ನೀಚತನಕೆ ಧಾರಾಳವಾಗಿ ಸಿಗುವ ಮಾಫಿ, ಒಳ್ಳೆಯತನಕೇಕೆ ಸಿಗಲಾರದು ?
Friday, May 16, 2014
Tuesday, May 13, 2014
ವಿಮುಖ
(ವಿಜಯನೆಕ್ಸ್ಟ್ ಯುಗಾದಿ ಕಥಾಸ್ಪರ್ಧೆಯಲ್ಲಿ 2ನೆ ಸ್ಥಾನ ಪಡೆದ ಕತೆ)
ಕಲ್ಕತ್ತಾದಿಂದ ಎರಡು ವರ್ಷದ ಹಿಂದೆ ಬಂದಿದ್ದ ವಿಮುಖ ದಾಸ್ ಗೆ ಈಗ ಬೆಂಗಳೂರು ಅಪರಿಚಿತವಾಗಿಯೇನೂ ಉಳಿದಿರಲಿಲ್ಲ. ತನ್ನ ರಾಜಾಜಿನಗರದ ರಾಮಮಂದಿರದ ಬಳಿಯಿರುವ ರೂಮಿನಿಂದ ಇಂದಿರಾ ನಗರದ ನೂರಡಿಯ ರಸ್ತೆಯಲ್ಲಿರುವ ಆಫೀಸನ್ನು ಮುಟ್ಟುವಷ್ಟರಲ್ಲಿ ನಡುವೆ ಬರುವ ಎಲ್ಲಾ ಸ್ಟಾಪ್ ಗಳನ್ನೂ ಬಸ್ಸಿನ ಕಿಟಕಿ ರಾಡಿಗೆ ತಲೆಯೊರಗಿಸಿಕೊಂಡು ಕಣ್ಣುಮುಚ್ಚಿಯೇ ಹೇಳಬಲ್ಲವನಾಗಿದ್ದ. ಅದೂ ಅಲ್ಲದೇ ವಾರಕ್ಕೋ ಎರಡು ವಾರಕ್ಕೋ ಒಮ್ಮೆ ಎಂಬಂತೆ
ಆಫೀಸಿನಿಂದ ಬೇಗ ಹೊರಟು ಬಸ್ ನಿಲ್ದಾಣಕ್ಕೆ ಬಂದು ಸಿಕ್ಕಿದ ಬಸ್ಸು ಹತ್ತಿ, ಎಲ್ಲೋ ಇಳಿದು,
ಎಲ್ಲೋ ತಿರುಗಿ ನಡುರಾತ್ರಿ ಮನೆ ಮುಟ್ಟುತ್ತಿದ್ದದ್ದೂ ಉಂಟು. ಹಾಗಾಗಿ ಬೆಂಗಳೂರಿನ ಸಾಕಷ್ಟು ಏರಿಯಾಗಳು
ಅವನಿಗೆ ಗೊತ್ತಿದ್ದವು. ಇಂದಿರಾನಗರದಲ್ಲೇ ಮನೆ ಹುಡುಕಬಹುದಾಗಿದ್ದರೂ ಅವನ ಬಸ್ಸು ಪ್ರಯಾಣದ
ಪ್ರೀತಿ, ಮನೆಯ ಬಳಿಯಿರುವ ಅವನಿಷ್ಟದ ರಾಮಮಂದಿರ ಮತ್ತು ಇಂದಿರಾನಗರದ ದುಬಾರಿ ಬಾಡಿಗೆ ಅವನನ್ನು
ರಾಜಾಜಿನಗರದಲ್ಲೇ ಉಳಿಯುವಂತೆ ಮಾಡಿದ್ದವು.
ಬಾಲ್ಯದಲ್ಲೇ ತಾಯಿಯ ಬೆಚ್ಚಗಿನ ಆಶ್ರಯ ಬಿಟ್ಟು ಬೋರ್ಡಿಂಗ್ ಸ್ಕೂಲಲ್ಲೇ ಬೆಳೆದಿದ್ದ ವಿಮುಖ. ಆಗಾಗ ಹೊಸ ಹೊಸ ಮನುಷ್ಯರೊಂದಿಗೆ ಬರುತ್ತಿದ್ದ ಅವನು ‘ಅಮ್ಮು’
ಎಂದು ಕರೆಯುತ್ತಿದ್ದ ಅವನ ತಾಯಿಯನ್ನು ನೋಡುವಾಗಲೆಲ್ಲಾ ಅವನಿಗೆ ಅವಳ ಕಣ್ಣು, ಮೂಗು, ಹುಬ್ಬು ಎಂದೂ
ಕಣ್ಣಿಗೆ ಬಿದ್ದದ್ದೇ ಇಲ್ಲ. ಬದಲು ಅವಳ ಕೆಂಪು ದೊಡ್ಡ ಬಿಂದಿ, ಅದಕ್ಕಿಂತ ಕೆಂಪಾಗಿ ತುಟಿಗೆ ಢಾಳಾಗಿ ಬಳಿದಿದ್ದ ಬಣ್ಣ, ಅವೆರಡಕ್ಕೂ ಜೊತೆಯಾಗುವಂತೆ ಬೈತಲೆ ತುಂಬ ಮೆತ್ತಿಕೊಂಡ ರಕ್ತಗೆಂಪು ಸಿಂಧೂರವೇ ಕಾಣುತ್ತಿದದ್ದು. ಅವನಿಗೆ ಅಮ್ಮು ಎಂದಾಕ್ಷಣ ತಲೆಯಲ್ಲಿ ಬರುತ್ತಿದ್ದದ್ದು ಸಿಗ್ನಲ್ಲಿನ ಕೆಂಪು ದೀಪ. ಸ್ಕೂಲು ಮುಗಿದ ಮೇಲೂ ತನ್ನ ಮುಂದಿನ ಶಿಕ್ಷಣವನ್ನು ಹಾಸ್ಟೆಲಿನ ಗೋಡೆಗಳ ನಡುವೆಯೇ ಕಳೆದುಬಿಟ್ಟ. ಯಾರೊಂದಿಗೂ ಬೆರೆಯದ ವಿಮುಖನಿಗೆ ಹೊಸ ಜನರನ್ನು ಕಾಣುವುದೂ, ಮಾತನಾಡುವುದೂ ಎಲ್ಲಿಲ್ಲದ ತಳಮಳ,ಸಂಕಟಗಳನ್ನು ಹುಟ್ಟಿ ಹಾಕುತ್ತಿತ್ತು. ಪದವಿ ಮುಗಿಸಿದ ಕೂಡಲೇ ಅಮ್ಮುವಿಗೆ ಒಂದೂ ಮಾತೂ ಹೇಳದೇ ಅವನು ಬಂದ ಸಮಯಕ್ಕೆ ಸರಿಯಾಗಿ
ಸ್ಟೇಶನ್ ಅಲ್ಲಿ ನಿಂತಿದ್ದ ಹೌರಾ-ಯಶವಂತಪುರ ಟ್ರೇನ್ ಹತ್ತಿ ಬೆಂಗಳೂರಿಗೆ ಬಂದು ಬಿಟ್ಟಿದ್ದ. ಅಮ್ಮು ಕೊಡಿಸಿದ್ದ ಬಟ್ಟೆ, ಅವಳು ಕೊಟ್ಟು, ಇವನು
ಖರ್ಚು ಮಾಡದೇ ಕೂಡಿಟ್ಟ ದುಡ್ಡು ಅವನನ್ನು ಸರಿ ಸುಮಾರು ಎರಡೂವರೆ ತಿಂಗಳು, ಕಾಪಾಡಿದ್ದವು. ಯಾವಾಗ
ಕೆಲಸ ಸಿಕ್ಕಿತೋ, ಆ ಕ್ಷಣದಿಂದ ಬೆಂಗಳೂರಿನ ಜನಸಾಗರದ ನಡುವೆ ಒಂದು ಉಪ್ಪಿನ ಕಣದಂತೆ ವಿಮುಖ
ಬೆರೆತುಹೋಗಿದ್ದ.
