ಪ್ರತೀ ಕ್ಲಾಸಿಕ್ ಅನಿಸಿಕೊಂಡ ಕೃತಿಯ ಪಾತ್ರಗಳು ನಮ್ಮ ಬದುಕಿನಲ್ಲಿ ನಮ್ಮೊಟ್ಟಿಗೇ ಹೆಜ್ಜೆ ಹಾಕುತ್ತಿರುತ್ತಾರೆ. ನಾವು ಕಳೆದುಕೊಂಡವರು, ನೆನಪಿನಲ್ಲಿಯೇ ನಮ್ಮ ಜೊತೆಗೆ ಬದುಕುತ್ತಿರುತ್ತಾರಲ್ಲವೇ ಹಾಗೆಯೇ. ಅದೇ ರೀತಿಯಾಗಿ ಕಂಬಾರರ ಸಿಂಗಾರವ್ವ ನನ್ನ ಹೃದಯದಲ್ಲಿ ಒಂದು ಸ್ಥಾನಪಡೆದವಳು. ಪ್ರತೀ ಸಲದ ಓದಿಗೂ ಅಷ್ಟೇ ಪ್ರಮಾಣದ ಸಂಕಟವನ್ನು ಪದೇ ಪದೇ ಹುಟ್ಟಿಸುತ್ತಾಳೆ, ಒಡನೆಯೇ ಜೀವನವನ್ನೆದುರಿಸುವ ದಾರಿಯನ್ನು ಮತ್ತೆ ಮತ್ತೆ ಮನಗಾಣಿಸುತ್ತಾಳೆ. ಅವಳು ನನಗೆ ಅಪ್ಪಟ ಸ್ತ್ರೀವಾದಿಯಂತೆ ಮಾತ್ರವಲ್ಲ ಜೀವನೋತ್ಸಾಹದ ಪರಮಗುರುವಂತೆ ಕಾಣಿಸುತ್ತಾಳೆ. ಮಡಿಲಿಗೆ ಬಿದ್ದ ಜೀವನವನ್ನು ಎದೆಗೊತ್ತಿಕೊಂಡು ಹತಾಶೆ, ಅಕ್ರೋಶ, ಯಾತನೆ, ಸಂಕಟ, ಒದ್ದಾಟ, ನರಳಾಟಗಳನ್ನೂ ಮೀರಿ ಅವಳು ಅವಡುಗಚ್ಚಿ ಬದುಕುವ ರೀತಿಯಿದೆಯಲ್ಲ ಅದ್ವೀತಿಯ.
ಕೃತಿಯಲ್ಲಿ ಕಂಬಾರರು ಆತಂಕ ಹುಟ್ಟಿಸುವಂಥಹ ಒಂದು ಹುಣಿಸೇ ಮೆಳೆಯನ್ನು ವರ್ಣಿಸಿದ್ದಾರೆ. ಅದನ್ನು ಓದುವಾಗ ಮನದಲ್ಲೊಂದು ಕಂಪನವೇಳುತ್ತದೆ. ಅವರು ಹೇಳುವಂತೆ ಗುಡ್ಡದಂಥಹ ಮರಗಳಿರುವ ಅದರ ಸ್ವರೂಪ ಈ ರಾಜ್ಯದಲ್ಲ, ದೇಶದ್ದೂ ಅಲ್ಲ, ಈ ಭೂಮಿಯದ್ದೂ ಅಲ್ಲದೇ ಯಾವುದೋ ಗೊತ್ತಿಲ್ಲದ ಗ್ರಹದ್ದು ಅನಿಸಿ ಬಿಡುತ್ತದೆ. ಸಾವಿರದೆಂಟು ರಾಕ್ಷಸಾಕಾರದ ಹುಣಿಸೇ ಮರಗಳಿರುವ ಮೆಳೆ. ವಿಚಿತ್ರ ನಾದಗಳು, ಸ್ವರಗಳು, ಕಿರುಚಾಟಗಳು ಕೇಳುವ ವಿಚಿತ್ರ ಲೋಕ. ಭೂತ, ಪಿಶಾಚಿಗಳ ವಾಸ ಸ್ಥಾನ. ಹಕ್ಕಿಗಳಿಲ್ಲದ, ಸದ್ದಿಲ್ಲದ, ಕ್ಷಿತಿಜ - ಆಕಾಶ ಕಣ್ಕಟ್ಟು ಮಾಡಿ ಒದ್ದಾಡಿಸುವ ಸ್ಥಳ. ಹೊಕ್ಕವರು ಹೊರ ಬರಲಾಗದೇ, ಒಳ ಸಿಕ್ಕು ಒದ್ದಾಡಿ ಸತ್ತೇ ಹೋಗುವ ಉಸುಕಿನಂತಹ ಮೆಳೆಯದು. ಅಂಥದ್ದೇ ಬದುಕಿನ ಮೆಳೆಯಲ್ಲಿ ಸಿಂಗಾರವ್ವ ಸಿಕ್ಕಿ ಒದ್ದಾಡುವ ರೀತಿ ನಮ್ಮನ್ನೂ ಒದ್ದಾಡಿಸಿಡುತ್ತದೆ. ಅಂಥಾ ಘನಘೋರ ಮೆಳೆಯಲ್ಲಿ ಸಿಕ್ಕಿ ಬಿದ್ದಾಕೆ ಉಳಿಯಲು ಸಾಧ್ಯವೇ ಎಂದು ವಿಷಾದ ಎದೆ ತುಂಬಿ, ನಿಟ್ಟುಸಿರು ಹುಟ್ಟುವ ಹೊತ್ತಿನಲ್ಲಿ ಆ ಜಟಿಲ ಕಾನನದ ಕುಟಿಲ ಪಥದಿಂದ ಅವಳು ಹೇಗೋ ಹೊರಬಿದ್ದು ಮತ್ತೆ ಓಟ ಶುರು ಮಾಡುತ್ತಾಳೆ.
ಸಿಂಗಾರವ್ವನ ಹೆತ್ತ ತಂದೆ ಗೌಡ ಆಸ್ತಿಗೋಸ್ಕರ ಉಪಾಯ ಮಾಡಿ ಹೆಣಕ್ಕೆ ಮದುವೆ ಮಾಡಿಸುತ್ತಾನೆ. ಹೆಣದೊಂದಿಗೆ ಮದುವೆಯಾಗುವ ಸಂಭ್ರಮದಿಂದ ಶುರುವಾಗುವ ಅವಳ ನೋವಿನ ಕಥೆಗೆ ಕೊನೆಯೇ ಇಲ್ಲ. ಆ ಆಘಾತದಿಂದ ಸಿಂಗಾರವ್ವ ಚೇತರಿಸಿಕೊಳ್ಳುವ ಮೊದಲೇ; ರೋಗಿಷ್ಟ, ನಪುಂಸಕನಂತಹ ಮತ್ತು ಬೇಜವಾಬ್ದಾರಿ ಸರಗಂ ದೇಸಾಯಿಗೆ ಮರು ಮದುವೆ ಮಾಡಿಸುತ್ತಾನೆ. ಅವನೋ ಮನುಷ್ಯನಾಗಿ ಹುಟ್ಟಿಯೂ ಮನುಷ್ಯ ಹೃದಯವಿಲ್ಲದವನು. ಸದಾ ಬಹುವಚನದಲ್ಲೇ ಇವಳನ್ನು ಸಂಭೋಧಿಸುವ, ಮರ್ಯಾದೆ ಕೊಡುವೆನೆಂಬ ನಾಟಕ ಮಾಡಿ ಹೇವರಿಕೆ ಹುಟ್ಟಿಸುವ ಅವನು ದೈಹಿಕ, ಮಾನಸಿಕ ಹೋಗಲಿ ಆರ್ಥಿಕವಾಗಿಯೂ ಅವಳಿಗೆ ಆಸರೆಯಾಗಲಾರ. ಅವನು ಇವಳಿಗೆ ಕೊಡುವ ಒಣ ಮರ್ಯಾದೆ ಮೈಯಲ್ಲಿ ಮುಳ್ಳು ಹುಟ್ಟಿಸುತ್ತದೆ. ಅಷ್ಟಾದರೂ ಆತನನ್ನು ಸರಿ ದಾರಿಗೆ ತರಲು ಸಿಂಗಾರವ್ವ ಹಾಕುವ ಪ್ರಯತ್ನಗಳು ಒಂದೇ ಎರಡೇ. ದೇಸಾಯಿ ಬದಲು ಒಂದು ಕಲ್ಲನ್ನಾದರೂ ಅವಳು ಮದುವೆಯಾಗಿದ್ದಿದ್ದರೆ ಅದೂ ಆಕೆಯ ಸ್ನಿಗ್ಧ ಪ್ರೀತಿಗೆ ಕರಗಿಯೇ ಬಿಡುತ್ತಿತ್ತೇನೋ! ರೋಗಿಷ್ಟ ಗಂಡನನ್ನಾದರೂ ಒಲಿಸಿಕೊಂಡು ಬಾಳು ಸರಿ ಮಾಡಿಕೊಂಡೇನು ಅನ್ನುವ ಅವಳ ಛಲವನ್ನು ಆ ಶಿವನೂ ಆಗಿಸಿಕೊಡುವುದಿಲ್ಲ. ಮುದಿ ಅತ್ತೆಯ ಮೊಮ್ಮಗುವಿನ ಆಸೆಯ ಭೂತ ಇವಳ ಮೈಯಲ್ಲಿ ಹೊಕ್ಕು ಹುಚ್ಚಯ್ಯನ ಥರದ ಲಂಪಟ ಮನುಷ್ಯನ ಭವಿಷ್ಯವಾಣಿಯಲ್ಲೂ ಅವಳಿಗೆ ಒಳ್ಳೆಯದೇ ಕಾಣಿಸುತ್ತದೆ, ನಂಬುವಂತೆ ಮಾಡಿಸುತ್ತದೆ. ಆ ಹುಚ್ಚಯ್ಯ ಅಕಸ್ಮಾತ್ತಾಗಿ ಸತ್ತು ಮನೆಯಾಳು ಸಮಯಸಾಧಕ ಮರ್ಯಾನಿಗೆ ಇವಳನ್ನು ಉಪಯೋಗಿಸಿಕೊಳ್ಳುವ ಅವಕಾಶವನ್ನು ಸೃಷ್ಟಿಸಿ ಕೊಡುತ್ತದೆ. ಅವನೊಬ್ಬ ಬೆನ್ನು ಬಿದ್ದ ನಕ್ಷತ್ರಿಕ. ಗೌಡ ಅವನಿಗೆ ಮಾಡಿದ ಅನ್ಯಾಯಕ್ಕೆ ಸಿಂಗಾರವ್ವನ ಮೇಲೆ ಸೇಡು. ಹಾಗೆ ನೋಡಿದರೆ ಅವಳ ಬದುಕಲ್ಲಿ ಬಂದು ಹೋಗುವ ಗಂಡಸರೆಲ್ಲರದ್ದೂ ಒಂದಿಲ್ಲೊಂದು ಬಗೆ ಕ್ರೌರ್ಯ. ಅವಳ ಮೇಲೆ ಕಣ್ಣು ಹಾಕಿ ಹಾಳು ಮಾಡಲು ನೋಡುವ ಹುಚ್ಚಯ್ಯ, ದೇಸಾಯಿಯ ಆಸ್ತಿ ಹೊಡೆಯಲು ತಂತ್ರ ಹೂಡುವ ಪರಮಶೆಟ್ಟಿಗಳ ಪಾತ್ರವೇನೂ ಕಡಿಮೆಯೇನಲ್ಲ.
