Thursday, February 18, 2021

ಪಿನ್ನಮ್ಮನ ಮನೆಯಲ್ಲಿ ಜನ್ನು


ವಿಷ್ಣು ಚಿಕ್ಕಪ್ಪನ ಕಾರಿನಲ್ಲಿ ಕೂತು ಹಳ್ಳ ದಿಣ್ಣೆ ದಾಟಿ ಪಿನ್ನಮ್ಮ ಮನೆ ಮುಟ್ಟಿದ್ದಾಯ್ತು. ಜಾನು ಮತ್ತು ಪುಟ್ಟಿ ಅಂಗಳದಲ್ಲಿಯೇ ಕೂತು ಕಾಯುತ್ತಿದ್ದರು. ಟೈಗರ್ ನಾಯಿಯ ಖುಷಿ ಮತ್ತು ಬೊಗಳುವಿಕೆ ಎರಡೂ ಮುಗಿಲು ಮುಟ್ಟಿತ್ತು. ನೆಂಟರು ಬಂದರೆ ಭಾರೀ ಖುಷಿ ಅವನಿಗೆ. ಜನ್ನುವನ್ನು ನೆಕ್ಕಿ ಅವನ ಮೈ ಮೇಲೆ ಜಿಗಿದು ಜಿಗಿದು ಇಟ್ಟ. ತಿಮ್ಮುವಿಗೂ ಅದರಲ್ಲಿ ಪಾಲು ಸಿಕ್ಕಿತು. ಭಯಂಕರ ಸ್ನೇಹಜೀವಿ ಅವನು! ಭಾಗೀರಥಿ ಅದರ ತಲೆ ಸವರಿದರೆ ಬಾಲವಾಡಿಸಿ ಬನ್ನಿ ಬನ್ನಿ ಎಂದು ಸ್ವಾಗತಿಸಿದ. ಆದರೆ ಮಕ್ಕಳೊಟ್ಟಿಗೆ ಕುಣಿದಿದ್ದೇ ಕುಣಿದಿದ್ದು. ಅದರ ಸಂಭ್ರಮ ಒಂಚೂರು ಕಡಿಮೆಯಾದ ಮೇಲೆ ಜನ್ನು ಪಿನ್ನಮ್ಮನ ಜಡೆ ಹಿಡಿದು ಎಳೆದಾಯ್ತು, ಅವಳು ಇವನನ್ನು ಹಿಡಿದು ಮುದ್ದು ಮಾಡಿ ಮಾಡಿ ಅಪ್ಪಚ್ಚಿ ಮಾಡಿಟ್ಟಾಯ್ತು. ಅಮ್ಮನಿಗಿಂತ ಜಾಸ್ತಿ ಮುದ್ದು ಮಾಡುವ ಪಿನ್ನಮ್ಮ ಜನ್ನುವಿಗೆ ಅಮ್ಮನಿಗಿಂತ ಒಂದು ಚೂರು ಎಂದರೆ ಚೂರು ಜಾಸ್ತಿಯೇ ಇಷ್ಟ, ಯಾಕಂದ್ರೆ ಅವಳು ಅಮ್ಮನ ಹಾಗೆ ಯಾವತ್ತೂ ಬೈಯಲ್ಲ ಅಲ್ಲ್ವಾ? ಅದಕ್ಕೆ!

 ಪಿನ್ನಮ್ಮನ ಮುಖ ಎಲ್ಲಾ ಅಮ್ಮ‍ನ ಹಾಗೆ, ಆದರೆ ಉದ್ದ, ಅಮ್ಮನ ಹಾಗೆ ನಗುತ್ತಾಳೆ, ಅಮ್ಮನ ಸ್ವರಕ್ಕಿಂತ ಸ್ವಲ್ಪ ದಪ್ಪ ಸ್ವರ. ಜನ್ನು ಮತ್ತು ಅವಳ ಮುದ್ದಾಟವನ್ನು ನಗುತ್ತಾ ನೋಡುತ್ತಾ ನಿಂತಿದ್ದಳು ಭಾಗೀರಥಿ. ಜನ್ನು, ಅಮ್ಮ ತಂದ ಬೆಣ್ಣೆ ಬಿಸ್ಕತ್ತನ್ನು ತಾನೇ ಹಣ ಖರ್ಚು ಮಾಡಿ ತಂದವನ ಥರ ಪೋಸ್ ಕೊಡುತ್ತಾಪಿನ್ನಮ್ಮ, ನೋಡು ನಿಂಗೇನು ತಂದಿದ್ದೀವಿ ಅಂತ?” ಎಂದು ಹೇಳಿ ತಾನೇ ಪೇಪರಿನ ತೊಟ್ಟೆಯನ್ನು ಪಿನ್ನಮ್ಮನ ಕೈಗೆ ಕೊಟ್ಟ. ಪಿನ್ನಮ್ಮ ಮುಖ ಅರಳಿದ್ದೂ, ಅವಳು ಥಟ್ಟನೇ ತಲೆಯೆತ್ತಿ ತನ್ನ ಅಮ್ಮನ ಕಡೆ ನೋಡಿ ನಕ್ಕಿದ್ದೂ ಜನ್ನು ಗಮನಿಸಿದ.‍ ಪುಟ್ಟಿ ಜನ್ನುವಿಗಿಂತ ಎರಡು ವರ್ಷ ಸಣ್ಣವಳಾದರೆ ಜಾನು ನಾಲ್ಕು ವರ್ಷ ದೊಡ್ಡವಳು. ಅಮ್ಮ ಇಬ್ಬರಿಗೂ ಮಿಠಾಯಿ ಕೊಟ್ಟರು, ಜನ್ನು ಮತ್ತು ತಿಮ್ಮುವಿನ ಮಿಠಾಯಿಗಳು ಅವರವರ ಜೇಬಲ್ಲಿಟ್ಟಿದ್ದು ಇವಾಗ ಹೊರಬಂದವು. ಎಲ್ಲರೂ ಓಡಿ ಮಾವಿನ ಮರದ ಕೆಳಗೆ ಇದ್ದ ಸಿಮೆಂಟಿನ ಕಟ್ಟೆಯ ಮೇಲೆ ಕೂತು ಚಪ್ಪರಿಸಿ ತಿನ್ನಲಾರಂಭಿಸಿದರು. ಟೈಗರ್ ಕೂಡಾ ಅಲ್ಲೇ ಬಂದು ತನಗೂ ಏನಾದರೂ ತಿನ್ನಲು ಸಿಗುತ್ತದೆಯೇ ಎಂದು ಇವರನ್ನು ಮೂಸಲಾರಂಭಿಸಿದ. ಜನ್ನು ಒಂದು ಅತೀ ಪುಟ್ಟ ಚೂರನ್ನು ಅವನಿಗೆ ಹಾಕಿದರೆ, ಮೂಸಿ ನೋಡಿದ ಹೊರತು ತಿನ್ನಲಿಲ್ಲ. ಅಷ್ಟು ಅಮೂಲ್ಯವಾದ ತಿಂಡಿಯನ್ನು ಬಿಟ್ಟನಲ್ಲ ಎಂದು ಹೊಟ್ಟೆಯುರಿಯಾಗಿ ಅವನಿಗೊಂದಿಷ್ಟು ಬೈದ ಜನ್ನು. ಪಾಪ, ನನ್ನೊಂದಿಗೆ ಜನ್ನು ಮಾತನಾಡುತ್ತಿದ್ದಾನೆಂದು ಅವನೂ ಬಾಲದಲ್ಲಿ, ಕಣ್ಣಲ್ಲಿ, ಮೈಯಲ್ಲೆ ಉತ್ತರಿಸಿದ. ಜಾನು, “ಅಂವ ಸಿಹಿ ಎಲ್ಲಾ ತಿನ್ನಲ್ಲ ಜನ್ನುಎಂದು ಸಮಾಧಾನ ಮಾಡಿದಳು

 ಹೊಸ ಹುಡುಗ ತಿಮ್ಮುವಿನ ಪರಿಚಯವಿಲ್ಲದಿದ್ದರಿಂದ ಅವನೊಂದಿಗೆ ಇಬ್ಬರೂ ಹೆಚ್ಚು ಮಾತಾಡದೇ ಇರುವುದನ್ನು ಮತ್ತು ತಿಮ್ಮುವೂ ಒಂಥರಾ ಮುಜುಗರದಲ್ಲಿರುವುದನ್ನು ಗಮನಿಸಿದ ಜನ್ನು. ತಾನು ತಿಮ್ಮುವನ್ನು ಕರೆದುಕೊಂಡು ಹೋದದ್ದರಿಂದ ಅವನ ಜವಾಬ್ದಾರಿ ತನ್ನದು ಎಂದು ಅವನು ಭಾವಿಸಿ, “ ಜಾನು, ತಿಮ್ಮು ಇದ್ದಾನಲ್ಲಾ?, ಹಾತೆ ಎಷ್ಟು ಬೇಗ ಹಿಡಿತಾನೆ, ಗೊತ್ತಿತ್ತಾ? , ಮಾವಿನ ಮರಕ್ಕೆ ಒಂದು ಕಲ್ಲು ಬಿಸಾಡಿದ್ರೆ ಕಾಯಿ ಬಿದ್ದಂಗೆ! ನಾನೂ ಅವ್ನು ಸೇರಿ ಬೈರಾಸಲ್ಲಿ ಮೀನು ಹಿಡಿತೀವಿ ಗೊತ್ತಾ?, ಊಂ... ಮತ್ತೆ ಮತ್ತೆ ತೆಂಗಿನ ಎಲೆಯಲ್ಲಿ ಪೀಪಿ ಬೇರೆ ಮಾಡಿಕೊಡ್ತ ಅಂವ, ನಾನೂ ಅವ್ನು ಗುಡ್ಡ ಸುತ್ತಿ ಬಂದರೆ ಒಂದ್ಸಲಕ್ಕೆ ರಾಶಿ ಗೇರುಬೀಜ ಸಿಕ್ತು ಗೊತ್ತಾ?, ಕೇಪುಳ, ನೇರಳೆ ಹಣ್ಣು ಎಲ್ಲಾ ತರ್ತ ಅಂವ ನಂಗೆಎಂದೆಲ್ಲಾ ಹೇಳಿ ತನ್ನ ಪ್ರಿಯ ಮಿತ್ರನ ಗುಣಗಾನ ಮಾಡಿ ಅವನನ್ನ ಅಟ್ಟಕ್ಕೆ ಏರಿಸಿಟ್ಟ. ತಿಮ್ಮುವಿಗೆ ನಾಚಿಕೆ, ಮುಜುಗರ ಎಲ್ಲಾ ಆಗಿ ಸುಮ್ಮನೇ ನಕ್ಕ ಅಷ್ಟೇ. ಅಷ್ಟ್ರಲ್ಲಿ ಜಾನುನಿಂಗೊತ್ತಾ ಜನ್ನು, ಇಲ್ಲೊಂದು ಥೇಟ್ರು