Monday, July 2, 2018

Putta

ಹೀಗೆಲ್ಲ ಮಾಡೋ ಪುಟ್ಟ ಇವಾಗ ಪ್ರತೀ ಸಲ ಧೋನಿಯನ್ನು  ನೋಡಿ, ಯಾಕೆ ರಿಟೈರ್ ಆದ ಅಂತ ಅಳುತ್ತಾನೆ.

1. ಡೋರೆಮಾನ್ ಎಂಬ ರೋಬೊ ಬೆಕ್ಕಣ್ಣ ಮತ್ತು ಉಡಾಳ ಹುಡುಗ ನೊಬಿಟಾನ ದೊಡ್ಡ ಅಭಿಮಾನಿ ನನ್ನ ಪುಟ್ಟ. ಸುಮಾರು ೯ ವರ್ಷದಿಂದ ಡೋರೆಮಾನ್ ಪುಟ್ಟನ ಜೀವನದ ಭಾಗವಾಗಿದ್ದಾನೆ. ಒಂದು ದಿನ ಎಪಿಸೋಡ್ ನೋಡುತ್ತಾ ಕೂತಿದ್ದವನು ಅಳಲಾರಂಭಿಸಿದ. ಎಷ್ಟು ಸಮಾಧಾನ ಮಾಡಿದರೂ ಅಳು ನಿಲ್ಲುತ್ತಲೇ ಇಲ್ಲ, ಸುಮಾರು ಅರ್ಧ ಮುಕ್ಕಾಲು ಗಂಟೆ ಅತ್ತ ಮೇಲೆ ಅವನು ಹೇಳಿದ್ದಿಷ್ಟು. "ನೊಬಿಟಾ ದೊಡ್ಡವನಾಗಿದ್ದಾನೆ, ಅವನಿಗೊಬ್ಬ ಮಗನೂ ಇದ್ದಾನೆ, ಆದರೆ ಡೋರೆಮಾನ್ ಮಾತ್ರ ಹಾಗೆ ಇದ್ದಾನೆ, ಅವನು ರೋಬೊ ಅಲ್ವ? ನೊಬಿಟಾ ಕೆಲಸ ಮುಗಿಸಿ ಬಂದಿದ್ದಾನೆ, ರಾತ್ರಿಯಾಗಿದೆ. ಡೋರೆಮಾನ್ ಅವನನ್ನು ಕೇಳುತ್ತಾನೆ. ನೊಬಿಟಾ, ಹೋಂ ವರ್ಕ್ ಮುಗಿಸಿದ್ಯಾ? " ಅಂತ. ಅದು ಹೇಳುತ್ತಾ ಮತ್ತಿಷ್ಟು ಅತ್ತ. ಅದಕ್ಕೆ ನೀನ್ಯಾಕೆ ಅಳಬೇಕು ಅಂದೆ. "ನಿಂಗೇನೂ ಅನಿಸಲ್ವಾ, ನಿಂಗರ್ಥ ಆಗಲ್ಲ, ಹೋಗು" ಎಂದು ಸಿಟ್ಟಲ್ಲಿ ಕಿರುಚಿದ. ಆಮೇಲೆ ನಂಗರ್ಥ ಆಯ್ತು ಪುಟ್ಟ ನಿನ್ನ ಫೀಲಿಂಗ್ಸ್, ಡೋರೆಮಾನ್ ಪಾಪ, ಅವನೆಷ್ಟು ಇನ್ನೋಸೆಂಟ್ ಅಂದಾದ ಮೇಲೆ ಮಾತಾಡಿದ್ದು.

2. ಪೋಕೆಮೊನ್ ಪುಟ್ಟನ ಇಷ್ಟದ ಇನ್ನೊಂದು ಕಾರ್ಟೂನು. ಅದ್ರಲ್ಲಿ ಪಿಕಾಚು ಅಂತ ಮುದ್ದು ಮುದ್ದಾಗಿರುವ ಅದೆಂತದೋ ಜೀವಿಯಿದೆ. ಒಬ್ಬ ಹುಡುಗನೊಟ್ಟಿಗೆ ಇರುವ ಅದನ್ನು ದೂರದ ಕಾಡಿಗೆ ತೆಗೆದುಕೊಂಡು ಹೋಗಿ ಅದರ ಹಾಗೆಯೇ ಇರುವ ಪಿಕಾಚುಗಳೊಂದಿಗೆ ಬಿಡುವ ಎಪಿಸೋಡಿಗೂ ಒಂದು ರಾಶಿ ಅತ್ತ. ನಾನು ಕೇಳಿದಾಗ ಮತ್ತದೇ ಡೈಲಾಗ್" ಹೋಗಮ್ಮ , ನಿಂಗೆ ಅರ್ಥ ಆಗಲ್ಲ".

3. ಹೊಪ್ಪ ಝುನ್ಯ ಝುನ್ಯ ಅಂತ ಈ ಪುಟಾಣಿ ಪಿಗ್ಗಣ್ಣ (https://youtu.be/j5yKCUToLSw) ಕುಕಿಗೆ ಆಸೆ ಮಾಡಿ ಕುಣಿದು ಕುಪ್ಪಳಿಸಿ ಒದ್ದಾಡೋದನ್ನು ನೋಡಿ ನಕ್ಕರೂ, ಕೊನೆಗೆ ಅವನ ಕೈಗೆ ಕುಕಿ ಸಿಕ್ಕರೂ ತಿನ್ನಲಾಗದ ಹಾಗೆ ಅವನ ಮುಖಕ್ಕೆ ಗಾಜಿನ ಜಾಡಿ ಬಿದ್ದಾಗ ಅಯ್ಯೋ ಪಾಪ ಎಂದೆ. "ಅಮ್ಮ, ನಿಂಗೆ ಬೇಜಾರಾಯ್ತಾ?, ಬೇಜಾರು ಮಾಡ್ಕೋಬೇಡಮ್ಮ ಅದು ಅನಿಮೇಷನ್ " ಅಂದ ನನ್ನ ಪುಟ್ಟ!

ಮೈಸೂರು ಜೂ ಬಗ್ಗೆ ಹೀಗೊಂದು ಚೆಂದದ ಡಾಕ್ಯುಮೆಂಟರಿ.

