Tuesday, April 16, 2013

ಸಾವು

ಆತ್ಮಕ್ಕೆ ಸಾವಿಲ್ಲ ಅನ್ನುತ್ತಾರೆ ದೊಡ್ಡವರು, ತಿಳಿದವರು
ಆತ್ಮ ಬಂಧು ಹೋದ ಮೇಲೆ ಅತ್ಮವಿದ್ದೂ ಬದುಕಿದೆಯೇ?

Wednesday, April 10, 2013

Yugadi

ಅಂದೆಂದೋ ತಿಂದ ಬೇವು, ಸಿಹಿಯಾಗಲೇ ಇಲ್ಲ
ಆಮೇಲೆ ತಿಂದ ಬೆಲ್ಲವೋ ಕಹಿಯನ್ನೇ ತಂದಿತಲ್ಲ
ಇಂದೂ ಮರಳಿ ಬಂದಿದೆ ಯುಗಾದಿ, ಮತ್ತೆ ಬೇವು ಬೆಲ್ಲ
ಹೊಸ ಕನಸುಗಳೂ, ಆಸೆಗಳನ್ನು ಹೊತ್ತು ತಂದೀತಲ್ಲ
ಸಿಗಬಹುದೇ ಈ ವರುಷ ಬಾಳಿನಲ್ಲಿ ಬರೀ ಬೆಲ್ಲ?

Wednesday, April 3, 2013

Complexities

Human mind. Thats what was there in my mind :-)

Wednesday, March 27, 2013

ನನ್ನ ಆತ್ಮಕಥೆ


ನಾನು ಅಮಂದಾ ಟಾಡ್. ನೀವೀಗ ಓದುತ್ತಿರುವುದು ಎಂದೂ ಮುಗಿಯದ ನನ್ನ ಆತ್ಮಕಥೆ.

ಮಲಗಿದ್ದೇನೆ ನಿಶಬ್ಧವಾಗಿ ಗೋರಿಯೊಳಗೆ
ಇಲ್ಲ್ಯಾರೂ ಹಂಗಿಸುವವರಿಲ್ಲ ಎನಗೆ.

ಹೌದು. ನಾನೀಗ ಈ ಪ್ರಪಂಚದಲ್ಲಿಲ್ಲ. ನನ್ನ ಫೋಟೋ, ನನ್ನ ವಿಡಿಯೋಗಳಲ್ಲಷ್ಟೇ ಬದುಕಿರುವ ನಾನು ನಿಮ್ಮ ಮನೆಯಲ್ಲಿರುವ ಮಗಳಂತೆ ತುಂಬು ಕನಸುಗಳಿದ್ದ ಹುಡುಗಿ. ನನಗೆ ಹಾಡುವುದೆಂದರೆ ತುಂಬಾ ಇಷ್ಟವಿತ್ತು. ಅಂದ ಹಾಗೆ ನನ್ನ ಪರಿಚಯ ಮಾಡಿಕೊಳ್ಳಲೇ ಇಲ್ಲವಲ್ಲ ನಾನು.... ನಾನು ಹುಟ್ಟಿದ್ದು ಬ್ರಿಟಿಷ್ ಕೊಲಂಬಿಯಾದಲ್ಲಿ, ನವೆಂಬರ್ ೨೭ರ ೧೯೯೬ರಂದು. ಎಲ್ಲಾ ಹೆಣ್ಣು ಮಕ್ಕಳಂತೆ ನಾನು ಮುದ್ದಾಗಿದ್ದೆ. ನನ್ನ ಅಮ್ಮನ ಹೆಸರು ಕಾರೊಲ್. ನಾನು ಏಳನೇ ತರಗತಿಯಲ್ಲಿದ್ದೆ. ಫ್ರೆಂಡ್ಸ್ ಒಟ್ಟಿಗೆ ಸೈಬರ್ ಕೆಫೆಗೆ ಹೋಗಿದ್ದೆ, ಚಾಟ್ ಮಾಡೋದಿಕ್ಕೆ. ಹೌದು, ನನ್ನ ವಯಸ್ಸಿಗೆ ಹುಡುಗರ ಜೊತೆ ಮಾತಾಡೋದಂದ್ರೆ ಒಂಥರಾ ಥ್ರಿಲ್ ಅನಿಸ್ತಾ ಇತ್ತು. ಯಾರೋ ಒಬ್ಬ ಪರಿಚಯವಾದ. ನನ್ನ ಎಷ್ಟು ಇಷ್ಟಪಟ್ಟ ಗೊತ್ತಾ? ನಾನು ಖುಷಿಯಲ್ಲಿ ಇದ್ದೆ. ತುಂಬಾ ಹೊತ್ತು ಮಾತನಾಡಿದೆವು. ಇವಾಗಂತೂ ಎಲ್ಲರಿಗೂ ಬಾಯ್ ಫ್ರೆಂಡ್ ಇರ್ತಾರೆ ಅಲ್ವಾ ? ಯಾರೋ ಎಲ್ಲೋ ಕೂತು ನನ್ನನ್ನು ನೋಡಿ ಹೊಗಳಿದರೆ ಎಷ್ಟು ಖುಷಿ ಅನಿಸಿತು ಗೊತ್ತಾ ? ನಾನು ಪರ್ಪ್ಫೆಕ್ಟ್, ಸುಂದರಿ ಅಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು. ಅವನನ್ನು ಎಷ್ಟು ಹೊಗಳಿದ ಅಂದರೆ, ಅವನ ಮಾತಿಗೆ ಮರುಳಾಗಿ ಹೋದೆ. ಅವನು ವೆಬ್ ಕ್ಯಾಮ್ ಮುಂದೆ ನನ್ನೆದೆಯನ್ನು ತೋರಿಸಲು ಕೇಳಿಕೊಂಡಾಗ ಯಾವುದೋ ಹುಚ್ಚು ಉತ್ಸಾಹದಲ್ಲಿ ಹಾಗೆಯೇ ಮಾಡಿದೆ. ಆವಾಗಷ್ಟೇ ನಾನು ನೋಡಲಾರಂಭಿಸಿದ ಪ್ರಪಂಚದಲ್ಲಿ ಎಲ್ಲವೂ ಸುಂದರವಾಗಿ ಕಾಣುತ್ತಿತ್ತು, ನಾನೂ ಸುಂದರವಾಗಿರುವೆನೆಂಬ ಅನಿಸಿಕೆಯ ಜೊತೆ ಅದರ ಪ್ರದರ್ಶನ ತಪ್ಪೇನಿಲ್ಲ ಅನಿಸಿತ್ತು.

