Friday, May 9, 2014

ಮಾನೂ

ಮಾನೂ, ನನ್ನ ಅತೀ ಇಷ್ಟದ ಕಾದಂಬರಿಗಳಲ್ಲಿ ಒಂದು. ಜಯವಂತ ದಳವಿಯವರ (ಮರಾಟಿ ಮೂಲ) , ಚಂದ್ರಕಾಂತ ಪೋಕಳೆಯವರ ಅನುವಾದದ ಈ ಕಾದಂಬರಿಯ ಕಥಾ ವಸ್ತು ಸಣ್ಣ ಗ್ರಾಮವೊಂದರ ದೇವದಾಸಿ ಮನೆಗೆ ಸೇರಿದ ಮಾಹಾನಂದ (ಮಾನೂ) ಳ ಸುತ್ತ ಗಿರಕಿ ಹೊಡೆಯುತ್ತದೆ. ಪರಂಪರಾಗತವಾಗಿ ಬಂದ ವೃತ್ತಿಯ ಬಗ್ಗೆ ಒಲವಿರದ, ಮದುವೆ ಕನಸು ಕಾಣುವ, ಕುಲೀನ ಮನೆತನದವಳಂತೆ ಆಚಾರ, ವಿಚಾರವಿರುವ ಸುಂದರಿಯೋರ್ವಳ ದುರಂತ ಪ್ರೇಮ ಕಥನವಿದು.

ಮನೆಗೆ ತುಷಾರ, ತರಂಗ, ಮಯೂರ, ಕಸ್ತೂರಿ ಇವಿಷ್ಟನ್ನೂ ತರೆಸುತ್ತಿದ್ದರು ತಂದೆಯವರು. ಆವಾಗ ತುಷಾರದಲ್ಲಿ ಎರಡು ಮೂರು ಕಂತುಗಳಲ್ಲಿ ಈ ಕಾದಂಬರಿ ಪ್ರಕಟವಾಗಿತ್ತು. ಅದನ್ನು ಓದಿದ್ದು ಎಷ್ಟು ಸಲವೋ!

ಇದಕ್ಕಿಂತೆ ಮಾನೂ ಚಿತ್ರ ಬರೆಯಬೇಕೆಂದು ಆಸೆಯಾಯಿತು. ಸರಿ ಬರೆಯಲು ಶುರು ಹಚ್ಚಿಕೊಂಡೆ, ಮಾಡ್ರನ್ ಹುಡುಗಿಯ ಚಿತ್ರ ಅಂದರೆ ಚೂಪು ಮೂಗು, ಗದ್ದ, ಕಣ್ಣುಗಳನ್ನ ಮೊದಲು ಬರೆದೆ. ಆಮೇಲೆ ಸಾಂಪ್ರದಾಯಿಕ ಮಾನೂವನ್ನು ಅವಳಲ್ಲಿ ತುಂಬಿಸಿದೆ. ಅವಳ ತುರುಬು, ಮುಡಿಯುವ ಅಬೋಲಿ ಹೂವಿನ ಮಾಲೆ, ರಕ್ತ ಕೆಂಪು ಕುಂಕುಮ ಏನೋ ಬರೆದೆ, ಆದರೆ ಮೂಗುತಿ ಮರೆತೇ ಹೋಯಿತು.

ಬಾಬು ಅಂದರೆ ಕಾದಂಬರಿಯ ಕಥಾನಾಯಕ ಮಾನೂವನ್ನು ಕಂಡಾಗ ಅವಳು ತುಳಸೀ ಕಟ್ಟೆಯ ಎದುರು ನಿಂತು ದೀಪವಿಟ್ಟು ಕೈ ಮುಗಿದು 'ಶುಭಂ ಕರೋತಿ' ಹೇಳುತ್ತಿರುತ್ತಾಳೆ. ಸುತ್ತಲಿನ ಗಿಡ ಮರಗಳ ಮಧ್ಯೆ, ದೀಪದ ಬೆಳಕಿನಲ್ಲಿ ಅವನಿಗೆ ಅವಳ ಮುಖ ನೀಲಾಂಜನದಂತೆ ಕಾಣುತ್ತದೆ. ಅವಳ ಚಿತ್ರ ಅಚ್ಚೊತ್ತಿದಂತೆ ಮನಸ್ಸಲ್ಲಿ ಕೂತಿತ್ತು. ನನ್ನ ಕಲ್ಪನೆಯ ಮಾನೂವಿನ ತುರುಬಿನಂದಲೇ ಬಳ್ಳಿ, ಎಳೆಗಳ ತಂದೆ.

Extra:- ಚಿತ್ರ ಬರೆದ ಮೇಲೆ ಮತ್ತೆ ಮಾನೂವನ್ನ ಓದಬೇಕಿನಿಸಿತು. ಹಳೆಯ ತುಷಾರಗಳು ಗೆದ್ದಲು ಹಿಡಿದು ಹಾಳಾಗಿ ಹೋಗಿದ್ದವು. ಇರೋ ಪುಸ್ತಕದ ಅಂಗಡಿಗಳಲೆಲ್ಲ ಹುಡುಕಾಯ್ತು, ಸಿಕ್ಕಿರಲಿಲ್ಲ. ಫೇಸ್ಬುಕ್ ಅಲ್ಲಿ ಈ ಪುಸ್ತಕ ಎಲ್ಲಿ ದೊರೆಯಬಹುದು ಎನ್ನುವ ಒಂದು ಪೋಸ್ಟ್ ಹಾಕಿದ್ದೆ. ಅವಧಿ ಕೂಡ ನನ್ನ ಪೋಸ್ಟ್ ಅನ್ನು ಪ್ರಕಟಿಸಿತ್ತು. ಅದನ್ನು ನೋಡಿದ ಜಗದೀಶ್ ಕೊಪ್ಪ ಅವರು ಚಂದ್ರಕಾಂತ ಪೋಕಳೆಯವರ ಫೋನ್ ನಂಬರ್ ನನಗೆ ಕೊಟ್ಟಿದ್ದರು. ಅವರ ಬಳಿ ಮಾತಾಡಿದ್ದೆ. ಅವರು ಈ ಪುಸ್ತಕವಲ್ಲದೆ ಅವ್ರ ಅನುವಾದದ ಇತರೆ ಪುಸ್ತಕಗಳನ್ನೂ ನನಗೆ ಕಳುಹಿಸಿಕೊಟ್ಟರು. ಮತ್ತೊಮ್ಮೆ ಅವರೆಲ್ಲರಿಗೂ ನನ್ನ ದೊಡ್ಡ ಥ್ಯಾಂಕ್ಸ್!

ನನ್ನೀ ಚಿತ್ರ ನನ್ನ ಕಲ್ಪನೆಯಲ್ಲಿರುವ ಮಾನೂ.

ಅತೀ ಸುಂದರ ಚಲನಚಿತ್ರವಾಗಬಲ್ಲ ಕಥೆಯುಳ್ಳ ಕಾದಂಬರಿಯಿದು.

No comments:

Post a Comment