ಅವನು ಕೆಲಸ ಮಾಡುತ್ತಿದ್ದದು ಗಾಜಿನ ವಿವಿಧ ವಿನ್ಯಾಸದ, ಆಕಾರದ ವಿಸ್ಕಿ, ವೈನ್ ಗ್ಲಾಸ್ ಗಳನ್ನು ಮಾರಾಟ ಮಾಡುತ್ತಿದ್ದ ಕಂಪೆನಿಯೊಂದಕ್ಕೆ. ಅವರಿಗೆ ಬರುತ್ತಿದ್ದ ಪಾರ್ಸೆಲ್ ಗಳ ಲೆಕ್ಕ ಬರೆಯುವುದು, ಅದನ್ನು ತೆಗೆದುಕೊಂಡು ಹೋಗುವ ಅಂಗಡಿಗಳ ಹೆಸರು, ಅವರೊಂದಿಗಿನ ವ್ಯವಹಾರ, ಲೆಕ್ಕಾಚಾರ ಇವಿಷ್ಟು ವಿಮುಖನ ಕೆಲಸಗಳು. ಕೆಲಸಕ್ಕೆ ಸೇರಿದ ಕೆಲದಿನಗಳಲ್ಲೇ ವಿಮುಖ ತೊಂದರೆ ಎದುರಿಸಬೇಕಾಯಿತು.
ಅಲ್ಲಿ ಕೆಲಸ ಮಾಡುತ್ತಿದ್ದ ಮೇಲ್ ರಿಸೆಪ್ಷನಿಸ್ಟ್ ಕೆಲಸ ಬಿಟ್ಟುಬಿಟ್ಟ, ಹಾಗಾಗಿ ಆಫೀಸಿಗೆ ಬರುತ್ತಿದ್ದ ಫೋನು ಕರೆಗಳಿಗೆ ಇವನೇ ಉತ್ತರಿಸಬೇಕಾಯಿತು. ವಿಮುಖನ ಇಂಗ್ಲೀಷ್ ಕೂಡ ಬೆಂಗಾಲಿ ಉಚ್ಚಾರದಲ್ಲಿ ಇದ್ದದ್ದರಿಂದ ಎಷ್ಟೇ ಸಲ ವಿವರಿಸಿದರೂ ಫೋನಿನ ಆ ತುದಿಯ ವ್ಯಕ್ತಿಗೆ ಇವನೇನು ಅನ್ನುತ್ತಿದ್ದಾನೆ ಎಂಬುದೇ ತಿಳಿಯುತ್ತಿರಲಿಲ್ಲ. ವಿಮುಖನ ದಕ್ಷತೆ, ಪ್ರಾಮಾಣಿಕತೆಗೆ ಅದರ ಮಾಲೀಕ ಪುಟ್ಟಸ್ವಾಮಿ ಇಡೀ ಆಫೀಸಿನ ಲೆಕ್ಕಾಚಾರವನ್ನು ಈತನಿಗೊಪ್ಪಿಸಿ ತನ್ನ ಇನ್ನೊಂದು ಕಸುಬಾದ ರಿಯಲ್ ಎಸ್ಟೇಟ್ ದಂಧೆಗೆ ಕೈ ಹಾಕಾಗಿತ್ತು. ಅವನಿಗೆ ಈ ಸಮಸ್ಯೆಯ ಬಗ್ಗೆ ಹೇಳಿದರೆ ಅರ್ಥ
ಮಾಡಿಕೊಳ್ಳುವ ಪ್ರಯತ್ನವೇ ಮಾಡುತ್ತಿರಲಿಲ್ಲ. ಆ ಪುಟ್ಟ ಆಫೀಸಿನಲ್ಲಿ ಇದ್ದ ಉಳಿದ ಮೂವರೂ ಹೆಚ್ಚು ಓದಿಕೊಂಡವರೇನಲ್ಲ , ಬರೇ ಪಾರ್ಸಲ್ ತರುವುದು, ಕೊಡುವುದು, ಲೆಕ್ಕ ಹೇಳುವುದನ್ನಷ್ಟೇ ಮಾಡಿಕೊಂಡಿದ್ದವರು, ಕನ್ನಡವನ್ನಷ್ಟೇ
ಮಾತನಾಡುತ್ತಿದ್ದರು. ಒಂದು ದಿನವಂತೂ ಸೂಪರ್ ಮಾರ್ಕೇಟ್ ಒಂದರಿಂದ ಸುಮಾರು ಎಂಭತ್ತು ಸಾವಿರ ರೂಪಾಯಿ
ಮೌಲ್ಯದ ವೈನ್ ಗ್ಲಾಸುಗಳು ತಾವು ಕೇಳಿದ ಆಕಾರ, ಗಾತ್ರದಲ್ಲಿಲ್ಲವೆಂದು ವಾಪಾಸಾದವು.
ಮರುದಿನ ಎರಡು ಪ್ರಮುಖ ಸಂಗತಿಗಳು ಜರುಗಿದವು. ‘ಲೋಕಲ್ ಲ್ಯಾಂಗ್ವೇಜ್’ ಎಂದು ದೂರವೇ ಇರಿಸಿದ್ದ ಕನ್ನಡವನ್ನು ವಿಮುಖ ಕಲಿಯಲೇ ಬೇಕಾಯ್ತು ಹಾಗೂ ಗಂಡಸರೇ ಇದ್ದ ಆ ಆಫೀಸಿಗೆ ಸುಂದರ ಹೆಣ್ಣೋರ್ವಳ ಆಗಮನವಾಯಿತು. ಹಾಗೆ ಬಂದವಳೇ ಮಂಜನಿ ಜೋಸ್, ಮಲಯಾಳಿ ಹುಡುಗಿ. ಪುಟ್ಟಸ್ವಾಮಿಯೇ ಅವಳನ್ನು ಕರೆದುಕೊಂಡು ಬಂದಿದ್ದ. ನೋಡಿದ ಕೂಡಲೇ ಕಣ್ಸೆಳೆಯುವ ರೂಪದ ಮುಖ, ಅದಕ್ಕೆ
ಸರಿಯಾದ ಮೇಕಪ್ಪಿನೊಂದಿಗೆ ಮಂಜನಿ ಬಂದಾಗ ಅಲ್ಲಿದ್ದ ಎಲ್ಲರೂ ಹುಬ್ಬೇರಿಸಿದ್ದರು. ಬೇರೆ ಯಾರೂ ಸಿಗಲಿಲ್ಲವೇ, ಅದೂ ಹೋಗಿ ಹೋಗಿ ಮಲೆಯಾಳಿ ಬೇರೆ, ಇಂಗ್ಲೀಷ್ ಮಾತಾಡಿದರೆ ಮಲಯಾಳಂ ಮಾತಾಡಿದಂತಿರುತ್ತದೆ ಎಂದು ವಿಮುಖನನ್ನು ಬಿಟ್ಟು ಉಳಿದ ಮೂವರು ಮಾತನಾಡಿಕೊಂಡಾಗಿತ್ತು. ಆದರೆ ಇರುವ ನಾಲ್ಕೂ ಜನರ ಮನಸ್ಸನ್ನೂ ತನ್ನ ಶುದ್ಧ ಇಂಗ್ಲೀಷ್, ಕನ್ನಡ, ಹಿಂದಿ ಹೀಗೆ ಮೂರೂ ಭಾಷೆಗಳಷ್ಟೇ ಅಲ್ಲದೇ ನಗು, ಮಾತುಗಳನ್ನೂ ಸೇರಿಸಿ ಆಕೆ ಎಲ್ಲರ
ಮನಸ್ಸನ್ನೂ ಗೆದ್ದಿದ್ದಳು.
ಮೊದಲ ಅಂತಸ್ತಿನಲ್ಲಿದ್ದ ಆ
ಆಫೀಸಿನ ಕೆಳಭಾಗದಲ್ಲಿದ್ದದ್ದು ಅದರ ಮಾಲೀಕ, ಓರ್ವ ಮಿಲಟರಿ ಮನುಷ್ಯ,
ಪೊನ್ನಪ್ಪ. ಆವಾಗಾವಾಗ ತಮ್ಮ ಲ್ಯಾಬ್ರಡಾರ್ ಜಾತಿಯ ನಾಯಿ ಶ್ಯಾಡೋದೊಂದಿಗೆ ಬರುತ್ತಿದ್ದ ಆ
ಸುರದ್ರೂಪಿ ಅಜ್ಜ ಇವನು ಮಾತಾಡಲೀ ಬಿಡಲಿ ಬೆನ್ನು ತಟ್ಟಿ, “ ನೊಮೊಸ್ಕಾರ್, ಬೆಂಗಾಲಿ ಬಾಬು,
ತುಮಿ ಕೆಮೋನ್ ಅಚ್ಚೋ” ಎಂದು ತನಗೆ ಬರುತ್ತಿದ್ದ ಒಂದೇ ಒಂದು ಬೆಂಗಾಲಿ ಸಾಲನ್ನು
ಹೇಳುತ್ತಿದ್ದರು. ಮೊದ ಮೊದಲು ಕಾಟಾಚಾರಕ್ಕಷ್ಟೇ, ಅನಂತರ ತನಗಲ್ಲವೇ ಅಲ್ಲ ಎಂಬಂತೆ, ತದನಂತರ ಅವರ
ನಿರ್ಮಲ ನಗು, ವಿಶ್ವಾಸಕ್ಕೆ ಕಟ್ಟು ಬಿದ್ದು ವಿಮುಖನೂ ನಕ್ಕು ತನ್ನ ಅರೆಬರೆ ಕನ್ನಡದಲ್ಲೇ ಉತ್ತರಿಸುತ್ತಿದ್ದ.
ದಿನಗಳುರುಳಿದಂತೆ ಅವರ ಮಧ್ಯೆ ಹೆಚ್ಚಿನ ಸ್ನೇಹವಿರದಿದ್ದರೂ ಅವರ ಮುಖ ಹಾಗೂ ಶ್ಯಾಡೋವನ್ನು
ನೋಡಿದರೆ ಏನೋ ಖುಷಿಯ ಅನುಭೂತಿ ಅವನಿಗೆ. ಅವರನ್ನು ದಾದು ಎಂದು ಕರೆಯಲಾರಂಭಿಸಿದ್ದ ಹಾಗೂ ಆ
ಸಂಭೋದನೆ ಪೊನ್ನಪ್ಪನವರಿಗೂ ಅಸಾಧ್ಯ ಖುಷಿ ಕೊಡುತ್ತಿತ್ತು ಎಂಬುದನ್ನು ಅವರ ನಗುಮುಖವೇ
ಸಾರುತ್ತಿತ್ತು. ದಿನೇ ದಿನೇ ಅಡ್ಡಡ್ಡ ಬೆಳೆಯುತ್ತಿದ್ದ ಶ್ಯಾಡೋವಾದರೂ ಇವನನ್ನು ನೋಡಿದಾಗಲೆಲ್ಲಾ
ಬಾಲವನ್ನಾಡಿಸಿ, ನೆಕ್ಕಿ, ಮೈ ಮೇಲೆ ಹಾರಿ ತನ್ನ ಪ್ರೀತಿ ತೋರಿಸುತ್ತಿತ್ತು. ದಾದು, ಶ್ಯಾಡೋ
ಇಬ್ಬರೂ ಒಂದೇ, ಅವರೀರ್ವರ ಭಾವವೂ ಒಂದೇ ಎಂದೆನಿಸುತ್ತಿತ್ತು ವಿಮುಖನಿಗೆ. ಆದರೆ ಮಂಜನಿಯ ಜೊತೆ ಮಾತು
ಹೋಗಲಿ, ಅವಳು ಮಾತನಾಡಿದರೂ ಅವಳತ್ತ ನೋಡದೇ ಹೋಗಿ ಬಿಡುತ್ತಿದ್ದರು ದಾದು. ದಾದೂನಂತೆ ಶ್ಯಾಡೋ
ಕೂಡಾ ಅವಳತ್ತ ಸ್ನೇಹವನ್ನು ತೋರದೆ ತನ್ನ ಚೂಪು ಹಲ್ಲುಗಳನ್ನು ಪ್ರದರ್ಶಿಸುತ್ತಿತ್ತು.
ಎಲ್ಲರೊಂದಿಗೂ ನಕ್ಕು ಮಾತನಾಡುವ ಮಂಜನಿಯೂ ಅವರಿಬ್ಬರನ್ನು ಕಂಡರೆ ಸಪ್ಪಗಾಗುತ್ತಿದ್ದಳು.
ಅದೊಂದು ಶನಿವಾರ. ಪ್ರತೀ
ಶನಿವಾರ ಮಧ್ಯಾಹ್ನ ಅಫೀಸು ಮುಗಿಸಿ ಸಮೀಪದ ಕಲ್ಕತ್ತಾ ವಿಕ್ಟೋರಿಯಾ ಚಾಟ್ ಗೆ ಹೋಗಿ ತನ್ನಿಷ್ಟದ
ಅಲೂ ಪರಾಟಾ, ಚನಾ ಸಬ್ಜಿ ಮತ್ತು ಮನಸ್ಸು ತುಂಬುವವರೆಗೆ ತನ್ನ ಪ್ರೀತಿಯ ಜಿಲೇಬಿ ತಿಂದು
ರಾಜಾಜಿನಗರದ ಕಡೆಗಿನ ಬಸ್ಸು ಹತ್ತುತ್ತಿದ್ದ ವಿಮುಖ. ಆ ದಿನ ಕಾರಣವಿಲ್ಲದೆಯೇ ಮಂಜನಿಯನ್ನೂ
ಊಟಕ್ಕೆ ಕರೆಯೋಣ ಅನಿಸಿತು ಅವನಿಗೆ. ಮರುಕ್ಷಣವೇ ತನಗೆ ಹಾಗನಿಸಿದ್ದರ ಬಗ್ಗೆ ಅಚ್ಚರಿಯೂ
ಹುಟ್ಟಿತು, ಕೂತು ಅವಳನ್ನು ಯಾಕೆ ಕರೆಯಬೇಕು ಎಂದು ಯೋಚಿಸಿದ, ಊಹೂಂ, ಕಾರಣ ಹೊಳೆಯಲಿಲ್ಲ. ಸರಿ
ಅನಿಸಿತಲ್ಲ, ಕೇಳೋಣ ಎಂದು ತನ್ನ ಸೀಟಿನಿಂದ ಎದ್ದು ನಿಂತ. ಆದರೆ ಅವಳ ಹತ್ತಿರ ಹೋಗಲು ಧೈರ್ಯ
ಸಾಲದೇ, ಕಾರಣವಿಲ್ಲದಿದ್ದರೂ ರೆಸ್ಟ್ ರೂಮಿಗೆ ಹೋಗಿ ಕನ್ನಡಿಯಲ್ಲಿ ಇಣುಕಿದ. ಇಷ್ಟು ವರ್ಷಗಳಿಂದ
ಚಿರಪರಿಚಿತನಾಗಿ ಕಾಣುತ್ತಿದ್ದ ವಿಮುಖ ಅವನಿಗೆ ಕನ್ನಡಿಯಲ್ಲಿ ಕಾಣಸಿಗಲಿಲ್ಲ. ಗಲಿಬಿಲಿಯಾಯಿತು
ಅವನಿಗೆ. ಹೋದ ತಪ್ಪಿಗೆ ಸುಮ್ಮನೇ ಫ಼್ಲಶ್ ಮಾಡಿ ಹೊರಬಂದು ಫೋನಿನಲ್ಲಿ ನಗುತ್ತಾ ಹರಟುತ್ತಿದ್ದ
ಮಂಜನಿಯನ್ನೇ ಕಣ್ಣೂ ಮುಚ್ಚದೇ ದಿಟ್ಟಿಸಿದ. ಅರೆ, ಹೌದಲ್ಲಾ! ಯಾವಾಗಲೂ ಅವಳನ್ನು ಹತ್ತಿರದಿಂದ
ನೋಡಿದ್ದೇ ಇಲ್ಲ, ಆ ಗಾಜಿನ ಪುಟ್ಟ ಕ್ಯಾಬಿನ್ ಒಳಗಷ್ಟೇ ನೋಡಿದ್ದು. ಹತ್ತಿರ ಹೋಗಿ ಮಾತನಾಡಿಸುವ
ಅವಕಾಶಗಳು ಬಂದಿದ್ದರೂ ಇರುವ ಮೂವರನ್ನೇ ಕರೆದು ಅವರಿಗೇ ಮಾತನಾಡುವಂತೆ ತಿಳಿಸುತ್ತಿದ್ದ ಹೊರತು
ತಾನಾಗಿಯೇ ಮಾತೇ ಆಡಿಲ್ಲವಲ್ಲ ಎಂದೆನಿಸಿತು. ಆ ಗಾಜಿನ ಕ್ಯಾಬಿನ್ನಿನಲ್ಲಿ ಮಂಜನಿ ಶೋಕೇಸಿನ
ಪುಟ್ಟ ಗೊಂಬೆಯಂತೆ ಕಾಣಿಸುತ್ತಿದ್ದಳು.
