Thursday, October 10, 2024

‌ನನ್ನ ಸಿಂಗಾರಿ

 ‍

ಪ್ರತೀ ಕ್ಲಾಸಿಕ್ ಅನಿಸಿಕೊಂಡ ಕೃತಿಯ ಪಾತ್ರಗಳು ನಮ್ಮ ಬದುಕಿನಲ್ಲಿ ನಮ್ಮೊಟ್ಟಿಗೇ ಹೆಜ್ಜೆ ಹಾಕುತ್ತಿರುತ್ತಾರೆ. ನಾವು ಕಳೆದುಕೊಂಡವರು, ನೆನಪಿನಲ್ಲಿಯೇ ನಮ್ಮ ಜೊತೆಗೆ ಬದುಕುತ್ತಿರುತ್ತಾರಲ್ಲವೇ ಹಾಗೆಯೇ. ಅದೇ ರೀತಿಯಾಗಿ ಕಂಬಾರರ ಸಿಂಗಾರವ್ವ ನನ್ನ ಹೃದಯದಲ್ಲಿ ಒಂದು ಸ್ಥಾನಪಡೆದವಳು. ಪ್ರತೀ ಸಲದ ಓದಿಗೂ ಅಷ್ಟೇ ಪ್ರಮಾಣದ ಸಂಕಟವನ್ನು ಪದೇ ಪದೇ ಹುಟ್ಟಿಸುತ್ತಾಳೆ, ಒಡನೆಯೇ ಜೀವನವನ್ನೆದುರಿಸುವ ದಾರಿಯನ್ನು ಮತ್ತೆ ಮತ್ತೆ ಮನಗಾಣಿಸುತ್ತಾಳೆ.  ಅವಳು ನನಗೆ ಅಪ್ಪಟ ಸ್ತ್ರೀವಾದಿಯಂತೆ ಮಾತ್ರವಲ್ಲ ಜೀವನೋತ್ಸಾಹದ ಪರಮಗುರುವಂತೆ ಕಾಣಿಸುತ್ತಾಳೆ. ಮಡಿಲಿಗೆ ಬಿದ್ದ ಜೀವನವನ್ನು ಎದೆಗೊತ್ತಿಕೊಂಡು ಹತಾಶೆ, ಅಕ್ರೋಶ, ಯಾತನೆ, ಸಂಕಟ, ಒದ್ದಾಟ, ನರಳಾಟಗಳನ್ನೂ ಮೀರಿ ಅವಳು ಅವಡುಗಚ್ಚಿ ಬದುಕುವ ರೀತಿಯಿದೆಯಲ್ಲ ಅದ್ವೀತಿಯ. 

ಕೃತಿಯಲ್ಲಿ ಕಂಬಾರರು ಆತಂಕ ಹುಟ್ಟಿಸುವಂಥಹ ಒಂದು ಹುಣಿಸೇ ಮೆಳೆಯನ್ನು ವರ್ಣಿಸಿದ್ದಾರೆ. ಅದನ್ನು ಓದುವಾಗ ಮನದಲ್ಲೊಂದು ಕಂಪನವೇಳುತ್ತದೆ. ಅವರು ಹೇಳುವಂತೆ ಗುಡ್ಡದಂಥಹ ಮರಗಳಿರುವ ಅದರ ಸ್ವರೂಪ ಈ ರಾಜ್ಯದಲ್ಲ, ದೇಶದ್ದೂ ಅಲ್ಲ, ಈ ಭೂಮಿಯದ್ದೂ ಅಲ್ಲದೇ ಯಾವುದೋ ಗೊತ್ತಿಲ್ಲದ ಗ್ರಹದ್ದು ಅನಿಸಿ ಬಿಡುತ್ತದೆ. ಸಾವಿರದೆಂಟು ರಾಕ್ಷಸಾಕಾರದ ಹುಣಿಸೇ ಮರಗಳಿರುವ ಮೆಳೆ. ವಿಚಿತ್ರ ನಾದಗಳು, ಸ್ವರಗಳು, ಕಿರುಚಾಟಗಳು ಕೇಳುವ ವಿಚಿತ್ರ ಲೋಕ. ಭೂತ, ಪಿಶಾಚಿಗಳ ವಾಸ ಸ್ಥಾನ. ಹಕ್ಕಿಗಳಿಲ್ಲದ, ಸದ್ದಿಲ್ಲದ, ಕ್ಷಿತಿಜ - ಆಕಾಶ ಕಣ್ಕಟ್ಟು ಮಾಡಿ ಒದ್ದಾಡಿಸುವ ಸ್ಥಳ. ಹೊಕ್ಕವರು ಹೊರ ಬರಲಾಗದೇ‌, ಒಳ ಸಿಕ್ಕು  ಒದ್ದಾಡಿ ಸತ್ತೇ ಹೋಗುವ ಉಸುಕಿನಂತಹ ಮೆಳೆಯದು. ಅಂಥದ್ದೇ ಬದುಕಿನ ಮೆಳೆಯಲ್ಲಿ ಸಿಂಗಾರವ್ವ ಸಿಕ್ಕಿ ಒದ್ದಾಡುವ ರೀತಿ ನಮ್ಮನ್ನೂ  ಒದ್ದಾಡಿಸಿಡುತ್ತದೆ. ಅಂಥಾ ಘನಘೋರ ಮೆಳೆಯಲ್ಲಿ ಸಿಕ್ಕಿ ಬಿದ್ದಾಕೆ ಉಳಿಯಲು ಸಾಧ್ಯವೇ‌ ಎಂದು ವಿಷಾದ ಎದೆ ತುಂಬಿ, ನಿಟ್ಟುಸಿರು ಹುಟ್ಟುವ ಹೊತ್ತಿನಲ್ಲಿ ಆ ಜಟಿಲ ಕಾನನದ ಕುಟಿಲ ಪಥದಿಂದ ಅವಳು ಹೇಗೋ ಹೊರಬಿದ್ದು ಮತ್ತೆ ಓಟ ಶುರು ಮಾಡುತ್ತಾಳೆ. 

ಸಿಂಗಾರವ್ವನ ಹೆತ್ತ ತಂದೆ ಗೌಡ ಆಸ್ತಿಗೋಸ್ಕರ ಉಪಾಯ ಮಾಡಿ ಹೆಣಕ್ಕೆ ಮದುವೆ ಮಾಡಿಸುತ್ತಾನೆ. ಹೆಣದೊಂದಿಗೆ ಮದುವೆಯಾಗುವ ಸಂಭ್ರಮದಿಂದ ಶುರುವಾಗುವ ಅವಳ ನೋವಿನ ಕಥೆಗೆ ಕೊನೆಯೇ ಇಲ್ಲ. ಆ ಆಘಾತದಿಂದ ಸಿಂಗಾರವ್ವ ಚೇತರಿಸಿಕೊಳ್ಳುವ ಮೊದಲೇ; ರೋಗಿಷ್ಟ, ನಪುಂಸಕನಂತಹ ಮತ್ತು ಬೇಜವಾಬ್ದಾರಿ ಸರಗಂ ದೇಸಾಯಿಗೆ ಮರು ಮದುವೆ ಮಾಡಿಸುತ್ತಾನೆ. ಅವನೋ ಮನುಷ್ಯನಾಗಿ ಹುಟ್ಟಿಯೂ ಮನುಷ್ಯ ಹೃದಯವಿಲ್ಲದವನು. ಸದಾ ಬಹುವಚನದಲ್ಲೇ ಇವಳನ್ನು ಸಂಭೋಧಿಸುವ, ಮರ್ಯಾದೆ ಕೊಡುವೆನೆಂಬ ನಾಟಕ ಮಾಡಿ ಹೇವರಿಕೆ ಹುಟ್ಟಿಸುವ ಅವನು ದೈಹಿಕ, ಮಾನಸಿಕ ಹೋಗಲಿ ಆರ್ಥಿಕವಾಗಿಯೂ ಅವಳಿಗೆ ಆಸರೆಯಾಗಲಾರ. ಅವನು ಇವಳಿಗೆ ಕೊಡುವ ಒಣ ಮರ್ಯಾದೆ ಮೈಯಲ್ಲಿ ಮುಳ್ಳು ಹುಟ್ಟಿಸುತ್ತದೆ.  ಅಷ್ಟಾದರೂ ಆತನನ್ನು ಸರಿ ದಾರಿಗೆ ತರಲು ಸಿಂಗಾರವ್ವ ಹಾಕುವ ಪ್ರಯತ್ನಗಳು ಒಂದೇ ಎರಡೇ. ದೇಸಾಯಿ ಬದಲು ಒಂದು ಕಲ್ಲನ್ನಾದರೂ ಅವಳು ಮದುವೆಯಾಗಿದ್ದಿದ್ದರೆ ಅದೂ ಆಕೆಯ ಸ್ನಿಗ್ಧ ಪ್ರೀತಿಗೆ ಕರಗಿಯೇ ಬಿಡುತ್ತಿತ್ತೇನೋ! ರೋಗಿಷ್ಟ ಗಂಡನನ್ನಾದರೂ ಒಲಿಸಿಕೊಂಡು ಬಾಳು ಸರಿ ಮಾಡಿಕೊಂಡೇನು ಅನ್ನುವ ಅವಳ ಛಲವನ್ನು ಆ ಶಿವನೂ ಆಗಿಸಿಕೊಡುವುದಿಲ್ಲ. ಮುದಿ ಅತ್ತೆಯ ಮೊಮ್ಮಗುವಿನ ಆಸೆಯ ಭೂತ ಇವಳ ಮೈಯಲ್ಲಿ ಹೊಕ್ಕು ಹುಚ್ಚಯ್ಯನ ಥರದ ಲಂಪಟ ಮನುಷ್ಯನ ಭವಿಷ್ಯವಾಣಿಯಲ್ಲೂ ಅವಳಿಗೆ ಒಳ್ಳೆಯದೇ ಕಾಣಿಸುತ್ತದೆ, ನಂಬುವಂತೆ ಮಾಡಿಸುತ್ತದೆ.  ಆ ಹುಚ್ಚಯ್ಯ ಅಕಸ್ಮಾತ್ತಾಗಿ ಸತ್ತು ಮನೆಯಾಳು ಸಮಯಸಾಧಕ ಮರ್ಯಾನಿಗೆ ಇವಳನ್ನು ಉಪಯೋಗಿಸಿಕೊಳ್ಳುವ ಅವಕಾಶವನ್ನು ಸೃಷ್ಟಿಸಿ ಕೊಡುತ್ತದೆ. ಅವನೊಬ್ಬ ಬೆನ್ನು ಬಿದ್ದ ನಕ್ಷತ್ರಿಕ. ಗೌಡ ಅವನಿಗೆ ಮಾಡಿದ ಅನ್ಯಾಯಕ್ಕೆ ಸಿಂಗಾರವ್ವನ ಮೇಲೆ ಸೇಡು. ಹಾಗೆ ನೋಡಿದರೆ ಅವಳ ಬದುಕಲ್ಲಿ ಬಂದು ಹೋಗುವ ಗಂಡಸರೆಲ್ಲರದ್ದೂ ಒಂದಿಲ್ಲೊಂದು ಬಗೆ ಕ್ರೌರ್ಯ. ಅವಳ ಮೇಲೆ ಕಣ್ಣು ಹಾಕಿ ಹಾಳು ಮಾಡಲು ನೋಡುವ ಹುಚ್ಚಯ್ಯ, ದೇಸಾಯಿಯ ಆಸ್ತಿ ಹೊಡೆಯಲು ತಂತ್ರ ಹೂಡುವ ಪರಮಶೆಟ್ಟಿಗಳ ಪಾತ್ರವೇನೂ ಕಡಿಮೆಯೇನಲ್ಲ. 

ಪದೇ‌ ಪದೇ ಸತ್ತು ಬದುಕುವ ಸಿಂಗಾರವ್ವನ ವ್ಯಥೆಯ ಕಥೆಯನ್ನು ಎಷ್ಟು ಹೇಳಿದರೂ ಕಡಿಮೆಯೇ. ಆ ಅರಮನೆಯನ್ನು ದುಷ್ಟ ತಂದೆ ಒಳಹಾಕಲು ಮಾಡಿದ ಸಂಚನ್ನರಿತವಳು, ಅದನ್ನು ಉಳಿಸಿಕೊಳ್ಳಲಾದರೂ ತನ್ನದೇ ಮಗು ಬೇಕೇ ಬೇಕೆಂಬ ಹಠಕ್ಕೆ ಬಿದ್ದು ಅದೇ ಕೆಟ್ಟ ಮನುಷ್ಯ ಮರ್ಯಾನನ್ನೇ ಆರಿಸಿಕೊಳ್ಳುತ್ತಾಳೆ.  ಪರುಷಮಣಿ ಮುಟ್ಟಿದವನಂತೆ ಆ ಮರ್ಯಾನೇನೋ ಥಟ್ಟನೇ ಅಪ್ಪಟ ಚಿನ್ನವಾಗಿ ಬದಲಾಗುತ್ತಾನೆ, ಆದರೆ ಅದೃಷ್ಟಹೀನೆ ಸಿಂಗಾರವ್ವನ ಬದುಕು ಬದಲಾದೀತೇ? ಬದಲಾಗಲು ವಿಧಿ ಬಿಟ್ಟೀತೇ? ತಾನು ಅನ್ಯಪುರಷನನ್ನು ಮುಟ್ಟಿದೆನೆಂಬ ನೈತಿಕತೆಯ ಕತ್ತಿ ಅವಳ ತಲೆಯ ಮೇಲೆ ತೂಗಾಡಿದಾಗೆಲ್ಲಾ ಉನ್ಮಾದಗೊಂಡು ಬಡಬಡಿಸುತ್ತಾಳೆ. ಯಾವುದೇ ರೀತಿಯಲ್ಲಿ ಗಂಡನಾಗಿರದಿದ್ದರೂ ದೇಸಾಯಿಗೆ ದ್ರೋಹ ತಾ ಮಾಡಿದನೆಂದು ಹಲುಬುತ್ತಾ, ಸೆರೆ ಕುಡಿಯುತ್ತಾಳೆ. ಗೊತ್ತೋ ಗೊತ್ತಿಲ್ಲದೆಯೋ ಮತ್ತೆ ಮತ್ತೆ ಮರ್ಯಾನ ಸಹವಾಸದ ಅಮಲಿನಲ್ಲಿ ತೇಲುತ್ತಾಳೆ. ಸಾವಿರ ಕಂಬಗಳಿರುವ, ಅವಳು ಉಳಿಸಿಕೊಳ್ಳಲು ಒದ್ದಾಡುತ್ತಿರುವ ಆ ಅರಮನೆಯೇ ಅವಳಿಗೊಂದು ಹುಣಿಸೆ ಮೆಳೆಯಾಗಿ ಬದಲಾಗಿ ಹೋಗುತ್ತದೆ. ಸರಿ - ತಪ್ಪು, ಆ ಅರಮನೆಯನ್ನು ಉಳಿಸಿಕೊಳ್ಳುವ ಪ್ರಯತ್ನ, ಮಗುವಿನ ಆಸೆ, ಹಾದರಗಿತ್ತಿ ಎಂದು ಆ ಆರಮನೆಯ ಹಿರಿಯರ ಆತ್ಮಗಳು ತನ್ನನ್ನು ನಿಂದಿಸುವವೆಂಬ ಭಯ, ಗಂಡನ ಷಂಡತನ ಇದರೆಲ್ಲದರ ಮಧ್ಯೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕೂಸು! ಅಬ್ಬಾ! ಒಬ್ಬ ಗರ್ಭಿಣಿಗೆ ಸಿಗಬೇಕಾದ ಏನೂ ಸಿಗದೇ, ಗರ್ಭ ಉಳಿಸಿಕೊಳ್ಳಲು ಅವಳು ಪಡುವ ಪಾಡು ನೆನೆಸಿಕೊಂಡರೆ ಹೃದಯ ಬಿರಿಯುತ್ತದೆ. 

ಇದೆಲ್ಲಾ ಗೊತ್ತಾದ ಮೇಲೆ, ಅಲ್ಲಿವರೆಗೂ ಇಲ್ಲದ ಮಾನ-ಮರ್ಯಾದೆಯ ಜಾಗೀರುದಾರ ತಾನೆಂಬೆಂತೆ ಆಡುವ ದೇಸಾಯಿ ಸಿಂಗಾರವ್ವ ಗರ್ಭಿಣಿಯಾದಾಗ ಹೊಟ್ಟೆಯುರಿ ತಡೆಯಲಾಗದೇ, ಹೊಟ್ಟೆಗೆ ತಲೆಯೆಂದೊದ್ದು ಕೊಲ್ಲಲು ಪ್ರಯತ್ನಿಸಿ, ಅದಾಗದೇ, ಕೊನೆಗೆ ತನ್ನ ಸಾವಿಗೇ ಇವಳೇ ಕಾರಣವೆಂದು , ಮರ್ಯಾದೆ ಇದ್ದರೆ ನೀನೇ ನಿನ್ನ ಕೊಂದೆ ಎಂದು ಒಪ್ಪಿಕೊಂಡು ಜೈಲುಪಾಲಾಗು ಎಂದು ಪತ್ರ ಬರೆದು ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾನೆ. ಅವನ ಪತ್ರದಲ್ಲಿನ ಸಾಧ್ವೀಮಣಿ, ಹಿಂದೂ ನಾರಿ, ಪತಿವ್ರತಾ ಶಿರೋಮಣಿ ಪದಗಳು ಅವನ ದುರ್ಬಲ ಮನದ ಕ್ರೌರ್ಯವನ್ನಲ್ಲದೇ ಮತ್ತೇನನ್ನೂ ಸಾರುವುದಿಲ್ಲ. ತಾನು ಹೇಗಿದ್ದರೂ ಪರವಾಗಿಲ್ಲ, ಸಿಂಗಾರವ್ವ ಮಾತ್ರ ಹೀಗೆಯೇ‌ ಇರಬೇಕೆಂಬ ಆಶೆಯನ್ನು ಅವಳು ಯಾವುದೋ ಒಂದು ರೀತಿಯಲ್ಲಿ ನೆರವೇರಿಸಿಬಿಟ್ಟಳಲ್ಲ ಎಂಬ ಹತಾಶೆ ಈಗಲೂ ನನಗಿದೆ. ಸಾವಿನ ಬಾಗಿಲು ತಟ್ಟುವಷ್ಟು ಜ್ವರ ಬಂದಾಗಲೂ ತಿರುಗಿ ನೋಡದ ಗಂಡನಿಗಾಗಿ, ಅವನ ಕಾಗದದ ಮೇಲಣ ಹುಚ್ಚು ಮಾತಿಗಾಗಿ,‍ ಯಾರೂ ಹೇಳಿದರೂ ಕೇಳದೇ ತಾನಾಗಿ, ಮೂಕವಾಗಿ ಜೈಲು ಸೇರುವ ಸಿಂಗಾರವ್ವನ ಮೌನ ಯಾವಾಗಲೂ ನನ್ನ ಕಿವಿಗಿರಿಯುತ್ತಲೇ ಇರುತ್ತದೆ. ಮೌನದ ಅಬ್ಬರ ಮಾತುಗಳಿಗೆಲ್ಲಿ? 

ಸಿಂಗಾರವ್ವನೋ ಮಗು ಮನಸ್ಸಿನ ಹುಡುಗಿ, ಎಲ್ಲದರಲ್ಲೂ ಒಳ್ಳೆಯದನ್ನೇ ಕಾಣುವವಳು. ದನವೊಂದು ಗರ್ಭ ಕಟ್ಟಿದೆ ಎಂದಾಗ ಮಗುವಂತೆ ಸಂಭ್ರಮಿಸುವವಳು. ಕೆಲಸದಾಳು ಗರ್ಭಿಣಿಯಾದಾಗ, ಬೇಕಾದದ್ದನ್ನು ಮಾಡಿ ತಿನ್ನಿಸಲು ಅವಳು ತೋರುವ ಕಾಳಜಿ, ಅವಳ ಹೊಟ್ಟೆ ಮುಟ್ಟಿ ಮುಟ್ಟಿ ಸಂಭ್ರಮಿಸುವ ಸಿಂಗಾರವ್ವ ನನ್ನ ಕಣ್ಣಲ್ಲಿ ನೀರು ತರಿಸುತ್ತಾಳೆ. ಅವಳದ್ದು ತಾಯಿ ಹೃದಯ, ಯಾರಿಗೂ ಕೇಡು ಮಾಡುವುದಿರಲಿ, ಅದನ್ನು ಬಯಸದ ಜೀವ. ಇಡೀ ‌ಪ್ರಪಂಚದಲ್ಲಿ ಅವಳನ್ನು ಪ್ರೀತಿಸುವ, ಅವಳ ನೋವಿಗೆ ಮರಗುವ ಏಕೈಕ ಜೀವ ಶೀನಂಗಿ ಹೀಗೆ ಹೇಳುತ್ತಾಳೆ:  

“ಕೆಲವರಿರುತ್ತಾರೆ, ನೀವು ಬೆರಳು ಮಾಡಿ ತೋರುವಂಥ ಯಾವ ಕರ್ಮ, ಯಾವ ಪಾಪ , ಯಾವ ಕೆಟ್ಟ ಕೆಲಸವನ್ನೂ ಮಾಡಿರುವುದಿಲ್ಲ. ಇನ್ನೊಬ್ಬರ ಮನಸ್ಸನ್ನೂ ಕೂಡ ನೋಯಿಸಿರುವುದಿಲ್ಲ. ಆದರೆ ಜೀವನದುದ್ದಕ್ಕೂ ಚಂಡಾಲರು ಅನುಭವಿಸುವಂಥ ಯಾತನೆ, ನೋವನ್ನು ಅನುಭವಿಸುತ್ತಾರೆ. ಅವರು ಚಿನ್ನ ಹಿಡಿದರೆ ಮಣ್ಣಾಗುತ್ತದೆ. ಅನ್ನವೆಂದದ್ದು ವಿಷವಾಗುತ್ತದೆ. ಅವರು ಕಾಲಿಟ್ಟಲ್ಲಿ ನಿಂತ ನೀರು ಇಂಗುತ್ತದೆ. ಬೆಳೆದ ಹಸಿರು ಒಣಗುತ್ತದೆ. ಮಕ್ಕಳು, ದನಕರು ಸಾಯುತ್ತವೆ. ನೀನು ಬಂದು, ಅವರ ಅಂತಃಕರಣ ಕಂಡು, ‘ದೇವರು ಒಳ್ಳೇದು ಮಾಡಲಿ’ ಅಂತ ಮನಸಾರೆ ಹರಸಿದೆ ಅಂತಿಟ್ಟುಕೊ. ಆದರೆ ಪರಿಣಾಮ ಮಾತ್ರ ಅದಕ್ಕೆ ವಿರುದ್ಧವಾಗೇ ಆಗಿರುತ್ತದೆ. ಹಿಂಗ್ಯಾಕೆಂಬುದಕ್ಕೆ ಕಾರಣ ಕಡೀತನಕ ಗೊತ್ತಾಗೋದೇ ಇಲ್ಲ. ಯಾವುದಕ್ಕೂ ಒಂದು ತರ್ಕ ಇರಬೇಕಲ್ಲ. ಅದಿಲ್ಲಿ ಇರೋದೇ ಇಲ್ಲ. ನಮ್ಮ ದೊರೆಸಾನಿ ಅಂಥವಳು.” 

ಮನುಷ್ಯ ಸಾಯಲಿ  ಆ ದೇವರಿಗೂ ಅಂಥ ಸೂಕ್ಷ್ಮ ಮನಸ್ಸಿನ ಹುಡುಗಿಯ ಮೇಲೆ ಎಂಥಹಾ ದ್ವೇಷ? ಸ್ವತಃ ಹೆಣ್ಣಾದ ಗ್ರಾಮದೇವತೆ ಕುಮುದವ್ವನಾದರೂ ಒಂದು ಚೂರು ಕರುಣೆ ತೋರಿಸಿದಳೇ? 

ಹರ ಕೊಲ್ಲಲು ಪರ ಕಾಯ್ವನೇ ಎಂಬ ಗಾದೆ ಸುಮ್ಮನೇ ಹುಟ್ಟಿದೆಯೇ?

ದೇವರೋ ಅಥವಾ ವಿಧಿಯೋ ಬೀಸಿ ಎಸೆಯುವ ಕಷ್ಟದ ದಿನಗಳಲ್ಲಿ ಉಸಿರು ಬಿಗಿ ಹಿಡಿದು ಸಾಗುವ ದಿನಗಳಲ್ಲಿ ಸಿಂಗಾರವ್ವ ನನ್ನ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಿರುತ್ತಾಳೆ. ಅವಳೊಂದು ಭರವಸೆಯ ಪ್ರತೀಕ.  ಕಷ್ಟಗಳ ಸುರಿಮಳೆಯಾದಾಗ ತನ್ನ ಘನತೆಯ ಛತ್ರಿ ಹಿಡಿದು ಹರಸಾಹಸ ಮಾಡಿ ಮುನ್ನಡೆಯುವ ಗಟ್ಟಿಗತ್ತಿ. ಇಷ್ಟೆಲ್ಲಾ ಕಷ್ಟ ಬಂದಿದ್ದರೆ ನಾ ಸತ್ತೇ ಹೋಗ್ತೀನಿ, ನನಗೇನೂ ಆಗದಿದ್ರೆ ಸಾಕಪ್ಪ ಅನ್ನುವ ಕೆಟ್ಟ ಈಗೋವನ್ನು ಬದಿಗಿಟ್ಟು ಯೋಚಿಸಲು ಹೇಳಿಕೊಟ್ಟವಳು. ಯಮಯಾತನೆಯನ್ನು ನುಂಗಲು ಕಲಿಸಿದವಳು. ಸಾವಿಗಿಂತ ಬದುಕು ದೊಡ್ಡದು ಎನ್ನುವ ಪುಣ್ಯಾತಗಿತ್ತಿ.

ಪುಸ್ತಕ ಮುಗಿಸಿ ಕಣ್ಣು ಮುಚ್ಚಿದರೆ ನನ್ನ ಕಣ್ಣಲ್ಲಿ ಬರುವ ಸಿಂಗಾರಿಯ ಚಿತ್ರವೆಂದರೆ ಶಾಲೆಯಾಗಿ ಮಾರ್ಪಾಡಾಗಿರುವ ಅವಳ ಮಗನ ದೇಸಗತಿಯ ಅರಮನೆಯಲ್ಲಿ ಪ್ರತೀ ಕಂಬಕ್ಕೆ ಸುತ್ತಿ ಆಡುವ ಮಕ್ಕಳೊಡನೆ ತಾನೂ ಮಗುವಾಗಿ ಓಡಾಡುವಂಥದ್ದು. 

ಅಗಸ್ಟ್ ತಿಂಗಳ ಮಯೂರದ ಚಿತ್ತ ಕೆತ್ತಿದ ಚಿತ್ರ ಮಾಲಿಕೆಯಲ್ಲಿ ಪ್ರಕಟವಾಗಿದೆ. 


