ ಬಂದು ಆಕಿನ ಹಾಳು ಮಾಡಿದಿ ನೋಡವ್ವ" ಎಂದಾಗ ಎಂದಿನ ತಿಳಿನಗೆ ಬೀರುತ್ತಿದ್ದಳು.

ಸದಾ ಚಿರಂಜೀವಿ, ಅವನ ಸಿನೆಮಾಗಳ ಬಗ್ಗೆಯೇ ಮಾತನಾಡುತ್ತಿದ್ದ ರಾಮಲಕ್ಷ್ಮಿ ಬೇರೆಯವರ ಬಗ್ಗೆ ದೂರು ಹೇಳುತ್ತಿದ್ದಿದ್ದು ಕಡಿಮೆ. ಯಾವಾಗಾದರೊಮ್ಮೆ,ತನ್ನ ಹೊಸ ಹೊಸ ವ್ಯಾಪಾರಕ್ಕೊಸ್ಕರ ಊರಿಡೀ ಸಾಲ ಮಾಡಿಕೊಂಡು, ಆಯುರ್ವೇದಿಕ್ ಕಾಲೇಜಿನಲ್ಲಿರೋ ಮಾಲಿ ಕೆಲಸ ನೆಟ್ಟಗೆ ಮಾಡೊದು ಬಿಟ್ಟು ಹುಡುಗೀರ ಹತ್ರ ಹರಟೊದನ್ನು ಹೇಳಿ ಅಳುತ್ತಿದ್ದಳು. ಅವಳ ತೆಲುಗುಗನ್ನಡವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪೂರ್ಣಿಮಾ ಸಾಕಷ್ಟು ತೆಲುಗು ಕಲಿತಿದ್ದರೆ, ಅವಳ 'ಉಂಟು'ವನ್ನು ರಾಮಲಕ್ಷ್ಮಿ ತನ್ನ ಮಾತಿನಲ್ಲಿ ಧಾರಾಳವಾಗಿ ಬಳಸುತ್ತಿದ್ದಳು. ರಾಮಲಕ್ಷ್ಮಿಗೆ ಮಕ್ಕಳು ತಮ್ಮಂತಾಗದೆ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಹಿಡಿಯಬೇಕೆಂಬ ಆಸೆ, ಅದಕ್ಕಾಗಿ ಸಾಧ್ಯವಾದಷ್ಟು ದುಡಿದು ಹಣ ಕೂಡಿಸುತ್ತಿದ್ದಳು.

ಒಂದು ಶನಿವಾರ ತಡವಾಗಿ ಬಂದವಳ ಕಣ್ಣು ಕೆಂಪಾಗಿ ಬಾತುಕೊಂಡಿತ್ತು, ಅವಳು ಹೇಳಿದಿಷ್ಟು. ಅವಳಮ್ಮ, ಮದುವೆ ಸಮಯದಲ್ಲಿ ಒಂದಿಷ್ಟು ಚಿನ್ನ ಹಾಕಿದ್ದರಂತೆ, ಮತ್ತಿವಳು ಚಿನ್ನದ ಅಂಗಡಿಯಲ್ಲಿ ದುಡ್ಡು ಕಟ್ಟಿ ಒಂದಿಷ್ಟು ಮಾಡಿಟ್ಟುಕೊಂಡಿದ್ದಳಂತೆ. ಅವಳ ಗಂಡ ಊರಲ್ಲಿ ಜಮೀನು ತೆಗೆದುಕೊಳ್ಳಬೇಕು