Wednesday, June 19, 2019

ಚೆರ್ನೋಬಿಲ್

ಇಲ್ಲಿ ಯಾರೂ ಎದೆ ಬಡಿದುಕೊಂಡು ಕರುಳು ಕಿತ್ತು ಬರುವಂತೆ ಅಳುವುದಿಲ್ಲ. ಕಿವಿ ತಮಟೆ ಹರಿಯುವ ಶಬ್ದಗಳಿಲ್ಲ. ಪ್ರತಿಯೊಬ್ಬರೂ ಒಂದು ಚೂರೂ ಪ್ರತಿಭಟನೆ ತೋರದೇ ತಮ್ಮನ್ನು ತಾವೇ ಪರಿಸ್ಥಿತಿಗೆ ಒಡ್ಡಿಕೊಳ್ಳುತ್ತಾರೆ. ಸಾವು ಬೆನ್ನಟ್ಟುವಾಗ ಬದುಕಲು ಆಶಿಸುವವರನ್ನು ನೋಡುವುದಕ್ಕಿಂತ ಕಷ್ಟವಾಗುವುದು ಸಾವನ್ನಪ್ಪಲು ತಯಾರಾಗಿ ಕೂತ ಇವರನ್ನು ನೋಡುವುದು. ಪ್ರಾಣಿಗಳಾಗಲಿ, ಮನುಷ್ಯರಾಗಲಿ ಎಲ್ಲರ ಮುಖದಲ್ಲೂ ವಿಚಿತ್ರ ಕಳೆ, ಅದು ಸಾವಿನದ್ದು. ಭೂಮಿಯಡಿ ಒಂದು ಚೂರೂ ಬಟ್ಟೆಯಿಲ್ಲದೇ ಕೆಲಸ ಮಾಡುವ ಮೈನಿಂಗ್ ಕೆಲಸಗಾರರಾಗಲಿ, ಸೈನಿಕರ ದಿರಿಸು ತೊಟ್ಟು ಪ್ರಾಣಿಗಳನ್ನು ಹುಡುಕಿ ಕೊಲ್ಲುವವರ ಮುಖದಲ್ಲಾಗಲಿ ವಿಲಕ್ಷಣ ನಿರ್ವಿಕಾರತೆ. ಅದೇ ನೋಡುಗನ ಹೊಟ್ಟೆ ತೊಳೆಸುವಂತೆ ಮಾಡುತ್ತದೆ, ತಲ್ಲಣ ಹುಟ್ಟಿಸುತ್ತದೆ. ಅಲ್ಲ್ಯಾರಿಗೂ ತಾವು ಮಾಡಿದ ಅಪರಾಧವೇನೆಂದು ಗೊತ್ತಿಲ್ಲ.

ಮಣ್ಣಿನಡಿ ಹುಡಿ ಹುಡಿಯಾಗುವ ಎಕರೆಗಟ್ಟಲೆ ಕ್ಯಾಬೇಜುಗಳು, ಕಾಂಕ್ರೀಟಿನಲ್ಲಿ ಮುಚ್ಚಿ ಹೋಗುವ ಲೋಹದ ಶವಪೆಟ್ಟಿಗೆಗಳು, ಸಿಳ್ಳೆ ಹಾಕಿ ಕರೆದೊಡನೆ ಓಡಿ ಬಂದು  ಗುಂಡು ತಿಂದು ಸಾಯುವ ಸಾಕು ನಾಯಿಗಳು, ಅವುಗಳನ್ನು ಮತ್ತೆ ಕಾಂಕ್ರೀಟ್ ಹಾಕಿ ಸಾಮೂಹಿಕ ಸಮಾಧಿ ಮಾಡುವ ರೀತಿ! ಅಬ್ಬಾ! ಇಷ್ಟೇ ಅಲ್ಲ, ಖಾಲಿ ಹೊಡೆಯುವ ಸುಂದರ ಅಪಾರ್ಟುಮೆಂಟುಗಳು, ನಿಶಬ್ದ ಮನೆಗಳು, ಅಂಗಳದಲ್ಲಿ ಕಟ್ಟಿರುವ ತಂತಿ ಮೇಲೆ ಯಾರಾದರೂ ತೆಗೆಯಬಹುದೆಂದು ಕಾಯುತ್ತಾ, ಗಾಳಿಗೆ ಹಾರಾಡುವ ಒಣ ಬಟ್ಟೆಗಳು, ಕ್ಲಿಪ್ಪುಗಳು, ಬೆಳಗೆದ್ದು ಮಡಿಸಿರದ ಹಾಸಿಗೆ, ಬೆಡ್ ಶೀಟುಗಳು! ಇಂತಹ ದೃಶ್ಯಗಳ ಮೂಲಕ ಹೀಗೂ ಕಥೆಯನ್ನು ಯಾರಾದರೂ ಕಟ್ಟಬಹುದಲ್ಲ?