Friday, June 23, 2023

ಕಸೂತಿ


 Hurt people hurt people

 ― Yehuda Berg


ಬಸ್ಸಿಳಿಯುವಾಗಲೇ ಪೂರ್ತಿ ಕತ್ತಲು ಕವಿದಿತ್ತು. ಕೈಲಿದ್ದ ಮೊಬೈಲಿನ ಟಾರ್ಚು ಆನ್ ಮಾಡಿ ಕಲ್ಲಿನ ಚಪ್ಪಡಿಗಳ ಸಂಕದ ಮೇಲೆ ಕಾಲಿಟ್ಟು ನಡೆಯುವಾಗ ‘ಅರೇ ಈ ಚಪ್ಪಡಿಗಳು ಅದೆಷ್ಟು ವರ್ಷಗಳಿಂದ ಬಿದ್ದುಕೊಂಡಿವೆಯಲ್ಲಾ?, ಈ ಕೊಂಪೆಯಲ್ಲಿ ಏನೂ ಬದಲಾಗಿಲ್ಲ, ಆಗುವುದೂ ಇಲ್ಲ’ ಅಂದುಕೊಂಡೆ. ಬಂದು ಏಳು ವರ್ಷಗಳಾಯ್ತಲ್ಲ ಎಂದು ಆ ಕ್ಷಣಕ್ಕೇ ಹೊಳೆಯಿತು. ಅದರಿಂದ ಕೆಳಕ್ಕಿಳಿದು ನಡೆಯುತ್ತಿದ್ದಂತೆ ದಾರಿ ಮಹೇಶನ ಮನೆಯ ಪಕ್ಕಕ್ಕೆ ಹೊರಳಿತು. ಮಂದ ಬೆಳಕಿನಲ್ಲಿ ಆರಾಮವಾಗಿ ಬಿದ್ದುಕೊಂಡ ಅವರ ಮನೆಯ ನಾಯಿ ಬೊಗಳಲು ಶುರು ಮಾಡಿತು. ಮನೆಯೊಳಗಿಂದ “ಏರ್ ಅವು (ಯಾರದು)” ಎಂಬ ಪ್ರಶ್ನೆಗೆ ‍ “ನಾನು” ಎಂದಷ್ಟೇ‌ ಹೇಳಿದೆ. “ಓಹ್! ಬಾಬಣ್ಣ ಈಗ ಬರುವುದಾ?, ಗಿರ್ಜತ್ತೆ ಹೇಗಿದ್ದಾರೆ ಈಗ? ಎಂಥ ತಡ ಮಾಡಿ ಹೊರಟ್ರಿಯಾ?” ಎಂಬ ಮಾತಿನೊಂದಿಗೆ ಮಹೇಶನ ಆಕೃತಿ ಮಸುಕಾಗಿ ಕುಂಟುತ್ತಾ ಹೊರಬಂದದ್ದು ಕಂಡಿತು. “ಹೂಂ, ಮಹೇಶಣ್ಣ, ಕಾಲೇಜು ಬಿಟ್ಟು ಮನೆಗೆ ಹೋಗಿ ಹೊರಟು ಬರುವಾಗ ತಡವಾಯ್ತು, ಅಮ್ಮ ಆರಾಮಿದ್ದಾಳೆ, ಕಾಲು ಹೇಗಿದೆ ಇವಾಗ?” ಎಂದು ನಡೆಯುತ್ತಲೇ ಕೇಳಿದೆ. ಅವನು “ಹೂಂ ಪರ್ವಾಗಿಲ್ಲ ಬಾಬಣ್ಣ, ಜಾಗ್ರತೆ ಹೋಗಿ”ಎಂದ. ಮಹೇಶ ಅಮ್ಮನ ದೂರದ ಸಂಬಂಧಿ, ಮಾಧ್ವಿಯತ್ತೆಯ ಎಲ್ಲಾ ಸಮಾಚಾರಗಳನ್ನು ಅಮ್ಮನಿಗೆ ತಿಳಿಸುವಾತ. ಅಡಿಕೆ ಮರಗಳ ಸಪೂರ, ಉದ್ದ ಕಪ್ಪು ನೆರಳುಗಳ ಮಧ್ಯೆ ನಡೆಯುತ್ತಾ ಹೋದಂತೆ, ಮಿಣುಕುಹುಳಗಳ ಮಿಂಚಿ ಮಾಯವಾಗುವ ಬೆಳಕು, ಜೀರುಂಡೆಗಳ ಸದ್ದು, ಕಪ್ಪೆಗಳ ವಟವಟಗಳ ನಡುವೆ ಈ ಕತ್ತಲ ಪ್ರಪಂಚದಲ್ಲಿ ಸುಖವೆನಿಸಿತು. ‍ ಕತ್ತಲಿದ್ದರೂ ಸುತ್ತಣ ಏನಿದೆ, ಏನಿಲ್ಲ ಎಂಬುದರ ಅರಿವು ಚೆನ್ನಾಗಿಯೇ ಮನಸ್ಸಿಗೆ ತಿಳಿದಿತ್ತು. ಜಯ, ಸುಧೀ ಇಬ್ಬರೂ ಹತ್ತಿ ಕೂತು ದಾರಿ ಕಾಯುತ್ತಿದ್ದ ಮಾವಿನ ಮರ, ಅದರಾಚೆಗೆ ಸಣ್ಣ ಹೊಂಡ, ಅದರ ಸುತ್ತ ಬೆಳೆದ ಜರಿ ಗಿಡ, ದಂಡೆಯಂಚಿಗೆ ಬೆಳೆದ ಕತ್ತರಿ ದಾಸವಾಳದ ಗಿಡ, ಅದರ ಪಕ್ಕದ ಜಂಬೂ ನೇರಳೆ ಮರ, ಮೈ ತುಂಬ ಹೂ ಬಿಡುತ್ತಿದ್ದ ಕರವೀರ ಮತ್ತದರ ಗಟ್ಟಿ ಕಾಯಿಗಳು ಎಲ್ಲವೂ ಬೆಳಕಿದ್ದಾಗ ಹೇಗೆ ಕಾಣಿಸುತ್ತಿತ್ತೋ ಅಷ್ಟೇ ನಿಚ್ಚಳವಾಗಿ ಮನದ ಕಣ್ಣಿಗೆ ಗೋಚರಿಸುತ್ತಿತ್ತು. ಆ ಕರವೀರದ ಕಾಯಿಗಳಲ್ಲಿ ಜಯಾ ಅದೆಷ್ಟು ಚೆನ್ನಾಗಿ ಪೊಕ್ಕ ಆಡ್ತಿದ್ದಳು!  

ಅತ್ತೆ ಮನೆಯ ದೀಪದ ಬೆಳಕು ಕಾಣಿಸುತ್ತಿದ್ದಂತೆ ರಾಜನ್ ನಾಯಿ ಜೋರಾಗಿ ಬೊಗಳುತ್ತಾ ಸ್ವಾಗತಿಸಿದ. “ಎಂಥಾ ಮಾರಾಯ, ಅಜ್ಜ ಆಗಿದ್ದೀಯಲ್ಲಾ? ನನ್ನ ಗುರ್ತ ಸಿಗುವುದಿಲ್ಲ  ಅಲ್ಲಾ ನಿಂಗೀಗ, ಕಾಟು ಎಲ್ಲಾದ್ರೂ ತಂದು” ಅನ್ನುತ್ತಾ ಬೈದು ಅದರ ಹತ್ತಿರ ಹೋದರೆ, ಬಾಲ ಆಡಿಸುತ್ತಾ, ಶೇಲೆ ಮಾಡುತ್ತಾ ಕಾಲು, ಕೈ ನೆಕ್ಕಲು ಶುರು ಮಾಡಿದ. ಅದರ ಸಂಭ್ರಮ ಮುಗಿದ ಮೇಲೆ, ತಪ್ಪಲೆಯಲ್ಲಿಟ್ಟಿದ್ದ ನೀರಿನಲ್ಲಿ ಕೈ ಕಾಲು ತೊಳೆಯುತ್ತಾ ಬಲಗಡೆ ಕಣ್ಣು ಹಾಯಿಸಿದರೆ, ದೊಡ್ಡ ಚಾವಡಿಯ ಮೂಲೆಯಲ್ಲಿ ರಾಶಿ ಬಟ್ಟೆಗಳಲ್ಲಿ ಮುಳುಗಿರುವ ತಲೆಯೊಂದು ಕಾಣಿಸಿತು. ನಾಯಿ ಬೊಗಳಿದರೂ ಕೇಳಲಿಲ್ವಾ ಇವಳಿಗೆ ಅಂದುಕೊಂಡು ಚಾವಡಿಯ ಕಡೆ ನಡೆದು ಮೆಟ್ಟಲು ಹತ್ತುತ್ತಿದ್ದಂತೆ ಎಮರ್ಜೆನ್ಸಿ ದೀಪದ ಹತ್ತಿರ ಕೂತು, ರಾಶಿ ರಾಶಿ ಬಟ್ಟೆಯ ತುಂಡುಗಳು, ಬೇರೆ ಬೇರೆ ಸೈಜಿನ ರಿಂಗುಗ‍ಳು, ಬಣ್ಣ ಬಣ್ಣದ ಹೊಳೆಯುವ ಮಣಿಗಳು, ಬಗೆ ಬಗೆಯ ದಾರಗಳು ಎಲ್ಲವನ್ನೂ ಪುಟ್ಟ ಪುಟ್ಟ ತಟ್ಟೆಗಳಲ್ಲಿ ಹರಡಿಸಿಕೊಂಡು  ಅದರ ಮಧ್ಯೆ ಕಸೂತಿ ಹಾಕುತ್ತಾ ಕೂತಿದ್ದಳು ಮಾಧ್ವಿಯತ್ತೆ… ಯಾವುದೋ ಬೇರೆ ಲೋಕಕ್ಕೆ ಬಂದಂತನಿಸಿತು. “ಅತ್ತೆ!” ಎಂದಾಗ ತಲೆಯೆತ್ತಿದವಳ ಕಣ್ಣಲ್ಲಿ ಸಂತಸದೆಳೆ ಒಂದರೆಗಳಿಗೆ ಕಂಡಂತಾಯ್ತು.  “ಬಾಬಣ್ಣ, ಬಂದ್ಯಾ, ತಡವಾಯ್ತಲ್ಲಾ ಮಗ?” ಎಂದಳು. ಮಹೇಶ ಹೇಳಿರಬೇಕು ಅಂದುಕೊಂಡು ತಲೆಯಾಡಿಸಿದೆ. “ಹೋಗು, ಸ್ನಾನ ಮುಗಿಸಿ ಬಾ, ಊಟ ಮಾಡುವೆಯಂತೆ, ಕಾಫಿ ಬೇಡ ಅಯ್ತಾ ಇಷ್ಟು ಹೊತ್ತಲ್ಲಿ” ಎನ್ನುತ್ತಾ ಕನ್ನಡಕ ತೆಗೆದು ಮೇಲೆಳಹೊರಟಳು. “ಬೇಡ, ಸಧ್ಯಕ್ಕೆ ಹಸಿವಿಲ್ಲತ್ತೆ, ನೀನು ಕೂತ್ಕೊ, ಕಾಲೇಜಿಂದ ಬಂದು ಸ್ನಾನ ಮುಗಿಸಿಯೇ ಹೊರಟೆ, ಬಸ್ಸಲ್ಲಿ ಏನೂ ಆಯಾಸವಾಗಿಲ್ಲ, ಸ್ನಾನ ನಾಳೆ ಮಾಡ್ತೆ, ಆಗ್ದಾ?” ಎಂದು ಒಂದು ನಿಮಿಷ ತಡೆದು, “ಸುಧೀ?” ಎಂದು ತಡವರಿಸುತ್ತಾ ಕೇಳಿದಾಗ ಅವಳು ಏನೂ ಭಾವನೆಗಳನ್ನು ತೋರದೆ “ಬಾಣಂತಿ ಕೋಣೆಯಲ್ಲಿ” ಎಂದಳು. “ಬಾಣಂತಿ ಕೋಣೆ?” ಎಂದು ಆಶ್ಚರ್ಯದ ಉದ್ಗಾರ ಬಾಯಿಂದ ಗೊತ್ತಿಲ್ಲದೆಯೇ ಹೊರಬಿತ್ತು, ಮಾಧ್ವಿಯತ್ತೆ ತಲೆಯೆತ್ತಲೂ ಇಲ್ಲ, ಮಾತೂ ಆಡದೇ ಮತ್ತೆ ಕನ್ನಡಕ ಧರಿಸಿ ತನ್ನ ಕೆಲಸ ಮುಂದುವರಿಸಿದ‍ಳು.

ಎದ್ದು ಚಾವಡಿ ದಾಟಿ ನಡುಮನೆಗೆ ಬಂದರೆ ಮಾವ ಕತ್ತಲಲ್ಲಿ ಕೂತು ಮಣ ಮಣ ಮಾಡುತ್ತಿದ್ದದ್ದು ಕೇಳಿತು. “ಮಾವ, ನಾನು ಬಾಬು” ಎಂದೆ, ಉತ್ತರವಿಲ್ಲ. ಮತ್ತೆ ಚಾವಡಿ ಹಾದು, ಕೊಟ್ಟಿಗೆ ಮತ್ತು ಬಚ್ಚಲ ನಡುವೆಯಿದ್ದ ‍ಬಾಣಂತಿ ಕೋಣೆಗೆ ನಡೆದೆ. ಬಾಗಿಲು ಸ್ವಲ್ಪವೇ ಸ್ವಲ್ಪ ತೆರೆದಿತ್ತು, ಜೀರೋ ಬಲ್ಬಿನ ಮಂದ ಬೆಳಕು ಹೊರಗೆ ಬರಲು ಸೆಣೆಸುತ್ತಿತ್ತು. ಮೆಲ್ಲಗೆ ಬಾಗಿಲು ದೂಡಿ ಕಾಲಿಟ್ಟು ಸುತ್ತ ನೋಡಿದರೆ,  ಗೊರಬುಗಳು, ನೇಗಿಲು ಇತ್ಯಾದಿ, ಗದ್ದೆಗೆ ನೇಜಿ ನೆಡಲು, ಉಳಲು ಬೇಕಾದ ಎಲ್ಲಾ ವಸ್ತುಗಳಿದ್ದವು. “ಸುಧೀ” ಎಂದು ಮೆತ್ತಗೆ ಕರೆದರೆ, ಯಾವುದೋ ಮೂಲೆಯಿಂದ ಅವನ ಸ್ವರ ಕೇಳಿದಂತಾಯ್ತು. ಗೋಡೆ ತಡಕಾಡಿ ಲೈಟ್ ಸ್ವಿಚ್ ಆನ್ ಮಾಡಿದರೆ, ಮೂಲೆಯೊಂದರಲ್ಲಿ ಹಾಸಿಗೆಯ ಮೇಲೆ ಕೃಶಕಾಯ ಆಕೃತಿ ಮಲಗಿದೆ, ಸುಧೀ ಎಂದು ನಂಬಲಾರದಷ್ಟು ಬದಲಾಗಿದ್ದಾನೆ. ಮುಖಕ್ಕೆ ಯಾರೋ ರಪ್ ಎಂದು ಬಾರಿಸಿದಂತಾಯ್ತು. ಅಲ್ಲಿ ಕಾಣುತ್ತಿದ್ದದ್ದು, ಸುಮಾರು ಹದಿನೈದು ವರ್ಷಗಳಿಂದ ಭೀಮಸೇನ ಎಂದು ಕರೆಸಿಕೊಳ್ಳುತ್ತಿದ್ದ ಜೀವ ಎಂದು ನಂಬಲು ಆಗಲೇ ಇಲ್ಲ, ಕಣ್ಣಿಗೆ ಕಂಡದ್ದನ್ನು ಜೀರ್ಣಿಸಿಕೊಳ್ಳಲು ಒದ್ದಾಡಿದೆ. ಕಣ್ಣು ಮಂಜಾಗಿ, ಗಂಟಲು ಕಟ್ಟಿ ಬಂತು. ಹೇಗಿದ್ದ ಜೀವ, ಛೇ! ಮೊದಲೇ ಬಂದಿದ್ರೆ ಏನಾಗ್ತಿತ್ತು ನಂಗೆ? ಏಳು ವರ್ಷ ಕತ್ತೆ ಕಾಯ್ತಿದ್ದೆನಾ ಅನಿಸಿ ನನ್ನ ಮೇಲೆ ನನಗೇ ಸಿಟ್ಟು ಬಂತು. ಸ್ವಲ್ಪ ಸಾವರಿಸಿಕೊಳ್ಳುವಷ್ಟರಲ್ಲಿ ಸುಧೀ ತನ್ನ ನಿತ್ರಾಣ ದನಿಯಲ್ಲಿ “ಬಾಬಣ್ಣ, ನಿನ್ನ ನೋಡಬೇಕು ಅಂತ ತುಂಬಾ ಆಸೆಯಾಗಿತ್ತೋ”ಅಂದ. ಇಷ್ಟೂ ಹೊತ್ತು ಗಮನಕ್ಕೆ ಬಾರದ ಕಮಟು ವಾಸನೆ ಒಂದೇ ಸಲ ಮೂಗಿಗೆರಗಿತು. ಕೂರಲು ಜಾಗವೇ ಇರಲಿಲ್ಲ,  ತಲೆ ಹತ್ತಿರ ಒಂದು ಚೊಂಬು, ಮತ್ತೊಂದು ಲೋಟವಿತ್ತು ಅಷ್ಟೆ. ಅಲ್ಲಿದ್ದ ಒಂದಿಷ್ಟು ಸಾಮಾನುಗಳನ್ನು ಬದಿಗೆ ಸರಿಸಿ, ಅವನ ಪಕ್ಕದಲ್ಲಿ ಹೋಗಿ ಕೂತೆ.  ಕುರುಚಲು ಗಡ್ಡ, ಕೆದರಿದ್ದ ರಾಶಿ ತಲೆ ಕೂದಲು. ಅವನ ಕಟ್ಟಿಗೆಯ ಹಾಗಿದ್ದ ಕೈ ಹಿಡಿದು “ಹೇಗಿದ್ದೀ ಸುಧೀ?” ಎಂದರೆ, ಅವನು ನಿರ್ಭಾವುಕನಾಗಿ ಸುಮ್ಮಗೆ ದಿಟ್ಟಿಸಿದ. ಒಂದಿಷ್ಟು ಹೊತ್ತಾದ ಮೇಲೆ “ಗೊತ್ತಿಲ್ಲ ಬಾಬಣ್ಣ, ಓಬಯ್ಯ ಏನೋ ಮೂರೂ ಹೊತ್ತು ಅನ್ನ ಕಲೆಸಿ ತಿನ್ನಿಸುತ್ತಾನೆ, ಆ ಅಡಕೆಯ ಸೋಗೆ ಮೇಲೆ ಪಾಯಿಖಾನೆ ಆಗುತ್ತೆ.  ನೀರು ತಲೆಯ ಹತ್ತಿರ ಉಂಟು, ಹಗಲು ರಾತ್ರಿ ಇಲ್ಲೇ ಬಿದ್ದಿರುವುದು. ಉರುವಾಗ್ತದೆ, ಹೊರಗೆ ಹೋಗಬೇಕು, ಗುಡ್ಡ ಸುತ್ತಬೇಕು ಅನಿಸ್ತದೆ” ಅಂದ. ಯಾವ ಮಾತೂ ಹೊಳೆಯಲಿಲ್ಲ, ತಲೆ ಬ್ಲಾಂಕ್ ಆಯ್ತು. ಸುಧೀ ಏಳಲು ಪ್ರಯತ್ನಿಸಿದ, ಗೋಡೆಗೆ ದಿಂಬು ಒರಗಿಸಿ, ಅವನನ್ನೆತ್ತಿ ಕೂರಿಸಿದೆ. “ನನ್ನ ಅಮ್ಮ ಎಂಬ ಮಹಾರಾಣಿಗೆ ಉಚ್ಚೆ, ಚಿಚ್ಚಿಗಳ ವಾಸನೆ ಮನೆಯಿಡೀ ಹರಡಿ ಊಟಕ್ಕೆ ಕೂತ್ರೆ ವಾಕರಿಕೆ ಬರ್ತದಂತೆ, ಅಪ್ಪನ ಕೆಲ್ಸ ಮಾಡಿಯೇ ಸಾಕಾಗಿರ್ತದೆ ಅವ್ಳಿಗೆ, ನನ್ನಿಂದ ಇನ್ನಷ್ಟು ಕಷ್ಟ ಯಾಕೆ, ನಾನೇ ಇಲ್ಲಿಗೆ ಹಾಸಿಗೆ ಹಿಡ್ಕೊಂಡು ಬಂದೆ, ಆರಾಮಾಗಿರ್ಲಿ ಅವ್ಳು ಅಲ್ಲಿ” ಎಂದ. ದನಿಯಲ್ಲಿನ ತಾತ್ಸಾರ, ಕಹಿ, ತಿರಸ್ಕಾರ ಅರ್ಥವಾಯಿತು. ನಾಲಿಗೆ ಹೊರಳಿಸುವ ಪ್ರಯತ್ನ ಮಾಡಿದರೂ ಶಬ್ದ ಹೊರಡಲಿಲ್ಲ. “ಜಯಾ ಕರೀತಾನೆ ಇರ್ತಾಳೆ, ಇಬ್ರೂ ಒಟ್ಟಿಗೆ ಆರಾಮಾಗಿರಬಹುದು, ಹೋದ್ರಾಯ್ತು ಅಲ್ಲಿಗೆ ಬೇಗ” ಎಂದವನು “ಇರ್ಲಿ ಬಾಬಣ್ಣ, ನೀ ಹೇಳು, ಕೇಶವ ಮಾಮ, ಗಿರ್ಜಾ ಮಾಮಿ ಹೇಗಿದ್ದಾರೆ? ನಂಗೇನಾದ್ರೂ ತಂದ್ಯಾ?” ಎಂದು ಸ್ವಲ್ಪ ಗೆಲುವಿನ ಸ್ವರದಲ್ಲಿ ಕೇಳಿದ.“ಹೌದು, ಅಮ್ಮ ಈವಾಗ ಆರಾಮಾಗಿದ್ದಾಳೆ, ನಿನ್ನ ತುಂಬಾ ನೆನಪಿಸಿಕೊಳ್ಳುತ್ತಾಳೆ, ಆಸ್ಪತ್ರೆಯಿಂದ ಬಂದು ಹದಿನೈದು ದಿನ ಆಯ್ತು, ಅವಳು ಎಲ್ಲೂ ಟ್ರಾವೆಲ್ ಮಾಡಬಾರದು ಒಂದು ತಿಂಗಳು, ಅದಕ್ಕೆ ಬಂದಿಲ್ಲ, ಈ ತಿಂಗಳ ಕೊನೆಗೆ ಬರ್ತಾಳೆ ನಿನ್ನ ನೋಡೋಕೆ, ಓಹ್! ಮರೆತೇ ಹೋಗಿತ್ತು, ತಡಿ” ಎಂದವನಿಗೆ ಹೇಳಿ, ಚಾವಡಿಗೆ ಓಡಿ ಬ್ಯಾಗಿನಲ್ಲಿದ್ದ, ತಿಂಡಿಯ ಚೀಲ, ಮತ್ತೆ ಒಂದಿಷ್ಟು ಪುಸ್ತಕಗಳನ್ನು ತೆಗೆದುಕೊಂಡೆ. ಅತ್ತೆ ಕಡೆ ನೋಡಬೇಕೆನಿಸಲಿಲ್ಲ. ತಿಂಡಿಯ ಚೀಲದಿಂದ ಡೈರಿ ಮಿಲ್ಕು, ಚಿಪ್ಸ್, ಹಣ್ಣುಗಳು ಮತ್ತು ಅವನಿಷ್ಟದ ಖಾರ ಶೇಂಗಾದ ಪ್ಯಾಕೆಟುಗಳನ್ನು ತೆಗೆಯುತ್ತಿದಂತೆ ಅವನ ಮುಖವರಳಿತು. ಮೊದಲಿನ ಪುಟ್ಟ ಭೀಮಸೇನ ಕಣ್ಮುಂದೆ ಬಂದು ನಕ್ಕಂತಾಯ್ತು.  ಎಲ್ಲವನ್ನೂ ಬಾಚಿ ಅಪ್ಪಿಕೊಂಡ. ಡೈರಿಮಿಲ್ಕಿನ ರ್ಯಾಪರ್ ಬಿಚ್ಚಿ ತಿನ್ನುತ್ತಾ “ಇದೊಂದು ಮಾತ್ರ ಗಿರ್ಜಾ ಮಾಮಿ ಮರೆಯಲ್ಲ ನೋಡು, ನಂಗಿಪ್ಪತ್ತೆರಡು ವರ್ಷವಾದ್ರೂ ಅವರಿಗೆ ನಾನಿನ್ನೂ ಮಗೂನೇ” ಎಂದು ಪುಸ್ತಕಗಳಲ್ಲೊಂದನ್ನು ಎತ್ತಿಕೊಂಡು ನನ್ನ ಕಡೆಗೆ ಒಮ್ಮೆ ಧನ್ಯತೆಯಿಂದ ನೋಡಿ, “ನಾ ತಿಂತಾ ಓದ್ಲಾ ಬಾಬಣ್ಣ ?”ಎಂದಾಗ ಸರಿಯೆಂದು ನಕ್ಕು ಅಲ್ಲಿಂದೆದ್ದೆ. ಅದಷ್ಟನ್ನೂ ಗಿರ್ಜಾ ಮಾಮಿ ಕಳಿಸದ್ದಲ್ಲ, ನಾನೇ ತಂದೆ ಎನ್ನಲು ಮನಸ್ಸಾಗಲಿಲ್ಲ. 

ಹೊರಬರುವಷ್ಟರಲ್ಲಿ ರಾಜನ್ ಗುರ್ರ್ ಎಂದಿದ್ದೂ, ಅದರ ಹತ್ರ ತುಳುವಿನಲ್ಲಿ ಮಾತಾಡಿದ ಓಬಯ್ಯನ ಸ್ವರವೂ, ಅವನ ಸ್ಲಿಪರ್ರಿನ ಶಬ್ದವೂ ಕೇಳಿ ನಂತರ ಅವನ ದೃಢಕಾಯವೂ ಕಾಣಿಸಿಕೊಂಡಿತು. “ಓಬಯ್ಯ…ಸೌಖ್ಯಾ ?”ಎಂದೆ.ಅವನೂ “ಹಾಂ” ಎಂದ. ಅವನು ಹತ್ತಿರ ಬರುವುದನ್ನೇ ಕಾದು, ಮೆಲು ದನಿಯಲ್ಲಿ, “ನಾಳೆ ಆ ಕೋಣೆ ಪೂರ್ತಿ ಸ್ವಚ್ಛ ಮಾಡಿ, ಎಲ್ಲಾ ಗದ್ದೆ, ನಾಟಿ ಸಾಮಾನುಗಳನ್ನು ಬಚ್ಚಲ ಮೇಲೆ ಅಟ್ಟಕ್ಕೆ ಹಾಕಿ, ಅಲ್ಲಿ ಸುಧೀಗೊಂದು ಮಂಚ ಹಾಕಲು ಜಾಗ ಆಗಬೇಕು” ಎಂದೆ. ನನ್ನ ದನಿಯಲ್ಲಿದ್ದ ಅಪ್ಪಣೆ ಕೇಳಿ ಅವನಿಗೆ ಆಶ್ಚರ್ಯವಾಗಿರಬೇಕು. “ಅಲ್ಲ, ಅಮ್ಮ…”ಎಂದು ಏನೋ ಮಾತನಾಡಲು ಹೊರಟ.ತಡೆದು, “ ಆ ಮಹೇಶನ ತಮ್ಮ ಉಜಿರೆಯಲ್ಲಿ ಓದೋದಲ್ವಾ, ನಾಳೆ ಅವ್ನು ಕಾಲೇಜಿಗೆ ಹೋಗಿ ಬರುವಾಗ ಒಂದು ಬೆಡ್ ಪಾನ್ ತರೋಕೆ ಹೇಳು” ಎಂದು ಸ್ವಲ್ಪ ದನಿ ಎತ್ತರಿಸಿಯೇ ಹೇಳಿದೆ. “ಸರಿ ಬಾಬಣ್ಣ” ಎಂದ ಅವನು. 

