ಮೈ ತುಂಬಾ ಎಣ್ಣೆ ಹಚ್ಚಿ ಬಿಟ್ಟ
ಮಗುವಿನ ಕೈ ಕಾಲಿನ ಗುರುತುಗಳು,
ಮಗುವಿನ ಕೈಗೆ ಸಿಕ್ಕಷ್ಟು ಎತ್ತರಕ್ಕೂ
ಗೀಚಿದ ಮುದ್ದು ಮುದ್ದು ಚಿತ್ತಾರಗಳು,
ಅಲ್ಲಿ ಮೂಡಿದ ಆಗಸ, ನಕ್ಷತ್ರ, ಹಕ್ಕಿಗಳು.
ನಲ್ಲನ ಪಿಸುಮಾತಿಗೆ ನನ್ನಷ್ಟೇ
ಕೆಂಪಾಗಿ ಹೋದ ಗೋಡೆಯ ತುಣುಕುಗಳು,
ಸಂತಸ-ಸಂತಾಪ, ಹಾರಾಟ-ಚೀರಾಟ ಎಲ್ಲವನ್ನೂ
ಕಂಡು ತಿರು ತಿರುಗಿ ನಕ್ಕ-ಅತ್ತ ಪಂಖಗಳು,
ಸಹಜವಾಗಿ ಮನೆ-ಮನ ಬೆಳಗಿದ ಕೃತಕ ದೀಪಗಳು.
ಹೊಸ ರುಚಿಯ ಜಯದ ಬಹುಮಾನಗಳಿಗೆ
ನಾಚಿ ತಲೆ ತಗ್ಗಿಸಿದ ಅಡುಗೆ ಮನೆಯ ಕಪಾಟುಗಳು
ಉಳಿದದ ಚೆಲ್ಲುವಾಗ, ಒಡೆದ ಹಾಲು ಸುರಿಯುವಾಗ
ನನ್ನಷ್ಟೇ ನೊಂದು ಪರಿತಾಪಗೊಂಡ ಸಿಂಕುಗಳು.
ಪಟದ ಹಾಗೂ ಕಲ್ಲ,ಬೆಳ್ಳಿಯ ವಿಗ್ರಹದ ದೇವರಷ್ಟೇ
ಜತೆಯಾಗಿ ನಿಂತು ಮನಕೆ ಶಕ್ತಿ ಕೊಟ್ಟು
ಸಂತೈಸಿದ ದೇವರ ಮನೆಯ ಗೋಡೆಗಳೂ,
ಬಾಗಿಲಿಗೆ ಹಚ್ಚಿದ ಪುಟ್ಟ ಪುಟ್ಟ ಗಂಟೆಗಳು.
ಅಗಲದಂತೆ ಬಲವಾಗಿ ಗೋಡೆಯನ್ನಪ್ಪಿ
ಸಮಯ, ದಿನಾಂಕ, ಪಂಚಾಂಗಗಳ
ಹೊತ್ತು ಇದ್ದೂ ಇಲ್ಲದಂತಾದ
ಗೋಡೆಯ ಮೊಳೆಗಳು, ಅಂಟಣಿಕೆಗಳು
ದೇವರೇ, ಈ ಎಲ್ಲವನ್ನೂ ಬಿಟ್ಟು ಹೋಗಲೇಬೇಕೆ ?
ಹೊಸ ಬಣ್ಣ ತೊಡುವ ಈ ಮನೆಯೊಂದಿಗೆ
ನೆನಪುಗಳ ಸಂಭ್ರಮವೂ ಮುಗಿಯುವುದಲ್ಲಿಗೆ
ಚಿತ್ತಾರಗಳೂ, ಗೋಡೆಗಳೂ, ಘಂಟೆಗಳು
ಅಳುತ್ತಿವೆಯೆ ಮೂಕವಾಗಿ ನಮ್ಮ ನಿಮ್ಮಂತೆ?
aha! ivatte nodide. thanks.
ReplyDelete