ನಿಮಿಷ ನಿಮಿಷಕ್ಕೂ ಹೊರ ಸೂಸುತ್ತಿರುವ ವಿಕಿರಣದ ವಿಷವನ್ನು ಉಸಿರಾಡುತ್ತಿರುವವರನ್ನು ಕಂಡಾಗೆಲ್ಲಾ ಸತ್ತವರೆಲ್ಲಾ ಪುಣ್ಯವಂತರು, ಇವರೂ ಸಹಜವಾಗಿ ಸಾಯಲಿ ಎಂದು ಗೊತ್ತಿಲ್ಲದೇ ನಮ್ಮ ಮನಸ್ಸು ಬೇಡಲಾರಂಭಿಸುತ್ತದೆ. ಮೈಯಿಡೀ ರಕ್ತ ಸುರಿಸಿ, ಕೊಳೆತು ಸಾಯುವ ಗಂಡನನ್ನು ನೋಡುವ ಹೆಂಡತಿಯ ಕಣ್ಣ ನೀರು ನಮ್ಮ ಕಣ್ಣಂಚಿನಲ್ಲೂ ಇಳಿಯುತ್ತದೆ.  ಲೇಬರ್ ವಾರ್ಡಿನ ಹಾಸಿಗೆಯಂಚಿಗೆ ಕುಳಿತು, ಎದುರಿಗಿದ್ದ ಪರದೆ ಆ ಕಡೆ ಇರುವ ಕಾಣದ ತಾಯಿ ಮತ್ತು ಮಕ್ಕಳನ್ನು ಸುಮ್ಮನೆ ಕೂತು ದಿಟ್ಟಿಸಿ ನೋಡುವ ಖಾಲಿ ಕೈಯ ತಾಯಿ ನಿಟ್ಟುಸಿರು ಹುಟ್ಟಿಸುತ್ತಾಳೆ.  ಅಲ್ಲಿ ನಡೆಯುವುದೆಲ್ಲವೂ ನಿಜಕ್ಕೂ ನಡೆದಿತ್ತು ಅನ್ನುವುದೇ ಅಕ್ಷರಶಃ ಹುಚ್ಚು ಹಿಡಿಸುತ್ತದೆ. ಇಂತಹ ಘನ ಘೋರ ವಿಷದೊಂದಿಗೆ ಚೆಲ್ಲಾಟವಾಡುವ ಮನುಷ್ಯನ ಹುಚ್ಚು ಬೆರಗು ಮೂಡಿಸುತ್ತದೆ. ಇನ್ನೂ ಚೆಲ್ಲಾಟವಾಡುತ್ತಲೇ ಇದ್ದೇವೆ. ಅದ್ಯಾವ ನಂಬಿಕೆಯಲ್ಲಿ ನಾವು ಬದುಕು ಸವೆಸುತ್ತಿದ್ದೇವೆ? ಗೊತ್ತಿಲ್ಲ!

