Friday, January 11, 2019

ಕಪ್ಪು ಬಿಳುಪಿನ ನಡುವೆ

Life isn't black and white. It's a million gray areas, don't you find? 
                                                                                                                                                Ridley Scott



ದೀಪ್ತಿ ಬೆಡ್ರೂಮಿನ ಬಾಗಿಲು ತೆರೆದು ಒಳಗಿದ್ದ ಸೂಟುಕೇಸುಗಳನ್ನು ಎಳತರುತ್ತಿದ್ದಂತೆ ಅಣ್ಣ ಬಂದರು. "ಸರಿ ದೀಪು, ಎಲ್ಲಾ ರೆಡಿನಾ?" ಎಂದು ಸೂಟುಕೇಸುಗಳನ್ನು ದೂಡಿಕೊಂಡು ಮಥನ್ ಕಡೆ ತಿರುಗಿ "ಬರ್ತೀನಿ ಮಥನ್ ಸ್ವಲ್ಪ ಹೊತ್ತಲ್ಲೇ" ಎಂದವರೇ ಹೊರಹೋದರು. ಮಥನ್, ತೊಡೆಯಲ್ಲಿದ್ದ ನೀಹಾಳನ್ನೆತ್ತಿ ಚೇರಿನಲ್ಲಿ ಕೂರಿಸಿ, ಬಾಯಿಯಲ್ಲಿ ಸುರಿದ ಜೊಲ್ಲನ್ನು ಮೆತ್ತಗೆ ಕರ್ಚೀಫಿನಿಂದ ಒರೆಸಿ, ಮತ್ತವಳ ಕೂದಲನ್ನು ಸರಿಮಾಡಿ, ದೀಪ್ತಿ ಕಡೆ ತಿರುಗಿ ಅವಳನ್ನೊಮ್ಮೆ ಮೃದುವಾಗಿ ತಬ್ಬಿ, ಹಣೆ ಚುಂಬಿಸಿ, "ಗಾಡ್ ಬ್ಲೆಸ್ಸ್ ಯು ಪುಟ್ಟಿ" ಎಂದವನ ದನಿ ಹಸಿಯಾಗಿತ್ತು. ದೀಪ್ತಿ ಅವನ ತೋಳನ್ನು ಬಲವಾಗಿ ತಬ್ಬಿದವಳು ಕಣ್ಣುಮುಚ್ಚಿ ಅರೆ ಘಳಿಗೆ ಸುಮ್ಮನಿದ್ದು "ಚಿನ್ನು, ಒಟ್ಟಿಗೇ ಹೋಗೋಣ"ಎಂದಳು. ಮಥನ್ ಅವಳನ್ನು ನಿಧಾನಕ್ಕೆ ಸರಿಸಿ "ನಿಹಾಗೆ ಜ್ಯೂಸು ಕುಡಿಸೋ ವೇಳೆಯಾಯ್ತು" ಎಂದ. ಮುಷ್ಠಿ ಬಿಗಿದು, ಹಲ್ಲು ಕಚ್ಚಿ, ಕಣ್ಣುಮುಚ್ಚಿ ಭಾವನೆಗಳನ್ನು ನಿಯಂತ್ರಿಸಿಕೊಂಡ ದೀಪ್ತಿ ನೀಹಾಳ ಕಡೆಗೊಮ್ಮೆ ನೋಡಿ, ಅವಳನ್ನಪ್ಪಿ ಮುತ್ತಿಕ್ಕಿ, ಕಣ್ಣೊರೆಸುತ್ತಾ ಹೊರನಡೆದಳು, ಬಾಗಿಲು ಮುಚ್ಚುತ್ತಿದ್ದಂತೆ ಮಥನ್ ಮಿಕ್ಸಿಜಾರಿಗೆ ದಾಳಿಂಬೆಕಾಳುಗಳನ್ನು ಸುರಿಯುತ್ತಿದ್ದ.

ದೀಪ್ತಿ ಕೆಳಬಂದಾಗ ಕಾರಿನ ಡಿಕ್ಕಿಯಲ್ಲಿ ಲಗೇಜ್ ತುಂಬುತ್ತಿದ್ದ ಅಣ್ಣ,ತಲೆಯೆತ್ತಲಿಲ್ಲ. ಅಮ್ಮ ಹಿಂದಿನ ಸೀಟಿನಲ್ಲಿ ಕೂತಿದ್ದವರು ಅವಳ ತಲೆ ಸವರಿದರಷ್ಟೇ. ಕಾರಿನಲ್ಲಿ ಕೂತು ಹೊರಟರೂ ಮೂವರ ನಡುವೆ ಮೌನವಿತ್ತು. ವಿಮಾನ ನಿಲ್ದಾಣ ಮುಟ್ಟಿ, ಅವರನ್ನು ಒಂದೆಡೆ ಕುಳ್ಳಿರಿಸಿ "ಈಗ ಬಂದೆ ದೀಪು" ಎಂದು ಹೋದವರು ವಾಪಸು ಬಂದಾಗ ಅವರ ಕೈಲಿದಿದ್ದು ಅವಳಿಗಿಷ್ಟದ ರೋಶರ್ಸ್ ಚಾಕಲೇಟಿನ ದೊಡ್ಡ ಡಬ್ಬ. ಅವಳ ಕಣ್ಣಿನಲ್ಲಿ ನೀರು ತುಂಬಲು ಆರಂಭಿಸಿದೊಡನೆ ಅವಳ ವಿಮಾನದ ಬೋರ್ಡಿಂಗಿಗೆ ಅನೌನ್ಸ್ಮೆಂಟ್ ಕೇಳಿಬಂತು. ಡಬ್ಬಿಯನ್ನು ಅವಳ ಕೈಗಿರಿಸಿದ ಅಣ್ಣ ಅವಳನ್ನಪ್ಪಿ, ತಲೆ ಸವರಿ "ನೀನು ತೆಗೆದುಕೊಂಡ ನಿರ್ಣಯ ನಿನಗೆ ಸರಿ ಅನಿಸಿದೆಯಲ್ಲ, ಸಾಕು. ಆರೋಗ್ಯದ ಕಡೆ ಗಮನ ಕೊಡು" ಎಂದರು. ಇಬ್ಬರ ಕಾಲು ಹಿಡಿದು ನಮಸ್ಕರಿಸಿದವಳು, ಕಣ್ಣೀರು ಒರೆಸಿಕೊಂಡು ಲಗೇಜ್ ಟ್ರಾಲಿಯನ್ನು ನೂಕುತ್ತಾ ಕಾಲೆಳೆಯುತ್ತಾ ಮುಂದೆ ಸಾಗಿದಳು. 