ಒಂದು ವರ್ಷದ ನಂತರ ನನ್ನ ಫೇಸ್ ಬುಕ್ ಗೆ ಒಂದು ಮೇಸೆಜ್ ಬಂತು . ಆ ಮೇಸೇಜ್ ಅಲ್ಲಿ ಇದ್ದದ್ದು ನೀನು ಒಂದು ಶೋ ಕೊಡದಿದ್ದಲ್ಲಿ ನಿನ್ನ ಬಗ್ಗೆ ಪ್ರಪಂಚಕ್ಕೆ, ನಿನ್ನಫ್ರೆಂಡ್ಸ್ ಗೆ ನಿನ್ನ ಚಿತ್ರವನ್ನು ಕಳುಹಿಸುತ್ತೇನೆ ಅಂತ. ಅವತ್ತು ನಾನ್ಯಾರೊಂದಿಗೆ ಚಾಟ್ ಮಾಡಿದ್ದೇನೋ ಅವನಿಂದ, ನನ್ನ ಬಗ್ಗೆ ಅವನಿಗೆ ಹೇಗೆ ತಿಳಿಯಿತು ಅಂತ ಗೊತ್ತಾಗಲಿಲ್ಲ ಅಷ್ಟೇ ಅಲ್ಲ, ಅವನಿಗೆ ನನ್ನ ವಿಳಾಸ, ಸ್ಕೂಲ್ ಹೆಸರು, ಸಂಬಂಧಿಗಳು,ಫ್ರೆಂಡ್ಸ್ ಎಲ್ಲರೂ ಗೊತ್ತಿತ್ತು.

ಕ್ರಿಸ್ ಮಸ್ ಸಮಯ, ಬೆಳಗ್ಗೆ ನಾಲ್ಕು ಗಂಟೆಗೆ ನನ್ನ ಮನೆ ಬಾಗಿಲು ಬಡಿದವರು ಪೋಲೀಸರು. ನನ್ನ ಆ ಚಿತ್ರ ಎಲ್ಲರಿಗೂ ಕಳುಹಿಸಲ್ಪಟ್ಟಿತ್ತು. ನನ್ನ ಸ್ಥಿತಿ ಹದಗೆಟ್ಟಿತು.ತೀವ್ರ ಮಾನಸಿಕ ಖಿನ್ನತೆ, ಆತಂಕದ ದಿನಗಳಗಾಗಿದ್ದವು ಅವು. ತಡೆಯಲು ಶಕ್ತಿ ಇಲ್ಲದೆ ಡ್ರಗ್ಸ್ ಮತ್ತು ಮದ್ಯಪಾನದ ಮೊರೆಹೋದೆ. ಅದರಿಂದ ನನ್ನ ಖಿನ್ನತೆ ತೀವ್ರವಾಯಿತೇ ವಿನಹ ಏನೂ ಪ್ರಯೋಜನವಾಗಲಿಲ್ಲ. ಎಲ್ಲೂ ಹೊರಗಡೆ ಹೋಗುವಂತಿರಲಿಲ್ಲ. ಪ್ರತಿ ರಾತ್ರಿಯೂ ಅಳುತ್ತಿದ್ದೆ. ಎಲ್ಲ ಫ್ರೆಂಡ್ಸ್ ಹಾಗೂ ಗೌರವವನ್ನು ನಾ ಕಳೆದುಕೊಂಡಿದ್ದೆ. ಯಾರೂ ನನ್ನನ್ನು ಇಷ್ಟಪಡುತ್ತಿರಲಿಲ್ಲ, ನನ್ನನ್ನು ಹೀಯಾಳಿಸುತ್ತಿದ್ದರು, ಹಂಗಿಸುತ್ತಿದ್ದರು. ನಾನು ನನ್ನ ಆ ಚಿತ್ರವನ್ನೆಂದೂ ಮರಳಿ ಪಡೆಯಲಾರೆ, ಅದು ಎಂದೆಂದೆಗೂ, ಎಲ್ಲೆಡೆಯೂ ಹರಡಿತ್ತು. ನನಗೆ ನಾನೇ ನೋವು ಮಾಡಿಕೊಳ್ಳಲಾರಂಭಿಸಿದೆ, ನಾನು ಪ್ರಾಮಿಸ್ ಮಾಡ್ತೇನೆ. ಇನ್ನೊಂದು ಸಲ ಈ ರೀತಿ ಮಾಡುವುದಿಲ್ಲ ಎಂದು ಬಾರಿ ಬಾರಿ ಅಂದುಕೊಂಡೆ, ಆದರೆ ಯಾರೂ ನನ್ನ ಹತ್ತಿರ ಸುಳಿಯುತ್ತಿರಲಿಲ್ಲ. ಒಬ್ಬಳೇ ಕೂತು ಮಧ್ಯಾಹ್ನದ ಊಟ ಮಾಡಬೇಕಿತ್ತು ನನ್ನ ಹೊಸ ಸ್ಕೂಲ್ ನಲ್ಲಿಯೂ. ಮತ್ತೆ ಮತ್ತೆ ಶಾಲೆಗಳು ಬದಲಾಯಿಸಲ್ಪಟ್ಟವು. ಲೈಬ್ರೆರಿ, ಮೆಸ್ ಎಲ್ಲಿ ಹೋದರೂ ಒಬ್ಬಳೇ ಇರುತ್ತಿದ್ದೆ.

