Saturday, July 23, 2016

ಅಘೋಷ್

ಅಘೋಷ್

ಮೂಕವಾಗಿಸಿದ್ದ ಸೆಲ್ ಫೋನ್ ಹನ್ನೆರಡನೇ ಸಲ ತನ್ನ ಬೆಳಕು ಚೆಲ್ಲಿ ತನ್ನ ಕಂಪನದಿಂದ ತಾನೇ ತಿರು ತಿರುಗಿ ಸುಮ್ಮನಾಯ್ತು. ಮೀಟಿಂಗ್ ಉದ್ದಕ್ಕೂ ಮುಳ್ಳಿನ ಮೇಲೆ ಕೂತಂತೆ ಚಡಪಡಿಸುತ್ತಿದ್ದ ಅಘೋಷ್ ಕಾನ್ಸಫರೆನ್ಸ್ ಹಾಲಿನಿಂದ ಹೊರ ಬರುವಷ್ಟರಲ್ಲಿ ಗಡಿಯಾರ ಒಂಭತ್ತೂಮುಕ್ಕಾಲು ತೋರಿಸುತ್ತಿತ್ತು. ‘ ಅಯ್ಯೋ ಅಚ್ಚನ್ ಅದೆಷ್ಟು ಸಲ ಕಾಲ್ ಮಾಡಿದ್ದಾರೋ ’ ಎಂದುಕೊಂಡು ತನ್ನ ಕ್ಯಾಬಿನ್ ಗೆ ದಾಪುಗಾಲು ಹಾಕಿಬಂದವನೇ ಟೇಬಲ್ ಮೇಲಿದ್ದ ಸೆಲ್ ಕೈಗೆತ್ತಿಕೊಂಡು ತಪ್ಪಿದ ಕರೆಗಳ ಸಂಖ್ಯೆ ನೋಡಿ ಒಂದರೆಗಳಿಗೆ ಗಾಭರಿಯಾದ. ಏಳು ಕರೆಗಳು ಅಚ್ಚನ್ ಅವರದ್ದು ಹಾಗೂ ಉಳಿದ ಐದು ಕೇರಳದ ಯಾವುದೋ ಬೇರೆ, ಬೇರೆ ಸ್ಥಿರ ದೂರವಾಣಿಯಿಂದ ಬಂದವುಗಳು. ಅಚ್ಚನ್ ಎಂದೂ ಪದೇ ಪದೇ ಕರೆ ಮಾಡುವವರಲ್ಲವಲ್ಲ ಎಂದುಕೊಂಡು ಅವರಿಗೆ ಕರೆ ಮಾಡಿದ. ಲೈನ್ ಕಟ್ಟಾಯ್ತು, ಪದೇ ಪದೇ ಪ್ರಯತ್ನಿಸಿದ, ಉಹೂಂ, ಏನೂ ಪ್ರಯೋಜನವಾಗಲಿಲ್ಲ. ಸರಿ, ಕಾರಿನಲ್ಲಿ ಕೂತು ಮಾಡಿದರಾಯ್ತು ಎಂದುಕೊಂಡವನೇ ತನ್ನ ಲ್ಯಾಪ್ ಟಾಪ್ ಅನ್ನು ಬ್ಯಾಗಿಗೆ ತುರುಕಿ ಬಾಗಿಲ ಬಳಿ ಬಂದು ಕಾರ್ಡ್ ಉಜ್ಜಿದ. ಎಂದಿನಂತೆ ಗಾರ್ಡ್ ಹಾಕಿದ ಸಲ್ಯೂಟ್ ಹಾಗೂ ಅವನು ಸಾಬ್ ಎಂದು ಏನೋ ಹೇಳಲು ಹೊರಟದ್ದನ್ನು ಕಣ್ಣಂಚಿನಿಂದಲೇ ನೋಡಿಯೂ ನೋಡದವನಂತೆ ಅಲಕ್ಷಿಸಿ ಲಿಫ್ಟ್ ಒಳಗೆ ನುಗ್ಗಿದ.  ಬೇಸ್ ಮೆಂಟಿನಲ್ಲಿ ಲಿಫ್ಟ್ ನಿಂದ ಹೊರಬರುತ್ತಿದ್ದಂತೆ  ಅಷ್ಟರವರೆಗೂ ಗಮನಕ್ಕೆ ಬಾರದಿದ್ದ ಮಳೆಯ ಶಬ್ದ ಕಿವಿಗೆ ಬಡಿಯಿತು. ಬೇಸ್ ಮೆಂಟಿನಲ್ಲಿ ಸಣ್ಣಗೆ ನೀರು ತುಂಬಲು ಶುರುವಾಗಿತ್ತು. 
ರಸ್ತೆಗೆ ಕಾರು ಏರುತ್ತಿದ್ದಂತೆ ಮತ್ತೆ ಅಚ್ಚನ್ ಗೆ ಕರೆ ಮಾಡಿದ. ಬ್ಯಾಟರಿ ಲೋ ಎನ್ನುತ್ತಾ ಸೆಲ್ ಕಣ್ಣು ಮುಚ್ಚಿತು. ಕಿರಿಕಿರಿಯೆನಿಸಿ ಫೋನನ್ನು ಪಕ್ಕದ ಸೀಟಿನ ಮೇಲೆ ಕುಕ್ಕಿದ. ಮಳೆ ಸ್ವಲ್ಪ ಜಾಸ್ತಿಯೇ ಇದೆ ಅನಿಸಿ ಮುಂದೆ ಕಣ್ಣು ಹಾಯಿಸಿದವನಿಗೆ ಕಂಡದ್ದು ವಿಂಡ್ ಶೀಲ್ಡ್ ಮೇಲೆ ಬೀಳುತ್ತಿದ್ದ ಅಗಾಧ ಪ್ರಮಾಣದ ನೀರನ್ನು ಒರೆಸಲು ಪ್ರಯತ್ನ ಮಾಡುತ್ತಿದ್ದ ವೈಪರ್ ಮತ್ತದರಿಂದಾಚೆ ಅಸ್ಪಷ್ಟ-ಮಸುಕು-ಮಬ್ಬು ಮಬ್ಬಾಗಿ ವಿವಿಧ ಆಕಾರ ತಳೆದ ಎದುರು ನಿಂತ ವಾಹನಗಳ ಕೆಂಪು ದೀಪಗಳು. ಇಡೀ ಸುತ್ತಮುತ್ತಲಿನ ವಾತಾವರಣ ಕೆಂಪಿನಲ್ಲಿ ಅದ್ದಿದ್ದಂತೆ ಕಾಣಿಸಿತು. ರಸ್ತೆಯ ದೀಪಗಳು, ಮಳೆಯ ಸದ್ದು, ಅದು ಹೊತ್ತು ತಂದ ಅಸಾಧ್ಯ ಚಳಿ ಆಫೀಸಿನ ಒತ್ತಡ, ಚಿಂತೆಗಳನ್ನು ಮಳೆಯ ನೀರಿನೊಟ್ಟಿಗೆ ಕಲೆಸಿ ಮರೆಸಿಬಿಟ್ಟಿತು.