ಟೇಕಾಫ್ ಆಗುತ್ತಿದಂತೆ ಅವಳ ಮುಚ್ಚಿದ ಕಣ್ಣುಗಳ ಮುಂದೆ ನೆನಪಿನ ತೇರು ಸಾಗತೊಡಗಿತು. ಅನಿಮೇಶನ್ ಕಂಪೆನಿಯೊಂದರಲ್ಲಿ ಕ್ರಿಯೇಟಿವ್ ಹೆಡ್ ಆಗಿದ್ದ ಮಥನ್ ಸಿಕ್ಕಿದ್ದು ಗೆಳತಿಯೋರ್ವಳ ಮಗುವಿನ ಬರ್ತ್ ಡೇ ಪಾರ್ಟಿಯೊಂದರಲ್ಲಿ. ತನ್ನ ಕೋಡಿಂಗ್, ಅವನ ಬಣ್ಣದ ಲೋಕ ಮ್ಯಾಚ್ ಆಗುತ್ತಾ ಎಂದು ಅಳೆದೂ ಸುರಿಯುವ ಮುನ್ನವೇ ಇಬ್ಬರೂ ಪ್ರೀತಿಯಲ್ಲಿ ಮುಳುಗಿದ್ದರು. ವಿದ್ಯೆ, ರೂಪ, ಕೆಲಸ ಎಲ್ಲದರೂ ಮ್ಯಾಚ್ ಆಗುತ್ತಿದ್ದ ಇಬ್ಬರನ್ನು ನೋಡಿ ಈರ್ವರ ಹೆತ್ತವರೂ ಖುಷಿಪಟ್ಟು ಮದುವೆಗೆ ಒಪ್ಪಿಗೆ ನೀಡಿದ್ದರು. ಬದುಕು ಎಷ್ಟು ಸುಂದರವಪ್ಪ ಎಂದುಕೊಳ್ಳುವಷ್ಟರಲ್ಲಿ ಮಥನ್ ತಾಯಿ ಕ್ಯಾನರ್‌ಗೆ ತುತ್ತಾಗಿ ನಿಧಾನಕ್ಕೆ ಜೀರ್ಣಾವಸ್ಥೆಗೆ ಜಾರತೊಡಗಿದ್ದರು. ಹದಿನೆಂಟು ತಿಂಗಳುಗಳ ಅವಧಿಯಲ್ಲಿಯೇ ಕಣ್ಣುಮುಚ್ಚಿದ್ದರು. ಹುಟ್ಟಿದಾಗಿಂದ ತಂದೆಯನ್ನೇ ನೋಡದ, ಪ್ರಪಂಚವಿಡೀ ತಾಯಿಯೆಂದೇ ನಂಬಿದ್ದ ಮಥನ್ ತೀರಾ ಅಸ್ವಸ್ಥಗೊಂಡಿದ್ದ. ಹದಿನೆಂಟು ತಿಂಗಳೂ ಮನೆಯಿಂದಲೇ ಕೆಲಸ ಮಾಡುತ್ತಾ ಅಮ್ಮನನ್ನು ಮಗುವಿನಂತೆ ನೋಡಿಕೊಂಡಿದ್ದ, ದೀಪ್ತಿ ಅಣ್ಣ,ಅಮ್ಮ ಇಬ್ಬರೂ ಅವನಿಗೆ ಸಾಥ್ ನೀಡಿದ್ದರು. ದೀಪ್ತಿ ಅಮ್ಮನಂತೂ ದಿನಾಬೆಳಿಗ್ಗೆ ಅಡುಗೆ ಮಾಡಿಕೊಂಡು ಅಣ್ಣನೊಂದಿಗೆ ಬರುತ್ತಿದ್ದರು. ಶಕ್ಕುಅಕ್ಕ ಎಂದು ಅವರನ್ನು ಸಂಭೋದಿಸುತ್ತಾ ಅವರ ಕೊನೆಯ ದಿನಗಳನ್ನು ಸಹನೀಯಗೊಳಿಸಲು ಯತ್ನಿಸುತ್ತಿದ್ದರು. ಮೂವರೂ ಕೂತು ಯಾವುದಾದರೂ ಹಳೆಯ ಸಿನೆಮಾಗಳನ್ನು ನೋಡುತ್ತಲೋ, ಪುಸ್ತಕ ಓದುತ್ತಲೋ ಇದ್ದರೆ ಅವರೆಲ್ಲಾ ಕೆಲಸಗಳನ್ನು ಮಥನ್ ಮಾಡುತ್ತಿದ್ದ. ದೀಪ್ತಿ ಬಾಗಿಲ ಬಳಿಯೇ ನಿಂತು ಮಾತನಾಡುತ್ತಿದ್ದಳೇ ಹೊರತು ಅಂಟಿಯೂ ಅಂಟದಂತಿದ್ದಳು, ಒಮ್ಮೆ ಅವಳಮ್ಮ ಕೇಳಿದಾಗ ಅವಳ ಉತ್ತರ ಅಳುವಾಗಿತ್ತು. 