 ಇಲ್ಲಿ ನೀವು ಹ್ಯಾಂಡ್ಸಮ್ ಪೃಥ್ವಿ ಅವರಮ್ಮ ಮಾನ್ಯ, ಮ್ಯೂಸಿಷಿಯನ್ ಥರ ಕೈ ತಿರುಗಿಸೋ ಮೇಸನ್, ಗಳಿಗೆಗೊಮ್ಮೆ ಹುಲ್ಲಿನ ಹ್ಯಾಟ್ ತಲೆಗಿಟ್ಟು ಮತ್ತೆ ಬೀಳಿಸಿ ಮತ್ತೊಂದು ಹೊಸ ಹ್ಯಾಟ್ ಮಾಡಿಕೊಳ್ಳೋ ಅಭಿ, ಸುಮ್ಮನೆ ಬೋರ್ ಆದಾಗ ಜಗಳವಾಡೋ ಗಣೇಶ್ ಹಾಗೂ ದುರ್ಗಿ, ಸ್ನಾನ ಚೆನ್ನಾಗಿ ಮಾಡಿಸು ಅಂತ ಡಿಮ್ಯಾಂಡ್ ಮಾಡೋ ವಿರಾಟ್, ಹಲ್ಲುಜ್ಜಿಸಿಕೊಂಡು ಸರಿಯಾಗಿ ಬಾಯಿ ಕ್ಲೀನ್ ಮಾಡಿಸಿಕೊಳ್ಳುವ ಕೃಷ್ಣ,  ತನ್ನ ಊಟ ಮುಗಿಸಿ ಬೇರೆಯವರ ಲಂಚ್ ಬಾಕ್ಸಿಗೆ ದಾಳಿಯಿಡುವ ಚಾಮುಂಡಿ, ಬೆನ್ನು ತುರಿಸಿಕೊಳ್ಳಲು ಟೊಂಗೆಯನ್ನೇ ಸ್ಕ್ರಬ್ ಮಾಡಿಕೊಳ್ಳುವ ಜಾಣ ಆನೆ  ಎಲ್ಲರನ್ನೂ ನೋಡಬಹುದು. ಇವರೆಲ್ಲರ ಊಟದಲ್ಲಿ ಪಾಲು ಕೇಳಲು ಬರುವ ಅತಿಥಿಗಳನ್ನೂ ನೋಡಬಹುದು. 😊
ಇವಿಷ್ಟೂ ಅಲ್ಲದೆ ಅಷ್ಟು ಪ್ರಾಣಿಗಳ ಊಟ, ಉಪಚಾರ, ಆರೈಕೆ ಎಲ್ಲವನ್ನೂ ಸಂಕ್ಷಿಪ್ತವಾಗಿ ಆದರೆ ಸಮರ್ಥವಾಗಿ ಈ ವಿಡಿಯೋ ದಾಖಲಿಸಿದೆ. ಚೆಂದದ ನಿರೂಪಣೆ, ಸಂಗೀತ ಹಾಗೂ ಒಳ್ಳೆ ಕ್ವಾಲಿಟಿ ಇರುವ ಡಾಕ್ಯುಮೆಂಟರಿ.  ಮಕ್ಕಳು ಇದನ್ನು ಖಂಡಿತಕ್ಕೂ ಇಷ್ಟಪಡುತ್ತಾರೆ.

https://youtu.be/MuB7HHeuNbc

102 notout

೧೦೨ ನಾಟ್ ಔಟ್

ವೃದ್ಧ ಮನಸುಳ್ಳ ತರುಣರು ನೋಡಲೇಬೇಕಾದ ಚಿತ್ರವಿದು.
ನೂರಾಎರಡು ವರ್ಷದ ತರುಣ ಹಾಗೂ ಎಪ್ಪತ್ತೈದು ವರ್ಷದ ಅಜ್ಜ ಮಗ, ಇಬ್ಬರ ನಡುವಿನ ಜಟಾಪಟಿ ಈ ಚಿತ್ರದ ತಿರುಳು. ಯಾವಾಗಲೂ ಸಪ್ಪೆ ಮುಖ ಹಾಕಿ ಕೂರುವ, ಅವಶ್ಯಕತೆಯಿಲ್ಲದಿದ್ದರೂ ದಿನವೂ ವೈದ್ಯರನ್ನು  ಭೇಟಿಯಾಗುವ ಸಿಡುಕ ಮಗನಾಗಿ ರಿಷಿ ಕಪೂರ್ ಹಾಗೂ ಕಿಡಿಗೇಡಿ, ಚಿರ ಬಾಲಕನಾಗಿ ಅಮಿತಾಭ್ ಅದ್ಭುತವಾಗಿ ನಟಿಸಿದ್ದಾರೆ. ಬಗೆ ಬಗೆ ಸ್ಟೈಲಿಶ್ ಉಡುಪು, ತಕ್ಕಂತೆ ಕೇಶ ಶೈಲಿ, ಟೊಪ್ಪಿ, ಕೋಟು ಎಂದೆಲ್ಲ ಅಮಿತಾಭ್ ಮಿಂಚಿದರೆ, ಸಾದಾ ಬಟ್ಟೆಗಳಲ್ಲಿ ಡುಮ್ಮ ಹೊಟ್ಟೆಯ ರಿಷಿ ಕಾಣಿಸಿಕೊಳ್ಳುತ್ತಾರೆ. ಈ ಘಟಾನುಘಟಿಗಳ ಮಧ್ಯೆ ಮೂರನೇ ಪಾತ್ರವಾಗಿರುವ ಬೆರಗು ಕಣ್ಣಿನ, ಸಾದಾ ಸೀದಾ ಹುಡುಗ ಧೀರು (ಜಿಮೀತ್) ಕೂಡ ಇಷ್ಟವಾಗುತ್ತಾನೆ.
ಚಿತ್ರದ ಕಥೆ, ಜಾರುತ್ತಿರುವ ವಯಸ್ಸು ಅದರೊಂದಿಗೆ ಬದುಕುವ ರೀತಿ, ಮುರಿದೇ ಹೋದರೂ ಇದೆಯೆಂದು ಭ್ರಮೆ ಹುಟ್ಟಿಸುವ ಸಂಬಂಧಗಳ ಬಗ್ಗೆ  ಸ್ಪಷ್ಟವಾಗಿ ಮಾತನಾಡುತ್ತಾ ‘ಲೆಟ್ ಗೋ’ ಅನ್ನು ಹೇಳಿಕೊಡುತ್ತದೆ.
ಸಾವಿನ ಸೀನ್ ನೇರ ಇಲ್ಲದೆ ಹೋದರೂ ತನ್ನ ಭಾರ ಸ್ವರದಲ್ಲಿ, ಹತಾಶೆಯ ಮುಖಭಾವದಲ್ಲಿ ಅಮಿತಾಭ್ ಅದರ ನೆನಪನ್ನು  ಬಿಚ್ಚಿಡುವ ಭಾಗವಂತೂ ಅತ್ಯದ್ಭುತ. ವಿಷಾದ ರಸವನ್ನು ಮನದಲ್ಲಿ ಕಡೆದು ತೆಗೆಯುತ್ತದೆ ಆ ಸಂಭಾಷಣೆ. ಇಡೀ ಚಿತ್ರದಲ್ಲಿ ತುಂಬಿ ತುಳುಕುವ ಹಾಸ್ಯ ಈ ಭಾಗದಲ್ಲಿ ಮುಖ ಮುಚ್ಚಿ ಬಿಕ್ಕಳಿಸಿ ಅತ್ತುಬಿಡುತ್ತದೆ.
ಚಿತ್ರ ಶುರುವಾಗಿ ಮುಗಿದದ್ದೂ ಗೊತ್ತೇ ಆಗುವುದಿಲ್ಲ. ನಂಗಿಷ್ಟ ಇಲ್ಲ ದೊಡ್ಡವರ ಸಿನೆಮಾ ನೋಡೋದು ಎಂದು ದಪ್ಪ ಮುಖ ಹೊತ್ತು ಬಂದ ಹನ್ನೊಂದು ವರ್ಷದ ಪುಟ್ಟ ಕಿಟಿಕಿಟಿ ನಗುತ್ತಲೇ, ತುಂಬಾ ಖುಷಿಯಿಂದ ನೋಡಿದ.