ಅಂದಾಗ ಅಡವಿಟ್ಟು ಹಣ ಕೊಟ್ಟಿದ್ದಾಳೆ. ಬಡ್ಡಿ, ಚಕ್ರ ಬಡ್ಡಿ ಎಲ್ಲಾ ಬೆಳೆದು ಈವಾಗ ೭೫,೦೦೦ವಾಗಿದೆ. ಇನ್ನೊಂದು ವಾರದಲ್ಲಿ ಪೂರ್ತಿ ಹಣ ಕೊಟ್ಟು ಬಿಡಿಸಿಕೊಳ್ಳದಿದ್ದರೆ ಅದೆಲ್ಲಾ ಗಿರವಿ ಅಂಗಡಿಯ ಪಾಲಾಗಲಿದೆ. ಹೋಗಲಿ ಜಮೀನಾದರೂ ಇದೆಯಾ, ಅದನ್ನೂ ಗಂಡ ಯಾವುದೋ ಸಾಲಕ್ಕೆ ಮಾರಿಯಾಗಿದೆ. ಗಂಡನ ಹತ್ತಿರ ಚಿನ್ನ ಬಿಡಿಸಿಕೊಡು ಅಂದರೆ, ಚೆನ್ನಾಗಿ ಹೊಡೆದು ಬಿಟ್ಟಿದ್ದಾನೆ ಎಂದು ಮನಸಾರೆ ಅತ್ತಳು. ಪೂರ್ಣಿಮಾಳಿಗೂ ಮರುಕವೆನ್ನಿಸಿತು, ಆದರೆ ೭೫,೦೦೦ ದೊಡ್ಡ ಮೊತ್ತ, ಏನು ಮಾಡಲೂ ತೋಚಲಿಲ್ಲ. ಅತ್ತುಕೊಂಡೆ ಕೆಲಸ ಮುಗಿಸಿ ರಾಮಲಕ್ಷ್ಮಿ ಹೋದರೂ, ಪೂರ್ಣಿಮಾ ಕಿವಿಯಲ್ಲಿ ಅಳು ಗುಂಯಿಗುಡುತಿತ್ತು.  ಸಂಜೆ ತಂದೆಗೆ ಫೋನ್ ಮಾಡಿ ಹೇಳಿ ಬೇಜಾರು ಮಾಡಿಕೊಂಡಳು. ಅವರೂ, "ಛೇ ಬ್ಯಾಂಕಿನಲ್ಲಿ ಇಟ್ಟಿದ್ದರೆ ಇಷ್ಟು ಬಡ್ಡಿ ಇರುತ್ತಿರಲಿಲ್ಲ, ಪಾಪ ಯಾರು ಹೇಳಿ ಕೊಡುತ್ತಾರೆ ಅವರಿಗೆ ಇದೆಲ್ಲಾ" ಎಂದರೂ, ಕೂಡಲೇ "ಸಾಲ ಮಾಡಿಯಾದರೂ ಆ ಹಣ ಕಟ್ಟಿ ಗಿರವಿ ಅಂಗಡಿಯಿಂದ ಬಿಡಿಸಿ ಅದೇ ಚಿನ್ನವನ್ನು ಬ್ಯಾಂಕಿನಲ್ಲಿಟ್ಟರೆ ಸಾಲ ಕೊಡುತ್ತಾರೆ. ಕೂಡಲೇ ಮೊದಲಿನ ಸಾಲ ತೀರಿಸಿ , ಬ್ಯಾಂಕಿಗೆ ತಿಂಗಳು ತಿಂಗಳು ಕಂತು ಕಟ್ಟಿ ಚಿನ್ನ ಉಳಿಸಿಕೊಳ್ಳಬಹುದು, ಹೇಗೋ ಚೆನ್ನಾಗಿ ದುಡಿಯುತ್ತಾರಲ್ಲ" ಎಂದರು. ಪೂರ್ಣಿಮಾಳಿಗೆ ಥಟ್ಟನೆ ಮಿಂಚೊಂದು ಹೊಳೆದಂತಾಯ್ತು.