ಯಾತನೆಯ ಪರ್ವ ಮುಗಿದು ವರುಷವಾಗಿರಬೇಕು, ಮಥನ್ ಮತ್ತೆ ಆಫೀಸಿಗೆ ಹೋಗಲಾರಂಭಿಸಿದ್ದ. ಅಷ್ಟರಲ್ಲಿ ದೀಪ್ತಿ ಗರ್ಭಿಣಿಯಾಗಿದ್ದಳು. ಮಥನ್, ಅಣ್ಣಅಮ್ಮ ಎಲ್ಲರೂ ಖುಷಿಪಟ್ಟರೆ ಅವಳಿಗ್ಯಾಕೊ ಒಂದಿನಿತೂ ಕುಶಿಯಾಗಿರಲಿಲ್ಲ. ತನ್ನದೇ ಸ್ವಂತ ಟೀಮ್ ಕಟ್ಟಿಕೊಂಡು ಮಲ್ಟಿಮಿಲಿಯನೇರ್ ಪ್ರಾಜೆಕ್ಟ್‌ಲ್ಲಿ ಬ್ಯುಸಿಯಾಗಿದ್ದವಳಿಗೆ ಒಲ್ಲದ ಹೊರೆ ಅನಿಸತೊಡಗಿತ್ತು. ಸಾಲದಕ್ಕೆ ಮಾರ್ನಿಂಗ್ ಸಿಕ್‌ನೆಸ್,ಅಸಿಡಿಟಿ ತಾಪತ್ರಯಗಳು. ’ನಂಗೆ ಬೇಡ ಚಿನ್ನೂ’ ಎಂದು ಮಥನ್ ಎದೆಯಲ್ಲಿ ಮುಖ ಹುದುಗಿಸಿ ಅತ್ತರೆ "ಹಂಗೆಲ್ಲಾ ಅನ್ನಬಾರದು ಪುಟ್ಟಿ, ಅಮ್ಮನೇ ಮತ್ತೆ ಬರ್ತಿದ್ದಾರೆ ನೋಡು" ಅನ್ನುತ್ತಿದ್ದ. ಮತ್ತಷ್ಟು ಕಿರಿಕಿರಿಯಾಗಿ ಅಳುತ್ತಿದ್ದಳು. ನೋವನ್ನು ನೋಡುವುದೂ, ಅನುಭವಿಸುವುದೂ ಅವಳಿಗಾಗದ ಮಾತು. ಅವಳ ಅಳು ನೋಡಲಾಗದೆ "ಇವಳು ಕಷ್ಟ ಪಡೋದು ನೋಡೋಕಾಗಲ್ಲ ಅಮ್ಮ" ಎಂದರೆ ಅವಳಮ್ಮ "ಸಲ್ಪದಿನ ಅಷ್ಟೇ, ಸರಿಯಾಗುತ್ತೆ. ಅವಳೇನೂ ಚಿಕ್ಕವಳಲ್ಲ, ಲೇಟಾದ್ರೆ ಕಷ್ಟ, ನಾನು ಗಟ್ಟಿ ಇದ್ದಾಗಲೇ ಮಗುವಾಗಲಿ, ನಾನು, ದೀಪ್ತಿಯಣ್ಣ ನೋಡಿಕೊಳ್ಳುತ್ತೇವೆ, ಶಕ್ಕುಅಕ್ಕ ಹುಟ್ಟಿ ಬರ್ತಾರೆ" ಎನ್ನುತ್ತಿದ್ದರು. "ಅಮ್ಮನೂ ಮಥನ್ ಕಡೆ ಸೇರಿಕೊಳ್ತಾರೆ, ನಂಗ್ಯಾರೂ ಇಲ್ಲ ನೋಡಣ್ಣ" ಎಂದು ದೂರು ಅಣ್ಣನ ಬಳಿ ಹೋಗುತ್ತಿತ್ತು. ಯಾವಾಗಲೂ ನಕ್ಕು ತಲೆ ಸವರುತ್ತಿದ್ದ ಅಣ್ಣ ಒಂದಿನ "ನಿಜ ಹೇಳು ದೀಪು, ನಿಜಕ್ಕೂ ನಿಂಗೆ ಬೇಡ್ವಾ ಮಗು? ಇವಾಗಿನ್ನೂ ೨.