Thursday, July 8, 2021

ಕಾವನ್ ಎಂಬ‍ ಏಕಾಂಗಿಯ ಕಥನ


pc:internet

 


ಕಾವನ್ ಎಂಬ ಈ ಚೆಂದದ ಕಣ್ಣುಗಳ, ಸುರ ಸುಂದರಾಂಗನನ್ನು ೧೯೮೫ರಲ್ಲಿ ಶ್ರೀಲಂಕಾ ಸರಕಾರ ಪಾಕಿಸ್ತಾನದ ಆಗಿನ ಪ್ರಧಾನಿ ಜಿಯಾ ಉಲ್ ಹಕ್ ಅವರಿಗೆ ಉಡುಗೊರೆಯ ರೂಪದಲ್ಲಿ ಕೊಟ್ಟಿತ್ತು. ಇಸ್ಲಾಮಾಬಾದಿನ ಮೃಗಾಲಯ ಒಂದರಲ್ಲಿ ಮೂವತ್ತೆರಡು ವರ್ಷಗಳ ಕಾಲ ಬಂಧಿಯಾಗಿ ಕಾಲ ಕಳೆದ ಈತ ಬರಬರುತ್ತಾ ಮಾನಸಿಕವಾಗಿ ಕುಗ್ಗಲಾರಂಭಿಸಿದ. ಅವನ ಸಂಗಾತಿ ಸಹೇಲಿ ಕಾಲಿನ ಸೋಂಕು ರೋಗದಿಂದ ಸತ್ತು ಹೋದ ಮೇಲೆ, ಸಿಟ್ಟು, ಮಾನಸಿಕ ಉದ್ವೇಗಕ್ಕೊಳಗಾಗಿ ನಿಂತಲ್ಲೇ ಜೋಲಿಯಾಡಲಾರಂಭಿಸಿದ. ಹತ್ತಿರ ಹೋದ ಮೃಗಾಲಯದ ಕೆಲಸಗಾರರ ಮೇಲೆ ಮಣ್ಣು, ನೀರು ಅಥವಾ ಸೊಂಡಿಲಿಗೆ ಸಿಕ್ಕಿದ್ದನ್ನು ತೆಗೆದು ಎಸೆಯುತ್ತಲೂ ಇದ್ದ. ಆ ಸಿಬ್ಬಂದಿಯೋ, ಬರೇ ಕಬ್ಬನ್ನೇ ಕೊಟ್ಟು ಕೊಟ್ಟು, ಅಷ್ಟೂ ವರ್ಷಗಳಲ್ಲಿ ಐದೂವರೆ ಟನ್ ತೂಕ ಬೆಳೆಸಿಟ್ಟಿದ್ದರು. ಕಾಲುಗುರುಗಳೂ ಕೂಡಾ ಸೋಂಕಿನ ಲಕ್ಷಣಗಳನ್ನೂ ತೋರಿಸುತ್ತಿದ್ದವು. ಹಸಿರಿನ ಲವಲೇಶವೂ ಇಲ್ಲದ ಪರಿಸರದಲ್ಲಿ ಸರಪಣಿ ಕಟ್ಟಿ, ಕೆಲವೊಮ್ಮೆ ಅವನನ್ನು ಶಾಂತಗೊಳಿಸಲು ಮದ್ಯವನ್ನೂ ಕೊಡಲಾಗುತ್ತಿತ್ತು. ೨೦೧೫ರಿಂದ ಸುಮಾರು ಐದು ವರ್ಷಗಳ ಕಾಲ ಸಾಕಷ್ಟು ಜನರ ಸಾಹಸ, ಪ್ರಯತ್ನಗಳ ನಂತರ ಕಾವನ್ ಅನ್ನು ಅಲ್ಲಿಂದ ಮುಕ್ತಗೊಳಿಸುವ ಪ್ರಕ್ರಿಯೆ ನಡೆಯಿತು. ಪಾಕಿಸ್ತಾನದಿಂದ ಅವನನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಸರಿಯಾಗಿ ಅವನನ್ನು ನೋಡಿಕೊಳ್ಳದ್ದಕ್ಕೆ ಮೃಗಾಲಯಕ್ಕೆ ಛೀಮಾರಿ ಹಾಕಿದ್ದೂ ಅಲ್ಲದೇ, ಅದನ್ನು ಮುಚ್ಚಿಸಿಯೂ ಬಿಟ್ಟಿತು.

