Sunday, February 5, 2012

ಅಮ್ಮ

ನನ್ನ ಕಂದ ಹೊಟ್ಟೆಯಲ್ಲಿ ಮಿಸುಗುವಾಗ ನಿನ್ನ ನೆನಪು
ನಾ ಹೀಗೆ ಒದೆಯುವಾಗ ನೀ ಇದೇ ಸುಖ ಪಟ್ಟೆಯೇನು ?
ನನ್ನ ಕಂದನಿಗೆ ಹಾಲೂಡಿಸುವಾಗ ನಿನ್ನ ನೆನಪು
ನಾ ನಿನಗೆ ಕಚ್ಚಿದಾಗ ನೀ ಇದೇ ನೋವು ತಿಂದೆಯೇನು?
ನನ್ನ ಕಂದನಿಗೆ ನೀರೆರೆಯುವಾಗ ನಿನ್ನ ನೆನಪು
ನಾ ಅಳುವಾಗ ನೀ ಅತ್ತೆಯೇನು ?
ನನ್ನ ಕಂದ ನಿದ್ದೆಗೆ ಸತಾಯಿಸುವಾಗ ನಿನ್ನ ನೆನಪು
ನನ್ನ ಹೊತ್ತು ನೀನೂ ರಾತ್ರಿಯೀಡಿ ತಿರುಗಿದೆಯೇನು ?
ನನ್ನ ಕಂದ ನೋವಿಂದ ಅಳುವಾಗ ನಿನ್ನ ನೆನಪು
ನಾ ನೋವು ತಿನ್ನುವಾಗ ನೀನೂ ಇದೇ ಯಾತನೆ ಪಟ್ಟೆಯೇನು ?
ನನ್ನ ಕಂದ ಊಟ ತಿನ್ನದಾಗ ನಿನ್ನ ನೆನಪು
ನಾ ಊಟ ಬಿಟ್ಟಾಗ ನೀನೂ ಅತಂಕ ಪಟ್ಟೆಯೇನು?
ನನ್ನ ಕಂದ ಬೆಳೆದು ನನ್ನಿಂದ ದೂರವಾಗುವ ಹೆದರಿಕೆ ನನಗೆ
ನಾ ನಿನ್ನಿಂದ ದೂರವಾದಾಗ ಮೌನವಾಗಿ ನಿಂತೆಯಲ್ಲ ?
ಇದೇ ಹೆದರಿಕೆ ನಿನಗೂ ಆಗಿತ್ತೇ?
ಅಮ್ಮ ಕ್ಷಮಿಸು ತಿಳಿದೋ-ತಿಳಿಯದೆಯೋ ನಾ ಮಾಡಿದ ತಪ್ಪುಗಳಿಗೆ....

3 comments:

  1. ತುಂಬ ಚೆನ್ನಾಗಿದೆ ನಿಮ್ಮ ಅಂತರಾಳದ ಬೆಳಕು. ತುಂಬ ಚೆನ್ನಾಗಿ ಬರೆದಿದ್ದೀರ ತುಂಬ ದನ್ಯವಾದಗಳು. ಮುಂದೆಯೂ ಕೂಡಾ ನಿಮ್ಮ ಬರಹವನ್ನು ಓದು ವ ಭಾಗ್ಯ ಸಿಗಲಿ...!

    ReplyDelete