೫ತಿಂಗಳು, ಮಥನ್ ಹತ್ರ ಮಾತಾಡ್ತೀನಿ" ಎಂದರು. ಸುಮ್ಮನಾದವಳು ಮುಂದೆ ಮಾತನಾಡಲಿಲ್ಲ. ಆದರೆ ಅಮ್ಮನ ಬಳಿ "ನಿಂಗೆ, ಮಥನ್‌ಗೆ ಆಲ್ವಾ ಬೇಕಿದಿದ್ದು, ನೀವಿಬ್ಬರೇ ಎಲ್ಲ ಮಾಡಬೇಕು" ಅಂದಿದ್ದಳು. ಅಂತೆಯೇ ನಡೆದುಕೊಂಡಿದ್ದಳು ಕೂಡ. ದಿನಾ ಬೆಳಗ್ಗೆ ಅಮ್ಮನ ಮನೆಯಲ್ಲಿ ನೀಹಾಳನ್ನು ಬಿಟ್ಟು ಹೋಗುತ್ತಿದ್ದಳು. ಸುಮಾರು ಒಂಭತ್ತು ತಿಂಗಳ ನಂತರ ಕೆಲಸಕ್ಕೆ ಮತ್ತೆ ಜಾಯಿನ್ ಆದವಳಿಗೆ ಸಿಕ್ಕಿದ್ದು ಮೊದಲಿಗಿಂತ ಕೆಳಗಿನ ಪೊಸಿಷನ್ ಹಾಗೂ ಹೈಕ್ ಹಾಗೂ ಬೋನಸ್ ಕೂಡಾ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆ ಒಂಭತ್ತು ತಿಂಗಳು ಅವಳ ಕರಿಯರ್ ಗ್ರಾಫಿನಲ್ಲಿ ತುಂಬದ ಬಿಟ್ಟ ಸ್ಥಳದಂತೆ ಅವಳನ್ನು ಅಣಕಿಸುತಿತ್ತು. ಅವಡು ಕಚ್ಚಿ ಹಗಲೂ ರಾತ್ರಿ ಜೀವತೇದು ಮತ್ತೆ ಕಂಪೆನಿಯ ಹಾಟ್ ಫೇವರಿಟ್ ಆಗಲು ಸುಮಾರು ಒಂದೂವರೆ ವರ್ಷಗಳು ಬೇಕಾಗಿದ್ದವು. ಅದೊಂದು ದಿನ, ರಾತ್ರಿ ಹನ್ನೆರೆಡೂವರೆಗೆ ಬಂದವಳಿಗೆ ಆಶ್ಚರ್ಯ ಕಾದಿತ್ತು, ಬಾಗಿಲು ತೆಗೆದ ಅಣ್ಣನ ಕಾಳಹೀನ ಮುಖ ನೋಡಿ ಗಾಬರಿಯಾಯ್ತು. ಅಣ್ಣ ಏನೂ ಮಾತಾಡದೆ, ಸುಮ್ಮನೆ ಒಳ ನಡೆದರೆ, ಅಮ್ಮ ಸೋಫಾ ಮೇಲೆ ಇವಳು ಬಂದಿದ್ದರ ಪರಿವೆಯೇ ಇಲ್ಲದಂತೆ ಕೂತಿದ್ದರು. ಡೈನಿಂಗ್ ಟೇಬಲ್ ಎದುರು ತಲೆ ಹಿಡಿದು ಕೂತಿದ್ದ ಮಥನ್. "ಏನಾಯ್ತು ಚಿನ್ನೂ?" ಎಂದದ್ದೇ ಅವಳನ್ನಪ್ಪಿ ಅಳಲಾರಂಭಿಸಿದ, ಇನ್ನಷ್ಟು ಗಾಬರಿಯಾಯ್ತು ಅವಳಿಗೆ "ಜಾಬ್ ಏನಾದ್ರೂ ಹೋಯ್ತಾ? ಪರ್ವಾಗಿಲ್ಲ, ಬೇರೆ ಹುಡುಕಿದ್ರಾಯ್ತು " ಅಂದೆಲ್ಲಾ ಬಡಬಡಿಸುತ್ತಿದ್ದವಳನ್ನು ತಡೆದ ಮಥನ್ "ನಮ್ಮ ನೀಹಾ ಸ್ಪೆಷಲ್ ಮಗು ಪುಟ್ಟಿ" ಎಂದು ಬೊಬ್ಬಿರಿದು ಕೂದಲು ಕಿತ್ತುಕೊಂಡು ಅಳಲಾರಂಭಿಸಿದ. ದೀಪ್ತಿ ಕಲ್ಲಂತೆ ನಿಂತಿದ್ದಳು.