ಕೊಟ್ಟಿಗೆಯಲ್ಲಿ ದನಗಳು ಮೆಲುಕು ಹಾಕುವ, ಅವುಗಳ ಕೊರಳಿನ ಘಂಟೆಯ ಸದ್ದು ಕೇಳುತ್ತಾ ಚಾವಡಿಯ ಮೆಟ್ಟಲ ಮೇಲೆ ಕೂತೆ. ದೊಡ್ಡ ತುಳಸಿಕಟ್ಟೆಯಲ್ಲಿ ದೀಪ ಗಾಳಿಗೆ ಓಲಾಡುತ್ತಾ ಉರಿಯುತ್ತಿತ್ತು. ಅದರ ಬೆಳಕಲ್ಲಿ ಕಟ್ಟೆಯ ಮೇಲೆ ಕೆತ್ತಿದ್ದ ಲಕ್ಷ್ಮಿ ಸುಂದರವಾಗಿ ಕಾಣುತ್ತಿದ್ದಳು. ದೂರದಲ್ಲಿ ಕಾಣುತ್ತಿದ್ದ ಬಾವಿಕಟ್ಟೆ, ಮಾವಿನ, ತೆಂಗಿನ, ಅಡಿಕೆ ಮರದ ಛಾಯೆಗಳು. ವರ್ಷಕ್ಕೆರಡು ಸರ್ತಿ ರಜೆಯಲ್ಲಿ ಇಲ್ಲಿಗೆ ಬಂದಾಗ ಆ ಬಾವಿಕಟ್ಟೆಯಲ್ಲಿ ಅಮ್ಮ ಬಟ್ಟೆ ಒಗೆಯುತ್ತಿದ್ದದ್ದು, ನಾನು, ಜಯ, ಸುಧೀ ಮೂರೂ ಜನ ಸುತ್ತ ಆಟವಾಡುತ್ತಾ ಅಮ್ಮನಿಗೆ ಉಪದ್ರ ಕೊಟ್ಟು ಬೈಸಿಕೊಳ್ಳುತ್ತಿದ್ದದ್ದು, ಪಕ್ಕದ ಹಳ್ಳದಲ್ಲಿ ಬೈರಾಸಿನಲ್ಲಿ ಮೀನು ಹಿಡಿಯುತ್ತಾ, ಗದ್ದೆ, ಗುಡ್ಡ, ತೋಟ, ನಾಗಬನ, ಕೆರೆದಂಡೆ, ಬೆಟ್ಟುಗದ್ದೆ ಸುತ್ತುತ್ತಿದ್ದದ್ದು ಎಲ್ಲವೂ ಕಣ್ಮುಂದೆ ಸಿನಿಮಾ ರೀಲಿನ ಥರಾ ಸಾಗಿ ಹೋಯ್ತು. ಜಯಾ ಅದೆಷ್ಟು ಚೆಂದವಿದ್ದಳು, ಎರಡು ಜಡೆ ಕಟ್ಟಿ ಕೆಂಪು ರಿಬ್ಬನ್ ಹಾಕಿ, ಹಣೆಗೆ ಲಾಲ್ ಗಂಧ ಇಟ್ಟರೆ ಮುದ್ದು ಮುದ್ದು ಬೊಂಬೆಯಂತೆ ಕಾಣುತ್ತಿದ್ದಳು. ಸುಧೀ ದೊಡ್ಡ ಜೀವ, ನಮ್ಮಿಬ್ರಿಗೂ ಅವನೇ ರಕ್ಷಕ, ಎಲ್ಲಾ ಕಿತಾಪತಿಗಳೂ ಅವನ ಸುಪರ್ದಿಯಲ್ಲೇ ನಡೆಯಬೇಕು. ತೆಂಗಿನ ಸೋಗೆಯಲ್ಲಿ ನಮ್ಮನ್ನು ಕೂರಿಸಿ ಎಳೆಯೋದೂ ಅವನೇ. ಗೇರು , ಕುಂಟಾಳ, ಮಾವಿನ ಹಣ್ಣು ಕೊಯ್ಯೋದೂ ಅವನೇ. ವಯಸ್ಸಿನಲ್ಲಿ ಜಯಾ ದೊಡ್ಡವಳು, ಆದರೆ ಸ್ವಲ್ಪ ಕಡ್ಡಿಯೇ, ಅವಳಿಗಿಂತ ಎರಡು ವರ್ಷಕ್ಕೆ ಚಿಕ್ಕವನಾದ‍ ನಾನೂ ಹಾಗೇ. ನನಗಿಂತ ಒಂದು ವರ್ಷ ಚಿಕ್ಕವನಾದ ಸುಧೀಗೆ ಮಾತ್ರ ಭೀಮಬಲ. ಒಂದ್ಸಲ ಅದು ಹೇಗೋ ಅವನಿಗೆ ಕೆಸುವಿನ ಎಲೆ ತಿನ್ನಿಸಿ ಅಳುವಂತೆ ಮಾಡಿದ್ದೆ ಅಲ್ಲಾ, ಆಮೇಲೆ ಅಮ್ಮ ಬೈದ್ರೆ ಜಯಾ ಬಂದು ತಾ ಮಾಡಿದ್ದೆಂದು ಸುಳ್ಳು ಹೇಳಿದರೂ ಮಾಧ್ವಿಯತ್ತೆ ದಡ್ಡನೇನೋ ನೀನು ಅಂತ ಸುಧೀಗೆ ಹೊಡೆದಿದ್ದು…ಎಲ್ಲಾ ನೆನಪುಗಳೂ ತಾ ಮುಂದು ತಾ ಮುಂದು ಅಂತ ಬರತೊಡಗಿದವು, ಆದರೀಗ? ಜಯಾ ಇಲ್ಲ, ಸುಧೀ ಅವಳೆಡೆಗೇ ಜಾರಿ ಹೋಗುತ್ತಿದ್ದಾನೆ, ಅತ್ತೆ ಅವರದ್ದೇ ಲೋಕದ್ದಲ್ಲಿದ್ದರೆ, ಮಾಮ ಇದ್ದೂ ಇಲ್ಲದ ಹಾಗೆ… ಅಯ್ಯೋ ಈ ಮನೆಯ ಅವಸ್ಥೆಯೇ ಅನಿಸಿ ಅರಿವಿಲ್ಲದೆಯೇ ನಿಟ್ಟುಸಿರು ಹೊರಬಿತ್ತು. 

ಅತ್ತೆ ಊಟಕ್ಕೆ ಕರೆದರು, ಅಷ್ಟು ದೊಡ್ಡ ಅಡುಗೆಮನೆಯಲ್ಲಿ ನಾವಿಬ್ಬರೇ, ಒಂದು ಕಾಲದಲ್ಲಿ ಯಾವಾಗಲೂ ತಿರುಗುತ್ತಿದ್ದ ದೊಡ್ಡ ಗ್ರೈಂಡರ್, ಎಲೆಯ ಸುತ್ತಮುತ್ತ ತಿರುಗುತ್ತಿದ್ದ ಚಾಮಿಯ ವಂಶದ ಕುಡಿಗಳು, ನಿಂಗೆ ದೊಡ್ಡ ಎಲೆ, ನಂಗೆ ಸಣ್ಣ ಎಲೆ ಎಂದು ಕೋಳಿ ಜಗಳವಾಡಿ ತಿನ್ನುತ್ತಿದ್ದ ಸುಧೀ, ಜಯಾ, ಹೆಚ್ಚು ಮಾತನಾಡದೇ ಸುಮ್ಮನೆ ದೊಡ್ಡ ದೊಡ್ಡ ತುತ್ತುಗಳನ್ನು ಇಳಿಸುತ್ತಿದ್ದ ಮಾಮ, ಅಡುಗೆಮನೆಯ ಹಿಂದಣ ಬಾಗಿಲಿನ ಹತ್ತಿರ ಬೆಳೆದಿದ್ದ ‍ಬಿಂಬುಳಿ ಮರ ಮತ್ತದರ ಸುತ್ತ ತಿರುಗುತ್ತಿದ್ದ ಗಿರಿರಾಜ ಕೋಳಿ ಎಲ್ಲಾ ಕಣ್ಮುಂದೆ ಸರಿದವು. ಅಯಾಚಿತವಾಗಿ ತಲೆ ಎತ್ತಿ ನೋಡಿದರೆ, ತೂಗುತ್ತಿದ್ದ ಬೆಣ್ಣೆ ಮಡಕೆಗಳು ಕಾಣಲಿಲ್ಲ. ನನ್ನನ್ನೇ ನೋಡುತ್ತಿದ್ದ ಅತ್ತೆ ಅರ್ಥವಾದಂತೆ ತಲೆಯಲುಗಿಸಿದರು. ಕಪ್ಪು ಹಿಡಿದಿದ್ದ ಗೋಡೆಗಳನ್ನು ಬೆಳಗುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ ಬಲ್ಬ್ ಮಂಕಾಗಿತ್ತು. ಅರ್ಧಕ್ಕರ್ಧ ಅಡುಗೆ ಮನೆ ಖಾಲಿ, ಒಂದು ಮೂಲೆಯಲ್ಲಿ ಪಾತ್ರೆ ಪಗಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರು ಅತ್ತೆ. ನಾನು ತಿನ್ನುವ ಶಬ್ದ ನನಗೇ ಕೇಳಲು ಅಸಹನೆಯೆನಿಸಿ “ಮಾಮ ಮತ್ತೆ ಸುಧೀಗೆ ಊಟ?” ಎಂದು ಕೇಳಿದೆ. “ಇಬ್ಬರದ್ದು ಆಯ್ತು” ಎಂದರು ಅತ್ತೆ. ಹೊಂಚು ಹಾಕಿದ್ದ ಮೌನ ಮತ್ತೆ ಎರಗಿತು. ಊಟ ಮುಗಿಸಿ ಅವಳು ಮುಗಿಸುವವರೆಗೆ ಕಾದು, “ನಾಳೆ ಓಬಯ್ಯನಿಗೆ ಹೇಳಿ ಸುಧೀ ಮಲಗಲು ಅಲ್ಲೊಂದು ಮಂಚ ಹಾಕಿಸಿ ಆ ಕೋಣೆ ಸ್ವಲ್ಪ ಖಾಲಿ ಮಾಡಿಸ್ತೀನಿ” ಎಂದು, ಅವಳ ಉತ್ತರದ ನೀರೀಕ್ಷೆಯಿಲ್ಲದೆ ಹೊರನಡೆದೆ. ಚಾವಡಿಯ ಎಡಭಾಗಕ್ಕಿದ್ದ ಕೋಣೆಯ ಒಳಗೆ ಆಗಲೇ‌ ಹಾಸಿಗೆ ಹಾಸಿತ್ತು. ಕೈಲಿ ಮೊಬೈಲ್ ಹಿಡಿದು ಕೂತೆ. ಮನೆಯ ವಿಷಾದ ತನ್ನಲ್ಲೂ ಇಳಿಯುತ್ತದೆಯೆನಿಸಿ ಜೋರಾಗಿ ತಲೆ ಕೊಡಹಿದೆ. ತಲೆದಿಂಬಿನ ಮೇಲೂ  ಕಸೂತಿಯ ಹೂವಿನ ಚಿತ್ತಾರಗಳು, ಅದನ್ನು ಕೈಲೊಮ್ಮೆ ಸವರಿದೆ. ಸರಿಯಾಗಿ ನೋಡಿದರೆ, ದಿಂಬು ಮಾತ್ರವಲ್ಲ, ಹೊದಿಕೆಗಳು, ಮಂದ್ರಿ, ಕರ್ಟನ್ ಎಲ್ಲದರ ಮೇಲೆಯೂ ಹೂವು, ಬಳ್ಳಿಗಳ ಚಿತ್ತಾರಗಳು. ಸುಧೀ ರೂಮಲ್ಲಿದ್ದವುಗಳ ಮೇಲೂ ಇದೇ ಚಿತ್ತಾರವಿತ್ತು, ಅರೇ! ಅತ್ತೆ ಸೀರೆ, ರವಕೆಯಲ್ಲೂ ಇದ್ದದ್ದು ಇವೇ ಚಿತ್ತಾರಗಳು ಎಂದು ನೆನಪಾಯ್ತು. ಬಟ್ಟೆ ಅಂತ ಕಾಣಿಸಿದ್ದರ ಮೇಲೆಲ್ಲಾ ಕಸೂತಿಯ ಚಿತ್ತಾರಗಳೇ ತುಂಬಿಕೊಂಡಿದ್ದವು. 

ಮೊಬೈಲಿನಲ್ಲಿ ಡೌನ್ಲೋಡ್ ಮಾಡಿಟ್ಟಿದ್ದ  ವಿಡಿಯೋಗಳನ್ನು ನೋಡುತ್ತಾ ಅದ್ಯಾವಾಗ ನಿದ್ದೆ ಹೋದೆನೋ ತಿಳಿಯಲಿಲ್ಲ, ಎಚ್ಚರಿಸಿದ್ದು ಒಂದು ವಿಚಿತ್ರ ಕನಸು. ತಲೆಯ ಬಳಿಯಿದ್ದ ಚೆಂಬಿನ ನೀರು ಕುಡಿದು ಸಾವರಿಸಿಕೊಂಡು ಕತ್ತಲೆಯನ್ನೇ ನೋಡುತ್ತಾ ಕೂತೆ. ಕನಸಲ್ಲಿ ಜಯಾ, ನಾನು, ಸುಧೀ ಇದೇ ಮನೆಯ ಅಂಗಳದಲ್ಲಿ ಕುಣಿಯುತ್ತಿದ್ದೇವೆ, ಇದ್ದಕ್ಕಿದ್ದ ಹಾಗೆ ಮಾಮ ಎಲ್ಲಿಂದಲೋ ಓಡಿ ಬಂದು ನನ್ನ ಬಿಟ್ಟು ಅವರಿಬ್ಬರನ್ನು ಹಿಡಿದು ತಬ್ಬುವ ಪ್ರಯತ್ನ ಮಾಡುತ್ತಿದ್ದರೆ, ಅತ್ತೆ ಇಬ್ಬರನ್ನೂ ತನ್ನ ಎಂಬ್ರಾಯ್ಡರಿ ರಿಂಗುಗಳ ಮಧ್ಯೆ ಬಂಧಿಸಿ ರೇಶಿಮೆಯ ‍ದಾರಗಳಿಂದ ಹೊಲೆಯುತ್ತಿದ್ದಾರೆ. ಬಿಡಿಸಲು ಹೋದ ನನ್ನನ್ನು ದೊಡ್ಡ ಕೆಂಪು ಕಣ್ಣುಗಳಿಂದ ದುರುಗಟ್ಟಿ ತೆಂಗಿನ ಮರದಷ್ಟು ದೊಡ್ಡ ಸೂಜಿಯಲ್ಲಿ ಚುಚ್ಚಲು ಬರುತ್ತಿದ್ದಾರೆ. ಮಾಮ ಕಿರುಚುತ್ತಾ ಅತ್ತೆಯನ್ನು ದೂಡಲು ಪ್ರಯತ್ನಿಸುತ್ತಿದ್ದಾರೆ, ಕೊನೆಗೆ ಅತ್ತೆ ಬೆಳೆದು ಹೆಮ್ಮರವಾಗಿದ್ದಾಳೆ. ಮಕ್ಕಳಿಬ್ಬರೂ ಕಸೂತಿಯ ಹೂವುಗಳಾಗಿ ಬದಲಾಗುತ್ತಾ ನೋವಿನಲ್ಲಿ ಕಿರುಚುತ್ತಿದ್ದಾರೆ. ‍ಅಬ್ಬಾ! ಎಂಥಾ ಕನಸು! ಭಯಕ್ಕೆ ಇಡೀ ಮೈ ಬೆವೆತು ಹೋಗಿತ್ತು. ಮೊಬೈಲ್ ಸ್ಕ್ರೀನ್ ಆನ್ ಮಾಡಿ ನೋಡಿದರೆ ನಾಲ್ಕೂವರೆ, ಇನ್ನು ನಿದ್ದೆ ಹತ್ತಿದ ಹಾಗೆ ಎಂದುಕೊಂಡು ಹೊರಬಂದು ಚಾವಡಿಯ ಕಡೆ ನಡೆದೆ. ಮಾಮನ ಮಣ ಮಣ ಕೇಳುತ್ತಲೇ ಇತ್ತು. ಮಾಧ್ವಿಯತ್ತೆ ಎಮರ್ಜನ್ಸಿ ಲ್ಯಾಂಪಿನ ಹತ್ತಿರಕ್ಕೆ ಕೂತು ದಾರವನ್ನು ಎಳೆಯುತ್ತಲೇ ಇದ್ದಳು.ಆಶ್ಚರ್ಯವಾಗಿ ಹತ್ತಿರ ಹೋಗಿ “ಅತ್ತೆ ನಿದ್ದೆನೇ ಮಾಡುದಿಲ್ವಾ ನೀನು?” ಕೇಳಿದೆ. ಒಮ್ಮೆಗೆ ಬೆಚ್ಚಿಬಿದ್ದು ನೋಡಿದಳು, ಅವಳ ಕಣ್ಣುಗಳಲ್ಲಿ  ಚೂರೂ ನಿದ್ದೆಯಿರಲಿಲ್ಲ. “ನೀನ್ಯಾಕೆ ಇಷ್ಟು ಬೇಗ ಎದ್ದೆ?, ನೀರು ಇಟ್ಟಿದ್ನಲ್ಲಾ, ಎಂಥ ಬೇಕಿತ್ತು?” ಎಂದು ಕೇಳಿದಳು. ಇವಾಗಷ್ಟೇ ಕನಸಲ್ಲಿ ರಾಕ್ಷಸಿಯಾಗಿದ್ದಳಲ್ಲ, ಹೇಗೆ ಹೀಗಾದಳು ಅನಿಸಿ ಕೂಡಲೇ ಇವಳ ಈ ಪ್ರೀತಿ, ಅಂತಃಕರಣ ಸುಧೀ ಮೇಲೆ, ಅದೂ ಅವನು ಈ ಸ್ಥಿತಿಯಲ್ಲಿದ್ದಾಗಲೂ ಹರಿದಿಲ್ಲವಲ್ಲಾ ಅನಿಸಿತು. ಇಲ್ಲ ಅಂತ ತಲೆಯಾಡಿಸಿ, ಅಲ್ಲೇ ಇದ್ದ ಈಸೀಚೇರಲ್ಲಿ ಮೈ ಚೆಲ್ಲಿದೆ. 


ಬಂದಾಗಿಂದ ಅಪ್ಪ ಅಮ್ಮನ ಬಗ್ಗೆ ಏನೂ ಕೇಳದವಳು, ಇದ್ದಕ್ಕಿದ ಹಾಗೆ, “ಅಣ್ಣ ನನ್ನ ನೆನಪಿಸ್ಕೊತಾನಾ? ಅತ್ತಿಗೆ ಯಾವತ್ತಾದ್ರೂ ಮಹೇಶನಿಗೆ ಫೋನ್ ಮಾಡಿ ಕೇಳ್ತಾಳಂತೆ” ಎಂದಳು. �“ಮೊಬೈಲಾದ್ರೂ ತೊಗೋ ಅತ್ತೆ, ಅಮ್ಮ, ಅಪ್ಪನ ಹತ್ತಿರ ಮಾತಾಡಬಹುದು, ಸುಧೀಗೂ ಟೈಮ್ ಪಾಸಾಗುತ್ತೆ” ಎಂದರೆ ಕೇಳದವಳಂತೆ ಸುತ್ತಣ ತಟ್ಟೆಗಳಲ್ಲಿ ಏನೋ ಹುಡುಕಲಾರಂಭಿಸಿದಳು. �ಸ್ವಲ್ಪ ಹೊತ್ತು ಬಿಟ್ಟು ಸ್ವಗತವೆಂಬಂತೆ “ಜಯಾ ಹೋದಾಗ ಅಣ್ಣ ಅತ್ತಿಗೆ ಬಂದಿದ್ದು, ನೀನೂ ಕಾಲೇಜು ಸೇರಿದ ಮೇಲೆ ಬಂದೇ ಇಲ್ಲ.” ಎಂದಳು. �ಅಷ್ಟರಲ್ಲಿ ಮಾಮ ಜೋರಾಗಿ “ಮಾಧ್ವೀ, ಎಲ್ಲೋದ್ಯೆ, ನನ್ನ ಬಿಟ್ಟು ತಿರುಗಲು ಹೋಗ್ತಾಳೆ, ಯಾರೊಟ್ಟಿಗೆ ಸುತ್ತಿ ಹಾಳಾಗಿದ್ಯೇ? ಅಯ್ಯೋ ಬಾರೆ ಇಲ್ಲಿ, ನಂಗೇನೋ ಆಗ್ತಿದೆ” ಎಂದು ಬೊಬ್ಬೆ ಹಾಕಿದರು. �ನಂಗೆ ಗಾಭರಿಯಾಗಿ ಏಳಲು ಹೊರಟರೆ, “ಸುಮ್ನಿರು ಬಾಬು, ಆ ಮನುಷ್ಯನದ್ದು ಇದ್ದಿದ್ದೇ, ನಾ ಹದಿನೆಂಟು ವರ್ಷದವಳಿದ್ದಾಗ್ಲೇ ಓಡಿ ಹೋಗಲಿಲ್ಲ, ಇವಾಗೆಲ್ಲಿ ಹೋಗ್ಲಿ?” ಎಂದವಳು ಮಾಮನ್ನುದ್ದೇಶಿಸಿ, “ಒಂದ್ಸಲ ಸುಮ್ನಿರಕ್ಕಾಗ್ದಾ? ಇಲ್ಲೇ ಇದ್ದೇನೆ, ಹೊರಕಡೆ ಹೋಗೋ ಟೈಮಾಗಿಲ್ಲ, ಬಿದ್ಕೊಳ್ಳಿ ” ಎಂದು ದಪ್ಪ ಸ್ವರದಲ್ಲಿ ಆದೇಶಿಸಿದಳು.  �“ರಕ್ತನೇ ಸರಿಯಿಲ್ಲ, ಮನುಷ್ಯ ಹೇಗೆ ಸರಿಯಿರೋದು?, ಇವನಮ್ಮ, ಆ ತಾಟಗಿತ್ತಿ ಬದುಕಿರೋವರೆಗೂ ನನ್ನ ಹುರಿದು ಮುಕ್ಕಿದಳು, ಈ ಮನುಷ್ಯ ಜೀವಂತ ಹೆಣ ಮಾಡಿದ, ಇನ್ನೇನು ಉಳೀತು, ಹಾಗೇ ಆಗಬೇಕು, ಅಲ್ಲಾದ್ರೂ ಆರಾಮಾಗಿರ್ಲಿ. ಅದೊಂದು ಪಾಪದ ಕೂಸು, ಲಗಾಡಿ ತೆಗೆದ್ರು ಎಲ್ರೂ ಸೇರಿಕೊಂಡು.” ಎಂದು ಪಿತ್ತ ನೆತ್ತಿಗೇರಿದವಳಂತೆ ಬಡಬಡಿಸಿದಳು. �“ಅತ್ತೆ, ಸುಮ್ನಿರು” ಎಂದು ಪದೇ ಪದೇ ಹೇಳಿದ ಮೇಲೆ ತೆಪ್ಪಗಾದಳು. �

ಆ ದಿನವನ್ನಾದರೂ ಹೇಗೆ ಮರೆಯೋದು? ಆಫೀಸಿನಿಂದ ನೇರ ಸ್ಕೂಲಿಗೆ ಬಂದು ಅಪ್ಪ ನನ್ನನ್ನು ಕರ್ಕೊಂಡು ಸೀದಾ ಮನೆಗೆ ಹೋಗಿ ಅಮ್ಮನನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದರು. ಮೊದಲು ಏನೂ ಅರ್ಥವಾಗದ ಅಮ್ಮ ‘ಏನು ಅಂತ ಹೇಳಿದ್ರೆ ಮಾತ್ರ ಹೊರಡ್ತೀನಿ’ ರಚ್ಚೆ ಹಿಡಿದು ಕೂತಿದ್ದಳು. �ಅಪ್ಪ “ಬಾಬು, ಇಲ್ಲೇ ಇದ್ದಾನೆ ಅಮೇಲೆ ಹೇಳ್ತೀನಿ ಗಿರ್ಜಾ” ಎಂದರೂ ಅವಳು ಕೇಳದೇ ಕೂತಿದ್ದು… ಕೊನೆಗೆ ತಡೆಯಲಾಗದೇ “ಆ ಪ್ರಾಣಿ ಮಗು ಜೀವ ತೆಗೆದೇ ಬಿಡ್ತೇ” ಎಂದು ಕಿರುಚಿದ್ದೂ, ಅಮ್ಮನಿಗೆ ಅರ್ಥವಾಗದಾಗ, “ಭಾವ ಮತ್ತೆ ಅವರಮ್ಮ ಸೇರಿ ಆ ಜಯಾನ ಕೊಂದುಬಿಟ್ರೇ…” ಎಂದಿದ್ದರು. ಅಮ್ಮ ಕುಸಿದು ಕೂತವಳು ಅದೆಷ್ಟೋ ಹೊತ್ತು ಮಾತೇ ಆಡಲಿಲ್ಲ. �ಏನೂ ತೋಚದೇ, ಅರ್ಥವಾಗದೇ ಕೂತ ನನ್ನನ್ನು ಅಪ್ಪ “ಹೊರಡು ಬಾಬು, ನಿನ್ನ ಬಟ್ಟೆ ಬ್ಯಾಗಲ್ಲಿ ಹಾಕ್ಕೋ” ಎಂದಿದ್ದರು. ‍ಜಯಾ ಸತ್ತು ಹೋದ್ಲು ಅಂದ್ರೆ ಏನು? ಎಲ್ಲಿಗೆ ಹೋಗ್ತಾಳೆ ಅವಳು? ಸುಧೀ ಏನು ಮಾಡ್ತಾನೆ ಇನ್ನು?ಮಾಧ್ವಿಯತ್ತೆ ಏನು ಮಾಡ್ತಾಳೆ…ತಲೆ ತುಂಬಾ ಪ್ರಶ್ನೆಗಳಿದ್ದವು ಆ ದಿನ‍. ಅತ್ತೆಯೂರು ಮುಟ್ಟಿದಾಗ ಅತ್ತೆ ಅಕ್ಷರಶಃ ಹುಚ್ಚಿಯಾಗಿದ್ದಳು. ಅಮ್ಮ ಹೋಗಿ ಅಪ್ಪಿಕೊಂಡರೂ ಒಂದೂ ಹನಿ ಕಣ್ಣೀರು ಹಾಕದವಳು, ಜಯಾಳನ್ನು ಅಂತಿಮ ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಮಾತ್ರ ಮಾಮನಿಗೆ ಮುಟ್ಟಲು ಬಿಡದೇ, ಹುಲಿಯಂತೆ ಅಬ್ಬರಿಸಿ ಹಾರಾಡಿದ್ದಳು. ಕೊನೆಗೆ ಅಪ್ಪನೇ ಬೆಂಕಿಕೊಟ್ಟಿದ್ದರು. ಜಯಾ ಮುಖ ಅಚ್ಚಳಿಯದೇ ನನ್ನ ಎದೆಯಲ್ಲಿ ಉಳಿದುಬಿಟ್ಟಿತ್ತು. ಮೈ ಹೊಡೆದೇಟುಗಳಿಂದ ನೀಲಿಗಟ್ಟಿ ಹೋಗಿತ್ತು, ಅಷ್ಟು ಸಣ್ಣವನಾದ ನನಗೂ ಜಯಾ ಮಾಯದ ನೋವಾಗಿ ಉಳಿದಿರಬೇಕಾದರೆ ಅತ್ತೆ ಅದು ಹೇಗೆ ತಡೆದುಕೊಂಡಿರಬೇಕು. �ಅಮ್ಮ ಅಪ್ಪನೊಂದಿಗೆ ಜಗಳವಾದಾಗೆಲ್ಲಾ ಅತ್ತೆ ಬಗ್ಗೆ ಬೈಯುತ್ತಾಳೆ. “ಹೇಡಿ ನೀವು, ಯಾರೋ ಅಯೋಗ್ಯರು ಬರೆದ ಹೆಸರಿಲ್ಲದ ಪತ್ರಗಳು ಬಂದ ಕೂಡಲೇ, ಓದು ನಿಲ್ಲಿಸಿ ಆ ರಾಕ್ಷಸನಿಗೆ ನಿಮ್ಮ ತಂಗಿಯನ್ನು ಕಟ್ಟಿ ಅವಳ ಜೀವನ ಬಲಿ ತೊಗೊಂಡ್ರಿ, ಅದ್ರ ಹೊಟ್ಟೆಯಲ್ಲಿ ಹುಟ್ಟಿದವಕ್ಕೂ ಗ್ರಹಚಾರ ತಪ್ಪಿಲ್ಲ” ಎನ್ನುತ್ತಾ ಸಂಕಟಪಟ್ಟು ಅಳುತ್ತಾಳೆ. �ಅಪ್ಪ ಸುಮ್ಮನೇ ಹೊರಹೋಗುತ್ತಾರೆ. 

ಅಮ್ಮ ಹೇಳಿದ ಮೇಲೆ ತಿಳಿದಿದ್ದು ಇಷ್ಟು, ತುಂಬಾ ಚೆಂದದ ಮಾಧ್ವಿಯತ್ತೆ ಕಾಲೇಜು ಮೆಟ್ಟಿಲು ಹತ್ತಿದ್ದೇ ತಡ ಮನೆಗೆ ಪತ್ರಗಳು ಬರಲಾರಂಭಿಸಿದ್ದವು. ಹಾಸಿಗೆ ಹಿಡಿದಿದ್ದ ಅಜ್ಜ ಅಜ್ಜಿಯದ್ದು ಒಂದೇ ವರಾತ, ಅವಳಿಗೆ ಮದ್ವೆ ಮಾಡಿಬಿಡು ಅಂತ. ಕೊನೆಗೆ ಸುಮಾರು ೨೦ ವರ್ಷ ದೊಡ್ಡವರಾಗಿದ್ದ ಮಾವನಿಗೆ ಅತ್ತೆಯನ್ನು ಮದುವೆ ಮಾಡಿಕೊಟ್ಟಿದ್ದರು ಅಪ್ಪ. ಒಂಚೂರು ಓದು, ನಯನಾಜೂಕಿನ ಗಂಧ ಗಾಳಿಯಿಲ್ಲದ ಗಂಡ, ಮಾತು ಮಾತಿಗೂ ಹುರಿದು ಮುಕ್ಕುತ್ತಿದ್ದ ಅತ್ತೆಯೊಡನೆ ಮೂಕಪಶುವಿನಂತೆ ಜೀವನ ಸಾಗಿಸುತ್ತಿದ್ದ ಮಾಧವಿ ಜಯಾ ಹುಟ್ಟಿದ ಮೇಲೆ ಬದುಕೋ ಪ್ರಯತ್ನ ಒಂದಿಷ್ಟು ಮಾಡಲಾರಂಭಿಸಿದ್ದಳು. ‍ಆದರೆ ಅವಳತ್ತೆ ಮತ್ತು ಗಂಡನಿಗೆ ಅದೂ ಸಮ್ಮತವಿರಲಿಲ್ಲ, ಹೆಣ್ಣು ಮಗುವೆಂದು ಅದನ್ನೂ, ಹೆತ್ತ ಅವಳನ್ನೂ ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೂ ಬೈಗುಳಗಳಲ್ಲೇ ಮುಳುಗೇಳಿಸುತ್ತಿದ್ದರು. ನಂತರ ಹುಟ್ಟಿದ ಸುಧೀ ಜಯಾಳಿಗಿಂತ ಸ್ವಲ್ಪ ಅದೃಷ್ಟವಂತನಾದರೂ ಏಟುಗಳು ಇಬ್ಬರಿಗೂ ಸಮನಾಗಿ ಬೀಳುತ್ತಿದ್ದವು. ಅಮ್ಮ ಇಲ್ಲಿಗೆ ಬಂದಾಗೆಲ್ಲಾ ಆ ಅಜ್ಜಿಗೆ, ಮಾವನಿಗೆ ಸೂಕ್ಷ್ಮವಾಗಿ ಏನಾದರೂ ಹೇಳುವ ಪ್ರಯತ್ನ ಮಾಡುತ್ತಿದ್ದದ್ದು ಇನ್ನೂ ನೆನಪಿದೆ. ಆದರೆ ಅದರಿಂದ ಪರಿಸ್ಥಿತಿ ಇನ್ನೂ ಕೆಡುತ್ತಿತ್ತು ಎಂದು ಅಮ್ಮ ಸುಮ್ಮಗಾಗುತ್ತಿದ್ದಳು. 

ಆ ಅಜ್ಜಿಯ ಹತ್ತಿರವಿದ್ದ ಬೆಳ್ಳಿಯ ಎಲೆಯಡಿಕೆಯ ಸಂಚಿಯನ್ನು ತರುವಾಗ ಎತ್ತಿ ಹಾಕಿ ನಜ್ಜುಗುಜ್ಜು ಮಾಡಿದ್ದಾಳೆಂಬುದು ಒಂದು ನೆಪ, ಅದೆಷ್ಟು ಹೊಡೆದರೋ, ಎಲ್ಲಿಗೆ ಏಟು ಬಿತ್ತೋ ಪುಟ್ಟ ಜಯಾ ಉಸಿರಿಲ್ಲದೇ ಮಲಗಿದ್ದಳು. ಕೆರೆಗೆ ಜಾರಿಬಿದ್ದಳು ಅಂದೇನೋ ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರು ಮಾಮ.  ಸುಧೀ ಮಂಕಾಗಿ ಕೂತಿದ್ದ, ಅವನ ಹತ್ತಿರ ಏನು ಮಾತಾಡಬೇಕು ಗೊತ್ತಿಲ್ಲದೇ ನಾನೂ ಸುಮ್ಮನೇ‌ ಕೂತಿದ್ದೆ. ಇಲ್ಲಿದ್ದ ಒಂದು ವಾರದಲ್ಲಿ ಅತ್ತೆ ಸುಧೀಯ ಬಳಿ ಒಂದೂ ಮಾತನಾಡಿರಲಿಲ್ಲ ಎಂದು ಮೊದಲು ಗಮನಿಸಿದ್ದು ಅಮ್ಮ, ಸುಧೀಯನ್ನು ಕರೆದುಕೊಂಡು ಬಂದು ಊಟ ಮಾಡಿಸು, ಮಲಗಿಸು ಎಂದು ಹೇಳಿದಾಗೆಲ್ಲಾ ಅತ್ತೆ ಕಿವುಡಾಗಿದ್ದಳು. ಪುಟ್ಟ ಸುಧೀ ಆ ಕಡೆ ತಾಯಿಯೂ ಇಲ್ಲದೇ, ಸದಾ ಬೆನ್ನಿಗಿದ್ದ ಅಕ್ಕನೂ ಇಲ್ಲದೇ ಕಂಗಾಲಾಗಿದ್ದ. �ಹೊರಡುವ ದಿನ “ಮಾಧ್ವಿ, ಇನ್ನೊಂದು ಮಗುವಿದೆ ನಿಂಗೆ, ಸ್ವಲ್ಪ ಗಟ್ಟಿಯಾಗು, ಅದಕ್ಕಾಗಿಯಾದರೂ ಬದುಕಬೇಕಲ್ವೇ” ಎಂದಾಗಲೂ ಅತ್ತೆ ತುಟಿ ಬಿಚ್ಚಿರಲೇ ಇಲ್ಲ. �ಕೊನೆಗೆ ಅಮ್ಮ ಅವನನ್ನು ಕರ್ಕೊಂಡು ಬಂದು ಒಂದಿಷ್ಟು ತಿಂಗಳು ನಮ್ಮೊಟ್ಟಿಗೇ ಇಟ್ಟುಕೊಂಡಿದ್ದೂ ಆಗಿತ್ತು. ವಾಪಾಸು ಬಿಡಲು ಬಂದದ್ದು ಆ ಅಜ್ಜಿ  ತೀರಿಕೊಂಡಾಗ. ಅಷ್ಟು ನರಕಯಾತನೆ ಕೊಟ್ಟ ಮುದುಕಿ ಅದೆಷ್ಟು ಆರಾಮಾಗಿ ಸತ್ತು ಹೋದಳು ಎಂದು ಗದ್ದೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ಹೇಳುತ್ತಿದ್ದದ್ದೂ ನೆನಪಿದೆ.  ಆಮೇಲೆ ಅಪ್ಪ ಬಂದೇ ಇಲ್ಲ ಇಲ್ಲಿಗೆ, ಅಮ್ಮ ಮಾತ್ರ ನನ್ನ ಕಟ್ಟಿಕೊಂಡು ಆಗಾಗ ಬರುತ್ತಿದ್ದಳು. ಜಯಾ ಹೋದ ಮೇಲೆ, ಮಾಧ್ವಿಯತ್ತೆ ಮೊದಲಿನ ಹಾಗೆ ಆಗಲೇ ಇಲ್ಲ, ಸುಧೀ ಈ ಕಡೆ ತಂದೆ-ತಾಯಿ ಇದ್ದೂ ಅನಾಥನೇ‌ ಆಗಿ ಹೋದ. ಗೊತ್ತಿದ್ದೋ ಗೊತ್ತಿಲ್ಲದೆಯೇ ಅತ್ತೆ ಎರಡೂ ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡಳೇನೋ ಎಂದು ಅಮ್ಮ ಹೇಳುತ್ತಿದ್ದಳು. ಅವನಿಗೆ ನಾವು ಮೂವರೇ ಪ್ರಪಂಚದಲ್ಲಿದ್ದ ಬಂಧುಗಳು. ಅದೆಷ್ಟೋ ಸಲ ಈ ಮನುಷ್ಯನನ್ನು ಬಿಟ್ಟು ಬಾ ಅಂತಲೋ, ಈ ಮಗುವನ್ನು ನನಗಾದರೋ ಕೊಟ್ಟುಬಿಡು ಅಂತಲೋ ಅಮ್ಮ ಜಗಳವಾಡಿದ್ದೂ ಇದೆ. ಅದ್ಯಾವುದೂ ಅತ್ತೆ ಮಾಡಲಿಲ್ಲ. ಜಯಾ ಹೋದ ಮೇಲೆ ಅತ್ತೆ ಮನೆ ಬಿಟ್ಟು ಎಲ್ಲಿಗೂ ಹೋಗದೆ ಸ್ವಯಂ ಗೃಹಬಂಧನ ಶಿಕ್ಷೆ ಕೊಟ್ಟುಕೊಂಡಿದ್ದಳು.  ಎಷ್ಟೇ ಬೈದುಕೊಂಡಾದರೂ ಅಮ್ಮ ನನ್ನನ್ನು ಕರ್ಕೊಂಡು ಬರುವುದನ್ನು ಬಿಡಲಿಲ್ಲ, ಪ್ರತೀಸಲ ಸುಧೀಗೆ ಇಷ್ಟವಾಗುವ ಎಲ್ಲವನ್ನೂ ಹೊತ್ತು ತರುತ್ತಿದ್ದಳು.  

 ಕಾಲೇಜಿನ ಮೆಟ್ಟಲು ಹತ್ತಿ ಎರಡು ವರ್ಷವಾಗುವಷ್ಟರಲ್ಲಿ ಸುಧೀಗೆ ಕ್ಯಾನ್ಸರ್ ಅಂತೆ ಅಂತ ಅಮ್ಮ ಹೇಳಿದಾಗ ಹುಚ್ಚು ಹಿಡಿದಂತಾಗಿತ್ತು. ಮಹೇಶನೊಟ್ಟಿಗೆ ಅವನೇ ಜಿಲ್ಲಾಸ್ಪತ್ರೆಗೆ ಹೋಗಿ ಬಂದಿದ್ದನಂತೆ, ಏನೂ ಮಾಡಲಾಗಲ್ಲ ಅಂತ ವೈದ್ಯರೂ ಕೈ ಚೆಲ್ಲಿದ್ದರಂತೆ. ಜಯಾ ಮಾಯದ ಗಾಯವಾಗಿ ಉಳಿದು ಹೋಗಿದ್ದಳು, ಈವಾಗ ಮತ್ತೊಂದು ಗಾಯ ಮಾಡಿಕೊಳ್ಳಲು ಹೆದರಿ ಸ್ನೇಹಿತರು, ಕಾಲೇಜು, ಗೇಮು, ಮೊಬೈಲ್ ಅಂತೆಲ್ಲಾ ಮುಳುಗಿ ನನ್ನ ಪ್ರಪಂಚವನ್ನು ಕಿರಿದುಗೊಳಿಸಿಕೊಂಡಿದ್ದೆ. ಇಲ್ಲಿಗೆ ಬರಬೇಕು ಅನಿಸಿರಲಿಲ್ಲ. ಅಮ್ಮ ಅದೆಷ್ಟು ಸಲ ಗೋಗೆರೆದಿದ್ದಳು, ಹೋಗಿ ನೋಡಿ ಬರೋಣ ಬಾರೋ ಅಂತ, ಉಹೂಂ, ಧೈರ್ಯವಾಗುತ್ತಿರಲಿಲ್ಲ. ಈವಾಗ ಹಂಗಾಮಿ ಶಿಕ್ಷಕನಾಗಿ ಓದಿದ ಕಾಲೇಜಿನಲ್ಲೇ ಕೆಲಸಕ್ಕೆ ಸೇರಿಕೊಂಡು, ಕಂಡ ಕಂಡ ವಿದ್ಯಾರ್ಥಿಗಳ ಮುಖದಲ್ಲೆಲ್ಲಾ ಸುಧೀ, ಜಯಾರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದೆ. ಮಾಧ್ವಿಯತ್ತೆಯ ನೆನಪೂ ಸದಾ ಬರುತ್ತಿತ್ತು. ‍ಕನಿಷ್ಠ ಆರು ಕುಟುಂಬಗಳಿಗೆ ಹಂಚುವಷ್ಟು ನೋವನ್ನು ಮಾಧ್ವಿಯತ್ತೆ ಒಬ್ಬಳಿಗೇ ದೇವರು ಸುರಿದಿದ್ದಾನೆ ಎಂದು ಅಮ್ಮ ಅಲವತ್ತುಕೊಳ್ಳುತ್ತಿದ್ದದ್ದು ನಿಜ ಅನಿಸುತ್ತಿತ್ತು. ಅವಳ ಮೇಲೆ ಯಾಕಿಷ್ಟು ದ್ವೇಷ ವಿಧಿಗೆ? ಅವಳೋ ಆ ವಿಧಿಯ ಮೇಲೆಯೇ ಯುದ್ಧ ಸಾರುತ್ತಾ  ಬದುಕುವ ಸೋಗು ಹಾಕುತ್ತಿದ್ದಾಳೆ. ತನ್ನದು ಅಂತ ಉಳಿದ ಒಂದು ಜೀವವನ್ನೂ ಅಪ್ಪಿಕೊಂಡು ಹೇಗೋ ಬದುಕಬಹುದಿತ್ತು. ಅದೂ ಮಾಡ್ತಿಲ್ಲ.  ಅಮ್ಮನಿಗೆ ಹೃದಯ ಶಸ್ತ್ರಚಿಕಿತ್ಸೆಯಾದಾಗ ಅವಳು ಕೇಳಿದ್ದು ಒಂದೇ. �“ ನಿಮ್ಮಪ್ಪ ಹೇಡಿ ಬಾಬು, ಅವಳನ್ನು, ಆ ಹುಡುಗನನ್ನ ಎದುರಿಸೋ ಧೈರ್ಯ ಅವರಿಗಿಲ್ಲ, ನೀನಾದ್ರೂ ಸುಧೀನ ಇಲ್ಲಿಗೆ ಕರ್ಕೊಂಡು ಬಾರೋ, ಅವಳು ಮರಗಟ್ಟಿ ಜೀವನ ಲಗಾಡಿ ತೆಗೆದುಕೊಂಡಳು, ಅವನನ್ನ ಇಲ್ಲಿ ಹಾಸ್ಪಿಟಲ್ಲಾಗಾದ್ರೂ ತೋರಿಸೋಣ” ಅಂತ. �ಅಪ್ಪನ, ಅತ್ತೆಯ ಮರಗಟ್ಟುವಿಕೆ ಕಾಯಿಲೆ ನಂಗೂ ಹರಡಿತ್ತು.   

ಅಮ್ಮನಿಗೆ ಸ್ವಲ್ಪ ಆರಾಮಾದ ಮೇಲೆ ಕೊಟ್ಟ ಮಾತಿನಂತೆ ಹೊರಟಾಗ ಆಕೆಗೆ ಅದೆಷ್ಟು ಖುಷಿಯಾಗಿತ್ತು. ಅಪ್ಪನೂ ಥ್ಯಾಂಕ್ಸ್ ಅಂತ ಕಣ್ಣಲ್ಲೇ ಹೇಳಿದಂತೆ ಅನಿಸಿತ್ತಲ್ಲಾ? ಕೂತಲ್ಲೇ ಜೋಂಪು ಹತ್ತಿದಂತಾಯ್ತು. ಎಚ್ಚರವಾದಾಗ ಬೆಳಕು ಹರಿದಿತ್ತು. ಎಮರ್ಜೆನ್ಸಿ ಲ್ಯಾಂಪ್ ಈಗ ಉರಿಯುತ್ತಿರಲಿಲ್ಲ, ಅತ್ತೆ ಕಾಣಲಿಲ್ಲ, ಅಡುಗೆ ಮನೆಯಲ್ಲಿರಬೇಕು. ಬಚ್ಚಲ ಹತ್ತಿರ ಓಬಯ್ಯನ ಸ್ವರ ಕೇಳಿತು. ಸುಧೀಗೆ ಬೆಳಗ್ಗಿನ ಕೆಲ್ಸಕ್ಕೆ ಸಹಾಯ ಮಾಡಲು ಬಂದಿರಬೇಕು ಅನಿಸಿತು. ಬಾಣಂತಿ ಕೋಣೆಯಲ್ಲಿದ್ದ ಎಲ್ಲವನ್ನೂ ಕ್ಲೀನ್ ಮಾಡಿಸಿ ಮಂಚ ಹಾಕಿಸಿ, ಪಕ್ಕದಲ್ಲೊಂದು ಮೇಜು, ಸಣ್ಣ ಕಪಾಟು ಎಲ್ಲವನ್ನೂ ಇಡಿಸಿದೆ. ನಾನೇ ಕೂತು ಅವನ, ಗಡ್ಡ, ಕೂದಲು ಕತ್ತರಿಸಿ ಅವನನ್ನು ಸ್ವಲ್ಪ ನೋಡುವ ಹಾಗೆ ಮಾಡಿದೆ. ಮಹೇಶನ ತಮ್ಮ ತಂದ ಬೆಡ್ ಪಾನ್ ಬಳಸಲು ಹೇಳಿ ಕೊಟ್ಟೆ. ಅವನ ಮುಖದಲ್ಲೊಂದು ಕಿರುನಗು. “ಮುಂದಿನ ತಿಂಗಳು ಬರುವಾಗ ಇನ್ನಷ್ಟು ಪುಸ್ತಕ ತನ್ನಿ ಬಾಬಣ್ಣ” ಅಂದ. “ಹೂಂ, ನಾಳೆ ಬೆಳಗ್ಗೆ ಹೊರಡ್ತೀನಿ, ಮುಂದಿನ ಹದಿನೈದು ದಿನದಲ್ಲಿ ಬರ್ತೀನೋ, ಅಲ್ಲಿಯವರೆಗೆ ಸಾಕಲ್ಲ ಇಷ್ಟು? ಆಮೇಲೆ ನಮ್ಮನೆಗೆ ಹೋಗೋಣ ಆಗ್ದಾ?, ಅಲ್ಲಿ ಇಡೀ ಲೈಬ್ರೆರಿ ನಿಂದೇ ”ಅಂದೆ. ಅವನು ಖುಷಿಯಲ್ಲಿ ಚಿಕ್ಕ ಮಗುವಿನಂತೆ ನಕ್ಕ. 

ಮರುದಿನ ಬೆಳಗ್ಗೆ ಬೇಗ ಎದ್ದು ಹೊರಟು ಅತ್ತೆ ಕಾಲಿಗೆ ಬಿದ್ದಾಗ ತಲೆಸವರಿದಳು, �“ಅತ್ತೆ, ಸುಧೀ ಕಡೆ ಸ್ವಲ್ಪ ಗಮನ ಕೊಡು ಈವಾಗಾದ್ರೂ, ಎಷ್ಟು ದಿನ ಇರುತ್ತಾನೋ ಖುಷಿಯಲ್ಲಿರಲಿ” ಅಂದೆ. �ಏನೂ ಉತ್ತರಿಸದೆ, ಕೈಗೆ ಒಂದು ಬಟ್ಟೆಯ ಚೀಲ ಕೊಟ್ಟಳು, ತೆಗೆದು ನೋಡಿದರೆ ಕಸೂತಿಯ ಹೂವಿನ ಚಿತ್ತಾರಗಳ ಅಂಚಿರುವ ಒಂದು ಡಬಲ್ ಬೆಡ್ ಶೀಟ್ ಮತ್ತು ತಲೆದಿಂಬಿನ ಕವರುಗಳ ಸೆಟ್. ಅವಳ ಮುಖ ನೋಡಿದರೆ  ವಿಚಿತ್ರವಾಗಿ ನಕ್ಕಳು. �“ಚೆಂದ ಉಂಟು, ಥ್ಯಾಂಕ್ಸ್ ಅತ್ತೆ” ಎಂದು ನಡುಮನೆಗೆ ಕಡೆ ತಿರುಗಿ �“ಮಾಮ ಹೊರಡ್ತೀನಿ” ಎಂದು ಗಟ್ಟಿಯಾಗಿ ಹೇಳಿದರೆ, ಸಿಕ್ಕಿದ್ದು ರಾಮ ನಾಮ ಪಾಯಸಕ್ಕೆ ಹಾಡು. ಮೆಲ್ಲಗೆ ಸುಧೀ ಕೋಣೆಗೆ ಇಣುಕಿ ಹಾಕಿದರೆ, ಸ್ವಚ್ಛವಾದ ಕೋಣೆಯಲ್ಲಿ ಹೂವಿನ ಚಿತ್ತಾರದ ಮಧ್ಯೆ ನೀಟಾಗಿ ಮಲಗಿದ್ದ. ಹತ್ತಿರ ಹೋಗಿ ಕೈ ಸವರಿ ಹೊರಟೆ, ಮುಂದಿನ ಸರ್ತಿ ನೋಡ್ತೀನೋ ಇಲ್ವೋ ಅನಿಸಿ ಗಂಟಲುಬ್ಬಿ ಬಂತು. ಮೇಲಿನವರೆಗೆ ನಡೆದು ಬರುತ್ತಿದ್ದಂತೆ ಪಕ್ಕದಲ್ಲೇ ಜಯಾ ಉದ್ದ ಲಂಗ ತೊಟ್ಟು ಕೆಂಪು ಕೇಪುಳ ಹೂವಿನ ಗೊಂಚಲು ತಿರುಗಿಸುತ್ತಾ ಬಂದಂತೆ ಅನಿಸಿತು. ನಿಂತು ತಿರುಗಿ ನೋಡಿದರೆ, ಗದ್ದೆಯಲ್ಲಿ ಅ‍ವಳೂ, ಸುಧೀಯೂ ಒಬ್ಬರ ಹಿಂದೆ ಒಬ್ಬರು ಓಡುತ್ತಿದ್ದಂತೆ ಅನಿಸಿತು. ಇಬ್ಬರ ಮೈಮೇಲೂ ಹೂವಿನ ಚಿತ್ತಾರವಿರುವ ಅಂಗಿಗಳು, ತಲೆ ಕೊಡಹಿ ನಡೆದೆ. ‍ಬಸ್ಸು ನಿಲ್ಲುವ ತಾಣಕ್ಕೆ ಬಂದರೆ, ಮಹೇಶ ಅಲ್ಲಿಗೆ ಬಂದು ಕಾಯುತ್ತಾ ನಿಂತಿದ್ದ. �“ಬಾಬಣ್ಣ, ಸುಧೀಯಣ್ಣನಿಗಾದ್ರೂ ಬರ್ತಾ ಇರಿ” ಅಂದ. ಹೂಂ ಅಂದೆ. 

ಮಂಗಳೂರಿಗೆ ಡೈರೆಕ್ಟ್ ಬಸ್ ಬರಲೇ ಇಲ್ಲ, ಸರಿ ಬೆಳ್ತಂಗಡಿಗೆ ಹೋಗಿ ಅಲ್ಲಿಂದ ಎಕ್ಸ್ಪ್ರೆಸ್ ಹಿಡಿದರಾಯ್ತು ಅಂತ ಸಿಕ್ಕಿದ ಶಟಲ್ ಬಸ್ಸಿಗೆ ಹತ್ತಿ ಕೂತೆ. ಭಾವಗಳು, ನೆನಪುಗಳು ಪದೇ ‍ಪದೇ ಧಾಳಿಯಿಡುತ್ತಿದ್ದವು. ಮರಗಟ್ಟಿದ ಮನಸ್ಸು ಕರಗುತ್ತಿದ್ದಂತೆ ಭಾಸವಾಗುತ್ತಿತ್ತು. ಕಣ್ಣು ಮುಚ್ಚಿ ಕೂತೆ. ಬೆಳ್ತಂಗಡಿಯಲ್ಲಿಳಿದು ಎಕ್ಸ್ಪ್ರೆಸ್ ಬಸ್ಸು ಹತ್ತಿ ಟಿಕೇಟು ತೊಗೊಂಡು ಮೂರು ನಾಲ್ಕು ನಿಮಿಷಗಳಾಗಿರಬೇಕು. ಪಾಕೇಟಿನಲ್ಲಿದ್ದ ಮೊಬೈಲ್ ರಿಂಗಾಯ್ತು. ತೆಗೆದು ನೋಡಿದರೆ, ಮಹೇಶನ ನಂಬರ್. ಕೈ ನಡುಗಲಾರಂಭಿಸಿತು.


(ವಿಸ್ತಾರ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದೆ.)

