ಮುಂಜಾವಿನ ಚಳಿಗೇಳುವ ಕಲ್ಲು ಬೆಂಚುಗಳು
ರೆಡಿಯಾದವು, ಸೊಸೆಯಂದಿರ ಬಗೆಗಿನ ದೂರಾಲಿಸಲು
ವೃದ್ಧರ ಕಾಲು ಸೋತ, ದಿಟ್ಟ ನಡಿಗೆಯ ಚೆಂದ ಸವಿಯಲು
ಆಗೀಗ ಕಾಣುವ ಯೌವನದ ಬಿರುಸು ಹೆಜ್ಜೆಗಳಿಗೆ ಅದುರಲು
ಕಲ್ಲು ಬೆಂಚಿಗೆ ಬಾಯಿಯಿದ್ದರೆ ಹೇಳುತ್ತಿತ್ತು ಎಲ್ಲಾ ಕಾಯಿಲೆಗಳ ವಿವರ
ಎಲ್ಲಾ ಅಮ್ಮಂದಿರಿಗೆ ಇರುವ ಮದುವೆ ಆದ ಮೇಲೆ ಮಗ ಬದಲಾದ ಪ್ರವರ
ನಡುನಡುವೆ ಪಾಕಶಾಲಾ ಪ್ರಯೋಗಗಳೂ, ಇಲ್ಲವೇ ಪ್ರಧಾನಿ ಹಣೆಬರಹಗಳೂ
ಶೇರು ಮಾರುಕಟ್ಟೆಯ ಬಿಟ್ಟಿರಾ ಸ್ವಾಮೀ, ಎಲ್ಲದರ ನಡುವೆ ನುಸುಳಬಹುದು ನಿತ್ಯಾನಂದ ಸ್ವಾಮಿ!
ಮಧ್ಯಾಹ್ನದ ಬಿಸಿಲಲ್ಲಿ ಕಾದೇ ಕಾದೀತು ಕಲ್ಲೂ, ಬೆಂಚೂ
ಬಂದವರು ಒಂದಿಷ್ಟು ಬಿಸಿಲಲ್ಲಿ ಬೆಂದವರು, ಪ್ರೇಮದಲ್ಲಿ ನೊಂದವರು
ಮಾಲಲ್ಲೂ, ಥಿಯೇಟರನಲ್ಲೋ ಜಾಗ ಸಿಗದವರು
ತಲೆ ಬಿಸಿಗೋ, ಮನೆಯ ಕಾವಿಗೋ ಮರದ ತಂಪನರಸಿ ಬಂದವರು
ಕರ್ಚೀಫ್ಫು ಹಾಕಿ ಅಲ್ಲೇ ತೂಕಡಿಸಿಯಾರು,
ಗಾಳಿಯೂ ಕರುಣೆ ತೋರಿಸಿ ಅನ್ನಬಹುದು ಉಫ್ ಎಂದು!
ಮರಗಳೂ ಸರಿಸಿಯಾವು ಎಲೆಗಳ ಇನ್ನೂ ಹತ್ತಿರ, ಬಿಸಿಲು ತಾಕದಂತೆ
ಹಗಲಿಡೀ ಕಾದ ಸೂರ್ಯನಾದ ಕೆಂಪು-ಕೇಸರಿಯೀಗ
ಶುರುವಾಯಿತು ಚಿಣ್ಣರ ಮೆರವಣಿಗೆ ಪಾರ್ಕಿಗೀಗ.
ತಳ್ಳು ಗಾಡಿಗಳಲಿ ಬಂದರು ಪುಟ್ಟ ಪುಟ್ಟ ದೇವತೆಗಳು
ಬಣ್ಣ ಬಣ್ಣದ ತೊಡುಗೆಯುಟ್ಟ ಪುಟ್ಟ ಅಮ್ಮಗಳೂ!
ಪೋರರ ಚಿಲಿಪಿಲಿ ಕೇಳಲು ಆದವು ಹಕ್ಕಿಗಳು ಗಪಚುಪ್
ಮರಗಳು ಖುಷಿ ತಡೆಯಲಾರದೆ ಗಲಗಲ ನಕ್ಕು ಎಲೆಯುದುರಿಸಿದವು.
ಹೂಗಳದ್ದಂತೂ ತೀವ್ರ ಸ್ಪರ್ಧೆ ಮುದ್ದು ಮರಿಗಳ ನಗುವಿನೊಂದಿಗೆ
ಸುಮ್ಮನೆ ಕೂತ ಬೆಂಚುಗಳು ಕಣ್ಣು-ಕಿವಿಯುಜ್ಜಿ ಪುನೀತರಾದವು.
ಈ ಕ್ಷಣಕೆ ಕಾದ ಉಯ್ಯಾಲೆಗೀಗ ಸುಖದ ಜೀಕು!
ಜಾರು ಬಂಡಿಗೂ, ತಿರುಗು ಮಣೆಗೂ ಸುಯ್ಯನೆ ನಿಟ್ಟುಸಿರು!
ಏತವೂ ನಕ್ಕಿತು ಸುಖಾ ಸುಮ್ಮನೆ ಹಾಗೆ, ಹೀಗೆ
ಕಬ್ಬಿಣದ ಕಂಬಗಳ, ಬಿದ್ದಿದ್ದ ಮರಳ ಜನ್ಮ ಪಾವನ.
ಪಾರ್ಕಿನ ಜಗವಿಡೀ ತುಂಬಿದ ನಗು, ಚೀರಾಟ, ಕೇಕೆ.
ಹೊರ ಹೋದ ಮಕ್ಕಳು ಮನೆಗೆ ಮರಳಿದಾಗ ಏಳುವ ಸಂಭ್ರಮದ ಹಾಗೆ.
ಇಡೀ ಕವನ ನಮಗೆ ದಿನ ನಿತ್ಯ ಕಣ್ಣಿಗೆ ಕಾಣುವ ವಿವರಗಳನ್ನು ಮನ ಮಿಡಿಯುವಂತೆ ತೆರೆದಿಡುತ್ತಾ ಚಿಂತನೆಗೆ ಹಚ್ಚುತ್ತದೆ.
ReplyDelete