"ಮ್ಯಾಮ್, ನಿಮ್ಮ ಊಟದ ಆರ್ಡರ್ ಹೇಳ್ತೀರಾ?" ಎಂದು ಎಚ್ಚರಿಸಿದಳು ರಕ್ತ ಕೆಂಪು ಬಣ್ಣ ಬಳಿದ ಚೆಲುವೆ. ಮೆನು ಜಾಲಾಡಿ ಏನೋ ಹೇಳಿದ ದೀಪ್ತಿ ಕಿಟಕಿಯ ಕಡೆ ಮುಖತಿರುಗಿಸಿ ಕಾಣದ ಮೋಡಗಳ ಹುಡುಕಲಾರಂಭಿಸಿದಳು. ಶಕ್ಕು ಆಂಟಿ ನೋವನ್ನೇ ನೋಡಲಾಗದವಳಿಗೆ ಇದನ್ನ್ಯಾವುದನ್ನೂ ನೋಡುವ ಮನಸ್ಸಿರಲಿಲ್ಲ, ಒಂದಷ್ಟು ತಿಂಗಳುಗಳು ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳ ಸುತ್ತು ಹೊಡೆದಿದ್ದಾಯ್ತು, ಇದ್ದ ಬಿದ್ದವರ ಸಲಹೆ ಸೂಚನೆಗಳನ್ನು ಒತ್ತಾಯಪೂರ್ವಕವಾಗಿ ಕೇಳಿದ್ದಾಯ್ತು. ಉಹೂ,ಬದುಕು ಬದಲಾಗಲಿಲ್ಲ. ಮಥನ್, ಅಮ್ಮ, ಅಣ್ಣ ಎಲ್ಲರೂ ಸತ್ಯವನ್ನು ಅರಗಿಸಿಕೊಂಡು ನೀಹಾ ಬದುಕಿಗೆ ಬಣ್ಣ ತುಂಬಲು ಪ್ರಯತ್ನ ನಡೆಸುತ್ತಿದ್ದರೆ ಇವಳು ಮಾತ್ರ ಪ್ರತೀ ನಿಮಿಷವೂ ಸತ್ಯದಿಂದ ದೂರ ಓಡುತ್ತಿದ್ದಳು. 
ಒಂದೇ ಒಂದು ಸಲ "ಪುಟ್ಟಿ, ಕೆಲಸ ಬಿಡ್ತೀಯ, ನೀಹಾಗೆ ಹೆಚ್ಚು ಗಮನ ಬೇಕಿದೆ, ಅಣ್ಣಅಮ್ಮನಿಗೆ ಸಾಕಾಗ್ತಿದೆ, ಈ ಪ್ರಾಯದಲ್ಲಿ ಅವ್ರಿಷ್ಟು ಮಾಡೋದು ನಂಗೆ ನೋಡೋಕಾಗ್ತಿಲ್ಲ, ಅವರು ನೋಡಿಕೊಳ್ಳಲಿ ಅಂತ ನಾವು ನೀಹನನ್ನು ಬರ ಮಾಡಿಕೊಂಡಲ್ಲ ಅಲ್ವ?" ಎಂದಿದ್ದ. ಅವತ್ತಷ್ಟೇ ಕಷ್ಟುಪಟ್ಟು ತನ್ನದಾಗಿಸಿಕೊಂಡ ಪೊಸಿಷನ್ ಯಾರಿಗೋ ಬಿಟ್ಟುಕೊಟ್ಟು, ಅಲ್ಲಿ ಯಾರಿಗೂ ನೀಹಾ ಬಗ್ಗೆ ಏನೂ ಹೇಳದೆ ಮುಚ್ಚಿಟ್ಟ ದೀಪ್ತಿ, "ನಂಗ್ಯಾವಾಗಲೂ ಬೇಡ ಇತ್ತು, ನಿನ್ನಿಂದಾಗೆ ಆಗಿದ್ದು ಇವೆಲ್ಲಾ" ಅಂದುಬಿಟ್ಟಳು. ಮಥನ್ ಮಾತನಾಡಲಿಲ್ಲ, ಅದಾದ ನಂತರ ಆಫೀಸಿನಲ್ಲಿ ಕಾಡಿ ಬೇಡಿ ಬರುತ್ತಿದ್ದಕ್ಕಿಂತ ಕಡಿಮೆ ಸಂಬಳಕ್ಕೆ ವರ್ಕ್‌ಫ್ರಮ್‌ಹೋಂ ಆಯ್ಕೆಯನ್ನು ತನ್ನದಾಗಿಸಿಕೊಂಡಿದ್ದ. ತಿಂಗಳಿರೆಡು ಸಲ ಹೋಗಿ ಬರಬೇಕಿತ್ತು, ಅಣ್ಣಅಮ್ಮ ಮನೆಯಲ್ಲಿ ನೀಹಾಳನ್ನು ಬಿಡುವಾಗ ಓರ್ವ ನುರಿತ ನರ್ಸ್ ಕೂಡಾ ಆ ಎರಡು ದಿನಗಳಲ್ಲಿ ಅಲ್ಲಿರುವಂತೆ ನೋಡಿಕೊಂಡಿದ್ದ. 

ಅವಳಾಯ್ಕೆ ಮಾಡಿದ್ದ ಊಟ ಅವಳೆದುರು ಬಂದಿತ್ತು, ಸರಿಯಾಗಿ ಬೇಯದ ಆ ವಸ್ತುವನ್ನು, ಪ್ರತೀ ಗುಕ್ಕಿನೊಂದಿಗೂ ನೀರು ಕುಡಿಯುತ್ತಾ ಕಷ್ಟಪಟ್ಟು ಮುಗಿಸಿದಳು. ಹಸಿವಿರದೆ ಇದ್ದಿದ್ದರೆ ಇದನ್ನು ಮುಟ್ಟುತ್ತಲೇ ಇರಲಿಲ್ಲ ಅನಿಸಿತು. ಮತ್ತೆ ಮಥನ್ ಕಣ್ಣೆದಿರು ಸುಳಿದ.