ಅಮೇರಿಕಾದ ಸುಪ್ರಸಿದ್ಧ, ‌ಪಾಪ್ ನ ದೇವತೆ ಎಂದೇ ಕರೆಯಿಸಿಕೊಳ್ಳುವ ಶೆರ್ ನಿಂದಾಗಿ ಇಸ್ಲಾಮಾಬಾದಿನ ಜೂನಿಂದ ಕಾಂಬೋಡಿಯಾದ ಅಭಯಾರಣ್ಯಕ್ಕೆ ಕಾವನನ್ನು ಸ್ಥಳಾಂತರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗುತ್ತದೆ. ಕೋವಿಡ್ ಮಧ್ಯೆಯೂ ಆಸ್ಟ್ರಿಯಾದ
four paws ಎಂಬ ಸಂಸ್ಥೆಗೆ ಸೇರಿದ ಸದಸ್ಯರು ಆ ಜವಾಬ್ದಾರಿಯನ್ನು ಹೊತ್ತುಕೊಂಡರು.
ಆ ಸಂಸ್ಥೆಯ ನಿರ್ದೇಶಕ ಅಮೀರ್ ಖಲೀಲ್ ಎಂಬ ವೆಟ್ ಕಾವನ್ನೊಂದಿಗೆ ಬೆಳೆಸಿಕೊಂಡ ಸಂಬಂಧ ನನ್ನೀ ಬರಹಕ್ಕೆ ಕಾರಣ. ತನ್ನ ಜೀವನವಿಡೀ ಯುದ್ಧ ನಿರತ ದೇಶಗಳಿಂದ, ಮೃಗಾಲಯಗಳಿಂದ ಬೇರೆ ಬೇರೆ ಪ್ರಾಣಿಗಳನ್ನು ರಕ್ಷಿಸುತ್ತಲೇ ಬರುತ್ತಿರುವ ಹಾಗೂ ಮರದ ದಿಮ್ಮಿಗಳನ್ನು ಎತ್ತಿ ಹಾಕುವ ಆನೆಗಳಿಗಾಗಿ ಹದಿನೇಳು ಸಾವಿರ ಹೆಕ್ಟೇರ್ ಜಾಗದಲ್ಲಿ ‘ಎಲೆಫಂಟ್ಸ್ ಲೇಕ್’ ಎಂಬ ಸಂರಕ್ಷಿತ ಹಾಗೂ ರಿಹ್ಯಾಬಿಲಿಟೇಶನ್ ಅನ್ನು ನಿರ್ಮಿಸಿದ ಹೆಗ್ಗಳಿಕೆ ಅಮೀರ್ ಅವರದ್ದು.
ಅಮೀರ್, ಕಾವನ್ ಅನ್ನು ಶಾಂತಗೊಳಿಸಲು, ಅವನಿಗೆ ಫ್ರಾಂಕ್ ಸಿನಾಟ್ರಾನ (ಅಮೇರಿಕನ್ ಹಾಡುಗಾರ) ‘ದಿ ಎಂಡ್ ಇಸ್ ನಿಯರ್’ ಹಾಡತೊಡಗುತ್ತಾರೆ. ತನ್ನ ದೊಡ್ಡ ಸ್ನೇಹಿತನಿಗೆ ಅತೀ ಕೆಟ್ಟ ಅಭಿರುಚಿಯಿದೆ, ಅದಕ್ಕೆ ನನ್ನ ಸ್ವರವನ್ನಿಷ್ಟಪಟ್ಟಿದ್ದಾನೆ ಎಂದು ಅಮೀರ್ ನಗುತ್ತಾ ಹೇಳುತ್ತಾರೆ. ಶೆರ್ ಅವನನ್ನು ನೋಡಲು ಬಂದಾಗಲೂ ಅವಳಿಂದ ಅದೇ ಹಾಡು ಹೇಳಿಸುತ್ತಾರೆ. ಅವನ ಡಯಟ್ ಅನ್ನು ಬದಲಾಯಿಸಿ ಅವನನ್ನು ಓಡಾಡಿಸಿ, ಓಡಾಡಿಸಿ ತೂಕವನ್ನಿಳಿಸುತ್ತಾರೆ. ಅದೇನೋ ಆನೆ! ಇವರೂ ಅದರೊಂದಿಗೆ ಓಡಾಡಬೇಕಲ್ಲ?! ಕಾಲಿನ ಉಗುರುಗಳನ್ನೂ ಪದೇ ಪದೇ ಸ್ವಚ್ಛಗೊಳಿಸುತ್ತಲೇ ಇರಬೇಕಾಗುತ್ತದೆ. ದಿನಕ್ಕೆರಡು ಸಲ, ನಾಲ್ಕು ಘಂಟೆ ಅವನೊಂದಿಗೆ ಕಳೆದು ಅವರಿಬ್ಬರ ಮಧ್ಯೆ ಬಾಂಧವ್ಯ ಹುಟ್ಟುತ್ತದೆ. ಹಾಡು ಕೇಳುತ್ತಾ ಕಾವನ್ ಕಣ್ಣೀರೂ ಹಾಕುತ್ತಾನೆ. ಅಮೀರ್ ಅನ್ನು ತನ್ನ ಸೊಂಡಿಲಿನಿಂದ ಅಪ್ಪಿಕೊಳ್ಳುತ್ತಾನೆ. ತಲೆ ಸವರುವಂತೆ ಅವರಿಗೆ ಅಂಟಿಕೊಳ್ಳುತ್ತಾನೆ. ಇಬ್ಬರೂ ಅಂಟಿಕೊಂಡು ಓಡಾಡುವ ವಿಡಿಯೋ ದೃಶ್ಯಗಳು ನೋಡಿದಾಗೆಲ್ಲಾ ಮನಸ್ಸು ತುಂಬಿ ಬರುತ್ತದೆ.