ಪದೇ ಪದೇ ಸತ್ತು ಬದುಕುವ ಸಿಂಗಾರವ್ವನ ವ್ಯಥೆಯ ಕಥೆಯನ್ನು ಎಷ್ಟು ಹೇಳಿದರೂ ಕಡಿಮೆಯೇ. ಆ ಅರಮನೆಯನ್ನು ದುಷ್ಟ ತಂದೆ ಒಳಹಾಕಲು ಮಾಡಿದ ಸಂಚನ್ನರಿತವಳು, ಅದನ್ನು ಉಳಿಸಿಕೊಳ್ಳಲಾದರೂ ತನ್ನದೇ ಮಗು ಬೇಕೇ ಬೇಕೆಂಬ ಹಠಕ್ಕೆ ಬಿದ್ದು ಅದೇ ಕೆಟ್ಟ ಮನುಷ್ಯ ಮರ್ಯಾನನ್ನೇ ಆರಿಸಿಕೊಳ್ಳುತ್ತಾಳೆ. ಪರುಷಮಣಿ ಮುಟ್ಟಿದವನಂತೆ ಆ ಮರ್ಯಾನೇನೋ ಥಟ್ಟನೇ ಅಪ್ಪಟ ಚಿನ್ನವಾಗಿ ಬದಲಾಗುತ್ತಾನೆ, ಆದರೆ ಅದೃಷ್ಟಹೀನೆ ಸಿಂಗಾರವ್ವನ ಬದುಕು ಬದಲಾದೀತೇ? ಬದಲಾಗಲು ವಿಧಿ ಬಿಟ್ಟೀತೇ? ತಾನು ಅನ್ಯಪುರಷನನ್ನು ಮುಟ್ಟಿದೆನೆಂಬ ನೈತಿಕತೆಯ ಕತ್ತಿ ಅವಳ ತಲೆಯ ಮೇಲೆ ತೂಗಾಡಿದಾಗೆಲ್ಲಾ ಉನ್ಮಾದಗೊಂಡು ಬಡಬಡಿಸುತ್ತಾಳೆ. ಯಾವುದೇ ರೀತಿಯಲ್ಲಿ ಗಂಡನಾಗಿರದಿದ್ದರೂ ದೇಸಾಯಿಗೆ ದ್ರೋಹ ತಾ ಮಾಡಿದನೆಂದು ಹಲುಬುತ್ತಾ, ಸೆರೆ ಕುಡಿಯುತ್ತಾಳೆ. ಗೊತ್ತೋ ಗೊತ್ತಿಲ್ಲದೆಯೋ ಮತ್ತೆ ಮತ್ತೆ ಮರ್ಯಾನ ಸಹವಾಸದ ಅಮಲಿನಲ್ಲಿ ತೇಲುತ್ತಾಳೆ. ಸಾವಿರ ಕಂಬಗಳಿರುವ, ಅವಳು ಉಳಿಸಿಕೊಳ್ಳಲು ಒದ್ದಾಡುತ್ತಿರುವ ಆ ಅರಮನೆಯೇ ಅವಳಿಗೊಂದು ಹುಣಿಸೆ ಮೆಳೆಯಾಗಿ ಬದಲಾಗಿ ಹೋಗುತ್ತದೆ. ಸರಿ - ತಪ್ಪು, ಆ ಅರಮನೆಯನ್ನು ಉಳಿಸಿಕೊಳ್ಳುವ ಪ್ರಯತ್ನ, ಮಗುವಿನ ಆಸೆ, ಹಾದರಗಿತ್ತಿ ಎಂದು ಆ ಆರಮನೆಯ ಹಿರಿಯರ ಆತ್ಮಗಳು ತನ್ನನ್ನು ನಿಂದಿಸುವವೆಂಬ ಭಯ, ಗಂಡನ ಷಂಡತನ ಇದರೆಲ್ಲದರ ಮಧ್ಯೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕೂಸು! ಅಬ್ಬಾ! ಒಬ್ಬ ಗರ್ಭಿಣಿಗೆ ಸಿಗಬೇಕಾದ ಏನೂ ಸಿಗದೇ, ಗರ್ಭ ಉಳಿಸಿಕೊಳ್ಳಲು ಅವಳು ಪಡುವ ಪಾಡು ನೆನೆಸಿಕೊಂಡರೆ ಹೃದಯ ಬಿರಿಯುತ್ತದೆ.