ದಿನಾ ಸಂಜೆ ತಂದೆ, ಮಗಳು ಅವರಿದ್ದ ಅಪಾರ್ಟ್ಮೆಂಟಿನ ಸುತ್ತ ವಾಕ್ ಮಾಡುತ್ತಿದ್ದರು, ಎದುರಿಗೆ ಸಿಕ್ಕಿದ ಎಲ್ಲರೂ ಚೆನ್ನಾಗಿಯೇ ಮಾತನಾಡಿಸುತ್ತಿದ್ದರು. "ಎಷ್ಟು ಇಂಪ್ರೂವ್ ಆಗ್ತಿದ್ದಾಳೆ ಗೊತ್ತಾ? ಇವತ್ತು ತಾರಾ ಆಂಟಿಯನ್ನು ಗುರುತಿಸಿ ನಕ್ಕಳು, ಬಾಲ್ ತೆಗೆದುಕೊಳ್ಳಲು ಪ್ರಯತ್ನಿಸಿದಳು" ಎಂದೋ ಮಥನ್ ಉತ್ಸಾಹದಿಂದ ವಿವರಿಸುತ್ತಿದ್ದರೆ ದೀಪ್ತಿ ನೋಟ ಅವನನ್ನೂ ದಾಟಿ ಗೋಡೆಯ ಮೇಲೆ ಚಿತ್ರದಲ್ಲಿ ಕೂತ ದೇವರಲ್ಲಿ ನೆಡುತಿತ್ತು. ’ಯಾಕೆ ಪುಟ್ಟಿ, ಮಾತಾಡು ’ಎಂದು ಮಥನ್ ಹೇಳಿದ್ದರೆ ಹೆಪ್ಪುಗಟ್ಟಿದ್ದ ಹಿಮ ಒಂಚೂರಾದರೂ ಕರಗುತ್ತಿತ್ತೋ ಏನೋ. ಎಂದಾದರೂ ಬೇಗ ಬಂದರೆ ದೀಪ್ತಿ ಕೂಡಾ ಇವರೊಂದಿಗೆ ವಾಕಿಂಗ್ ಬಂದರೆ ಯಾರೋ ಒಬ್ಬರಾದರೂ "ನಿಮ್ಮ ಆಫೀಸಿನಲ್ಲಿ ವರ್ಕ್ ಫ್ರಮ್ ಹೋಂ ಇಲ್ವಾ, ಇವಳು ದೊಡ್ಡವಳಾದ ಮೇಲೆ ಕಷ್ಟ ಆಲ್ವಾ?" ಎಂದೆಲ್ಲಾ ಹೇಳಿದಾಗ ಹುಚ್ಚು ಹಿಡಿದಂತಾಗುತಿತ್ತು. ಅಣ್ಣಅಮ್ಮನ ಬಳಿಯೂ ಮಾತು ಕಡಿಮೆ ಮಾಡಿದ್ದವಳಿಗೆ ಆಫೀಸಿನ ಗೋಡೆಗಳು, ಸ್ಯಾಲರಿ ಹೈಕುಗಳು, ಏರುತ್ತಲೇ ಇದ್ದ ಬ್ಯಾಂಕ್ ಬ್ಯಾಲೆನ್ಸ್, ಪಾರ್ಟಿಗಳು ನಶೆಯಂತೆ ಸುಖ ನೀಡುತ್ತಿದ್ದವು. ನೀಹಾ ಬಗ್ಗೆ ಯೋಚಿಸಿದಾಗೆಲ್ಲ ಎದೆಯಲ್ಲಿ ಅಸಾಧ್ಯ ನೋವೇಳುತ್ತಿತ್ತು, ಬಾತ್‌ರೂಮಿನ ನಲ್ಲಿಗಳು, ಬಕೆಟ್, ಮಗ್ಗುಗಳಿಗೆ ಸಾಧ್ಯವಿದ್ದರೆ ಅವಳ ಕಣ್ಣೀರಿನ ಅಳತೆ ಕೊಡುತ್ತಿದ್ದವೋ ಏನೋ. ಯಾವುದೋ ಪೇಯ್ನ್ ಕಿಲ್ಲರ್ ನುಂಗಿ ನೀರು ಕುಡಿದು ಮಲಗುತ್ತಿದ್ದಳು. 