ಯಾಕೋ ಆ ಗಳಿಗೆಗೆ ತನ್ನ
ಅಮ್ಮುವಿನ ನೆನಪು ಹಾರಿಬಂತು ಅವನಿಗೆ. ತನ್ನ ಸೀಟಿಗೆ ಬಂದು ಕೂತರೂ ಯಾವ ಕೆಲಸವನ್ನೂ ಮಾಡಲಾಗದೇ
ಕೈಗೆ ಸಿಕ್ಕಿದ ಹಾಳೆಯ ಮೇಲೆ ಗೀಚಲಾರಂಭಿಸಿದ. ಆ
ಸಮಯಕ್ಕೆ ಬಂದ ದಾದು ಅವನ ಬೆನ್ನು ತಟ್ಟಿದವರು ಇನ್ನೇನು ಮಾತನಾಡಬೇಕು, ಅಷ್ಟರಲ್ಲಿಯೇ ಇಷ್ಟು
ದಿನಗಳಲ್ಲಿ ಎಂದೂ ಇನ್ನೊಂದು ಮಾತನ್ನು ಹೇಳದಿರುವವರು, ಇವತ್ತು, “ ಬೇಡ ಬಾಬು, ನೋವಾಗುತ್ತದೆ
ನಿನಗೆ“ ಎಂದು ತಮ್ಮದಲ್ಲವೇ ಅಲ್ಲದ ಗೊಗ್ಗರು ಸ್ವರದಲ್ಲಿ ಉದ್ಗರಿಸಿ ದುರ್ದಾನ ತೆಗೆದುಕೊಂಡವರಂತೆ
ನಡೆದು ಬಿಟ್ಟರು. ಶ್ಯಾಡೋ ಸುಮ್ಮನೆ ಅವನನ್ನರೆಗಳಿಗೆ ನೋಡಿ ದಾದುವನ್ನು ಹಿಂಬಾಲಿಸಿತು. ಯಾಕೆ ದಾದು
ಹೀಗೆ ವರ್ತಿಸಿದರೆಂದು ದಿಗ್ಬ್ರಾಂತನಾಗಿ ಕೂತವನಿಗೆ ಅದರುತ್ತರ ಹೊಳೆದದ್ದು ತನ್ನ ಕೈಲಿರುವ
ಹಾಳೆಯನ್ನು ನೋಡಿದ ಮೇಲೆಯೇ. ಇಡೀ ಹಾಳೆಯ ತುಂಬಾ ಗೀಚಿಹಾಕಿದ್ದ ಹೆಸರು ‘ಮಂಜನಿ’. ತನ್ನ ಕೈ ಮೀರಿ
ಆದ ಅಚಾತುರ್ಯಕ್ಕೆ ಮೈ ಒಂದು ಕ್ಷಣ ನಡುಗಿದರೂ ಸಾವರಿಸಿಕೊಂಡು ಆ ಕಾಗದವನ್ನೆತ್ತಿ ಚೂರು ಚೂರಾಗಿ
ಹರಿದು ಕಾಲಿನಡಿಯಿಟ್ಟಿದ್ದ ಕಸದಬುಟ್ಟಿಗೆ ಎಸೆದುಬಿಟ್ಟ. ಟೇಬಲ್ ಮೇಲಿಟ್ಟಿದ್ದ ನೀರು ಎತ್ತಿ
ಗಟಗಟ ಕುಡಿದವನು ತನ್ನ ಎದೆಯಬಡಿತ ಸ್ಥಿಮಿತಕ್ಕೆ ತಂದುಕೊಳ್ಳಲು ಒದ್ದಾಡಿಹೋದ. ಏನೂ ಮಾಡಿದರೂ ಸರಿಯಾಗದಾಗ
ಮೇಜಿನ ಮೇಲಿದದ್ದನ್ನೆಲ್ಲಾ ಒಂದು ಮೂಲೆಗೆ ಸರಿಸಿ ಅದರ ಮೇಲೆ ತಲೆಯನ್ನಾನಿಸಿ ಮಲಗಿಬಿಟ್ಟ.
ಎಷ್ಟು ಹೊತ್ತು ಹಾಗೇ
ಮಲಗಿದನೋ ಗೊತ್ತಿಲ್ಲ, ಯಾರೋ ಮೈಮುಟ್ಟಿ ಎಚ್ಚರಿಸಿದಂತಾಗಿ ಕಣ್ಣು ಬಿಟ್ಟರೆ ಅತೀ ಹತ್ತಿರದಲ್ಲಿ
ನಿಂತಿದ್ದಾಳೆ ಮಂಜನಿ! ಎಂದೂ ಅವಳನ್ನು ಇಷ್ಟು ಹತ್ತಿರದಿಂದ ನೋಡದವನಿಗೆ ಸಂಪೂರ್ಣ ಕಕರು ಮಕರು
ಹಿಡಿದಂತಾಯಿತು. ಮೊದಲು ಅವನರಿವಿಗೆ ಬಂದಿದ್ದು ಉಸಿರುಗಟ್ಟಿಸುವಷ್ಟು ಘಾಟು ವಾಸನೆಯ ಸುಗಂಧ.
ನಂತರ ಅವಳನ್ನೇ ನಿರುಕಿಸಿದವನಿಗೆ ಕಂಡದ್ದು ವರುಷಾನುಗಟ್ಟಲೇ ನೋಡಿದ್ದ ರಕ್ತಗೆಂಪು ಸಿಂಧೂರ, ಹಣೆಯ
ಕುಂಕುಮ ಹಾಗೂ ರಕ್ತದಲ್ಲೇ ಅದ್ದಿ ತೆಗೆಯಲಾಗಿವೆಯೋ ಅನ್ನುವ ತುಟಿಗಳು. ಏನೂ ಮಾತನಾಡಲಾಗದೇ
ಸುಮ್ಮನಿದ್ದ ವಿಮುಖನನ್ನು ಮತ್ತೆ ಮೈಮುಟ್ಟಿ ಎಚ್ಚರಿಸಿದ ಮಂಜನಿ ಬೀಗದ ಕೈಯನ್ನು ಅವನ ಟೇಬಲ್
ಮೇಲಿಟ್ಟು ಹಾರುತ್ತಿದ್ದಾಳೋ ಎಂಬಂತೆ ಓಡಿ ಧಡಬಡ ಮೆಟ್ಟಿಲಿಳಿದದ್ದೂ ಆಯಿತು. ಯಾಕೋ
ಕುತೂಹಲವುಕ್ಕಿ ಕಿಟಕಿಯ ಬಳಿ ಬಂದು ನಿಂತ ವಿಮುಖನಿಗೆ ಕೆಳಗಡೆ ಕಂಡಿದ್ದು ಹೆಗಲ ಮೇಲೆಯೇ ನಿದ್ದೆ
ಹೋದ ನಾಲ್ಕೈದು ವರ್ಷದ ಮಗುವನ್ನೆತ್ತಿಕೊಂಡು ನಿಂತಿದ್ದ ಓರ್ವ ಹಿರಿಯ ಹೆಂಗಸು. ಮಂಜನಿ ಹೋದವಳೇ
ಮಗುವಿನ ಹಣೆ ಮುಟ್ಟಿ ನೋಡಿ, ಆ ಮಗುವನ್ನು ತಾನೆತ್ತಿಕೊಂಡಳು. ಅವರೀರ್ವರು ಕಿಟಕಿಗೆ ಬೆನ್ನು
ಹಾಕಿ ನಡೆದಂತೆ ವಿಮುಖನಿಗೆ ಮಲಗಿದ್ದ ಆ ಮಗುವಿನ ಮುಖ ಸ್ಪಷ್ಟವಾಗಿ ಕಾಣಿಸಲಾರಂಭಿಸಿತು. ಜ್ವರದ
ತಾಪಕ್ಕೆ ಕೆಂಪಾಗಿ ಬಾಡಿದಂತಿದ್ದ ಆ ಮಗುವಿನ ಮುಖ ಸಾಕಷ್ಟು ಚಿರಪರಿಚಿತ ಅನಿಸಲಾರಂಭಿಸಿತು.
ತಿರುಗುತ್ತಿದ್ದ ಫ್ಯಾನು,
ಲೈಟು ಎಲ್ಲವನ್ನೂ ಅದರದರ ಪಾಡಿಗೇ ಬಿಟ್ಟು ವಿಮುಖ ತನ್ನಿಂದಾದಷ್ಟು ಸಾಧ್ಯವಾದ ವೇಗದಲ್ಲಿ
ಕೆಳಗಿಳಿದು ಬಂದ. ರಸ್ತೆ ದಾಟಲೆಂದು ಕಾದು ನಿಂತಿದ್ದ ಮಂಜನಿಯನ್ನು ಕರೆದ, ಅವಳಿಗದು
ಕೇಳಿಸಲಿಲ್ಲ. ತನ್ನ ಜೀವಮಾನದಲ್ಲೇ ಮೊದಲ ಬಾರಿಗೆ ವಿಮುಖ ಗಟ್ಟಿಯಾಗಿ ಹೆಸರು ಹಿಡಿದು ಕೂಗಿದ. ನಿಂತು
ತಿರುಗಿದ ಮಂಜನಿಯ ಬಳಿಸಾರಿ, ಅವಳ ಕಂದು ಕಪ್ಪು ಕಣ್ಣುಗಳನ್ನೇ ನೋಡಿ ತನ್ನ ಅರೆ ಬರೆ ಕನ್ನಡದಲ್ಲಿ
“ ಬೇಬಿಗೆ ಹುಷಾರಿಲ್ಲ?, ನಾನೂ ಹೆಲ್ಪ್ ? “ ಎಂದ. ಮಂಜನಿ ಮಗುವನ್ನು ನಿಧಾನವಾಗಿ ಅವನ ಹೆಗಲಿಗೆ
ವರ್ಗಾಯಿಸಿದಳು, ಮೂವರೂ ರಸ್ತೆ ದಾಟಿದರು.
Friday, May 9, 2014
ಇವತ್ತು ನಮ್ಮ ಮನೆಗೆ ಶಂತನು ಡಾಕ್ಟ್ರು ಬಂದಿದ್ದಾರೆ. "ನಿಮಗೆ ಹುಷಾರಿಲ್ಲ ಆಲ್ವಾ? , ಏನಾಗಿದೆ ಹೇಳಿ" ಅಂದರು. "ಹೊಟ್ಟೆ ನೋವು" ಅಂದಿದ್ದಕ್ಕೆ ಅವರ ತೊಡೆ ಮೇಲೆ ತಲೆ ಇರಿಸಿಕೊಂಡು ಮುಖವನ್ನೇ ದಿಟ್ಟಿಸಿ ನೋಡಿದರು. ಆಮೇಲೆ ಸ್ಟೇತಾಸ್ಕೋಪ್ ಹಾಕಿಕೊಂಡು ಹೊಟ್ಟೆ ಒತ್ತಿ ನೋಡಿದರು. ಆಮೇಲೆ ನನ್ನ ತಿರುಗಿಸಿ ಬೆನ್ನೂ ಕೂಡಾ ಒತ್ತಿ ನೋಡಿದರು. "ನಿಮಗೆ ಹೊಟ್ಟೆ ನೋವು ಬಂದಿದೆ ಅಲ್ವ" ಅಂತ ಹೇಳಿ ತಮ್ಮ ಮೆಡಿಕಲ್ ಕಿಟ್ ಇಂದ ಚಾಕು ತೆಗೆದು ಹಾರ್ಟ್ ಸರ್ಜರಿ ಶುರು ಮಾಡಿಕೊಂಡರು.
"ಅಯ್ಯೋ, ನನಗಿರೋದು ಹೊಟ್ಟೆ ನೋವು" ಅಂತ ಅಳ್ತಾ ಇದ್ರೆ ಒಳ್ಳೆ ರೌಡಿ ಥರ ಜೋರಾಗಿ "ಸುಮ್ನಿರು, ನಂಗೆ ಗೊತ್ತು, ನೀನು ತಪ್ಪು ಹೇಳಿದ್ದಿ, ನಾ ಡಾಕ್ಟ್ರು ಎಲ್ಲಾ ಗೊತ್ತು. ನಾನು ಆಪರೇಷನ್ ಮಾಡ್ತಾ ಇದ್ದೀನಿ" ಅಂತ ಆವಾಜ್ ಬೇರೆ ಹಾಕಿದರು.
ನಕ್ಕೂ ನಕ್ಕೂ ನಿಜಕ್ಕೂ ಹೊಟ್ಟೆನೋವು! ಕಣ್ಣಲ್ಲಿ ನೀರು. ಈ ಡಾಕ್ಟ್ರು ನೋಡಿದ್ರೆ ಕೈ ಬೇರೆ ಕೊಯ್ತಾ ಇದ್ದಾರೆ. ಏನು ಮಾಡೋದು ?????
ಮಾನೂ
ಮಾನೂ,
ನನ್ನ ಅತೀ ಇಷ್ಟದ ಕಾದಂಬರಿಗಳಲ್ಲಿ ಒಂದು. ಜಯವಂತ ದಳವಿಯವರ (ಮರಾಟಿ ಮೂಲ) ,
ಚಂದ್ರಕಾಂತ ಪೋಕಳೆಯವರ ಅನುವಾದದ ಈ ಕಾದಂಬರಿಯ ಕಥಾ ವಸ್ತು ಸಣ್ಣ ಗ್ರಾಮವೊಂದರ ದೇವದಾಸಿ
ಮನೆಗೆ ಸೇರಿದ ಮಾಹಾನಂದ (ಮಾನೂ) ಳ ಸುತ್ತ ಗಿರಕಿ ಹೊಡೆಯುತ್ತದೆ. ಪರಂಪರಾಗತವಾಗಿ ಬಂದ
ವೃತ್ತಿಯ ಬಗ್ಗೆ ಒಲವಿರದ, ಮದುವೆ ಕನಸು ಕಾಣುವ, ಕುಲೀನ ಮನೆತನದವಳಂತೆ ಆಚಾರ,
ವಿಚಾರವಿರುವ ಸುಂದರಿಯೋರ್ವಳ ದುರಂತ ಪ್ರೇಮ ಕಥನವಿದು.
ಮನೆಗೆ ತುಷಾರ, ತರಂಗ, ಮಯೂರ, ಕಸ್ತೂರಿ ಇವಿಷ್ಟನ್ನೂ ತರೆಸುತ್ತಿದ್ದರು ತಂದೆಯವರು. ಆವಾಗ ತುಷಾರದಲ್ಲಿ ಎರಡು ಮೂರು ಕಂತುಗಳಲ್ಲಿ ಈ ಕಾದಂಬರಿ ಪ್ರಕಟವಾಗಿತ್ತು. ಅದನ್ನು ಓದಿದ್ದು ಎಷ್ಟು ಸಲವೋ!