Monday, June 27, 2022

Secret life of our pets

 ಎರಡು ಸಾವಿರ ಅಡಿ ಎತ್ತರದಿಂದ ತನ್ನ ಸಾಕುತಂದೆಯೊಡನೆ ಪಾರಾಗ್ಲೈಡಿಂಗ್ ಮಾಡೋ ನಾಯಿ, ಹದಿನೈದು ಬಗೆ ಬಗೆಯ ಸ್ಟೆಪ್ ಹಾಕಿ ಕುಣಿಯೋ ಗಿಳಿ, ಬಾಸ್ಕೆಟ್ ಬಾಲ್ ಆಡೋ ಮೊಲ, ಟೋಕನ್ ಎಕ್ಸ್ ಚೇಂಜ್ ಮಾಡಿಕೊಂಡು ಊಟ ತೆಗೆದುಕೊಳ್ಳೋ. ಅಣ್ಣ ತಂಗಿ ಬೂದು ಗಿಳಿ ಜೋಡಿ, ಕಾರು ಓಡಿಸೋ ಇಲಿಗಳು, ಫ್ರಾಕ್ಚರ್ ಮಾಡಿಕೊಂಡು ಕುಂಟುವ ಸಾಕುವ ತಂದೆಗೆ ಲೋನ್ಲಿ ಫೀಲ್ ಆಗಬಾರದೆಂದು ತಾನೂ ಸುಮ್ಮನೆ ಸುಮ್ಮನೆ ಕುಂಟೋ ನಾಯಿ, ಅಲೆಕ್ಸಾದ ಶಾಪಿಂಗ್ ಲಿಸ್ಟಿಗೆ ತನಗೆ ಬೇಕಾದ ಸ್ಟ್ರಾಬೆರ್ರಿ ಹಣ್ಣು ಸೇರಿಸೋ ಕಳ್ಳ ಗಿಳಿ, ಫುಟ್ಬಾಲ್ ಮ್ಯಾಚ್ ಆಡೋ ಮೀನುಗಳು...

ಎಂಥ, ಮಕ್ಕಳ ಸಿನಿಮಾ ಕತೆ ಅಂದುಕೊಂಡಿರಾ? ಅಲ್ಲ, ಸಾಕುಪ್ರಾಣಿಗಳು ಏನೆಲ್ಲಾ ಮಾಡಬಲ್ಲವು, ನಾವಿಲ್ಲದಾಗ ಏನೆಲ್ಲಾ ಮಾಡ್ತಾವೆ, ನಮ್ಮನ್ನು ಅದೆಷ್ಟು ಅರ್ಥ ಮಾಡಿಕೊಂಡಿರ್ತಾವೆ, ಅದಕ್ಕೆಷ್ಟು ಸಹಾನುಭೂತಿ ಇರುತ್ತದೆ, ಅವುಗಳ ಬುದ್ಧಿಮಟ್ಟ, ಕಲಿಕೆಯ ಉತ್ಸಾಹ, ಚಾಕಚಕ್ಯತೆಗಳ ಬಗ್ಗೆ ಇರುವ ' secret life of our pets' ಡಾಕ್ಯುಮೆಂಟರಿಯಲ್ಲಿ ಬರುವ ಪಾತ್ರಗಳಿವು.
ಸಾಮಾನ್ಯವಾಗಿ ಸುತ್ತಮುತ್ತಲಿನ ಪ್ರಾಣಿ, ಪಕ್ಷಿ, ಹುಳ ಹುಪ್ಪಡಿಗಳ ಬಗ್ಗೆ ಮಕ್ಕಳಿಗೆ ಆಸ್ಥೆ, ಪ್ರೀತಿ ಇದ್ದೇ ಇರುತ್ತದೆ. ದೊಡ್ಡವರಾಗುತ್ತಿದ್ದಂತೆ ಅದನ್ನು ನೋಡುವ ಕಣ್ಣು , ಖುಷಿಪಡುವ ಮನಸ್ಸು ಕೊನೆಗೆ ಅವುಗಳ ಬಗ್ಗೆ ಸಹನೆಯೂ ಮಾಯವಾಗಿಬಿಡುತ್ತದೆ. ತೇಜಸ್ವಿ ಪುಸ್ತಕಗಳು ಮತ್ತು ಅವರು ಪರಿಚಯಿಸಿದ ಪ್ರಾಣಿ ಪ್ರಪಂಚ ನನ್ನ ಕಣ್ಣು, ಮನಸ್ಸು ಮತ್ತು ಸಹನೆಯನ್ನು ಇನ್ನೂ ಇರಗೊಟ್ಟಿದೆ. ನಮ್ಮ ಸಣ್ಣ ಬದುಕನ್ನು ಕೌತುಕಮಯ, ಅರ್ಥಪೂರ್ಣ ಮತ್ತು ಸುಂದರಗೊಳಿಸುವ ಎಲ್ಲಾ ಜೀವಜಾಲವೂ ಅದ್ಭುತವೇ. ಬೇರೆ ದೃಷ್ಟಿಕೋನ ಕಲಿಸಿದ ತೇಜಸ್ವಿಗೆ ಶರಣು!
ನಮ್ಮೊಂದಿಗೇ ಬದುಕುವ ಈ ಸಹಜೀವಿಗಳ ಲೋಕದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಡಾಕ್ಯುಮೆಂಟರಿ ಚೆಂದಕ್ಕೆ ತೋರಿಸಿಕೊಟ್ಟಿದೆ. ನೆಟ್ ಫ್ಲಿಕ್ಸಿನಲ್ಲಿದೆ, ಪ್ರಾಣಿ ಪ್ರಿಯರು ತಪ್ಪದೇ ನೋಡಿ.
May be an image of text that says 'Secret Life of Our Pets'
Prathima Keshav Prabhu, Raghu Apara and 5 others

Thursday, July 8, 2021

ಹೀಗೆ ಕಳೆಯುತ್ತದೆ ಕಾಲ





ಒಬ್ಬೊಬ್ಬರೆ ಮರೆಯಾಗುವಾಗ ಮತ್ತೆ ನೆನಪಾದ ನನ್ನದೇ ಸಾಲುಗಳು. ಹಾಗೆ ನೋಡ ಹೋದರೆ ಸದಾ ಡಿನೇಯಲ್ ಮೋಡ್ ಅಲ್ಲೇ ಬದುಕುವವಳು ನಾನು. ಮತ್ತೆಂದಾದರೂ ಆ ವ್ಯಕ್ತಿ ಸಿಗಬಹುದು ಎಂಬ ಭ್ರಮೆಯಲ್ಲಿ ಕಾಲ ಸವೆಸುವವಳು.
ಹೀಗೆ ಕಳೆಯುತ್ತದೆ ಕಾಲ
ಸಾಗಂತ್ಯ ಚಿಂದಿ ಚೂರಿನ ನೆನಹುಗಳಾಗಿ
ಪ್ರೀತಿಯ ಜೀವಗಳು ಭಾವಕೋಶಗಳಾಗಿ
ಕಲಿತ ವಿದ್ಯೆಯೂ, ಓದಿದ ಸಾಲುಗಳೂ
ನೋಡಿದ ಚಿತ್ರಗಳೂ, ಕೇಳಿದ ಹಾಡುಗಳು
ಕಂಡ ಮುನ್ನೂರ ಅರವತ್ತು ಕೋಟಿ ಅಪರಿಚಿತ, ಚಿರ ಪರಿಚಿತ ಮುಖಗಳೂ
ಸುತ್ತಿದ ಹಾದಿ ಬೀದಿಗಳು ಕೇವಲ ಮೆದುಳಿನ ಗೆರೆಗಳಾಗಿ.
ನಿನ್ನಿನ ಅರಮನೆಗಳು ದಾರಂದದ ಅಸ್ಥಿಪಂಜರಗಳಾಗಿವೆಯಲ್ಲ
ಓಣಿಗಳು, ಬಾವಿಗಳು, ಕೆರೆಗಳೂ ನೀರು ಬಿದ್ದ
ಜಲವರ್ಣ ಚಿತ್ರಗಳಂತೆ ಮಾಸಿ ಹೋದವಲ್ಲ.
ನಿನ್ನೆ ಅವೆಲ್ಲವೂ ಇದ್ದಿದ್ದು ನಿಜವೇ, ಅಲ್ಲ ಅದು
ಕೈಗಂಟಿದ ಚಿಟ್ಟೆಯ ರೆಕ್ಕೆಯ ಪುಡಿ ಬಣ್ಣಗಳಷ್ಟೇ.
ಚಿತ್ರದ ಬಿಂಬವಷ್ಟೇ ದಕ್ಕಿದ್ದು ಕಣ್ಣಿಗೆ.
ಹೀಗೆ ಕಳೆಯುತ್ತದೆ ಕಾಲ.
ಆಗಾಗ ಮಿಂಚುವ ನೆನಹುಗಳೊಂದಿಗೆ
ಬಿಸಿ ಉಸಿರಿನ ಜೊತೆಗೊಂದಿಷ್ಟು ಕಣ್ಣೀರ ತರ್ಪಣ,
ನಿನ್ನೆಗಳ ಆತಂಕವಿಲ್ಲವಿಂದು. ಕಳೆದದ್ದು ಕಳೆದಾಯ್ತು
ಕಳೆಯಲು ಇನ್ನೇನ್ನೂ ಉಳಿದಿಲ್ಲವಲ್ಲವಿಲ್ಲಿ
ಕಳೆ ಕಳೆದು ಮನಸ್ಸು ಕೂಡಿಸಿ ಹಾಕಿತಲ್ಲವೇ
ಲಕ್ಷ, ಸಾವಿರ, ಕೋಟಿ ವರ್ಣಗಳ ಬಿಂಬಗಳ
ಹೀಗೆ ಕಳೆಯುತ್ತದೆ ಕಾಲ...
ಬಣ್ಣಗಳಲ್ಲಿ ಮುಳುಗಿ ಹೋಲಿಯಾಡುತ್ತಾ
ಕೂತು ಬಿಂಬಗಳ ಜೋಡಿಸಿ ಹೊಲೆದು
ಅದಕ್ಕೊಂದಿಷ್ಟು ಚೆಂದ ಚೆಂದದ ಕಸೂತಿ ಸೇರಿಸಿ
ಸಂಭ್ರಮಿಸಿದರೆ ಆಯ್ತಲ್ಲವೇ ಜೀವಕ್ಕೊಂದು ಅಂಗಿ

ಹೀಗೆ ಕಳೆಯಲಾರದೆ ಕಾಲ? 

ಕಾವನ್ ಎಂಬ‍ ಏಕಾಂಗಿಯ ಕಥನ


pc:internet

 


ಕಾವನ್ ಎಂಬ ಈ ಚೆಂದದ ಕಣ್ಣುಗಳ, ಸುರ ಸುಂದರಾಂಗನನ್ನು ೧೯೮೫ರಲ್ಲಿ ಶ್ರೀಲಂಕಾ ಸರಕಾರ ಪಾಕಿಸ್ತಾನದ ಆಗಿನ ಪ್ರಧಾನಿ ಜಿಯಾ ಉಲ್ ಹಕ್ ಅವರಿಗೆ ಉಡುಗೊರೆಯ ರೂಪದಲ್ಲಿ ಕೊಟ್ಟಿತ್ತು. ಇಸ್ಲಾಮಾಬಾದಿನ ಮೃಗಾಲಯ ಒಂದರಲ್ಲಿ ಮೂವತ್ತೆರಡು ವರ್ಷಗಳ ಕಾಲ ಬಂಧಿಯಾಗಿ ಕಾಲ ಕಳೆದ ಈತ ಬರಬರುತ್ತಾ ಮಾನಸಿಕವಾಗಿ ಕುಗ್ಗಲಾರಂಭಿಸಿದ. ಅವನ ಸಂಗಾತಿ ಸಹೇಲಿ ಕಾಲಿನ ಸೋಂಕು ರೋಗದಿಂದ ಸತ್ತು ಹೋದ ಮೇಲೆ, ಸಿಟ್ಟು, ಮಾನಸಿಕ ಉದ್ವೇಗಕ್ಕೊಳಗಾಗಿ ನಿಂತಲ್ಲೇ ಜೋಲಿಯಾಡಲಾರಂಭಿಸಿದ. ಹತ್ತಿರ ಹೋದ ಮೃಗಾಲಯದ ಕೆಲಸಗಾರರ ಮೇಲೆ ಮಣ್ಣು, ನೀರು ಅಥವಾ ಸೊಂಡಿಲಿಗೆ ಸಿಕ್ಕಿದ್ದನ್ನು ತೆಗೆದು ಎಸೆಯುತ್ತಲೂ ಇದ್ದ. ಆ ಸಿಬ್ಬಂದಿಯೋ, ಬರೇ ಕಬ್ಬನ್ನೇ ಕೊಟ್ಟು ಕೊಟ್ಟು, ಅಷ್ಟೂ ವರ್ಷಗಳಲ್ಲಿ ಐದೂವರೆ ಟನ್ ತೂಕ ಬೆಳೆಸಿಟ್ಟಿದ್ದರು. ಕಾಲುಗುರುಗಳೂ ಕೂಡಾ ಸೋಂಕಿನ ಲಕ್ಷಣಗಳನ್ನೂ ತೋರಿಸುತ್ತಿದ್ದವು. ಹಸಿರಿನ ಲವಲೇಶವೂ ಇಲ್ಲದ ಪರಿಸರದಲ್ಲಿ ಸರಪಣಿ ಕಟ್ಟಿ, ಕೆಲವೊಮ್ಮೆ ಅವನನ್ನು ಶಾಂತಗೊಳಿಸಲು ಮದ್ಯವನ್ನೂ ಕೊಡಲಾಗುತ್ತಿತ್ತು. ೨೦೧೫ರಿಂದ ಸುಮಾರು ಐದು ವರ್ಷಗಳ ಕಾಲ ಸಾಕಷ್ಟು ಜನರ ಸಾಹಸ, ಪ್ರಯತ್ನಗಳ ನಂತರ ಕಾವನ್ ಅನ್ನು ಅಲ್ಲಿಂದ ಮುಕ್ತಗೊಳಿಸುವ ಪ್ರಕ್ರಿಯೆ ನಡೆಯಿತು. ಪಾಕಿಸ್ತಾನದಿಂದ ಅವನನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಸರಿಯಾಗಿ ಅವನನ್ನು ನೋಡಿಕೊಳ್ಳದ್ದಕ್ಕೆ ಮೃಗಾಲಯಕ್ಕೆ ಛೀಮಾರಿ ಹಾಕಿದ್ದೂ ಅಲ್ಲದೇ, ಅದನ್ನು ಮುಚ್ಚಿಸಿಯೂ ಬಿಟ್ಟಿತು.

ಅಮೇರಿಕಾದ ಸುಪ್ರಸಿದ್ಧ, ‌ಪಾಪ್ ನ ದೇವತೆ ಎಂದೇ ಕರೆಯಿಸಿಕೊಳ್ಳುವ ಶೆರ್ ನಿಂದಾಗಿ ಇಸ್ಲಾಮಾಬಾದಿನ ಜೂನಿಂದ ಕಾಂಬೋಡಿಯಾದ ಅಭಯಾರಣ್ಯಕ್ಕೆ ಕಾವನನ್ನು ಸ್ಥಳಾಂತರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗುತ್ತದೆ. ಕೋವಿಡ್ ಮಧ್ಯೆಯೂ ಆಸ್ಟ್ರಿಯಾದ
four paws ಎಂಬ ಸಂಸ್ಥೆಗೆ ಸೇರಿದ ಸದಸ್ಯರು ಆ ಜವಾಬ್ದಾರಿಯನ್ನು ಹೊತ್ತುಕೊಂಡರು.
ಆ ಸಂಸ್ಥೆಯ ನಿರ್ದೇಶಕ ಅಮೀರ್ ಖಲೀಲ್ ಎಂಬ ವೆಟ್ ಕಾವನ್ನೊಂದಿಗೆ ಬೆಳೆಸಿಕೊಂಡ ಸಂಬಂಧ ನನ್ನೀ ಬರಹಕ್ಕೆ ಕಾರಣ. ತನ್ನ ಜೀವನವಿಡೀ ಯುದ್ಧ ನಿರತ ದೇಶಗಳಿಂದ, ಮೃಗಾಲಯಗಳಿಂದ ಬೇರೆ ಬೇರೆ ಪ್ರಾಣಿಗಳನ್ನು ರಕ್ಷಿಸುತ್ತಲೇ ಬರುತ್ತಿರುವ ಹಾಗೂ ಮರದ ದಿಮ್ಮಿಗಳನ್ನು ಎತ್ತಿ ಹಾಕುವ ಆನೆಗಳಿಗಾಗಿ ಹದಿನೇಳು ಸಾವಿರ ಹೆಕ್ಟೇರ್ ಜಾಗದಲ್ಲಿ ‘ಎಲೆಫಂಟ್ಸ್ ಲೇಕ್’ ಎಂಬ ಸಂರಕ್ಷಿತ ಹಾಗೂ ರಿಹ್ಯಾಬಿಲಿಟೇಶನ್ ಅನ್ನು ನಿರ್ಮಿಸಿದ ಹೆಗ್ಗಳಿಕೆ ಅಮೀರ್ ಅವರದ್ದು.
ಅಮೀರ್, ಕಾವನ್ ಅನ್ನು ಶಾಂತಗೊಳಿಸಲು, ಅವನಿಗೆ ಫ್ರಾಂಕ್ ಸಿನಾಟ್ರಾನ (ಅಮೇರಿಕನ್ ಹಾಡುಗಾರ) ‘ದಿ ಎಂಡ್ ಇಸ್ ನಿಯರ್’ ಹಾಡತೊಡಗುತ್ತಾರೆ. ತನ್ನ ದೊಡ್ಡ ಸ್ನೇಹಿತನಿಗೆ ಅತೀ ಕೆಟ್ಟ ಅಭಿರುಚಿಯಿದೆ, ಅದಕ್ಕೆ ನನ್ನ ಸ್ವರವನ್ನಿಷ್ಟಪಟ್ಟಿದ್ದಾನೆ ಎಂದು ಅಮೀರ್ ನಗುತ್ತಾ ಹೇಳುತ್ತಾರೆ. ಶೆರ್ ಅವನನ್ನು ನೋಡಲು ಬಂದಾಗಲೂ ಅವಳಿಂದ ಅದೇ ಹಾಡು ಹೇಳಿಸುತ್ತಾರೆ. ಅವನ ಡಯಟ್ ಅನ್ನು ಬದಲಾಯಿಸಿ ಅವನನ್ನು ಓಡಾಡಿಸಿ, ಓಡಾಡಿಸಿ ತೂಕವನ್ನಿಳಿಸುತ್ತಾರೆ. ಅದೇನೋ ಆನೆ! ಇವರೂ ಅದರೊಂದಿಗೆ ಓಡಾಡಬೇಕಲ್ಲ?! ಕಾಲಿನ ಉಗುರುಗಳನ್ನೂ ಪದೇ ಪದೇ ಸ್ವಚ್ಛಗೊಳಿಸುತ್ತಲೇ ಇರಬೇಕಾಗುತ್ತದೆ. ದಿನಕ್ಕೆರಡು ಸಲ, ನಾಲ್ಕು ಘಂಟೆ ಅವನೊಂದಿಗೆ ಕಳೆದು ಅವರಿಬ್ಬರ ಮಧ್ಯೆ ಬಾಂಧವ್ಯ ಹುಟ್ಟುತ್ತದೆ. ಹಾಡು ಕೇಳುತ್ತಾ ಕಾವನ್ ಕಣ್ಣೀರೂ ಹಾಕುತ್ತಾನೆ. ಅಮೀರ್ ಅನ್ನು ತನ್ನ ಸೊಂಡಿಲಿನಿಂದ ಅಪ್ಪಿಕೊಳ್ಳುತ್ತಾನೆ. ತಲೆ ಸವರುವಂತೆ ಅವರಿಗೆ ಅಂಟಿಕೊಳ್ಳುತ್ತಾನೆ. ಇಬ್ಬರೂ ಅಂಟಿಕೊಂಡು ಓಡಾಡುವ ವಿಡಿಯೋ ದೃಶ್ಯಗಳು ನೋಡಿದಾಗೆಲ್ಲಾ ಮನಸ್ಸು ತುಂಬಿ ಬರುತ್ತದೆ.
ಆತನ ನಂಬಿಕೆಯನ್ನು ಗಳಿಸಿದ ನಂತರ ಅವನನ್ನು ಮಾತನಾಡಿಸುತ್ತಾ, ತಿನ್ನಿಸುತ್ತಾ ಅವನಿಗೋಸ್ಕರ ತಯಾರಾದ ಒಂದು ದೊಡ್ಡ ಕಂಟೇನರ್ ಒಳಗೆ ಅವನನ್ನು ಸೇರಿಸಿ, ಅರಿವಳಿಕೆ ನೀಡಿ ಅದನ್ನು ಟ್ರಕ್ ಒಂದರ ಮೂಲಕ ಕಾರ್ಗೋ ವಿಮಾನಕ್ಕೆ ತಂದು ಸೇರಿಸುತ್ತಾರೆ. ಅದೊಂದು ‘ದೊಡ್ಡ, ಅತೀ ದೊಡ್ಡ’ ಸಾಧನೆ! ರಾಶಿಗಟ್ಟಲೆ ಕ್ಯಾಮೆರಾಗಳು, ಕಾನ್ ವೇ ಥರದಲ್ಲಿ ಕಾರುಗಳು ಆ ಟ್ರಕ್ಕನ್ನೇ ಹಿಂಬಾಲಿಸಿಕೊಂಡು ವಿಮಾನ ನಿಲ್ದಾಣಕ್ಕೆ ಬರುತ್ತವೆ. ಆ ಕಂಟೆನರ್ ಅನ್ನು ವಿಮಾನಕ್ಕೆ ನುಗ್ಗಿಸುವಾಗ ಅವನು ಒಂದು ಚೂರು ಅಲ್ಲಾಡಿದರೂ ವಿಮಾನದ ಒಳಭಾಗಕ್ಕೆ ಪೆಟ್ಟಾಗುತ್ತದೆ. ವಿಮಾನದ ಸಿಬ್ಬಂದಿ, ಅಮೀರ್ ಅವರಿಗೆ ಕಾವನ್ ಗೆ ಆದೇಶ ಕೊಡುವಂತೆ ಹೇಳುತ್ತಾರೆ. ಅಮೀರ್ ಗೆ ತಬ್ಬಿಬ್ಬು, ಅವನೇನು ಮನುಷ್ಯನೇ, ಅಲ್ಲಾಡಬೇಡ, ಮಧ್ಯ ಕೂತುಕೋ ಅಂದರೆ ಕೇಳುವುದಕ್ಕೆ! ಅಂತೂ ಇಂತೂ ಕಾವನ್ನಿನ್ನದ್ದೋ, ಅಮೀರ್ ಅವರದ್ದೋ ಅಥವಾ ಆ ವಿಮಾನದ ಅದೃಷ್ಟಕ್ಕೋ ಅವನು ಅಲ್ಲಾಡದೇ ಸರಿಯಾಗಿ ಮಧ್ಯದಲ್ಲೇ ನಿಂತು ವಿಮಾನದ ಒಳಕ್ಕೆ ಕಂಟೇನರ್ ಅನ್ನು ನುಗ್ಗಿಸಲಾಗುತ್ತದೆ. ಅಷ್ಟೂ ಹೊತ್ತು ಕಾವನ್ ಆರೋಗ್ಯವಾಗಿದ್ದಾನೆ ಎಂದು ಕಂಟೇನರ್ ಒಳಗೆ ತಲೆ ಹಾಕಿ ಅವನ ಸೊಂಡಿಲನ್ನು ಮುಟ್ಟಿ ಮುಟ್ಟಿ ನೋಡುತ್ತಲೇ ಇರುತ್ತಾರೆ ಅಮೀರ್. ಅವನ ಮಿಸುಕಾಟ ನೋಡಿ ‘ಸಧ್ಯ ಅವನು ಬದುಕಿದ್ದಾನೆ’ ಅನ್ನುವ ಸಮಾಧಾನ.
ಅವನು ಕಾಂಬೋಡಿಯಾ ಮುಟ್ಟಿ ಅವನನ್ನು ಬೀಳ್ಕೊಡುವ ಸಮಯದಲ್ಲಿ ಒದ್ದಾಡಿ ಹೋಗುತ್ತಾರೆ. ಅವರಿಗೆ ವಿಚಿತ್ರ ತಳಮಳ, ಸಂಕಟ. ಅಮೀರ್ ಕಾವನ್ನೊಂದಿಗೆ ತನ್ನ ಭಾವನಾತ್ಮಕ ಬಾಂಧವ್ಯವನ್ನು ನೆನೆದು ಕಣ್ಣೀರು ಹಾಕುತ್ತಾ “ಅವನೊಟ್ಟಿಗೆ ನಾನು ಅಟ್ಯಾಚ್ ಮೆಂಟ್ ಬೆಳೆಸಿಕೊಂಡದ್ದು ನನ್ನ ತಪ್ಪು, ಆದರೆ ಅವನನ್ನು ಶಾಂತಗೊಳಿಸಲು ಬೇರೆ ಯಾವುದೇ ದಾರಿಯೂ ನಮಗಿರಲಿಲ್ಲ” ಎನ್ನುತ್ತಾರೆ. ಕಾವನ್ ಈಗ ಕಾಂಬೋಡಿಯಾದ ತನ್ನ ಮೂವತ್ತು ಎಕರೆಗಳ ಕಾಡು-ಮನೆಯಲ್ಲಿ ಆರಾಮಾಗಿ ಓಡಾಡಿಕೊಂಡು, ಹೊಸ ಸಂಗಾತಿಗಳನ್ನು ಅವಾಗವಾಗ ಮಾತನಾಡಿಸಿಕೊಂಡು, ಸೊಪ್ಪು, ಕಲ್ಲಂಗಡಿ, ಬಾಳೆಹಣ್ಣು, ಬಾಳೆದಿಂಡು, ಹಣ್ಣುಗಳ ಭೂರಿ ಆದರೆ ಸರಿಯಾದ ಆಹಾರ ಸೇವಿಸಿಕೊಂಡು ಖುಷಿಯಿಂದಿದ್ದಾನೆ. ಅವನ ಜೋಲಿಯಾಡುವಿಕೆ ಈವಾಗ ನಿಂತಿದೆ. ಅವನ ಈ ಬೆಳವಣಿಗೆ ಬಗ್ಗೆ ಅಮೀರ್ ಅವನು ಇನ್ನಷ್ಟು ಆರಾಮಾಗುತ್ತಾನೆ ಎಂದು ತುಂಬು ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಮಕ್ಕಳಿಗೆ ಇಂಥಹುದೇನನ್ನೋ ತೋರಿಸಿದಾಗ, ಓದಿ ಹೇಳಿದಾಗ, ಅವರು ದೊಡ್ಡವರಾದಾಗ ವೆಟ್ ಆಗಿಯೋ, ಕಾಡಿನ ಸಂರಕ್ಷಕರಾಗಿಯೋ ಅಥವಾ ಸಾಕಷ್ಟು ಹಣ ದುಡಿದಲ್ಲಿ ಒಂದಿಷ್ಟು ಇಂತಹ ಸಂಸ್ಥೆಗಳಿಗೆ ದಾನ ಮಾಡಿಯೋ, ಯಾವುದೂ ಅಲ್ಲದಿದ್ದಲ್ಲಿ ದಾರಿಯಲ್ಲಿ ಸಿಗುವ ನಾಯಿ, ಬೆಕ್ಕುಗಳಿಗೆ ಹಿಂಸೆ ಮಾಡದೇ ಇರಬಹುದು ಎಂಬುದು ನನ್ನಾಸೆ.