ಅಘೋಷ್ ಅದು ಅವನ ಅಚ್ಚನ್ ಅವನಿಗೆ ಇಟ್ಟ ಹೆಸರು. ನನಗ್ಯಾಕೆ ಈ ಬೆಂಗಾಲಿ ಹೆಸರು ಬಂತು ಎಂದು ಕೇರಳದಲ್ಲೇ ಹುಟ್ಟಿ ಬೆಳೆದವನು ಯೋಚಿಸಿದ್ದು ಅದೆಷ್ಟು ಸಲವೋ. ಪ್ರಪಂಚದಲ್ಲಿ ಅವನಿಗಿದ್ದ ಏಕಮಾತ್ರ ಬಂಧು ಅವನ ತಂದೆ, ಅಚ್ಚನ್. ಎಂದೂ ಒರಟು ಮಾತನಾಡದೇ, ದನಿಯೇರಿಸದೇ ಜೀವನದ ಸೂಕ್ಷ್ಮ ಪಾಠಗಳನ್ನು ಅತೀ ಸೂಕ್ಷ್ಮವಾಗಿ ಹೇಳಿಕೊಟ್ಟವರು ಅವರು. ಕೇರಳದ ಬಹುತೇಕರಂತೆ ಅವರೂ ಶ್ರಮಜೀವಿ. ಸದಾ ಹಸನ್ಮುಖಿ, ಸಾಹಿತ್ಯ ಪ್ರೇಮಿ. ಮಗನಲ್ಲೂ ಸಾಕಷ್ಟು ಒಳ್ಳೆಯ ಆಸಕ್ತಿಗಳನ್ನು ತುಂಬಿದ್ದರು. ತ್ರಿಶ್ಶೂರಿನ ಹಳ್ಳಿಯೊಂದರಲ್ಲಿ ಒಂದು ಫಾರ್ಮ್ ಹೌಸ್ ಕೊಂಡುಕೊಂಡು ಬೇಕಾದ ಗಿಡ-ಮರಗಳ ಮಧ್ಯೆ ಖುಷಿಯಾಗಿ ಕಾಲಕ್ಷೇಪ ಮಾಡುತ್ತಿದ್ದರು. ಏನೇ ಆಗಲಿ ದಿನ ರಾತ್ರಿ ಒಂಭತ್ತು ಗಂಟೆಗೆಲ್ಲಾ ಅಪ್ಪ-ಮಗ ಮಾತನಾಡಲೇಬೇಕು. ಸುಮಾರು ಒಂದು - ಒಂದೂವರೆ ಗಂಟೆ ಸಾಗುತ್ತಿದ್ದ ಮಾತುಕತೆಯಲ್ಲಿ ಅಂದಿನ ದಿನಚರಿಯನ್ನು , ಆಫೀಸಿನ ಕಿರಿ-ಕಿರಿಗಳನ್ನು, ಖುಷಿಯ ವಿಷಯಗಳನ್ನು ಚಾಚೂ ತಪ್ಪದಂತೆ ಮಗ ಹೇಳಬೇಕು, ಅಚ್ಚನ್ ಅದನ್ನು ಸಾವಧಾನವಾಗಿ ಕೇಳಿಸಿಕೊಂಡು ತನಗೆ ತೋಚಿದ ಉತ್ತರ ಹೇಳಬೇಕು. ಅಘೋಷ್ ಕೆಲಸ ಹಿಡಿದು ಬೆಂಗಳೂರಿಗೆ ಬಂದು ಆರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಪದ್ಧತಿಯಿದು. ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುತ್ತಿದ್ದ. ಬೇರೆ ಯಾರೊಂದಿಗೂ ಬೆರೆಯದೇ , ಅಂತರ್ಮುಖಿಯಾಗಿ ತನ್ನದೇ ಪ್ರಪಂಚದಲ್ಲಿ ಬದುಕುತ್ತಿದ್ದವನನ್ನು ಕಂಡರೆ ಅಚ್ಚನ್ ಗೆ ಆತಂಕವಾಗುತ್ತಿತ್ತು. ಅದನ್ನು ಪದೇಪದೇ ಹೇಳುತ್ತಿದ್ದರು ಕೂಡಾ. ಆದರೆ ಅಘೋಷ್ ಅದನ್ನ್ಯಾವುದನ್ನೂ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ಸಾಕಷ್ಟು ಕನ್ನಡ ಕಲಿತಿದ್ದ, ತಕ್ಕಮಟ್ಟಿಗೆ ವ್ಯವಹಾರ ಜ್ಞಾನ ಅವನಿಗಿತ್ತು, ಟೀಮ್ ಅಲ್ಲಿ ಒಂದಾಗಿ ಕೆಲಸ ಮಾಡಲು ಎಷ್ಟು ಬೇಕೋ ಅಷ್ಟು ಮಾತ್ರ ಬೆರೆಯುತ್ತಿದ್ದ. ಎರಡು ಬೆಡ್ರೂಮಿನ ಸ್ವಂತ ಮನೆ ಮಾಡಿಕೊಂಡು ತಾನೇ ಅಡುಗೆ ಮಾಡಿಕೊಂಡು ಆರಾಮಾಗಿದ್ದ. ಅವನ ಪ್ರಕಾರ ಅವನು ಪ್ರಪಂಚದ ಎಲ್ಲರಂತಿದ್ದ. ಆದರೆ ಅಚ್ಚನ್ ಗೆ ಮಾತ್ರ ಅವನು ಏಕಾಂಗಿ ಎಂದೆನಿಸುತ್ತಿತ್ತು. ಮದುವೆಯ ವಿಷಯ ಅವರು ಎತ್ತಿದ್ದಾಗೆಲ್ಲಾ ಉಪಾಯವಾಗಿ ವಿಷಯಾಂತರ ಮಾಡುತ್ತಿದ್ದ. ಮದುವೆಯ ಬಗ್ಗೆ ಯೋಚಿಸುವಷ್ಟು ದೊಡ್ಡವನಲ್ಲ ನಾನು ಎಂದುಕೊಳ್ಳುತ್ತಿದ್ದ.
ಅರ್ಧ ಗಂಟೆಯಾದರೂ ಎದುರಿನ ವಾಹನ ಮುಂದೆ ಸರಿಯದಿದ್ದಾಗ ಕಿಟಕಿ ಇಳಿಸಿ ಹೊರ ನೋಡಲು ಪ್ರಯತ್ನಿಸಿದ. ಮಳೆಯ ದಪ್ಪ ಹನಿಗಳು ಮುಖಕ್ಕೇ ರಾಚಿದವು. ತೀಕ್ಷ್ಣ, ಮೈ ನಡುಗಿಸುವ ತಂಗಾಳಿ ಕಾರಿನ ಒಳನುಗ್ಗಿತು, ಗಾಜೇರಿಸಿ ಸುಮ್ಮನೆ ಕುಳಿತ. ಫೋನ್ ಕಡೆ ಕೈ ಚಾಚಿದರೆ ಅದೂ ನಿರ್ಜೀವಗೊಂಡಿತ್ತು. ಕಾರಿನ ತುಂಬಾ ಸಿಡಿಗಳಿದ್ದರೂ ಯಾವುದನ್ನೂ ಹಾಕುವ ಮನಸ್ಸಿಲ್ಲದೇ ಎಫ್ ಎಮ್ ತಿರುಗಿಸಿದ. ಅದು ಭರಭರ ಶಬ್ದ ಮಾಡಿತೇ ವಿನಃ ಏನೂ ಕೇಳಿಸಲಿಲ್ಲ. ಮಳೆ ಎಂದಿನಂತಿಲ್ಲ ಎಂಬುದು ಅವಾಗಷ್ಟೇ ಅವನ ಗಮನಕ್ಕೆ ಬಂತು. ಹಿಂದಿನ ಸೀಟಿನಲ್ಲಿ ಬಿದ್ದಿದ್ದ ಕೋಟ್ ಹಾಕಿಕೊಂಡು ಕಾರಿನಿಂದ ಹೊರಬಿದ್ದ. ಚಳಿಗೆ ಮೈ ಅದುರಿತು, ಹನಿಗಳೂ ಮುಖಕ್ಕೇ ಬಡಿದ ರಭಸಕ್ಕೆ ಕಣ್ಣು ಸರಿಯಾಗಿ ಬಿಡಲಾಗಲಿಲ್ಲ. ಚರಂಡಿಯ ಕೊಳೆ, ಕಸವೆಲ್ಲಾ ಸೇರಿ ಕಾಲಿಡಲೂ ಅಸಹ್ಯವೆನಿಷ್ಟು ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಕೆಟ್ಟ ವಾಸನೆಯಿಂದ ಹೊಟ್ಟೆ ತೊಳೆಸಿದಂತಾಯ್ತು ಅವನಿಗೆ. ಮಳೆ ಬಂದರೆ ಬೆಂಗಳೂರು ಕರಗಿ ನೀರಾಗಿ ಹರಿಯುತ್ತದೆ ಅಂದುಕೊಂಡವನು ಕಣ್ಣಿನ ಮೇಲೆ ಕೈಯಿಟ್ಟು ದೂರಕ್ಕೆ ದೃಷ್ಟಿ ಹಾಯಿಸುವ ವ್ಯರ್ಥ ಪ್ರಯತ್ನ ಮಾಡಿದ. ಉದ್ದಕ್ಕೂ ವಾಹನಗಳ ಸಾಲು ಕಂಡಿತೇ ಹೊರತು ಮುಂದೆ ಸಾಗುವ ಯಾವ ಲಕ್ಷಣವೂ ಕಾಣಲಿಲ್ಲ. ಮುಂದೆ ನಿಂತಿದ್ದ ಆಟೋ ಬಳಿ ಸಾಗಿ “ ಏನಾಗಿದೆ ಸಾರ್ “ ಎಂದ. ಅಟೋದವನು “ ಏನೋ ಭಾರಿ ಮಳೆ ಸಾರ್, ಮುಂದೆ ಅಂಡರ್ ಪಾಸ್ ನೀರು ತುಂಬಿದೆ, ಮೇಲಿನ ದಾರಿ ಎಲ್ಲಾ ಬ್ಲಾಕ್ ಆಗಿದೆ, ಇವತ್ತು ರಾತ್ರಿಯಿಡೀ ಮಳೆ ಸುರಿಯುತ್ತೆ ಅನಿಸುತ್ತೆ “ ಅಂದ. ಮತ್ತೆ, “ ನೀವು ಯಾವ ಏರಿಯಾ ಸರ್ ?” ಎಂದು ಪ್ರಶ್ನಿಸಿದ. ಅಘೋಷ್ ವಿಜಯನಗರವೆಂದಾಕ್ಷಣ “ ಇವತ್ತು ನೀವು ಮನೆ ಮುಟ್ಟಿದ ಹಾಗೇ ಸರ್ “ ಎಂದು ಹೆದರಿಸಿಯೂಬಿಟ್ಟ. ಅಘೋಷ್ ಬರೀ ನಕ್ಕು ಮತ್ತೆ ಈ ಮಳೆಗೆ ನಿಂತರೆ ನ್ಯುಮೋನಿಯಾ ಬರುವುದು ಖಂಡಿತ ಎಂದು ಯೋಚಿಸಿ ಕಾರಿನ ಕಡೆ ಹೆಜ್ಜೆ ಹಾಕಿದ. ಅಷ್ಟರಲ್ಲಾಗಲೇ ಪೂರ್ತಿ ಒದ್ದೆ ಮುದ್ದೆಯಾಗಿದ್ದ. ಕಾರಲ್ಲಿ ಕೂತು ಕರ್ಚೀಫಿನಿಂದ ಸ್ವಲ್ಪ ತಲೆ ತಿಕ್ಕಿದಂತೆ ಮಾಡಿ ಸೀಟನ್ನು ಹಿಂದಕ್ಕಾನಿಸಿ ಹಾಗೆಯೇ ಕಣ್ಣು ಮುಚ್ಚಿದ. ಒಂದೇ ಘಳಿಗೆ, ಅಚ್ಚನ್ ನಗುಮುಖ ಕಣ್ಣೆದುರು ಬಂದಂತಾಯ್ತು, ಮತ್ತವರು ತೆರೆದ ಬಾಗಿಲಿನಿಂದ ಹೊರಗೆ ಹೊರಟಂತೆ, ಇವನೆಡೆ ತಿರುಗಿ ನೋಡಿದ ಹಾಗೆ ಭಾಸವಾಯ್ತು, ಛಕ್ಕನೆ ಕಣ್ಣು ಬಿಟ್ಟವನಿಗೆ ಎದುರಿನ ಗಾಡಿ ಹೊರಟದ್ದು ಕಾಣಿಸಿತು. ತಲೆ ಕೊಡಹಿ, ಸೀಟು ಮುಂದಕ್ಕೆಳೆದು ಕಾರನ್ನು ಸ್ಟಾರ್ಟ್ ಮಾಡಿದ. ಒಂದು ಹದಿನೈದು ನಿಮಿಷ ನಿಧಾನಕ್ಕೆ ಹೋಗಿರಬಹುದು, ಇದ್ದಕ್ಕಿದ್ದಂತೆ ಮುಂದಿನ ಗಾಡಿ ನಿಂತು ಹೋಯಿತು, ಇವನು ಬೇರೆ ಏನಾದರೂ ಯೋಚಿಸುವಷ್ಟರಲ್ಲಿ ರಸ್ತೆ ಪೂರ್ತಿ ನೀರು ನಿಂತಿದ್ದು ಕಂಡು ಎದೆ ಜಲ್ಲೆಂದಿತು. ಎರಡೇ ನಿಮಿಷ, ಎದುರಿನ ಕಾರಿನವನು ಇಳಿದದ್ದು ಕಂಡು ಏನಾಗಿರಬಹುದೆಂದು ಊಹಿಸಿ ಅಕ್ಸಿರಲೇಟರ್ ಮೇಲೆ ಕಾಲು ಒತ್ತಲು ಹೋದ, ಆವಾಗಲೇ ತಡವಾಗಿತ್ತು. ಸೈಲೆನ್ಸರ್ ಒಳಗೆ ನೀರು ನುಗ್ಗಿ ಕಾರು ಬಂದಾಗಿ ಒಳಕ್ಕೆ ನೀರು ತುಂಬಲಾರಂಭಿಸಿತು. ಜನರ ಅರಚಾಟ, ಮಾತು ಕತೆಗಳು ಕಿವಿಗೆ ಬಿದ್ದವು. ಮಿತಿ ಮೀರಿದ ಉದ್ವೇಗದಿಂದ ಆಗದು ಎಂದು ಗೊತ್ತಿದ್ದರೂ ಮತ್ತೆ ಮತ್ತೆ ಕಾರನ್ನು ಸ್ಟಾರ್ಟ್ ಮಾಡಲೆತ್ನಿಸಿ ಸೋತು ಹೋದ. ಕೆಳಗಿಳಿದು ಅದನ್ನು ದಬ್ಬುವ ಪ್ರಯತ್ನ ಮಾಡಿದ, ಮೊಣಕಾಲವರೆಗಿದ್ದ ನೀರು ಪೂರ್ತಿ ಗಾಡಿಯೊಳಗೆ ನುಗ್ಗಿತು. ಅಸಹಾಯಕನಾಗಿ ಹಿಂದಿನ ಸೀಟಿನಿಂದ ಬ್ಯಾಗ್ ತೆಗೆದುಕೊಂಡು, ಡಿಕ್ಕಿಯಲ್ಲಿ ಹುಡುಕಾಡಿ, ನೀರು ತುಂಬುವ ಮೊದಲು ಅವನ ಅದೃಷ್ಟಕ್ಕೆ ಸಿಕ್ಕ ಯಾವುದೋ ಮಾಲಿನ ದೊಡ್ಡ ಪ್ಲಾಸ್ಟಿಕ್ ಕವರ್ ನಲ್ಲಿ ಆ ಬ್ಯಾಗ್ ಕವರ್ ಮಾಡಿದ. ತಮ್ಮ ಗಾಡಿ ಬಿಟ್ಟು ಸಿಟ್ಟಲ್ಲಿ, ಸಂಕಟದಲ್ಲಿ ಕಿರುಚುತ್ತಾ ನಿಂತಿದ್ದ ಜನರೊಂದಿಗೆ ತಾನೂ ಒಬ್ಬನಾಗಿ ನಿಂತ. ಕೆಲವರು ಹಟ ಬಿಡದೇ ಗುದ್ದಾಟ ನಡೆಸುತ್ತಲೇ ಹಿಂದೆ ಹೋಗುವ ಪ್ರಯತ್ನ ಮಾಡುತ್ತಲೇ ಇದ್ದರು. ಒಂದಿಬ್ಬರು ಹಿಂದಕ್ಕೆ ಹೋಗುವಲ್ಲಿ ಯಶಸ್ವಿಯಾದರೂ ಅವರ ಹಿಂದಿನ ಗಾಡಿಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಮತ್ತಷ್ಟು ಗೊಂದಲಗಳು, ಕಿರಿಕಿರಿಗಳು ಸೃಷ್ಟಿಯಾಗಿ, ಏನಾದರೂ ಬಿಡುವುದಿಲ್ಲ ಎಂಬಂತೆ ಅರಚುತ್ತಿದ್ದ ಮಳೆಗೆ ಸಾಥ್ ಕೊಟ್ಟವು. 
