Wednesday, October 22, 2014

ಪುಟ್ಟನ ದೀಪಾವಳಿ

ಬೆಳ್ಳಂಬೆಳಗ್ಗೆ ಎದ್ದು ಎಣ್ಣೆ ಸ್ನಾನ ಮಾಡಿ
ಜಾಣನ ಹಾಗೆ ಕುಳಿತ ಪುಟ್ಟ ಕಾಯುತ್ತಿದ್ದಾನೆ
ಕತ್ತಲಾಗಲು.
ಅಜ್ಜಿ ಕಳಿಸಿದ ಚಕ್ಕುಲಿ, ಚಿವಡ ತಿಂದಾಯ್ತು
ಮೊಸರಿನೊಂದಿಗೆ.
ಹಾಂ, ಮತ್ತಿಷ್ಟು ಕರ್ಜಿಕಾಯಿ, ಬೇಸನ್ ಲಡ್ಡು ಕೂಡಾ ಸ್ವಾಹ
ಅಪ್ಪನೊಂದಿಗೆ ಸೇರಿ.
ಅಯ್ಯೋ! ಇನ್ನೆಷ್ಟು ನಿಮಿಷ ಕತ್ತಲಾಗಲು
ಅಮ್ಮನನ್ನು ಪೀಡಿಸಿ ಪೀಡಿಸಿ ಇಟ್ಟ.
ಪುಟ್ಟನಿಷ್ಟದ ಶ್ಯಾವಿಗೆ ಪಾಯಸ, ಕೋಸಂಬರಿಯ
ತಯಾರಿಯಲ್ಲಿದ್ದ ಅಮ್ಮನಿಗೆ ನಗುವೋ ನಗು.
ಅಂತೂ ಇಂತೂ ಅವನಿಷ್ಟದ ಊಟವನ್ನೇನೋ ಮುಗಿಸಿದ
ಅದರೂ ಕತ್ತಲಾಗಲೇ ಇಲ್ಲ. ಪಾಪ!
ಸಿಟ್ಟಲ್ಲಿ ಸೂರ್ಯನನ್ನೇ ದುರು ದುರು ನೋಡಿದ
ಸಧ್ಯ! ಸೂರ್ಯ ಸುಟ್ಟು ಬೂದಿಯಾಗಲಿಲ್ಲ.
ಮತ್ತೆ ಅಮ್ಮನ ಬಳಿ ಓಡಿದ, ಮತ್ತಿಷ್ಟು ಕಾಡಿದ
ಅಜ್ಜ ಕೊಟ್ಟ ತನ್ನ ಪುಟ್ಟ ಗಡಿಯಾರವನ್ನು ತಿರುಗಿಸಿಟ್ಟ
ಅದು ಮುಂದೆಯೋ ಹಿಂದೆಯೋ ಅವನಿಗೂ ಗೊತ್ತಿಲ್ಲ.
ಅಮ್ಮ ಕಾಫಿ ಕುಡಿಯೋ ಹೊತ್ತು
ಅದು ಸಂಜೆಯೆಂದು ಪುಟ್ಟನಿಗೂ ಗೊತ್ತು
ಕತ್ತಲಾಗಲು ಇನ್ನು ಇದೆ ಸ್ವಲ್ಪವೇ ಹೊತ್ತು!
ಶುರುವಾಯಿತು ಹಣತೆಗೆ ಎಣ್ಣೆ ಹಾಕೋ ಸಡಗರ
ತನ್ನ ಪುಟ್ಟ ಪುಟ್ಟ ಕೈಗಳಲ್ಲಿ ಜೋಡಿಸಿಟ್ಟ ದೀಪಗಳ.
ಚಾಮಿ, ಬೇಗ ಕತ್ತಲಾಗಲಿಯಪ್ಪ ಇವತ್ತು
ನಿಂಗೆ ಅಮ್ಮ ಮಾಡಿಟ್ಟ ಪಾಯಸ ಕೊಡ್ತೀನಿ
ಅಂದವನು ಕಣ್ಣು ಬಿಟ್ಟರೆ ದೀಪಗಳು ಹೊಳೆಯುತ್ತಿವೆ.
ಪುಟ್ಟನಿಗೆ ಹೆದರಿ ಓಡಿಬಿಟ್ಟಿದ್ದಾನೆ ಸೂರ್ಯ
ಅವರಮ್ಮನ ಬಳಿ ದೂರು ಕೊಡಲು.
ಕತ್ತಲಲ್ಲಿ ಕಣ್ಣು ಮಿಟುಕಿಸಿತು ಹಣತೆಯೊಂದು
ಚೆಂದಕ್ಕೆ ತಯಾರಾದ ಪುಟ್ಟ ಪೋರನ ಕಂಡು.
ಕುಣಿದು ಕುಪ್ಪಳಿಸಿದ ಕಂದನ ಕಣ್ಣಲ್ಲಿ ಕಂಡಳು ಅಮ್ಮ
ಪಟಾಕಿ, ಮತಾಪು, ಹೂವಿನ ಕುಂಡದ ಅಬ್ಬರ.
ದೀಪಾವಳಿ ಇದಕ್ಕಿಂತ ಸುಂದರವಾಗಲು ಸಾಧ್ಯವೇ?

3 comments:

  1. ಅಸಲು ಪುಟ್ಟನಿಗಿಂತೂ ಸುಂದರವಾಗಿ ಯಾವುದೂ ಇಲ್ಲವೇ ಇಲ್ಲ ಧರೆಯಲ್ಲಿ.
    ಹಣತೆ ಮತ್ತು ಪುಟ್ಟ, ಕತ್ತಲೆಯನ್ನು ಆತ ಕರೆಯುವ ಪರಿ.. ultimate...

    shared at:
    https://www.facebook.com/groups/191375717613653?view=permalink&id=435285689889320

    ReplyDelete
  2. Aha! eshtu chennaagi bardiddeera madam? Nimma putta namma kannedure deepaavali maadidanthe! Nijvaglu sooper!

    ReplyDelete