ದಾರಿ - ನಡಿಗೆ
ನನ್ನ ನಡಿಗೆ ಬಗ್ಗೆ ನೀ ಹೀಗೆಳೆಯಬೇಡ
ನಾ ನಡೆದ ದಾರಿಯಲ್ಲಿ ನೀ ನಡೆದಿಲ್ಲ
ಅಂದವನಿಗೆ ನೀನು,
ಹಾದಿ ತುಂಬಾ ಕಲ್ಲು ಮುಳ್ಳು ಇತ್ತಾ
ಕಾಲು ಕಚ್ಚಿತಾ ಎಂದು ಕೀಟಲೆ ಮಾಡಿದೆಯಾ?
ಇಲ್ಲ ಗೆಳತಿ, ಕಲ್ಲು, ಮುಳ್ಳು ಕಚ್ಚಲಿಲ್ಲ.
ಅಲ್ಲಿದ್ದಿದ್ದು ಅಂಬಿನ ಹಾಸಿಗೆ
ಮತ್ತು ನಾನದರ ಮೇಲೆ ನಡೆದೆ.
ಅರೆ! ನೋವಾಯಿತಾ ಎಂದು ಉದ್ಗರಿಸಿದೆಯೇನು?
ಇಲ್ಲ ಸಖಿ, ಕಾಲು ಸಂವೇದನೆಯ
ಕಳೆದುಕೊಂಡಿತು ಲಕ್ಷ ಹೆಜ್ಜೆಗಳ ನಂತರ!
ಹೂಕಾರದೊಂದಿಗೆ ಗಾಳಿ, ಮಳೆ
ಅಥವಾ ಧಗೆಯ ಬಗ್ಗೆ ವಿಚಾರಿಸಿದೆಯೇನು?
ಇಲ್ಲವೇ ಹುಡುಗಿ, ಅದೇನೂ ಇರದ
ಪ್ರಾಣವೂ, ಗಾಳಿಯೂ, ಬಣ್ಣವೂ ಇರದ
ಶುದ್ಧ, ನಿರ್ಜೀವ ಹಿಮದ ದಾರಿಯದು.
ಆಶ್ಚರ್ಯದಿ ಕೇಳಿದೆಯಲ್ಲ, ಬೆಚ್ಚನೆಯ ಉಡುಪಿರಲಿಲ್ಲವೆಂದು
ಇಲ್ಲ ಮಿತ್ರೆ, ಅಮ್ಮ ಹೊಲೆದ ಹತ್ತಿಯ ತೆಳು ಅಂಗಿ
ಅಪ್ಪ ತಂದುಕೊಟ್ಟ ಬಟ್ಟೆಯ ಶರಾಯಿ
ಎರಡೂ ಕೂರಲಗಿನ ಚಳಿಗೆ ಎಂದೋ ಚಿಂದಿಯಾದವು.
ನಾನೇ ತೂತುಗಳ ಸೇರಿಸಿ ಹೊಲಿದ
ಒರಟು ಗೋಣಿಚೀಲದ ಈ ನಿಲುವಂಗಿ
ಇಲ್ಲಿಯವರೆಗೆ ಬಂತು -ನನ್ನ ಕರೆ ತಂತು!
ಪರಿತಾಪದಿ ಕೇಳಿದೆಯಲ್ಲ ಸಹ ಪಯಣಿಗರಲಿಲ್ಲವೆಂದು
ಇಲ್ಲ ಬಾಲೆ, ದೂರ ಕ್ರಮಿಸುತಾ, ಹಾದಿ ಕಳೆಯುತಾ
ಇದ್ದ ಬಳಗ ಒಂದೊಂದೇ ಕಣ್ಣ ಮಂಜಲಿ ಮಾಯವಾಯಿತು.
ಅನುಕಂಪದಿ ಬಳಿ ಸಾರಿ ಸಾಂತ್ವನದ ನಗೆ ನಕ್ಕೆಯೇನು?
ನಡೆಯುವೆಯಾ ಪ್ರಿಯೆ, ಜತೆಯಾಗಿ ಕೈ ಹಿಡಿದು
ಸಾಗೋಣ ಇನ್ನುಳಿದ ಅನತಿ ದೂರವ ನಗು ನಗುತಾ...
No comments:
Post a Comment