Laura

ಚುಕ್ಕುಬುಕ್ಕುವಿಗಾಗಿ 4 ವರ್ಷದ ಹಿಂದೆ ಬರೆದಿದ್ದು.

ನನ್ನ ಲಾರಾ

ಲಾರಾ ನನ್ನ ಜೀವನಕ್ಕೆ ಬಂದು ಎಷ್ಟು ವರ್ಷಗಳಾದವೋ ನೆನಪಿಲ್ಲ. ನನ್ನ ಜೀವನದ ಭಾಗ ಅವಳು. ಮೊದಲು ನನಗೆ ಆ ಪುಸ್ತಕ ಸರಣಿಯ ಕೆಲವು ಭಾಗಗಳು ಮಾತ್ರ ದೊರಕಿದ್ದವು. ಅನಂತರ, ಮುದ್ರಣವಾಗಿರದ ಪುಸ್ತಕಗಳಿಗೆ ಅಲೆಯದ ಜಾಗವಿಲ್ಲ. ಯಾರ್ಯಾರ ಕಾಲು ಹಿಡಿದೆನೋ ನನಗೇ ತಿಳಿಯದು! ಉಡುಪಿಯಿಂದ ಮಂಗಳೂರು, ಮೂಡಿಗೆರೆ, ಮೈಸೂರು, ಬೀದರ್, ಬೆಂಗಳೂರು ಎಲ್ಲಾ ಜಾಲಾಡಿ ಮುಗಿಸಿದರೂ ಪುಸ್ತಕವೆಲ್ಲೂ ಸಿಗಲೇ ಇಲ್ಲ. ತುಂಬಾ ವರ್ಷಗಳು ಹುಡುಕಾಡಿದೆ ಲಾರಾಳಿಗಾಗಿ, ನೆನೆದಾಗೆಲ್ಲಾ ಬೇಸರವೆನಿಸುತ್ತಿತ್ತು. ನಾಲ್ಕು ವರ್ಷದ ಹಿಂದೆ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿಯವರು ಕೇವಲ ಮುಖಪರಿಚಯ ಮತ್ತು ಅವಾಗಲೇ ನೂರು ಸಲ ಪೀಡಿಸಿ ಪೀಡಿಸಿ ಇಟ್ಟಿದ್ದರಿಂದ ಅವರ ಬಳಿ ಹಳೇ ಕಾಪಿಗಳು ಇವೆ ಅಂದರು. ಅವರ ದಯೆಯಿಂದ ಅದನ್ನು ಜೆರಾಕ್ಸ್ ಮಾಡಿಸಿ (ಅವರು ನನಗೆ ಜೆರಾಕ್ಸ್ ಮಾಡಲು ಕೊಟ್ಟದ್ದೇ ನನ್ನ ಸಂತೋಷಕ್ಕೆ ಮಿತಿಯಲ್ಲದಂತಾಗಿತ್ತು, ನಾನ್ಯಾವತ್ತೂ ಋಣಿ ಅವರಿಗೆ) ಎಲ್ಲಾ ಪುಸ್ತಕಗಳನ್ನು ಒಟ್ಟಿಗೇ ಅಪ್ಪಿಕೊಂಡಾಗ ಆದ ಖುಷಿ ಹೇಳಲು ನನ್ನಲ್ಲಿ ಪದಗಳಿಲ್ಲ. ಅವನ್ನು ಓದಿ ಮುಗಿಸುವವರೆಗೆ ಮಾತು-ಕಥೆ ಎಲ್ಲಾ ಮರೆಯುತ್ತಿದ್ದೆ. ಇಂದಿಗೂ, ಲಾರಾ ಪುಸ್ತಕಗಳು ನನಗೆ ಚಟವಿದ್ದಂತೆ, ೨-೩ತಿಂಗಳಿಗೊಮ್ಮೆ ಓದದಿದ್ದರೆ ಏನೋ ಕಳಕೊಂಡ ಭಾವನೆ. ಸ್ವಭಾವತಃ ಪುಸ್ತಕ ಪ್ರ‍ೇಮಿಯಾದ ನನಗೆ ಈ ಪುಸ್ತಕಗಳು, ಅತೀ ಅಪರೂಪದ ಮಿಠಾಯಿಯೊಂದನ್ನು ಮುಚ್ಚಿಟ್ಟು ಪದೇ ಪದೇ ಕದ್ದು ಸವಿದ ಭಾವ. ಅಷ್ಟು ರುಚಿಯಾದ ಪುಸ್ತಕಗಳಿವು.

ಲಾರಾ ಕೊಡುವ ಜೀವನಾನುಭವ ತೀರಾ ದೊಡ್ಡದು, ಅವಳ ಬದುಕು, ಹೋರಾಟ, ಗಟ್ಟಿಗತನ ಎಂದೂ ಆದರ್ಶಪ್ರಾಯವೇ. ಅವಳ ಜೀವನ ಪಯಣ, ಆಗಿನ ಕಾಲದ ಜೀವನ ಶೈಲಿ, ಗೌರವಯುತ ನಡವಳಿಕೆ, ಮಕ್ಕಳಿಗೆ ಕಲಿಸುವ ಬಗೆ, ಮಕ್ಕಳು ಕಲಿಯುವ ಬಗೆ ಎಲ್ಲವನ್ನೂ ಒಂದೇ ಸಲಕ್ಕೆ ಹೇಳುವ ರೀತಿ ತೀರಾ ಆಪ್ತವೆನಿಸುತ್ತದೆ. ಓರ್ವ ತಾಯಿ ಅಥವಾ ತಂದೆಯ ಸ್ಥಾನದಲ್ಲಿ ನಿಂತು ನೋಡಿದಾಗ ಮಕ್ಕಳಿಗೆ ಒಳ್ಳೆಯ ವಿಚಾರ, ಶಿಸ್ತು, ಜೀವನ ಸಹಿಷ್ಣುತೆಯನ್ನು ಹೇಳುವ ಬಗೆಯನ್ನು ಅರ್ಥ ಮಾಡಿಕೊಡಿಸುವ ಈ ಕೃತಿ, ಮಕ್ಕಳ ಸ್ಥಾನದಲ್ಲಿ ನಿಂತು ನೋಡಿದಾಗ ಅವರ ಭಾವನೆಗಳು, ಅವರಿಗೆ ಹಿರಿಯರ ಭಾವಗಳು ಅರ್ಥವಾಗುವ ಪರಿಯನ್ನು ಎಳೆ ಎಳೆಯಾಗಿ, ಮೃದುವಾಗಿ ಬಿಡಿಸಿಕೊಡುತ್ತದೆ.  ಬಹುಶಃ ಅವಳು ಪಟ್ಟ ಪ್ರತಿಯೊಂದು ನೋವು-ನಲಿವುಗಳು ಎಂದಿಗೂ ಪ್ರಸ್ತುತವೆನಿಸುವ ಜೀವನ ಪಾಠಗಳು. ನೋವನ್ನು ವೈಭವೀಕರಿಸದೇ ನಲಿವನ್ನು ಎತ್ತಿ ಹಿಡಿಯುವ ಅವಳ ಬರಹ ಅನನ್ಯ. ಎಲ್ಲೂ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಭಾಗಗಳು ಅವಳೊಂದಿಗೆ ನಮ್ಮನ್ನೂ ದೊಡ್ಡ ಪ್ರಯರಿಯಲ್ಲಿ, ಸಿಲ್ವರ್ ಲೇಕ್ ದಡದಲ್ಲಿ, ವಿಸ್ಕಾನ್ಸ್ ಸನ್ನಿನಲ್ಲಿ, ದಟ್ಟ ಕಾಡುಗಳಲ್ಲಿ, ಪ್ಲಮ್ ನದಿ ತೀರದಲ್ಲಿ, ದೊಡ್ಡ ತೋಳಗಳೊಂದಿಗೆ, ಮಂಜಿನ ವಾತಾವರಣದಲ್ಲಿ ನಡೆದಾಡಿಸುತ್ತವೆ. ಹೆಜ್ಜೆ ಹೆಜ್ಜೆಗೂ ಅವಳ ಸಂತಸ, ದುಗುಡ, ಬಿದ್ದಲ್ಲೇ ಮತ್ತೆದ್ದು ನಡೆಯುವ ಛಲವನ್ನು ನಮ್ಮೊಳಗೇ ಪಡಿ ಮೂಡಿಸುತ್ತದೆ.