ನನ್ನ ಹಳೇ ಗೆಳೆಯನೋರ್ವ ನನ್ನನ್ನು ಮಾತನಾಡಿಸಲು ಆರಂಭಿಸಿದ. ನನ್ನನ್ನು ಇಷ್ಟಪಡುತ್ತಿದ್ದೇನೆಂದೂ ಹೇಳಿದ. ನಾವು ಒಬ್ಬರಿಗೊಬ್ಬರು ಹತ್ತಿರವಾದಂತೆ ನನ್ನ ಒಂಟಿತನವೂ ದೂರವಾಗತೊಡಗಿತು. ನಮ್ಮ ಸಂಬಂಧ ಮುಂದುವರಿಯುತ್ತಲೇ ಹೋಯಿತು. ಆದರೆ ಅವನಿಗಾಗಲೇ ಓರ್ವ ಸಂಗಾತಿಯಿದ್ದಳು. ನಾನು ಮತ್ತೆ ಮೋಸ ಹೋಗಿದ್ದೆ ನನ್ನನ್ನು ಎಂದೂ ಅವನು ಪ್ರೀತಿಸಿರಲೇ ಇಲ್ಲ. ದೊಡ್ಡ ತಪ್ಪು ಮಾಡಿದ್ದೆ ನಾನು. ಒಂದು ವಾರದ ನಂತರ ನನಗೆ ಒಂದು ಮೇಸೆಜ್ ಬಂತು ಶಾಲೆಯಿಂದ ಹೊರಹೋಗುವಂತೆ. ಅದೇ ದಿನ ಊಟದ ಸಮಯದಲ್ಲಿ ಆತ, ಆತನ ಗೆಳತಿ ಹಾಗೂ ೧೫ ಇತರೇ ಜನರು ನನ್ನ ಬಳಿ ಬಂದರು. ನನ್ನ ಹೊಸ ಸ್ಕೂಲ್ ನ ಸುಮಾರು ೫೦ ಜನ ಸಹಪಾಠಿಗಳೆದುರು ಅವರು ನನ್ನ ಹೀಯಾಳಿಸಿದರು, ನನ್ನನ್ನು ಯಾರೂ ಇಷ್ಟಪಡುವುದಿಲ್ಲವೆಂದರು. ಆ ಹುಡುಗ ನನ್ನ ಮೇಲೆಯೇ ಕೂಗಾಡಿ ತನ್ನ ಗೆಳತಿಗೆ ನನ್ನ ಮೇಲೆ ಕೈ ಮಾಡುವಂತೆ ಹೇಳಿದ. ಅಂತೆಯೇ ಅವಳು ನನ್ನ ಹೊಡೆದು ಕೆಳಗೆ ಬಿಳಿಸಿ ಮತ್ತೆ ಮತ್ತೆ ಹೊಡೆದಳು. ಅಲ್ಲಿದ್ದ ವಿದ್ಯಾರ್ಥಿಗಳು ಅದನ್ನೂ ರೆಕಾರ್ಡ್ ಮಾಡಿಕೊಂಡರು, ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ನಾನಲ್ಲಿ ಬಿದ್ದಿದ್ದೆ ಒಬ್ಬಳೇ ಹತಾಶಳಾಗಿ.ನಾನು ತಮಾಶೆಯ ವಸ್ತುವಾಗಿ ಬಿಟ್ಟಿದ್ದೆ ಈ ಜಗಕ್ಕೆ, ನನ್ನ ಸ್ಥಿತಿ ಯಾರಿಗೂ ಬರಬಾರದು ಎಂದುಕೊಂಡೆ. ಯಾವುದೋ ಕೊಳಚೆ ಗುಂಡಿಯಲ್ಲಿ ಬಿದ್ದಿದ್ದೆ, ನಾನಂದುಕೊಂಡಿದ್ದೆ ಅವನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನೆಂದು. ನನ್ನ ತಂದೆ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ನಾನು ಸಾಯಬೇಕೆಂದು ಎಷ್ಟು ತೀವ್ರವಾಗಿ ಅನಿಸಿತ್ತೆಂದರೆ ನಾನು ಬ್ಲೀಚ್ ಕುಡಿದುಬಿಟ್ಟೆ. ನನ್ನನ್ನು ಕೂಡಲೇ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿದ್ದರಿಂದ ಮತ್ತೆ ಬದುಕಿ ಬಂದೆ.