ಎರಡು ದಿನವಾದ ಮೇಲೆ ರಾಮಲಕ್ಷ್ಮಿ ಒಳ ಬರುತ್ತಿದ್ದಂತೆಯೇ ಅಡುಗೆಮನೆಯಲ್ಲಿದ್ದ ಪೂರ್ಣಿಮಾ ಅಲ್ಲಿಂದಲೇ "ಹೊರ ಬಾಗಿಲು ಹಾಕ್ಬಾ" ಎಂದಳು. ಬಂದಾಗ ನೋಟುಗಳ ಕಟ್ಟುಗಳನ್ನು ನೀಡಿ ಅವಳ ಕೈದುಂಬಿದಳು. " ಇದರಲ್ಲಿ ೬೦,೦೦೦ಇದೆ, ಇಲ್ಲಿಗೆ ಬರುವಾಗ ನನ್ನ ತಂದೆ ಅಡಿಕೆ ಮಾರಿದ ದುಡ್ಡು ಜಾಸ್ತಿ ಬಂತು, ಒಡವೆ ಮಾಡಿಸಿಕೊ ಅಂತ ಕೊಟ್ಟಿದ್ದು, ಇವರಿಗೆ ಗೊತ್ತಿಲ್ಲ, ನೀವಿಬ್ರೂ ಹೇಗಾದರೂ ಮಾಡಿ ಇನ್ನುಳಿದ ಹಣ ಹಾಕಿ ಚಿನ್ನ ಬಿಡಿಸಿಕೊಳ್ಳಿ, ಬ್ಯಾಂಕಿನಲ್ಲಿ ಅಡವಿಟ್ಟು, ತಿಂಗಳುತಿಂಗಳು ಹಣ ಕಟ್ಟಿ, ಚಿನ್ನ ಎಲ್ಲೂ ಹೋಗಲ್ಲ, ನಾನೂ ಮ್ಯಾನೇಜರ್ ಹತ್ತಿರ ಮಾತನಾಡಿದ್ದೀನಿ" ಅಂದಳು. ಸ್ವಲ್ಪವೇ ಬೆಳಕಿದ್ದ ಅಡುಗೆ ಮನೆಯಲ್ಲಿ, ಒಲೆಯಲ್ಲಿ ಉರಿಯುತ್ತಿದ್ದ ಕೆಂಪು ಬೆಳಕಿನಲ್ಲಿ ರಾಮಲಕ್ಷ್ಮಿ ಭಾವನೆಗಳ ಹೊಡೆತಕ್ಕೆ ಸಿಕ್ಕಿ ಒಂದು ಕ್ಷಣ ನಡುಗಿದ್ದು ಅವಳಿಗರಿವಾಯಿತು. "ದೇವುಡಾ" ಎಂದ ರಾಮಲಕ್ಷ್ಮಿ ಕೂತುಬಿಟ್ಟಳು. ಪೂರ್ಣಿಮಾ ಪಕ್ಕದಲ್ಲೇ ಕೂತು ಅವಳ ತಲೆಸವರಿ "ಮಕ್ಕಳನ್ನು ಓದಿಸಬೇಕು ಅಂತಿದ್ದೆಯಲ್ಲ, ಆವಾಗ ಬೇಕಾಗುತ್ತೆ ಹಣ" ಅಂದಳು. ಕಣ್ಣೀರು ತುಂಬಿಕೊಂಡ ಅವಳು ಬರಿದೇ ತಲೆಯಾಡಿಸಿದಳು.
ಗಂಡ, ಹೆಂಡತಿ ಹೋಗಿ ಚಿನ್ನ ಬಿಡಿಸಿ ಅದನ್ನು ಬ್ಯಾಂಕಿನಲ್ಲಿಟ್ಟು ಇವಳ ಹಣವನ್ನು ವಾಪಸು ತಂದು ಕೊಟ್ಟಿದ್ದೂ, ಇವಳು ವಾಪಸು ಬ್ಯಾಂಕಿಗೆ ಹಾಕಿದ್ದೂ ಆಯಿತು. ವಾಪಸು ಕೊಡುವಾಗ ರಾಮಲಕ್ಷ್ಮಿ ಕೈಯನ್ನು ಕಣ್ಣಿಗೊತ್ತಿಕೊಂಡರೆ ಪೂರ್ಣಿಮಾ ಮೆತ್ತಗೆ ಕೈ ಬಿಡಿಸಿಕೊಂಡು ಎಂದಿನ ತಿಳಿನಗೆ ಬೀರಿದಳು.