ಒಂದು ದುರಂತ ಕಥೆಯನ್ನು ಅದ್ಯಾವ ರೀತಿಯಲ್ಲಿ ಹೇಳಬಹುದು? ಪೂರ್ತಿ ನಾಟಕೀಯವಾಗಿ ಇಲ್ಲವೇ ಡಾಕ್ಯುಮೆಂಟರಿಯ ರೂಪದಲ್ಲಿ ಅಲ್ಲವೇ? ಎರಡೂ ಅಲ್ಲದೇ ತಣ್ಣಗಿನ ಸ್ವರದಲ್ಲಿ, ಅಷ್ಟೇ ತಣ್ಣಗಿನ ದೃಶ್ಯ ಹಾಗೂ ಪಾತ್ರಧಾರಿಗಳ ಮೂಲಕ ದುರಂತವನ್ನು ಎಲ್ಲೂ ವಿಜೃಂಭಿಸದೇ ಹೇಳುತ್ತಾ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ ಹೆಚ್ ಬಿ ಓನ ಮಿನಿ ಸೀರೀಸ್
ಚೆರ್ನೋಬಿಲ್. ಮನುಷ್ಯನ ಅಹಂಕಾರ, ಅತೀ ಬುದ್ಧಿವಂತಿಕೆಯಿಂದ ಆಗಬಹುದಾದ ಅಡ್ಡ ಪರಿಣಾಮಗಳನ್ನು ಇಷ್ಟು ಸಮರ್ಥವಾಗಿ ಕಟ್ಟಿಕೊಟ್ಟ ಇನ್ನೊಂದು ಸೀರೀಸ್ ಅನ್ನು ನಾನು ನೋಡಿಲ್ಲ.

ಹಿಟ್ಲರ್ ಮನುಕುಲದ ಮಾಡಿದ ಅನಾಚಾರಗಳನ್ನು ಡಾಕ್ಯುಮೆಂಟರಿಗಳಲ್ಲಿ, ಬೇರೆ ಬೇರೆ ಸಿನೆಮಾಗಳಲ್ಲಿ ನೋಡಿದಾಗ ಆಗುವ ವಿಷಾದ, ಡಿಪ್ರೆಶನ್ ಅನ್ನು ಸುಮಾರು ಐದಾರು ಘಂಟೆಗಳ ಈ ಶೋ ನಿಮ್ಮಲ್ಲಿ ಹುಟ್ಟಿಸುತ್ತದೆ. ಆಗಿ ಹೋದ ಅನಾಹುತವೊಂದನ್ನು ವಿಜ್ಞಾನಿಗಳು, ಮಿಲಿಟರಿ ಅಧಿಕಾರಿಗಳು, ಸಾಮಾನ್ಯ ಜನಗಳು ಎಲ್ಲರೂ ಸೇರಿ ಅದನ್ನಳಿಸಲು ಮಾಡುವ ಪ್ರಯತ್ನ ಮಾತ್ರ ವಿಚಿತ್ರ. ಭೂಮಿಯ ತುಣುಕೊಂದನ್ನು ಕಿತ್ತು ಮತ್ತೆ ಅದೇ ಭೂಮಿಯಡಿ ಹಾಕುವ ಮನುಷ್ಯ ಅಚ್ಚರಿ ಹುಟ್ಟಿಸುತ್ತಾನೆ. ಅಣು ವಿಕಿರಣದ ದುಷ್ಪರಿಣಾಮಗಳು ಗೊತ್ತಿದ್ದುದೇ ಅಲ್ಲವೇ? ಮತ್ತೇಕೆ ಮನಸ್ಸನ್ನು ಹೀಗೆ ವಿಲ ವಿಲ ಒದ್ದಾಡಿಸಬೇಕು? ದಿನಗಟ್ಟಲೆ ಕಾಡಬೇಕು?

ಇಡೀ ಶೋ ಪೂರ್ತಿ ರೇಡಿಯೋ ಅಕ್ಟಿವ್ ಎಲಿಮೆಂಟ್ಸ್ ಮಾಡುವ ವಿಚಿತ್ರ ಗುಂಯ್ಯೆನುವ ಶಬ್ದ ಮಾತ್ರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಆಗಿ ಕೇಳುತ್ತಲೇ ಇರುತ್ತದೆ. ಪಾತ್ರಧಾರಿಗಳು, ಸ್ಕ್ರಿಪ್ಟ್ ರೈಟರ್ಸ್, ಕ್ಯಾಮೆರಾ ಮೆನ್, ಆ ಕಾಲಕ್ಕೇ ಕರದುಕೊಂಡು ಹೋಗಲು ಶ್ರಮಿಸಿದ ಪ್ರತಿಯೊಬ್ಬರಿಗೂ ಹ್ಯಾಟ್ಸ್ ಆಫ್!

No comments:

Post a Comment