ಅಲ್ಲಿಂದ ಹೊಸ ಸ್ಕೂಲ್ ಗೆ ಸೇರಿದೆ ಮತ್ತು ಹೊಸ ಜೀವನ ನಡೆಸಲು ಬಯಸಿದೆ. ಅಮ್ಮನ ಬಳಿ ಹೇಳಿದೆ ಕೂಡಾ ಮತ್ತೆ ಸಂಗೀತದ ಕ್ಲಾಸ್ ಗಳನ್ನು ಶುರು ಮಾಡುತ್ತೇನೆಂದು. ಆದರೆ ಮನೆಗೆ ಬಂದು ನೋಡಿದರೆ ನನ್ನ ಫೇಸ್ ಬುಕ್ ವಾಲ್ ಮೇಲೆ ನನ್ನ ಹೊಡೆದ ಚಿತ್ರದ ತುಣುಕುಗಳಿದ್ದವು..... ಅದಕ್ಕಿಂತ ಭೀಕರವಾದುದು ನಾನು ಯಾಕೆ ಸಾಯಲಿಲ್ಲ ಸಾಯಲು ಇನ್ನೂ ಸ್ಟ್ರಾಂಗ್ ಬ್ಲೀಚ್ ಕುಡಿಯಬೇಕೆಂಬುದನ್ನು ಬರೆದಿದ್ದರು. ನನ್ನ ಬಗ್ಗೆ ಅತೀ ಕೆಟ್ಟ, ಅಸಹ್ಯ ಹಾಗೂ ಅಶ್ಲೀಲವಾಗಿ ಜನಗಳು ಮಾತನಾಡಿಕೊಂಡಿದ್ದರು. ನಾನು ಅತೀ ಕೆಟ್ಟ ಸ್ಥಿತಿಯಲ್ಲಿದ್ದೆ, ೨ ದಿನ ಆಸ್ಪತ್ರೆಯಲ್ಲಿರಬೇಕಾಯಿತು ಖಿನ್ನತೆಯಿಂದಾಗಿ. ನನ್ನ ಅತೀ ಕಡಿಮೆ ಅಂಕಗಳಿಂದಾಗಿ ಸ್ಕೂಲ್ ಮತ್ತೆ ಬದಲಾಯಿಸಲ್ಪಟ್ಟಿತ್ತು.

================================================

ಸಣ್ಣ ಸಣ್ಣ ಪೇಪರ್ ಗಳಲ್ಲಿ ಈ ಮೇಸಜ್ ಗಳನ್ನು ಬರೆದಿಟ್ಟು ಅದನ್ನು ಯೂ ಟ್ಯೂಬ್ ಅಲ್ಲಿ ಸೆಪ್ಟೆಂಬರ್ ೭ ರಂದು ಹಾಕಿದ ಅಮಂದಾ ಅಕ್ಟೋಬರ್ ೧೦ ರಂದು ನೇಣು ಹಾಕಿಕೊಂಡಿದ್ದಳು.

ಅಮಂದಾ ತಪ್ಪು ಮಾಡಿದ್ದಳು ನಿಜ.ಆದರೆ ೧೫ನೇ ವರ್ಷಕ್ಕೆ ನರಳಿ ಸಾಯುವುದು ಸರಿಯೇ? ನಾನು ಈ ಲೇಖನವನ್ನು ಬರೆಯುವ ಮೂಲಕ ಯಾವ ರೀತಿಯಿಂದಲೂ ಅಮಂದಾ ಮಾಡಿದ್ದು ಸರಿ ಎಂದು ಹೇಳುತ್ತಿಲ್ಲ. ಎಷ್ಟೋ ಜನ ಯುವಕ-ಯುವತಿಯರು ಈ ಸೈಬರ್ ಯುಗದಲ್ಲಿ ಹೀಯಾಳಿಕೆಗೆ ಒಳಗಾಗುವುದನ್ನು ನಾನು ವಿರೋಧಿಸುತ್ತಿದ್ದೇನೆ. ಈ ಲೇಖನ ತಂದೆ-ತಾಯಂದಿರು, ತರುಣ ತರುಣಿಯರಲ್ಲಿ ಸಾಮಾಜಿಕ ಪ್ರಜ್ಞೆ ಹುಟ್ಟಿಸಿದರೆ ಸಾಕು.

ನಮ್ಮ ಜಗತ್ತು, ಊರು, ನಗರಗಳಲ್ಲಿ ಯಾವುದೋ ಒಂದು ಘಳಿಗೆಯಲ್ಲಿ ತಪ್ಪು ಎಸಗಿದ ಅಮಂದಾರಿರಬಹುದು. ದಯವಿಟ್ಟು ಅವರನ್ನು ಬದುಕಲು ಬಿಡಿ. ಅವರನ್ನು ಹೀಯಾಳಿಸುವ, ಕೆಟ್ಟದಾಗಿ ನೋಡುವ ಯಾವ ಹಕ್ಕೂ ನಮಗಿಲ್ಲ. ನಿಮ್ಮ ಸಹಪಾಠಿಗಳು ಇದರ ಬಲಿಪಶುವಾಗಿದ್ದರೆ ಅದರಿಂದ ಹೊರಬರಲು ಸಹಾಯ ಮಾಡಿ. ಹೀಗೆಳೆಯಬೇಡಿ. ತಪ್ಪು ಎಲ್ಲರಿಂದಲೂ ಆಗುವುದು ಸಹಜ.