ಇದಕ್ಕಿಂತೆ ಮಾನೂ ಚಿತ್ರ ಬರೆಯಬೇಕೆಂದು ಆಸೆಯಾಯಿತು. ಸರಿ ಬರೆಯಲು ಶುರು ಹಚ್ಚಿಕೊಂಡೆ, ಮಾಡ್ರನ್ ಹುಡುಗಿಯ ಚಿತ್ರ ಅಂದರೆ ಚೂಪು ಮೂಗು, ಗದ್ದ, ಕಣ್ಣುಗಳನ್ನ ಮೊದಲು ಬರೆದೆ. ಆಮೇಲೆ ಸಾಂಪ್ರದಾಯಿಕ ಮಾನೂವನ್ನು ಅವಳಲ್ಲಿ ತುಂಬಿಸಿದೆ. ಅವಳ ತುರುಬು, ಮುಡಿಯುವ ಅಬೋಲಿ ಹೂವಿನ ಮಾಲೆ, ರಕ್ತ ಕೆಂಪು ಕುಂಕುಮ ಏನೋ ಬರೆದೆ, ಆದರೆ ಮೂಗುತಿ ಮರೆತೇ ಹೋಯಿತು.
ಬಾಬು ಅಂದರೆ ಕಾದಂಬರಿಯ ಕಥಾನಾಯಕ ಮಾನೂವನ್ನು ಕಂಡಾಗ ಅವಳು ತುಳಸೀ ಕಟ್ಟೆಯ ಎದುರು ನಿಂತು ದೀಪವಿಟ್ಟು ಕೈ ಮುಗಿದು 'ಶುಭಂ ಕರೋತಿ' ಹೇಳುತ್ತಿರುತ್ತಾಳೆ. ಸುತ್ತಲಿನ ಗಿಡ ಮರಗಳ ಮಧ್ಯೆ, ದೀಪದ ಬೆಳಕಿನಲ್ಲಿ ಅವನಿಗೆ ಅವಳ ಮುಖ ನೀಲಾಂಜನದಂತೆ ಕಾಣುತ್ತದೆ. ಅವಳ ಚಿತ್ರ ಅಚ್ಚೊತ್ತಿದಂತೆ ಮನಸ್ಸಲ್ಲಿ ಕೂತಿತ್ತು. ನನ್ನ ಕಲ್ಪನೆಯ ಮಾನೂವಿನ ತುರುಬಿನಂದಲೇ ಬಳ್ಳಿ, ಎಳೆಗಳ ತಂದೆ.
Extra:- ಚಿತ್ರ ಬರೆದ ಮೇಲೆ ಮತ್ತೆ ಮಾನೂವನ್ನ ಓದಬೇಕಿನಿಸಿತು. ಹಳೆಯ ತುಷಾರಗಳು ಗೆದ್ದಲು ಹಿಡಿದು ಹಾಳಾಗಿ ಹೋಗಿದ್ದವು. ಇರೋ ಪುಸ್ತಕದ ಅಂಗಡಿಗಳಲೆಲ್ಲ ಹುಡುಕಾಯ್ತು, ಸಿಕ್ಕಿರಲಿಲ್ಲ. ಫೇಸ್ಬುಕ್ ಅಲ್ಲಿ ಈ ಪುಸ್ತಕ ಎಲ್ಲಿ ದೊರೆಯಬಹುದು ಎನ್ನುವ ಒಂದು ಪೋಸ್ಟ್ ಹಾಕಿದ್ದೆ. ಅವಧಿ ಕೂಡ ನನ್ನ ಪೋಸ್ಟ್ ಅನ್ನು ಪ್ರಕಟಿಸಿತ್ತು. ಅದನ್ನು ನೋಡಿದ ಜಗದೀಶ್ ಕೊಪ್ಪ ಅವರು ಚಂದ್ರಕಾಂತ ಪೋಕಳೆಯವರ ಫೋನ್ ನಂಬರ್ ನನಗೆ ಕೊಟ್ಟಿದ್ದರು. ಅವರ ಬಳಿ ಮಾತಾಡಿದ್ದೆ. ಅವರು ಈ ಪುಸ್ತಕವಲ್ಲದೆ ಅವ್ರ ಅನುವಾದದ ಇತರೆ ಪುಸ್ತಕಗಳನ್ನೂ ನನಗೆ ಕಳುಹಿಸಿಕೊಟ್ಟರು. ಮತ್ತೊಮ್ಮೆ ಅವರೆಲ್ಲರಿಗೂ ನನ್ನ ದೊಡ್ಡ ಥ್ಯಾಂಕ್ಸ್!
ನನ್ನೀ ಚಿತ್ರ ನನ್ನ ಕಲ್ಪನೆಯಲ್ಲಿರುವ ಮಾನೂ.
ಅತೀ ಸುಂದರ ಚಲನಚಿತ್ರವಾಗಬಲ್ಲ ಕಥೆಯುಳ್ಳ ಕಾದಂಬರಿಯಿದು.
ಮನೆಗೆ ತುಷಾರ, ತರಂಗ, ಮಯೂರ, ಕಸ್ತೂರಿ ಇವಿಷ್ಟನ್ನೂ ತರೆಸುತ್ತಿದ್ದರು ತಂದೆಯವರು. ಆವಾಗ ತುಷಾರದಲ್ಲಿ ಎರಡು ಮೂರು ಕಂತುಗಳಲ್ಲಿ ಈ ಕಾದಂಬರಿ ಪ್ರಕಟವಾಗಿತ್ತು. ಅದನ್ನು ಓದಿದ್ದು ಎಷ್ಟು ಸಲವೋ!
ಇದಕ್ಕಿಂತೆ ಮಾನೂ ಚಿತ್ರ ಬರೆಯಬೇಕೆಂದು ಆಸೆಯಾಯಿತು. ಸರಿ ಬರೆಯಲು ಶುರು ಹಚ್ಚಿಕೊಂಡೆ, ಮಾಡ್ರನ್ ಹುಡುಗಿಯ ಚಿತ್ರ ಅಂದರೆ ಚೂಪು ಮೂಗು, ಗದ್ದ, ಕಣ್ಣುಗಳನ್ನ ಮೊದಲು ಬರೆದೆ. ಆಮೇಲೆ ಸಾಂಪ್ರದಾಯಿಕ ಮಾನೂವನ್ನು ಅವಳಲ್ಲಿ ತುಂಬಿಸಿದೆ. ಅವಳ ತುರುಬು, ಮುಡಿಯುವ ಅಬೋಲಿ ಹೂವಿನ ಮಾಲೆ, ರಕ್ತ ಕೆಂಪು ಕುಂಕುಮ ಏನೋ ಬರೆದೆ, ಆದರೆ ಮೂಗುತಿ ಮರೆತೇ ಹೋಯಿತು.
ಬಾಬು ಅಂದರೆ ಕಾದಂಬರಿಯ ಕಥಾನಾಯಕ ಮಾನೂವನ್ನು ಕಂಡಾಗ ಅವಳು ತುಳಸೀ ಕಟ್ಟೆಯ ಎದುರು ನಿಂತು ದೀಪವಿಟ್ಟು ಕೈ ಮುಗಿದು 'ಶುಭಂ ಕರೋತಿ' ಹೇಳುತ್ತಿರುತ್ತಾಳೆ. ಸುತ್ತಲಿನ ಗಿಡ ಮರಗಳ ಮಧ್ಯೆ, ದೀಪದ ಬೆಳಕಿನಲ್ಲಿ ಅವನಿಗೆ ಅವಳ ಮುಖ ನೀಲಾಂಜನದಂತೆ ಕಾಣುತ್ತದೆ. ಅವಳ ಚಿತ್ರ ಅಚ್ಚೊತ್ತಿದಂತೆ ಮನಸ್ಸಲ್ಲಿ ಕೂತಿತ್ತು. ನನ್ನ ಕಲ್ಪನೆಯ ಮಾನೂವಿನ ತುರುಬಿನಂದಲೇ ಬಳ್ಳಿ, ಎಳೆಗಳ ತಂದೆ.