ಬೇರೆ ದೇಶದ ಕಥೆಯಾದರೂ ನಮ್ಮ ನೆಲದ ಛಾಯೆ ಈ ಕತೆಗಳಲ್ಲಿ ಸುಳಿದಾಡುತ್ತಿರುತ್ತದೆ. ದನ-ಕರು ಸಾಕುವುದು, ಕಸೂತಿ-ಹೆಣಿಗೆ, ಬೆಣ್ಣೆ-ಮಜ್ಜಿಗೆ, ಕುಂಬಳಕಾಯಿಯ ಖಾದ್ಯಗಳು, ಚೀಸ್ ಮಾಡುವ ರೀತಿ, ಹಳೇ ಉಡುಪುಗಳಿಂದ ತಯಾರಿಸಿದ ಕರ್ಟನ್ ಗಳೂ, ಟೇಬಲ್ ಕ್ಲಾತ್ ಗಳೂ, ಲೇಸ್ ಗಳೂ, ಹೊರ ಜಗತ್ತಿಗೆ ಬರುವ ಮೊದಲು ಮನೆಯಿಂದ ಹೊರಡುವ ರೀತಿ, ಮನೆಯ ಹೊರಗಿನವರೊಂದಿಗೆ ನಡೆದುಕೊಳ್ಳಬೇಕಾದ ರೀತಿ-ನೀತಿಗಳು, ಊಟ-ತಿಂಡಿ, ಅದಕ್ಕೆ ಕೊಡಬೇಕಾದ ಗೌರವ, ಶಿಕ್ಷಣದ ಅಗತ್ಯತೆ ಮತ್ತು ಅದಕ್ಕೆ ಕೊಡುವ ಪ್ರಾಧಾನ್ಯತೆ ಹೀಗೆ ಎಲ್ಲವೂ, ಎಲ್ಲವೂ ನಮ್ಮದೇ ನೆಲದ ಕಥೆ ಅನಿಸಿಬಿಡುತ್ತದೆ.

ಅತೀ ಭೀಕರ ಚಳಿಗಾಲದ ಸುಳಿಯಲ್ಲಿ ಅವಳ ಕುಟುಂಬ ಸಿಕ್ಕಿಬಿದ್ದಾಗ ಪಡುವ ಕಷ್ಟಗಳು, ಹಕ್ಕಿಗಳ ಧಾಳಿ, ಬೆಳೆ ನಾಶವಾದಾಗ ಅವರು ಒದ್ದಾಡುವ ರೀತಿ ಇವೆಲ್ಲಾ ನಿಮ್ಮಲ್ಲಿ ಅನುಕಂಪ ಹುಟ್ಟಿಸುವುದಿಲ್ಲ, ಬದಲಿಗೆ ಅವರು ಜೀವನ ಎದುರಿಸುವ ರೀತಿಗೆ ಸಲಾಮ್ ಹೊಡೆಯುವಂತೆ ಮಾಡುತ್ತದೆ. ಪದೇ ಪದೇ ಅಂಕಲ್ ಸ್ಯಾಮ್(ಸರಕಾರ) ನ ಪಣ ತೀರಿಸಲು ಹೋರಾಡುವ ಪಾ ಮತ್ತು ಲಾರಾಳ ಪತಿ ಅಲ್ಮಾಂಜೋ ವೈಲ್ಡರ್, ಪತಿಗೆ ಸಹಕಾರ ನೀಡುವ ಮಾ ಮತ್ತು ಲಾರಾ ಅಷ್ಟೇ ಅಲ್ಲ, ತಂದೆ-ತಾಯಿಗೆ ಮನೆ ನಡೆಸಲು ಸಹಾಯಕಳಾಗಿ ನಿಲ್ಲುವ ಲಾರಾ ಭಾರತದ ಯಾವುದೇ ಸಂಸಾರದ ಬಿಂದುಗಳು ಅನಿಸುವುದರಲ್ಲಿ ಒಂದಿನಿತೂ ಅಚ್ಚರಿಯಿಲ್ಲ. ತಗಡಿನ ಲೋಟ, ಕಲ್ಕಂಡು ಮಿಠಾಯಿಗಳಿಂದ ಕ್ರಿಸ್ ಮಸ್ ಆಚರಿಸುವ ಬಗೆ, ವಾರದ ದಿನಗಳಲ್ಲಿ ಕೆಲಸದ ಹಂಚಿಕೆ, ಲಾರಾಳ ಚಾರ್ಲಟ್ - ಅದನ್ನು ಕಳೆದು ಮತ್ತೆ ಪಡೆದದ್ದು, ಜಾಕ್ ಮತ್ತು ಲಾರಾಳ ಬಂಧ, ಮೊದಲ ರೈಲಿನ ಪಯಣವನ್ನು ಮಿಠಾಯಿಯಿಂದ ಆಚರಿಸಿದ ರೀತಿ, ಮೇರಿಗೆ ಲಾರಾ ಬೆಳಕಾಗುವ ಪರಿ, ಓಹ್! ಒಂದೇ ಎರಡೇ ಯಾವುದನ್ನು ಯೋಚಿಸಿದರೂ  ನಿಜಕ್ಕೂ ವಿಭಿನ್ನ ರೀತಿಯ ಖುಷಿ, ಸ್ಪಂದನೆ, ಭಾವಗಳನ್ನು ಕೊಡುವ ಬರಹಗಳಿವು.

ಲಾರಾ-ಮೇರಿಯಂತೆ ಹುಲ್ಲುಗಾವಲಿನಲ್ಲಿ ಬಿದ್ದು ಹೊರಳಾಡಬೇಕೆನಿಸುವ, ನದೀ ತೀರದಲ್ಲಿ ಪ್ಲಮ್ ಆರಿಸುವ, ಏಡಿಯೊಡನೆ ಆಟವಾಡುವ, ನದಿಯಲ್ಲಿ ಮೀನು ಹಿಡಿಯುವ, ಅಲ್ಮಾಂಜೋವಂತೆ ಬೇಸಿಗೆಯಲ್ಲಿ ಐಸ್ಕ್ರೀಮ್ ಮಾಡಿ ಸವಿಯುವ, ಅವನಂತೆ ಕುದುರೆ ಪಳಗಿಸುವ ಆಸೆ ಪ್ರತೀ ಸಲ ಓದುವಾಗ ನನ್ನಲ್ಲೂ ಉಕ್ಕುತ್ತದೆ. ಮಿ ಬೋಸ್ಟ್, ನೆಲ್, ರೆವೆರೆಂಡ್ ಆಲ್ಡೆನ್, ನೆಲ್ಲಿ, ಕ್ಯಾಪ್ ಗಾರ್ಲೆಂಡ್, ಐಡಾ, ಜಾಕ್, ಶೆಪ್, ಮಿಸ್ ವೈಲ್ಡರ್, ಬಿಗ್ ಸ್ಯಾಮ್ ಎಲ್ಲಾ ಪಾತ್ರಗಳೂ ಕಣ್ಣ ಮುಂದೆ ಹೋಗುತ್ತವೆ. ಆ ವ್ಯಕ್ತಿಗಳ ಜೊತೆ ಲಾರಾಳಂತೆ ನನಗೂ ಒಡನಾಟವಿದೆ. ಜಾಕ್ ಅಂತೂ ನನ್ನದೇ ಜತೆಗಾರನಾಗಿ ಬಿಟ್ಟಿದ್ದಾನೆ, ಅವನ ಪರಲೋಕ ಪಯಣ ಮನಸ್ಸನ್ನು ಪ್ರತೀಸಲ ಪೀಡಿಸುತ್ತದೆ.

ಮೂಲತಃ ಸಸ್ಯಾಹಾರಿಗಳಾದ ನಮಗೇ ಬಾಯಿಯಲ್ಲಿ ನೀರೂರಿಸುವಂತೆ ಮಾಡಿದ್ದಾಳೆ ಲಾರಾ, ಅವಳು ವಿವರಿಸಿದ ಹಂದಿ ಮಾಂಸವನ್ನು ಒಮ್ಮೆ ತಿನ್ನಬೇಕು ಅನಿಸಿತ್ತು ಎಂದು ಪ್ರಕಾಶ್ ಹಾಗೂ ಪ್ರಭಾ ದಂಪತಿಗಳು ನನ್ನಲ್ಲಿ ಹೇಳಿದ್ದು ನೆನಪಿದೆ. ಅಷ್ಟು ಚೆಂದದ ವಿವರಣೆ ಲಾರಳದ್ದು ಹಾಗೂ ನನಗೂ ಹಾಗೆಯೇ ಅನಿಸಿದ್ದು ಸುಳ್ಳಲ್ಲ! ಚೀಸ್, ಹಂದಿ ಮಾಂಸದ ಸಾಸೆಜ್,  ಹಿಕರಿ ಹೊಗೆಯಾಡಿಸಿದ ಜಿಂಕೆ ಮಾಂಸ, ಜಜ್ಜಿದ ಈರುಳ್ಳಿ, ಬೇಯಿಸಿದ ಬಿಳಿಯಾದ ಆಲೂಗಡ್ಡೆ, ಆಪಲ್ ಪೈ, ಕುಂಬಳ ಕಾಯಿ ಪೈ, ಬ್ಲಾಕ್ ಬರ್ಡ್ ಪೈ, ಟೊಮೇಟೊ ಮುರಬ್ಬ, ಕರಡಿ ಮಾಂಸ, ಕ್ಯಾರೆಟ್ ತುರಿಯಿಂದ ಬಣ್ಣಗೊಳಿಸಿದ ಹೊಂಬಣ್ಣದ ಬೆಣ್ಣೆ, ಕೆಂಪು ಕಪ್ಪು ಶುಂಠಿ ಖಾರ ಬಗೆ ಬಗೆ ಸ್ವಾದದ ಕಲ್ಕಂಡು ಮಿಠಾಯಿಗಳು, ಪ್ಲಂ ಹಣ್ಣುಗಳು, ಟರ್ನಿಪ್, ಮೇಪಲ್ ಸಕ್ಕರೆ, ಆಯಿಸ್ಟರ್ ಮೀನು-ಸೂಪು, ಪಾಪ್ ಕಾರ್ನ್ ಎಲ್ಲಾ ಬಿಡಿ ಕೊನೆಗೆ ಕೈಲ್ಲಿ ಬೀಸಿದ ಗೋಧಿಯಿಂದ ಮಾಡಿದ ಕಂದು ಒರಟು ಬ್ರೆಡ್ ಹೀಗೆ ಲಾರ ಬರೆದಿರುವ ತಿನಿಸುಗಳೆಲ್ಲವೂ ಓದುಗರ ಬಾಯಿಯಲ್ಲಿ ನೀರೂರಿಸುವಂತಿದೆ.

ಪ್ರತೀ ಮಗುವಿಗೂ, ತಾಯಿ-ತಂದೆಗೂ, ಗೆಳೆಯ-ಗೆಳತಿ ಯಾರಿಗೂ ಕೊಡಬಹುದಾದ ಅತೀ ಸುಂದರ ಉಡುಗೊರೆಯೆಂದರೆ ಈ ಪುಸ್ತಕಗಳು. ಎಷ್ಟು ಸಲ ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ, ಮತ್ತೂ ಹೊಸ ಹೊಸ ವಿಷಯಗಳನ್ನು ತಿಳಿಸಿಕೊಡುವ, ಕಷ್ಟಗಳ ಸರಮಾಲೆ ಎದುರಾದರೂ ಮುನ್ನುಗ್ಗಿ ನಡೆಯುವ ರೀತಿ ಹೇಳಿಕೊಡುವ ಅಪರೂಪದ ಪುಸ್ತಕಗಳಿವು.