Thursday, November 5, 2020

ಪರುಷ ಮಣಿ


(ಹಿಂದೆ ಯಾವತ್ತೋ ಬರೆದಿದ್ದ ಕತೆ, ಸಂಕಥನದಲ್ಲಿ ಪ್ರಕಟವಾಗಿತ್ತು)

 

ಬಚ್ಚಲಿನ ಪಕ್ಕದ ಬಾಣಂತಿ ಕೋಣೆಯ ಜಗಲಿಯಲ್ಲಿ ಅಡಿಕೆ ಸುಲಿಯುತ್ತಾ ಮಗಳು ಸೀತೆಯೊಡನೆ ಹರಟುತ್ತಾ ಕುಳಿತ ಭಾಗೀರಥಿ ಏತಕ್ಕೋ ತಲೆಯೆತ್ತಿ ಕಾಲುಹಾದಿಯೆಡೆ ಕಣ್ಣು ಹಾಯಿಸಿದರೆ ಆಡಿಕೆ ಮರಗಳ ಹಿನ್ನೆಲೆಯಲ್ಲಿ ಅಸ್ಪಷ್ಟವಾಗಿ ಗಂಡನ ಆಕೃತಿ ಕಾಣಿಸಿತು. ಗಡಿಬಿಡಿಯಿಂದ "ಬಾಯಾರಿಕೆಗೆ ತಂದಿಡು ಮಗಳೇ, ಅಕೋ ಅಲ್ಲಿ ಅಪ್ಪಯ್ಯ ಬಂದ್ರು" ಎಂದರು. ಅಷ್ಟರವರೆಗೂ ತಾಯಿಯ ಸಾನಿಧ್ಯದಿಂದ ಬೆಳಗಿದ್ದ ಸೀತೆಯ ಮುಖ ಕಪ್ಪಿಟ್ಟು, ಅವಳು ಬರಿದೇ ತಲೆಯಾಡಿಸಿ ಉಟ್ಟ ಸೀರೆಗೆ ಕೈಯೊರೆಸುತ್ತಾ ಒಳಧಾವಿಸಿದಳು. ಗಣಪಯ್ಯ ಹತ್ತಿರವಾದಂತೆಲ್ಲಾ ಅವರ ನಡೆಯುವ ಶೈಲಿಯಿಂದಲೇ ಏನು ನಡೆದಿರಬಹುದೆಂಬ ಸೂಚನೆ ಭಾಗೀರಥಿಗಾಗಲೇ ಸಿಕ್ಕಿತ್ತು. ದಪ ದಪ ಹೆಜ್ಜೆ ಹಾಕುತ್ತಾ ಬಂದವರೇ ಜಗಲಿಯಂಚಿಗೆ ಕುಸಿದು ಕೂತು, ಕೈಲಿದ್ದ ಬೈರಾಸಿನಿಂದ ಮುಖವೊರೆಸಿ " ಏ ಹೆಣ್ಣೇ, ಈ ಸಾಡೇಸಾತ್ ಶನಿ ಈ ಜನ್ಮದಲ್ಲಿ ನಮ್ಮ ಬೆನ್ನು ಬಿಡುವುದಿಲ್ಲ ಕಾಣ್ತದೆ. ಎಂತ ಸಾಯುವುದು! ಎಂತ, ಸತ್ತಾಳಾ ಹೇಗೆ!? ಒಂದು ಬಾಯಾರಿಕೆಗೆ ತರಲು ಹೇಳೇ" ಎಂದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳಿಗೂ ಕೇಳುವಂತೆ ತಮ್ಮ ದಪ್ಪ ಸ್ವರದಲ್ಲಿ ಬೊಬ್ಬಿರಿದರು. ಅದರಲ್ಲಿನ ತಿರಸ್ಕಾರ, ವ್ಯಂಗ್ಯ, ಅಸಹನೆ, ದ್ವೇಷಗಳು ಬಾಣಗಳಂತೆ ಒಂದರ ಹಿಂದೆ ಒಂದರಂತೆ ಹಾರಿ ಬಂದು ಭಾಗೀರಥಿಯ ಮನದಲ್ಲಿ ನೆಟ್ಟು ನೋಯಿಸತೊಡಗಿದವು. ಅಷ್ಟರಲ್ಲೇ ಮನೆಯಿಂದ ಬಂದ ಸೀತೆ, ಕೈಯಲ್ಲಿದ್ದ ಮಜ್ಜಿಗೆಯನ್ನು ಅಪ್ಪನ ಬಳಿಯಿಟ್ಟು ಒಂದು ಸಲವೂ ಅವರ ಕಡೆ ದೃಷ್ಟಿ ಹಾಯಿಸದೇ ತನ್ನ ಪಾಡಿಗೆ ತಾನು, ಸುಲಿಯುತ್ತಿದ್ದ ಅಡಕೆಯ ಬುಟ್ಟಿಯ ಹತ್ತಿರ ಕುಳಿತಳು.

ಅವಳನ್ನೇ ದುರುಗಟ್ಟಿ ನೋಡುತ್ತಿದ್ದ ಗಣಪಯ್ಯನ ಕೋಪ ನೆತ್ತಿಗೇರಿ ಅಲ್ಲೇ ಬಿದ್ದಿದ್ದ ಅಡಕೆ ಸೋಗೆಯನ್ನೆತ್ತಿಕೊಂಡು ಕೂತಿದ್ದವಳನ್ನು ಕೆಳಕ್ಕೆಳೆದು ಮನಸೋ ಇಚ್ಛೆ ಬಡಿದರು, ಬಿಡಿಸಲು ಬಂದ ಭಾಗೀರಥಿಗೂ ಒಂದಷ್ಟು ಬಡಿದು, ಅವಳನ್ನು ದೂಡಿ, ಅದೂ ಸಾಕಾಗದೆ ಸೋಗೆ ಬಿಸಾಡಿ, ಕೆಳಕ್ಕೆ ಬಿದ್ದ ಸೀತೆಯನ್ನು ಕಾಲಿನಿಂದ ಒದೆಯಲಾರಂಭಿಸಿದರು. ಅದರೊಂದಿಗೆ ಊರಿಡೀ ಕೇಳುವಂತೆ ಅಶ್ಲೀಲ ಬೈಗುಳಗಳ ಸುರಿಮಳೆ ಬೇರೆ.

ಅಲ್ಲಲ್ಲಿ ನಿಂತು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು ತೋಟದಾಳುಗಳು, ಮುಂದೆ ಬಂದು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ. ಅಷ್ಟು ಹೊಡೆಸಿಕೊಂಡರೂ ಒಂಚೂರೂ ನರಳದೇ, ಅಳದೆ, ಪ್ರತಿಭಟಿಸದೇ ಸುಮ್ಮನಿದ್ದಳು ಸೀತೆ. ಹೋದ ಜನ್ಮದಲ್ಲಿ ಮಾಡಿದ್ದ ಪಾಪಕ್ಕೆ ಉಳಿದುಹೋದ ಕಂದಾಯ ಸಲ್ಲಿಸುವವಳಂತೆ ಮುದ್ದೆಯಾಗಿ ಬಿದ್ದಿದ್ದಳು. ಭಾಗೀರಥಿಗೆ ಒಡಲೆಲ್ಲಾ ಹತ್ತಿ ಉರಿದಂತಾಯ್ತು. ಇನ್ನೂ ಒದೆಯುತ್ತಾ, ಬೈಯುತ್ತಿದ್ದ ಗಂಡನನ್ನು, ಅವುಡುಗಚ್ಚಿ ಎಲ್ಲಿಲ್ಲದ ಶಕ್ತಿಯನ್ನು ತಂದುಕೊಂಡು ದೂಡಿಬಿಟ್ಟಳು. ಆಕೆ ದೂಡಿದ ರಭಸಕ್ಕೆ ಸಮತೋಲನ ಕಳೆದುಕೊಂಡರೂ ಬೀಳದಂತೆ ಸಾವರಿಸಿಕೊಂಡ ಗಣಪಯ್ಯ ನಿಬ್ಬೆರಗಾಗಿ ಅವಳನ್ನೇ ದಿಟ್ಟಿಸಿದರು. ಅವಳ ಮುಖದಲ್ಲಿ ಕಾಣುತ್ತಿದ್ದ ತಿರಸ್ಕಾರ, ಕೋಪ ಅವರನ್ನು ಒಂದರೆಗಳಿಗೆ ಹಿಮ್ಮೆಟಿಸಿತು. ಬೆರಗು ಕಳೆದಂತೆ, ಚೆಲ್ಲಾಡಿ ಹೋಗಿದ್ದ ಕೋಪ, ಅಹಂಕಾರ, ಶಕ್ತಿಯನ್ನು ಬಾಚಿ ಧರಿಸಿ ಮತ್ತೆ ಕ್ರೂರ ಕಣ್ಣುಗಳಿಂದ ನೋಡುತ್ತಾ ಬೈಯಲು ಬಾಯಿ ತೆಗೆದರು. ಆದರೆ ಸಾಕ್ಷಾತ್ ಕಾಳಿಯೇ ಅವತರಿಸಿದಂತಿದ್ದ ಭಾಗೀರಥಿ ಅದಕ್ಕೆ ಸೊಪ್ಪು ಹಾಕದೆ ಹೊಡೆಯಲೆಂದು ಎತ್ತಿದ್ದ ಅವರ ಕೈಯನ್ನು ಬಲವಾಗಿ ತಿರುಚಿಬಿಟ್ಟಳು, ಅಷ್ಟೇ ಅಲ್ಲದೆ ಮೊಣಕಾಲೆತ್ತಿ ಎಲ್ಲಿಗೆ ಒದೆಯಬೇಕೋ ಅಲ್ಲಿಗೆ ಒದ್ದೂ ಬಿಟ್ಟಳು. ಬಿದ್ದವನ ಬೆನ್ನಿಗೆ ಅಂಗಳದಲ್ಲಿ ಹಾಕಿದ್ದ ಕಲ್ಲು ಚಪ್ಪಡಿ ಬಲವಾಗಿಯೇ ಬಡಿಯಿತು. ಅಲ್ಲಿಗೆರಡು ದಶಕ ವಿರಾಜಮಾನವಾಗಿ ಮೆರೆದ ಗಣಪಯ್ಯನ ಕಿರೀಟ ನೆಲಕಚ್ಚಿತು. ನೋವು, ಹತಾಶೆ, ಅವಮಾನಗಳಿಂದ ಗಣಪಯ್ಯ ಕಿರುಚುತ್ತಿದ್ದರೆ, ಅಷ್ಟು ಹೊತ್ತು ಸುಮ್ಮನಿದ್ದ ಸೀತೆ, ಎದ್ದು ನಿಂತು ಕುಣಿಯುತ್ತಾ, ಚಪ್ಪಾಳೆ ತಟ್ಟುತ್ತಾ ವಿಕಾರವಾಗಿ ನಗಲಾರಂಭಿಸಿದಳು. ನೆಲದಲ್ಲಿ ಕುಸಿದು ಕೂತು ನೋವಿನಿಂದ ಒದ್ದಾಡುತ್ತಿದ್ದ ಗಂಡನನ್ನು ಉದ್ದೇಶಿಸಿ, " ಇನ್ನೊಂದು ಸಲ, ಇನ್ನೊಂದು ಸಲ ನನ್ನ ಮಗಳ ಮೇಲೆ ಕೈಯಿಟ್ಟರೆ ನೋಡು, ಆ ವೀರಭದ್ರನ ಆಣೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನನ್ನ, ಈ ಭಾಗೀರಥಿ ಮಗಳಿವಳು. ನಾನಿದ್ದೇನೆ ಅವಳ ರಕ್ಷಣೆಗೆ, ಆ ವೀರಭದ್ರನಿದ್ದಾನೆ. ತಿಳಿದುಕೋ, ನಿನ್ನ ಸಿಗಿದು ತೋರಣ ಕಟ್ಟಲಿಕ್ಕೂ ನಾನು ಸಿದ್ಧ!" ಎಂದವರೇ ಮಗಳ ಕೈ ಹಿಡಿದು ಒಳಗೆಳೆದುಕೊಂಡು ಹೋದರು. ಢವಗುಡುತ್ತಿದ್ದ ಎದೆ ಬಡಿತವನ್ನು ತಹಬಂದಿಗೆ ತರಲೆತ್ನಿಸುತ್ತಾ ಮಗಳ ಕೈಹಿಡಿದು ಮನೆಯೊಳಗೆ ನುಗ್ಗಿ ದಾರಂದ ಅಲ್ಲಾಡಿ ಹೋಗುವಷ್ಟು ಜೋರಾಗಿ ಬಾಗಿಲು ಹಾಕಿಕೊಂಡಳು. ಮತ್ತದೇ ಬಾಗಿಲಿಗೆ ಬೆನ್ನಾನಿಸಿ ಕುಸಿದು ಕೂತು ಅಳಲಾರಂಭಿಸಿದಳು, ಅವಳ ಕೈ ಹಿಡಿತದಲ್ಲೇ ಸಿಕ್ಕಿಕೊಂಡ ತನ್ನ ಕೈ ಬಿಡಿಸಿಕೊಳ್ಳಲಾಗದೆ ಇದ್ದ ಸೀತೆ ಕೂಡ ಅವಳೊಂದಿಗೆ ತಾರಾಡಿ ನೆಲಕ್ಕೆ ಬಿದ್ದಳು. ತಾಯ ಮಡಿಲಿಗೆ ತೆವಳಿ ಅಲ್ಲೇ ತಲೆಯಿಟ್ಟು ತಾಯ ಅಳುವಿನೊಂದಿಗೆ ತಾನೂ ದನಿ ಸೇರಿಸಿ ಅಳಲಾರಂಭಿಸಿದಳು. ತಾಯಿ, ಮಗಳ ಅಳು ಹಾಗೂ ಹೊರಗಿದ್ದ ಗಣಪಯ್ಯನ ಗೊಣಗಾಟ ಸೇರಿ ಆ ಮನೆಯ ಛಾವಣಿಯ ಮೇಲೆ ಹದ್ದಿನಂತೆ ಗಿರಕಿ ಹೊಡೆಯಲಾರಂಭಿಸಿತು. ನೋವಿನಿಂದ ನರಳುತ್ತಿದ್ದ ಗಣಪಯ್ಯನ ಉಸಾಬರಿ ಕೇಳಲು ಯಾವೊಬ್ಬ ಆಳೂ ಬರಲಿಲ್ಲ.

ತೋಟಕ್ಕೆ ಹರಡಿದ ಈ 'ಭಾಗೀರಥಿ ಮಹಾತ್ಮೆ' ಪ್ರಸಂಗ ವಿವಿಧ ರೆಕ್ಕೆ ಪುಕ್ಕಗಳೊಂದಿಗೆ ಬೇಗನೆ ಇಡೀ ಊರಿನಲ್ಲಿ ಹಾರತೊಡಗಿತು. ಕಂಡವರಿಗೆಲ್ಲಾ ವಿವಿಧ ವರ್ಣಗಳೊಂದಿಗೆ ಮನೋರಂಜನೆ ಒದಗಿಸಿದ ಈ ಪ್ರಸಂಗ ಗಣಪಯ್ಯನ ಆಪ್ತ ಮಿತ್ರ ಚಾಟು ಕಿವಿ ತಲುಪಿದೊಡನೆ ಆತ ಎದ್ದೆನೋ ಬಿದ್ದೇನೋ ಎಂಬAತೆ ಮಿತ್ರನ ರಕ್ಷಣೆಗೆ ಧಾವಿಸಿ ಅಲ್ಲಿ ಭಾಗೀರಥಿಯ ದರ್ಶನವಾದೊಡನೆ ಕಾಲಿಗೆ ಬುದ್ಧಿ ಹೇಳಿದ್ದೂ ಆಯಿತು. ಇದರಿಂದ ಮನೆಯಲ್ಲಿ ಭಾಗೀರಥಿ ಯಜಮಾನ್ತಿಯ ಪಟ್ಟಕ್ಕೇರಿದರೆ ಊರಿನ ಪತೀ ಪೀಡಿತ ಹೆಣ್ಣು ಮಕ್ಕಳಿಗೆ ನೂರಾನೆ ಬಲ ಬಂದಂತಾಯ್ತು.

ಭಾಗೀರಥಿ ಗಣಪಯ್ಯನ ಎರಡನೇ ಧರ್ಮಪತ್ನಿಯಾಗಿ ಕಾಲಿಟ್ಟಾಗಿನಿಂದ ಎಂದೂ ಹೊರಗೆ ಕಾಲಿಟ್ಟದ್ದೇ ಇಲ್ಲ, ಮನೆಯ ಹಿತ್ತಲು,ಅದಕ್ಕೆ ಅಂಟಿಕೊAಡAತೇ ಇದ್ದ ಪುಟ್ಟ ಕೆರೆ, ಕೊಟ್ಟಿಗೆ, ಬಚ್ಚಲುಮನೆ, ಅದರ ಪಕ್ಕದ ಹೊರಗಾದಾಗ ಕೂರುತ್ತಿದ್ದ ಬಾಣಂತಿ ಕೋಣೆ, ಅಂಗಳ, ಅನತಿ ದೂರದಲ್ಲಿದ್ದ ಬಾವಿ ಇವಿಷ್ಟೇ ಇವಳ ಜೀವನದ ಪರಿಧಿ. ತಂದೆ ತಾಯಿ, ಅಣ್ಣ, ತಮ್ಮ, ಅಕ್ಕ ಎಲ್ಲರೂ ಮೊದಮೊದಲ ಕೆಲದಿನಗಳಲ್ಲಿ ನೋಡಲು ಬಂದರಾದರೂ ಅಳಿಯ ದೇವರ ಅಸಹ್ಯ ನುಡಿಗಳು ಹಾಗೂ ಜಿಗುಪ್ಸೆ ಹುಟ್ಟಿಸುವ ವರ್ತನೆಗಳಿಗೆ ನೊಂದುಕೊಂಡು ಅದನ್ನೂ ನಿಲ್ಲಿಸಿದ್ದರು. ತವರಿನಿಂದಲೂ ದೂರವಾದ ಭಾಗೀರಥಿ, ವಿಕ್ಷಿಪ್ತ ಮನಸ್ಸಿನ ಗಣಪಯ್ಯನ ವಿಕೃತ ಕೃತ್ಯಗಳಿಗೆ ಬಲಿಪಶುವಾಗುತ್ತಲೇ ಹೋದಳು. ಮನೆ ಬಿಟ್ಟು ಎಲ್ಲೂ ಹೋಗುವಂತಿಲ್ಲ, ಯಾರನ್ನೂ ಮಾತನಾಡಿಸಲೂಬಾರದು.ಮನೆಯಲ್ಲಿ ಟಿವಿ, ರೇಡಿಯೋ, ಪೇಪರ್ಗಳ ಸುದ್ದಿ ಸುರಾಣವಿರಲಿಲ್ಲ, ಎಲ್ಲರೂ ಸಾಮಾನ್ಯವಾಗಿ ತೊಡುತ್ತಿದ್ದ ನೈಟಿಯನ್ನೂ ಹಾಕಲು ಬಿಡುತ್ತಿರಲಿಲ್ಲ. ಮದುವೆ, ಶಾಸ್ತ್ರಗಳು ಎಲ್ಲವನ್ನೂ ಮುಗಿಸಿ ತವರ ಬಿಟ್ಟು ಯಾವುದೇ ಸಂಭ್ರಮವಿಲ್ಲದೆ ಗಂಡನ ಮನೆ ಹೊಕ್ಕುತ್ತಿದ್ದಂತೆ ಓಡಿ ಬಂದು ಕಾಲ ತಬ್ಬಿದ್ದು ಗಣಪಯ್ಯನ ಮೊದಲನೇ ಹೆಂಡತಿ ಜಾನಕಿಯ ಒಂದೂವರೆ ವರ್ಷದ ಕೂಸು ಸೀತೆ. ದೈನ್ಯತೆಯ ಪುಟ್ಟ ರೂಪವಾಗಿದ್ದ ಅದನ್ನು ನೋಡಿದೊಡನೆ ಎತ್ತಿ ಬಾಚಿ ತಬ್ಬಿದ್ದಳು ಭಾಗೀರಥಿ. ಅಲ್ಲೇ ಕೂತು ಕುಟ್ಟಾಣಿಯಲ್ಲಿ ಎಲೆ ಅಡಿಕೆ ಕುಟ್ಟುತ್ತಿದ್ದ ಅತ್ತೆ ಎಂಬ ಮುದಿಜೀವ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು, ತನ್ನ ಕೆಲಸವಾಯಿತೆಂಬಂತೆ ಸೊಸೆ ಬಂದ ಎರಡೇ ತಿಂಗಳಲ್ಲಿ ಗೋಡೆ ಮೇಲಿನ ಪಟವಾಗಿತ್ತು. ತವರಲ್ಲಿ ಅಣ್ಣ, ಅಕ್ಕಂದಿರ ಮಕ್ಕಳನೊಡನಾಡಿ ಅವುಗಳ ಪ್ರೀತಿ ಸವಿದವಳಿಗೆ ಈ ಕಿಷ್ಕಿಂದೆಯಲ್ಲಿ ಅದೊಂದೇ ಸಂಜೀವಿನಿ. ಕೆಲಸ, ಮಗು, ದನ, ಕರುಗಳೊಂದಿಗೆ ಆರಾಮಾಗಿರುತ್ತಿದ್ದವಳಿಗೆ ಹೆದರಿಕೆ ಗಂಡನದ್ದೊಂದೇ, ಮನುಷ್ಯ ಹೀಗೂ ಇರಲು ಸಾಧ್ಯವೇ ಅನ್ನುವಷ್ಟು ಅಸಹ್ಯವಾಗಿ ವರ್ತಿಸುತ್ತಿದ್ದ. ಅವನ ಒರಟುತನ, ವಿಕೃತ ಬಯಕೆಗಳು, ಆ ಚಿಕ್ಕ ಮಗುವಿನ ಮೇಲೆ ಅವನಿಗಿದ್ದ ಅಸಾಧ್ಯ ದ್ವೇಷ, ಊಹೆಗೂ ಮೀರಿದ ಸಣ್ಣತನ, ದುರಾಸೆ ಮತ್ತು ಹಪಾಹಪಿ ಆತನನ್ನು ಇಡೀ ಮನುಷ್ಯಕುಲದಿಂದ ದೂರವಿರಿಸಿತ್ತು. ಆಳು, ಕಾಳುಗಳು ಹೋಗಲಿ ತಾಯಿ ಕೂಡ ಸೊಲ್ಲೆತ್ತಿಲ್ಲ ಎನ್ನುವುದು ಭಾಗೀರಥಿಗೆ ಅಂದಾಜಾಗಿತ್ತು. ನಿಧಾನಕ್ಕೆ ಹೆಣ್ಣಾಳುಗಳು ಒಂದಿಬ್ಬರು ಕದ್ದುಮುಚ್ಚಿ ಮಾತನಾಡಲಾರಂಭಿಸಿದ್ದರು. ಮತ್ತೆ ಮನುಷ್ಯ ಪ್ರಪಂಚಕ್ಕೆ ವಾಪಸು ಬಂದ ಹಾಗಾಗಿತ್ತು ಅವಳಿಗೆ. ಅದೆಷ್ಟು ಯತ್ನಿಸಿದರೂ ಸೀತೆ ಬೇರೆ ಮಕ್ಕಳಂತೆ ಸಹಜವಾಗಿ ಬೆಳೆಯಲೇ ಇಲ್ಲ, ಗಣಪಯ್ಯ ಅವಳನ್ನೆಷ್ಟು ದ್ವೇಷಿಸುತ್ತಿದ್ದನೋ ಅದಕ್ಕಿಂತ ಸಾವಿರಪಟ್ಟು ಅವಳು ಅವಳವನನ್ನ ದ್ವೇಷಿಸುತ್ತಿದ್ದಳು. ಪುಟ್ಟ ಮಗುವಿಗಿದ್ದ ಹೆದರಿಕೆ ಆಕೆ ಬೆಳೆದಂತೆ ತಿರಸ್ಕಾರ ಮತ್ತು ದ್ವೇಷಕ್ಕೆ ತಿರುಗಿತ್ತು. ಮೌನದಿಂದಲೇ ಹಗೆ ತೀರಿಸುತ್ತಿದ್ದ ಆಕೆಯ ವರ್ತನೆ ಗಣಪ್ಪಯ್ಯನಿಗೆ ನುಂಗಲಾರದ ತುತ್ತಾಗಿತ್ತು. ಕಾರಣವಿರಲಿ, ಬಿಡಲಿ ತಾಯಿ ಮಗಳಿಬ್ಬರಿಗೂ ನಿತ್ಯ ಕೊಳಕು ಮಾತುಗಳ, ಬೈಗುಳಗಳ ಪೂಜೆ ತಪ್ಪಿದ್ದಲ್ಲ. ಆಳುಗಳಿಗೆ ಕೊಟ್ಟಂತೆ ವರ್ಷಕ್ಕೆರಡು ಸಲ ಇವರಿಗೂ ಬಟ್ಟೆ-ಬರೆ ತರುತ್ತಿದ್ದ. ತೋಟದಾಳುಗಳು ಕೆಲವರು ಬೇರೆ ಕಡೆ ಕೆಲಸ ಸಿಗುತ್ತಿದ್ದಂತೆ ಬಿಟ್ಟು ಹೋಗಿ ಬಿಡುತ್ತಿದ್ದರು. ಒಂದೆರಡು ಹಿರಿ ತಲೆಗಳು ಬೇರೆ ಗತಿಯಿಲ್ಲದೆ ಬರುತ್ತಿದ್ದದ್ದು. ಒಟ್ಟಿನಲ್ಲಿ ಈ ಸರ್ವಾಧಿಕಾರಿಯ ಆಳ್ವಿಕೆಯಲ್ಲಿ ನರಳಿದವರೆಷ್ಟೋ ಜನ. ಭಾಗೀರಥಿ ಅದೆಷ್ಟು ಸಲ ಗರ್ಭ ಧರಿಸಿದಳೋ ಅವಳಿಗೆ ಗೊತ್ತಿಲ್ಲ, ಅದು ಗೊತ್ತಾಗುತ್ತಿದ್ದಂತೆ ದೈಹಿಕವಾಗಿ ಹಿಂಸಿಸಿ, ಒದ್ದು ಪ್ರತೀಸಲ ಮೈಯಿಳಿಯುವಂತೆ ಮಾಡುತ್ತಿದ್ದ ಆ ಮೃಗ. ಸೀತೆಯನ್ನು ಅವಳು ಹಚ್ಚಿಕೊಳ್ಳುವುದಂತೂ ಅವನಿಗೆ ಸಹಿಸಲಾಗುತ್ತಿರಲಿಲ್ಲ. ಅವನಿಲ್ಲದ ಸಮಯದಲ್ಲಿ ತಾಯಿ ಮಗಳು ಒಂದಿಷ್ಟು ನಿಮಿಷಗಳನ್ನು ಸಂತೈಸಿಕೊಂಡೋ, ಏನಾದರೂ ವಿಷಯಗಳಿದ್ದರೆ ಹಂಚಿಕೊಂಡೋ, ಬಾಸುಂಡೆ ಬಿದ್ದ ಜಾಗಗಳಿಗೆ ಕೊಬ್ಬರಿಯೆಣ್ಣೆ ಹಚ್ಚಿಕೊಂಡೋ ಇರುತ್ತಿದ್ದರು. ಬಾಯಿ ಬಾರದ ಮೂಕಪಶುಗಳೂ ನೆಕ್ಕಿಕೊಂಡು ಸಮಾಧಾನ ಮಾಡಿಕೊಳ್ಳುತ್ತಲ್ಲವೇ.

