ಪಾವ್ ನ ಒಂದು ದೊಡ್ಡ ತುಂಡು ನಿನಗಾಗಿಯೇ ತೆಗೆದಿಟ್ಟಿದ್ದೇನೆ ಬಾಲ್ಕನಿಯಲ್ಲಿ. ಸಣ್ಣ ವಾಟಿಯಲ್ಲಿ ನೀರೂ... ಅಲ್ಲ, ನಾ ಮರೆತರೆಡೈನಿಂಗ್ ಟೇಬಲ್ ಹಾದು ಪ್ಯಾಸೇಜು ಮೂಲಕ ಮಲಗುವ ಕೋಣೆಗೆ ಬಂದು,‘ ಯಾಕಿವತ್ತು ಏನೂ ಇಟ್ಟಿಲ್ಲ’ ಅನ್ನೋ ತರಹಗುರಾಯಿಸ್ತಾಯಿಲ್ಲ. ಯಾಕೆ ಇವತ್ತು ಬೆಳಗ್ಗಿಂದ ಸುದ್ದೀನೇ ಇಲ್ಲ! ನಿನ್ನೆ ಇಟ್ಟ ಮೊಳಕೆ ಬರಿಸಿದ ಕಾಳು ಸ್ವಾಹ! ಎಲ್ಲಿ ಹೋದೆಯೋ ? ಇಡೀ ದಿನ ಹೊರಗಿದ್ದ ಪಾವ್ ಬಿಸಿಲಿಗೋ, ಗಾಳಿಗೋ ಗಟ್ಟಿಯಾಗುತ್ತೆ ಕಣೋ, ಬಂದು ತಿನ್ನೋ ಬೇಗ!
ಪುಣ್ಯಾತ್ಮ, ನೀನಾಗೇ ಬಂದು ಊಟ ತಿಂದು ಹೋಗ್ತೀಯಲ್ಲಾ? ಹೇಗೆ ಇದು ನನ್ನದೇ ಮನೆ ಅಂತ ಗುರುತು ಹಿಡಿಯುತ್ತೀ? ಹಿಂದಿನ ಜನ್ಮದ ಸಾಲ ಮರುವಸೂಲಿಗೆ ಬಂದಿದ್ದೀಯಾ? ಹೌದು, ಅವತ್ತು ನನ್ನ ಪುಟ್ಟನೊಡನೆ ನಡಕೊಂಡು ಬರುವಾಗ ರಸ್ತೆ ಮಧ್ಯದಲ್ಲಿ ಆರಾಮಾಗಿ ನಿಂತು ಎರಡೂ ಕೈಯಲ್ಲಿ ದಾರಿಯಲ್ಲಿ ಬಿದ್ದ ಹಣ್ಣು ತಿಂತ ಇದ್ದವನು ನೀನೇನಾ? ಯಾವ ಹಣ್ಣೋ, ಏನು ಕಥೆಯೋ, ಯಾರೋ ನಿಂಗೆ ಅದನ್ನೆಲ್ಲಾ ತಿನ್ನಬಹುದು ಅಂತ ಹೇಳಿ ಕೊಟ್ಟಿದ್ದು ?ಅದು ಸರಿ, ನೀವೆಲ್ಲಾ ಒಂದೇ ಥರಾ ಕಾಣ್ತೀರಪ್ಪಾ! ಅದೇ ರೋಮ ಎದ್ದು ನಿಂತ ಗ್ರೇ ಶೇಡ್ ಫರ್ ಮೈ, ಚಿಕ್ಕ ಕಪ್ಪು ಕಣ್ಣುಗಳು, ರಾಮ ಎಳೆದ ಮೂರು ನಾಮ ಬೆನ್ನ ಮೇಲೆ! ನಾವೆಲ್ಲಾ ನಿನ್ನ ಕಣ್ಣಿಗೂ ಹಾಗೆಯೇ ಕಾಣುತ್ತೇವಾ ಮರಿ ? !?