ತಂದೆ-ತಾಯಂದಿರೇ, ನಿಮ್ಮ ಮಕ್ಕಳು ಕಂಪ್ಯೂಟರ್ ಮುಂದೆ ಏನು ಮಾಡುತ್ತಿದ್ದಾರೆ ಎನ್ನುವುದರ ಗಮನವಿರಲಿ. ಮಕ್ಕಳು ತಪ್ಪು ಮಾಡಿದರೆ ಬೈಯುವ, ಹೊಡೆಯುವ ಮೊದಲು ತಾಳ್ಮೆಯಿಂದ ಕೇಳಿದಲ್ಲಿ ಅವರು ಅಪಾಯಕ್ಕೀಡಾಗುವುದನ್ನು ತಡೆಯಬಹುದು.

ಇವಾಗ ಅವಳ ಹೆಸರಲ್ಲಿ ಸಾವಿರಾರು ಸಂಸ್ಥೆಗಳಿವೆ, ಆದರೆ ಯಾವುದಾದರೂ ಅವಳ ಜೀವವನ್ನು ವಾಪಸು ತರಬಲ್ಲವೇ?




Thursday, January 31, 2013

ಬಿಳೀ ಚಪ್ಪಲು!


ಬಾಬ್ಲಿಗೆ ಖುಷಿಯೋ ಖುಷಿ! ಅಣ್ಣ ಅಮ್ಮ ಮತ್ತು ಅಕ್ಕನೊಟ್ಟಿಗೆ ಹೊಸ ಚಪ್ಪಲು ತರಲು ಹೊರಟಿದ್ದಳು. ಸಡಗರ, ಸಂಭ್ರಮ ಅವಳಿಗೆ. ಬಾಬ್ಲಿಗೆ ಚಪ್ಪಲು ತರಲು ನಾಲ್ಕೂ ಜನ ಹೊರಟಿದ್ದೇಕೆಂದರೆ, ಅವಳ ಗಲಾಟೆ. ಮನೆಯಲ್ಲಿ ಅವಳದ್ದು ಒಂದೇ ಹಟ ಎಲ್ಲರೂ ಹೋಗೋಣ ಅಂತ. ಸರಿ ಎಲ್ಲರೂ ಹೊರಟದ್ದಾಯ್ತು. ಬಾಬ್ಲಿ ಅಣ್ಣನೊಂದಿಗೆ ಮುಂದೆ ಹೆಜ್ಜೆ ಹಾಕಿದರೆ ಸ್ವಲ್ಪ ದೂರದಲ್ಲಿ ಅಮ್ಮ ಮತ್ತೆ ಉದ್ದ ಜಡೆಯ ಅಕ್ಕ ಮೆಲ್ಲನೆ ಹೆಜ್ಜೆ ಹಾಕಿಕೊಂಡು ಬರುತ್ತಿದ್ದರು. ಬಾಬ್ಲಿಗೆ ಆತುರ, ಉದ್ವೇಗ, ಇವರು ಯಾಕೆ ಬೇಗ ಬರುತ್ತಿಲ್ಲ ಅಂತ! ತುಂಬಾ ದಿನಗಳಿಂದ ಯೋಚಿಸಿಟ್ಟಿದ್ದಳು. ಬಿಳೀ ಬಣ್ಣದ ಚಪ್ಪಲು ಅದರಲ್ಲೂ ಹಿಂದೆ ಬೆಲ್ಟ್ ಬರುವಂಥದ್ದೇ ಅಣ್ಣನ ಹತ್ತಿರ ಕೇಳಬೇಕು ಅಂತ. ಅಣ್ಣ-ಅಮ್ಮ ಸಮಯ ಮಾಡಿಕೊಂಡು ಹೊರಟಾಗ ಅವಳಿಗೆ ಚಪ್ಪಲು ಸಿಕ್ಕೇ ಬಿಟ್ಟಿತು ಎನ್ನುವ ಖುಷಿ.
ಅಂಗಡಿ ತಲುಪಿದಾಗ ಅಲ್ಲಿ ಜೋಡಿಸಿಟ್ಟ ಚಪ್ಪಲಿಗಳ ಮೇಲೆಲ್ಲಾ ಅವಳ ಕಣ್ಣು ಹರಿಯಿತು. ಊಹೂಂ....ಕಾಣಲೇ ಇಲ್ಲ. ಅಣ್ಣನ ಕೈ ಬಿಡಿಸಿ ಬೇರೆಯವರಿಗೆ ಚಪ್ಪಲಿ ತೋರಿಸುತ್ತಿದ್ದ ಅಂಗಡಿ ಮಾಮನ ಬಳಿ ಓಡಬೇಕೆನ್ನುವಷ್ಟು ಉದ್ವೇಗ. ಆದರೆ ಹಾಗೆ ಮಾಡಲಿಲ್ಲ ಜಾಣೆ ಬಾಬ್ಲಿ. ಅಣ್ಣನ ಕೈ ಬಿಟ್ಟು ಎಲ್ಲೂ ಹೋಗಬಾರದು, ಅಂಗಡಿಯಲ್ಲಿ ಅದು ಇದು ಮುಟ್ಟಬಾರದು, ಕಂಡಿದ್ದೆಲ್ಲಾ ಕೇಳಬಾರದು ಅಂತ ಅಮ್ಮ ಮೊದಲೇ ಹೇಳಿದ್ದರಲ್ಲ ? ಅಂಗಡಿ ಮಾಮ ನಗುತ್ತಾ ಅಣ್ಣನ ಬಳಿ ಬಂದವರು ಬಾಬ್ಲಿಯ ಕೆನ್ನೆ ಸವರಿ “ ಏನೇ ಪುಟ್ಟಿ, ಶೂ ಬೇಕಾ ನಿಂಗೆ ? “ ಅಂದರು. ಬಾಬ್ಲಿ ಮಾತಾಡಲಿಲ್ಲ, ಅವಳಿಗೆ ಯಾರಾದರೂ ಕೆನ್ನೆ ಮುಟ್ಟಿದ್ದರೆ ಹುಚ್ಚು ಕೋಪ ಬರುತ್ತಿತ್ತು. ಎಲ್ಲರೂ ಅವಳ ಡುಮ್ಮ ಡುಮ್ಮ ಕೆನ್ನೆ ಮುಟ್ಟೋರೇ...! ಅಣ್ಣನಿಗೆ ಅವಳ ಮನಸ್ಸು ಅರ್ಥವಾಗಿ ಸುಮ್ಮನೆ ತಲೆ ನೇವರಿಸಿ, “ ಇಬ್ಬರೂ ಮಕ್ಕಳಿಗೆ ಚಪ್ಪಲಿ ತೋರಿಸಿ “ ಅಂದರು. ಅಕ್ಕನಿಗೂ, ಬಾಬ್ಲಿಗೂ ಆಶ್ಚರ್ಯ, ಅಕ್ಕಂಗೂ ಚಪ್ಪಲಿ ಕೊಡಿಸ್ತಾರೆ ಅಣ್ಣ ಅಂತ.
ಸರಿ, ಈಗ ಅಕ್ಕ ಚಪ್ಪಲಿ ಆರಿಸಿಕೊಳ್ಳುವವರೆಗೆ ಕಾಯಬೇಕು, ಅವಳ ಚಪ್ಪಲಿನ ಕನಸಿಗೆ ಬ್ರೇಕ್ ಬಿತ್ತು. ಅಕ್ಕ ದೊಡ್ಡವಳು, ಅವಳು ಆರಿಸಿದಾದ ಮೇಲೆ ನಿಂಗೆ ಅಂತ ಅಣ್ಣ-ಅಮ್ಮ ಹೇಳಿದ್ರಲ್ಲಾ. ಅದೆಂಥೋ ಪುಟಾಣಿ ಜಾರುಬಂಡಿ, ಅದರ ಪೂರ್ತಿ ಬಾಬ್ಲಿಗೆ ಓದಲೂ ಬರದ ಸಂಖ್ಯೆಗಳಿದ್ದವು. ಅದರ ಮೇಲೆ ಅಕ್ಕನ ಕಾಲಿರಿಸಿ ಅಳತೆ ನೋಡಿ ಆ ಸೈಜಿನ ಚಪ್ಪಲು ಕೊಡಲಾರಂಭಿಸಿದರು. ಈ ಅಕ್ಕನೋ ಬರೀ ನೀಲಿ ಬಣ್ಣನೇ ಇಷ್ಟಪಡುತ್ತಾಳೆ ಅಂದುಕೊಂಡಳು ಬಾಬ್ಲಿ. ಅಲ್ಲೇ ಇದ್ದ ಸಣ್ಣ ಸ್ಟೂಲಿನ ಮೇಲೆ ಕೂತು ಅಕ್ಕನನ್ನೇ ನೋಡುತ್ತಿದ್ದಳು. ಕೊನೆಗೂ ಅಕ್ಕನ ಚಪ್ಪಲಿನ ಆಯ್ಕೆ ಆಗಿತ್ತು. ನೀಲಿ ಬಣ್ಣದ್ದೇ!. ಈಗ ಬಾಬ್ಲಿ ಖುಷಿಯಲ್ಲಿ ಎದ್ದು ನಿಂತಳು, ಅಣ್ಣ “ ಬಾಮ್ಮ” ಅಂತ ಕರೆದದ್ದೇ ತಡ, ಅಣ್ಣನ ಹತ್ತಿರ ಓಡಿದಳು. “ಮಾಮನ ಹತ್ತಿರ ಕೇಳು, ಯಾವ ಥರದ ಚಪ್ಪಲು ಬೇಕು” ಅಂತ ಹೇಳಿದ್ದೇ ತಡ, ಒಂದೇ ಉಸಿರಲ್ಲಿ “ ಮಾಮ, ಬಿಳೀ ಬಣ್ಣದ್ದು, ಹಿಂದೆ ಎತ್ತರ ಇರಬೇಕು, ಹೂಂ ಮತ್ತೆ ಬೆಲ್ತೂ ಬೇಕು “ ಅಂದಳು. ಮಾಮನೊಟ್ಟಿಗೆ ಅಣ್ಣ-ಅಮ್ಮ, ಅಕ್ಕ ಎಲ್ಲರೂ ನಕ್ಕರು. ನಾಚಿಕೆಯಾಯಿತು ಬಾಬ್ಲಿಗೆ, ಸುಮ್ಮನೇ ತಲೆ ಕೆಳಗೆ ಹಾಕಿ ನಿಂತಳು. ಅಷ್ಟರಲ್ಲಿ ಅಮ್ಮ, “ ಬಿಳಿನಾ? ನೀನು ನೀರು, ಮಣ್ಣು, ಕೆಸರಲ್ಲೇ ಕಾಲು ಹಾಕಿ ಓಡಾಡ್ತ ಇರ್ತೀಯಾ, ಅದನ್ನು ತೊಳೆಯೋದು ಯಾರು? ಯಾಕೆ ? ನಿಂಗೆ ಕೆಂಪು ಇಷ್ಟ ಅಲ್ವಾ ? ಮತ್ತೆ ಎತ್ತರದ್ದೆಲ್ಲ ಬೇಡವೇ ಬೇಡ “ ಅಂದು ಬಿಟ್ಟರು. ಬಾಬ್ಲಿಗೆ ಇಲ್ಲ, ಕೊಳೆ ಮಾಡಿಕೊಳ್ಳಲ್ಲ ಅಂತ ಹೇಳಬೇಕೆನಿಸಿದರೂ ಯಾಕೋ ಗಂಟಲು ಕಟ್ಟಿದ್ದಂತಾಯಿತು. ಅಂಗಡಿ ಮಾಮ ಅಮ್ಮ ಹೇಳಿದ್ದೇ ತಡ ಅವಳ ಅಳತೆ ತೆಗೆದು “ಓಹ್! ಪುಟ್ಟಿ ಕಾಲು ದೊಡ್ಡದಾಗಿದೆಯಲ್ಲಾ” ಅಂದು ಬಾಕ್ಸ್ ಗಳಲ್ಲಿ ಇದ್ದ ಚಪ್ಪಲುಗಳನ್ನು ತೋರಿಸಲು ತೆಗೆದರು. ಯಾವುದೇ ಉತ್ಸಾಹವಿಲ್ಲದೇ ಕೆಂಪು ಬಣ್ಣದ ಚಪ್ಪಟೆ ಚಪ್ಪಲಿಗಳನ್ನು ಸುಮ್ಮನೇ ನಿಂತು ನೋಡಿದಳು ಬಾಬ್ಲಿ. ಅವಳ ಕಾಲಿಗೆ ಹಾಕಿ ನಡೆದಾಡಿಸಿದರು. ಸುಮ್ಮನೇ ನಡೆದಳಷ್ಟೇ. ಮುಖದಲ್ಲಿ ಒಂಚೂರೂ ನಗುವಿರಲಿಲ್ಲ. “ಬಾಬ್ಲಿ, ಆಗಬಹುದೇನಮ್ಮಾ ಇದು? “ ಅಂತ ಅಣ್ಣ ಕೇಳಿದಾಗ ಸುಮ್ಮನೇ ತಲೆಯಾಡಿಸಿದಳು. ಅಕ್ಕ “ ಚೆಂದ ಇದೆ ಕಣೇ, ಕೆಂಪು ನಿಂಗೆ ಇಷ್ಟ ಅಲ್ವಾ, ನಿನ್ನ ಹೊಸ ಅಂಗಿಗೆ ಮ್ಯಾಚ್ ಆಗುತ್ತೆ ಕಣೇ” ಅಂದಳು. ಅಮ್ಮನೂ “ ಹೂಂ, ಹೊಸ ಕೆಂಪು ಕ್ಲಿಪ್ ಕೊಡಿಸ್ತೀನಿ ಅದಕ್ಕೆ ಆಯ್ತಾ” ಅಂದರು. ಸಣ್ಣ ದನಿಯಲ್ಲಿ “ಆಯ್ತು” ಅಂದಳು ಬಾಬ್ಲಿ.
ಇನ್ನೇನು ಪ್ಯಾಕ್ ಮಾಡಿಸಬೇಕು ಅನ್ನಿಸುವಷ್ಟರಲ್ಲಿ ಅಣ್ಣ ಇದ್ದಕ್ಕಿದ್ದಂತೆ “ ಬೇಡ ಇವರೇ, ಬಿಳಿ ಬಣ್ಣದ್ದೇ ತೋರಿಸಿ, ಅವಳಿಗೆ ಯಾವುದು ಬೇಕು, ಅದೇ ಕೊಡಿ” ಎಂದು ಬಿಟ್ಟರು. ಬಾಬ್ಲಿಗೆ ಏನು ಹೇಳಿದರು ಅಣ್ಣ ಅನ್ನುವಷ್ಟರಲ್ಲಿ ಅವಳ ಕಾಲಿಗೆ ಮಾಮ ಬಿಳಿ ಬಣ್ಣದ, ಸ್ವಲ್ಪ ಎತ್ತರದ, ಹಿಂದೆ ಬೆಲ್ಟ್ ಇದ್ದ ಚಪ್ಪಲು ತೊಡಿಸುತ್ತಿದ್ದರು. ಮತ್ತೆ ಗಂಟಲು ಉಬ್ಬಿ ಏನೋ ಆದಂತಾಯಿತು ಬಾಬ್ಲಿಗೆ. ಎರಡೂ ಕಾಲಿಗೆ ಮಾಮ ಚಪ್ಪಲು ಹಾಕಿದ ಮೇಲೆ ಬಿಂಕದಿಂದ ನಡೆದಾಡಿದಳು! ಅವಳ ಪುಟ್ಟ ಕಾಲು, ಗಿಡ್ಡ ಫ್ರಾಕಿಗೆ ಆ ಚಪ್ಪಲು ಎಲ್ಲಾ ಸೇರಿ ಪುಟ್ಟ ಬೊಂಬೆಯಂತೆ ಕಾಣಿಸುತ್ತಿದ್ದಳು ಬಾಬ್ಲಿ! ಇದ್ದಕ್ಕಿದ್ದ ಹಾಗೆ ಅಮ್ಮನೂ “ ಕೊಳೆಯಾದರೆ ನಾನೇ ತೊಳಿತೀನಿ ಆಯ್ತಾ? ಇದೇ ಇರಲಿ” ಅಂದರು.
ಬಾಬ್ಲಿ ಅಣ್ಣ - ಅಮ್ಮ ಹೇಳಿದ್ದೂ ಮರೆತು ಅಲ್ಲೇ ಕುಣಿದಿದ್ದೂ, ಆಮೇಲೆ ಹೆದರಿ ಅವರ ಕಡೆ ನೋಡಿ, ಅವರಿಬ್ಬರೂ ಸಿಟ್ಟು ಮಾಡಿಕೊಳ್ಳದಿರುವುದನ್ನು ನೋಡಿ ಆಶ್ಚರ್ಯಪಟ್ಟಿದ್ದೂ, ಅಕ್ಕ ಬಾಯಿ ಮುಚ್ಚಿ ಮೆಲ್ಲಗೆ ನಕ್ಕಿದ್ದೂ ಎಲ್ಲಾ ಆಯಿತು. ಅಣ್ಣನ ಕಡೆ ನೋಡಿದಾಗ ಪ್ರೀತಿ ತುಂಬಿದ ಅಣ್ಣನ ಕಂದು ಕಣ್ಣುಗಳಲ್ಲಿ ತನ್ನದೇ ನಗುವನ್ನು ಕಂಡಳು ಬಾಬ್ಲಿ.