ಅಂಕಿತ ಪುಸ್ತಕ ಸರಣಿಯ ಎಲ್ಲಾ ಪುಸ್ತಕಗಳನ್ನು ಮುದ್ರಿಸಿದೆ.

satyajit ray

ಯಾವ ಇಸವಿ ನೆನಪಿಲ್ಲ, ತುಷಾರದಲ್ಲಿ ಕಾರ್ವಸ್ ಎಂಬ ಜಾಣ ಕಾಗೆಯೊಂದರ ಕಥೆ ಓದಿದ್ದೆ. ಒಳ್ಳೆಯ ಮನಸ್ಸಿನ, ಭಾವುಕ ವಿಜ್ಞಾನಿಯೊಬ್ಬ ಕಾಗೆಯ ಜೊತೆಗೆ ಸ್ನೇಹ ಬೆಳೆಸಿ, ಅದನ್ನು ತರಬೇತಿಗೊಳಿಸಿ ಜಾಣನನ್ನಾಗಿಸುವ ಫ್ಯಾಂಟಸಿ ಕಥೆಯದು. ಮೊದಲ ಓದಿಗೆ ಅನಿಸಿದ್ದು, ಇದು ಖಂಡಿತಾ ಇಂಗ್ಲಿಷ್ ಕಥೆ, ಅದನ್ನು ಯಾರೋ ಅನುವಾದಿಸಿದ್ದಾರೆ ಎಂದು. ಆಮೇಲೆ ಅದೆಷ್ಟು ಸಲ ಓದಿದ್ದೇನೋ ತಿಳಿದಿಲ್ಲ, ಆ ಕಥೆ ತಲೆಯಲ್ಲಿ ಅಚ್ಚೊತ್ತಿದಂತೆ ಕುಳಿತುಬಿಟ್ಟಿತ್ತು, ಸಾಲದೆಂಬಂತೆ ಮನೆ ಹಿತ್ತಿಲಿಗೆ ಬರುವ ಕಾಗೆಗಳನ್ನೆಲ್ಲ ಗಮನವಿಟ್ಟು ನೋಡೋದು, ಯಾರಿಗೊತ್ತು ನನಗೂ ಒಂದು ಕಾರ್ವಸ್ ಸಿಗಬಹುದು, ಅದೂ ನನ್ನ ಜತೆ ಮಾಥ್ಸ್, ನಂಬರ್ಸ್ ಎಲ್ಲಾ ಕಲೀಬಹುದು ಎಂಬ ಕನಸುಗಳು ಬೇರೆ. ಆ ತುಷಾರವನ್ನು ನನ್ನ ನೋಟ್ ಬುಕ್ಕಿನೊಳಗೆ ಅಡಗಿಸಿ ಕದ್ದು ತಿನ್ನುವ ಬೆಲ್ಲದಂತೆ ಪದೇ ಪದೇ ಓದಿ ಖುಷಿಪಡುತ್ತಿದ್ದೆ. (ತರುವ ಪ್ರತೀ ಮಾಸಪತ್ರಿಕೆಗಳನ್ನು ತಿಂಗಳು ಹಾಗೂ ವರ್ಷಗಳ ಪ್ರಕಾರ ನೀಟಾಗಿ ಜೋಡಿಸಿ ಇಡುತ್ತಿದ್ದರು ನನ್ನ ತಂದೆ) ಸ್ವಲ್ಪ ಬುದ್ಧಿ ಬಂದ ಮೇಲೆ, ಆ ಕಥೆಯ ಬರಹಗಾರನ ಬರೆದ ಬೇರೆ ಕಥೆಗಳನ್ನೂ ಓದಬೇಕೆಂಬ ಹುಚ್ಚು ಬಲಿಯಲಾರಂಭಿಸಿತು. ಆ ಕಥೆಗಾರನ ಬಗ್ಗೆ ಆಗೊಮ್ಮೆ ಈಗೊಮ್ಮೆ ದೂರದರ್ಶನದಲ್ಲಿ ಕೇಳಿದ, ನೋಡಿದ ನೆನಪು. ಆತ ಸತ್ಯಜಿತ್ ರೇ. ಒಬ್ಬ ಒಳ್ಳೆ ಚಿತ್ರ ನಿರ್ದೇಶಕ ಎಂಬ ಮಾಹಿತಿ ಬಿಟ್ಟರೆ ಬೇರೆ ಏನೂ ತಿಳಿಯಲಿಲ್ಲ. ಯಥಾಪ್ರಕಾರ ಉಡುಪಿಯಲ್ಲಿ ಇದ್ದ ಕಾಮತ್ ಲೈಬ್ರರಿ, ಸಾರ್ವಜನಿಕ ಗ್ರಂಥಾಲಯಗಳನ್ನು ತಲೆ ಕೆಳಗೆ ಮಾಡಿದರೂ ಯಾವುದೇ ಪುಸ್ತಕವೂ ನನಗೆ ಸಿಗಲಿಲ್ಲ. ಮಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಧಾರವಾಡ, ಸಾಹಿತ್ಯ ಸಮ್ಮೇಳನಗಳು, ಬೆಂಗಳೂರಿನ ಎಲ್ಲಾ ಪುಸ್ತಕ ಮಳಿಗೆಗಳು ಹೀಗೆ ಹೋದ ಕಡೆಯೆಲ್ಲಾ ಜಾಲಾಡಿದೆ, ಇಂಗ್ಲೀಷಿನಲ್ಲಿ ಬೇರೆ ಬೇರೆ ಪುಸ್ತಕಗಳು ದೊರೆತವೇ ಹೊರತು, ಅನುವಾದಿತ ಕಥಾ ಸಂಕಲನ ಸಿಗಲಿಲ್ಲ. ಆ ವ್ಯಕ್ತಿಯ ಬಗ್ಗೆ, ಪಥೇರ್ ಪಾಂಚಾಲಿಯ ಬಗ್ಗೆ ಇನ್ನಷ್ಟು ತಿಳಿಯಿತು, ಎಂತಹ ಅದ್ಭುತ ವ್ಯಕ್ತಿ ಎಂಬುದು ಅರಿವಾದಂತೆ ಕನ್ನಡಕ್ಕೆ ಅನುವಾದವಾದ ಅವರ ಎಲ್ಲ ಕಥೆಗಳನ್ನೂ ಓದಬೇಕೆಂಬ ಚಡಪಡಿಕೆ ಶುರುವಾಯಿತು. ಇವೆಲ್ಲದರ ಮಧ್ಯೆ ನಾನು ಅಡಗಿಸಿಟ್ಟ ಪ್ರತಿ ಕಳೆದು ಹೋಗಿ ಅನುವಾದಕರ ಹೆಸರೂ ತಿಳಿಯದೆ ಒದ್ದಾಡುವಂತಾಯಿತು. ಇಂಟರ್ನೆಟ್, youtube ಬಂದ ಮೇಲೆ ಅವರ ಇಂಡಿಗೋ ಕಥೆಯನ್ನು ಇಂಗ್ಲೀಷಿನಲ್ಲಿ ಓದಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಇದರ ಮಧ್ಯೆ ಸಾಹಿತ್ಯ ಸಮ್ಮೇಳನವೊಂದರಲ್ಲಿ ಸತ್ಯಜಿತ್ ರೇ ಕಥೆಗಳು ಎಂಬ ಪುಸ್ತಕ ಕಣ್ಣಿಗೆ ಬಿದ್ದಾಗ ಕುಣಿಯುವುದೊಂದೇ ಬಾಕಿ. ಈ ಪುಸ್ತಕ ಕೈಗೆ ಬಂದ ನಂತರ ಕಡಿಮೆಯೆಂದರೆ ೨೦ ಸಲವಾದರೂ ಓದಿರಬೇಕು. ಪ್ರತೀ ಸಲವೂ ಅದೇ ಬೆರಗು, ಕೌತುಕವನ್ನು ಹುಟ್ಟಿಸುತ್ತದೆ. ಎಂತೆಂತ ಕಥೆಗಳಪ್ಪ! ಈ ಮನುಷ್ಯನಿಗೆ ಈ ಥರದ ಯೋಚನೆಯಾದರೂ ಹೇಗೆ ಹುಟ್ಟಿತ್ತು ?
ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ, ಅನುವಾದಕ ಹೇಳುವಂತೆ ಕಲ್ಪನೆ, ವಾಸ್ತವ, ಫ್ಯಾಂಟಸಿ, ವೈಜ್ಞಾನಿಕ ಸತ್ಯ, ಮನುಷ್ಯ ಸ್ವಭಾವದ ನಿಗೂಢತೆ ಹೀಗೆ ಅನೇಕ ಸಂಗತಿಗಳನ್ನು ಉಚಿತ ಪ್ರಮಾಣದಲ್ಲಿ ಬಳಸಿ ರಚಿತವಾದ ಕಥೆಗಳಿವು.
ಖಗಂನಲ್ಲಿ ಹಾವಾಗುವ ಮನುಷ್ಯ, ಸಿನಿಮಾದಲ್ಲಿ ಅಭಿನಯಿಸುವ ಪಟೊಲ್ ಬಾಬು (youtube ಅಲ್ಲಿ ಕಾಮಿಕ್ ಬುಕ್ ಇದೆ), ತುಳಸಿಬಾಬುವಿನ ಬಿಲ್ ಎಂಬ ಹಕ್ಕಿ, ಅಶಮಂಜ ಬಾಬುವಿನ ನಗುವ ಬ್ರೌನಿ, ತದ್ರೂಪಿಯ ರತನ್ ಬಾಬು - ಮಣಿಲಾಲ್, ಪದೇ ಪದೇ ಕಾಡುವ ನೀಲಿ ತೋಟದ ಇರುಳು (ಇಂಡಿಗೋ), ದ್ವಂದ ಯುದ್ಧ, ಮೊದಲೇ ಹೇಳಿದ ಜಾಣ ಕಾರ್ವಸ್, ಅದ್ಭುತ ಟೆಲಸ್, ಸಹಾರಾ ರಹಸ್ಯದ ಡೆಮಿಟ್ರಿಯಸ್ ಎಂಬ ಜೀವವಿಜ್ಞಾನಿ, ಕಂಡೂ ಕಾಣದ ಏಕ ಶೃಂಗಿ ಎಲ್ಲರೂ ಈ ಪುಸ್ತಕದ ಪಯಣದ ಸಹಪಯಣಿಗರು. ಪ್ರತೀ ಕಥೆಯನ್ನೂ ನಿಧಾನವಾಗಿ ಹನಿಹನಿಯಾಗಿ ಚಪ್ಪರಿಸಿಕೊಂಡು ಓದಬಹುದು. ಕಣ್ಣು ಮುಚ್ಚಿದರೆ ಅತಿಮಾನುಷ ಲೋಕಕ್ಕೆ ತೆರಳಿದ ಅನುಭವ. ವಾಸ್ತವ ಮತ್ತು ಫ್ಯಾಂಟಸಿ ನಡುವಿನ ಗೆರೆಯನ್ನು ಅಲ್ಲಲ್ಲಿ ಸತ್ಯಜಿತ್ ರೇ ಅಳಿಸಿಬಿಡುತ್ತಾರೆ. ಪ್ರಾಣಿ, ಪಕ್ಷಿಗಳು ಮತ್ತು ಪರಿಸರದ ಅವರ ಅಪಾರ ಜ್ಞಾನ ಪದೇ ಪದೇ ಈ ಕಥೆಗಳಲ್ಲಿ ಕಂಡುಬರುತ್ತದೆ. ಆಸಕ್ತಿದಾಯಕ ವಿಚಾರಗಳನ್ನು ತಿಳಿಸುತ್ತದೆ. ಮಾನಸ ಸರೋವರದಲ್ಲಾಚೆಯೆಲ್ಲೋ ಇರಬಹುದಾದ ಡುಂಗ್-ಲುಂಗ್-ಡೋ ಕೈಬೀಸಿ ಕರೆಯುತ್ತದೆ! ಪುಸ್ತಕ ಕೆಳಗಿಟ್ಟ ಮೇಲೆ ಒಂದು ಚಿಕ್ಕ ನಿಟ್ಟುಸಿರು,' ಅಯ್ಯೋ, ಕಥೆಗಳು ಮುಗಿದೇ ಹೋದವಲ್ಲ? '
ತದ್ರೂಪಿ ಕಥೆಯನ್ನು ನಾನು ಓದಿ ರೆಕಾರ್ಡ್ ಮಾಡಿಕೊಂಡು ನನ್ನ ಮಗನಿಗೆ ಕೇಳಿಸಿದ್ದೇನೆ. ದೊಡ್ಡವರಿಗಷ್ಟೇ ಅಲ್ಲದೆ ಮಕ್ಕಳಿಗೆ ಕಾಣಿಕೆಯಾಗಿ ನೀಡಬಹುದಾದ ಒಂದೊಳ್ಳೆ ಪುಸ್ತಕ.
ಪ್ರಿಸಂ ಬುಕ್ಸ್ ಇದನ್ನು ಪ್ರಕಟಿಸಿದ್ದು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿರುವವರು ಎನ್ ಶ್ರೀನಿವಾಸ್ ಉಡುಪ.

Monday, February 19, 2018

ಓದಲಾರೆನೆಂದರೆ ಓದದಿರಲಿ ಹ್ಯಾಗೆ?

ಅದೆಲ್ಲಿ ಯಾವಾಗ ಶುರುವಾಯಿತು ನೆನಪಿಲ್ಲ, ಅದೊಂದು ತೀವ್ರ ನಶೆ. ಏನಾದರೂ ಓದದೇ ಹೋದರೆ ಸಾಯಬೇಕಿನ್ನಿಸುವಷ್ಟು. ಪ್ರತೀ ಪುಸ್ತಕದಲ್ಲಿಯೂ ಒಂದೊಂದು ಲೋಕ. ಈ ಲೋಕ ಬಿಟ್ಟು ಆ ಲೋಕದಲ್ಲಿ ಕಳೆದು ಹೋಗುವ ತೀವ್ರ ತವಕ.  ಎಷ್ಟು ಬಗೆ ಬಗೆಯ ಕಥೆಗಳು ನಡೆದಲ್ಲಿ, ಕೂತಲ್ಲಿ, ಹೊರಳಿದಲ್ಲಿ. ಬದುಕಿನದೇ ಕಥೆಗಳು ಪುಸ್ತಕದಲ್ಲಿವೆಯೋ, ಪುಸ್ತಕದ ಕಥೆಗಳು ಬದುಕಾಗಿವೆಯೋ, ಒಂದರೊಳಗೊಂದು ಹೊಸೆದ ಜಡೆ.  ಯಾವುದೋ ಕಾಡಿನ ಯಾವುದೋ ಹಕ್ಕಿಯ ಉಲಿತ, ಹುಲಿಯ ಹೆಜ್ಜೆಯ ಸದ್ದು, ಇದ್ಯಾವುದೋ ಕುಗ್ರಾಮದ ಬಡವನ ಹಸಿವಿನ ಅಳು, ಮಹಾ ಸಾಮ್ರಾಜ್ಯದ ರಾಣಿಯ ನಿಟ್ಟುಸಿರು, ಇಂಚಿಂಚು ತಿನ್ನುವ ರೋಗಕ್ಕೆ ಬಲಿಯಾದರೂ ಛಲ ಬಿಡದ ಗಟ್ಟಿ ಮನುಷ್ಯರ ನಗು, ಹಸಿವನ್ನೂ, ನಗುವನ್ನೂ ರಾಗವಾಗಿ ಹಾಡುವ ಕವನಗಳ ಸ್ವರ, ಶೋಷಣೆಗೆ ಬಲಿಯಾದವರು ಆಕ್ರೋಶ, ದ್ವೇಷಗಳಿಲ್ಲದೆ ಹೇಳುವ ಅತೀ ತಣ್ಣಗಿನ ಮಾತುಗಳು, ಅಘೋರಿಗಳ, ಸಾಧುಗಳ, ಮಾಟ ಮಂತ್ರಗಳ ಲೋಕದಿಂದ ಹೊರಹೊಮ್ಮುವ ಘೋಷಗಳು, ಪ್ರಪಂಚದ ಮೂಲೆ ಮೂಲೆಗಳಿಂದ ಕನ್ನಡೀಕರಣಗೊಂಡು ಇಲ್ಲೇ ಹರಿಯುವ ನದಿಗಳ ಜುಳು ಜುಳು ನಾದ! ಬದುಕು ಅದೆಷ್ಟು ದೊಡ್ಡದು ಎಂದು ಕ್ಷಣ ಕ್ಷಣ ತಿಳಿಸುವ ನೂರಾರು ಗುರುಗಳಿಗೆ ಸಹಸ್ರ ಕೋಟಿ ನಮನಗಳು. ತಿರುಗಲ ತಿಪ್ಪಿಯಂತಹ ಮನಸ್ಸು, ಸಾಕಷ್ಟು ಸುತ್ತಲೇ ಇಲ್ಲ, ಇನ್ನೂ ಏನೇನೋ ನೋಡಬೇಕಿತ್ತು, ಕಾಲ ಜಾರುತ್ತಿದೆ ಅನಿಸಿದಾಗೆಲ್ಲಾ ಹೇ, ನಾನಿದ್ದೀನಿ ಎಂದು ಹಾರಿ ಬಂದು ಕೈಯೊಳಗೆ ಕೂರುವ ಇವುಗಳು ನನ್ನಿಂದ ಎಂದೂ ಜಾರಿ ಹೋಗದಿರಲಿ. ಕೆ ಟಿ ಗಟ್ಟಿ ತಮ್ಮ ಆತ್ಮಕಥನ ತೀರದ ಮುನ್ನುಡಿಯಲ್ಲಿ ಹೇಳುತ್ತಾರೆ, ‘ ಮನುಷ್ಯನನ್ನು ಮನುಷ್ಯನನ್ನಾಗಿಸುವುದು ಪುಸ್ತಕಗಳು’ ಎಂದು. ಇನ್ನೂ ಮನುಷ್ಯಳಾಗುವುದು ಬಾಕಿ ಇದೆ, ಅಷ್ಟು ಓದುವಷ್ಟು ಆಯುಷ್ಯ, ಕಣ್ಣು, ಆರೋಗ್ಯ ಇದ್ದರೆ ಸಾಕಿತ್ತು. , ಕರೆದುಕೊಂಡು ಹೋಗಲು ಅದ್ಯಾರೋ ಮೂಲೆಯಲ್ಲಿ ಕೂತು ಕಾಯುತ್ತಿದ್ದಾರೆ, ಆದಷ್ಟು ಬೇಗ ಬೇಗ ಓದೋಣ ಅನ್ನುವ ಧಾವಂತ ಹುಟ್ಟಲಿ ಪ್ರತಿದಿನ ಪ್ರತಿಕ್ಷಣ ಮನಸ್ಸಿಗೆ. ಎಷ್ಟು ಓದಿದರೂ ಚೆನ್ನಾಗಿ ಬರೆಯಲಾರೆನೆಂಬ ಕೊರಗಿತ್ತು ಒಂದಿಷ್ಟು ದಿನ, ಇವಾಗ ಓದಿದಾಗ ಸಿಗುವ ಖುಷಿ, ನಶೆ ಅದನ್ನು ಮರೆಸಿದೆ. ಓದಿನ ಸಲುವಾಗಿಯೇ ಆತ್ಮೀಯವಾಗುವ ಆತ್ಮ ಬಂಧುಗಳು ಅದೆಷ್ಟೋ ...
ಇವನ್ನೆಲ್ಲಾ ಅನುಭವಿಸುವ ಮನಸ್ಸನ್ನು ರೂಪುಗೊಳಿಸಿದ ತಂದೆ, ತಾಯಿ, ಅಕ್ಕ ಮತ್ತು ಶಾಲೆಯ ಟೀಚರುಗಳಿಗೆ ಶರಣು. 
ಎಲ್ಲಕ್ಕೂ ಮುಖ್ಯವಾಗಿ ಎಷ್ಟು ಕಷ್ಟಪಟ್ಟು ಬರೆಯುವ ಲೇಖಕರು ಮತ್ತು ಉತ್ತಮ ಅಭಿರುಚಿಯ ಪುಸ್ತಕವೊಂದನ್ನು  ಹೊರತರಲು ಶ್ರಮಿಸುವ ಎಲ್ಲರೂ ಸುಖವಾಗಿರಲಿ. ಆ ಪುಸ್ತಕಗಳ ಮೇಲೆ ಸಿನೆಮಾ, ಧಾರವಾಹಿ, ಆಡಿಯೋ ಬುಕ್  ಮಾಡಿ ಇನ್ನಷ್ಟು ಜನರಿಗೆ ತಲುಪಿಸುವವರೂ ಹೆಚ್ಚಾಗಲಿ. 
ಓದಲಾರೆನೆಂದರೆ ಓದದಿರಲಿ ಹ್ಯಾಗೆ? 
(ಪುಸ್ತಕಗಳ ಮೈದಡುವುತ್ತಾ, ಸ್ಪರ್ಶ ಸುಖ ಅನುಭವಿಸುತ್ತಾ ಅನಿಸಿದ್ದು!)

Friday, January 6, 2017