ಇದೆಲ್ಲಾ ಗೊತ್ತಾದ ಮೇಲೆ, ಅಲ್ಲಿವರೆಗೂ ಇಲ್ಲದ ಮಾನ-ಮರ್ಯಾದೆಯ ಜಾಗೀರುದಾರ ತಾನೆಂಬೆಂತೆ ಆಡುವ ದೇಸಾಯಿ ಸಿಂಗಾರವ್ವ ಗರ್ಭಿಣಿಯಾದಾಗ ಹೊಟ್ಟೆಯುರಿ ತಡೆಯಲಾಗದೇ, ಹೊಟ್ಟೆಗೆ ತಲೆಯೆಂದೊದ್ದು ಕೊಲ್ಲಲು ಪ್ರಯತ್ನಿಸಿ, ಅದಾಗದೇ, ಕೊನೆಗೆ ತನ್ನ ಸಾವಿಗೇ ಇವಳೇ ಕಾರಣವೆಂದು , ಮರ್ಯಾದೆ ಇದ್ದರೆ ನೀನೇ ನಿನ್ನ ಕೊಂದೆ ಎಂದು ಒಪ್ಪಿಕೊಂಡು ಜೈಲುಪಾಲಾಗು ಎಂದು ಪತ್ರ ಬರೆದು ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾನೆ. ಅವನ ಪತ್ರದಲ್ಲಿನ ಸಾಧ್ವೀಮಣಿ, ಹಿಂದೂ ನಾರಿ, ಪತಿವ್ರತಾ ಶಿರೋಮಣಿ ಪದಗಳು ಅವನ ದುರ್ಬಲ ಮನದ ಕ್ರೌರ್ಯವನ್ನಲ್ಲದೇ ಮತ್ತೇನನ್ನೂ ಸಾರುವುದಿಲ್ಲ. ತಾನು ಹೇಗಿದ್ದರೂ ಪರವಾಗಿಲ್ಲ, ಸಿಂಗಾರವ್ವ ಮಾತ್ರ ಹೀಗೆಯೇ ಇರಬೇಕೆಂಬ ಆಶೆಯನ್ನು ಅವಳು ಯಾವುದೋ ಒಂದು ರೀತಿಯಲ್ಲಿ ನೆರವೇರಿಸಿಬಿಟ್ಟಳಲ್ಲ ಎಂಬ ಹತಾಶೆ ಈಗಲೂ ನನಗಿದೆ. ಸಾವಿನ ಬಾಗಿಲು ತಟ್ಟುವಷ್ಟು ಜ್ವರ ಬಂದಾಗಲೂ ತಿರುಗಿ ನೋಡದ ಗಂಡನಿಗಾಗಿ, ಅವನ ಕಾಗದದ ಮೇಲಣ ಹುಚ್ಚು ಮಾತಿಗಾಗಿ, ಯಾರೂ ಹೇಳಿದರೂ ಕೇಳದೇ ತಾನಾಗಿ, ಮೂಕವಾಗಿ ಜೈಲು ಸೇರುವ ಸಿಂಗಾರವ್ವನ ಮೌನ ಯಾವಾಗಲೂ ನನ್ನ ಕಿವಿಗಿರಿಯುತ್ತಲೇ ಇರುತ್ತದೆ. ಮೌನದ ಅಬ್ಬರ ಮಾತುಗಳಿಗೆಲ್ಲಿ?
ಸಿಂಗಾರವ್ವನೋ ಮಗು ಮನಸ್ಸಿನ ಹುಡುಗಿ, ಎಲ್ಲದರಲ್ಲೂ ಒಳ್ಳೆಯದನ್ನೇ ಕಾಣುವವಳು. ದನವೊಂದು ಗರ್ಭ ಕಟ್ಟಿದೆ ಎಂದಾಗ ಮಗುವಂತೆ ಸಂಭ್ರಮಿಸುವವಳು. ಕೆಲಸದಾಳು ಗರ್ಭಿಣಿಯಾದಾಗ, ಬೇಕಾದದ್ದನ್ನು ಮಾಡಿ ತಿನ್ನಿಸಲು ಅವಳು ತೋರುವ ಕಾಳಜಿ, ಅವಳ ಹೊಟ್ಟೆ ಮುಟ್ಟಿ ಮುಟ್ಟಿ ಸಂಭ್ರಮಿಸುವ ಸಿಂಗಾರವ್ವ ನನ್ನ ಕಣ್ಣಲ್ಲಿ ನೀರು ತರಿಸುತ್ತಾಳೆ. ಅವಳದ್ದು ತಾಯಿ ಹೃದಯ, ಯಾರಿಗೂ ಕೇಡು ಮಾಡುವುದಿರಲಿ, ಅದನ್ನು ಬಯಸದ ಜೀವ. ಇಡೀ ಪ್ರಪಂಚದಲ್ಲಿ ಅವಳನ್ನು ಪ್ರೀತಿಸುವ, ಅವಳ ನೋವಿಗೆ ಮರಗುವ ಏಕೈಕ ಜೀವ ಶೀನಂಗಿ ಹೀಗೆ ಹೇಳುತ್ತಾಳೆ:
“ಕೆಲವರಿರುತ್ತಾರೆ, ನೀವು ಬೆರಳು ಮಾಡಿ ತೋರುವಂಥ ಯಾವ ಕರ್ಮ, ಯಾವ ಪಾಪ , ಯಾವ ಕೆಟ್ಟ ಕೆಲಸವನ್ನೂ ಮಾಡಿರುವುದಿಲ್ಲ. ಇನ್ನೊಬ್ಬರ ಮನಸ್ಸನ್ನೂ ಕೂಡ ನೋಯಿಸಿರುವುದಿಲ್ಲ. ಆದರೆ ಜೀವನದುದ್ದಕ್ಕೂ ಚಂಡಾಲರು ಅನುಭವಿಸುವಂಥ ಯಾತನೆ, ನೋವನ್ನು ಅನುಭವಿಸುತ್ತಾರೆ. ಅವರು ಚಿನ್ನ ಹಿಡಿದರೆ ಮಣ್ಣಾಗುತ್ತದೆ. ಅನ್ನವೆಂದದ್ದು ವಿಷವಾಗುತ್ತದೆ. ಅವರು ಕಾಲಿಟ್ಟಲ್ಲಿ ನಿಂತ ನೀರು ಇಂಗುತ್ತದೆ. ಬೆಳೆದ ಹಸಿರು ಒಣಗುತ್ತದೆ. ಮಕ್ಕಳು, ದನಕರು ಸಾಯುತ್ತವೆ. ನೀನು ಬಂದು, ಅವರ ಅಂತಃಕರಣ ಕಂಡು, ‘ದೇವರು ಒಳ್ಳೇದು ಮಾಡಲಿ’ ಅಂತ ಮನಸಾರೆ ಹರಸಿದೆ ಅಂತಿಟ್ಟುಕೊ. ಆದರೆ ಪರಿಣಾಮ ಮಾತ್ರ ಅದಕ್ಕೆ ವಿರುದ್ಧವಾಗೇ ಆಗಿರುತ್ತದೆ. ಹಿಂಗ್ಯಾಕೆಂಬುದಕ್ಕೆ ಕಾರಣ ಕಡೀತನಕ ಗೊತ್ತಾಗೋದೇ ಇಲ್ಲ. ಯಾವುದಕ್ಕೂ ಒಂದು ತರ್ಕ ಇರಬೇಕಲ್ಲ. ಅದಿಲ್ಲಿ ಇರೋದೇ ಇಲ್ಲ. ನಮ್ಮ ದೊರೆಸಾನಿ ಅಂಥವಳು.”