ನೀಹಾ ಪ್ರತೀ ಹುಟ್ಟುಹಬ್ಬವನ್ನೂ ಅಪಾರ್ಟ್ಮೆಂಟಿನ ಮಕ್ಕಳನ್ನು ಕರೆದು ಕೇಕ್ ಕಟ್ ಮಾಡಿ ಆಚರಿಸುತ್ತಿದ್ದ ಮಥನ್, "ನಾಡಿದ್ದು ಜನವರಿ ೬, ಈ ಸಲ ಯಾವ ಥೀಮ್ ಮಾಡೋಣ ಕೇಕ್ ಅನ್ನ" ಎಂದ ಮಥನ್. ಅಷ್ಟೇ! ಕೈಲ್ಲಿದ್ದ ಮಗ್ ಅನ್ನು ಗೋಡೆಗೆ ಅಪ್ಪಳಿಸುವಂತೆ ಬಿಸುಟ ದೀಪ್ತಿ "ನಿಂಗೇನಾಗಿದೆ, ಒಂದ್ಸಲಾನಾದ್ರೂ ನಿಮ್ಮಮ್ಮನಿಗೆ, ಈ ಮಗೂಗೆ ಮಾಡಿದಷ್ಟು ಪ್ರೀತಿ ನಂಗೆ ಮಾಡಿದ್ಯಾ ಒಂದಿನ ಆದ್ರೂ, ಯಾವಾಗ್ಲೂ ನಾನ್ಯಾಕೆ ನಿಂಗೆ ಸೆಕೆಂಡ್ ಪ್ರಿಯಾರಿಟಿ, ಕೆಳಗೆ ಕರ್ಕೊಂಡು ಹೋಗ್ತಿಯಲ್ಲ ಇವಳನ್ನ, ಏನೆಲ್ಲಾ ಮಾತಾಡ್ತಾರೆ ಗೊತ್ತಾ? ಒಂಚೂರಾದ್ರೂ ಐಡಿಯಾ ಇದೆಯಾ? ಎಲ್ಲರ ಮನೆಗೆ ಫ್ರೆಂಡ್ಸ್, ರಿಲೇಟಿವ್ಸ್ ಬರ್ತಾರೆ, ನಮ್ಮನೆಗೆ ಯಾರೂ ಯಾರೂ ಬರಲ್ಲ...ನಂಗೂ ಎಲ್ಲರ ಥರ ಎಲ್ಲೆಲ್ಲೋ ತಿರುಗಾಡಬೇಕು, ಯು.ಎಸ್ ಅಲ್ಲೇ ಸೆಟ್ಲ್ ಆಗಬೇಕು ಅಂತಿದೆ, ನಾನೇನು ಮಾಡಿದೆ ಅಂತ ಇಂಥಹ ಶಿಕ್ಷೆ ಕೊಟ್ಟ ದೇವ್ರು? ಅಮ್ಮ ಹಾಗಾದ್ರು, ಇವಳು ಹೀಗೆ. ಇನ್ನು ಅಣ್ಣಅಮ್ಮನನ್ನೂ ನರಳೋದು ನೋಡೋದು ಬಾಕಿಯಿದೆ, ನನ್ನ ಕೈಲಾಗಲ್ಲ, ಬರೀ ನೋವಷ್ಟೇ ಬದುಕಾ? ಎಲ್ಲರೂ ಒಟ್ಟಿಗೆ ಸಾಯೋದೆ ಒಳ್ಳೇದು ಇದಕ್ಕಿಂತ" ಅಂದವಳೇ ಜೋರಾಗಿ ಅಳಲಾರಂಭಿಸಿದಳು. 

ದೊಡ್ಡ ಶಬ್ದ, ಅಮ್ಮ ಕಿರುಚಿದ್ದಕ್ಕೆ ಕುರ್ಚಿಯಲ್ಲಿ ಕೂತಿದ್ದ ನೀಹಾ ಬೆಚ್ಚಿ ಬಿದ್ದು ಅಳಲೂ ಆಗದೆ ಹೆದರಿ ತಾಯಿಯನ್ನೇ ನೋಡುತ್ತಿದ್ದಳು. ಎದುರಿದ್ದ ಕುರ್ಚಿಯಿಂದ ಎದ್ದು ಬಂದು ದೀಪ್ತಿ ತಲೆಸವರಿದ ಮಥನ್ ಅವಳನ್ನಪ್ಪಿಕೊಂಡ. ಅವಳ ಅಳು ತಹಬಂದಿಗೆ ಬರುವವರೆಗೂ ತಟ್ಟಿ ಅವಳ ಪಕ್ಕದಲ್ಲೇ ಮೊಣಕಾಲೂರಿ ಕೂತು ಹೇಳಲಾರಂಭಿಸಿದ. "ಹೌದು ಪುಟ್ಟಿ, ನನಗೂ ಅನಿಸಿತ್ತು, ಆಮೇಲೆ ಯಾವುದು ಬದಲಾಗಲಾರದು ಎಂದು ಅರಿವಾದಾಗ ದೇವರ ವಿರುದ್ಧ ಯುದ್ಧ, ಅದೂ ಮುಗಿದ ಮೇಲೆ ಹತಾಶೆ, ನೋವು, ಕಣ್ಣೀರು. ಅಮ್ಮ ನನ್ನ ಪ್ರಪಂಚ ಆಗಿದ್ದರು ಪುಟ್ಟಿ, ನೀಹಾ ಬಗ್ಗೆ ಗೊತ್ತಾದಾಗ ಮತ್ತದೇ ನೋವು. ಎರಡೂ ನೋವುಗಳೂ ಪ್ರಚಂಡವಾದವುಗಳು, ಒಂದು ಎಲ್ಲರೂ ಅನುಭವಿಸಲೇಬೇಕಾದ ನೋವುಗಳಾದರೆ ಇನ್ನೊಂದು ದೇವರು ಚೂಸ್ ಮಾಡಿದವರಿಗೆ ಸಿಗುವ ನೋವು. ನಿನ್ನಂತೆ ನಾನೂ ದೂರ ಓಡಿದರೆ ನೀಹಾಗ್ಯಾರು? ನಮ್ಮದೇ ತುಣುಕಲ್ಲವೇ? ನಿಂಗೆಷ್ಟು