ಅದಾಗಿ ಒಂದಾರು ತಿಂಗಳು ಕಳೆದಿರಬಹುದು. ಅದೊಂದು ದಿನ ಪೂರ್ಣಿಮಾಳಿಗೆ ವಿಪರೀತ ಜ್ವರ, ಕಾಡುವ ತಿಂಗಳ ಹೊಟ್ಟೆನೋವು ಬೇರೆ. ಬೆಳಗ್ಗೆ ಏಳಲೂ ಆಗದೆ ಪುಟ್ಟನನ್ನು ಶಾಲೆಗೂ ಕಳಿಸಲಾಗಲಿಲ್ಲ. ಗೊಣಗುತ್ತಲೇ ಇದ್ದ ಚಿದಾನಂದ ಕಷ್ಟಪಟ್ಟು ಹತ್ತಿರದ ಉಡುಪಿ ಹೋಟೆಲಿನಿಂದ ಇಡ್ಲಿ ತಂದು ಕುಕ್ಕಿದ, ಅವಳಿಗೆ ಜ್ವರ ಬಂದರೆ ಅವನಿಗೆ ಅಸಾಧ್ಯ ಸಿಟ್ಟು, ಸೆಡವು. ಅದನ್ನೆಲ್ಲ ಪಾಪದ ಪುಟ್ಟನ ಮೇಲೆ ಬೈದು, ಹೊಡೆದು ತೆಗೆಯುತ್ತಿದ್ದ. ಮಧ್ಯಾಹ್ನ ಹೊರಗಡೆ ಏನಾದರೂ ತಿಂತೀನಿ ಎಂದವನು ಹೊರಟೆ ಹೋದ. ಹಿಂದಿನ ದಿನ ರಾಮಲಕ್ಷ್ಮಿ ಬಂದಿರಲಿಲ್ಲ, ಅವತ್ತು ಸಂಜೆ ಸೈಕಲ್ ಬಿಡುತ್ತಿದ್ದ ಬಬಿತಾ "ನಮ್ಮನೆಗೂ ಬಂದಿಲ್ಲ ಆಂಟಿ, ಊರಿಗೆ ಹೋಗಿರಬೇಕು, ಮನೆಯಲ್ಲೂ ಯಾರಿಲ್ಲ" ಅಂದಿದ್ದಳು. 'ಇವತ್ತಾದರೂ ಬಂದರೆ ಸಾಕಪ್ಪ' ಎಂದು ಕಾಣದ ದೇವರಲ್ಲಿ ಮೊರೆಯಿಟ್ಟಳು. ಊಹೂಂ, ಆ ದಿನ ಮಾತ್ರವಲ್ಲ, ಆ ವಾರವಿಡೀ ಅವಳು ಬರಲೇ ಇಲ್ಲ.
ಜ್ವರದಿಂದ ಚೇತರಿಸಿಕೊಳ್ಳಲು ಪೂರ್ಣಿಮಾಗೆ ಸಾಕಷ್ಟು ಸಮಯವೇ ಹಿಡಿಯಿತು, ಶೀಲಾ, ನಿರ್ಮಲ ಆಂಟಿ ಇವಳೆಷ್ಟೇ ವಿರೋಧಿಸಿದರೂ ಕೇಳದೆ ಅವಾಗವಾಗ ಸಾರು, ಪಲ್ಯ  ಏನಾದರೊಂದು ಮಾಡಿ ತಂದು ಕೊಡುತ್ತಿದ್ದರು. ಪ್ರಮೀಳಾಂಟಿಯೂ ಬಂದು ಹೋಗುತ್ತಿದ್ದರು, ಎಲ್ಲರದೂ ಒಂದೇ ಆಕ್ಷೇಪ. ರಾಮಲಕ್ಷ್ಮಿ ಬಗ್ಗೆಯೇ. ಚಿದಾನಂದಂತೂ ಘಳಿಗೆ ಘಳಿಗೆಗೂ ಹಂಗಿಸಿ ಹಂಗಿಸಿ ಇಡುತ್ತಿದ್ದ, ಆರೋಗ್ಯ ವಿಚಾರಿಸಲೆಂದು ಅವಳ ತಂದೆ ಕರೆ ಮಾಡಿದರೆ ಅವರ ಬಳಿಯೂ ಚಾಡಿ ಚುಚ್ಚಿದ. ಪ್ರಮೀಳಾಂಟಿ ಕೆಲಸ ಬಗೆಹರಿಯದೆ ಯಾರನ್ನೋ ಕೆಲಸಕ್ಕಿಟ್ಟುಕೊಂಡರು, ಇವಳಿಗೂ ಹೇಳಬಂದಾಗ ಪೂರ್ಣಿಮಾ ನಯವಾಗಿ ನಿರಾಕರಿಸಿದಳು. ಕ್ರುದ್ಧರಾದ ಆಕೆ "ಇನ್ನೇನ್ ನೀ ಆಕಿ ಹಾದಿ ಕಾಯಕ್ ಹತ್ತಿಯೇನು? ಆಕಿ ಬಂದ್ರೂ ನಾ ಒಳಗ ಸೇರಿಸ್ಕೊಳ್ಳಾಕಿ ಅಲ್ಲ, ನೀ ಬೇಕಾದ್ದ್ ಮಾಡ್, ಇವುಗಳ ಬುದ್ಧಿ ಅಷ್ಟೇ, ಇವಕ್ಕೆಲ್ಲಾ ಎಲ್ಲಿಡಬೇಕೋ ಅಲ್ಲೇ ಇಡಬೇಕ್ ನೋಡ್ " ಎಂದು ಎಗರಾಡಿದರು. ಎಲ್ಲವನ್ನೂ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದ ಪೂರ್ಣಿಮಾ ತಾಳ್ಮೆಗೆಟ್ಟು "ಸುಮ್ಮನಿರಿ ಆಂಟಿ, ಅವರೂ ನಮ್ಮಂತೆ ಮನುಷ್ಯರು, ನಾಯಿ ಅಥವಾ ಚಪ್ಪಲಿಯಲ್ಲ" ಅಂದುಬಿಟ್ಟಳು. ಅವರು ದುರ್ದಾನ ತೆಗೆದುಕೊಂಡವರಂತೆ ಎದ್ದು ಹೋದರು. 

ಭಾನುವಾರ ಚಿದಾನಂದ ಹೊರಗೆ ಕೂತು ಪೇಪರ್ ಓದುತ್ತಿದ್ದ, ಒಳಗೆ ಚಾ ಮಾಡುತ್ತಿದ್ದ ಪೂರ್ಣಿಮಾ ಯಾರೋ ಕರೆದಂತಾಗಿ ಹೊರಬಂದರೆ, ತಲೆ ತುಂಬಾ ಹೂ ಮುಡಿದು, ಕಣ್ಣಿಗೆ ಹೊಡೆಯುವ ಬಣ್ಣದ ಸೀರೆಯುಟ್ಟು ರಾಮಲಕ್ಷ್ಮಿ ನಗುತ್ತಾ ಗೇಟು ತೆಗೆದು ಒಳಬರುತ್ತಿದ್ದಳು. ಸಂಭ್ರಮ, ಸಡಗರದಿಂದ ಊರಲ್ಲಿ ಜಾತ್ರೆಯಿತ್ತೆಂದೂ, ರಥ ಎಳೆದು ಹರಕೆ ತೀರಿಸಿದ್ದೂ ಹೇಳಿ ಜಾತ್ರೆಯಿಂದ ಪುಟ್ಟನಿಗಾಗಿ ತಂದ, ಮುಟ್ಟಿದರೆ ಕುತ್ತಿಗೆ ಕೊಂಕಿಸುವ ಹುಡುಗಿಯ ಬೊಂಬೆಯನ್ನು ಇವಳ ಕೈಗೆ ನೀಡಿದಳು. ನಿರ್ವಿಕಾರ ಭಾವದಿಂದ ಪೂರ್ಣಿಮಾ ತೆಗೆದುಕೊಂಡರೆ, ಸಶಬ್ದವಾಗಿ ಚೇರನ್ನು ದೂಡಿ, ಕಾಲನ್ನಪ್ಪಳಿಸುತ್ತ ಚಿದಾನಂದ ಒಳಗೆ ಹೋದ. ಕೈಯಲ್ಲಿದ್ದ ಬೊಂಬೆಯನ್ನೇ ದಿಟ್ಟಿಸಿ ನೋಡಿದ ಪೂರ್ಣಿಮಾ, ಎಲ್ಲರಿಗೂ ಪ್ರಸಾದ ಹಂಚಿ ಆಮೇಲೆ ಬರ್ತೀನಿ ಅಂದು ಹೊರಟ ರಾಮಲಕ್ಷ್ಮಿಯನ್ನು