Wednesday, April 22, 2020

ಊರಿನಲ್ಲಿ ನಾವೋ ನಮ್ಮಲ್ಲಿ ಊರೋ



ಒಂದು ಊರು ಇಷ್ಟವಾದರೆ ಅದರಲ್ಲಿರುವ ಎಲ್ಲವೂ ಚೆಂದ ಕಂಡೀತು. ಊರು ಅಂದರೆ ಏನು? ಅದರಲ್ಲಿ  ನಾಲ್ಕೇ ನಾಲ್ಕು ಮರಗಳಿರುವ ಪುಟ್ಟ ಪಾರ್ಕು, ಮೀನಿನ ವಾಸನೆ ಹೊತ್ತು ತರುವ ಹೊಳೆ  ಅಥವಾ ಸಮುದ್ರದ ಮೇಲಿನ ಗಾಳಿ, ತರಕಾರಿ ಅಥವಾ ಮೀನು ಬುಟ್ಟಿ ಹೊತ್ತು ತರುವ ಹೆಂಗಸು, ಹೆಸರಿಗೆ ನಾಲ್ಕು ಅಂಗಡಿಗಳಿರುವ ಕೆಳ ಪೇಟೆ ಅಲ್ಲಿರಬಹುದು. ಅಷ್ಟೇ ಅಲ್ಲ,  ಓಬಿರಾಯನ ಕಾಲದ ಅಂಗಿಗಳಿರುವ ಮಾಸಿದ ಬೋರ್ಡ್ ಹೊತ್ತು ನಗುವ ಬಟ್ಟೆ ಅಂಗಡಿ, ಒಂದಿಷ್ಟು ಟಯರ್ರುಗಳು ಮತ್ತು ಬಗೆ ಬಗೆಯ ಗಾಡಿಗಳಿಗೆ ಹಾಕುವ ಎಣ್ಣೆಯ ಡಬ್ಬಗಳು, ಸ್ಪಾನರ್ರು, ನಟ್ ಬೋಲ್ಟ್ ತುಂಬಿಕೊಂಡು ತಾನೇನು ಎಂದು ತಾನೇ ಬೆರಗಾಗಿ ಕೂತ ಹೆಸರು ಏನೆಂದೇ  ಓದಲಾಗದಷ್ಟು ಮಸಿಯಾಗಿರುವ ಬೋರ್ಡಿನ ಅಂಗಡಿ, ಬಳೆ, ಕ್ಲಿಪ್ಪು, ಹೇರ್ ಬ್ಯಾಂಡ್, ಹಣೆಬೊಟ್ಟು, ಮದರಂಗಿ ಪುಡಿಯ ಪೊಟ್ಟಣ ಅದರೊಂದಿಗೆ ಬಸ್ಸು, ಕಾರು, ವಿಮಾನ ಎಂದೆಲ್ಲಾ ಮಕ್ಕಳಾಟಿಕೆ ಸಾಮಾನುಗಳಿಂದ ತುಂಬಿ ತುಳುಕುತ್ತಿರುವ, ಇವಾಗಷ್ಟೇ ಗಡದ್ದಾಗಿ ಊಟ ಮುಗಿಸಿದವನಂತೆ ಕಾಣುವ ಫ್ಯಾನ್ಸಿ ಸ್ಟೋರು, ಊರು ಅಂದ ಮೇಲೆ ನಾನಿಲ್ಲದರಾದೀತೇ ಅನ್ನುವ ಜ್ಯೂಸ್ ಮತ್ತು ಐಸುಕ್ರೀಮೂ ಸಿಗುವ ಒಂದು ಪುಟ್ಟ ಹೋಟೆಲ್ಲು ಎಲ್ಲಾ ಸೇರಿ ಆಗಿರುವ ಮೇಲು ಪೇಟೆಯೂ ಇರಬಹುದು. ಇಡೀ ಊರಿಗೆ ಘಂಟೆ ಹೊಡೆದೋ, ಅಜಾನ್ ಹೇಳಿಯೋ ಎಚ್ಚರಿಸುವ ಒಂದು ದೇವಸ್ಥಾನ, ಚರ್ಚು ಮತ್ತೊಂದು ಮಸೀದಿ. ಒಂದು ಸರಕಾರಿ ಶಾಲೆ, ಅದರ ಪಕ್ಕದಲ್ಲೇ ಶಾಲೆಯ ಮಕ್ಕಳ ಕಣ್ಣಲ್ಲಿ ಆಸೆ ಹುಟ್ಟಿಸುವ ಥರವಾರಿ ಪೆನ್ನು, ಪೆನ್ಸಿಲ್ಲು, ಸುಗಂಧಭರಿತ ರಬ್ಬರ್ರುಗಳಿರುವ ರೀಗಲ್ ಸ್ಟೋರ್ಸ್! ಹೆದ್ದಾರಿಗೆ ಅಂಟಿರುವ ಕಡೆ ನಿಂತ ಒಂದಾನೊಂದು ಕಾಲದಲ್ಲಿ ಹಳದಿಯಾಗಿದ್ದ, ಕನ್ನಡ ಇಂಗ್ಲೀಷು ಎರಡರಲ್ಲೂ ಊರಿನ ಹೆಸರಿರುವ ನಾಮಫಲಕ.