ಅವಾಗಾವಾಗ ಚಾಟುವಿನ ಸವಾರಿ ಅಲ್ಲಿಗೆ ಚಿತ್ತೈಸುತ್ತಿತ್ತು. ಅವಾಗೆಲ್ಲ ಭಾಗೀರಥಿ ಕುರುಕುಲು ತಿಂಡಿಗಳನ್ನು ಮಾಡಿ ಕೊಟ್ಟಿಗೆಯ ಪಕ್ಕದ ಬಚ್ಚಲುಮನೆಯ ಮೂಲೆಯಲ್ಲಿ ನಡೆಯುತ್ತಿದ್ದ ಅವರಿಬ್ಬರ ಪಾನಕೂಟಕ್ಕೆ ಸರಬರಾಜು ಮಾಡಬೇಕಾಗುತ್ತಿತ್ತು, ಚಾಟುವಿನ ತಲೆ ಕಂಡರಾಗುತ್ತಿರಲಿಲ್ಲ ಅವಳಿಗೆ, ಹೆಂಡತಿ ಚಂದ್ರಿಯನ್ನು ಊರವರಿಗೆ ತಲೆಹಿಡಿದು ಬದುಕುತ್ತಿದ್ದ ಆ ಮನುಷ್ಯ, ಸಹಿಸಿ ಸಹಿಸಿ ಸಾಕಾಗಿ ಚಂದ್ರಿ ಊರುಬಿಟ್ಟು ಹೋದಳು ಎಂದು ಮನೆಗೆಲಸದ ಅಪ್ಪಿ ಹೇಳಿದ್ದಳು. ಭಾಗೀರಥಿಯನ್ನು ಹಸಿದ ಕಣ್ಣುಗಳಿಂದ ನೋಡುತ್ತಾ ಅನಾವಶ್ಯಕವಾಗಿ ಹಲ್ಲು ಕಿರಿಯುತ್ತಾ "ಏನತ್ತಿಗೇ, ಆರಾಮ? " ಎನ್ನುತ್ತಿದ್ದ. ಸೀತೆಯನ್ನು ಅಪ್ಪಿ ತಪ್ಪಿಯೂ ಅವನೆದುರಿಗೆ ಬರಲು ಬಿಡುತ್ತಿರಲಿಲ್ಲ ಭಾಗೀರಥಿ. ಅದೊಂದು ದಿನ ಮಿಡಿ ಸೌತೆಯನ್ನು ತರಲು ಬೆಟ್ಟು ಗದ್ದೆಗೆ ಹೋಗಿದ್ದ ಸೀತೆಯನ್ನು ಅಕಸ್ಮಾತ್ತಾಗಿ ಕಿಟಕಿಯಿಂದ ನೋಡಿಬಿಟ್ಟ ಚಾಟು, ಪಾನಗೋಷ್ಠಿಗೆ ಉಪ್ಪಿನಕಾಯಿ ಬೇಕೆಂದು ಕೊಡಲು ಬಂದಿದ್ದ ಭಾಗೀರಥಿ ಆತ ಜೊಲ್ಲು ಸುರಿಸುವುದನ್ನು ನೋಡಿ ಕಂಗಾಲಾಗಿಬಿಟ್ಟಳು. ಅವಳು ಹೆದರಿದಂತೆಯೇ ಮರುದಿನವೇ ಮತ್ತೊಮ್ಮೆ "ಗಣಪಣ್ಣ ಒಳ್ಳೆ ಸೇಂದಿ ಸಿಕ್ತು, ಅದಕ್ಕೆ ಮತ್ತೆ ಬಂದೆ", ಅಂದವನೇ ಬಚ್ಚಲಿನ ಮೂಲೆ ಹಿಡಿದು ಕೂತುಬಿಟ್ಟ. ಅದೇನು ತಲೆತುಂಬಿದನೋ ಗಣಪಯ್ಯ, "ಆ ಶನಿ ಹತ್ತಿರ ತಿಂಡಿ ಕೊಟ್ಟು ಕಳಿಸೇ" ಎಂದು ಬೊಬ್ಬೆ ಹೊಡೆದ. ಎಲ್ಲಿಂದ ಧೈರ್ಯ ಬಂತೋ ಗೊತ್ತಿಲ್ಲ, ಭಾಗೀರಥಿ ತಾನೇ ತಿಂಡಿ, ಉಪ್ಪಿನಕಾಯಿ ಎಲ್ಲವನ್ನೂ ತೆಗೆದುಕೊಂಡು ತಾನೇ ಹೋಗಿದ್ದಳು, "ಅವಳು ಒಳಗಿಲ್ಲ" ಅಂದವಳೇ ಚಾಟುವಿನ ಗ್ರಹಚಾರ ಬಿಡಿಸುವವಳಂತೆ ಕ್ರೂರವಾಗಿ ದಿಟ್ಟಿಸಿದ್ದಳು. ಅದಾದ ನಂತರ ಚಾಟು ಪದೇ ಪದೇ ಎಡತಾಕುವುದು ಹೆಚ್ಚಾಗಿತ್ತು, ಆದರೆ ಅವಳು ಸೊಪ್ಪು ಹಾಕುತ್ತಿರಲಿಲ್ಲ.

ಇದಾದ ಮೇಲೆ ಸೀತೆಯ ಮದುವೆ ಮಾಡಬೇಕೆಂಬ ಹುಳ ಭಾಗೀರಥಿಯನ್ನು ಹೊಕ್ಕಿತ್ತು, ನಿಧಾನಕ್ಕೆ, ಗಣಪಯ್ಯನ ಮೂಡು ನೋಡಿಕೊಂಡು ಪ್ರಸ್ತಾಪ ಮಾಡಿದ್ದಳು. "ಅದಕ್ಕಿಷ್ಟು ದುಡ್ಡು ದಂಡ, ಇಲ್ಲೇ ಬಿದ್ದರಲಿ ದರಿದ್ರ " ಅಂದೆಲ್ಲಾ ಬೈದರೂ, ಹುಡುಗ ಹುಡುಕುವ ಪ್ರಹಸನ ಶುರುವಾಯ್ತು. ಗಣಪಯ್ಯನ ಮಗಳೆಂದೇ ಸಂಬಂಧಗಳು ಬರುತ್ತಿರಲಿಲ್ಲವಾದರೆ ಬಂದರೂ ಮಾತುಕತೆಯ ಹಂತದಲ್ಲೇ ಮುರಿದು ಬೀಳುತಿತ್ತು. ಭಾಗೀರಥಿ ಏನೆಲ್ಲಾ ಪಾಡುಪಟ್ಟರೂ ಗಣಪಯ್ಯನ 'ಕೆಲಸಕ್ಕೆ ಬಿಟ್ಟಿ ಜನ ಸಿಗುತ್ತೆ ನಿಮಗೆ, ಎರಡು ಹೊತ್ತು ಊಟ ಹಾಕಿದ್ರಾಯ್ತು, ವಧುದಕ್ಷಿಣೆ ಕೊಡಿ, ಖರ್ಚೆಲ್ಲಾ ನೀವೇ ನೋಡಿಕೊಳ್ಳಿ' ಎಂಬೆಲ್ಲಾ ವಾದಗಳಿಗೆ ಮಾತುಕತೆಗೆಂದು ಮನೆ ಬಾಗಿಲಿಗೆ ಬಂದವರೂ ಎದ್ದು ಹೋಗುತ್ತಿದ್ದರು. ಒಟ್ಟಾರೆ ಶನಿಯನ್ನು ಹೊರದೂಡುವಾಗಲಾದರೂ ಒಂದಿಷ್ಟು ದುಡ್ಡು ಮಾಡಿಕೊಳ್ಳಬಹುದು ಎಂಬ ಅವನಾಸೆ ಬರ ಬರುತ್ತಾ ನಿರಾಸೆಯಾದಂತೆ ಸೀತೆಯ ಪಾಲಿಗೆ ಜೀವನ ಇನ್ನಷ್ಟು ದುಸ್ತರವಾಗಲಾರಂಭಿಸಿತು. ಅದೆಷ್ಟು ಸಲ ಸೀರೆಯನ್ನು ಜಂತಿಗೆ ಬಿಗಿದಳೋ ಅವಳಿಗೇ ಗೊತ್ತಿಲ್ಲ, ಭಾಗೀರಥಿಯ ಕಣ್ಗಾವಲಿನಲ್ಲಿ ಅದಾಗಲೇ ಇಲ್ಲ. ಎಲ್ಲದರ ಮಧ್ಯೆಯೂ ಭಾಗೀರಥಿ ಮಗಳ ಒಳ್ಳೆ ಭವಿಷ್ಯದ ಕನಸ ನೇಯುವುದನ್ನು, ಅದನ್ನು ಮಗಳಿಗೆ ಹೇಳಿ ಅವಳಲ್ಲಿ ಕನಸು ಹುಟ್ಟು ಹಾಕುವುದನ್ನು ಬಿಡಲಿಲ್ಲ.

ಗಣಪಾಸುರ ಗರ್ವಭಂಗದ ಮರುದಿನದಿಂದ ಮನೆಯಲ್ಲಿ ಭಾಗೀರಥಿಯ ಆಳ್ವಿಕೆ ಶುರುವಾಯಿತು. ಗಣಪಯ್ಯ ಚಾವಡಿಯ ಒಂದು ಮೂಲೆಯಲ್ಲಿ ಬಿದ್ದಿರುತ್ತಿದ್ದ. ಊಟ, ತಿಂಡಿ ಅಲ್ಲಿಗೇ ಸರಬರಾಜಾಗುತ್ತಿತ್ತು. ಅಪ್ಪಿ ಹೇಳುವಂತೆ ಸಾಕ್ಷಾತ್ ಕಾಳಿಯೇ ಭಾಗೀರಥಿಯಲ್ಲಿ ನೆಲೆಸಿದಂತಾಯ್ತು. ಹೊಸ ಅಮ್ಮನನ್ನು ಮಾತನಾಡಿಸಲು ಆಳು-ಕಾಳುಗಳು ಬರುತ್ತಿದ್ದರು. ಅಸರಿಗೆ, ಅವರ ಊಟಕ್ಕೆ ಮತ್ತೊಂದು ಮಗದೊಂದಕ್ಕೆ ಎಂಬಂತೆ ಎಲ್ಲದರಲ್ಲೂ ಯಜಮಾನಿಕೆ ವಹಿಸಿ ಮಾತನಾಡುತ್ತಿದ್ದ ಭಾಗೀರಥಿ ಮತ್ತಷ್ಟು ಗಟ್ಟಿಯಾಗುತ್ತಾ, ಮಾಗುತ್ತಾ ತನ್ನ ಒಳ್ಳೆಯ ಆದರೆ ಸ್ಪಷ್ಟವಾದ ಮಾತುಗಳಿಂದ ಎಲ್ಲರ ವಿಶ್ವಾಸ ಗೆಲ್ಲುತ್ತಲೇ ಹೋದರೆ ಗಣಪಯ್ಯ ಮೂಲೆ ಹಿಡಿದ ಜೇಡದಂತಾದ. ಬಿದ್ದ ಪೆಟ್ಟು, ದೇಹಕ್ಕಷ್ಟೇ ಅಲ್ಲದೇ ಮನಸ್ಸಿಗೂ ಪರಿಣಾಮ ಬೀರಿತ್ತು. ಅಷ್ಟೆಲ್ಲಾ ಆದರೂ ದೇಹಕ್ಕಾದ ಪೆಟ್ಟು ಮಾಯುವವರೆಗೂ ತಿಂಗಳಾನುಗಟ್ಟಲೆ ಭಾಗೀರಥಿ ಮಾಡಿದ ಸೇವೆ ಅವನನ್ನು ಪೆಟ್ಟಿಗಿಂತ ಜಾಸ್ತಿ ನೋಯಿಸಿತ್ತು. ಪಂಡಿತರು ಕೊಟ್ಟ ಎಣ್ಣೆಯನ್ನು ಒಂದಿನಿತೂ ಬೇಸರಿಸದೆ ದಿನಕ್ಕೆರಡು ಸಲ ತಪ್ಪದೇ ಹಚ್ಚುತ್ತಿದ್ದಳು, ಅವನನ್ನು ನಿಧಾನಕ್ಕೆ ಏಳಿಸಿ ಹೊರಜಗಲಿಗೆ ತಂದು ಅಡಕೆ ಹಾಳೆಯನ್ನಿಟ್ಟು ಮಲ ಮೂತ್ರಗಳನ್ನೂ ಶುದ್ಧಿಗೊಳಿಸುತ್ತಿದ್ದಳು. ಸದಾ ಶೂನ್ಯದಲ್ಲಿ ದೃಷ್ಟಿ ಹಾಯಿಸಿ, ತನ್ನಷ್ಟಕ್ಕೆ ಸರಿ ತಪ್ಪುಗಳ ಬಗ್ಗೆ ಮಾತನಾಡುತ್ತಾ ಇಲ್ಲವೇ ಮಾಡಿದ ಅಷ್ಟೂ ವರ್ಷಗಳ ಪಾಪದ ಹೊರೆಯನ್ನು ಇಳಿಸುವಂತೆ ರಾಮನಾಮ ಹೇಳುತ್ತಾ ಕೂರುತ್ತಿದ್ದ. ಕೆಲವೊಮ್ಮೆ ತನ್ನ ತಂದೆ ತಾಯಿಯ ನೆನಪು ತೆಗೆದು, ಅವರ ಭಾವಚಿತ್ರಗಳನ್ನು ಕೈಲಿ ಹಿಡಿದು ಅಳುತ್ತಲೂ ಕೂರುತ್ತಿದ್ದ.

ಚಾಟುವಂತೂ ಈ ಕಡೆಗೆ ತಲೆ ಕೂಡಾ ಹಾಕುತ್ತಿರಲಿಲ್ಲ. ಸೀತೆಗೆ ಎಲ್ಲವೂ ಹೊಚ್ಚಹೊಸದು, ಎಲ್ಲಿ ಬೇಕೆಂದಲ್ಲಿ ಹೋಗಬಹುದಾದ ಸ್ವಾತಂತ್ರ್ಯ, ಜನರ ಮಾತುಗಳು, ನಗು, ಪ್ರೀತಿ ಎಲ್ಲವೂ ಜೀವನ ಪ್ರೀತಿಯನ್ನು ಹುಟ್ಟು ಹಾಕಿದ್ದವು. ಪಕ್ಕದ ಗದ್ದೆಯಂಚಿನವರೆಗೂ ನಡೆದುಹೋಗುತ್ತಿದ್ದಳು, ಗಂಟೆಗಟ್ಟಲೆ ನಿಂತು ಆಕಾಶ, ಹಕ್ಕಿಗಳನ್ನು ನೋಡುತ್ತಾ ನಿಲ್ಲುತ್ತಿದ್ದಳು. ಅಮ್ಮನ ಧೈರ್ಯ ಮಗಳಲ್ಲಿ ಹೊಸ ಲೋಕದ ಬಾಗಿಲನ್ನು ತೆರೆದಿತ್ತು. ದಿನಗಳೆದಂತೆ ಹಿಂದಣ ದಿನಗಳು ಅಸ್ಪಷ್ಟವಾಗುತ್ತಿದ್ದವು. ಅಮ್ಮನ ಯಜಮಾನಿಕೆಯಲ್ಲಿ ಗೇಣಿ ಲೆಕ್ಕ, ಅಡಕೆ ಮಾರಾಟ, ಆಳು-ಕಾಳುಗಳ ಸಂಬಳದ ಲೆಕ್ಕ, ವ್ಯವಹಾರ ಎಲ್ಲವನ್ನೂ ನಿಧಾನಕ್ಕೆ ಕಲಿಯುತ್ತಿದ್ದಳು. ಕಲಿತ ಅರ್ಧಂಬರ್ಧ ಶಾಲೆಯಿಂದ ಕಷ್ಟವಾದರೂ ಪಟ್ಟುಹಿಡಿದು ಎಲ್ಲವನ್ನೂ ಅರ್ಥ ಮಾಡಿಕೊಂಡಳು. ತಾಯಿ-ಮಗಳ ಜೀವನ ಒಂದು ಹಳಿಗೆ ಬಂದು ನಿಂತಿತ್ತು. ಗಣಪಯ್ಯನ ಕಡೆಗಿದ್ದ ಸೀತೆಯ ದ್ವೇಷ ಮಾತ್ರ ಕರಗಲೇ ಇಲ್ಲ.

ದಿನಗಳುರುಳಿ ಅದಾಗಲೇ ಎರಡು ವರ್ಷಗಳಾಗುತ್ತಾ ಬಂದಿತ್ತು, ಗಣಪಯ್ಯ ನಿಧಾನಕ್ಕೆ ಎದ್ದು ಬಾಗಿದ ಬೆನ್ನಿನೊಂದಿಗೆ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ, ಆಳುಗಳೊಂದಿಗೆ ಕೂತು ಅಡಿಕೆ ಸುಲಿಯುತ್ತಲೋ, ತೋಟದಲ್ಲಿ ಬಿದ್ದ ಅಡಿಕೆ, ಸೋಗೆ ಎತ್ತಿಕೊಂಡು ಬರುತ್ತಲೋ, ಕೊಟ್ಟಿಗೆ ಕೆಲಸ ಮಾಡುತ್ತಲೋ ಇರುತ್ತಿದ್ದ. ಭಾಗೀರಥಿಯೊಂದಿಗೆ ಅಲ್ಪಸಲ್ಪವಾದರೂ ಮಾತುಗಳಿತ್ತು, ಆದರೆ ಸೀತೆ ಮಾತು ಹೋಗಲಿ, ಅವನ ಮುಖವನ್ನೂ ನೋಡಲಿಷ್ಟಪಡುತ್ತಿರಲಿಲ್ಲ. ಅಪ್ಪಿ ಬರದಿದ್ದ ದಿನ, ಅಮ್ಮ ಹೊರಗಾದ ದಿನ ಅವನಿದ್ದಲ್ಲಿ ಹೋಗಿ ಅವನೆದುರು ತಟ್ಟೆಯನ್ನು ಕುಕ್ಕುತ್ತಿದ್ದಳೇ ಹೊರತು ಊಟಕ್ಕೆ ಬಾ ಎಂದೂ ಕರೆಯುತ್ತಿರಲಿಲ್ಲ. ಕಣ್ಣೆದಿರು ಕಾಣುತ್ತಿದ್ದ ಶಾಂತಿ, ಸಮಾಧಾನ, ನೆಮ್ಮದಿ, ಗೌರವದ ಬದುಕು ಗಣಪಯ್ಯನಂತ ಗಣಪಯ್ಯನಿಗೂ ಮೋಡಿ ಮಾಡಿತ್ತು. ಆಳುಗಳೂ ನಮ್ಮ ಧಣಿ ಬದಲಾದರಲ್ಲವೇ ಎಂದು ಮಾತನಾಡಿಕೊಳ್ಳುತ್ತಿದ್ದದ್ದು ಭಾಗೀರಥಿಯ ಕಿವಿಗೆ ಬಿದ್ದಾಗ ಅವಳ ತುಟಿಯಲ್ಲಿ ವಿಷಾದದ ನಗುವೊಂದು ಹಾದುಹೋಗಿತ್ತು. ಅದೊಂದು ಸಂಜೆ, ಬತ್ತಿ ಹೊಸೆಯುತ್ತಾ ಕೂತ ಭಾಗೀರಥಿಗೆ, ಆಳು ನಾಗ "ಅಮ್ಮ, ಯಾವುದೋ ಪತ್ರ ಬಂದಿತ್ತು, ನೋಡಿ" ಎಂದು ಕೊಟ್ಟ. ನನಗ್ಯಾರಪ್ಪ ಪತ್ರ ಬರೆಯುವವರು ಎಂದು ಬಿಚ್ಚಿಸಿ ನೋಡಿದರೆ ಮರತೇಹೋದಂತಿದ್ದ ತವರಿಂದ ಅಣ್ಣ ಬರೆದಿದ್ದ ಪತ್ರ. 'ಅಮ್ಮನಿಗೆ ತುಂಬಾ ಹುಷಾರಿಲ್ಲ, ನಿನ್ನ ನೋಡಲು ಆಸೆ ಮಾಡುತ್ತಿದ್ದಾರೆ, ಒಂದು ಸಲ ಬಂದು ಹೋಗು' ಎಂಬುದು ಅದರ ಸಾರಾಂಶ. ಎದೆಯಾಳದಲ್ಲೊಂದು ಅಲೆ ಕಲಕಿದಂತಾಗಿ ನೆನಪುಗಳು ನುಗ್ಗಿ ಬರಲಾರಂಭಿಸಿದವು. ಎಂದೂ ಬೈಯದೇ ಬರೀ ಪ್ರೀತಿಯನ್ನಷ್ಟೇ ಉಣಿಸಿದ ಜೀವವದು, ಅಷ್ಟು ಅಮೃತ ಕುಡಿದಿದ್ದರಿಂದಲೋ ಏನೋ ಇಷ್ಟೂ ವರ್ಷಗಳು ವಿಷವನ್ನು ಕುಡಿದು ಅರಗಿಸಿ ಬದುಕಲು ಸಾಧ್ಯವಾಯಿತು ಅನಿಸಿತು ಅವಳಿಗಾಕ್ಷಣ. ಅಪ್ಪ ಹೇಗಿರಬಹುದು. ಅವರಿಬ್ಬರಲ್ಲಿ ಜಗಳವನ್ನೇ ನೋಡಿರಲಿಲ್ಲವಲ್ಲ, ಎಷ್ಟೊಂದು ಪ್ರೀತಿಯಿತ್ತು. ಅಣ್ಣ ಮದುವೆಯಾದ ಮೇಲೆ ಅತ್ತಿಗೆಯ ಆಗಮನವಾಗುತ್ತಿದ್ದಂತೆ ಪರಿಸ್ಥಿತಿ ಹದೆಗಡಲಾರಂಭಿಸಿತು. ಮೂಲಾ ನಕ್ಷತ್ರದ ಪಟ್ಟ ಬೇರೆ ತಲೆ ಮೇಲೆ, ಇವಳೇ ಹಟ ಹಿಡಿದು ಎರಡನೇ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದಾಗ ಇಬ್ಬರೂ ಅದೆಷ್ಟು ನೊಂದುಕೊಂಡಿದ್ದರು, ಅಳಿಯನೂ ವಿಚಿತ್ರ ಸ್ವಭಾವದವನು ಎಂದು ತಿಳಿದಾಗಲೂ ಅವರ ದುಃಖ ಮೇರೆ ಮೀರಿತ್ತು. ಅವರ ಸಂಕಟ ನೋಡಲಾಗದೇ ಭಾಗೀರಥಿ ಸಂಬಂಧವನ್ನೇ ಕಡಿದು ಹಾಕುವಷ್ಟು ಕಲ್ಲಾಗಿ ಬದುಕುತ್ತಿದ್ದಳು. ಎಂದೋ ಒಂದು ಸಲ ಹಬ್ಬಕ್ಕೆ ಕರೆಯಲು ಬಂದವರು, ಕರುಳು ಕಿತ್ತು ಬರುವಂತೆ ಅತ್ತಿದ್ದರು. ಅದ್ಯಾವ ಘಳಿಗೆಯಲ್ಲಿ ಈ ಸಂಬಂಧಕ್ಕೆ ಒಪ್ಪಿದೆನೋ ಎಂದುಕೊಂಡು ನಿಟ್ಟುಸಿರುಬಿಟ್ಟಳು. ನೆನಪುಗಳ ಓಣಿಯಲ್ಲಿ ಸುತ್ತಾಡುತ್ತಿದ್ದವಳನ್ನು ಸೀತೆಯ ದನಿ ಎಚ್ಚರಿಸಿತು, "ಅಮ್ಮ, ನೋಡು ಎಷ್ಟು ಹೂವಿದೆ ಇವತ್ತು, ಕಟ್ಟಮ್ಮ" ಎಂದು ಉಡಿತುಂಬಾ ಜಾಜಿ ಹೂಗಳನ್ನು ತಂದಿದ್ದವಳು ಅಮ್ಮನೆದುರಿಗೆ ಸುರಿದಳು. ಕೋಣೆಯಿಡೀ ಹರಡಿದ ಸುಗಂಧ, ಕಣ್ಣಲ್ಲಿ ಕನಸುಗಳು ಮತ್ತು ನಳನಳಿಸುವ ಹರುಷದ ಮುಖ ನೋಡುತ್ತಿದ್ದಂತೆ ಅಷ್ಟು ಬೇಸರದ ಮಧ್ಯೆಯೂ ತಂಗಾಳಿಯೊಂದು ಸುಳಿದಂತಾಯ್ತು ಭಾಗೀರಥಿಗೆ. ಮಗಳಿಗೆ ಪತ್ರ ಕೊಟ್ಟು ಬಾಳೆನಾರಿನ ಹಗ್ಗದಿಂದ ಹೂವನ್ನು ಸುರಿಯತೊಡಗಿದಳು. "ಯಾರದಮ್ಮ ಪತ್ರ, ನಮಗ್ಯಾರು ಬರೆಯುವವರು" ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಾ ಓದತೊಡಗಿದವಳ ಮುಖ ಪತ್ರ ಮುಗಿಯುತ್ತಿದ್ದಂತೆ ಮ್ಲಾನವಾಯಿತು. "ನಾವಿಬ್ಬರೂ ಹೋಗೋಣ್ವಾ, ನಾನಾ ಅಜ್ಜ-ಅಜ್ಜಿಯನ್ನು ನೋಡಲೇ ಇಲ್ಲ" ಎಂದಳು. ಬರಿದೇ ತಲೆಯಾಡಿಸಿದ ಭಾಗೀರಥಿ "ತುಳಸಿಗೆ ದೀಪ ಹತ್ತಿಸು, ಕತ್ತಲಾಗ್ತಾ ಬಂತು, ಅಪ್ಪಯ್ಯನಿಗೆ ಕಷಾಯ ಕೊಟ್ಟಾಯ್ತಾ" ಎಂದು ಕೇಳಿದಳು. ಉತ್ತರ ನೀಡದೇ ಮುಖ ಹಿಂಡಿ ಬಚ್ಚಲಿಗೆ ಧಾವಿಸಿದ ಮಗಳನ್ನೇ ನೋಡಿದವಳು 'ಓಹ್! ಆಗಲೇ ತಿಂಗಳಾಯ್ತೇ, ಇನ್ನಿವಳನ್ನು ಕರೆದುಕೊಂಡು ಹೋಗಲಾಗುವುದಿಲ್ಲ, ಅಪ್ಪಿಯ ಮಗಳನ್ನು ಜೊತೆ ಮಾಡಿ ಬಿಟ್ಟು ಹೋಗಬೇಕಷ್ಟೆ' ಎಂದು ಲೆಕ್ಕ ಹಾಕಿದಳು. ಅಂತೆಯೇ ಅಪ್ಪಿಯ ಮಗಳು ಕಣ್ಣಿಯನ್ನು ಸೀತೆಯ ಜೊತೆ ಮಾಡಿದರೆ, ಅಪ್ಪಿ ಒಂದಿಷ್ಟು ಎಲ್ಲರಿಗೂ ಬೇಯಿಸಿ ಹಾಕುವುದಾಗಿಯೂ, ಭಾಗೀರಥಿ ನಾಗನೊಂದಿಗೆ ಬೆಳಗ್ಗೆ ಬಸ್ಸುಹಿಡಿಯುವುದಾಗಿಯೂ ನಿರ್ಧಾರವಾಯಿತು. ಬೆಳಗ್ಗೆ ಸೀತೆಗೊಂದು ಮಾತು ಹೇಳಲು ಬಾಣಂತಿಕೋಣೆಗೆ ಭಾಗೀರಥಿ ಬಂದಾಗ ಅವಳಿನ್ನೂ ಎದ್ದಿರಲಿಲ್ಲ, "ರಾತ್ರಿಯಿಡೀ ಹೊಟ್ಟೆನೋವಿಂದ ನರಳಿದರು ಸಣ್ಣಮ್ಮ" ಎಂದು ಕಣ್ಣಿ ಹೇಳಿದಳು. ಒಂದೂ ದಿನವೂ ಮಗಳನ್ನು ಬಿಟ್ಟು ಹೋಗದವಳಿಗೆ ಹೊರಡುವ ಗಳಿಗೆಗೆ ಒಂಥರಾ ಕಸಿವಿಸಿ, ಮಾತನಾಡಲೂ ಆಗಲಿಲ್ಲವಲ್ಲ ಎಂದುಕೊಂಡೇ ಹೊರಟಳು.