ಮನುಷ್ಯ ಸಾಯಲಿ ಆ ದೇವರಿಗೂ ಅಂಥ ಸೂಕ್ಷ್ಮ ಮನಸ್ಸಿನ ಹುಡುಗಿಯ ಮೇಲೆ ಎಂಥಹಾ ದ್ವೇಷ? ಸ್ವತಃ ಹೆಣ್ಣಾದ ಗ್ರಾಮದೇವತೆ ಕುಮುದವ್ವನಾದರೂ ಒಂದು ಚೂರು ಕರುಣೆ ತೋರಿಸಿದಳೇ?
ಹರ ಕೊಲ್ಲಲು ಪರ ಕಾಯ್ವನೇ ಎಂಬ ಗಾದೆ ಸುಮ್ಮನೇ ಹುಟ್ಟಿದೆಯೇ?
ದೇವರೋ ಅಥವಾ ವಿಧಿಯೋ ಬೀಸಿ ಎಸೆಯುವ ಕಷ್ಟದ ದಿನಗಳಲ್ಲಿ ಉಸಿರು ಬಿಗಿ ಹಿಡಿದು ಸಾಗುವ ದಿನಗಳಲ್ಲಿ ಸಿಂಗಾರವ್ವ ನನ್ನ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಿರುತ್ತಾಳೆ. ಅವಳೊಂದು ಭರವಸೆಯ ಪ್ರತೀಕ. ಕಷ್ಟಗಳ ಸುರಿಮಳೆಯಾದಾಗ ತನ್ನ ಘನತೆಯ ಛತ್ರಿ ಹಿಡಿದು ಹರಸಾಹಸ ಮಾಡಿ ಮುನ್ನಡೆಯುವ ಗಟ್ಟಿಗತ್ತಿ. ಇಷ್ಟೆಲ್ಲಾ ಕಷ್ಟ ಬಂದಿದ್ದರೆ ನಾ ಸತ್ತೇ ಹೋಗ್ತೀನಿ, ನನಗೇನೂ ಆಗದಿದ್ರೆ ಸಾಕಪ್ಪ ಅನ್ನುವ ಕೆಟ್ಟ ಈಗೋವನ್ನು ಬದಿಗಿಟ್ಟು ಯೋಚಿಸಲು ಹೇಳಿಕೊಟ್ಟವಳು. ಯಮಯಾತನೆಯನ್ನು ನುಂಗಲು ಕಲಿಸಿದವಳು. ಸಾವಿಗಿಂತ ಬದುಕು ದೊಡ್ಡದು ಎನ್ನುವ ಪುಣ್ಯಾತಗಿತ್ತಿ.
ಪುಸ್ತಕ ಮುಗಿಸಿ ಕಣ್ಣು ಮುಚ್ಚಿದರೆ ನನ್ನ ಕಣ್ಣಲ್ಲಿ ಬರುವ ಸಿಂಗಾರಿಯ ಚಿತ್ರವೆಂದರೆ ಶಾಲೆಯಾಗಿ ಮಾರ್ಪಾಡಾಗಿರುವ ಅವಳ ಮಗನ ದೇಸಗತಿಯ ಅರಮನೆಯಲ್ಲಿ ಪ್ರತೀ ಕಂಬಕ್ಕೆ ಸುತ್ತಿ ಆಡುವ ಮಕ್ಕಳೊಡನೆ ತಾನೂ ಮಗುವಾಗಿ ಓಡಾಡುವಂಥದ್ದು.
ಅಗಸ್ಟ್ ತಿಂಗಳ ಮಯೂರದ ಚಿತ್ತ ಕೆತ್ತಿದ ಚಿತ್ರ ಮಾಲಿಕೆಯಲ್ಲಿ ಪ್ರಕಟವಾಗಿದೆ.
No comments:
Post a Comment