ಇಂತಹ ಊರುಗಳಲ್ಲೇ ಜೀವನವಿಡೀ ಕಳೆದು ಬಿಡಬಹುದೇ? ಶಾಲೆಯಲ್ಲಿ ಮಾಸ್ತರರಾಗಿಯೋ, ಪುಟ್ಟ ಕಿರಾಣಿ ಅಥವಾ ತರಕಾರಿ ಅಂಗಡಿಯನ್ನಿಟ್ಟುಕೊಂಡೋ ಬದುಕಿಬಿಡಬಹುದೇನೋ. ದೇವಸ್ಥಾನದ ತೇರು, ಸ್ನೇಹಿತರೊಂದಿಗೆ ಪುಟ್ಟ ತಿರುಗಾಟಗಳು, ರಾಜಕೀಯದ, ಯಕ್ಷಗಾನದ ಕುರಿತಾದ ಚರ್ಚೆಗಳೆಲ್ಲವೂ ಸುಂದರವಾಗಿರುತ್ತವೆ. ರಜೆಯಲ್ಲಿ ಬರುವ ನೆಂಟರಿಗೆ ಕಮಟು ಎಣ್ಣೆ ವಾಸನೆಯ ಗೋಳಿಬಜೆ ತಿನ್ನಿಸುತ್ತಾ ಇದೇ ಇಡೀ ಪ್ರಪಂಚದಲ್ಲಿ ಸಿಗುವ ಅಂಥೆಂಟಿಕ್ ಗೋಳಿಬಜೆಯೆಂದು ಒಂದು ಚೂರು ಸಂದೇಹವಿಲ್ಲದಂತೆ ಘಂಟಾಘೋಷವಾಗಿ ಸಾರಿ ನಾವು ಅದನ್ನೇ ನಂಬುತ್ತಾ ಬದುಕಿಬಿಡುತ್ತೇವೆ. ನಾವು ಬೇರೆ ಊರಿಗೆ ಹೋದರೂ ನಮ್ಮೂರಲ್ಲಿ ಹೀಗಾಗುತ್ತೆ ಗೊತ್ತಾ ಎಂದು ನಾವಿದ್ದ ಊರಿನ ರೆಪ್ರೆಸೆಂಟಿವ್ ಗಳಾಗುತ್ತೇವೆ.  ಅಲ್ಲಿನ ದೇವರು ಎಷ್ಟು ಕಾರಣೀಕವೆಂದರೆ ನಮಸ್ಕಾರ ಹಾಕದ ಹೊರತು ಗಾಡಿ ಮುಂದೆ ಹೋಗಲೂ ಬಿಡುವುದಿಲ್ಲ, ಪ್ರತೀ ತೇರಿಗೂ ಮಳೆ ಬಂದೇ ಬರುತ್ತದೆ ಇತ್ಯಾದಿ ನಂಬಿಕೆಗಳ ಅಟ್ಟದಲ್ಲಿ ಭದ್ರವಾಗಿ ಕುಳಿತಿರುತ್ತೇವೆ. ಪ್ರತೀ ಊರಿಗೆ ಅಂಟಿರುವ ಕಾಡಿನಲ್ಲೂ ಪುರಾಣದ ನಂಟಿರುತ್ತದೆ, ಹನುಮನ ಹೆಜ್ಜೆ, ಭೀಮನ ಕಲ್ಲಿರುತ್ತವೆ.  ಬೇರೆ ಯಾವ ಊರ ಕೇಪುಳವೂ ಈ ಊರಿನ ಬೇಲಿ ಬದಿಯ ಕೇಪುಳದಷ್ಟು  ಕೆಂಪಿರುವುದಿಲ್ಲ ಎಂಬುದು ಬರೀ ನಂಬಿಕೆಯಲ್ಲ, ಸತ್ಯವೂ ಆಗಿಬಿಟ್ಟಿರುತ್ತದೆ. ಅಷ್ಟರವರೆಗೆ ಊರು ನಮ್ಮನ್ನು ವ್ಯಾಪಿಸಿಕೊಂಡು ರಕ್ತದಲ್ಲಿ ಬೆರೆತಿರುತ್ತದೆ.