ಅಸಹಾಯಕತೆ, ಅಕ್ರೋಶದಿಂದ ಕಣ್ಣಲ್ಲಿ ನೀರು ಜಿನುಗುವಂತಾದರೂ ಎಲ್ಲವನ್ನೂ ಅದರದರ ಪಾಡಿಗೆ ಬಿಟ್ಟು ಅಘೋಷ್ ನೀರಲ್ಲಿ ರಸ್ತೆಯನ್ನು ಹುಡುಕುತ್ತಾ ಕಷ್ಟಪಟ್ಟು ಹೆಜ್ಜೆ ಹಾಕಲಾರಂಭಿಸಿದ. ಮೆಟ್ರೋ ಸೇತುವೆ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದಂತೆ ಅದರಡಿಯಲ್ಲಿ ಒಂದಷ್ಟು ಜನರು ರಕ್ಷಣೆ ಪಡೆಯಲು ನಿಂತಿದ್ದರು. ಇವನೂ ಆ ಗುಂಪಲ್ಲಿ ಸೇರಿಕೊಂಡ. ಮನಸ್ಸು ಅಚ್ಚನ್ ಬಗೆಯೇ ಯೋಚಿಸುತ್ತಿತ್ತು, ಎಲ್ಲವನ್ನೂ ಅವರ ಬಳಿ ಹಂಚಿಕೊಂಡರೆ ಸಮಾಧಾನ ಸಿಗುತ್ತದೆ ಅಂದುಕೊಂಡವನಿಗೆ ಫೋನ್ ಕಾರಲ್ಲೇ ಉಳಿದು ಹೋದ ಅರಿವಾಯಿತು. ಎದುರಿನ ಸಿಮೆಂಟಿನ ಕಂಬಕ್ಕೆ ಮುಷ್ಟಿಯಿಂದ ಗುದ್ದುವ ಮನಸ್ಸಾದರೂ ಆ ಭಾವನೆಯನ್ನು ಕಷ್ಟಪಟ್ಟು ತಡೆದುಕೊಂಡ. ಸುಮಾರು ಒಂದು ಗಂಟೆ ಸುರಿದ ನಂತರ ಮಳೆ ತನ್ನ ಹಟ ಬಿಟ್ಟಂತೆ  ಕಡಿಮೆಯಾಗತೊಡಗಿತು. ವಿಜಯನಗರದ ಸ್ಕೈಲೈನ್ ಅಪಾರ್ಟ್ ಮೆಂಟಿನ ತನ್ನ ಗೂಡನ್ನು ಸೇರಲು ಇನ್ನು ಮುಕ್ಕಾಲು ಗಂಟೆಯಾದರೂ ನಡೆಯಬೇಕು, ಆಟೋ ಅಂತೂ ಸಿಗುವ ಅವಕಾಶವಿಲ್ಲ. ಯಾರನ್ನಾದರೂ ಲಿಫ್ಟ್ ಕೇಳಬೇಕಷ್ಟೇ ಅಂದುಕೊಂಡು ನಡುಗುತ್ತಾ, ಹಿಂತಿರುಗಿ ನೋಡುತ್ತಾ, ವಿರಳವಾಗಿ ಹಾದು ಹೋಗುತ್ತಿದ್ದ ವಾಹನಗಳಿಗೆ ಕೈ ತೋರಿಸುತ್ತಾ ಹೆಜ್ಜೆ ಹಾಕತೊಡಗಿದ. ಕೆಲವು ಕಡೆ ರಸ್ತೆಯ ಪಕ್ಕದ ಮೋರಿಗಳು ತುಂಬಿ ಹರಿಯುತ್ತಿದ್ದವು. ಆ ನೀರನ್ನು ನೋಡುತ್ತಾ ನಡೆಯುತ್ತಿದ್ದವನಿಗೆ ಪುಟ್ಟ ಗೊಂಬೆಯೊಂದು ತೇಲಿ ಬಂದಂತನಿಸಿ ನೋಡುತ್ತಾನೆ, ಒಂದು ಪುಟ್ಟ ನಾಯಿಮರಿ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಅದೋ, ಕೈ ಕಾಲು ಬಡಿಯುವ ಪ್ರಯತ್ನ ಮಾಡುತ್ತಾ ಸೋತು ಹೋಗುತ್ತಿತ್ತು. ಮೈ ಕೈ ಗಲೀಜಾಗುವುದನ್ನೂ ಲೆಕ್ಕಿಸದೇ ಕೂಡಲೇ ಹಾರಿ ಅದನ್ನು ಮೇಲಕ್ಕೆತ್ತಿದ ಅಘೋಷ್. ಚಳಿಗೆ ಅದು ಗಡ ಗಡ ನಡುಗುತ್ತಿತ್ತು. ಪಾಪ ಅನಿಸಿ ಆ ಮುಗ್ಧ ಜೀವಿಯ ಮೇಲೆ ಪ್ರೀತಿ, ಕನಿಕರ ಉಕ್ಕಿ ಬಂತು. ಕರ್ಚೀಫಿನಿಂದ ಚೆನ್ನಾಗಿ ಅದನ್ನು ಒರೆಸಿದ, ಗುಂಡು ಗುಂಡಾಗಿದ್ದ ಆ ಮರಿ ಕಣ್ಣೆತ್ತಿ ಅವನನ್ನೊಮ್ಮೆ ಕೃತಜ್ಞತೆಯಿಂದ ನೋಡಿತು. ವಾಪಾಸು ಅದನ್ನು ಕೆಳಕ್ಕೆ ಬಿಡುವ ಮನಸ್ಸಾಗದೇ ತನ್ನ ಕೋಟಿನ ಜಿಪ್ ತೆಗೆದು ಹೊಟ್ಟೆಗಾನಿಸಿ, ಇನ್ನೊಂದು ಕೈಯಲ್ಲಿ ಕವರನ್ನು ನೇತಾಡಿಸಿಕೊಂಡು ಮನೆ ಕಡೆ ಕಾಲೆಳೆದುಕೊಂಡು ಬಂದ.