ಕರೆದು ನಿಲ್ಲಿಸಿದಳು. " ಇಷ್ಟು ಹತ್ತಿರ ಮನೆಯಿದ್ದು ಒಂದು ಮಾತು ಹೇಳಿ ಹೋಗಬೇಕು ಅನಿಸಲಿಲ್ವ ನಿಂಗೆ?, ಒಂದಲ್ಲ,ಎರಡಲ್ಲ, ಎಂಟು ದಿನ ರಜೆ ಹಾಕಿದ್ದೀಯಲ್ಲಾ, ನಿನ್ನ ಗಂಡನಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಅಂತ ಬರುತ್ತೆ, ಇಲ್ಲಿ ಎಲ್ಲರ ಹತ್ರನೂ ಎಷ್ಟು ಮಾತು ಕೇಳಬೇಕಾಯ್ತು ನಿನ್ನಿಂದ, ಇಷ್ಟು ಪ್ರೀತಿ ಮಾಡಿದ್ದಕ್ಕೆ ಸರಿಯಾಗೇ ಮಾಡಿದೆ ಬಿಡು" ಅಂದಳು. ತೆರೆದ ಗೇಟನ್ನು ಧಬಾರನೆ ಬಡಿದ ರಾಮಲಕ್ಷ್ಮಿ ಅಲ್ಲಿಂದ ಹೋಗಿಯೇಬಿಟ್ಟಳು. ಗೊಂಬೆಯೊಂದಿಗೆ ಎಷ್ಟೋ ಹೊತ್ತು ನಿಂತಿದ್ದ ಪೂರ್ಣಿಮಾ ಕಾಲೆಳೆದುಕೊಂಡು ಒಳನಡೆದಳು. ಅದಾದ ಮೇಲೆ ಅವಳೆಂದೂ ಮನೆ ಕಡೆ ತಲೆ ಹಾಕಲೇ ಇಲ್ಲ. 

ಎಲ್ಲವನ್ನೂ ಯೋಚಿಸುತ್ತ ಕೂತವಳಿಗೆ ಅರಿವು ತಿಳಿದಾಗ ಘಂಟೆ ಆರಾಗಿತ್ತು,ಒಳಬಂದರೆ ಊಟ ಮುಗಿಸಿದ ಪುಟ್ಟ ಅಲ್ಲೇ ನಿದ್ದೆ ಹೋಗಿದ್ದ, ಟಿವಿಯಲ್ಲಿ ಡೋರೆಮಾನ್ ಮಾತನಾಡುತ್ತಲೇ ಇದ್ದ.  ಅವನನ್ನೆಬ್ಬಿಸಿ ಹಾಲು ಕುಡಿಸುವ ಹೊತ್ತಿಗೆ ಬಂದ ಚಿದಾನಂದ, "ಪೂರ್ಣಿಮಾ, ಗದಗಕ್ಕೆ ವರ್ಗವಾಗಿದೆ" ಅಂದ.

 ಮುಂದಿನ ಒಂದು ತಿಂಗಳಲ್ಲಿ ಎಲ್ಲವೂ ಪ್ಯಾಕಾಗಿತ್ತು. ಆಚೀಚೆ ಮನೆಯವರು, ಚಿದಾನಂದನ ಆಫೀಸಿನವರು ಎಲ್ಲರೂ ಊಟಕ್ಕೆ ಕರೆದಿದ್ದರು.ಪ್ರಮೀಳಾಂಟಿಯೂ ಚೂಡಾ,ಚಾ ಸತ್ಕಾರ ಮಾಡಿದ್ದರು.  ಗೌರಿಗೂ ಪೂರ್ಣಿಮಾ ಹೋಗ್ತೀನಿ ಎಂದಾಗಿತ್ತು. ಕೊನೆಗೆ ಹೊರಡೊ ದಿನ ಬಂದಾಗ  ವ್ಯಾನಿಗೆ ಸಾಮಾನು ಹಾಕಲು ತಾನಾಗೆ ಬಂದ ರಾಮಲಕ್ಷಿ ಗಂಡ ನಾಗರಾಜ, ಎಲ್ಲಾ ಮುಗಿದ ಮೇಲೆ ಚಿದಾನಂದನಿಲ್ಲದ ಸಮಯ ನೋಡಿ "ನಿಮ್ಮಿಂದ ಭಾಳ ಉಪಕಾರ ಆತ್ರೀ ಅಕ್ಕೊರೆ" ಎಂದ. "ನನ್ನ ನೋಡೋಕೆ, ಮಾತನಾಡೋಕೆ ರಾಮಲಕ್ಷ್ಮಿ ಯಾಕೆ ಬರಲಿಲ್ಲ? "ಎಂದು ಕೇಳಿದಳು. ಸ್ವಲ್ಪ ಹೊತ್ತು ಸುಮ್ಮನಿದ್ದ ಅವನು, "ಆಕಿಗೆ ಅಗದೀ ಸಿಟ್ಟು, ನೀವ್ ಬೈದ್ರಂತಲ್ಲ" ಅಂದ. ಭಾವನೆಗಳು ಕಾಣದಂತೆ ಮುಖ ತಿರುಗಿಸಿದ ಪೂರ್ಣಿಮಾ ವ್ಯಾನಿನ ಡ್ರೈವರ್ ಹತ್ತಿರ ಕೂತ ಪುಟ್ಟನನ್ನು ಕೆಳಗಿಳಿಸಿಕೊಂಡಳು. ಕಾಲನಿಯ ಎಲ್ಲರೂ ಬೀಳ್ಕೊಡಲು ಬಂದಿದ್ದರು, ಬೀದಿಯ ಮರದ ಕೆಳಗೆ ಮರದ ಪೆಟ್ಟಿಗೆಯಿಟ್ಟು ಇಸ್ತ್ರಿ ಮಾಡುವ ಕಲ್ಲಪ್ಪನೂ ಬಂದು"ಹೋಗ್ ಬರ್ರೀ ಅಕ್ಕಾರ" ಅಂದ. ಸಾಮಾನೆಲ್ಲ ಹೊತ್ತ ವ್ಯಾನು ಮುಂದೆ ನಿಂತಿದ್ದರೆ, ಹಿಂದೆಯೇ ನಿಂತಿದ್ದ ಕಾರಿನಲ್ಲಿ ಪುಟ್ಟ, ಅವನಪ್ಪ ಕೂತಾಗಿತ್ತು. ಪೂರ್ಣಿಮಾ ಕಣ್ಣು ಮತ್ತೆ ಮತ್ತೆ ರಾಮಲಕ್ಷ್ಮಿಯ ಮನೆಯ ಕಡೆಯೇ ಹರಿಯುತ್ತಿತ್ತು. ಗೇಟಿನ ಬಳಿ ನಿಂತವಳು ನಾಗರಾಜನ ಬಳಿ ಹೋಗಿ, ವ್ಯಾನಿಟಿ ಬ್ಯಾಗಿನಲ್ಲಿದ್ದ ಪ್ಲಾಸ್ಟಿಕ್ ಕವರನ್ನು ಕೊಟ್ಟು, "ರಾಮಲಕ್ಷ್ಮಿಗೆ ಉದ್ದಲಂಗ,ಜಾಕೀಟು ಹಾಕಬೇಕು ಅಂತ ತುಂಬಾ ಆಸೆ, ಇದನ್ನು ಅವಳಿಗೆ ಕೊಡಿ ನಾಗರಾಜ್ ಅವ್ರೆ" ಎಂದು ನಡೆದುಬಂದು ಇವಳೆಡೆಯೆ ದುರುಗುಟ್ಟಿ ನೋಡುತ್ತಿದ್ದ ಚಿದಾನಂದನೆಡೆಗೆ ತಿಳಿನಗೆ ಬೀರಿ ಕಾರು ಹತ್ತಿದಳು. ಆ ಕಡೆ ಬೀದಿಯಲ್ಲಿ ರಾಯರ ಮಠದ ಎದುರು ಕೂತ ರಾಮಲಕ್ಷ್ಮಿ ಕಣ್ಣಲ್ಲಿ ನೀರು ಹರಿಯುತ್ತಿತ್ತು.


ಬ್ಯಾಗಿನಲ್ಲಿ ರಾಶಿ ಪೇಪರುಗಳ ಮಧ್ಯೆ ಭದ್ರವಾಗಿ ಕುಳಿತಿದ್ದ ಹುಡುಗಿ ಬೊಂಬೆ ಮಾತ್ರ ತಲೆಯಲ್ಲಾಡಿಸಿ ಮೆಲ್ಲಗೆ ನಕ್ಕಿತು.

No comments:

Post a Comment