ಯಾವಾಗ ಜೀವನ ಯಾವುದೇ ಅಪಮಾನ, ತಿರಸ್ಕಾರ, ತಾತ್ಸಾರಗಳನ್ನು , ವಿಷದಷ್ಟು ಕಹಿಯನ್ನು ಉಗುಳುವುದಿಲ್ಲವೋ ಅಲ್ಲಿಯವರೆಗೂ ಊರು ನಮ್ಮದಾಗುತ್ತದೆ, ಅಲ್ಲಿಯ ಎಲ್ಲರೂ, ಹೊಳೆ, ಕೆರೆ, ಅಂಗಡಿ, ಸಮುದ್ರ ಎಲ್ಲವೂ ನಮ್ಮದಾಗುತ್ತದೆ. ಉಣ್ಣಲು ಕೊರತೆಯಿಲ್ಲದೇ ಸ್ಥಾನಮಾನಗಳು, ಜಾತಿ ಧರ್ಮಗಳು ಎಲ್ಲಿಯವರೆಗೂ ಗೌರವಿಸಲ್ಪಡುತ್ತವೆಯೋ ಅಲ್ಲಿಯವರೆಗೂ ಆ ಊರು ಚೆನ್ನ.  ಎಲ್ಲೋ ಒಂದು ಸೋಲು, ಒಂದು ಅವಮಾನ ಬಂದು ಚಿವುಟಲಿ ಇಡೀ ಊರು ಇದ್ದಕ್ಕಿದ್ದ ಹಾಗೆ ನಮಗೆ ಬೆಂಕಿಯ ಕುಲುಮೆಯಾಗಿಬಿಡುತ್ತದೆ. ಇರುವ ಎರಡು ಪೇಟೆಗಳಲ್ಲಿ ತಲೆಯೆತ್ತಿ ತಿರುಗುವುದು ಬೇಡವೆನಿಸುತ್ತದೆ. ಮನುಷ್ಯರು ಇರುವ ಯಾವ ಸ್ಥಳವೂ ಇಷ್ಟವಾಗುವುದಿಲ್ಲ, ಸಮುದ್ರ ತೀರವೂ, ಹೊಳೆ ಬದಿಯೂ, ಕೊನೆಗೆ ದೇವಸ್ಥಾನದ ಪ್ರಾಕಾರವೂ ನೆಮ್ಮದಿ ಕೊಡುವುದಿಲ್ಲ. ಪ್ರತಿಯೊಬ್ಬನೂ ಪ್ರತಿಯೊಂದೂ ಇನ್ನಷ್ಟು ನೋಯಿಸಲೆಂದೇ ಹೊಂಚು ಹಾಕುತ್ತಿದ್ದರೆಂದು ಅನಿಸಿಬಿಡುತ್ತದೆ. ಛೇ! ನನ್ನ ಅರ್ಹತೆಗೆ ನಾನೆಲ್ಲೋ ಇರಬೇಕಿತ್ತು, ಈ ಊರಿನ ಮಂಗಗಳಿಗೆ ಏನು ಗೊತ್ತು ಅನ್ನಲೂಬಹುದು, ಬದುಕನ್ನೇ ಸರ್ವನಾಶ ಮಾಡಿತು ಈ ಊರು ಅನಿಸಲೂಬಹುದು. ಹತ್ತಿರದವರ ಅಕಾಲಿಕ ಸಾವಂತೂ ಕೆಲವೊಮ್ಮೆ ಮನುಷ್ಯರನ್ನು ಮನೆ, ಊರು ಜಿಲ್ಲೆ ಯಾಕೆ ದೇಶವನ್ನೇ ಬಿಟ್ಟೋಡಿಸಬಹುದು. ಇಲ್ಲಿಂದ ದೂರ ಓಡಬೇಕು ಎಂಬ ಅನಿಸಿಕೆ ಒಂದು ಸಾರಿ ಹುಟ್ಟುವುದೇ ತಡ, ತಡವಿಲ್ಲದೆಯೇ ಮನಸ್ಸು ಅದನ್ನೊಪ್ಪಿಸಲು ಎಲ್ಲಾ ಕಾರ್ಯತಂತ್ರಗಳನ್ನು ಹೂಡುತ್ತದೆ. ಬೀಜ ಮಣ್ಣಿಗೆ ಬಿದ್ದು ಮೊಳಕೆಯೊಡೆದು ಗಿಡವಾಗುವುದು ಅದೆಷ್ಟರ ಹೊತ್ತು?