ಕಷ್ಟ ಆಗ್ತಿದೆ ಗೊತ್ತು. ಅಣ್ಣಅಮ್ಮನನ್ನೇ ನೋಡು, ಅವರಿಗೂ ನೋವಿದೆಯಲ್ಲವೇ? ಇದ್ದಿದ್ದನ್ನು ಇದ್ದ ಹಾಗೆಯೇ ಒಪ್ಪಿಕೊಳ್ಳುವುದೇ ಬದುಕು, ಸೋಲನ್ನು ಒಪ್ಪಿಕೊಳ್ಳುವುದಲ್ಲ. ನಿಜ, ಅಣ್ಣಅಮ್ಮನೂ ಹೋಗುತ್ತಾರೆ, ಯಾರಿಗಿಲ್ಲ ಹೇಳು ಈ ನೋವು ಜಗತ್ತಿನಲ್ಲಿ, ನಮಗೆ ಮಾತ್ರವಲ್ಲವಲ್ಲ. ನಿಜಕ್ಕೂ ನಿನಗನಿಸುತ್ತಾ ನೀನು ಸೆಂಕಡ್ ಪ್ರಿಯಾರಿಟಿ ಅಂತ. ನಾನೇನೂ ಹೇಳಬೇಕಿಲ್ಲ, ಉತ್ತರ ನಿಂಗೇ ಗೊತ್ತಿದೆ. ಮತ್ತೆ ಯಾರೆಷ್ಟು ಆಡಿಕೊಳ್ಳುತ್ತಾರೋ ಗೊತ್ತಿದೆ ನಂಗೆ, ಹೆದರಿದರೆ ನೀಹಾ ಜೀವನ ಇನ್ನಷ್ಟು ಕಷ್ಟ, ಅವಳು ಎಲ್ಲದರ ಮಧ್ಯೆಯೇ ಬೆಳೆಯಬೇಕಾದವಳು, ಅವಳು ಬಾರ್ನ್‌ಸೋಲ್ಜರ್. ಅಷ್ಟೂ ಜನರಲ್ಲಿ ಒಂದೆರಡಾದರೂ ಒಳ್ಳೆಮನಸುಗಳಿವೆ, ನಮ್ಮನ್ನು ಪ್ರೋತ್ಸಾಹಿಸಿ ಬದುಕಲು ಸಹಾಯ ಮಾಡುತ್ತವೆ, ಅವನ್ನು ಗುರುತಿಸಬೇಕು, ನೀಹಾ ಕೂಡಾ ಕಲಿಯಬೇಕು ಅವನ್ನ ಗುರುತಿಸೋಕೆ. ಚೀರ್ ಅಪ್. ಈ ಸಲ ನೀಹಾ ಪಾರ್ಟಿಗೆ ನಿನ್ನ ಕಲೀಗ್ಸ್, ಎಲ್ಲಾ ರಿಲೇಟಿವ್ಸ್ ಅನ್ನೂ ಕರೆಯೋಣ, ನಾವೇ ನಮ್ಮ ಮಗುವನ್ನು ಒಪ್ಪಿಕೊಳ್ಳದಿದ್ದರೆ ಬೇರೆ ಯಾರು ಮಾಡ್ತಾರೆ?" ಎಂದ. 
ಹೌದು, ಬದುಕು ಎಷ್ಟು ಬದಲಾಗಿ ಹೋಯ್ತು, ಒಪ್ಪಿ ಗಟ್ಟಿಯಾದ ಕೂಡಲೇ ಕಾಲೂರಿ ಕೂತು ಬಿಟ್ಟಿತು, ನಿಜವಾದ ಸ್ನೇಹಿತರಾರು ಅನ್ನುವದನ್ನು ಕಾಲವೇ ತಿಳಿಸಿತು. ಆದರೆ ಕೈಲಿದ್ದ ಯು.ಎಸ್  ಪ್ರಾಜೆಕ್ಟ್ ಮಾತ್ರ ಬಿಡಲಾಗಲೇ ಇಲ್ಲ. ಇನ್ನೊಂದೆರಡು ವರ್ಷ, ಉಸಿರುಗಟ್ಟಿ ಬದುಕಿದರಾಯ್ತು, ದಿನಾ ಫೇಸ್ ಟೈಮ್ ಮಾಡಿದರಾಯ್ತು, ಅಣ್ಣ ಅಮ್ಮ ಇನ್ನು ಅಲ್ಲೇ ಬಂದಿರುತ್ತಾರೆ. ನನ್ನೀ ಕನಸು ನನಸಾದ ಕೂಡಲೇ ಬೇರೆ ಕೆಲಸ ನೋಡಬೇಕು. ಸಾಕಷ್ಟು ಕಾಂಟ್ಯಾಕ್ಟ್ಸ್ ಇದೆ, ಕನ್ಸನ್ಸಿ ಮಾಡಬೇಕು. ದುಡಿದ ಒಂದಿಷ್ಟು ಹಣವಿದೆ, ನೀಹನ ಕರ್ಕೊಂಡು ಒಂದಿಷ್ಟು ಸುತ್ತಾಡಬೇಕು.... ಕನಸು ಕಟ್ಟುತ್ತಲೇ ರೆಕ್ಕೆಬಿಚ್ಚಿ ಹಾರುತ್ತಿದ್ದ ಹಕ್ಕಿಯ ಮಡಿಲಲ್ಲಿ ದೀಪ್ತಿ ನಿದ್ದೆ ಹೋದಳು. ಬಾಲ್ಕನಿಯಲ್ಲಿ ಚೇರ್ ಅಲ್ಲಿ ಕೂತು ಬಾಯಿ ತುಂಬಾ ಅನ್ನ ತುಂಬಿದ್ದ ನೀಹಾಗೆ ದೂರದಲ್ಲಿ ಹಾರುತ್ತಿದ್ದ ವಿಮಾನ ತೋರಿಸಿ "ನೋಡು ನೀಹಾ, ಅದ್ರಲ್ಲಿ ಅಮ್ಮ ಇದ್ದಾರೆ!" ಅನ್ನುತ್ತಿದ್ದ ಮಥನ್.


No comments:

Post a Comment