Thursday, January 31, 2013

ಬಿಳೀ ಚಪ್ಪಲು!


ಬಾಬ್ಲಿಗೆ ಖುಷಿಯೋ ಖುಷಿ! ಅಣ್ಣ ಅಮ್ಮ ಮತ್ತು ಅಕ್ಕನೊಟ್ಟಿಗೆ ಹೊಸ ಚಪ್ಪಲು ತರಲು ಹೊರಟಿದ್ದಳು. ಸಡಗರ, ಸಂಭ್ರಮ ಅವಳಿಗೆ. ಬಾಬ್ಲಿಗೆ ಚಪ್ಪಲು ತರಲು ನಾಲ್ಕೂ ಜನ ಹೊರಟಿದ್ದೇಕೆಂದರೆ, ಅವಳ ಗಲಾಟೆ. ಮನೆಯಲ್ಲಿ ಅವಳದ್ದು ಒಂದೇ ಹಟ ಎಲ್ಲರೂ ಹೋಗೋಣ ಅಂತ. ಸರಿ ಎಲ್ಲರೂ ಹೊರಟದ್ದಾಯ್ತು. ಬಾಬ್ಲಿ ಅಣ್ಣನೊಂದಿಗೆ ಮುಂದೆ ಹೆಜ್ಜೆ ಹಾಕಿದರೆ ಸ್ವಲ್ಪ ದೂರದಲ್ಲಿ ಅಮ್ಮ ಮತ್ತೆ ಉದ್ದ ಜಡೆಯ ಅಕ್ಕ ಮೆಲ್ಲನೆ ಹೆಜ್ಜೆ ಹಾಕಿಕೊಂಡು ಬರುತ್ತಿದ್ದರು. ಬಾಬ್ಲಿಗೆ ಆತುರ, ಉದ್ವೇಗ, ಇವರು ಯಾಕೆ ಬೇಗ ಬರುತ್ತಿಲ್ಲ ಅಂತ! ತುಂಬಾ ದಿನಗಳಿಂದ ಯೋಚಿಸಿಟ್ಟಿದ್ದಳು. ಬಿಳೀ ಬಣ್ಣದ ಚಪ್ಪಲು ಅದರಲ್ಲೂ ಹಿಂದೆ ಬೆಲ್ಟ್ ಬರುವಂಥದ್ದೇ ಅಣ್ಣನ ಹತ್ತಿರ ಕೇಳಬೇಕು ಅಂತ. ಅಣ್ಣ-ಅಮ್ಮ ಸಮಯ ಮಾಡಿಕೊಂಡು ಹೊರಟಾಗ ಅವಳಿಗೆ ಚಪ್ಪಲು ಸಿಕ್ಕೇ ಬಿಟ್ಟಿತು ಎನ್ನುವ ಖುಷಿ.
ಅಂಗಡಿ ತಲುಪಿದಾಗ ಅಲ್ಲಿ ಜೋಡಿಸಿಟ್ಟ ಚಪ್ಪಲಿಗಳ ಮೇಲೆಲ್ಲಾ ಅವಳ ಕಣ್ಣು ಹರಿಯಿತು. ಊಹೂಂ....ಕಾಣಲೇ ಇಲ್ಲ. ಅಣ್ಣನ ಕೈ ಬಿಡಿಸಿ ಬೇರೆಯವರಿಗೆ ಚಪ್ಪಲಿ ತೋರಿಸುತ್ತಿದ್ದ ಅಂಗಡಿ ಮಾಮನ ಬಳಿ ಓಡಬೇಕೆನ್ನುವಷ್ಟು ಉದ್ವೇಗ. ಆದರೆ ಹಾಗೆ ಮಾಡಲಿಲ್ಲ ಜಾಣೆ ಬಾಬ್ಲಿ. ಅಣ್ಣನ ಕೈ ಬಿಟ್ಟು ಎಲ್ಲೂ ಹೋಗಬಾರದು, ಅಂಗಡಿಯಲ್ಲಿ ಅದು ಇದು ಮುಟ್ಟಬಾರದು, ಕಂಡಿದ್ದೆಲ್ಲಾ ಕೇಳಬಾರದು ಅಂತ ಅಮ್ಮ ಮೊದಲೇ ಹೇಳಿದ್ದರಲ್ಲ ? ಅಂಗಡಿ ಮಾಮ ನಗುತ್ತಾ ಅಣ್ಣನ ಬಳಿ ಬಂದವರು ಬಾಬ್ಲಿಯ ಕೆನ್ನೆ ಸವರಿ “ ಏನೇ ಪುಟ್ಟಿ, ಶೂ ಬೇಕಾ ನಿಂಗೆ ? “ ಅಂದರು. ಬಾಬ್ಲಿ ಮಾತಾಡಲಿಲ್ಲ, ಅವಳಿಗೆ ಯಾರಾದರೂ ಕೆನ್ನೆ ಮುಟ್ಟಿದ್ದರೆ ಹುಚ್ಚು ಕೋಪ ಬರುತ್ತಿತ್ತು. ಎಲ್ಲರೂ ಅವಳ ಡುಮ್ಮ ಡುಮ್ಮ ಕೆನ್ನೆ ಮುಟ್ಟೋರೇ...! ಅಣ್ಣನಿಗೆ ಅವಳ ಮನಸ್ಸು ಅರ್ಥವಾಗಿ ಸುಮ್ಮನೆ ತಲೆ ನೇವರಿಸಿ, “ ಇಬ್ಬರೂ ಮಕ್ಕಳಿಗೆ ಚಪ್ಪಲಿ ತೋರಿಸಿ “ ಅಂದರು. ಅಕ್ಕನಿಗೂ, ಬಾಬ್ಲಿಗೂ ಆಶ್ಚರ್ಯ, ಅಕ್ಕಂಗೂ ಚಪ್ಪಲಿ ಕೊಡಿಸ್ತಾರೆ ಅಣ್ಣ ಅಂತ.
ಸರಿ, ಈಗ ಅಕ್ಕ ಚಪ್ಪಲಿ ಆರಿಸಿಕೊಳ್ಳುವವರೆಗೆ ಕಾಯಬೇಕು, ಅವಳ ಚಪ್ಪಲಿನ ಕನಸಿಗೆ ಬ್ರೇಕ್ ಬಿತ್ತು. ಅಕ್ಕ ದೊಡ್ಡವಳು, ಅವಳು ಆರಿಸಿದಾದ ಮೇಲೆ ನಿಂಗೆ ಅಂತ ಅಣ್ಣ-ಅಮ್ಮ ಹೇಳಿದ್ರಲ್ಲಾ. ಅದೆಂಥೋ ಪುಟಾಣಿ ಜಾರುಬಂಡಿ, ಅದರ ಪೂರ್ತಿ ಬಾಬ್ಲಿಗೆ ಓದಲೂ ಬರದ ಸಂಖ್ಯೆಗಳಿದ್ದವು. ಅದರ ಮೇಲೆ ಅಕ್ಕನ ಕಾಲಿರಿಸಿ ಅಳತೆ ನೋಡಿ ಆ ಸೈಜಿನ ಚಪ್ಪಲು ಕೊಡಲಾರಂಭಿಸಿದರು. ಈ ಅಕ್ಕನೋ ಬರೀ ನೀಲಿ ಬಣ್ಣನೇ ಇಷ್ಟಪಡುತ್ತಾಳೆ ಅಂದುಕೊಂಡಳು ಬಾಬ್ಲಿ. ಅಲ್ಲೇ ಇದ್ದ ಸಣ್ಣ ಸ್ಟೂಲಿನ ಮೇಲೆ ಕೂತು ಅಕ್ಕನನ್ನೇ ನೋಡುತ್ತಿದ್ದಳು. ಕೊನೆಗೂ ಅಕ್ಕನ ಚಪ್ಪಲಿನ ಆಯ್ಕೆ ಆಗಿತ್ತು. ನೀಲಿ ಬಣ್ಣದ್ದೇ!. ಈಗ ಬಾಬ್ಲಿ ಖುಷಿಯಲ್ಲಿ ಎದ್ದು ನಿಂತಳು, ಅಣ್ಣ “ ಬಾಮ್ಮ” ಅಂತ ಕರೆದದ್ದೇ ತಡ, ಅಣ್ಣನ ಹತ್ತಿರ ಓಡಿದಳು. “ಮಾಮನ ಹತ್ತಿರ ಕೇಳು, ಯಾವ ಥರದ ಚಪ್ಪಲು ಬೇಕು” ಅಂತ ಹೇಳಿದ್ದೇ ತಡ, ಒಂದೇ ಉಸಿರಲ್ಲಿ “ ಮಾಮ, ಬಿಳೀ ಬಣ್ಣದ್ದು, ಹಿಂದೆ ಎತ್ತರ ಇರಬೇಕು, ಹೂಂ ಮತ್ತೆ ಬೆಲ್ತೂ ಬೇಕು “ ಅಂದಳು. ಮಾಮನೊಟ್ಟಿಗೆ ಅಣ್ಣ-ಅಮ್ಮ, ಅಕ್ಕ ಎಲ್ಲರೂ ನಕ್ಕರು. ನಾಚಿಕೆಯಾಯಿತು ಬಾಬ್ಲಿಗೆ, ಸುಮ್ಮನೇ ತಲೆ ಕೆಳಗೆ ಹಾಕಿ ನಿಂತಳು. ಅಷ್ಟರಲ್ಲಿ ಅಮ್ಮ, “ ಬಿಳಿನಾ? ನೀನು ನೀರು, ಮಣ್ಣು, ಕೆಸರಲ್ಲೇ ಕಾಲು ಹಾಕಿ ಓಡಾಡ್ತ ಇರ್ತೀಯಾ, ಅದನ್ನು ತೊಳೆಯೋದು ಯಾರು? ಯಾಕೆ ? ನಿಂಗೆ ಕೆಂಪು ಇಷ್ಟ ಅಲ್ವಾ ? ಮತ್ತೆ ಎತ್ತರದ್ದೆಲ್ಲ ಬೇಡವೇ ಬೇಡ “ ಅಂದು ಬಿಟ್ಟರು. ಬಾಬ್ಲಿಗೆ ಇಲ್ಲ, ಕೊಳೆ ಮಾಡಿಕೊಳ್ಳಲ್ಲ ಅಂತ ಹೇಳಬೇಕೆನಿಸಿದರೂ ಯಾಕೋ ಗಂಟಲು ಕಟ್ಟಿದ್ದಂತಾಯಿತು. ಅಂಗಡಿ ಮಾಮ ಅಮ್ಮ ಹೇಳಿದ್ದೇ ತಡ ಅವಳ ಅಳತೆ ತೆಗೆದು “ಓಹ್! ಪುಟ್ಟಿ ಕಾಲು ದೊಡ್ಡದಾಗಿದೆಯಲ್ಲಾ” ಅಂದು ಬಾಕ್ಸ್ ಗಳಲ್ಲಿ ಇದ್ದ ಚಪ್ಪಲುಗಳನ್ನು ತೋರಿಸಲು ತೆಗೆದರು. ಯಾವುದೇ ಉತ್ಸಾಹವಿಲ್ಲದೇ ಕೆಂಪು ಬಣ್ಣದ ಚಪ್ಪಟೆ ಚಪ್ಪಲಿಗಳನ್ನು ಸುಮ್ಮನೇ ನಿಂತು ನೋಡಿದಳು ಬಾಬ್ಲಿ. ಅವಳ ಕಾಲಿಗೆ ಹಾಕಿ ನಡೆದಾಡಿಸಿದರು. ಸುಮ್ಮನೇ ನಡೆದಳಷ್ಟೇ. ಮುಖದಲ್ಲಿ ಒಂಚೂರೂ ನಗುವಿರಲಿಲ್ಲ. “ಬಾಬ್ಲಿ, ಆಗಬಹುದೇನಮ್ಮಾ ಇದು? “ ಅಂತ ಅಣ್ಣ ಕೇಳಿದಾಗ ಸುಮ್ಮನೇ ತಲೆಯಾಡಿಸಿದಳು. ಅಕ್ಕ “ ಚೆಂದ ಇದೆ ಕಣೇ, ಕೆಂಪು ನಿಂಗೆ ಇಷ್ಟ ಅಲ್ವಾ, ನಿನ್ನ ಹೊಸ ಅಂಗಿಗೆ ಮ್ಯಾಚ್ ಆಗುತ್ತೆ ಕಣೇ” ಅಂದಳು. ಅಮ್ಮನೂ “ ಹೂಂ, ಹೊಸ ಕೆಂಪು ಕ್ಲಿಪ್ ಕೊಡಿಸ್ತೀನಿ ಅದಕ್ಕೆ ಆಯ್ತಾ” ಅಂದರು. ಸಣ್ಣ ದನಿಯಲ್ಲಿ “ಆಯ್ತು” ಅಂದಳು ಬಾಬ್ಲಿ.
ಇನ್ನೇನು ಪ್ಯಾಕ್ ಮಾಡಿಸಬೇಕು ಅನ್ನಿಸುವಷ್ಟರಲ್ಲಿ ಅಣ್ಣ ಇದ್ದಕ್ಕಿದ್ದಂತೆ “ ಬೇಡ ಇವರೇ, ಬಿಳಿ ಬಣ್ಣದ್ದೇ ತೋರಿಸಿ, ಅವಳಿಗೆ ಯಾವುದು ಬೇಕು, ಅದೇ ಕೊಡಿ” ಎಂದು ಬಿಟ್ಟರು. ಬಾಬ್ಲಿಗೆ ಏನು ಹೇಳಿದರು ಅಣ್ಣ ಅನ್ನುವಷ್ಟರಲ್ಲಿ ಅವಳ ಕಾಲಿಗೆ ಮಾಮ ಬಿಳಿ ಬಣ್ಣದ, ಸ್ವಲ್ಪ ಎತ್ತರದ, ಹಿಂದೆ ಬೆಲ್ಟ್ ಇದ್ದ ಚಪ್ಪಲು ತೊಡಿಸುತ್ತಿದ್ದರು. ಮತ್ತೆ ಗಂಟಲು ಉಬ್ಬಿ ಏನೋ ಆದಂತಾಯಿತು ಬಾಬ್ಲಿಗೆ. ಎರಡೂ ಕಾಲಿಗೆ ಮಾಮ ಚಪ್ಪಲು ಹಾಕಿದ ಮೇಲೆ ಬಿಂಕದಿಂದ ನಡೆದಾಡಿದಳು! ಅವಳ ಪುಟ್ಟ ಕಾಲು, ಗಿಡ್ಡ ಫ್ರಾಕಿಗೆ ಆ ಚಪ್ಪಲು ಎಲ್ಲಾ ಸೇರಿ ಪುಟ್ಟ ಬೊಂಬೆಯಂತೆ ಕಾಣಿಸುತ್ತಿದ್ದಳು ಬಾಬ್ಲಿ! ಇದ್ದಕ್ಕಿದ್ದ ಹಾಗೆ ಅಮ್ಮನೂ “ ಕೊಳೆಯಾದರೆ ನಾನೇ ತೊಳಿತೀನಿ ಆಯ್ತಾ? ಇದೇ ಇರಲಿ” ಅಂದರು.
ಬಾಬ್ಲಿ ಅಣ್ಣ - ಅಮ್ಮ ಹೇಳಿದ್ದೂ ಮರೆತು ಅಲ್ಲೇ ಕುಣಿದಿದ್ದೂ, ಆಮೇಲೆ ಹೆದರಿ ಅವರ ಕಡೆ ನೋಡಿ, ಅವರಿಬ್ಬರೂ ಸಿಟ್ಟು ಮಾಡಿಕೊಳ್ಳದಿರುವುದನ್ನು ನೋಡಿ ಆಶ್ಚರ್ಯಪಟ್ಟಿದ್ದೂ, ಅಕ್ಕ ಬಾಯಿ ಮುಚ್ಚಿ ಮೆಲ್ಲಗೆ ನಕ್ಕಿದ್ದೂ ಎಲ್ಲಾ ಆಯಿತು. ಅಣ್ಣನ ಕಡೆ ನೋಡಿದಾಗ ಪ್ರೀತಿ ತುಂಬಿದ ಅಣ್ಣನ ಕಂದು ಕಣ್ಣುಗಳಲ್ಲಿ ತನ್ನದೇ ನಗುವನ್ನು ಕಂಡಳು ಬಾಬ್ಲಿ.


1 comment:

  1. ಇಂಥ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತೆ.ಅದನ್ನ ಕಥೆ ರೂಪದಲ್ಲಿ ತುಂಬ ಚೆನ್ನಾಗಿ ಹೇಳಿದ್ದೀರಿ :-)

    ReplyDelete