ಇದಕ್ಕೇ ಕಾಯುತ್ತಿದ್ದ ಅಜ್ಞಾತ ವಾಸದ ಆಸೆ ಹುಟ್ಟಿಸುವ  ನಗರ, ಮಹಾನಗರಗಳು ಕೈ ಬೀಸಿ ಕರೆಯತೊಡಗುತ್ತವೆ. ಸೌಲಭ್ಯಗಳಿಗಿಂತ ಮನುಷ್ಯನನ್ನು ಹೆಚ್ಚು ಸೆಳೆಯುವುದೇ ಈ ವಿಚಿತ್ರ ಅಪರಿಚಿತತೆಯಿರಬೇಕು. ಕುವೆಂಪು ಅವರ ಮಾತಿನ ಮೊದಲಾರ್ಧವಷ್ಟೇ ಇಲ್ಲಿ ನಿಜ, ಇಲ್ಲಿ ಯಾರೂ ಮುಖ್ಯರಲ್ಲ.... ಕಟ್ಟಡಗಳು, ಸಿಮೆಂಟಿನ ಕಂಬಗಳು, ಫ್ಲೈ ಓವರುಗಳು, ಮಾಲುಗಳು, ಕತ್ತಲೆಯೆಂದರೆ ಗೊತ್ತಿರದ ಕಪ್ಪು ಡಾಂಬರು ಹೊದ್ದ ರಸ್ತೆಗಳು ಎಲ್ಲದರಲ್ಲೂ ಒಂದು ನಿಗೂಢತೆ. ಯಾವುದು ನಮ್ಮದಲ್ಲ, ನಮ್ಮದಾಗಲಾರದೂ ಕೂಡಾ.

ಕಾಡಲ್ಲಿ, ಊರಲ್ಲಿ ಬೆಳೆದ ಗಿಡವನ್ನು ಎತ್ತಿಕೊಂಡು ಬಂದು ಮಣ್ಣಿನ ಕುಂಡದಲ್ಲಿ ಬೆಳೆಸಿದರೆ ಅದು ಚೆನ್ನಾಗಿ ಬೆಳೆದೀತೆ? ಬೆಳೆದರೂ ಮೊದಲಿನ ಹಾಗೆ ಹಣ್ಣು ಹೂವು ಕೊನೆಗೆ ಮೊದಲಿದ್ದ ಬಣ್ಣ, ಗಾತ್ರದ ಎಲೆಯನ್ನಾದರೂ ಹುಟ್ಟಿಸಿತೇ? ಕುಂಡದ ಮಣ್ಣಿನಲ್ಲಿ ಊರುವ ಮೊದಲು ಅದನ್ನು ತಂದ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿ ತಂದ ಮಣ್ಣನ್ನು ಬೇರಿನ ಸುತ್ತ ಹಾಗೆಯೇ ಬಿಡುತ್ತೇವಲ್ಲ ? ಆ ಮಣ್ಣಿನ ಸ್ಪರ್ಶ, ವಾಸನೆಯಷ್ಟೇ ಅದಕ್ಕೆ ಸಿಗುವ ಮೃಷ್ಟಾನ್ನ. ಹೊಸ ಬಾಲ್ಕನಿಯ ಬಾಕಿ ಶೋಕಿ ಗಿಡಗಳ  ಎದುರು ಅದೂ ನಾಟಕ ಮಾಡಲು ಕಲಿತೀತು ಒಂದು ದಿನ.

ಮನಸ್ಸು ವಯಸ್ಸು ಮಾಗಿದಂತೆಲ್ಲಾ ದಕ್ಕುವ ಅಲ್ಪ ಸಲ್ಪ ನಿದ್ದೆಯಲ್ಲಿ ಬೀಳುವ ಕನಸಲ್ಲಿ ಊರಿನ ಮಸೀದಿಯ ಅಜಾನ್,  ದೇವಸ್ಥಾನದ ಘಂಟೆ ಸದ್ದೂ ಕೇಳತೊಡಗುತ್ತದೆ. ಗೋಳಿಬಜೆಯ ಎಣ್ಣೆಯ ವಾಸನೆಯಲ್ಲದೇ ರುಚಿಯೂ ನೆತ್ತಿಗೆ ಹತ್ತತೊಡಗುತ್ತದೆ. ಮನೆಯ ಇಂಟೀರೀಯರ್ ಡಿಸೈನಿಗೆಂದು ಸಿರಾಮಿಕ್ ಕುಂಡಗಳಲ್ಲಿ ತಂದಿಟ್ಟ ರಬ್ಬರ್ ಪ್ಲಾಂಟ್, ಫಿಗ್ ಪ್ಲಾಂಟುಗಳ ಅಗಲ ಎಲೆಗಳ ಮಧ್ಯದಲ್ಲಿ ಕೇಪುಳ, ನಂದಬಟ್ಟಲು, ಗೌರಿ ಹೂ, ಶಂಖಪುಷ್ಪ, ಮಿಠಾಯಿ ಹೂ, ಕರವೀರ, ರತ್ನಗಂಧಿ,  ನಾಗಸಂಪಿಗೆಗಳು ನಕ್ಕು ನಮ್ಮ ನೆನಪಿದೆಯೇ ಎಂದು ಕೇಳುತ್ತವೆ. ಬಾಲ್ಯದ  ಖಾರಕಡ್ಡಿ, ಬಾಂಬೆ ಮಿಠಾಯಿ, ಅಲ್ಕೋಹಾಲು ಎಂದು ಕರೆಯುತ್ತಿದ್ದ ಹಾಲು ಖೋವಾ, ಹಳದಿ ಬಣ್ಣದ ಬೋಟಿ ಕೊನೆಗೆ ಒಲೆಯಲ್ಲಿ ಸುಟ್ಟ ಹುಣಿಸೇ ಬೀಜಗಳ ನೆನಪೂ ಬಾಯಿಯಲ್ಲಿ ನೀರು ತರಿಸುತ್ತದೆ, ಸಾವಿರಾರು ರೂಪಾಯಿ ಕೊಟ್ಟ ಪಿಜಾವೂ ಸಪ್ಪೆ! ಘಂಟೆಗಿಷ್ಟರಂತೆ ಹಣ ಕೊಟ್ಟು ಆಡುವ ಬೌಲಿಂಗ್, ಸ್ನೂಕರ್ ಗಳು ತೆಂಗಿನ ಸೋಗೆಯ ಮೇಲೆ ಕೂತು ಅಂಗಳವಿಡೀ ಸರ್ಕಿಟು ಹೊಡೆದಾಗ ಕೊಡುತ್ತಿದ್ದ ಒಂದಂಶ ಖುಷಿಯೂ ಕೊಡುವುದಿಲ್ಲ.

ಮತ್ತೆ ಊರು ನೋಡುವ ಆಸೆಯಾಗಿ ಅಲ್ಲಿಗೊಂದು ಭೇಟಿ ಕೊಡುವ ಮನಸ್ಸಾಗುತ್ತದೆ, ಅಲ್ಲಿ ಹೋದರೆ ಸಿಗುವುದು ಅಸಾಧ್ಯ ನಿರಾಶೆಯಲ್ಲದೇ ಮತ್ತೇನಿಲ್ಲ! ಆಗಿದ್ದ ದೈತ್ಯಾಕಾರದ ಮರಗಳಿರದೆ ಊರು ಬಂದದ್ದೇ ಗೊತ್ತಾಗುವುದಿಲ್ಲ. ಅಂತೂ ಇಂತೂ ಒಳಹೊಕ್ಕರೆ ಹಳೆ ಊರಿನ ಅಸ್ಥಿಪಂಜರದ ಮೇಲೆ ಹೊಸ ಊರು ಬಂದು ಕೂತಿದೆ. ಆ ಹೊಸ ಊರಿನಲ್ಲಿ ನಮ್ಮ ಗುರುತುಗಳಿಲ್ಲ, ಮನುಷ್ಯರಿಗೂ ನಮ್ಮ ಗುರುತಿಲ್ಲ! ತಿಂಡಿಗಳೂ ಅಷ್ಟು ರುಚಿಯಿಲ್ಲ, ಮಲ್ಲಿಗೆಗೂ ಮೊದಲಿನ ಘಮವಿಲ್ಲ....