ಆತನ ನಂಬಿಕೆಯನ್ನು ಗಳಿಸಿದ ನಂತರ ಅವನನ್ನು ಮಾತನಾಡಿಸುತ್ತಾ, ತಿನ್ನಿಸುತ್ತಾ ಅವನಿಗೋಸ್ಕರ ತಯಾರಾದ ಒಂದು ದೊಡ್ಡ ಕಂಟೇನರ್ ಒಳಗೆ ಅವನನ್ನು ಸೇರಿಸಿ, ಅರಿವಳಿಕೆ ನೀಡಿ ಅದನ್ನು ಟ್ರಕ್ ಒಂದರ ಮೂಲಕ ಕಾರ್ಗೋ ವಿಮಾನಕ್ಕೆ ತಂದು ಸೇರಿಸುತ್ತಾರೆ. ಅದೊಂದು ‘ದೊಡ್ಡ, ಅತೀ ದೊಡ್ಡ’ ಸಾಧನೆ! ರಾಶಿಗಟ್ಟಲೆ ಕ್ಯಾಮೆರಾಗಳು, ಕಾನ್ ವೇ ಥರದಲ್ಲಿ ಕಾರುಗಳು ಆ ಟ್ರಕ್ಕನ್ನೇ ಹಿಂಬಾಲಿಸಿಕೊಂಡು ವಿಮಾನ ನಿಲ್ದಾಣಕ್ಕೆ ಬರುತ್ತವೆ. ಆ ಕಂಟೆನರ್ ಅನ್ನು ವಿಮಾನಕ್ಕೆ ನುಗ್ಗಿಸುವಾಗ ಅವನು ಒಂದು ಚೂರು ಅಲ್ಲಾಡಿದರೂ ವಿಮಾನದ ಒಳಭಾಗಕ್ಕೆ ಪೆಟ್ಟಾಗುತ್ತದೆ. ವಿಮಾನದ ಸಿಬ್ಬಂದಿ, ಅಮೀರ್ ಅವರಿಗೆ ಕಾವನ್ ಗೆ ಆದೇಶ ಕೊಡುವಂತೆ ಹೇಳುತ್ತಾರೆ. ಅಮೀರ್ ಗೆ ತಬ್ಬಿಬ್ಬು, ಅವನೇನು ಮನುಷ್ಯನೇ, ಅಲ್ಲಾಡಬೇಡ, ಮಧ್ಯ ಕೂತುಕೋ ಅಂದರೆ ಕೇಳುವುದಕ್ಕೆ! ಅಂತೂ ಇಂತೂ ಕಾವನ್ನಿನ್ನದ್ದೋ, ಅಮೀರ್ ಅವರದ್ದೋ ಅಥವಾ ಆ ವಿಮಾನದ ಅದೃಷ್ಟಕ್ಕೋ ಅವನು ಅಲ್ಲಾಡದೇ ಸರಿಯಾಗಿ ಮಧ್ಯದಲ್ಲೇ ನಿಂತು ವಿಮಾನದ ಒಳಕ್ಕೆ ಕಂಟೇನರ್ ಅನ್ನು ನುಗ್ಗಿಸಲಾಗುತ್ತದೆ. ಅಷ್ಟೂ ಹೊತ್ತು ಕಾವನ್ ಆರೋಗ್ಯವಾಗಿದ್ದಾನೆ ಎಂದು ಕಂಟೇನರ್ ಒಳಗೆ ತಲೆ ಹಾಕಿ ಅವನ ಸೊಂಡಿಲನ್ನು ಮುಟ್ಟಿ ಮುಟ್ಟಿ ನೋಡುತ್ತಲೇ ಇರುತ್ತಾರೆ ಅಮೀರ್. ಅವನ ಮಿಸುಕಾಟ ನೋಡಿ ‘ಸಧ್ಯ ಅವನು ಬದುಕಿದ್ದಾನೆ’ ಅನ್ನುವ ಸಮಾಧಾನ.
