ಘಮ್ಮನೆ ಪಸರಿಸಿತು ಸುಗಂಧ ಧರೆಗೆ ಇಳಿದಳೋರ್ವ ಮಾಯಾ ಕಿನ್ನರಿ
ಚೆಲುವಿಗೆ ಮನಸೋತವರೆಷ್ಟೋ ಕಣ್ಣುಗಳ ಬೆಳಕಿಗೆ ಮರುಳಾದವರೆಷ್ಟೋ
ನಗುವಂತೂ ಹೂಗಳನೂ ನಾಚಿಸಿತಲ್ಲ
ನಾ ಅವಳ ಬೆನ್ನು ಹತ್ತಿ ಹೊರಟೆ ಕಿನ್ನರಿಯ ಮಾಯಾ ನಗುವಿನ ರಹಸ್ಯ ತಿಳಿಯಲು
ಕಿನ್ನರಿ ಹೊಕ್ಕಿದ್ದು ಒಂದು ಮನೆಗೆ, ಅಲ್ಲಿ ಕೇಳಿದ್ದು ರೋಗಿಗಳ ನರಳಾಟ, ಒರಲಾಟ
ರೋಗಿಗಳೆಂದರೆ ರೋಗಿಗಳಲ್ಲ, ರೋಗಗ್ರಸ್ಥ ಮನಗಳ ಮನುಜರು
ಸೇವೆ ಮಾಡಿದಳು ಕಿನ್ನರಿ ನಗು ಮೊಗದಲಿ, ಶಾಂತಿಯಲಿ, ತಾಳ್ಮೆಯಲಿ
ಕಿನ್ನರಿಯ ನಗುವಲಿ ರೋಗಿಗಳ ನರಳಾಟ ಮುಚ್ಚಿಹೊಯಿತಲ್ಲ
ಅವರ ಮನವೂ ತಂಪಾಯಿತು
ಹೂವಿನ ಸರದಂತೆ ಜವಾಬ್ದಾರಿಗಳ ಎತ್ತಿದಳು ಮಾಯದಲಿ
ಮತ್ತದೇ ಸುಂದರ ತಂಪಾದ ಬೆಳದಿಂಗಳ ನಗೆ ಚೆಲ್ಲಿದಳು
ಅರರೇ, ಕಿನ್ನರಿ ಹೊರಟದೆಲ್ಲಿಗೆ, ಬಾವಿಯ ಕಟ್ಟೆ ಮೇಲೆ ಕುಳಿತು ಮಾಡುತಿಹಳು ಏನು ?
ಸನಿಹಕೆ ಹೋದರೆ ಕಂಡದ್ದೇನು? ನೋವು ಯಾತನೆಗಳ ಕಣ್ಣೀರ ರೂಪದಲಿ ಬಿದ್ದಿಹುದು
ಅದೆಲ್ಲಾ ಮಾಯಕಿನ್ನರಿಯ ಮುಖವಾಡದಿಂದ ಹೊರಬಿದ್ದಿಹುದೇ, ಅಹುದಲ್ಲ ?
ಕಿನ್ನರಿ ನನ್ನ ನೋಡಿ ಮತ್ತೆ ಮುಖವಾಡ ಧರಿಸಿ ಮತ್ತದೇ ಚೆಂದದ ನಗೆ ನಕ್ಕಳು
ಈಗ ಆ ನಗುವಲಿ ಹಿಂದೆ ಎಂದೂ ಕಾಣದ ಸೊಗಸಿತ್ತು ಮೊಗದಲಿ ಮತ್ತದೇ ಶಾಂತಿ , ಮನ ಕರಗಿಸುವ ಪ್ರೀತಿ
ಅವಳ ತಾಳ್ಮೆಗೆ ಬೆರಗಾಗಿ ಹೊರಬಂದರೆ ಏನಾಶ್ಚರ್ಯ ಜಗದಲಿ ತುಂಬುತ್ತಿಹರು ಇಂತಹುದೇ ಕಿನ್ನರಿಯರು
ಮತ್ತವರ ಹೆಸರೂ ಒಂದೇ "ಸ್ತ್ರೀ "
No comments:
Post a Comment