ಅಪಾರ್ಟ್ ಮೆಂಟ್ ಮುಟ್ಟಿದಾಗ ಗಂಟೆ ಒಂದೂವರೆ. ಸೆಕ್ಯೂರಿಟಿ ಮೈ ತುಂಬಾ ಹೊದ್ದುಕೊಂಡು ಕೂತಲ್ಲೇ ನಿದ್ದೆ ಹೋಗಿದ್ದ. ಈ ಗುಂಡು ನಾಯಿಮರಿಯನ್ನು ಅವನ ಬಳಿ ಬಿಡಬೇಕು ಅಂದುಕೊಂಡವನಿಗೆ, ಈ ಹೊತ್ತಿನಲ್ಲಿ ಅವನನ್ನು ಎಬ್ಬಿಸಲು ಮನವೊಪ್ಪದೆ ಮೂರನೇ ಅಂತಸ್ತಿನ ತನ್ನ ಫ್ಲಾಟಿಗೇ ಕರೆದುಕೊಂಡು ಹೋದ. ಅದಕ್ಕೊಂಚೂರು ಹಾಲು ಬಿಸಿ ಮಾಡಿ ತಟ್ಟೆಯೊಂದಕ್ಕೆ ಹಾಕಿ ತಾನೂ ಹಾಲಿಗೆ ಸ್ವಲ್ಪ ಕಾರ್ನ್ ಫ್ಲೇಕ್ಸ್ ಕಲಿಸಿಕೊಂಡು ತಿಂದ. ಅಚ್ಚನ್ ಗೆ ಹೊಸದಾಗಿ ಬಂದಿದ್ದ ತನ್ನ ಸ್ಥಿರ ದೂರವಾಣಿಯಿಂದ ನಾಳೆ ಕರೆ ಮಾಡಿದರಾಯ್ತು ಎಂದಾಲೋಚಿಸಿ ಮರಿಯನ್ನು ಸೋಫಾ ಮೇಲೆ ಬೆಚ್ಚಗೆ ಮಲಗಿಸಿ ತಾನೂ ಹಾಸಿಗೆಯ ಮೇಲೆ ಬಿದ್ದುಕೊಂಡ. ಅತೀವ ಮಾನಸಿಕ, ದೈಹಿಕ ಆಯಾಸಕ್ಕೆ ನಿದ್ದೆ ಹತ್ತಿದ್ದೇ ತಿಳಿಯಲಿಲ್ಲ. ಬೆಳಗ್ಗೆ ಸಾಕಷ್ಟು ತಡವಾಗಿಯೇ ಎಚ್ಚರಗೊಂಡವನಿಗೆ ನಿನ್ನೆಯ ಪಡಿಪಾಟಲುಗಳು ನೆನಪಿಗೆ ಬರುತ್ತಿದ್ದಂತೆ ಸಣ್ಣಗೆ ತಲೆ ನೋಯಲಾರಂಭಿಸಿತು. ತನ್ನ ಬಾಲದೊಂದಿಗೇ ತಾನೇ ಆಡುತ್ತಿದ್ದ ನಾಯಿಮರಿಯನ್ನು ನೋಡಿದಾಗ ಮನಸ್ಸು ಒಂಚೂರು ಹೌದೋ ಅಲ್ಲವೋ ಎಂಬಂತೆ ಅರಳಿತು. ಬಾಗಿಲು ತೆಗೆದು ಪೇಪರ್, ಹಾಲು ಎತ್ತಿಕೊಳ್ಳುತ್ತಿದ್ದಂತೆ, ಶತಮಾನದ ಮಳೆ, ನೂರು ಸೆ.ಮೀ. ಮಳೆ ಎಂಬೆಲ್ಲಾ ತಲೆ ಬರಹಗಳು ಕಣ್ಣಿಗೆ ರಾಚಿದವು. ಸರ್ವೀಸ್ ಸೆಂಟರ್ ಗೆ ಫೋನ್ ಮಾಡಿ ಕಾರನ್ನು ಟೋ ಮಾಡಲು ಹೇಳಬೇಕು, ಯಾವ ಕಂಡೀಶನ್ ನಲ್ಲಿದೆಯೋ, ಹೊಸ ಕಾರಿಗೆ ಎಷ್ಟಾಗುತ್ತೋ ಎಂಬೆಲ್ಲಾ ಯೋಚನೆಗಳೆಲ್ಲಾ ಆಕ್ರಮಿಸಿ, ರಾಶಿ ಬಿದ್ದ ಅಷ್ಟೂ ಕೆಲಸಗಳನ್ನು ನೆನೆದು ನಿಟ್ಟುಸಿರು ಬಿಟ್ಟ. ಇವನ ನಿಟ್ಟುಸಿರಿಗೋ ಏನೋ, ನಾಯಿಮರಿ ಬಂದು ಅವನ ಕಾಲ ಬಳಿ ನಿಂತಿತು. ಅದನ್ನು ನೋಡಿ, ಅಘೋಷ್ ಸಹಜವೆಂಬಂತೆ ಮಲಯಾಳಂನಲ್ಲಿ “ ಏನೋ ಮರಿ, ನಿದ್ದೆ ಮಾಡಿದೆಯಾ ? ನೋಡು, ನನ್ನ ಕಷ್ಟ, ಸೆಲ್ ಫೋನ್ ಬೇರೆ ಕಾರೊಟ್ಟಿಗೆ ನೀರಲ್ಲಿ ಮುಳುಗಿ ಹೋಯ್ತು. ಏನು ಮಾಡಲಿ, ಸರ್ವೀಸ್ ಸ್ಟೇಷನ್ ಗೆ ಫೋನ್ ಮಾಡೋಣ ಅಂದರೆ ನಂಬ್ರ ಬೇರೆ ಇಲ್ಲ. ನಿನ್ನ ಹಾಗೆ ನಾನಿದ್ದರೆ ಎಷ್ಟು ಅರಾಮಾಗಿರುತ್ತಿತ್ತು “ ಅಂದ. ಅವನು ಮಾತಾಡುತ್ತಿರುವುದನ್ನು ಗಮನವಿಟ್ಟು ಕೇಳುವಂತೆ ಅವನನ್ನೇ ನೋಡುತ್ತಿದ್ದ ಮರಿ ಟೇಬಲ್ ಮೇಲಿಟ್ಟ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿಟ್ಟಿದ್ದ ಅವನ ಬ್ಯಾಗನ್ನು ನೋಡಿ ಮತ್ತೆ ಅವನನ್ನು ನೋಡಿತು. ಅವನ ದೃಷ್ಟಿ ಆ ಕಡೆ ಹರಿದಂತೆ ‘ ಅರೇ, ಹೌದಲ್ಲಾ, ’ ಎಂದುಕೊಂಡು ಮಾಡೆಮ್, ಲ್ಯಾಪ್ ಟಾಪ್ ಎರಡೂ ಆನ್ ಮಾಡಿ ತನ್ನ ಇ - ಮೇಯ್ಲ್ ನಲ್ಲಿ ಲಿಂಕ್ ಮಾಡಿಟ್ಟುಕೊಂಡ ಎಲ್ಲಾ ಫೋನ್ ನಂಬರ್ ಗಳನ್ನೂ ತನ್ನ ಲ್ಯಾಪ್ ಟಾಪ್ ನಲ್ಲಿ ಕಾಪಿ ಮಾಡಿಟ್ಟುಕೊಂಡ. ಸರ್ವೀಸ್ ಸ್ಟೇಷನ್ ಗೆ ಕರೆ ಮಾಡಿ ಕಾರಿನ ಬಗ್ಗೆ ಹೇಳುತ್ತಿದ್ದಂತೆ “ ಹೌದು ಸರ್, ನಿನ್ನೆ ಇಡೀ ಬೆಂಗಳೂರಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಾರುಗಳು ಸಿಕ್ಕಿ ಬಿದ್ದಿವೆ. ನೋಡೋಣ, ಇನ್ಸೂರೆನ್ಸ್ ಏನಾದರೂ ಸಿಗುತ್ತಾ ಅಂತ. ನಾವು ಅಲ್ಲಿಗೆ ಹೋಗಿ ಟೋ ಮಾಡಿ ಎತ್ತಿಕೊಂಡು ಬರುತ್ತೇವೆ, ಆಮೇಲೆ ನಿಮಗೆ ಕರೆ ಮಾಡುತ್ತೇವೆ, ನಿಮ್ಮ ನಂಬರ್ ಕೊಡಿ “ ಎಂದ ಆ ಕಡೆಯ ವ್ಯಕ್ತಿ. 