ಬಾಬ್ಲಿಯ ಸುಸ್ತು!

ಬಾಬ್ಲಿ ನಡೆಯುತ್ತಲೇ ಇದ್ದಳು, ಅವಳ ಅನಿಸಿಕೆಯಲ್ಲಿ ಒಂದು ೧೦ ಕಿ.ಮೀ ನಡೆದಿದ್ದಾಳೆ ಅಂತ!. ಅಣ್ಣನ ಹತ್ತಿರ ಸ್ವಲ್ಪ ನಿಲ್ಲೋಣವಾ ಅಥವಾ ಎತ್ತಿಕೋ ಅನ್ನೋಕೆ ನಾಚಿಕೆ ಈ ಗಂಡುಬೀರಿಗೆ! ಸ್ವಲ್ಪ ಹೊತ್ತಾದ ಮೇಲೆ ತಲೆಯೆತ್ತಿ ಅಣ್ಣನ ಮುಖ ನೋಡಿದಳು. ಏನೋ ಯೋಚನೆಯಲ್ಲಿದ್ದ ಅಣ್ಣನಿಗೆ ಬಾಬ್ಲಿ ನೋಡುವುದು ಅರಿವಾಗಿ " ಸುಸ್ತಾಯಿತಾ ಅಮ್ಮ ?" ಎಂದು ಕೇಳಿದರು. ಹೌದು ಎಂಬಂತೆ ತಲೆಯಾಡಿಸಿದಳು ಪೋರಿ. ಅಲ್ಲೇ ಇರುವ ಅಶ್ವಥ ಕಟ್ಟೆಯ ಮೇಲೆ ಕೂರಿಸಿದರು. ಪಾಪದ ಹುಡುಗಿ ಹಾಕಿದ್ದ ಚಪ್ಪಲ್ ತೆಗೆದು ತನ್ನ ಪುಟ್ಟ ಕೈಗಳಿಂದ ತನ್ನ ಕಾಲುಗಳನ್ನು ಒತ್ತಿಕೊಂಡಳು. ಮುಖ, ಪುಟ್ಟ ಕಾಲುಗಳೆರಡೂ ಕೆಂಪಾಗಿದ್ದವು ಟೋಮಾಟೋ ಹಣ್ಣಿನಂತೆ!. ಅಣ್ಣನಿಗೆ ಅಯ್ಯೋ ಅನಿಸಿ ಹತ್ತಿರದ ಗೂಡಗಂಡಿಯಿಂದ ನಿಂಬೆಹುಳಿ ಪೆಪ್ಪರಮಿಂಟ್ ತಂದು ಕೊಟ್ಟರು. ಈಗ ಬಾಬ್ಲಿ ಮುಖ ಹಪ್ಪಳದಂತೆ ಅರಳಿತು! ಸ್ವಲ್ಪ ಹೊತ್ತಿಗೆ ಸುಧಾರಿಸಿಕೊಂಡು ಇಬ್ಬರು ಹೊರಡುವಾಗ ಅಣ್ಣ, " ಬೇಡಮ್ಮ, ನಡೆಯೋದು ನೀನು" ಎಂದು ಮಗಳನ್ನು ಎತ್ತಿಕೊಂಡರು. :) ನಾಚಿಕೆ ಬೆರೆತ ಹೆಮ್ಮೆ, ನಗು ಬಾಬ್ಲಿಯ ಮುಖದಲ್ಲಿ, ಕೈಯಲ್ಲಿ ಅಕ್ಕನಿಗೆ ಅಂತ ಉಳಿಸಿದ ಪೆಪ್ಪರಮಿಂಟ್ !!!