ಬಂದಿದೆ, ಅಲ್ಲಿಗೆ ಹೋಗಿ ನಾವು ಸಿನಿಮಾ ಎಲ್ಲಾ ನೋಡಬಹುದು, ನಮ್ಮನ್ನ ಅಪ್ಪ ಕರ್ಕೊಂಡು ಹೋಗಿದ್ರು, ಪಾಪ, ಅಮ್ಮನಿಗೆ ಬರ್ಲಿಕ್ಕೆ ಆಸೆ ಇದ್ರೂ ಬರಲಿಲ್ಲ, ಎಲ್ಲ್ರೂ ಅದ್ರಲ್ಲಿ ಎಷ್ಟು ದೊಡ್ಡ ಕಾಣ್ತಾರೆ ಗೊತ್ತಾ? ಪುಟ್ಟಿ ಸಿನಿಮಾದಲ್ಲಿ ಅಮ್ಮ ಸತ್ಲು ಅಂತ ನಿಜಕ್ಕೂ ಬೊಬ್ಬೆ ಹಾಕಿ ಅತ್ತುಬಿಟ್ಲು, ಎಲ್ರೂ ನಮ್ಮ ಕಡೆ ತಿರುಗಿ ನೋಡಿ ನಕ್ಕು ಬಿಟ್ರು! ನಂಗೆ ಎಷ್ಟು ನಾಚಿಕೆಯಾಯ್ತು ಗೊತ್ತಾ?” ಎಂದು ಆಕ್ಷೇಪಣೆಯ ದನಿಯಲ್ಲಿ ಹೇಳಿದರೆ, ಪುಟ್ಟಿ ಕಣ್ಣಲ್ಲಿ ಇನ್ನೇನು ಕೆಳಗೆ ಉರುಳಲು ರೆಡಿಯಾಗಿ ನಿಂತ ಕಣ್ಣೀರು! ಸಿನಿಮಾ ಬಗ್ಗೆ ಕಿಟ್ಟು ಮಾಮ ಮತ್ತೆ ಅಪ್ಪ ಮಾತಾಡುವುದನ್ನು ಕೇಳಿದ್ದ ಜನ್ನು, ಆದರೆ ಅದು ಹೇಗಿರುತ್ತೆ ಅನ್ನುವ ಕಲ್ಪನೆ ಅವನಿಗಿಲ್ಲ, ನೋಡಬೇಕು, ವಿಷ್ಣು ಚಿಕ್ಕಪ್ಪನ ಹತ್ತಿರ ಕರ್ಕೊಂಡು ಹೋಗ್ಲಿಕ್ಕೆ ಕೇಳಬೇಕು ಅಂತ ಮನಸ್ಸಲ್ಲೇ ಲೆಕ್ಕಾಚಾರ ಹಾಕಿದ. ಪುಟ್ಟಿ ಇನ್ನೇನು ಅಳ್ತಾಳೆ ಅಂತ ಜನ್ನು ಪುಟ್ಟಿ, ಮುಗುಡು ಮೀನು ಎಂಥ ಮಾಡ್ತಾ ಉಂಟು?” ಎಂದು ಕೇಳಿ ಎಲ್ಲರೂ ಬಾವಿಯ ಕಡೆ ಓಡಿದರು. ಟೈಗರ್ ನಾಯಿಯೂ ಯಥಾಪ್ರಕಾರ ಇವರ ಹಿಂದೆ.  “ಮುಗುಡು ಮೀನೂ ಬಾ ಬಾ ಬಾಅಂತ ನೂರು ಸಲ ಬೊಬ್ಬೆ ಹಾಕಿ ಹಾಕಿ ಇಟ್ಟರು, ಮುಗುಡು ಮೀನು ಬರಲೇ ಇಲ್ಲ, ಆದ್ರೆ ಆಮೆಯಣ್ಣ ಹೊರಗೆ ಬಂದ, ಮಕ್ಕಳ ಖುಷಿಗೆ ಪಾರವೇ ಇಲ್ಲ! “ ಆಮೆಯಣ್ಣ ನಮ್ಮನೆ ಕೆರೆಗೆ ಬರ್ತೀಯೇನೋ?” ಅಂತ ಜನ್ನು ಕೇಳಿದ. ಇಲ್ಲ ಬರಲ್ಲ ಎಂಬಂತೆ ಆಮೆಯಣ್ಣ ಮತ್ತೆ ಬಾವಿಯ ತಳ ಸೇರಿದ. ಮಕ್ಕಳು ನಕ್ಕೂ ನಕ್ಕೂ ಇಟ್ಟರು! ಅಷ್ಟರಲ್ಲಿ ನಾಲ್ಕು ಮುಗುಡು ಮೀನುಗಳು ಮೇಲೆ ಬಂದವು, ಅವುಗಳ ಓಡಾಟ, ನೀರಿನಲ್ಲಿ ಬೀಳುತ್ತಿದ್ದ ಬೆಳಕಿಗೆ ಅವುಗಳ ಮೈ ಹೊಳೆಯುತ್ತಿದ್ದ ರೀತಿ ಎಲ್ಲಾ ನೋಡಿ ಖುಷಿಪಟ್ಟರು ಜನ್ನು, ತಿಮ್ಮು ಇಬ್ಬರೂ. ಇಷ್ಟರಲ್ಲಾಗಲೇ, ಅಳೋದು ಮರೆತು ಹೋಗಿತ್ತು ಪುಟ್ಟಿಗೆ. ಜನ್ನು ತನ್ನ ಹತ್ತಿರ ಯಾರೋ ನಿಂತಿದ್ದಾರೆ ಅನಿಸಿ ತಲೆಯೆತ್ತಿ ನೋಡಿದರೆ, ಅದ್ಯಾವಾಗಲೋ ವಿಷ್ಣು ಚಿಕ್ಕಪ್ಪ ಹತ್ತಿರ ಬಂದು ಮಕ್ಕಳು ಬಾವಿಗೆ ಜಾಸ್ತಿ ಬಗ್ಗದ ಹಾಗೆ ನೋಡುತ್ತಾ ನಿಂತಿದ್ದಾರೆ. “ನಿಮ್ಮೂರಲ್ಲಿ ಮುಗುಡು ಮೀನು ಇಲ್ಲ್ವೇನೋ ಜನ್ನು?” ಎಂದು ಕೇಳಿದರು. ಜನ್ನು ಇಲ್ಲ ಎಂದು, “ವಿಷ್ಣು ಚಿಕ್ಕಪ್ಪ, ನಮ್ಮನ್ನೂ ಚಿಮಾನಕ್ಕೆ ಕರ್ಕೊಂಡು ಹೋಗ್ತಿರಾ?” ಎಂದು ಬೇಡಿಕೆಯಿಟ್ಟ. ಗಲಿಬಿಲಿಯಾಯಿತು ಚಿಕ್ಕಪ್ಪನಿಗೆ, “ಹಾಗಂದ್ರೆನೋ ಜನ್ನು?” ಎಂದರು, ಅಷ್ಟರಲ್ಲಿ ಜಾನುಸಿನಿಮಾ ಅಣ್ಣಅಂತ ಜೋರಾಗಿ ನಗುತ್ತಾ ಹೇಳಿದಳು. ಜೋರಾಗಿ ನಕ್ಕ ಚಿಕ್ಕಪ್ಪ, “ ಆಯ್ತು ಜನ್ನು ಕರ್ಕೊಂಡು ಹೋಗ್ತೀನಿ, ನಿನ್ನ ಚಿಮಾನದಲ್ಲಿ ಯಾರಿಗೆ ಏನಾದ್ರೂ ಆದ್ರೆ, ಎಲ್ಲರಿಗೂ ಕೇಳೋ ಹಾಗೆ ಆರ್ಭಟ ಕೊಡಲಿಕ್ಕಿಲ್ಲ ನೋಡುಎಂದರು. ಪುಟ್ಟಿ ಎಲ್ಲಿಯಾದರೂ ಅತ್ತು ಬಿಟ್ಟರೆ ಎಂದು ಗಾಭರಿಯಾಗಿ ಜನ್ನು ಅವಳ ಕಡೆಗೆ ನೋಡಿದರೆ, ಅವಳಿಗೆ ತಿಮ್ಮು ಬಾವಿಯಂಚಿಗೆ ಬೆಳೆದಿದ್ದ ಜರಿ ಗಿಡವನ್ನು ಹರಿದು ಅದರ ಎಲೆಗಳಲ್ಲಿ ಗುಲಾಬಿ ಮಾಡಿ ತೋರಿಸಿ ನಗಿಸುತ್ತಿದ್ದ. ಅವಳು ಆಶ್ಚರ್ಯ, ಖುಷಿಯಿಂದ ನಗುತ್ತಿದ್ದಳು. ಜನ್ನುವಿಗೆ ಸಮಾಧಾನ ಅನಿಸಿತು. ನಮ್ಮ ಜನ್ನುಮಹಾಶಯನಿಗೆ ಯಾರೂ ಅಳಬಾರದು, ಅತ್ತ ಕೂಡಲೇ ಅವನಿಗೂ ಅಳು ಬರುತ್ತಿತ್ತು, ಕೂಡಲೇ ಅವರನ್ನು ಸಮಾಧಾನ ಮಾಡಲು ಏನು ಮಾಡಬೇಕು ಅಂತ ಯೋಚಿಸುತ್ತಿದ್ದ. ಅದ್ರಲ್ಲೂ ಪುಟ್ಟಿ ಅವನಿಗಿಂತ ಸಣ್ಣವಳಲ್ವಾ? ಅವಳನ್ನು ನೋಡಿದರೆ ತಾನು ದೊಡ್ಡ ಅಣ್ಣ ಎಂಬಂತೆ ಅವನಿಗೆ ಭಾಸವಾಗುತ್ತಿತ್ತು.

ಅಲ್ಲಿಂದ ಎಲ್ಲರ ಸವಾರಿ ಜೇನು ಗೂಡು ನೋಡಲು ಚಿಕ್ಕಪ್ಪನೊಟ್ಟಿಗೆ ಹೋಯ್ತು. ಜೇನು ಪೆಟ್ಟಿಗೆ, ಅದರ ಸಣ್ಣ ರಂಧ್ರಗಳು, ಅವುಗಳ ಓಡಾಟ ಮತ್ತದರ ಜುಂಯ್ ಅನ್ನುವ ರಾಗ ಎಲ್ಲವನ್ನೂ ಜನ್ನು ಮತ್ತೆ ತಿಮ್ಮು ಘಂಟೆಗಟ್ಟಲೆ ನಿಂತು ನೋಡಿದರು. ಚಿಕ್ಕಪ್ಪ ಮೊದಲೇ ಎಚ್ಚರಿಸಿದ್ದರಿಂದ ಇಬ್ಬರೂ ಅದನ್ನು ಕೈಯಿಂದ ಮುಟ್ಟಲೂ ಹೋಗಲಿಲ್ಲಜಾನು, ಪುಟ್ಟಿ ಇಬ್ಬರ ಕುತೂಹಲ ಮುಗಿದ್ದದ್ದರಿಂದ, ಜೇನುಪೆಟ್ಟಿಗೆ ಹತ್ತಿರವೂ ಬರದೇ ದೂರದಲ್ಲಿಯೇ ಇಬ್ಬರೂ ಒಬ್ಬರ ಕೈ ಒಬ್ಬರು ಹಿಡಿದು ಅವರ ಲಂಗಗಳನ್ನು ಪುಗ್ಗೆಯಂತೆ ಉಬ್ಬಿಸುತ್ತಾ ಗರ ಗರ ತಿರುಗುತ್ತಿದ್ದರು. ಅಷ್ಟರಲ್ಲಿ ಪಿನ್ನಮ್ಮ ಕೂ ಹಾಕಿದಂತೆ ಅನಿಸಿ ಎಲ್ಲರೂ ಮನೆಗೆ ಹೊರಟರು.