ಏನೋ ದೊಡ್ಡ ಕೆಲಸ ಮುಗಿಸಿದಂತೆ ಸಮಾಧಾನವಾಯ್ತು ಅವನಿಗೆ, ಪುಣ್ಯಕ್ಕೆ ಅಂದು ಶನಿವಾರವಾದ್ದರಿಂದ ಇನ್ನೆರಡೂ ದಿನ ಆಫೀಸಿಗೆ ಹೋಗುವ ತಲೆನೋವಿಲ್ಲ ಅಂದುಕೊಂಡ. ನಾಯಿಮರಿ ಕೊಟ್ಟ ಉಪಾಯವಿದು ಅನಿಸಿ ಅದರ ಕಡೆ ತಿರುಗಿ “ ಥ್ಯಾಂಕ್ಸ್ ಮರಿ “ ಎಂದ. ಅದು ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದದ್ದು ಎದ್ದು ಪರವಾಗಿಲ್ಲ ಎಂಬಂತೆ ಅಡ್ಡಡ್ಡ ತಲೆಯಾಡಿಸಿತು. ‘ಅರೇ ಇವನಿಗೆ ನಾ ಮಾತಾಡಿದ್ದೆಲ್ಲಾ ಅರ್ಥವಾಗುತ್ತಿದೆಯಲ್ಲ’ ಎಂದುಕೊಂಡ ಅಘೋಷ್ ಅದನ್ನೇ ನೋಡುತ್ತಾ. ಅವನನ್ನೇ ನೋಡುತ್ತಿದ್ದ ಅದು, ‘ ನೀನು ಮಾತನಾಡದಿದ್ದರೂ ಅರ್ಥವಾಗುತ್ತದೆ’ ಎಂದು ನಕ್ಕು ಹೇಳಿದಂತೆ ಭಾಸವಾಯಿತು. ತನ್ನ ಭ್ರಮೆ ಎಂಬಂತೆ ತಲೆ ಕೊಡಹಿದವನು ಎದ್ದು ಅದರ ಬಳಿ ಸಾಗಿ ಅದರ ತಲೆ ಸವರಿ ‘ ಇವನಿಗೆ ಏನು ಹೆಸರಿಡೋದು? ಇವನ ಬಣ್ಣ ನೋಡಿದರೆ ರಸ್ಟ್ ಹಿಡಿದ ಕಬ್ಬಿಣದ ಹಾಗಿದ್ದಾನೆ, ರಸ್ಟೀ ಅಂತಲೇ ಕರಿತೀನಿ’, “ ಏನೋ ಮರಿ, ನಿಂಗೆ ಓಕೆನಾ ರಸ್ಟೀ ಹೆಸರು ? “ ಅಂದ. ಅದು ಆಯ್ತು ಎಂಬಂತೆ ತಲೆಯಾಡಿಸಿ ಅವನ ಕೈ ನೆಕ್ಕಿ ತನ್ನೊಪ್ಪಿಗೆ ಸೂಚಿಸಿತು. ಅಘೋಷ್ ಗೆ ನಂಬಲಾಗಲಿಲ್ಲ. ‘ ನಿಂಗೆ ನಿಜವಾಗಿಯೂ ಅರ್ಥವಾಗ್ತಿದೆಯೇನೋ?’ ಎಂದು ಮನದಲ್ಲೇ ಅಂದುಕೊಂಡ. ‘ಇನ್ನೂ ನನ್ನನ್ನು ನಂಬಲ್ವಾ ’ ಎಂದಂತಾಯ್ತು ಅದು ಕಣ್ಣೊಳಗೆ ಕಣ್ಣಿಟ್ಟು. ಖುಷಿ ಮತ್ತು ತನ್ನ ಮನಸ್ಥಿತಿಯ ಬಗ್ಗೆ ಭಯ ಎರಡೂ ಒಟ್ಟೊಟ್ಟಿಗಾಯ್ತು. ಅಚ್ಚನ್ ಗೆ ಹೇಳಬೇಕೆನಿಸಿತು, ಕರೆ ಮಾಡಿದರೆ ಹೋಗುತ್ತಿಲ್ಲವೆಂದಾದರೆ ಬಹುಶಃ ಫೋನ್ ಡೆಡ್ ಆಗಿರಬೇಕು, ಸೆಲ್ ಫೋನ್ ಕೊಟ್ಟರೆ ಅದನ್ನು ಒಂದು ದಿನ ಕೂಡ ಉಪಯೋಗಿಸದೇ ಕಪಾಟಿನಲ್ಲಿಟ್ಟು ಬೀಗ ಹಾಕಿಟ್ಟಿದ್ದಾರೆ ಈ ಅಚ್ಚನ್ ಅಂದುಕೊಂಡು ರಾತ್ರಿ ಮತ್ತೊಮ್ಮೆ ಮಾಡಿದರಾಯ್ತು, ನೋಡೋಣ ಎಂದುಕೊಂಡ. ರಸ್ಟೀಗೆ ನನ್ನ ಆಲೋಚನೆ ಅರ್ಥವಾಗಿದೆಯಾ ಎಂದು ಅದರ ಕಡೆ ನೋಡಿದರೆ ಅದು ತನ್ನ ಪಾಡಿಗೆ ತಾನು ನೆಲದಲ್ಲಿ ಉರುಳಾಡುತ್ತಿತ್ತು. ಎರಡೂ ದಿನ ಹೊರಗೆಲ್ಲೂ ರಸ್ಟೀಯೊಂದಿಗೆ ಕಳೆದ ಅಘೋಷ್ ಅದನ್ನು ಅಪರಿಮಿತವಾಗಿ ಹಚ್ಚಿಕೊಂಡ. ಭಾನುವಾರ ಸಂಜೆಯಾಗುವ ಹೊತ್ತಿಗೆ ಅವರೀರ್ವರ ನಡುವೆ ಹೇಳಲಾಗದ ಬಂಧವೇರ್ಪಟ್ಟಿತ್ತು. ಅವನ ಅಪಾರ್ಟ್ ಮೆಂಟಿನಲ್ಲಿ ಯಾವುದೇ ರೀತಿಯ ಸಾಕುಪ್ರಾಣಿಗಳನ್ನು ಇಟ್ಟುಕೊಳ್ಳುವುದ್ದಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ರಸ್ಟೀಯನ್ನು ಬಿಡಲಾಗದೇ ಜೀವನದಲ್ಲಿ ಪ್ರಪ್ರಥಮ ಬಾರಿಗೆ ಅಘೋಷ್ ಎಲ್ಲರಿಂದ ಅದರ ಬಗ್ಗೆ ಮುಚ್ಚಿಡುವುದಾಗಿ ಯೋಚಿಸಿದ. ಅದನ್ನು ರಸ್ಟೀಗೆ ಹೇಳಿದ ಕೂಡಾ. 