ಅಮ್ಮನಿಲ್ಲದೇ ಖಾಲಿಖಾಲಿ ಅನಿಸುತ್ತಿದ್ದ ಮನವನ್ನು ಸಂತೈಸಿಕೊಂಡೇ ಕಳೆದ ಸೀತೆಗೆ ಮನೆಯೊಳಗೆಯೂ, ಗದ್ದೆ ಸುತ್ತಲೂ ಹೋಗುವ ಹಾಗಿರಲಿಲ್ಲ, ಕಣ್ಣಿಯೊಡನೆ ಚೌಕಾಭಾರ ಆಡುತ್ತಾ, ಊರಿನ ಸುದ್ದಿ ಮಾತನಾಡುತ್ತಾ ದಿನ ಕಳೆದಳು. ಇಬ್ಬರು ಹರೆಯದ ಹುಡುಗಿಯರಿಗೆ ಮಾತಿನ ಬರವೇ? ದೀಪವಾರಿಸಿಯೂ, ಹಾಸಿಗೆಯ ಸುರುಳಿಗಳ ಮೇಲೆ ಬಿದ್ದುಕೊಂಡು ಅದೆಷ್ಟೋ ಹೊತ್ತು ಮಾತನಾಡುತ್ತಲೇ ಇದ್ದರು. ಅದು ಯಾವಾಗ ಕಣ್ಣೆಳಿಯಿತೊ, ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಬಚ್ಚಲಿನಿಂದ ಜೋರು, ಜೋರಾದ ಅಸ್ಪಷ್ಟ ಮಾತುಗಳು ಕೇಳಿಬಂದಂತಾಯ್ತು. ಸೀತೆ ಎದ್ದು ನಿಂತು ಮರದ ಅಡ್ಡಪಟ್ಟಿಗಳ ಕಿಟಕಿಗೆ ಮುಖವೊತ್ತಿ ಬಚ್ಚಲಿನ ಕಡೆ ಕಣ್ಣು ಹಾಯಿಸಿದರೆ ಮಂದಬೆಳಕಿನಲ್ಲಿ ಅಪ್ಪಯ್ಯ ಯಾರೊಡನೆಯೋ ಮಾತನಾಡುವುದು ಕಾಣಿಸಿತು. ಕಣ್ಣು ಕಿರಿದುಗೊಳಿಸಿ ನೋಡಿದರೆ ಚಾಟು, ಅಷ್ಟರಲ್ಲಿ ಕಣ್ಣಿಯೂ ಎದ್ದು ಇವಳ ಪಕ್ಕಕ್ಕೆ ಬಂದು ನಿಂತಿದ್ದವಳು "ಅರೇ!ಇದ್ಯಾಕೆ ಇಲ್ಲಿಗೆ ಬಂತು ಶನಿ?! ದೊಡ್ಡ ಅಮ್ಮ ಹೋಗಿದ್ದು ಇದಿಕ್ಕ್ಯಾರು ಹೇಳಿದ್ರೋ ಕಾಣೆ" ಎಂದು ಉದ್ಗರಿಸಿದಳು. ಯಾವುದರ ಬಗ್ಗೆಯೋ ಇಬ್ಬರಲ್ಲಿ ಚರ್ಚೆ ನಡೆದಿತ್ತು. ಬಾಗಿದ ಬೆನ್ನಿನ ಅಪ್ಪಯ್ಯನನ್ನು ನೋಡುತ್ತಿದ್ದಂತೆ ಸೀತೆಗೆ ಏನೋ ಅಸ್ಪಷ್ಟ ಭಾವನೆಯೊಂದು ಸುಳಿಯಿತು, ಅದೇನೆಂದು ಗೊತ್ತಾಗಲಿಲ್ಲ, ಆದರೆ ಚಾಟುವನ್ನು ನೋಡುತ್ತಿದ್ದಂತೆ ಹುಟ್ಟಿದ ಭಾವ ಮಾತ್ರ ಅಸಹ್ಯ, ಜಿಗುಪ್ಸೆ ಎಂಬುದು ಅರಿವಾಯಿತು. ಅವರೀರ್ವರ ಏರುದನಿಯ ಸಂಭಾಷಣೆ ಜಗಳಕ್ಕೆ ತಿರುಗಿ ಮೈಕೈ ಮಿಲಾಯಿಸುವ ಹಂತಕ್ಕಿಳಿಯಿತು, ಒಂದು ಹಂತದಲ್ಲಿ ಚಾಟು ಜೋರಾಗಿ ಅಪ್ಪಯ್ಯನನ್ನು ತಳ್ಳಿ ಅವರು ಇದ್ದ ಎರಡು ಮೆಟ್ಟಲಿನಿಂದ ಕೆಳಕ್ಕುರುಳಿದ್ದು ಕಂಡು ಸೀತೆ ಜೋರಾಗಿ ಕಿರುಚಿಕೊಂಡಳು. ತಿರುಗಿ ನೋಡಿದ ಚಾಟು, ಬಚ್ಚಲಿನಿಂದ ಇವರಿದ್ದ ಕೋಣೆಯ ಮಧ್ಯೆ ಇದ್ದ ಸಣ್ಣ ಕಟ್ಟೆಯನ್ನು ಹಾರಿಬಂದು ಕೋಣೆಯ ಬಾಗಿಲನ್ನು ಜೋರಾಗಿ ಒದ್ದ. ಒಳಗಿಂದ ಮರದ ಪಟ್ಟಿಯದೇ ಚಿಲಕ ಅಡ್ಡವಾಗಿದ್ದರಿಂದ ಬಾಗಿಲು ತೆರೆದುಕೊಳ್ಳಲಿಲ್ಲ. ಇಬ್ಬರು ಹುಡುಗಿಯರಿಗೂ ಅವನು ಒಳನುಗ್ಗುವ ಪ್ರಯತ್ನ ಮಾಡುತ್ತಿದ್ದಾನೆಂಬ ಅರಿವಾದಂತೆ "ಓಬಲಣ್ಣಾ, ಗೋಪಾಲಣ್ಣಾ, ರುಕ್ಮಿಣಿಯಕ್ಕ" ಎಂದು ಇದ್ದಬಿದ್ದವರ ಹೆಸರುಗಳನ್ನೆಲ್ಲಾ ಕಿರುಚಿ ಕರೆಯತೊಡಗಿದರು. ಅದೂ ಅಲ್ಲದೇ, ಸಮಯಪ್ರಜ್ಞೆಯಿಂದ ಕೋಣೆಯ ಮೂಲೆಯಲ್ಲಿ ಪೇರಿಸಿಟ್ಟ ಭಾರದ ನೇಗಿಲು, ಮತ್ತಿತ್ತರ ಮರದ ಸಾಮಾನುಗಳನ್ನು ತಂದು ಬಾಗಿಲಿಗೆ ಅಡ್ಡವಾಗಿಡಲಾರಂಭಿಸಿದರು. ಚಾಟುವಿನ ಮೈಯಲ್ಲಿ ರಾಕ್ಷಸ ಹೊಕ್ಕಿದ್ದ. ಎಲ್ಲಾ ಶಬ್ದಗಳು, ಕಿರುಚಾಟಕ್ಕೆ ರಾಜು ನಾಯಿಯೂ ಎದ್ದು ಬೊಗಳತೊಡಗಿದ, ಕೊಟ್ಟಿಗೆಯಲ್ಲಿದ್ದ ಹಸುಗಳೂ ಎದ್ದು ಅಂಬಾ ಎಂದು ಕರೆಯಲಾರಂಭಿಸಿದವು. ಇವರೆಲ್ಲರ ಸ್ವರಗಳನ್ನೂ ಮೀರಿಸುವ ಆರ್ಭಟವೊಂದು ಕೇಳಿಬಂತು, ಬಾಗಿಲಿನಿಂದ ಕಿಟಕಿಗೆ ಧಾವಿಸಿ ಸೀತೆ ನೋಡುತ್ತಾಳೆ, ಅಪ್ಪಯ್ಯ ಎದ್ದು ಬಂದು ನಿಂತಿದ್ದಾರೆ! ಮತ್ತೊಮ್ಮೆ ಸೂರು ಕಿತ್ತು ಹೋಗುವಂತೆ ಆರ್ಭಟಿಸಿದ ಅಪ್ಪಯ್ಯ, ಕೈಲಿದ್ದ ಅಡಿಕೆ ಮರಕ್ಕೆ ಔಷಧ ಹೊಡೆಯುವ ಸ್ಪ್ರೇಯರ್ ಟ್ಯಾಂಕಿನಿಂದ ಚಾಟು ತಲೆಗೆ ಜೋರಾಗಿ ಬಾರಿಸಿ, ಅವನ ತಲೆಯಿಂದ ರಕ್ತ ಕಾರಂಜಿಯಂತೆ ಚಿಮ್ಮಿತು. ಅದು ಗಣಪಯ್ಯನ ಮುಖವನ್ನು ನೆನಸಿದಂತೆ ನಿಧಾನಗತಿಯಲ್ಲಿ ಚಾಟು ಕೆಳಕ್ಕೆ ಕುಸಿದ. ಕೂಗಲೂ ಶಕ್ತಿಯಿಲ್ಲದೆ, ಅಪ್ಪಯ್ಯನನ್ನೇ ನೋಡುತ್ತಾ ಕಿಟಕಿಗೆ ಭಾರಹಾಕಿ ನಿಂತ ಸೀತೆಯ ಮೈ ನಡುಗುತ್ತಿತ್ತು, ನಿಧಾನಕ್ಕೆ ಕಣ್ಣಲ್ಲಿ ನೀರು ತುಂಬಲಾರಂಭಿಸಿತು.

Sunday, October 11, 2020

A life on our planet

 ಮೊದಲೆಲ್ಲಾ ಸುಮಾರು ಒಂದು ಲಕ್ಷ ವರ್ಷಗಳಿಗೊಮ್ಮೆ ತನ್ನ ಒಡಲಲ್ಲಿ ಹುದುಗಿದ್ದ ಲಾವಾವನ್ನು ಹೊರ ಕಕ್ಕುತ್ತಿದ್ದ ಭೂಮಿ ಇತ್ತೀಚೆಗೆ ಅದನ್ನು ಇನ್ನೂರು ವರ್ಷಗಳಿಗೊಮ್ಮೆ ಮಾಡಲಾರಂಭಿಸಿದ್ದಾಳೆ. ತೀರಾ ಇತ್ತೀಚಿನವರೆಗೂ ಮನುಷ್ಯ ಮಾಡಿದ ಅನಾಚಾರಗಳನ್ನು ನುಂಗಿ ಉಷ್ಣತೆಯನ್ನು ನಿಯಂತ್ರಿಸುತ್ತಿದ್ದ ಸಾಗರಗಳು ಕೈಚೆಲ್ಲಿದ್ದರಿಂದ ಜಗತ್ತಿನ ಐಸ್ ಕ್ಯಾಪುಗಳು ನಿಧಾನಕ್ಕೆ ಕರಗಲಾರಂಭಿಸಿವೆ. ಜೀವ ಜಗತ್ತಿನ ವೈವಿಧ್ಯತೆ, ದಟ್ಟ ಕಾಡುಗಳು ಆತಂಕಕಾರಿಯಾಗಿ ಕ್ಷೀಣಿಸತೊಡಗಿವೆ. ಕೇವಲ ಮನುಷ್ಯನಿಂದ ಮನುಷ್ಯನಿಗೋಸ್ಕರ ಮಾತ್ರ ಈ ಜಗತ್ತು ಸುತ್ತುತ್ತಿದೆ. 


ತನ್ನ ತೊಂಭತ್ತಮೂರು ವರ್ಷಗಳ ತುಂಬು ಬದುಕನ್ನು ಪ್ರಾಣಿ, ಪಕ್ಷಿ, ಗಿಡ, ಮರ ಹೀಗೆ ಪ್ರಕೃತಿಯ ವಿಸ್ಮಯಗಳ ಬಗ್ಗೆಯೇ ಸವೆಸಿದ ದೇವ ದೂತನೊಬ್ಬನ ಹತಾಶೆಯ ಕೂಗೇ a life on our planet. ಸರ್ ಡೇವಿಡ್ ಅಟೆನ್ ಬರ್ಗ್ ತನ್ನ ಚೆಂದದ ಆದರೆ ವಿಷಾದಭರಿತ ದನಿಯಲ್ಲಿ, 

ಆತಂಕ ಭರಿತ ನೀಲಿ ಕಣ್ಣುಗಳಲ್ಲಿ ನಮ್ಮನ್ನೇ ದಿಟ್ಟಿಸುತ್ತಾ ಈ ಅಂಶಗಳನ್ನು ಹೇಳುತ್ತಾ ಹೋದಂತೆ ಕರಾಳ ಭವಿಷ್ಯದ ಚಿತ್ರಗಳು ಕಣ್ಣೆದುರಿಗೆ ಬರಲಾರಂಭಿಸುತ್ತವೆ. 


ಮನುಷ್ಯನನ್ನು ಹೊರತುಪಡಿಸಿ ಪ್ರಕೃತಿಯಲ್ಲಿರುವ ಉಳಿದೆಲ್ಲಾ ಜೀವಜಂತುಗಳಿಗೂ ಅವುಗಳದ್ದೇ ಆದ ಉದ್ದೇಶವಿದೆ, ಅದರೊಂದಿಗೆ ಚೆಲ್ಲಾಟವಾಡಲು ಮನುಷ್ಯನಿಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟವಾಗಿ ನುಡಿಯುವ ಸರ್ ಅಟೆನ್ ಬರ್ಗ್ ಈ ಭೂಮಿಗೆ ಖಂಡಿತಕ್ಕೂ ಮನುಷ್ಯನ ಅವಶ್ಯಕತೆಯಿಲ್ಲ ಎಂದೂ ಸೇರಿಸುತ್ತಾರೆ. ಕಡಿಮೆಯಾಗುತ್ತಿರುವ ಮರಗಳು, ಏರುತ್ತಿರುವ ಕಾರ್ಬನ್, ಉಷ್ಣತೆಯಷ್ಟೇ ಅಲ್ಲದೇ ತೀವ್ರವಾಗಿ ಇಳಿಮುಖವಾಗುತ್ತಿರುವ ವನ್ಯಜೀವಿಗಳಿಂದ ಪರಿಸರ ಮತ್ತು ಹವಾಮಾನದ ಮೇಲಾಗುತ್ತಿರುವ ಅತೀ ಭಯಂಕರ ಪರಿಣಾಮಗಳನ್ನು ಎಳೆಎಳೆಯಾಗಿ ಅಂಕಿ ಅಂಶಗಳೊಂದಿಗೆ ವಿವರಿಸುತ್ತಾರೆ. ಬಹುಶಃ ಅವರು ನೋಡದ ಕಾಡುಗಳಿಲ್ಲ, ಅವರಿಗೆ ತಿಳಿಯದ ಜೀವ ವೈವಿಧ್ಯವಿಲ್ಲ. ತನ್ನ ಹರೆಯದ ದಿನಗಳಿಂದ ಇಲ್ಲಿಯವರೆಗೂ ಬದಲಾದ ಭೂಮಿಯ ಪರಿಸ್ಥಿತಿ ಹೇಳುತ್ತಿದ್ದಂತೆ ಅವರು ಹತಾಶರಾಗುತ್ತಾರೆ. 


ಹಾಗಿದ್ದಲ್ಲಿ ಇದು ಏಕಮುಖ ದಾರಿಯೇ, ಇದಕ್ಕೆ ಯೂ ಟರ್ನುಗಳಿಲ್ಲವೇ, ನಾವೇನೂ ಮಾಡಲಾಗುವುದಿಲ್ಲವೇ, ಮುಂದಿನ ಮಕ್ಕಳ ಭವಿಷ್ಯದ ಗತಿಯೇನು ಎಂದೆಲ್ಲಾ ಪ್ರಶ್ನೆಗಳು ನಮ್ಮಲ್ಲಿ ಹುಟ್ಟುತ್ತಿದ್ದಂತೆಯೇ ಸರ್ ಅಟೆನ್ ಬರ್ಗ್ ಸುಲಭ ಉಪಾಯಗಳನ್ನು ತಿಳಿಸಿಕೊಡುತ್ತಾರೆ. ರಣ ವಿಷದ ವಿಕಿರಣ ಹೊರಸೂಸಿ ಬದುಕಲು ಯೋಗ್ಯವಲ್ಲದಂತಾದ ಚರ್ನೋಬಿಲ್ ನಲ್ಲಿ ಮತ್ತೀಗ ನಿಧಾನಕ್ಕೆ ಪ್ರಕೃತಿ ಹಸಿರಾಗುತ್ತಿದ್ದಾಳೆ, ಹಕ್ಕಿಗಳು ಉಲಿಯತೊಡಗಿವೆ,  ಮೆತ್ತಗೆ ಒಂದೊಂದೇ ಪ್ರಾಣಿಗಳು ಓಡಾಡುತ್ತಿವೆ. 

ಅದೇ ರೀತಿ ನಾವೂ ಒಂದಿಷ್ಟು ವಿರಾಮ ನೀಡಿದಲ್ಲಿ ಭೂಮಿಯ ಗಾಯಗಳೂ ಮಾಯಬಹುದು, ನಾವು ಮಾಡಬಹುದಾಗಿಷ್ಟು.

1. ಜನಸಂಖ್ಯೆಯ ನಿಯಂತ್ರಣ 

2. ಕಾಡು ಕಡಿದು ಕೃಷಿಭೂಮಿ ಮಾಡುವುದು ಹಾಗೂ ಆ ಪರಿಸರಕ್ಕೆ ಹೊಂದದ, ಕೇವಲ ಲಾಭಕ್ಕಾಗಿ ಮರಗಳನ್ನು ಬೆಳೆಸುವುದನ್ನು ಪೂರ್ಣವಾಗಿ ನಿಲ್ಲಿಸುವುದು

3. ಅವಶ್ಯಕತೆಗಿಂತ ಜಾಸ್ತಿ ಮತ್ತು ಪದೇ ಪದೇ ಸಮುದ್ರದಿಂದ ಜಲಚರಗಳನ್ನು ತೆಗೆಯುವುದನ್ನು ಕಡಿಮೆ ಮಾಡುವುದು

4. ಧಂಡಿಯಾಗಿ ಭೂಮಿಗೆ ಸುರಿಯುತ್ತಿರುವ ಸೂರ್ಯನ ಬೆಳಕನ್ನು ಬಳಸುವುದು, ಸಾಧ್ಯವಾದಷ್ಟು ವಿಂಡ್ ಮಿಲ್ಲುಗಳನ್ನು ಸ್ಥಾಪಿಸುವುದು ಇತ್ಯಾದಿ.


ನಾಲ್ಕು ದಶಕಗಳ ನನ್ನದೇ ಬದುಕಲ್ಲಿ ಅದೆಷ್ಟು ಬದಲಾವಣೆಗಳನ್ನು ನಾನೂ ನೋಡಿದ್ದೇನೆ. ಅಣ್ಣ ಅಮ್ಮನ ವರ್ಗಾವಣೆಗಳಿಂದ ಸುತ್ತಿದ ಊರುಗಳನ್ನು ಮತ್ತೆ ಸಂದರ್ಶಿಸಿದಾಗ ಗುರುತೇ ಸಿಗದಷ್ಟು ಬೆಳೆದು ಹಸಿರು ಮಾಯವಾಗಿರುವುದನ್ನು ಗಮನಿಸಿದ್ದೇನೆ. ರಥೋತ್ಸವಕ್ಕೆ ಮಳೆ ಬಂದೇ ಬರುತ್ತದೆ, ಈ ಬೆಳೆಗೆ ಇಷ್ಟು ಮಳೆ ಸಾಕು ಎಂದುಕೊಂಡ ಹಿರಿಯರ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದು ಕಂಡಿದ್ದೇನೆ. ಮಳೆಗಾಲ, ಬೇಸಿಗೆಗಾಲಗಳು ವಿಚಿತ್ರವಾಗಿ ವರ್ತಿಸುವುದನ್ನು ನೋಡಿದಾಗ ರೈತರ, ಬೆಳೆಗಾರರ ಬಗ್ಗೆ ಯೋಚಿಸಿದ್ದೇನೆ.  ಕರಾವಳಿಯ ಗದ್ದೆ, ಕಾಡುಗಳು ಮಾಯವಾಗಿ ಕಾಂಕ್ರೀಟ್ ಕಾಡುಗಳಾಗುತ್ತಿದ್ದಂತೆ ಬೇಸಿಗೆಯಲ್ಲಿ ಕಾಲು ಹೊರಗಿಡಲಾರದಷ್ಟು ತಾಪಮಾನ ಏರಿದ್ದು ಅರಿವಾಗಿದೆ. 


ಟಿಕ್ ಟಾಕ್, ರೀಲ್ಸ್, ಗೇಮ್ಸ್,  ಯೂ ಟ್ಯೂಬುಗಳಲ್ಲಿ ಮುಳುಗೇಳುವ, ಬುದ್ಧಿ ಶಕ್ತಿಗಿಂತ ಬಾಹ್ಯ ರೂಪ, ಅದಕ್ಕಾಗಿ ಕಾಲ ವ್ಯಯಿಸುವ ಈಗಿನ ಯುವಕ / ಯುವತಿಯರಿಗೆ ಸುತ್ತಲಿನ ಪ್ರಪಂಚದ / ಆಗು ಹೋಗುಗಳ ಅರಿವಿದೆಯೇ? 


ಸುಮಾರು ಎರಡು ಘಂಟೆಗಳಿಷ್ಟಿರುವ ಡಾಕ್ಯುಮೆಂಟರಿ ನೋಡುತ್ತಿದ್ದಾಗ ಮುಂದಿನ ತಿಂಗಳು ಹದಿನಾಲ್ಕಕ್ಕೆ ಕಾಲಿಡುತ್ತಿರುವ ನನ್ನ ಮಗ ಮೂರು ನಾಲ್ಕು ಸಲ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ. ಬೆಂಕಿಪೊಟ್ಟಣದ ಥರ ಇರುವ ಅಪಾರ್ಟುಮೆಂಟುಗಳಲ್ಲಿ ಬದುಕುತ್ತಾ, ಬೆಳಗೆದ್ದರೆ ಹಾಲಿನ ಪ್ಲಾಸ್ಟಿಕ್ ಕತ್ತರಿಸುತ್ತಾ, ಪಕ್ಕಕ್ಕೆ ಕಾರಿನ ಶೋರೂಮಿನ ಕಾರುವಾಶು, ಮನೆ ಮುಂದೆ ಹಾದುಹೋಗುವ ಮೆಟ್ರೋ ಮತ್ತು ಟನ್ನುಗಟ್ಟಲೆ ವಾಹನಗಳ ಶಬ್ದದ ಮಧ್ಯೆ

ಬದುಕುತ್ತಿರುವ ನನ್ನಂತಹ ತಾಯಂದಿರು ಮಕ್ಕಳಿಗೆ ಪರಿಸರದ ಸಂರಕ್ಷಣೆ ಬಗ್ಗೆ ಏನು ಹೇಳಿಕೊಡಬಹುದು ನಿಜಕ್ಕೂ ಗೊತ್ತಿಲ್ಲ. 


ನಮ್ಮ ತೇಜಸ್ವಿ, ಕೃಪಾಕರ-ಸೇನಾನಿ,  ಜಿಮ್ ಕಾರ್ಬೆಟ್, ಕೆನೆತ್ ಆಂಡರ್ ಸನ್, ಸರ್ ಅಟೆನ್ ಬರ್ಗ್ ಹೀಗೆ ವನ್ಯಜೀವಿ ಸಂರಕ್ಷಣೆ, ಪರಿಸರ ಪ್ರೀತಿ ಹುಟ್ಟಿಸುವ ಸಂತರೆಲ್ಲರ ಪರಿಚಯ ಮಾಡಿಕೊಟ್ಟಿದ್ದೇನೆ. ಸಂಬಂಧಿಸಿದ ಸಾಕ್ಷ್ಯ ಚಿತ್ರಗಳನ್ನು ಹಾಕಿ ತೋರಿಸುತ್ತೇನೆ. ನೀರು, ಲೈಟು ಬಳಸದಿದ್ದಾಗ ಅವನಾಗೇ ಆಫ್ ಮಾಡುವಂತೆ, ಅನಾವಶ್ಯಕವಾಗಿ  ಹಾಳೆಗಳನ್ನು ಹಾಳು ಮಾಡದಂತೆ, ಹಸಿ ಮತ್ತು ಒಣ ಕಸದ ಬಗ್ಗೆ ಪದೇ ಪದೇ ಹೇಳುತ್ತಲೇ ಇರುತ್ತೇನೆ. ಮನೆ ತುಂಬ ತುಂಬಿಟ್ಟ ಗಿಡಗಳನ್ನು, ಪ್ರತಿಯೊಂದರ ತಳಿಗಳ ಬಗ್ಗೆ, ಅವಕ್ಕೆ ಬರುವ ಚಿಟ್ಟೆ, ಹುಳಗಳ ಬಗ್ಗೆ ಗಮನ ಸೆಳೆಯುತ್ತೇನೆ. ಸುತ್ತಾಡಲು ಹೊರಹೋದಾಗ ಕಾಣುವ ಮರ, ಗಿಡ, ಪ್ರಾಣಿಗಳ ಬಗ್ಗೆ ಹೇಳುವುದು ಇವಿಷ್ಟೂ ನಾನು ಮಾಡಬಹುದಾಗಿದ್ದು ಅಷ್ಟೇ. 


ತಂದೆ-ತಾಯಂದಿರೇ, ದಯವಿಟ್ಟು ನಿಮ್ಮ ಮಕ್ಕಳಿಗೆ ಇಂತಹ ವಿಡಿಯೋಗಳನ್ನು ತೋರಿಸಿ. ಶಾಲೆಯ ಆಡಳಿತ ಮಂಡಳಿಗಳೇ, ಇಂತಹ ಚಿತ್ರಗಳನ್ನು ಪಾಠದೊಂದಿಗೆ ಸೇರಿಸಿ. ನಮ್ಮ ಮಕ್ಕಳೂ ತೇಜಸ್ವಿ, ಅಟೆನ್ ಬರ್ಗ್ ಅವರಂತೆ ಪರಿಸರ ಪ್ರೇಮಿಗಳಾಗಲಿ. ಇತ್ತೀಚೆಗೆ ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕ ಪಡೆದು ಅರಣ್ಯ ಇಲಾಖೆ ಸೇರುತ್ತೇನೆಂದು ಹೇಳಿದ ಅನುಷ್ ಥರಹ ನಮ್ಮ ಮಕ್ಕಳೂ ಆಗಲಿ ಎಂಬುದು ನನ್ನಾಸೆ. 


ಈ ಸಾಕ್ಷ್ಯಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ. 


Dancing with birds ಮತ್ತು our planet ಕೂಡಾ ನೋಡಲೇ ಬೇಕಾದ ಇತರ ವಿಡಿಯೋಗಳು.