Extra:- ಚಿತ್ರ ಬರೆದ ಮೇಲೆ ಮತ್ತೆ ಮಾನೂವನ್ನ ಓದಬೇಕಿನಿಸಿತು. ಹಳೆಯ ತುಷಾರಗಳು ಗೆದ್ದಲು ಹಿಡಿದು ಹಾಳಾಗಿ ಹೋಗಿದ್ದವು. ಇರೋ ಪುಸ್ತಕದ ಅಂಗಡಿಗಳಲೆಲ್ಲ ಹುಡುಕಾಯ್ತು, ಸಿಕ್ಕಿರಲಿಲ್ಲ. ಫೇಸ್ಬುಕ್ ಅಲ್ಲಿ ಈ ಪುಸ್ತಕ ಎಲ್ಲಿ ದೊರೆಯಬಹುದು ಎನ್ನುವ ಒಂದು ಪೋಸ್ಟ್ ಹಾಕಿದ್ದೆ. ಅವಧಿ ಕೂಡ ನನ್ನ ಪೋಸ್ಟ್ ಅನ್ನು ಪ್ರಕಟಿಸಿತ್ತು. ಅದನ್ನು ನೋಡಿದ ಜಗದೀಶ್ ಕೊಪ್ಪ ಅವರು ಚಂದ್ರಕಾಂತ ಪೋಕಳೆಯವರ ಫೋನ್ ನಂಬರ್ ನನಗೆ ಕೊಟ್ಟಿದ್ದರು. ಅವರ ಬಳಿ ಮಾತಾಡಿದ್ದೆ. ಅವರು ಈ ಪುಸ್ತಕವಲ್ಲದೆ ಅವ್ರ ಅನುವಾದದ ಇತರೆ ಪುಸ್ತಕಗಳನ್ನೂ ನನಗೆ ಕಳುಹಿಸಿಕೊಟ್ಟರು. ಮತ್ತೊಮ್ಮೆ ಅವರೆಲ್ಲರಿಗೂ ನನ್ನ ದೊಡ್ಡ ಥ್ಯಾಂಕ್ಸ್!
ನನ್ನೀ ಚಿತ್ರ ನನ್ನ ಕಲ್ಪನೆಯಲ್ಲಿರುವ ಮಾನೂ.
ಅತೀ ಸುಂದರ ಚಲನಚಿತ್ರವಾಗಬಲ್ಲ ಕಥೆಯುಳ್ಳ ಕಾದಂಬರಿಯಿದು.
ಮೈ
ಮೇಲೂ ಛೋಟಾ ಭೀಮ್, ಟಿವಿಯಲ್ಲೂ! ಶಾಲೆ ಪುಸ್ತಕಗಳನ್ನು ಮೂಲೆಗೆಸೆದು ಆಯಿತು. ಇನ್ನು
ಡೊರಎಮೊನ್, ಭೀಮ್, ನಿಂಜಾ ಹಟೋರಿ, ಕಿತೆರೆತ್ಸು ಇತ್ಯಾದಿ ಬಾಯಿ ಮಾತ್ರ ಚಲಿಸುವ, ಪಡ ಪಡ
ಅಂತ ಕಿವಿ ಕೆಟ್ಟು ಹೋಗುವಷ್ಟು ಮಾತಾಡುವ ಗೊಂಬೆಗಳ ಲೋಕವಿನ್ನು ಮನೇಲಿ. ಅರ್ಥ
ಗೊತ್ತಿಲ್ಲದ, ಉಚ್ಚರಿಸಲೂ ಆಗದ ಜಪಾನಿ ಹೆಸರುಗಳು ಇಂತಹ ಪುಟ್ಟ - ಪುಟ್ಟಿಯರ ಬಾಯಲ್ಲಿ.
ಕಾಲಿಗೆಡರುವಂತೆ ಸಿಗುವ ಪುಟಾಣಿ ಕಾರು- ಬಸ್ಸು - ಟ್ರಕ್ಕುಗಳು, ಪಜಲ್ ಚೂರುಗಳು.
ಶುರುವಾಯಿತು ನೋಡಿ ರಜೆ, ಒಂದು ಆಟವೋ, ಟಿವಿ ಶೋನೋ ಮುಗಿದ ಕೂಡಲೇ 'ಅಮ್ಮ ಬೋರ್, ಏನು
ಮಾಡಲಿ' ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿ 'ಅಪ್ಪಾ ದೇವರೇ! ಈ ಮಕ್ಕಳಿಗೆ ರಜೆ
ಯಾಕಾದ್ರೂ ಕೊಡ್ತಾರೋ' ಅಂತ ಕಡಿಮೆಯೆಂದರೆ ದಿನಕ್ಕಿಪ್ಪತ್ತು ಸಲ ಗೋಳಾಡುವ ಅಮ್ಮಂದಿರೆ,
ನಿಮಗೆಲ್ಲ, ನಿಮ್ಮ ಹಾಗಿರುವ ಓರ್ವ ಅಮ್ಮನಿಂದ ಗುಡ್ ಲಕ್.
ಪಾಗಾರ ಹತ್ತಿ ಕೂತ ಈ ತ್ರೀ ಮಸ್ಕಟಿಯರ್ಸ್, ಪಕ್ಕದ ಮನೆಯ ಅಕ್ಕ ತಂಗಿ ಭೂಮಿಕ, ನೈನಿಕರಿಗೆ ಸೇರಿದ್ದು. ಇವುಗಳ ಹೆಸರು ಕೇಳಿದರೆ ನೈನಿಕ ಉಲಿದದ್ದು, "ಪೂರ್ತಿ ಬಿಳಿಯದರ ಹೆಸರು ಸುಣ್ಣ, ಕಿವಿ ಸಲ್ಪ ಕೆಂಪು ಇದೆಯಲ್ಲ, ಅದರ ಹೆಸರು ಮಣ್ಣು ಮತ್ತೆ ಬೂದು ಬಣ್ಣದರ ಹೆಸರು ಸಿಮೆಂಟ್" ಅಂತೆ! ಆ ಹೆಸರುಗಳನ್ನು ಕೇಳಿ ನಾವು ತಬ್ಬಿಬ್ಬಾಗುವ ಮೊದಲು, " ಅವುಗಳ ಅಪ್ಪ ಇದ್ದಾನೆ, ಅವನ ಹೆಸರು ಜಬ್ಬ " ಅಂದಳು. ಹೇಳಿ, ಈ ಮರಿಗಳು ಮುದ್ದೋ, ಅವುಗಳ ಹೆಸರುಗಳೋ
ಹೀಗೊಂದು ದಿನ
ಮುಂಜಾವಿನ ಚಳಿಗೇಳುವ ಕಲ್ಲು ಬೆಂಚುಗಳು
ರೆಡಿಯಾದವು, ಸೊಸೆಯಂದಿರ ಬಗೆಗಿನ ದೂರಾಲಿಸಲು
ವೃದ್ಧರ ಕಾಲು ಸೋತ, ದಿಟ್ಟ ನಡಿಗೆಯ ಚೆಂದ ಸವಿಯಲು
ಆಗೀಗ ಕಾಣುವ ಯೌವನದ ಬಿರುಸು ಹೆಜ್ಜೆಗಳಿಗೆ ಅದುರಲು
ಕಲ್ಲು ಬೆಂಚಿಗೆ ಬಾಯಿಯಿದ್ದರೆ ಹೇಳುತ್ತಿತ್ತು ಎಲ್ಲಾ ಕಾಯಿಲೆಗಳ ವಿವರ
ಎಲ್ಲಾ ಅಮ್ಮಂದಿರಿಗೆ ಇರುವ ಮದುವೆ ಆದ ಮೇಲೆ ಮಗ ಬದಲಾದ ಪ್ರವರ
ನಡುನಡುವೆ ಪಾಕಶಾಲಾ ಪ್ರಯೋಗಗಳೂ, ಇಲ್ಲವೇ ಪ್ರಧಾನಿ ಹಣೆಬರಹಗಳೂ
ಶೇರು ಮಾರುಕಟ್ಟೆಯ ಬಿಟ್ಟಿರಾ ಸ್ವಾಮೀ, ಎಲ್ಲದರ ನಡುವೆ ನುಸುಳಬಹುದು ನಿತ್ಯಾನಂದ ಸ್ವಾಮಿ!