ಕಾರು ರಿಪೇರಿಗೆ ಮೀರಿ ಹಾಳಾಗಿರಬಹುದೆಂದು ಆತಂಕ ವ್ಯಕ್ತಪಡಿಸಿದ ಸರ್ವೀಸ್ ಸೆಂಟರಿನವರು ಇನ್ನೆರಡು ವಾರವಾದರೂ ಸಮಯಾವಕಾಶ ಕೊಡಲು ಕೇಳಿಕೊಂಡರು. ಹೀಗಾಗಿ ಅಘೋಷ್ ಟ್ಯಾಕ್ಸಿಯ ಮೇಲೆ ಅವಲಂಬಿತನಾಗುವುದು ಅನಿವಾರ್ಯವಾಯಿತು. ಸಧ್ಯದ ಪರಿಸ್ಥಿತಿಗೆಂದು ಒಂದು ಸಾಮಾನ್ಯ ಸೆಲ್ ತೆಗೆದುಕೊಂಡ, ಯಥಾಪ್ರಕಾರ ಅಚ್ಚನ್ ಮಾತಿಗೆ ಸಿಗಲಿಲ್ಲ. ಆಫೀಸಿಗೆ ಹೋಗುವಾಗ ರಸ್ಟೀಗೆ ಬೆಳಗ್ಗಿನ, ಮಧ್ಯಾಹ್ನದ, ಸಂಜೆಯ ತಿಂಡಿಗಳನ್ನು ವಿಂಗಡಿಸಿ ಇಟ್ಟು ಹೋದರೆ ಅವನದನ್ನು ನೀಟಾಗಿ ತಿನ್ನುತ್ತಿದ್ದ. ಉಪಯೋಗಿಸದೇ ಇದ್ದ ಇನ್ನೊಂದು ಟಾಯ್ಲೆಟ್ಟಿನಲ್ಲಿ ಪೇಪರ್ ಹಾಸಿ ಇಟ್ಟರೆ ಅವನೆಲ್ಲಾ ಕೆಲಸ ಮುಗಿಸಿ ಬರುತ್ತಿದ್ದ ಹಾಗೂ ಅವನೆಂದೂ ಬೊಗಳುತ್ತಿರಲಿಲ್ಲ. ಅವನಿಗಾಗಲೇ ಒಂದು ಬುಟ್ಟಿ ತುಂಬಾ ಅವನದೇ ಆಟದ ಸಾಮಾನುಗಳನ್ನು ಎಲ್ಲೆಡೆ ಹುಡುಕಾಡಿ ತಂದಿಟ್ಟಿದ್ದ ಅಘೋಷ್. ತನಗಿಷ್ಟ ಬಂದ ಕಡೆ ಓಡಾಡುತ್ತಾ, ಮಲಗಿ, ಎದ್ದು, ತಿಂದುಕೊಂಡು ಆಟವಾಡಿಕೊಂಡು, ಆರಾಮಾಗಿದ್ದ ರಸ್ಟೀ. ಈ ಇಬ್ಬರ ಸ್ನೇಹ ಮೂರನೆಯವರಿಗೆ ತಿಳಿಯುವ ಅವಕಾಶ ಬರದಂತೆ ಇಬ್ಬರೂ ಎಚ್ಚರ ವಹಿಸುತ್ತಿದ್ದರು. ಅಘೋಷ್ ಆಫೀಸಿನಿಂದ ಮನೆಗೆ ಬಂದು ಕಾಫೀ ಮಾಡಿಕೊಂಡು ಅಡುಗೆ ಮಾಡಿ ತಿಂದು ಮಲಗುವವರೆಗೂ ಅವರೀರ್ವರ ಮೂಕ ಸಂಭಾಷಣೆ ನಡೆಯುತ್ತಿರುತ್ತಿತ್ತು. ಆವಾಗವಾಗ ಅಚ್ಚನ್ ಗೆ ಕರೆ ಮಾಡುತ್ತಿದ್ದ ಅಘೋಷ್, ಕರೆ ಸಿಗದೇ ಅವರೊಂದಿಗೆ ಮಾತಾಡುವುದನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತಿದ್ದ. ಮರುಕ್ಷಣವೇ ರಸ್ಟೀ ಬಂದು ಅವನ ಕೈಗೆ ಫ್ರಿಸ್ಕ್ ಬೀಯೋ, ಹಗ್ಗದ ಆಟದ ಸಾಮಾನೋ ಕೊಟ್ಟು ಆಟಕ್ಕೆ ಎಳೆಯುತ್ತಿತ್ತು. ‘ಕಾರು ರೆಡಿಯಾದರೆ ಊರಿಗೆ ಹೋಗಬೇಕು, ಬೆಳಿಗ್ಗೆ ಬೆಳಿಗ್ಗೆ ಹೋಗೋಣ, ಕಾರಿನವರೆಗೆ ನಿನ್ನ ಬಾಸ್ಕೆಟ್ ಆಲ್ಲಿ ಹಾಕ್ಕೊಂಡು ಹೋಗ್ತೀನಿ, ನಿನ್ನ ನೋಡಿದರೆ ಅಚ್ಚನ್ ಎಷ್ಟು ಖುಷಿ ಪಡುತ್ತಾರೆ ಗೊತ್ತಾ ?’ ಎಂದೆಲ್ಲಾ ಹೇಳುತ್ತಿದ್ದ. ಅಚ್ಚನ್ ಬಗ್ಗೆ ಅದಕ್ಕೆ ಹೇಳಿದರೆ ಕಣ್ಣರಳಿಸಿ ಕೇಳುತ್ತಿತ್ತೇ ಹೊರತು ಏನೂ ಭಾವನೆಗಳನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಆವಾಗೆಲ್ಲಾ ‘ನಿಂಗೆ ಹೊಟ್ಟೆಕಿಚ್ಚು ಮರಿ’ ಎಂದು ಅಘೋಷ್ ನಕ್ಕು ಬಿಡುತ್ತಿದ್ದ. ರಸ್ಟೀ ಸಿಕ್ಕಿದ ದಿನ, ಮೇ ೩೧. ಅದನ್ನು ಕ್ಯಾಲೆಂಡರಿನಲ್ಲಿ ಗುರುತು ಮಾಡಿಟ್ಟುಕೊಂಡಿದ್ದ ಅಘೋಷ್.
ಅಂದು ಜೂನ್ ೫ನೇ ತಾರೀಕು. ಆಫೀಸು ಮುಟ್ಟಿದ್ದಾನಷ್ಟೆ. ಅವನ ಹೆಸರಿಗೊಂದು ಫೋನ್ ಬಂತು, ಆಶ್ಚರ್ಯದಿಂದಲೇ ಆ ಕರೆ ಸ್ವೀಕರಿಸಿದವನು ಆ ಕಡೆಯ ವ್ಯಕ್ತಿ ಮಾತನಾಡಿದ್ದು ಕೇಳುತ್ತಿದ್ದಂತೆ ಪ್ರಜ್ಞಾಶೂನ್ಯನಾಗಿ ಕೆಳಗೆ ಬಿದ್ದು ಬಿಟ್ಟ. ಸುಮಾರು ೧೦-೧೫ ನಿಮಿಷದ ನಂತರ ಅವನು ಕಣ್ಣು ಬಿಟ್ಟಾಗ ಅವನ ಸುತ್ತ ಅವನ ಟೀಮಿನ ಎಲ್ಲರೂ ನಿಂತಿದ್ದರು. ಬಿದ್ದು ಮೈ ಕೈ ನೋಯಿಸಿಕೊಂಡವನಿಗೆ ಅವರ ಸಹಾನುಭೂತಿ, ಅನುಕಂಪದ ನೋಟಗಳಿಂದ ಇನ್ನಷ್ಟು ನೋವಾಯಿತು. ಮೇ ೩೧ರ ಸಾಯಂಕಾಲವೇ ಅವನ ಅಚ್ಚನ್ ಇನ್ನಿಲ್ಲವಾಗಿದ್ದರು. ಅಷ್ಟೂ ದಿನಗಳು ಅವನ ಸೆಲ್ ಫೋನಿಗೆ ಕರೆ ಮಾಡುವ ಪ್ರಯತ್ನವನ್ನು ಲಾಯರ್ ಕೃಷ್ಣಕಾಂತ್ ಹಾಗೂ ಫಾರ್ಮ್ ಹೌಸಿನ ಕೆಲಸದಾಳುಗಳು ಮಾಡಿದ್ದರು. ಅವನ ಹೊಸ ಸ್ಥಿರ ದೂರವಾಣಿಯ ನಂಬರ್ ಅಚ್ಚನ್ ಬರೆದುಕೊಂಡಿರಲಿಲ್ಲವಾದದ್ದರಿಂದ ಹಾಗೂ ಅಲ್ಲಿನ ದೂರವಾಣಿಗಳು ಅಂದು ರಾತ್ರಿ ಸುರಿದ ಭಾರೀ ಮಳೆಗೆ ನಿಷ್ಕ್ರಿಯಗೊಂಡದ್ದರಿಂದ ಅವನನ್ನು ತಲುಪುವ ಯಾವ ಪ್ರಯತ್ನಗಳೂ ಯಶಸ್ವಿಯಾಗಿರಲಿಲ್ಲ. ಅವನಿದ್ದೂ, ಅವರ ಅಂತ್ಯಕ್ರಿಯೆಯನ್ನು ಬೇರಾರೋ ನಿಂತು ಮಾಡಿದ್ದರು, ಅವರ ಕೊನೇ ಸರ್ತಿ ನೋಡುವ ಅವಕಾಶವನ್ನೂ ವಿಧಿ ಮಾಡಿಕೊಟ್ಟಿರಲಿಲ್ಲ. ಕೊನೆಗೆ ಲಾಯರ್ ಅತೀ ಕಷ್ಟಪಟ್ಟು ಯಾರ ಮುಖಾಂತರವೋ ಅವನಿದ್ದ ಕಂಪೆನಿಯ ಹೆಸರನ್ನು ಪತ್ತೆ ಹಚ್ಚಿ ಕರೆ ಮಾಡಿದ್ದರು. 