ನಮ್ಮ ನೆನಪಿನಲ್ಲಿರುವ ಊರು ಬೇರೆ, ಇದೇ ಬೇರೆ ಅನಿಸುತ್ತದೆ.

ಹಾಗೆಂದು ನಾವಲ್ಲೇ ಬದುಕಿದಿದ್ದರೆ ಸಂತೋಷವಾಗಿರುತ್ತಿದ್ದೆವೋ, ಇಲ್ಲಿಗೆ ಬಂದು ನಿಂತು ಹಿಂದೆ ನೋಡಿದ ಹಾದಿ ಸುಂದರವೆನಿಸುತ್ತದೆಯೋ ಗೊತ್ತಿಲ್ಲ! ಅಲ್ಲೇ ಇದ್ದಿದ್ದರೆ ಎಲ್ಲದಕ್ಕೂ ಈ ಬೆಲೆ ದಕ್ಕುತ್ತಿತ್ತೋ? ನಗರವಾಗಲಿ, ಬದಲಿಸಿದ ಊರಾಗಲೀ ಆ ಹೊತ್ತಿನ ನೋವ ನುಂಗಿ ಬದುಕ ನಡೆಸಲು, ಕಳೆದುಕೊಂಡ ಆತ್ಮವಿಶ್ವಾಸವ ಮರಳಿ ಕೊಟ್ಟಿತೋ? ಹೊಸ ಊರಿನೊಂದಿಗೆ ಹೊಸ ಬದುಕು ಶುರುವಾಯಿತೋ? ಮತ್ತೆ ಯಾವತ್ತೂ ಸಿಗದ ಹಾಗೆ ಕಳೆದೇ ಹೋದ ಸ್ನೇಹ, ಸಂಬಂಧ, ಪ್ರೀತಿ ನಮ್ಮನ್ನು ಸಂವೇದನೆಗಳಿಗೆ ಜಡಗೊಳಿಸಿತೇ ಅಥವಾ ಸಿಕ್ಕಿದ್ದನ್ನು ಕಾಪಿಟ್ಟುಕೊಳ್ಳುವ ಗುಣ ಹುಟ್ಟಿಸಿತೇ?  ಈ ಅಸಂಖ್ಯ ಪ್ರಶ್ನೆಗಳ ವ್ಯೂಹದಲ್ಲಿ ಸಿಲುಕಿ ಅರ್ಧ ಕನಸು ಅರ್ಧ ಎಚ್ಚರದಲ್ಲಿ ಆಯುಷ್ಯ ಕಳೆಯುತ್ತೇವೆ.

ಇವತ್ತು ಬೆಳಿಗ್ಗೆ ಬೆಳಿಗ್ಗೆ ಹೀಗೆಲ್ಲಾ ಅನಿಸಿತು. ಬರೆದೆ. ಅಮ್ಮ, ಅಣ್ಣನ ಟ್ರಾನ್ಸಫರ್ ಆಗುತ್ತಲೇ ಇದ್ದದ್ದರಿಂದ ರಾಶಿ ಊರು ತಿರುಗಿ ಕೊನೆಗೆ ನನ್ನೂರು ಯಾವುದು ಎಂದು ತಿಳಿಯದವಳು ನಾನು. ನಾನಿದ್ದ ಎಲ್ಲಾ ಊರುಗಳ ಹೂಗಳು, ತಿಂಡಿಗಳು, ದಾರಿಗಳು, ಸ್ನೇಹಿತರು, ಸಹಪಾಠಿಗಳು, ಟೀಚರ್ಸ್ ಕೊನೆಗೆ ಆ ಪ್ರದೇಶದ ಮರ ಗಿಡಗಳ ವೈವಿಧ್ಯತೆ ಮತ್ತು ಊರುಗಳ ವಾಸನೆ ಎಲ್ಲವೂ ನನ್ನಲ್ಲೇ ಉಳಿದುಕೊಂಡಿವೆ.  ಅಲ್ಲಿರುವುದು ಊರಾ, ನನ್ನೊಳಗಿರುವುದು ಊರಾ ನನಗೇ ಗೊತ್ತಿಲ್ಲ!