ಮಧ್ಯಾಹ್ನದ ಬಿಸಿಲಲ್ಲಿ ಕಾದೇ ಕಾದೀತು ಕಲ್ಲೂ, ಬೆಂಚೂ
ಬಂದವರು ಒಂದಿಷ್ಟು ಬಿಸಿಲಲ್ಲಿ ಬೆಂದವರು, ಪ್ರೇಮದಲ್ಲಿ ನೊಂದವರು
ಮಾಲಲ್ಲೂ, ಥಿಯೇಟರನಲ್ಲೋ ಜಾಗ ಸಿಗದವರು
ತಲೆ ಬಿಸಿಗೋ, ಮನೆಯ ಕಾವಿಗೋ ಮರದ ತಂಪನರಸಿ ಬಂದವರು
ಕರ್ಚೀಫ್ಫು ಹಾಕಿ ಅಲ್ಲೇ ತೂಕಡಿಸಿಯಾರು,
ಗಾಳಿಯೂ ಕರುಣೆ ತೋರಿಸಿ ಅನ್ನಬಹುದು ಉಫ್ ಎಂದು!
ಮರಗಳೂ ಸರಿಸಿಯಾವು ಎಲೆಗಳ ಇನ್ನೂ ಹತ್ತಿರ, ಬಿಸಿಲು ತಾಕದಂತೆ
ಹಗಲಿಡೀ ಕಾದ ಸೂರ್ಯನಾದ ಕೆಂಪು-ಕೇಸರಿಯೀಗ
ಶುರುವಾಯಿತು ಚಿಣ್ಣರ ಮೆರವಣಿಗೆ ಪಾರ್ಕಿಗೀಗ.
ತಳ್ಳು ಗಾಡಿಗಳಲಿ ಬಂದರು ಪುಟ್ಟ ಪುಟ್ಟ ದೇವತೆಗಳು
ಬಣ್ಣ ಬಣ್ಣದ ತೊಡುಗೆಯುಟ್ಟ ಪುಟ್ಟ ಅಮ್ಮಗಳೂ!
ಪೋರರ ಚಿಲಿಪಿಲಿ ಕೇಳಲು ಆದವು ಹಕ್ಕಿಗಳು ಗಪಚುಪ್
ಮರಗಳು ಖುಷಿ ತಡೆಯಲಾರದೆ ಗಲಗಲ ನಕ್ಕು ಎಲೆಯುದುರಿಸಿದವು.
ಹೂಗಳದ್ದಂತೂ ತೀವ್ರ ಸ್ಪರ್ಧೆ ಮುದ್ದು ಮರಿಗಳ ನಗುವಿನೊಂದಿಗೆ
ಸುಮ್ಮನೆ ಕೂತ ಬೆಂಚುಗಳು ಕಣ್ಣು-ಕಿವಿಯುಜ್ಜಿ ಪುನೀತರಾದವು.
ಈ ಕ್ಷಣಕೆ ಕಾದ ಉಯ್ಯಾಲೆಗೀಗ ಸುಖದ ಜೀಕು!
ಜಾರು ಬಂಡಿಗೂ, ತಿರುಗು ಮಣೆಗೂ ಸುಯ್ಯನೆ ನಿಟ್ಟುಸಿರು!
ಏತವೂ ನಕ್ಕಿತು ಸುಖಾ ಸುಮ್ಮನೆ ಹಾಗೆ, ಹೀಗೆ
ಕಬ್ಬಿಣದ ಕಂಬಗಳ, ಬಿದ್ದಿದ್ದ ಮರಳ ಜನ್ಮ ಪಾವನ.
ಪಾರ್ಕಿನ ಜಗವಿಡೀ ತುಂಬಿದ ನಗು, ಚೀರಾಟ, ಕೇಕೆ.
ಹೊರ ಹೋದ ಮಕ್ಕಳು ಮನೆಗೆ ಮರಳಿದಾಗ ಏಳುವ ಸಂಭ್ರಮದ ಹಾಗೆ.
ಮನೆ
ಮೈ ತುಂಬಾ ಎಣ್ಣೆ ಹಚ್ಚಿ ಬಿಟ್ಟ
ಮಗುವಿನ ಕೈ ಕಾಲಿನ ಗುರುತುಗಳು,
ಮಗುವಿನ ಕೈಗೆ ಸಿಕ್ಕಷ್ಟು ಎತ್ತರಕ್ಕೂ
ಗೀಚಿದ ಮುದ್ದು ಮುದ್ದು ಚಿತ್ತಾರಗಳು,
ಅಲ್ಲಿ ಮೂಡಿದ ಆಗಸ, ನಕ್ಷತ್ರ, ಹಕ್ಕಿಗಳು.
ನಲ್ಲನ ಪಿಸುಮಾತಿಗೆ ನನ್ನಷ್ಟೇ
ಕೆಂಪಾಗಿ ಹೋದ ಗೋಡೆಯ ತುಣುಕುಗಳು,
ಸಂತಸ-ಸಂತಾಪ, ಹಾರಾಟ-ಚೀರಾಟ ಎಲ್ಲವನ್ನೂ
ಕಂಡು ತಿರು ತಿರುಗಿ ನಕ್ಕ-ಅತ್ತ ಪಂಖಗಳು,
ಸಹಜವಾಗಿ ಮನೆ-ಮನ ಬೆಳಗಿದ ಕೃತಕ ದೀಪಗಳು.
ಹೊಸ ರುಚಿಯ ಜಯದ ಬಹುಮಾನಗಳಿಗೆ
ನಾಚಿ ತಲೆ ತಗ್ಗಿಸಿದ ಅಡುಗೆ ಮನೆಯ ಕಪಾಟುಗಳು
ಉಳಿದದ ಚೆಲ್ಲುವಾಗ, ಒಡೆದ ಹಾಲು ಸುರಿಯುವಾಗ
ನನ್ನಷ್ಟೇ ನೊಂದು ಪರಿತಾಪಗೊಂಡ ಸಿಂಕುಗಳು.
ಪಟದ ಹಾಗೂ ಕಲ್ಲ,ಬೆಳ್ಳಿಯ ವಿಗ್ರಹದ ದೇವರಷ್ಟೇ
ಜತೆಯಾಗಿ ನಿಂತು ಮನಕೆ ಶಕ್ತಿ ಕೊಟ್ಟು
ಸಂತೈಸಿದ ದೇವರ ಮನೆಯ ಗೋಡೆಗಳೂ,
ಬಾಗಿಲಿಗೆ ಹಚ್ಚಿದ ಪುಟ್ಟ ಪುಟ್ಟ ಗಂಟೆಗಳು.
ಅಗಲದಂತೆ ಬಲವಾಗಿ ಗೋಡೆಯನ್ನಪ್ಪಿ
ಸಮಯ, ದಿನಾಂಕ, ಪಂಚಾಂಗಗಳ
ಹೊತ್ತು ಇದ್ದೂ ಇಲ್ಲದಂತಾದ
ಗೋಡೆಯ ಮೊಳೆಗಳು, ಅಂಟಣಿಕೆಗಳು
ದೇವರೇ, ಈ ಎಲ್ಲವನ್ನೂ ಬಿಟ್ಟು ಹೋಗಲೇಬೇಕೆ ?
ಹೊಸ ಬಣ್ಣ ತೊಡುವ ಈ ಮನೆಯೊಂದಿಗೆ
ನೆನಪುಗಳ ಸಂಭ್ರಮವೂ ಮುಗಿಯುವುದಲ್ಲಿಗೆ
ಚಿತ್ತಾರಗಳೂ, ಗೋಡೆಗಳೂ, ಘಂಟೆಗಳು
ಅಳುತ್ತಿವೆಯೆ ಮೂಕವಾಗಿ ನಮ್ಮ ನಿಮ್ಮಂತೆ?
Subscribe to:
Posts (Atom)