ಯಾರೋ ಅದಾಗಲೇ ಅವನಿಗೋಸ್ಕರ ಟ್ಯಾಕ್ಸಿ ಬುಕ್ ಮಾಡಿದ್ದರು. ಅನಾಥ ಭಾವದಿಂದ, ಹತಾಶೆಯಿಂದ ಪೂರ್ತಿ ಕುಸಿದು ಹೋಗಿದ್ದವನಿಗೆ ಮನೆಗೆ ಹೋಗಿ ರಸ್ಟೀಯನ್ನೂ ಕರೆದುಕೊಂಡು ಹೋಗಬೇಕೆನಿಸಿತು ಆ ಕ್ಷಣಕ್ಕೆ. ತನ್ನ ವಿಳಾಸ ಹೇಳಿ ಕರ್ಚೀಫಿನಿಂದ ಮುಖ ಮುಚ್ಚಿ ಕುಳಿತುಕೊಂಡ. ಮನೆ ಮುಟ್ಟುತ್ತಿದ್ದಂತೆ ರಸ್ಟೀಯನ್ನು ಕರೆದ. ಬಾಗಿಲ ಶಬ್ದ ಕೇಳುತ್ತಿದ್ದಂತೆ ಓಡಿ ಬರುತ್ತಿದ್ದವನು ಇಂದು ಮನೆಯಿಡೀ ಕಾಣಲಿಲ್ಲ. ಅವನ ಆಟದ ಸಾಮಾನುಗಳು ಎಂದಿನಂತೆ ಮನೆ ತುಂಬಾ ಹರಡಿದ್ದವು. ಪದೇ ಪದೇ ಅವನ ಹೆಸರು ಕರೆಯುತ್ತಾ ರೂಮಿಂದ ರೂಮಿಗೆ ಓಡಾಡತೊಡಗಿದ. ಮೊದಲೇ ಪ್ರೀತಿಸುವ ಒಂದು ಜೀವವನ್ನು ಕಳೆದುಕೊಂಡವನಿಗೆ ರಸ್ಟೀ ಕಾಣದೇ ಈಗ ಪೂರ್ತಿ ಹುಚ್ಚು ಹಿಡಿದಂತಾಯ್ತು. ಕೊನೆಗೆ ವಾರ್ಡ್ ರೋಬಿನಲ್ಲಿ ಅಡಗಿ ಕೂತಿರಬಹುದು ಎಂದವನಿಗೆ ಅಲ್ಲೂ ಕಾಣಲಿಲ್ಲ, ಆದರೆ ಅಲ್ಲಿ ಪೋಸ್ಟಲ್ ಡಿಪಾರ್ಟ್ ಮೆಂಟಿನಿಂದ ಬಂದ ದೊಡ್ಡ ಕವರೊಂದು ಕಾಣಿಸಿತು ಮತ್ತು ಅದರ ಮೇಲೆ ರಸ್ಟೀಯ ಕಾಲ ಗುರುತುಗಳೂ ಇದ್ದವು. ಕುತೂಹಲದಿಂದ ಅದನ್ನು ತೆರೆದವನಿಗೆ ಕಂಡದ್ದು ಅಚ್ಚನ್ ಬರೆದಿಟ್ಟಿದ್ದ ವಿಲ್, ಇಡೀ ಆಸ್ತಿಯನ್ನು ಅವನ ಹೆಸರಿಗೆ ಬರೆದಿದ್ದರು. ಅದನ್ನು ನೋಡುತ್ತಿದ್ದಂತೆ ದುಃಖ ಉಮ್ಮಳಿಸಿ ಬಂತು. ಕುಸಿದು ಕುಳಿತು ಜೋರಾಗಿ ಕಿರುಚಿ ಅಳಲಾರಂಭಿಸಿದ. ಅಳುತ್ತಿದ್ದವನು ಇದ್ದಕ್ಕಿದ್ದ ಹಾಗೆ ನಿಲ್ಲಿಸಿ ಕವರ್ ಮೇಲಿನ ತಾರೀಕು ನೋಡಿದ. ಅದು ಮನೆಗೆ ಬಂದದ್ದು ಜೂನ್ ೩ನೇ ತಾರೀಕು, ಸೋಮವಾರ. 
ಹೊರಗೋಡಿ ಅಕ್ಕಪಕ್ಕದ ಮನೆಗಳ ಬಾಗಿಲು ಬಡಿದು “ರಸ್ಟೀಯನ್ನು ನೋಡಿದಿರಾ, ಒಂದು ನಾಯಿ ಮರಿ, ರಸ್ಟ್ ಹಿಡಿದ ಕಬ್ಬಿಣದ ಹಾಗಿತ್ತು, ಅವನಿಗೆ ಮಾತಾಡಿದ್ದೆಲ್ಲಾ ಅರ್ಥವಾಗುತ್ತಿತ್ತು “ ಎಂದೆಲ್ಲಾ ಬಡಬಡಿಸತೊಡಗಿದ. ಅವನ ಗಲಾಟೆಗೆ ಅಪಾರ್ಟ್ ಮೆಂಟಿನ ಜನರೆಲ್ಲಾ ಗುಂಪುಗೂಡಿ ಅವನನ್ನು ವಿಚಿತ್ರವಾಗಿ ನೋಡತೊಡಗಿದರು. ಒಂದಿಬ್ಬರು “ ನಾಯಿನಾ?, ಅಪಾರ್ಟ್ ಮೆಂಟ್ ರೂಲ್ಸ್ ಗೊತ್ತಿಲ್ಲ್ವಾ ?, ಈಯಪ್ಪಂಗೆ ತಲೆ ಕೆಟ್ಟಿರಬೇಕು “ ಎಂದಾಡಿಕೊಳ್ಳತೊಡಗಿದರು. ಮಾತನಾಡಿ ಪ್ರಯೋಜನವಿಲ್ಲದಾಗ ಅಘೋಷ್ ಮೂಕನಾದ, ಕಣ್ಣಲ್ಲಿ ಅಚ್ಚನ್ ಮತ್ತು ರಸ್ಟೀ ಬಿಂಬ ತುಂಬತೊಡಗಿತು. ಅಷ್ಟರಲ್ಲಿ ಸೆಕ್ಯೂರಿಟಿಯೊಡನೆ ಮೇಲೆ ಬಂದ ಟ್ಯಾಕ್ಸಿ ಡ್ರೈವರ್, “ ಏನ್ಸಾರ್, ಕಾದೂ ಕಾದೂ ಸಾಕಾಯ್ತು. ಅದೆಲ್ಲೋ ಕೇರಳಕ್ಕೆ ಹೋಗಬೇಕು ನೀವು ಅಂದ್ರು ನಿಮ್ಮಾಫೀಸಿನವರು, ಬರ್ತೀರಾ ಇಲ್ವಾ “ ಎಂದ. ಮಂಜಾದ ಕಣ್ಣೊರೆಸಿಕೊಂಡ ಅಘೋಷ್ “ ಬರ್ತೀನಿ, ನಡೀರಿ “ ಎಂದುಸುರಿದ. 

Published in Vishwavani Viraama on 24/07/16

No comments:

Post a Comment