ಅವನು ಕಾಂಬೋಡಿಯಾ ಮುಟ್ಟಿ ಅವನನ್ನು ಬೀಳ್ಕೊಡುವ ಸಮಯದಲ್ಲಿ ಒದ್ದಾಡಿ ಹೋಗುತ್ತಾರೆ. ಅವರಿಗೆ ವಿಚಿತ್ರ ತಳಮಳ, ಸಂಕಟ. ಅಮೀರ್ ಕಾವನ್ನೊಂದಿಗೆ ತನ್ನ ಭಾವನಾತ್ಮಕ ಬಾಂಧವ್ಯವನ್ನು ನೆನೆದು ಕಣ್ಣೀರು ಹಾಕುತ್ತಾ “ಅವನೊಟ್ಟಿಗೆ ನಾನು ಅಟ್ಯಾಚ್ ಮೆಂಟ್ ಬೆಳೆಸಿಕೊಂಡದ್ದು ನನ್ನ ತಪ್ಪು, ಆದರೆ ಅವನನ್ನು ಶಾಂತಗೊಳಿಸಲು ಬೇರೆ ಯಾವುದೇ ದಾರಿಯೂ ನಮಗಿರಲಿಲ್ಲ” ಎನ್ನುತ್ತಾರೆ. ಕಾವನ್ ಈಗ ಕಾಂಬೋಡಿಯಾದ ತನ್ನ ಮೂವತ್ತು ಎಕರೆಗಳ ಕಾಡು-ಮನೆಯಲ್ಲಿ ಆರಾಮಾಗಿ ಓಡಾಡಿಕೊಂಡು, ಹೊಸ ಸಂಗಾತಿಗಳನ್ನು ಅವಾಗವಾಗ ಮಾತನಾಡಿಸಿಕೊಂಡು, ಸೊಪ್ಪು, ಕಲ್ಲಂಗಡಿ, ಬಾಳೆಹಣ್ಣು, ಬಾಳೆದಿಂಡು, ಹಣ್ಣುಗಳ ಭೂರಿ ಆದರೆ ಸರಿಯಾದ ಆಹಾರ ಸೇವಿಸಿಕೊಂಡು ಖುಷಿಯಿಂದಿದ್ದಾನೆ. ಅವನ ಜೋಲಿಯಾಡುವಿಕೆ ಈವಾಗ ನಿಂತಿದೆ. ಅವನ ಈ ಬೆಳವಣಿಗೆ ಬಗ್ಗೆ ಅಮೀರ್ ಅವನು ಇನ್ನಷ್ಟು ಆರಾಮಾಗುತ್ತಾನೆ ಎಂದು ತುಂಬು ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಮಕ್ಕಳಿಗೆ ಇಂಥಹುದೇನನ್ನೋ ತೋರಿಸಿದಾಗ, ಓದಿ ಹೇಳಿದಾಗ, ಅವರು ದೊಡ್ಡವರಾದಾಗ ವೆಟ್ ಆಗಿಯೋ, ಕಾಡಿನ ಸಂರಕ್ಷಕರಾಗಿಯೋ ಅಥವಾ ಸಾಕಷ್ಟು ಹಣ ದುಡಿದಲ್ಲಿ ಒಂದಿಷ್ಟು ಇಂತಹ ಸಂಸ್ಥೆಗಳಿಗೆ ದಾನ ಮಾಡಿಯೋ, ಯಾವುದೂ ಅಲ್ಲದಿದ್ದಲ್ಲಿ ದಾರಿಯಲ್ಲಿ ಸಿಗುವ ನಾಯಿ, ಬೆಕ್ಕುಗಳಿಗೆ ಹಿಂಸೆ ಮಾಡದೇ ಇರಬಹುದು ಎಂಬುದು ನನ್ನಾಸೆ.

1 comment: