Wednesday, June 19, 2019

ಚೆರ್ನೋಬಿಲ್

ಇಲ್ಲಿ ಯಾರೂ ಎದೆ ಬಡಿದುಕೊಂಡು ಕರುಳು ಕಿತ್ತು ಬರುವಂತೆ ಅಳುವುದಿಲ್ಲ. ಕಿವಿ ತಮಟೆ ಹರಿಯುವ ಶಬ್ದಗಳಿಲ್ಲ. ಪ್ರತಿಯೊಬ್ಬರೂ ಒಂದು ಚೂರೂ ಪ್ರತಿಭಟನೆ ತೋರದೇ ತಮ್ಮನ್ನು ತಾವೇ ಪರಿಸ್ಥಿತಿಗೆ ಒಡ್ಡಿಕೊಳ್ಳುತ್ತಾರೆ. ಸಾವು ಬೆನ್ನಟ್ಟುವಾಗ ಬದುಕಲು ಆಶಿಸುವವರನ್ನು ನೋಡುವುದಕ್ಕಿಂತ ಕಷ್ಟವಾಗುವುದು ಸಾವನ್ನಪ್ಪಲು ತಯಾರಾಗಿ ಕೂತ ಇವರನ್ನು ನೋಡುವುದು. ಪ್ರಾಣಿಗಳಾಗಲಿ, ಮನುಷ್ಯರಾಗಲಿ ಎಲ್ಲರ ಮುಖದಲ್ಲೂ ವಿಚಿತ್ರ ಕಳೆ, ಅದು ಸಾವಿನದ್ದು. ಭೂಮಿಯಡಿ ಒಂದು ಚೂರೂ ಬಟ್ಟೆಯಿಲ್ಲದೇ ಕೆಲಸ ಮಾಡುವ ಮೈನಿಂಗ್ ಕೆಲಸಗಾರರಾಗಲಿ, ಸೈನಿಕರ ದಿರಿಸು ತೊಟ್ಟು ಪ್ರಾಣಿಗಳನ್ನು ಹುಡುಕಿ ಕೊಲ್ಲುವವರ ಮುಖದಲ್ಲಾಗಲಿ ವಿಲಕ್ಷಣ ನಿರ್ವಿಕಾರತೆ. ಅದೇ ನೋಡುಗನ ಹೊಟ್ಟೆ ತೊಳೆಸುವಂತೆ ಮಾಡುತ್ತದೆ, ತಲ್ಲಣ ಹುಟ್ಟಿಸುತ್ತದೆ. ಅಲ್ಲ್ಯಾರಿಗೂ ತಾವು ಮಾಡಿದ ಅಪರಾಧವೇನೆಂದು ಗೊತ್ತಿಲ್ಲ.

ಮಣ್ಣಿನಡಿ ಹುಡಿ ಹುಡಿಯಾಗುವ ಎಕರೆಗಟ್ಟಲೆ ಕ್ಯಾಬೇಜುಗಳು, ಕಾಂಕ್ರೀಟಿನಲ್ಲಿ ಮುಚ್ಚಿ ಹೋಗುವ ಲೋಹದ ಶವಪೆಟ್ಟಿಗೆಗಳು, ಸಿಳ್ಳೆ ಹಾಕಿ ಕರೆದೊಡನೆ ಓಡಿ ಬಂದು  ಗುಂಡು ತಿಂದು ಸಾಯುವ ಸಾಕು ನಾಯಿಗಳು, ಅವುಗಳನ್ನು ಮತ್ತೆ ಕಾಂಕ್ರೀಟ್ ಹಾಕಿ ಸಾಮೂಹಿಕ ಸಮಾಧಿ ಮಾಡುವ ರೀತಿ! ಅಬ್ಬಾ! ಇಷ್ಟೇ ಅಲ್ಲ, ಖಾಲಿ ಹೊಡೆಯುವ ಸುಂದರ ಅಪಾರ್ಟುಮೆಂಟುಗಳು, ನಿಶಬ್ದ ಮನೆಗಳು, ಅಂಗಳದಲ್ಲಿ ಕಟ್ಟಿರುವ ತಂತಿ ಮೇಲೆ ಯಾರಾದರೂ ತೆಗೆಯಬಹುದೆಂದು ಕಾಯುತ್ತಾ, ಗಾಳಿಗೆ ಹಾರಾಡುವ ಒಣ ಬಟ್ಟೆಗಳು, ಕ್ಲಿಪ್ಪುಗಳು, ಬೆಳಗೆದ್ದು ಮಡಿಸಿರದ ಹಾಸಿಗೆ, ಬೆಡ್ ಶೀಟುಗಳು! ಇಂತಹ ದೃಶ್ಯಗಳ ಮೂಲಕ ಹೀಗೂ ಕಥೆಯನ್ನು ಯಾರಾದರೂ ಕಟ್ಟಬಹುದಲ್ಲ?

ನಿಮಿಷ ನಿಮಿಷಕ್ಕೂ ಹೊರ ಸೂಸುತ್ತಿರುವ ವಿಕಿರಣದ ವಿಷವನ್ನು ಉಸಿರಾಡುತ್ತಿರುವವರನ್ನು ಕಂಡಾಗೆಲ್ಲಾ ಸತ್ತವರೆಲ್ಲಾ ಪುಣ್ಯವಂತರು, ಇವರೂ ಸಹಜವಾಗಿ ಸಾಯಲಿ ಎಂದು ಗೊತ್ತಿಲ್ಲದೇ ನಮ್ಮ ಮನಸ್ಸು ಬೇಡಲಾರಂಭಿಸುತ್ತದೆ. ಮೈಯಿಡೀ ರಕ್ತ ಸುರಿಸಿ, ಕೊಳೆತು ಸಾಯುವ ಗಂಡನನ್ನು ನೋಡುವ ಹೆಂಡತಿಯ ಕಣ್ಣ ನೀರು ನಮ್ಮ ಕಣ್ಣಂಚಿನಲ್ಲೂ ಇಳಿಯುತ್ತದೆ.  ಲೇಬರ್ ವಾರ್ಡಿನ ಹಾಸಿಗೆಯಂಚಿಗೆ ಕುಳಿತು, ಎದುರಿಗಿದ್ದ ಪರದೆ ಆ ಕಡೆ ಇರುವ ಕಾಣದ ತಾಯಿ ಮತ್ತು ಮಕ್ಕಳನ್ನು ಸುಮ್ಮನೆ ಕೂತು ದಿಟ್ಟಿಸಿ ನೋಡುವ ಖಾಲಿ ಕೈಯ ತಾಯಿ ನಿಟ್ಟುಸಿರು ಹುಟ್ಟಿಸುತ್ತಾಳೆ.  ಅಲ್ಲಿ ನಡೆಯುವುದೆಲ್ಲವೂ ನಿಜಕ್ಕೂ ನಡೆದಿತ್ತು ಅನ್ನುವುದೇ ಅಕ್ಷರಶಃ ಹುಚ್ಚು ಹಿಡಿಸುತ್ತದೆ. ಇಂತಹ ಘನ ಘೋರ ವಿಷದೊಂದಿಗೆ ಚೆಲ್ಲಾಟವಾಡುವ ಮನುಷ್ಯನ ಹುಚ್ಚು ಬೆರಗು ಮೂಡಿಸುತ್ತದೆ. ಇನ್ನೂ ಚೆಲ್ಲಾಟವಾಡುತ್ತಲೇ ಇದ್ದೇವೆ. ಅದ್ಯಾವ ನಂಬಿಕೆಯಲ್ಲಿ ನಾವು ಬದುಕು ಸವೆಸುತ್ತಿದ್ದೇವೆ? ಗೊತ್ತಿಲ್ಲ!

ಒಂದು ದುರಂತ ಕಥೆಯನ್ನು ಅದ್ಯಾವ ರೀತಿಯಲ್ಲಿ ಹೇಳಬಹುದು? ಪೂರ್ತಿ ನಾಟಕೀಯವಾಗಿ ಇಲ್ಲವೇ ಡಾಕ್ಯುಮೆಂಟರಿಯ ರೂಪದಲ್ಲಿ ಅಲ್ಲವೇ? ಎರಡೂ ಅಲ್ಲದೇ ತಣ್ಣಗಿನ ಸ್ವರದಲ್ಲಿ, ಅಷ್ಟೇ ತಣ್ಣಗಿನ ದೃಶ್ಯ ಹಾಗೂ ಪಾತ್ರಧಾರಿಗಳ ಮೂಲಕ ದುರಂತವನ್ನು ಎಲ್ಲೂ ವಿಜೃಂಭಿಸದೇ ಹೇಳುತ್ತಾ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ ಹೆಚ್ ಬಿ ಓನ ಮಿನಿ ಸೀರೀಸ್
ಚೆರ್ನೋಬಿಲ್. ಮನುಷ್ಯನ ಅಹಂಕಾರ, ಅತೀ ಬುದ್ಧಿವಂತಿಕೆಯಿಂದ ಆಗಬಹುದಾದ ಅಡ್ಡ ಪರಿಣಾಮಗಳನ್ನು ಇಷ್ಟು ಸಮರ್ಥವಾಗಿ ಕಟ್ಟಿಕೊಟ್ಟ ಇನ್ನೊಂದು ಸೀರೀಸ್ ಅನ್ನು ನಾನು ನೋಡಿಲ್ಲ.

ಹಿಟ್ಲರ್ ಮನುಕುಲದ ಮಾಡಿದ ಅನಾಚಾರಗಳನ್ನು ಡಾಕ್ಯುಮೆಂಟರಿಗಳಲ್ಲಿ, ಬೇರೆ ಬೇರೆ ಸಿನೆಮಾಗಳಲ್ಲಿ ನೋಡಿದಾಗ ಆಗುವ ವಿಷಾದ, ಡಿಪ್ರೆಶನ್ ಅನ್ನು ಸುಮಾರು ಐದಾರು ಘಂಟೆಗಳ ಈ ಶೋ ನಿಮ್ಮಲ್ಲಿ ಹುಟ್ಟಿಸುತ್ತದೆ. ಆಗಿ ಹೋದ ಅನಾಹುತವೊಂದನ್ನು ವಿಜ್ಞಾನಿಗಳು, ಮಿಲಿಟರಿ ಅಧಿಕಾರಿಗಳು, ಸಾಮಾನ್ಯ ಜನಗಳು ಎಲ್ಲರೂ ಸೇರಿ ಅದನ್ನಳಿಸಲು ಮಾಡುವ ಪ್ರಯತ್ನ ಮಾತ್ರ ವಿಚಿತ್ರ. ಭೂಮಿಯ ತುಣುಕೊಂದನ್ನು ಕಿತ್ತು ಮತ್ತೆ ಅದೇ ಭೂಮಿಯಡಿ ಹಾಕುವ ಮನುಷ್ಯ ಅಚ್ಚರಿ ಹುಟ್ಟಿಸುತ್ತಾನೆ. ಅಣು ವಿಕಿರಣದ ದುಷ್ಪರಿಣಾಮಗಳು ಗೊತ್ತಿದ್ದುದೇ ಅಲ್ಲವೇ? ಮತ್ತೇಕೆ ಮನಸ್ಸನ್ನು ಹೀಗೆ ವಿಲ ವಿಲ ಒದ್ದಾಡಿಸಬೇಕು? ದಿನಗಟ್ಟಲೆ ಕಾಡಬೇಕು?

ಇಡೀ ಶೋ ಪೂರ್ತಿ ರೇಡಿಯೋ ಅಕ್ಟಿವ್ ಎಲಿಮೆಂಟ್ಸ್ ಮಾಡುವ ವಿಚಿತ್ರ ಗುಂಯ್ಯೆನುವ ಶಬ್ದ ಮಾತ್ರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಆಗಿ ಕೇಳುತ್ತಲೇ ಇರುತ್ತದೆ. ಪಾತ್ರಧಾರಿಗಳು, ಸ್ಕ್ರಿಪ್ಟ್ ರೈಟರ್ಸ್, ಕ್ಯಾಮೆರಾ ಮೆನ್, ಆ ಕಾಲಕ್ಕೇ ಕರದುಕೊಂಡು ಹೋಗಲು ಶ್ರಮಿಸಿದ ಪ್ರತಿಯೊಬ್ಬರಿಗೂ ಹ್ಯಾಟ್ಸ್ ಆಫ್!

Tuesday, April 23, 2019

ಬೆಳಗು


ಅರಿಯದು ಅಳವು ತಿಳಿಯದು ಮನವು
-ಬೇಂದ್ರೆ

ಡ್ರೈವರ್ ಬಿಟ್ಟರೆ ಈ ನೈಟು ಬಸ್ಸಿನಲ್ಲಿ ತಾನೊಬ್ಬಳೇ ಎಚ್ಚರವಿರುವುದು ಅನಿಸಿ ಪಕ್ಕಕ್ಕೆ ತಿರುಗಿ ನೋಡಿದರೆ ಪಕ್ಕದ ಸೀಟಿನಲ್ಲಿದ್ದ ಮಧ್ಯವಯಸ್ಕ ಮಹಿಳೆ ನಿದ್ದೆಯಲ್ಲಿ ಕಳೆದುಹೋಗಿದ್ದರು. ಬ್ಯಾಗಿನ ಹಿಂದಿನ ಜಿಪ್ಪಿನಿಂದ ಸೆಲ್ ತೆಗೆದು ನೋಡಿದರೆ ೧೨.೪೦. ಅದಾಗ್ಲೇ ೩ ಘಂಟೆ ಮೇಲಾಗಿದೆ ಬೆಂಗಳೂರು ಬಿಟ್ಟು, ಎಲ್ಲಿರಬಹುದು ಇವಾಗ ಎಂದುಕೊಂಡು ಹೊರಗಿಣುಕಿದರೆ ಏನೂ ಕಾಣಲಿಲ್ಲ. ಕಣ್ಣು ಮುಚ್ಚಿ ಸೀಟಿಗೆ ತಲೆಯಾನಿಸಿದರೆ ಪ್ರೀತಿಭರಿತ ಕಣ್ಣುಗಳಿಂದ ನೋಡುತ್ತಾ, ದೊಡ್ಡ ಕೆಂಪು ಕುಂಕುಮವಿಟ್ಟ ಮಾರ್ದವ ಮುಖದ ಚಂದಿರನಂತಹ ಚಿಕ್ಕಿ ಕಣ್ಣೆದೆರು ಬಂದು ನಕ್ಕಂತಾಯಿತು. ಕಥೆ ಹೇಳುತ್ತಾ, ಮೊಸರನ್ನ ತಿನ್ನಿಸುತ್ತ, ಜಡೆಗಳಿಗೆ ರಿಬ್ಬನ್ ಸುತ್ತುತ್ತಾ, ಜ್ವರ ಬಂದಾಗ ಅಮ್ಮನೊಟ್ಟಿಗೆ ತಾನೂ ಕೂತು, ಹಣೆ ಸವರುತ್ತಾ ..ಓಹ್ ಚಿಕ್ಕಿ ಎಂದು ನನಗೇ ತಿಳಿಯದೇ ಪಿಸುಗುಟ್ಟಿದೆ. 
ಆಫೀಸಿನಲ್ಲಿ ಸಂಜೆ ಆರರ ಸಮಯದಲ್ಲಿ ಯಾವುದೋ ಶೋಗಾಗಿ ಬರೆಯುತ್ತಾ ಕೂತವಳು ಆರನೇ ಸಲ ಅಮ್ಮನ ಕರೆ ಬಂದಾಗ ಬೇಸರದಿಂದಲೇ ಎತ್ತಿ, ಏನಮ್ಮಾ, ಕೆಲಸ ಅಂದಷ್ಟೇ ಹೇಳಿದ್ದು! ಆ ಕಡೆಯಿಂದ ಅಮ್ಮ ಕಿರುಚುತ್ತಿದ್ದಳು, ನಡುಗುತ್ತಿದ್ದ ಅವಳ ದನಿಯಲ್ಲಿ ಸಿಟ್ಟೂ, ಅಳೂ ಎರಡೂ ಇದ್ದವು.  “ಒಂದು ವಾರದಿಂದ ಹಾಸಿಗೆ ಹಿಡಿದ್ದಿದ್ದಾಳೆ ನಿನ್ನ ಚಿಕ್ಕಿ, ತನ್ನ ಮಕ್ಕಳಿಗಿಂತ ಜಾಸ್ತಿಯೇ ಮಾಡಿದಳಲ್ಲ ನಿನಗೆ?,  ಅದೂ ಹೆತ್ತಮ್ಮ ನನಗಿಂತ ಜಾಸ್ತಿ!!  ಅಷ್ಟಕ್ಕೂ ಒಂದು ವೇಳೆ ಅವಳಿಂದಲೇ ಏನಾದರೂ ತಪ್ಪಾಗಿದ್ದರೆ ನೀ ಯಾರು ಕೇಳೋಕೆ, ನೀನು ಸಾಕಿದ್ಯಾ? ಮಾಧೂನ ಅವಳಲ್ಲದೇ ಯಾರು ನೋಡಿಕೊಳ್ಳುತ್ತಿದ್ದರು ಹೇಳೆ? ನಿನ್ನೆ ಮೊನ್ನೆ ಹುಟ್ಟಿದವರೆಲ್ಲಾ ನಮಗೆ ಬುದ್ಧಿ ಕಳಿಸೋಕೆ ಬರ್ತೀರಲ್ಲಾ, ಎಷ್ಟು ಹೇಳಿದರೂ ಒಂಚೂರೂ ಅರ್ಥ ಮಾಡಿಕೊಳ್ಳಲ್ಲ” ಎಂದು ಒಂದೇ ಉಸಿರಲ್ಲಿ ಅಬ್ಬರಿಸಿ ಕಾಲ್ ಕಟ್ ಮಾಡಿದ್ದಳು. ಪರಿಸ್ಥಿತಿ ಇಷ್ಟು ಗಂಭೀರವಾಗಿರಬಹುದೆಂಬ ಅರಿವಾಗಿರಲಿಲ್ಲ. ಕಳೆದೆರಡು ದಿನಗಳಿಂದ ಶೂಟಿಂಗ್ ಸ್ಪಾಟಿಗೆ ಹೋಗೋದು, ರಾತ್ರಿ ತಡವಾಗಿ ಮನೆಗೆ ಬಂದು ಮಲಗೋದೇ ಆಗಿತ್ತು. ಯಾವ ಕರೆ, ಮೇಸೇಜ್ ನೋಡಿರಲಿಲ್ಲ. ಇವತ್ತು  ನೋಡಿದರೆ ಅಪ್ಪ, ಮಹೇಶ, ಪುರು ಮೂವರ ಮೊಬೈಲುಗಳಿಂದ ರಾಶಿಗಟ್ಟಲೆ ಕರೆಗಳು ಬಂದಿವೆ. ... ಗಾಭರಿಯಿಂದ ಕೈಕಾಲು ನಡುಗಲು ಆರಂಭವಾಗಿತ್ತು. ಅಪ್ಪನಿಗೆ ಕರೆ ಮಾಡಿದರೆ, “ಒಂದ್ಸಲ ಬಂದು ಹೋಗು ಮಂದಾ, ಚಿಕ್ಕಿ ನಿನ್ನನ್ನೇ ನೆನೆಸಿಕೊಳ್ಳುತ್ತಿದ್ದಾಳೆ” ಎಂದರು. ಇದ್ದಕ್ಕಿದ್ದಂತೆ ತಲೆಯಲ್ಲಿ ವಿಚಿತ್ರ ಸೆಳೆತ, ಅಲೆಗಳ ಅಬ್ಬರ ಮತ್ತು ಕಿವಿಯಲ್ಲಿ ಸಮುದ್ರದ ಘೋಷ...ಒಂಥರಾ ನಿರ್ವೇದದ ಸ್ಥಿತಿ. ಕಳೆದುಕೊಳ್ಳೋದು ಅನ್ನೋದು ಹೀಗಿರುತ್ತಾ ಎಂದು ಮೊದಲ ಬಾರಿಗೆ ಅನಿಸಿತು. ಅದು ಹೇಗೆ ಮನೆಗೆ ಬಂದು, ಕೈ ಸಿಕ್ಕಿದ್ದನ್ನು ತುರುಕಿ, ಬಸ್ಸಿನ ಆಫೀಸಿಗೆ ಕರೆ ಮಾಡಿ, ಸೀಟು ಬುಕ್ ಮಾಡಿ, ಮನೆಯಲ್ಲಿ ಇದ್ದಿದ್ದನ್ನು ತಿಂದ ಶಾಸ್ತ್ರ ಮಾಡಿ ಬಸ್ಸು ಹತ್ತಿ ಕೂತೆನೋ ನೆನಪಿಲ್ಲ. 
ಕಿಟಕಿಯಿಂದ ಹೊರಗೆ ಓಡುತ್ತಿರುವ ದೃಶ್ಯಗಳಂತೆ ಮನಸ್ಸಲ್ಲೂ ನೆನಪುಗಳು ಓಡುತ್ತಿದ್ದವು.

ಬಾಲ್ಯದಲ್ಲಿ, ಅಮ್ಮನಾದರೂ ಒಂದೆರಡು ಸಲ ಬೈದಿದ್ದು, ಕೈಯೆತ್ತಿದ್ದು ನೆನಪಿದೆ, ಚಿಕ್ಕಿ ಗದರಿದ್ದೂ ನೆನಪಿಲ್ಲ. ಇಡೀ ಕುಟುಂಬಕ್ಕೆ ಒಬ್ಬಳೇ ಹುಡುಗಿಯೆಂದು, ಮಹೇಶ, ಪುರು, ಬಾಲು ಯಾರಿಗೂ ಸಿಗದಷ್ಟು ಪ್ರೀತಿ ತನಗೇ ಸಿಕ್ಕಿತ್ತು. ಮನೆಯಿಂದ ಮಾರು ದೂರ ನಡೆದು, ಗದ್ದೆ, ಅಡಕೆ ತೋಟ ದಾಟಿ ಹೋಗಬೇಕಿತ್ತು ಶಾಲೆಗೆ ಬಸ್ಸು ಹತ್ತಲು. ಅಷ್ಟೂ ದೂರ ದಿನಕ್ಕೆರಡು ಸಲ ನನ್ನ ಕಿರುಬೆರಳನ್ನು ತನ್ನ ಕಿರುಬೆರಳಲ್ಲಿ ಹಿಡಿದು ದಾರಿಯುದ್ದಕ್ಕೂ ಹರಟಿಕೊಂಡು, ನಗು ನಗುತ್ತಲೇ ಬರುತ್ತಿದ್ದಳಲ್ಲ ಚಿಕ್ಕಿ? ಗದ್ದೆ ಕೆಲಸದ ಆಳುಗಳ ಬೆಳಗ್ಗಿನ ಚಾ, ತಿಂಡಿಯಲ್ಲದೇ ನಾಲ್ಕೂ ಮಕ್ಕಳನ್ನು ಶಾಲೆಗೆ ರೆಡಿ ಮಾಡುವ ಕೆಲಸಗಳನ್ನು ಅಮ್ಮ, ಚಿಕ್ಕಿ ಇಬ್ಬರೂ ಮಾಡಬೇಕಿತ್ತು. ಆದರೆ ಚಿಕ್ಕಿಯೇ ಜಾಸ್ತಿ ಮಾಡುತ್ತಿದ್ದಿದ್ದು. ಅದರ ಮಧ್ಯದಲ್ಲೂ ತನ್ನ ಜಡೆ ಹಾಕಲು ಅದು ಹೇಗೆ ಸಮಯ ತೆಗೆಯುತ್ತಿದ್ದಳೋ? ಅವಳು ಹೇಗೆ ಬಾಚಿದರೂ “ಚಿಕ್ಕಿ, ಬಿಗಿ ಆಗ್ತಿಲ್ಲ, ಒಳ್ಳೆ ಕಪ್ಪೆ ಥರ ಬಾಚ್ತಿ, ಇವತ್ತು ಎಣ್ಣೆನೇ ಹೋಗಿಲ್ಲ, ನಾನು ಹೋಗಲ್ಲ ಶಾಲೆಗೆ” ಎಂದೆಲ್ಲಾ ಜೀವ ತಿಂದರೂ ಅವಳು ಸಿಟ್ಟು ಮಾಡಿಕೊಳ್ಳದೇ, ಸಮಾಧಾನಿಸಿ, ಮುದ್ದುಗರೆದು, ಸಂಜೆಗೆ ಸುಟ್ಟ ಗೇರುಬೀಜವೊ, ಬೆಣ್ಣೆಯೋ, ಸಿಹಿಗುಂಬಳ ಹೂವಿನ ಪೋಡಿಯೋ, ಎಳನೀರಿನತಿಳಿ ಗಂಜಿಯೋ ಕೊಡುತ್ತೇನೆ ಎಂದು ಆಮಿಷವೊಡ್ಡಿ ಕಳಿಸುತ್ತಿದ್ದಳು. ಶಾಲೆಗೆ ರಜೆಯಿದ್ದಾಗಲಂತೂ ಅವಳ ಶಯ್ಯಾಗೃಹದಲ್ಲೇ ತನ್ನ ವಾಸ.

ಒಂಚೂರು ಪುರುಸೊತ್ತು ಸಿಕ್ಕಾಗಲೋ ಅಥವಾ ಬತ್ತಿ ಹೊಸೆಯುತ್ತಾ, ಹೂವು ಕಟ್ಟುತ್ತಾ, ಅವಳು ಹೇಳುತ್ತಿದ್ದ ಕಥೆಗಳಿಂದಲೇ ಅಲ್ಲವೇ, ನನಗೆ ಓದೋ ಅಭ್ಯಾಸ ಶುರುವಾಗಿದ್ದು? ಡಿಂಗ, ಚಂದಮಾಮ, ಬಾಲಮಿತ್ರ, ತುಷಾರ, ತರಂಗ, ಕಸ್ತೂರಿ ಇದೆಲ್ಲವನ್ನೂ ಪಕ್ಕದ ತೋಟದ ಬಾಬಣ್ಣ ಮೇಷ್ಟ್ರಿಗೆ ಹೇಳಿ ತರಿಸಿಡುತ್ತಿದ್ದಳು. ಅವಳ ಹತ್ತಿರ ಇದ್ದಿದ್ದ
ರಷ್ಯಾ ದೇಶದ ಕಥೆಗಳು, ಮಾಷಾಳ ಹಾಸಿಗೆ, ಟಾಲ್ಸ್ಟಾಯ್ ಕಥೆಗಳು ಎಲ್ಲವನ್ನೂ ಅದೆಷ್ಟು ಸಲ ಕೂತು ನನಗಾಗಿ ಓದುತ್ತಿದ್ದಳು. ಅದೆಲ್ಲಿಂದ ತಂದು ಪೇರಿಸಿಟ್ಟಿದ್ದಳೋ ಗೊತ್ತಿಲ್ಲ,  ಬೆಳೆಯುತ್ತಾ ಹೋದಂತೆಲ್ಲಾ ಮುಚ್ಚಿಟ್ಟಿದ್ದ ಅದೆಷ್ಟು ಕಾದಂಬರಿಗಳು, ಕಥಾ ಸಂಕಲನಗಳು, ಕಾವ್ಯ ಸಂಪುಟಗಳು ಎಲ್ಲವೂ ಹೊರಬರುತ್ತಾ ಹೋದವು. ಈ ವಯಸ್ಸಿಗೆ ಇದೇ ಓದಬೇಕು ಎಂದು ಮೊದಲೇ ನಿರ್ಧಾರ ಮಾಡಿಟ್ಟವಳಂತೆ ನಾಲ್ಕೂ ಮಕ್ಕಳಿಗೂ ಓದಿನ ಹುಚ್ಚು ಹತ್ತಿಸಹೊರಟಳು. ಆದರೂ ತನ್ನಂತೆ ಯಾರೂ ಆಗಲಿಲ್ಲ. ಅವಳ ಮೆಲುದನಿಯಲ್ಲಿ ಕೇಳಿದ ಮೈಸೂರು ಮಲ್ಲಿಗೆ ಮತ್ತೆಂದೂ ಅಷ್ಟು ಸಿಹಿಯೆನಿಸಲಿಲ್ಲ. ಡಿಗ್ರಿ ಮಾಡಿ ತಾನಿವತ್ತು ಚಾನೆಲ್ ಒಂದರಲ್ಲಿ ಧಾರಾವಾಹಿಗಳಿಗೆ ಕಥೆ ಬರೆದು ನನ್ನ ಕಾಲ ಮೇಲೆ ನಿಂತಿದ್ದೀನಿ ಎಂದರೆ ಅವಳು ಕಲಿಸಿದ ಓದಿನಿಂದಲೇ ಅಲ್ಲವೇ?

ಬೆಳೆಯುತ್ತ ಬುದ್ಧಿ ಪಕ್ವವಾದಂತೆಲ್ಲಾ, ಡಿಗ್ರಿ ಮಾಡಿದ್ದವಳು ನಾಲ್ಕನೇ ಪಾಸ್ ಆದ ಮಾಧೂ ಚಿಕ್ಕಪ್ಪನನ್ನ ಹೇಗೆ ಮದುವೆಯಾದಳು ಎಂದು ಅದೆಷ್ಟು ಸಲ ಅಂದುಕೊಂಡಿದ್ದೇನೋ... ಕೇಳಿದಾಗೆಲ್ಲಾ “ಅವರಷ್ಟು ಒಳ್ಳೆಯವರು ಯಾರೂ ಸಿಗಲಿಲ್ಲ ಮಂದಾ” ಎಂದು ಕಣ್ಣಲ್ಲಿ ಹೊಳಪು ತುಳುಕಿಸುತ್ತಾ ಹೇಳುತ್ತಿದ್ದಳು. ಗದ್ದೆ, ತೋಟದ ಉಸ್ತುವಾರಿ, ಬೆಳೆ ಮಾರಾಟ, ಔಷಧಿ ಹೊಡೆಸೋದು, ಮುಡಿ ಅಕ್ಕಿ ಕಟ್ಟೋದು, ಆಳುಗಳಿಗೆ ಸಂಬಳ, ಅವರಿಂದ ಕೆಲಸ ತೆಗೆಸೋದು, ಹಬ್ಬ ಬಂದಾಗ ಇಡೀ ಮನೆಗೆ ಬಟ್ಟೆ ತರೋದು ಹೀಗೆ ಎಲ್ಲಾ ಕೆಲಸ ಮಾಡುತ್ತಿದ್ದ ತೀರಾ ತೀಕ್ಷ್ಣಮತಿ ಸೂಪರ್ ಮ್ಯಾನ್ ಅಪ್ಪನನ್ನು ನೋಡಿ ಸದಾ ಮಕ್ಕಳಂತೆ ನಿಷ್ಕಲ್ಮಶ ನಗು ಬೀರುವ, ಸುಮ್ಮಗೆ ಕೂತು ಹಾಡುವ, ಪುಟ್ಟ ಮಕ್ಕಳೊಡನೆ ಆಡುವ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಕೂರುವ ಚಿಕ್ಕಪ್ಪನನ್ನು ನೋಡಿದರೆ ಆಶ್ಚರ್ಯವಾಗುತ್ತಿತ್ತು. ಕಿತ್ತಳೆ ತೊಳೆ ಬಿಡಿಸುವುದಲ್ಲದೆ ಒಳಗಿನ ತಿಳಿ ಸಿಪ್ಪೆಯನ್ನೂ ಬಿಡಿಸಿ ತಿನ್ನುವ ಅಭ್ಯಾಸವನ್ನು ಹಾಕಿಕೊಟ್ಟಿದ್ದು ಚಿಕ್ಕಪ್ಪನೇ, ಇಂದಿಗೂ ತೊಳೆ ಬಿಡಿಸುವಾಗೆಲ್ಲಾ ಅವರದ್ದೇ ನೆನಪು. ಬಾಬಣ್ಣ ಮಾಷ್ಟ್ರು, ಹತ್ತಿರದಲ್ಲೆಲ್ಲಾದರೂ ಆಟವೋ, ಜಾತ್ರೆಯೋ ಇದ್ದರೆ ಮಾಧೂ ಚಿಕ್ಕಪ್ಪನನ್ನು ಕರ್ಕೊಂಡು ಹೋಗುತ್ತಿದ್ದರು. ಹಾಗೆ ಹೋದಾಗೆಲ್ಲಾ ನಾಲ್ಕೂ ಮಕ್ಕಳಿಗೂ, ಚಿಕ್ಕಿಗೂ ಕಡ್ಡಾಯವಾಗಿ ನಿಂಬೆ - ಕಿತ್ತಳೆ ಪೆಪ್ಪರ್ ಮಿಂಟು, ಕಡ್ಲೆ ಮಿಠಾಯಿ ಮತ್ತೆ ಶೇಂಗಾ ತಪ್ಪದೆ ತರುತ್ತಿದ್ದರು. ಅವರ ಸುತ್ತಾ ಕೂತ ತಿಂದ ನೆನಪು ನೂರೂ ಜನ್ಮಕ್ಕೂ ಮಾಸುವುದಿಲ್ಲ. ಅಪ್ಪ-ಅಮ್ಮ ಜೊತೆ ಕೂತು ಹರಟಿದ್ದೇ ನೋಡಿದ ನೆನಪಿಲ್ಲ, ಆದರೆ ಚಿಕ್ಕಿ ಮತ್ತು ಚಿಕ್ಕಪ್ಪ ಹಾಗಲ್ಲ, ಸದಾ ಜೊತೆಗಿರುತ್ತಿದ್ದರು, ಬೆಣ್ಣೆ ಕಡೆಯುವಾಗ, ಹೂ ಕಟ್ಟುವಾಗ, ಹಾಲು ಕರೆಯುವಾಗ, ಕೆರೆ ದಂಡೆಗೆ ಬಟ್ಟೆ ಒಗೆಯಲು ಹೋದಾಗ, ಹಪ್ಪಳ, ಉಪ್ಪಿನಕಾಯಿ ಹಾಕುವಾಗ...ಅವರೂ ಇದ್ದೇ ಇರುತ್ತಿದ್ದರು ಅವಳ ಸುತ್ತ. ಅವಳಿಗಾಗಿ ಎಲ್ಲಿಲ್ಲೆಯೋ ಹುಡುಕಿ ಸುಗಂಧಿ ಹೂ ತರುತ್ತಿದ್ದರು. ಆ ಹೂವು ಮುಡಿಯುವಾಗ ಅವಳ ಮುಖ ನೋಡಲು ಕಾದು ಕುಳಿತಿರುತ್ತಿದ್ದೆ. ಅವಳ ಮುಖದ ಸಂತೃಪ್ತ ನಗು ತನ್ನಲ್ಲೂ ಸಮಾಧಾನದ ಅಲೆಯೊಂದನ್ನು ಹೊತ್ತು ತರುತ್ತಿತ್ತಲ್ಲ? ಆದರೆ ೨೪ ಘಂಟೆ ವಟಗುಟ್ಟುತ್ತಲೇ ಇರುವ ಅಜ್ಜಿಗಂತೂ ತನ್ನ ಎರಡನೇ ಮಗ, ಅವನ ಹೆಂಡತಿ, ಮಕ್ಕಳು ಯಾರನ್ನೂ ಕಂಡರಾಗುತ್ತಿರಲಿಲ್ಲ. ಕಾಲೇಜು ಮೆಟ್ಟಿಲು ಹತ್ತಿದಾಗಲೂ ಅಮ್ಮನಿಗಿಂತ ಮೊದಲು ಅವಳೇ ಆಪ್ತ ಗೆಳತಿ, ನಾವಿಬ್ಬರು ಚರ್ಚಿಸದ ವಿಷಯಗಳಿಲ್ಲ. 

ಸರಿದಿದ್ದ ಕರ್ಟನಿನಿಂದ ಮುಖದ ಮೇಲೆ ಬೆಳಕು ಬಿದ್ದಂತಾಗಿ ಕಣ್ಣು ತೆರೆಯುವಷ್ಟರಲ್ಲಿ ಸಕಲೇಶಪುರ ಬಸ್ ಸ್ಟಾಂಡಿನಲ್ಲಿ ನಿಂತಿತು ಬಸ್ಸು. ಇಳಿದು ಒಂದರೆಗಳಿಗೆ ಹೊರಗಿನ ತಣ್ಣನೆ ಗಾಳಿ ಹೀರಿ, ಅಂಗಡಿಗೆ ಹೋಗಿ ಎರಡು ಬಾಳೆ ಹಣ್ಣುಗಳನ್ನು ತಂದು ಮತ್ತೆ ಬಂದು ಸೀಟಲ್ಲಿ ಕೂರುವಾಗ ಪಕ್ಕದ ಸೀಟಿನ ಮಹಿಳೆ ಮುಜುಗರದಿಂದ ’ಒಂಚೂರು ಟಾಯ್ಲೆಟ್ ಹೋಗಬೇಕಮ್ಮ, ಬರ್ತೀಯಾ? ನಂಗೆ ವಾಪಾಸು ಬಂದು ಹತ್ತೋಕೆ ಗೊತ್ತಾಗಲ್ಲ’  ಎಂದರು. ಕರಕೊಂಡು ಹೋಗಿ ಬಂದು ಕೂತುಕೊಳ್ಳಿಸುವಾಗ ಕೈ ಹಿಡಿದು ನೇವರಿಸಿ ’ದೇವರು ಒಳ್ಳೇದು ಮಾಡ್ಲಮ್ಮಾ’ಎಂದರು.
 
ಆ ನೇವರಿಕೆಗೆ ಮತ್ತೆ ಚಿಕ್ಕಿಯ ನೆನಪು, ಅದೆಲ್ಲಿ ಶುರುವಾಯಿತು ಎಲ್ಲವೂ ಎಂಬ ಯೋಚನೆ... 
ಮೂರು ವರ್ಷದ ಹಿಂದೆ ದೀಪಾವಳಿಗೆ ನಾಲ್ಕು ದಿನ ಇರುವಾಗಲ್ಲಲ್ಲವೇ? 
ಪ್ರತೀ ವರ್ಷ ಎಲ್ಲಾ ಆಳುಮಕ್ಕಳಿಗೂ ಹೊಸಬಟ್ಟೆಯೊಡನೆ ಚಕ್ಕುಲಿ, ಉಂಡೆ, ಬೆಲ್ಲ ಹಾಕಿದ ಅವಲಕ್ಕಿ ಕೈ ತುಂಬಾ ಕೊಡುವುದಲ್ಲದೆ ಸಾಂಬಾರು, ಹುಳಿ, ಕೊದ್ದೆಲ್, ಸಾರು, ಪಾಯಸದ ಊಟ ಹಾಕುವುದು ಮನೆಯ ಸಂಪ್ರದಾಯ. ಯಾವಾಗಲೂ ಅಡುಗೆಗೆ ಸಹಾಯ ಮಾಡಲು ಬರುವ ರಾಧಕ್ಕ ಆ ಸಲ ಬೆಂಗಳೂರಿನಲ್ಲಿ ಬಾಣಂತಿ ಸೊಸೆಯೊಂದಿಗೆ ಇರಲು ಹೋಗಿದ್ದರು. ಮೆನೋಪಾಸ್ ಹಂತದಲ್ಲಿರುವ ಅಮ್ಮ, ಚಿಕ್ಕಿ ಇಬ್ಬರಿಗೂ ಅವರದ್ದೇ ರಾಶಿ ತೊಂದರೆಗಳಿದ್ದವು. ’ಈ ಸಲ ಹೊಸಬಟ್ಟೆ ಮತ್ತೆ ಒಂದಿಷ್ಟು ದುಡ್ಡು ಕೊಡೋಣ ಎಲ್ಲರಿಗೂ’ ಅಂದಿದ್ದೇ ಚಿಕ್ಕಿಯ ಮಹಾಪರಾಧ. ಸದಾ ಅದು ಮಾಡು ಇದು ಮಾಡು ಎಂದು ಮಾಡಿಸಿಕೊಂಡು ಕೂತು ತಿನ್ನುವ ಅಜ್ಜಿಗೆ ಪಿತ್ತ ನೆತ್ತಿಗೇರಿತ್ತು. ಅಲ್ಲಿಂದ ಮಾತು ಮಾತು ಬೆಳೆದು ಅಜ್ಜಿ, ಚಿಕ್ಕಿಯ ಎಂದೂ ಬಾರದ ಮನೆಯವರನ್ನೆಲ್ಲಾ, ಅವರ ಬಡತನವನ್ನೆಲ್ಲ ಎತ್ತಿ ಆಡಿದ್ದಲ್ಲದೆ, ದೇವರಿಗೆ ಕೈ ಮುಗಿದು ಗೊತ್ತಿಲ್ಲ, ಅದಕ್ಕೇ ಮದುವೆಯಾಗಿ ಕಾಲಿಟ್ಟ ನಾಲ್ಕು ವರ್ಷಕ್ಕೇ ತನ್ನ ಮಗ ಹಾಳಾದ ಎಂದೆಲ್ಲಾ ದೂರಿದರು. ಬೊಬ್ಬೆ ಕೇಳಿದ ಮಾಧೂ ಚಿಕ್ಕಪ್ಪ ಹೆದರಿ ಮೂಲೆ ಹಿಡಿದು ಪಿಳಿಪಿಳಿ ಕಣ್ಣು ಬಿಡುತ್ತಿದ್ದರು. ಅಮ್ಮ ಏನು ಮಾತನಾಡಿದರೂ ಪ್ರಯೋಜನವಾಗಲಿಲ್ಲ. ತೋಟದಿಂದ ಬಾಳೆ ಎಲೆ, ಗೊನೆ ಹಿಡಿದು ಅಪ್ಪ ಬರುವಷ್ಟರಲ್ಲಿ ಮನೆ ರಣರಂಗವಾಗಿತ್ತು. ಎಂದೂ ಸಿಟ್ಟಿಗೇಳದ ಚಿಕ್ಕಿ ಅಂದು ರೌದ್ರವಾತಾರ ತಾಳಿದ್ದಳು. ಅವಳಿಗೂ ಬಹುಶಃ ಹಾರ್ಮೋನ್ಸ್ ಹೆಚ್ಚು ಕಡಿಮೆಯಾಗಿರಬೇಕು. ಅಪ್ಪ ಬಂದಾಗ, “ ಭಾವ, ನಾನು ಏನಾದರೂ ಈ ಮನೆಗೆ ಕಡಿಮೆ ಮಾಡಿದ್ರೆ, ನಿಮ್ಮ ತಮ್ಮನನ್ನು ಚೆನ್ನಾಗಿ ನೋಡಿಕೊಂಡಿಲ್ಲ, ನನ್ನ ತಪ್ಪಿಗೆ ನಾನು ಬೆಲೆ ತೆರುತ್ತಿಲ್ಲ  ಅಂತ ನಿಮಗೂ ಅಕ್ಕನಿಗೂ ಅನಿಸಿದ್ರೆ ನಾನೀ ಮನೆ ಬಿಟ್ಟು ಹೋಗುತ್ತೇನೆ” ಎಂದು ಅದೆಷ್ಟು ಸ್ಪಷ್ಟವಾಗಿ ಹೇಳಿದಳಲ್ಲ. ಎಂದೂ ಹೆಚ್ಚು ಭಾವನೆಗಳನ್ನು ತೋರಿಸದ ಅಪ್ಪ ಕೂಡಾ, ಮೊದಲ ಬಾರಿಗೆ, ಚಿಕ್ಕಿ ತಲೆ ಸವರಿ “ ಸುನಂದಾ, ನಿನ್ನದೇನೂ ತಪ್ಪಿಲ್ಲಮ್ಮ...ನಮ್ಮಿಬ್ಬರಿಗೂ ನೀನು ಬೇಕು, ನೋಡು ಲಕ್ಷ್ಮಿಯೂ ನಿನ್ನ ಬಿಟ್ಟಿರಲ್ಲ, ಇನ್ನೊಂದು ಸಲ ಹೋಗೋ ಮಾತಾಡಬೇಡ, ಮಂದಾರಳನ್ನು ಬಿಟ್ಟು ಹೋಗ್ತಿಯಾ?” ಎಂದು ಕೇಳಿದರು. ಅಜ್ಜಿಯ ಕಡೆಗೊಮ್ಮೆ ತೀವ್ರವಾಗಿ ನೋಡಿ “ಅಮ್ಮ, ಕಿಟ್ಟಿ ಮನೆಗೆ ಬಿಟ್ಟು ಬರ್ಲಾ? ಇಲ್ಲೇ ಬಾಯಿ ಮುಚ್ಚಿಕೊಂಡು ಇರ್ತೀಯಾ?” ಅಂದಿದ್ದಷ್ಟೇ, ಅಜ್ಜಿಯ ಬಾಯಿಗೆ ಬೀಗ ಬಿತ್ತು.  ಆ ಸಲ ದೀಪಾವಳಿಗೆ ಕೆಲಸದವರಿಗೆಲ್ಲಾ ಹೊಸಬಟ್ಟೆ ಮತ್ತು ದುಡ್ಡು ಕೊಟ್ಟಿದ್ದಾಯ್ತು. ಅಮ್ಮ, ಚಿಕ್ಕಿ ಇಬ್ಬರೂ ನಮ್ಮೊಂದಿಗೆ ಮೊದಲನೇ ಸಲ ಮತಾಪು ಹಚ್ಚಿದ್ದು. 

ಇದ್ದಕ್ಕಿದ್ದ ಹಾಗೆ ಅದ್ಯಾವ ಭೂತ ಹೊಕ್ಕಿತೋ ನನ್ನ ಮೈಯಲ್ಲಿ? ನನಗೆ ಸೇರಿದ ನನ್ನ ಚಿಕ್ಕಿ ಮಾಡಿದ ತಪ್ಪು ಯಾವುದು, ಅದನ್ನ್ಯಾಕೆ ನನಗೆ ಹೇಳಬಾರದು ಎಂದು ತಿಳಿಯುವ ಸಾಹಸ ಯಾಕಾದರೂ ಮಾಡಿದೆನೋ... ಅಮ್ಮನನ್ನು ಅದೆಷ್ಟು ಕಾಡಿಸಿದರೂ ಅಚಲ ಬಂಡೆಯಂತೆ ನಿಂತುಬಿಟ್ಟಳು, ಬಾಯೇ ಬಿಡಲಿಲ್ಲ. ಅಪ್ಪನನ್ನು ಕೇಳೋ ಧೈರ್ಯವಿಲ್ಲ್ಲ. ಆಳುಕಾಳುಗಳ ಹತ್ತಿರ ಕೇಳಲಾಗುವುದಿಲ್ಲ. ಕೆಟ್ಟ ಗಳಿಗೆಯಲ್ಲಿ ಯಾಕಾದರೂ ಬೆಟ್ಟು ಗದ್ದೆಯ ಪಾತಜ್ಜಿಯ ಬಳಿ ಹೋದೆನೋ...
ಪಾತಜ್ಜಿ ಹೇಳಿದ್ದಿಷ್ಟು, ಮದುವೆ ಮಂಟಪಕ್ಕೆ ಚಿಕ್ಕಿ ಬರುವಾಗಲೇ ೫ ತಿಂಗಳ ಗರ್ಭಿಣಿಯಾಗಿದ್ದಳು. ಆವಾಗಲೇ ಅಜ್ಜಿ ಮದುವೆ ಬೇಡವೆಂದು ಗಲಾಟೆ ಮಾಡಿದರೂ ಮಾಧೂ ಚಿಕ್ಕಪ್ಪ ಇವಳಲ್ಲದಿದ್ದರೆ ನಾನು ಬೇರೆ ಮದುವೆಯೇ ಆಗುವುದಿಲ್ಲ ಎಂದು ಹಠ ಹಿಡಿದಿದ್ದರು. ಚಿಕ್ಕಿ ಮನೆಗೆ ಬಂದ ನಾಲ್ಕು ತಿಂಗಳಿಗೆಲ್ಲಾ ಮಹೇಶ ಹುಟ್ಟಿದ್ದ. ಊರಿಡೀ ಸುದ್ದಿಯಾಗಿದ್ದರೂ, ಚಿಕ್ಕಿ ಮನೆಯವರಾರೂ ತಲೆ ಹಾಕದಿದ್ದರೂ ಚಿಕ್ಕಪ್ಪ, ಅಪ್ಪ, ಅಮ್ಮ ಚಿಕ್ಕಿಯ ಕೈ ಬಿಟ್ಟಿರಲಿಲ್ಲ. ನಿಮ್ಮ ಮನೆಯವರೆಲ್ಲಾ ದೇವರಂತೆ ಎಂದಿದ್ದರು ಪಾತಜ್ಜಿ. ಅದಾಗಿ ಮೂರೂವರೆ ವರ್ಷದಲ್ಲೇ ಜ್ವರ ಬಂದಿದ್ದು ಇಳಿಯದೇ ಸನ್ನಿಪಾತವಾಗಿ ಚಿಕ್ಕಪ್ಪ ಹಾಗಾಗಿದ್ದರು. 
ನನ್ನ ಚಿಕ್ಕಿ ಮೋಸ ಮಾಡಿದಳು ನನಗೆ ಅನ್ನುವ ಪಿಶಾಚಿ ನನ್ನ ಹೆಗಲೇರಿತ್ತು. ಹುಚ್ಚು ಹಿಡಿದಂತೆ ಮಾಡಿದ್ದೆ. ಅವಳನ್ನು ನೋಡುವುದೂ, ಮುಟ್ಟುವುದೂ ಅಸಹ್ಯ ಅನಿಸಿತ್ತು. ಪಾಪದ ಚಿಕ್ಕಪ್ಪ ಅವಳನ್ನೆಷ್ಟು ಪ್ರೀತಿಸುತ್ತಾರೆ.. ಅದಕ್ಕೆ ಅಜ್ಜಿ ಹಾಗಾಡುವುದು ಅವಳನ್ನು ಕಂಡರೆ...ಈ ಅಪ್ಪ ಅಮ್ಮನಿಗೆ ಬುದ್ಧಿ ಇಲ್ಲ. ಕೆಲಸ ಮಾಡಿ ಅವರ ಅನುಕಂಪ ಗಳಿಸಿದ್ದಾಳೆ ಎಂದೆಲ್ಲಾ ಅನಿಸಿತ್ತು. ಆ ಮನೆಯಲ್ಲಿ ಅವಳನ್ನು ನೋಡುವುದು, ಮಾತನಾಡುವುದು ಕೊನೆಗೆ ಮಹೇಶನನ್ನು ನೋಡುವುದೆ ಹಿಂಸೆ ಎನಿಸತೊಡಗಿತ್ತು. ದಿನೇ ದಿನೇ ಕಂದರ ದೊಡ್ಡದಾಗತೊಡಗಿತ್ತು. ಅಮ್ಮ, ಚಿಕ್ಕಿಗೆ ನನಗೇನಾಗಿತ್ತು ಎಂಬುದರ ಅರಿವೇ ಇರಲಿಲ್ಲ. ಅವಳು ಹತ್ತಿರ ಬಂದಾಗೆಲ್ಲಾ ನೋಯಿಸಿ ವಿಚಿತ್ರ ಖುಷಿಪಡುತ್ತಿದ್ದೆ. ಅವಳ ನಗು ಮೆಲ್ಲನೆ ಮಾಯವಾಗತೊಡಗಿತ್ತು. 
ಅದೇ ಸಮಯದಲ್ಲಿ ಊರಿಗೆ ಬಂದ ಬಾಬಣ್ಣ ಮಾಷ್ಟ್ರ ಮಗ ಪ್ರವೀಣನ ಮೂಲಕ ಚಾನೆಲ್ ಒಂದರಲ್ಲಿ ಕೆಲಸ ಹಿಡಿದು ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದೆ. ಆನಂತರದ ಯಾವ ದೀಪಾವಳಿ, ಯುಗಾದಿ, ಚೌತಿ ಯಾವುದಕ್ಕೂ ಊರಿಗೆ ಹೋಗಲೇ ಇಲ್ಲ. ಅಮ್ಮ, ಅಪ್ಪ, ಚಿಕ್ಕಿ ಮೂವರ ಮೇಲೆ ದ್ವೇಷ ತೀರಿಸುವಂತೆ ಹುಚ್ಚು ಹಿಡಿದಂತೆ ಕೆಲಸದಲ್ಲಿ ಮುಳುಗೇಳುತ್ತಿದ್ದೆ. ಅಪ್ಪ, ಅಮ್ಮನೊಂದಿಗೆ ಮಾತುಕಥೆ ಎಷ್ಟೋ ಬೇಕೋ ಅಷ್ಟು. ಚಿಕ್ಕಿಯೊಂದಿಗೆ ಮಾತಾಡು ಎಂದಾಗೆಲ್ಲಾ ಕೆಲಸವಿದೆ, ನೆಟ್ವರ್ಕ್ ಇಲ್ಲ, ಚಾರ್ಜ್ ಇಲ್ಲಾ ಎಂಬ ನೆಪಗಳು. ಯಾವಾಗ್ಯಾವಾಗ ಅಪ್ಪ, ಮಹೇಶ ಬರಲಿಚ್ಚಿಸಿದರೊ ನಾನು ಮುಂಬೈಗೆ, ಪೂನಾಕ್ಕೆ ಹೋಗೋಕ್ಕಿದೆ ಕೆಲಸದ ಮೇಲೆ ಎಂದು ಸುಳ್ಳು ಕಥೆ ಕಟ್ಟಿದೆ. ಅಮ್ಮನಿಗೆ ಸಂಶಯ ಹುಟ್ಟಿ ಒಂದಲ್ಲ ಸಾವಿರ ಸಲ ಕೇಳಿದ್ದಳು, ಯಾಕೆ ಚಿಕ್ಕಿಯ ಹತ್ತಿರ ಮಾತಾಡ್ತಿಲ್ಲ ಅಂತ. ಅವಳು ಮಾತು ಮುಂದುವರಿಸೋ ಮೊದಲು ಅಯ್ಯೋ, ಹೋಗಮ್ಮ ನಿಂದಿದ್ದೇ, ನಂಗೆ ಟೈಮ್ ಇಲ್ಲ ಎಂದು ಕಾಲ್ ಕಟ್ ಮಾಡುತ್ತಿದ್ದೆಲ್ಲಾಅದರವಳು ಕರೆ ಮಾಡಿದಾಗೆಲ್ಲಾ ಚಿಕ್ಕಿಗೆ ಹುಷಾರಿಲ್ಲ, ದಿನೇ ದಿನೇ ಸವೆಯುತ್ತಾ ಹೋಗುತ್ತಿದ್ದಾಳೆ ಅಂತಾನೇ ಹೇಳುತ್ತಿದ್ದಳು. ಅದನ್ನ ಕೇಳದವಳ ಹಾಗೆ ಸುಮ್ಮನಿದ್ದು ಬಿಡುತ್ತಿದ್ದೆ. 
ಒಂದಾ!ಎರಡಾ? ಛೆ! ಎಷ್ಟು ಕಹಿಯಾಗಿ ಹೋದೆನಲ್ಲಾ ನಾನು. ಮಹೇಶನ ಬಗ್ಗೆಯಂತೂ ಏನೆಲ್ಲಾ ಯೋಚಿಸಿದೆ? ಅದು ಹೇಗೆ ಇಷ್ಟೆಲ್ಲಾ ಓದಿ ತಿಳಿದುಕೊಂಡೂ ಇಷ್ಟು ಕೇವಲವಾಗಿ ವರ್ತಿಸಿದೆ? ಅವಳ ಋಣದ ಜೀವನವಿದು, ಅವಳನ್ನೇ ಕಿತ್ತು ಬಿಸಾಡಿದೆನಲ್ಲ? ನನ್ನಷ್ಟು ವಿದ್ಯೆ, ಓದಿರದಿದ್ದರೂ ಅಪ್ಪ, ಅಮ್ಮ, ಚಿಕ್ಕಪ್ಪರಿಗೆ ಇದ್ದಷ್ಟು ಬುದ್ಧಿ ನಂಗಿಲ್ಲದೆ ಹೋಯಿತಲ್ಲ? ಇಲ್ಲ, ನನ್ನ ಚಿಕ್ಕಿ ಸರಿಯಾಗ್ತಾಳೆ, ಅವಳನ್ನು ಇನ್ನೆಂದೂ ನೋಯಿಸುವುದಿಲ್ಲ ಎಂದುಕೊಂಡೆ. ನನಗಾಗಿ ಅವಳನ್ನು ಉಳಿಸು ಎಂದು ದೇವರಲ್ಲಿ ಬೇಡಿಕೊಂಡೆ. 
ಈ ಯೋಚನೆಗಳಲ್ಲೇ ಊರು ಮುಟ್ಟಿದಾಗ, ಅರೆಬರೆ ಕತ್ತಲಲ್ಲಿ ಹೈವೇ ಹತ್ತಿರ ಕಾಯುತ್ತಾ ನಿಂತಿದ್ದರು ಪುರು, ಬಾಲು ಇಬ್ಬರೂ. ಇಬ್ಬರೂ ನನಗಿಂತ ಉದ್ದವಾಗಿದ್ದರು. ನೋಡಿದ ಕೂಡಲೇ ಖುಷಿಯಲ್ಲಿ ನಕ್ಕವರು “ಚಿಕ್ಕಿ ಹೇಗಿದ್ದಾಳೆ?”ಎಂದ ತಕ್ಷಣ ಸಪ್ಪಗಾದರು. ಸ್ವಲ್ಪ ಹೊತ್ತಿನ ಬಳಿಕ ಪುರು, “ಅಮ್ಮ ತುಂಬಾ ವೀಕ್ ಆಗಿದ್ದಾರೆ” ಎಂದು ಮೆತ್ತಗುಸುರಿದ. ಮನೆಯಂಗಳ ತುಳಿಯುತ್ತಿದ್ದಂತೆ ವಿಚಿತ್ರ ಭಾವುಕತೆ ಸುತ್ತುವರಿಯಿತು. 
ಅಪ್ಪ, ಅಮ್ಮನೂ ಸಾಕಷ್ಟು ಇಳಿದು ಹೋಗಿದ್ದರು. ಕೈಕಾಲು ತೊಳೆದು ಚಿಕ್ಕಿಯ ಕೋಣೆಯೊಳಗೆ ಕಾಲಿಟ್ಟರೆ ಮಂಚದ ಮೇಲೆ ಕೃಶಕಾಯದ ಜೀವವೊಂದು ಮಲಗಿತ್ತು. ಅಲ್ಲೇ ಕೆಳಗಡೆ ಚಾಪೆಯಲ್ಲಿ ಚಿಕ್ಕಪ್ಪ ಮಲಗಿದ್ದರು. ಒಂದೆರೆಗಳಿಗೆ ಅದು ಚಿಕ್ಕಿಯೆಂದು ನಂಬಲಾಗಲೇ ಇಲ್ಲ, ಅಷ್ಟು ಬದಲಾಗಿದ್ದಳು. ರಪ್ಪೆಂದು ಬಾರಿಸಿದಂತಾಯ್ತು ಕಹಿ ವಾಸ್ತವ. ಈ ಗುಬ್ಬಿಯಂತಹ ಜೀವದ ಮೇಲೆ ಇಷ್ಟು ದೊಡ್ಡ, ಧೀರ್ಘ ಸಮರ ಸಾರಿದ್ದೆನೇ? ಕಣ್ಣೀರು ಕಟ್ಟೆಯೊಡೆಯಿತು, ಅವಳ ಹತ್ತಿರ ಕೂತು ನಾನವಳ ತಲೆ ಸವರಿದೆ. ಮೆಲ್ಲಗೆ ಕಣ್ಣು ಬಿಟ್ಟವಳು, ಗುರುತು ಹಿಡಿದು ನಕ್ಕಳು. ಹಗುರಕ್ಕೆ ಕೈಯೆತ್ತಿ ಅವಳ ಕಿರುಬೆರಳಿಂದ ನನ್ನ ಕಿರು ಬೆರಳು ಹಿಡಿದಳು. ಹೊರಗೀಗ ಬೆಳ್ಳನೆ ಬೆಳಕಾಗಿತ್ತು. 

Monday, April 22, 2019

ಅಮ್ಮಾ, ನಾನು ದೇವರಾಣೆ ಕದ್ದಿಲ್ಲಮ್ಮ

ಸುಧಾ ಯುಗಾದಿ ವಿಶೇಷಾಂಕದಲ್ಲಿ ಮೆಚ್ಚುಗೆ ಪಡೆದು, ಸುಧಾದಲ್ಲಿ ಪ್ರಕಟವಾದ ನನ್ನ ಪ್ರಬಂಧ. ನನ್ನ ಮೂಡಿಗೆರೆಯ ನೆನಪುಗಳು

ಮೂಡಿಗೆರೆಯೆಂಬ ಪುಟ್ಟ ಊರಿಗೆ ಸರಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆಯಲ್ಲಿ ಅಮ್ಮ, ಶಿಕ್ಷಕಿಯಾಗಿ ನೇಮಕವಾದಾಗ ನಾನು ಎರಡು ವರ್ಷದವಳು. ಒಂದಿಷ್ಟು ದಿನಗಳು ಜಾನಪ್ಪ ಗೌಡರ ಮನೆಯಲ್ಲಿ ಉಳಿದು ನಂತರ ಶಾಲೆಯೆದುರೇ ಇದ್ದ ಪುಟ್ಟ ಮನೆಗೆ ಶಿಫ್ಟ್ ಆದರು ಅಮ್ಮ. ಮುಂಡುಗೋಡಿನಿಂದ ಬಂದ ನಾಗಿ ಎನ್ನುವ ಹೆಣ್ಣುಮಗಳು ಅದೆಷ್ಟೋ ಸಮಂii ನನ್ನ ನೋಡಿಕೊಳ್ಳುತ್ತಿದ್ದಳು. ಅಣ್ಣ ಶಿರಸಿಯಲ್ಲಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಒಂದು ಪುಟ್ಟ ಮನೆ ಮಾಡಿಕೊಂಡಿದ್ದರು. ನನಗೂ, ನನಗಿಂತ ನಾಲ್ಕು ವರ್ಷ ದೊಡ್ಡವಳಿದ್ದ ಅಕ್ಕನಿಗೂ, ಅಮ್ಮನಿಗೂ ಅಣ್ಣ ಸಿಗುತ್ತಿದ್ದದ್ದು ವಾರದ ಕೊನೆಗಷ್ಟೇ. ಶನಿವಾರ ರಾತ್ರೆಯಾಗುವುದನ್ನೇ ಕಾಯುತ್ತಿದ್ದೆವು, ಅವಾಗಿನ ಸರಕಾರಿ ಕೆಂಪು ಡಬ್ಬಿಯಲ್ಲಿ ಅಣ್ಣ ಬರುವಾಗ ರಾತ್ರಿಯಾಗುತ್ತಿತ್ತು. ಭಾನುವಾರ ರಾತ್ರಿ ಮತ್ತೆ ಹೊರಟು ಹೋಗುತ್ತಿದ್ದರು. ರಜೆಯಲ್ಲಿ ನಾವೆಲ್ಲಾ ಶಿರಸಿಗೆ ಹೋಗಿ ಇರುತ್ತಿದ್ದೆವು.
ಆವಾಗಂತೂ ಫ್ರಿಡ್ಜ್, ಮಿಕ್ಸಿ, ವಾಷಿಂಗ್ ಮೆಷಿನ್, ಗ್ರೈಂಡರ್ ಏನೂ ಇಲ್ಲದ ಕಾಲ. ಅಮ್ಮ ಮನೆಗೆಲಸವನ್ನೆಲ್ಲಾ ಒಬ್ಬರೇ ಮಾಡಿಕೊಂಡು, ದಿನವೂ ಟೀಚಿಂಗ್ ನೋಟ್ಸ್ ಬರೆದು, ಮರುದಿನದ ಪಾಠದ ತಯಾರಿ ಮಾಡಿಕೊಂಡು, ಹೊರಗಡೆ ಹೋಗಿ ಮನೆ ಸಾಮಾನು, ತರಕಾರಿಗಳನ್ನು ಹೊತ್ತು ತಂದು, ನಮ್ಮನ್ನು, ಅದರಲ್ಲೂ ಮಹಾನ್ ತಂಟೆಕೋರಿಯಾದ ನನ್ನನ್ನು ಅದು ಹೇಗೆ ಸಂಭಾಳಿಸುತ್ತಿದ್ದರೋ ಇಂದಿಗೂ ಅರ್ಥವಾಗಿಲ್ಲ. ಅಷ್ಟೇ ಅಲ್ಲದೆ ಶಾಲೆಯಲ್ಲಿಯಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಲ್ಲ ನಮ್ಮನೆಯಲ್ಲೇ ತಯಾರಿ! ಅಮ್ಮನ ಶಿಷ್ಯೆಯಂದಿರೆಲ್ಲಾ ಮನೆ ತುಂಬಿಕೊಳ್ಳುತ್ತಿದರು. ಅಗ ನನ್ನ ಹಿಡಿಯುವವರೇ ಇರುತ್ತಿರಲಿಲ್ಲ. ಆ ಕಾರ್ಯಕ್ರಮಗಳಿಗೆಲ್ಲಾ ತರುತ್ತಿದ್ದ ಮೇಕಪ್ ಕಿಟ್ ಅಂತೂ ನನಗೊಂದು ವಿಸ್ಮಯ. ಅದರಲ್ಲಿದ್ದ ಎಲ್ಲವನ್ನೂ ಮುಟ್ಟಿ ಮುಟ್ಟಿ ನೋಡಿ, ಎಲ್ಲವನ್ನೂ ಮುಖಕ್ಕೆ ಬಳಿಸಿಕೊಂಡು ಸಂತಸಪಡುತ್ತಿದ್ದೆ.
ನನಗೆ ಹಣೆಗೆ ಹಚ್ಚುವ ಬಿಂದಿಯ ಹುಚ್ಚು, ಅದಕ್ಕಾಗ ಹಣೆಬೊಟ್ಟು ಎನ್ನುತ್ತಿದ್ದೆವು. ಬಣ್ಣ, ಬಣ್ಣದ, ವಿವಿಧ ಸೈಜು, ಶೇಪಿನ ಬಿಂದಿಗಳೆಂದರೆ ಜೀವ ಬಿಡುತ್ತಿದ್ದೆ. ಅಮ್ಮನ ಶಿಷ್ಯೆಯರು ನೀರು ಕುಡಿಯಲೆಂದು ಅವಾಗವಾಗ ಮನೆಗೆ ಬರುತ್ತಿದ್ದರು, ಹೆಚ್ಚಿನವರು ಚಿಕ್ಕವಳಾದ ನನ್ನನ್ನು ನೋಡಿ, ಮುಟ್ಟಿ, ಮುದ್ದಿಸಿ ಮಾತನಾಡಲೆಂದೇ ಬರುವವರು. ಅವರಲ್ಲಿ ಯಾರೇ ಆದರೂ ’ಬಾ, ಹಣೆಬೊಟ್ಟು ಕೊಡ್ತೀನಿ’ ಅಂದರೂ ಅವರ ಮನೆಗೆ ಹೊರಟು ಬಿಡುತ್ತಿದ್ದೆ. ಅವರ ಮನೆಯಲ್ಲಿ ಕೊಟ್ಟ ತಿಂಡಿಯನ್ನೆಲ್ಲಾ ತಿಂದು, ಅವರ ಮನೆ ಪೂರ್ತಿ ಸರ್ವೇ ಮಾಡಿ ಅಮ್ಮನಿಗೆ ಹೇಳಬೇಡಿ ಎಂದು ಅವರಿಗೆ ವಾರ್ನಿಂಗ್ ಕೊಟ್ಟು, ಚಿತ್ರ ವಿಚಿತ್ರ ಡಿಸೈನಿನ ಹಣೆಬೊಟ್ಟು ಹಿಡಿದುಕೊಂಡು ಮನೆಗೆ ಬರುತ್ತಿತ್ತು ನನ್ನ ಸವಾರಿ. ಕೆಲವೊಮ್ಮೆ ಅಮ್ಮ ಹುಡುಕಿ ಹುಡುಕಿ ಕಂಗಾಲಾಗುತ್ತಿದ್ದರು.
ಪ್ರತಿ ರಾತ್ರಿ ಮಲಗುವ ಮೊದಲು, ಅಡುಗೆ ಮನೆಯ ಎಲ್ಲಾ ಕೆಲಸ ಮುಗಿಸಿ ಅಮ್ಮ ಬಂದ ಮೇಲೆ ಮೂರೂ ಜನ ಚಂದಿರನನ್ನು ನೋಡುತ್ತಾ ಬಾಗಿಲ ಮೆಟ್ಟಿಲ ಮೇಲೆ ಕೂರುತ್ತಿದ್ದೆವು. ಆಗ ಮೊಸರಿಗೆ ಸಕ್ಕರೆ ಹಾಕಿ ಕಲೆಸಿ ಇಬ್ಬರಿಗೂ ಕಥೆ ಹೇಳುತ್ತಾ ತಿನ್ನಿಸುತ್ತಿದ್ದರು. ಒಂದೊಂದು ದಿನ ಒಂದೊಂದು ಕಥೆ. ಬೆಣ್ಣೆ ಕದ್ದ ಕೃಷ್ಣನ ಬಾಯಿಯಲ್ಲಿ ಬ್ರಹ್ಮಾಂಡ ನೋಡಿ ಬೆರಗಾಗಿರುವ ಯಶೋಧೆ, ಗೋಪಾಲಕರ ಸುಂದರ ಚಿತ್ರವಿದ್ದ ಒಂದು ಕ್ಯಾಲೆಂಡರ್ ನಮ್ಮ ಮನೆಯಲ್ಲಿತ್ತು. ಅದರ ಕಥೆ ಹೇಳಮ್ಮ ಎಂದು ಪೀಡಿಸಿದಾಗ ಆ ಚೆಂದದ ಕಥೆಯನ್ನು ಹೇಳಿದ್ದರು ಅಮ್ಮ. ಮತ್ತೆ ’ಅಮ್ಮ, ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಎಂಬ ಅತೀ ಚೆಂದದ ಹಾಡನ್ನು ಮೆಲುದನಿಯಲ್ಲಿ ಹಾಡುತ್ತಿದ್ದರು. ಅದೊಂದು ಸುಂದರ, ಅಚ್ಚಳಿಯದ ನೆನಪು.
ಒಂದು ದಿನ ಬಣ್ಣದ ಪೆನ್ಸಿಲುಗಳನ್ನು ತರಲೆಂದು ಅಕ್ಕನೊಂದಿಗೆ ಹೋಗಿದ್ದೆ, ಅಕ್ಕ ತೆಗೆದುಕೊಳ್ಳುತ್ತಿದ್ದಳು. ನಾನು ಪಕ್ಕದ್ದಲ್ಲಿದ್ದ ಚೈತನ್ಯ ಸ್ಟೋರ್ಸಿನಲ್ಲಿ ನನಗಿಂತ ನಾಲ್ಕು ಪಟ್ಟು ಎತ್ತರವಿದ್ದ ಶೋಕೇಸಿನ ಮೇಲಿದ್ದ ಗಾಜಿನ ಜಾಡಿಯಲ್ಲಿ ಪೇರಿಸಿಟ್ಟ ಅಲ್ಕೋಹಾಲು ಎಂದು ನಾವು ಕರೆಯುತ್ತಿದ್ದ ಹಾಲು ಖೋವಾ, ಕೈಲಿ ದಾರ ಹಿಡಿದು ತಿರುಗಿಸೋ ಹತ್ತು ಪೈಸೆ ನಾಣ್ಯದ ಶೇಪಿನ ಗುಲಾಬಿ ಬಣ್ಣದ ಪೆಪ್ಪರಮಿಂಟು, ಚೆಂದದ ಪುಟ್ಟ ಪುಟ್ಟ ಡಬ್ಬಿಗಳಲ್ಲಿರುವ ಜೀರಿಗೆ ಮಿಠಾಯಿ, ಕಡ್ಲೆಮಿಠಾಯಿಗಳನ್ನು ನೋಡುತ್ತಾ, ಅಕ್ಕನ ಪೆನ್ಸಿಲ್ಲು ತೊಗೊಂಡು ಆದ ಮೇಲೆ ಉಳಿದ ಹಣದಲ್ಲಿ ಏನು ತೆಗೆದುಕೊಳ್ಳುವುದು ಎಂದು ಲೆಕ್ಕಾಚಾರ ಹಾಕುತ್ತಿದ್ದೆ. ನನ್ನ ಅಣ್ಣನಿಗಿಂತ ಸಾಕಷ್ಟು ಎತ್ತರ, ದಪ್ಪವಿರುವ ಯಾರೋ ಮಾಮ ಬಂದು ನಿಂತು ಅಂಗಡಿಯಾತನೊಂದಿಗೆ ಏನನ್ನೋ ಕೇಳಿದರು. ಅವರ ಸ್ವರವೂ ತುಂಬಾ ಚೆನ್ನಾಗಿತ್ತು. ಯಾಕೋ ನಾನು ತಲೆಯೆತ್ತಿ ನೋಡಿದೆ, ಮೊದಲೇ ಕುಳ್ಳಿ! ಗಡ್ಡ, ಮೂಗು ಮತ್ತೆ ಕನ್ನಡಕದ ಫ್ರೇಮು ಕಂಡಿತು. ಮತ್ತೆ ಅಕ್ಕನ ಬಳಿ ಹೋದಾಗ ಅವಳು ಮೆಲ್ಲನೆ ಉಸುರಿದಳು, ಅವರು ಪೂರ್ಣಚಂದ್ರ ತೇಜಸ್ವಿ ಕಣೇ, ತುಂಬಾ ದೊಡ್ಡ ಮನುಷ್ಯರು ಅಂತ! ನಾನು ತಲೆ ತಿರುಗಿಸಿ ನೋಡುವಷ್ಟರಲ್ಲಿ ಅವರು ಹೊರಟಾಗಿತ್ತು.
ಆಡಿ ಬರಲು, ನಿದ್ದೆ ಮಾಡಲು ಮತ್ತು ತಿಂಡಿ ತಿಂದು ಬರಲು ಬಾಲವಾಡಿಗೆ ಹೋಗುತ್ತಿದ್ದೆ, ಯಾರೊಂದಿಗೂ ಮಾತು-ಕಥೆಯಿಲ್ಲ. ಹೋಗುವುದು, ಗುಮ್ಮನ ಹಾಗೆ ಕೂರುವುದು, ಡಬ್ಬದಿಂದ ತಿಂಡಿ ತಿನ್ನುವುದು ಮತ್ತು ಜಾರು ಬಂಡಿಯಾಡುವುದು. ಕೆಲವೊಮ್ಮೆ ಜೋಕಾಲಿಯಲ್ಲಿ ಕೂತು ತೂಗಿಕೊಳ್ಳುವುದು, ತುಂಬಾ ಮಕ್ಕಳು ಇರುತ್ತಿದ್ದರಿಂದ ಆ ಅವಕಾಶ ತುಂಬಾ ಕಡಿಮೆ ಸಿಗುತ್ತಿತ್ತು. ಹೀಗಾಗಿ ಎಲ್ಲಿ ಜೋಕಾಲಿ ಕಂಡರೂ ತೂಗುವ ಆಸೆಯಾಗುತ್ತದೆ. ಸರಿಕಟ್ಟಾಗಿ ಶಾಲೆಗೆ ಹೋಗಲು ಶುರು ಮಾಡಿದಾಗ ನಾಲ್ಕು ವರ್ಷ, ಮನೆಯಲ್ಲಿ ಕಾಟ ತಾಳಲಾರದೆ ಒಂದು ವರ್ಷ ಜಾಸ್ತಿ ತೋರಿಸಿ ಅಡ್ಮಿಶನ್ ಮಾಡಿಸಿದ್ದರು. ಹೊಸ ಯುನಿಫಾರ್ಮ್, ಶೂಸ್, ಬುಕ್ಸ್ ಆಸೆಗೆ ಸೇರಿದವಳಿಗೆ, ಶಾಲೆಯಲ್ಲಿದ್ದಷ್ಟೂ ಹೊತ್ತು ಪಂಜರದಲ್ಲಿ ಕೂಡಿ ಹಾಕಿದಂತೆ ಅನಿಸುತ್ತಿತ್ತು. ಯಾವಾಗ ಘಂಟೆ ಬಾರಿಸುವುದಿಲ್ಲ ಎಂದು ಕಾದು ಕುಳಿತಿರುತ್ತಿದ್ದೆ. ಇವತ್ತಿಗೂ ಶಾಲೆಗೆ ಹೋಗುವ ಮಕ್ಕಳನ್ನು ಕಂಡರೆ ಪಾಪ ಎಂದೇ ಅನಿಸುತ್ತದೆ.
ಶಾಲೆಯಲ್ಲಿ ಯಾರು ಏನು ಕೇಳಿದರೂ ಕೊಟ್ಟು ಬರುತ್ತಿದ್ದೆ. ನನ್ನ ಪೆನ್ಸಿಲ್, ರಬ್ಬರ್, ಬಳಪ, ಪುಸ್ತಕ, ಪುಸ್ತಕದಲ್ಲಿಟ್ಟ ನವಿಲು ಗರಿ, ಬಣ್ಣದ ಪೆನ್ಸಿಲುಗಳು, ಹೊಸ ಸ್ಲೇಟು ಎಲ್ಲವೂ... ಅಣ್ಣ ಅಮ್ಮನಿಗೆ ಏನು ಹೇಳಬೇಕು ಗೊತ್ತಾಗುತ್ತಿರಲಿಲ್ಲ. ಶಾಲೆಗೆ ಸೇರಿದ ಮೇಲೆ ನನ್ನ ಕಾಟ ಬೇರೊಂದು ರೂಪ ಪಡೆದಿತ್ತು! ಅಕ್ಕ ‘ದಾನ ವೀರ ಶೂರ ಕರ್ಣಿ’ ಎಂದೇ ಹೆಸರಿಟ್ಟಿದ್ದಳು. ಇವತ್ತೂ ಹಾಗೇ ಕರೆದು ಚುಡಾಯಿಸುತ್ತಿರುತ್ತಾಳೆ.
ಒಂದು ದಿನ ಬೆಳಿಗ್ಗೆ ಅಮ್ಮ ಕಸ ಗುಡಿಸುತ್ತಿದ್ದಾಗ ನನ್ನ ಚೀಲದಿಂದ ಏನೋ ಹರಿದು ಬರುವುದು ಕಂಡಿತು, ಗಾಬರಿಯಾದ ಅಮ್ಮ ಚೀಲ ಕೊಡವಿದರೆ ನುಣುಪು ಕಲ್ಲುಗಳು, ತುಂಬಾ ಆಗಲಿ ಎಂದು ತುಂಡು ತುಂಡು ಮಾಡಿಟ್ಟ ಆನೆ ಬಳಪ, ಮರಳು, ಚಿಪ್ಪು, ನೆಲಕ್ಕೆ ತಿಕ್ಕಿ ಬಿಸಿ ತಾಗಿಸುವ ಹಣ್ಣು ಹುರುಳಿಕಾಯಿಯ ಥರದ ಅದ್ಯಾವುದೋ ಬೀಜಗಳು, ಸ್ಲೇಟು, ಗೋಲಿಗಳು, ಒಂದಿಷ್ಟು ತುಂಡಾದ ಹಳೇ ಪೆನ್ನು ಪೆನ್ಸಿಲ್ಲುಗಳು, ಇವಿಷ್ಟರ ಒಟ್ಟಿಗೆ ಗುಂಡು ಗುಂಡಾಗಿರುವ ಕೆಲವು ಕಾಯಿಗಳು ಉದುರಿದವು. ಏನಿದು ಎಂದು ಅಮ್ಮ ಹತ್ತಿರ ಹೋಗಿ ನೋಡಿದರೆ, ಮುಟ್ಟಿದರೆ ಶೆಲ್ ಒಳಗೆ ಹೋಗಿ, ಪುಟ್ಟ ಚಕ್ಕುಲಿಯಂತಾಗುವ ಯಾವುದೋ ಹುಳಗಳು. ಹಾರಿ ಬಿದ್ದ ಅಮ್ಮ, ಅಕ್ಕ ಅವನ್ನೆಲ್ಲಾ ಎತ್ತಿ ಹೊರಗೆ ಬಿಸಾಕಿದ್ದರು. ನನಗೆ ಸಿಟ್ಟೋ ಸಿಟ್ಟು! ವಾರಾಂತ್ಯದಲ್ಲಿ ಎಲ್ಲಾ ರಿಪೋರ್ಟುಗಳು ಅಣ್ಣನಿಗೆ ಹೋಗುತ್ತಿದ್ದವು. ಅಣ್ಣ ನಕ್ಕೂ ನಕ್ಕೂ ಕಣ್ಣೀರು ಬರುತ್ತಿತ್ತು. ಒಟ್ಟಿನಲ್ಲಿ ಎಲ್ಲರೂ ನಗುವುದನ್ನು ನೋಡಿ ನಾನೂ ನಗುತ್ತಿದ್ದೆ.
ಅದೊಂದು ದಿನ ಬೆಳಗ್ಗೆ, ಎದ್ದಿದ್ದೇನೆ. ಹೆಚ್ಚಾಗಿ ಎದ್ದ ಕೂಡಲೇ ‘ಅಮ್ಮಾ’ ಎಂದು ಬೊಬ್ಬೆ ಹಾಕಿ ಅಳಬೇಕು, ಅಮ್ಮ ಇದ್ದ ಬಿದ್ದ ಎಲ್ಲಾ ಕೆಲಸ ಬಿಟ್ಟು ಓಡಿ ಬರಬೇಕು. ಆ ದಿನ ಮೇಜಿನ ಕೆಳಗಿಟ್ಟಿದ್ದ ಅಮ್ಮನ ವ್ಯಾನಿಟಿ ಬ್ಯಾಗು ಕಣ್ಣಿಗೆ ಬಿತ್ತು. ಅಕ್ಕ ಯಥಾಪ್ರಕಾರ ಹೊರಗೆ ಕೂತು ಓದುತ್ತಿದ್ದಳು. ಅಮ್ಮನ ಬ್ಯಾಗು ಮುಟ್ಟುವುದು ನಾವೆಂದೂ ಮಾಡಬಾರದ ಕೆಲಸವಾಗಿತ್ತು. ಏನಾದರೂ ಬೇಕಿದ್ದರೆ ಅಕ್ಕ ಅಮ್ಮನನ್ನು ಕೇಳಿದರೆ, ಅವಳಿಗೆ ಬ್ಯಾಗು ತರಲು ಹೇಳುತ್ತಿದ್ದರು, ಅವರೇ ತೆಗೆದುಕೊಡಬೇಕಿತ್ತು. ನಾನು ಗೆಜ್ಜೆ ಸದ್ದು ಮಾಡದೆ ಹಾಗೆ ಮೆಲ್ಲಮೆಲ್ಲ ಹೆಜ್ಜೆ ಹಾಕಿ ಹೋಗಿ, ಅವರ ಬ್ಯಾಗ್ ತೆಗೆದೆ. ಅವರ ಶಾಲೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದಲ್ಲಿ, ಅಮ್ಮ ಯಾವ ತರಗತಿಗೆ ಕ್ಲಾಸ್ ಟೀಚರ್ ಆಗಿದ್ದರೋ ಆ ತರಗತಿಯ ಮಕ್ಕಳ ಕೈಯಿಂದ ದುಡ್ಡು ಕಲೆಕ್ಟ್ ಮಾಡಿ ಶಾಲೆಯ ಕಚೇರಿಗೆ ಕೊಡಬೇಕಾಗಿತ್ತು. ಹಾಗೆ ಕಲೆಕ್ಟ್ ಮಾಡಿದ ದುಡ್ಡು ಅಂದು ಅವರ ಬ್ಯಾಗ್ ಅಲ್ಲಿತ್ತು. ಎಲ್ಲವೂ ಒಂದು ಎರಡು ರೂಪಾಯಿಯ ನೋಟುಗಳು! ನನ್ನ ಪುಟ್ಟ ತಲೆಗೆ ಅಷ್ಟೂ ನೋಟುಗಳನ್ನು ಕಂಡು ಅಚ್ಚರಿಯೆನಿಸಿರಬೇಕು. ಮರದ ಉದ್ದ ಸ್ಟಾಂಡ್ ಅಲ್ಲಿ ನನ್ನ ಮತ್ತು ಅಕ್ಕನ ಬ್ಯಾಗು ಇಡುತ್ತಿದ್ದೆವು. ಅಲ್ಲಿಗೆ ಹೋಗಿ, ನನ್ನ ಚೀಲ ಎತ್ತಿಕೊಂಡು ಬಂದು, ನನ್ನ ಕೈಗಳಿಗೆ ಅದೆಷ್ಟು ಹಿಡಿಯುತ್ತೋ ಅಷ್ಟೂ ನೋಟುಗಳನ್ನು ಮುದ್ದೆ ಮುದ್ದೆ ಮಾಡಿ ಚೀಲಕ್ಕೆ ತುರುಕುತ್ತಿದ್ದೆ.
ಒಂದಷ್ಟು ತುರುಕಿಯಾಗಿರಬೇಕು, ಬೆನ್ನ ಮೇಲೆ ಧಬ್ ಅಂತ ಪೆಟ್ಟು ಬಿತ್ತು! ನೋವಾಗಿ ಹಿಂತಿರುಗಿ ನೋಡಿದರೆ ಅಮ್ಮ ನಿಂತಿದ್ದಾರೆ. ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿದ್ದ ಅಮ್ಮನಿಗೆ, ಏನಿವತ್ತು ಇವಳು ಇನ್ನೂ ಎದ್ದಿಲ್ಲ ಅನಿಸಿ ಬಂದು ನೋಡಿದರೆ ನಾನು ಜಗತ್ ವಿಖ್ಯಾತ ಕಳ್ಳಿಯಾಗುವ ಎಲ್ಲಾ ಪ್ರಯತ್ನಗಳನ್ನು ಮಾಡ್ತಾ ಇದ್ದೀನಿ! ಅವತ್ತು ಸರಿಯಾಗಿ ಪೆಟ್ಟು ತಿಂದಿದ್ದೆ. ಮೊದಲೇ ಎಷ್ಟು ಮಾಡಿದರೂ ಮುಗಿಯದ ಮನೆ ಕೆಲಸಗಳು, ಜವಾಬ್ದಾರಿಗಳು, ಅಣ್ಣ ಬೇರೆ ದೂರದ ಊರಲ್ಲಿರುವುದು. ಇದರ ಮೇಲೆ ನನ್ನ ಈ ಕಳ್ಳತನ, ಪಾಪ ಅಮ್ಮ! ಎಷ್ಟು ಬೇಜಾರಾಗಿರಬೇಕು. ಅವತ್ತು ಇಡೀ ವಠಾರದಲ್ಲಿ ಗಿರಿಜಾ ಟೀಚರ್ ಮಗಳು ಬ್ಯಾಗಿಗೆ ದುಡ್ಡು ತುರುಕಿದ್ದೇ ಕಥೆ! ಮೂರನೇ ಮನೆ ಸತ್ಯ ನಾರಾಯಣ ಮಾಮ-ನೇತ್ರಾ ಆಂಟಿ, ಕೊನೆ ಮನೆಯಲ್ಲಿದ್ದ ಶಾರದಾ ಆಂಟಿ ಮತ್ತವರ ಗಂಡ ಪಳನಿ ಮಾಮ (ಅವರಿಗೆ ನಾನು ಕರಿಯುತ್ತಿದ್ದದ್ದು ಪಣ್ಣನಿಳಿ ಮಾಮ ಎಂದೇ), ಮತ್ತೆ ಪಕ್ಕದ ಕಂಪೌಂಡ್ ಅಲ್ಲಿದ್ದ ಸಾವಿತ್ರಿ ಟೀಚರ್, ಭಾನುಮತಿ ಆಂಟಿ, ಶಿವಣ್ಣ ಮಾಮ ಎಲ್ಲರೂ ಅಂದು ಬುದ್ಧಿ ಹೇಳಿದ್ದೇ ಹೇಳಿದ್ದು. ನಾನು, ತಲೆ ತಗ್ಗಿಸಿ ನಾಚಿಕೆಯಿಂದಲೂ, ಬೇಜಾರಿಂದಲೂ ತಲೆಯಾಡಿಸಿದ್ದೂ ಆಯಿತು. ಕೊನೆಗೆ ಭಾನುಮತಿ ಆಂಟಿ ಕೇಳಿದ್ದಕ್ಕೆ ಹಣೆಬೊಟ್ಟು ತೊಗೊಳ್ಳೋಕೆ ದುಡ್ಡು ತೆಗೆದೆ ಅಂದಿದ್ದೆ. ವಾರದ ಕೊನೆಗೆ ಅಣ್ಣ ಬಂದಾಗ ಕಣ್ಣಲ್ಲಿ ನೀರು ಸುರಿಸಿ ಅಳುವಂತೆ ಹೊಡೆದಿದ್ದರು. ಅದೇ ಕೊನೆ, ಅಮ್ಮನ ಬ್ಯಾಗಿರಲಿ, ಇಂದಿಗೂ ಯಾರ ಬ್ಯಾಗೂ ಮುಟ್ಟುವ ಸಾಹಸಕ್ಕೆ ಹೋಗುವುದಿಲ್ಲ! ಧೂಮ್ ಚಿತ್ರದಲ್ಲಿ ಹ್ಯಾಂಡ್ಸಮ್ ಕಳ್ಳ ಹೃತಿಕ್ ಅನ್ನು ನೋಡುವಾಗೆಲ್ಲ, ಒಂದು ಕ್ಷಣ ‘ಛೆ! ನನ್ನ ಕರಿಯರ್ ಹಾಳಾಯ್ತಲ್ಲ, ಇಂಟರ್ ನ್ಯಾಷನಲ್ ಕಳ್ಳಿಯಾಗುವ ಅವಕಾಶ ತಪ್ಪಿ ಹೋಯ್ತಲ್ಲ’ ಅನಿಸುತ್ತದೆ!.
ಮೂರನೇ ಕ್ಲಾಸಿಗೆ ಕಾಲಿಟ್ಟಿದ್ದೆ, ನನ್ನ ಪಕ್ಕ ಕೂರಲು ಒಬ್ಬಳು ಹೊಸ ಹುಡುಗಿ ಬಂದ್ದಿದಳು. ಅವಳಿಗೆ ಇಬ್ಬರು ಅಮ್ಮಂದಿರು. ಇವಳ ಚಿಕ್ಕಮ್ಮನ ಮಕ್ಕಳಿಗೆ ಸಿಕ್ಕಿದ್ದಷ್ಟು ಇವಳಿಗೆ ಸಿಗುತ್ತಿರಲಿಲ್ಲ, ತಿಂಡಿಗಳಾಗಲಿ, ಹೊಸ ಬಟ್ಟೆಗಳಾಗಲಿ....ಸರಿ, ನಾನು ಡಬ್ಬಿಯಲ್ಲಿದ್ದ ಊಟ, ಮನೆಯಲ್ಲಿಟ್ಟಿದ್ದ ತಿಂಡಿ, ಹಣ್ಣುಗಳು ಏನೂ ಸಿಗದೇ ಹೋದರೆ ಬೆಲ್ಲವನ್ನಾದರೂ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅವಳು ಖುಷಿಯಿಂದ ನಕ್ಕಾಗೆಲ್ಲ ನಂಗೂ ಖುಷಿ. ಆ ವರ್ಷ ಚೌತಿಗೆ ಅಜ್ಜಮ್ಮ ಊರಿಗೆ ಹೋಗಲೆಂದು, ಅಮ್ಮ ಹಸಿರು ಎಲೆ ಎಲೆಗಳ ಅವಾಗಷ್ಟೇ ಟ್ರೆಂಡ್ ಆಗುತ್ತಿದ್ದ ಚೂಡಿದಾರವನ್ನು ಇಬ್ಬರಿಗೂ ಹೊಲಿಸಿದ್ದರು. ಇಬ್ಬರೂ ಅದು ಟೈಲರ್ ಶಾಪಿನಿಂದ ಮನೆಗೆ ಬಂದ ಕೂಡಲೇ ತೊಟ್ಟು ನೋಡಿ ಕುಣಿದದ್ದೂ ಆಗಿತ್ತು. ಮರುದಿನ ನನ್ನ ಸ್ನೇಹಿತೆ ಶಾಲೆಯಲ್ಲಿ ನೋಡೇ, ಹಬ್ಬ ಬಂತು. ನಮ್ಮ ಅಪ್ಪ, ಚಿಕ್ಕಮ್ಮನ ಮಕ್ಕಳಿಗಷ್ಟೇ ಬಟ್ಟೆ ಕೊಡಿಸಿದ್ದಾರೆ, ನಮಗೆ ಮಾತ್ರ ಕೊಡಿಸಲೇ ಇಲ್ಲ ಎಂದಳು. ನನ್ನ ಹೊಸ ಚೂಡಿದಾರ್ ಬ್ಯಾಗಲ್ಲಿ ತುರುಕಿಕೊಂಡು ಬಂದು ಅವಳಿಗೆ ಕೊಟ್ಟೆ.
ಊರಿಗೆ ಹೊರಡೋ ಮೊದಲು ಅಮ್ಮ ಅದೆಷ್ಟು ಹುಡುಕಿದರೂ ಮನೆಯಿಡೀ ಸಿಗಲಿಲ್ಲ. ಎಲ್ಲಿ ಸಿಗುತ್ತದೆ?! ಚೌತಿಗೆ ಬೇರೆ ಬಟ್ಟೆ ಹಾಕಿದ್ದಾಯ್ತು. ಒಂದು ದಿನ ನಾನು ಅಕ್ಕ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಚೂಡಿದಾರ ತೊಟ್ಟು ಹೋಗುತ್ತಿದ್ದ ನನ್ನ ಸ್ನೇಹಿತೆಯನ್ನು ನೋಡಿ ಅಕ್ಕ ಬೆಚ್ಚಿಬಿದ್ದಳು, ನಿಜ ಹೇಳು, ನಿಂದೇ ಅಲ್ವಾ ಆ ಡ್ರೆಸ್? ತಡಿ, ಅಮ್ಮನಿಗೆ ಹೇಳ್ತೇನೆ ಎಂದು ಬೆದರಿಸಿದವಳನ್ನು ತಡೆಯಲು ನಾ ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ. ಪ್ರತೀ ಸಲ ಜಗಳವಾದಾಗ, ಹೇಳಿದ ಕೆಲಸ ನಾ ಮಾಡದಿದ್ದಾಗ ಅದೊಂದು ಬ್ಲಾಕ್ ಮೇಲ್ ಅಸ್ತ್ರವಾಗಿತ್ತು ಅವಳಿಗೆ! ಯಾಕೋ ಗೊತ್ತಿಲ್ಲ, ಅವಳೆಂದೂ ಹೇಳಲೇ ಇಲ್ಲ. ಮುಂದಿನ ವರ್ಷದಿಂದ ನನ್ನ ಸ್ನೇಹಿತೆ ಶಾಲೆಗೆ ಬರಲೂ ಇಲ್ಲ. ಮುಂದೊಂದು ದಿನ ನಾನೇ ಅಣ್ಣ ಅಮ್ಮನಿಗೆ ಹೇಳಿದಾಗ ನನ್ನ ಡಿಗ್ರಿ ಮುಗಿದಿತ್ತು! ಅದಕ್ಕೇ ಅಲ್ಲವೇ ಅಕ್ಕ ನಿಂಗೆ ಕರ್ಣಿ ಅಂತ ಹೆಸರಿಟ್ಟಿದ್ದು ಎಂದು ಇಬ್ಬರೂ ಮನಸ್ಸು ಬಿಚ್ಚಿ ನಕ್ಕಿದ್ದರು.
ಡ್ರೆಸ್ ಹಗರಣವಾದಾಗ ಅಕ್ಕ ಒಂದು ಮಾತು ಹೇಳಿದ್ದಳು, ‘ನೀನು ಅಣ್ಣ ಅಮ್ಮನಿಗೆ ಹೇಳದೆ ಈ ಥರ ಮಾಡ್ತೀಯಲ್ಲಾ, ತಪ್ಪು ಅಂತ ಒಂದಿನ ನಿಂಗೆ ಗೊತ್ತಾಗುತ್ತೆ’ ಅಂತ. ಗೊತ್ತಾಗಲಿಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ.
ಅಜ್ಜಮ್ಮ ಊರಿಗೆ ಹೋದಾಗೆಲ್ಲ ದೊಡ್ಡಮ್ಮ ನಂಗೂ, ಅಕ್ಕನಿಗೂ ಐದೋ, ಹತ್ತೋ ರೂಪಾಯಿಗಳನ್ನು ಕೊಡುವುದು ರೂಢಿ. ಅದು ಸೀದಾ ಅಮ್ಮನ ಕೈಗೆ ಹೋಗುತ್ತಿತ್ತು. ಒಂದು ಸಲ, ಊರಿಂದ ಬೇಗ ಹೊರಟು ಬಂದೆವು. ಮಧ್ಯಾಹ್ನಕ್ಕೆಲ್ಲಾ ಮೂಡಿಗೆರೆಯಲ್ಲಿದ್ದೆವು. ಇಡೀ ದಿನ ರಜೆಯಾಗುವ ಬದಲು, ಮಧ್ಯಾಹ್ನವಾದರೂ ಶಾಲೆಗೆ ಹೋಗಲಿ ಎಂದು ಅಮ್ಮ ಕರಕೊಂಡು ಬಂದು ಶಾಲೆಗೆ ಬಿಟ್ಟರು. ಆ ಸಲ ದೊಡ್ಡಮ್ಮ ಕೊಟ್ಟ ಹತ್ತು ರೂಪಾಯಿ ನಮ್ಮ ಕೈಯಲ್ಲೇ ಉಳಿಯಿತು. ನನ್ನ ಪಾಲಿನ ಹತ್ತು ರೂಪಾಯಿಯ ಆ ನೋಟನ್ನು ಶಾಲೆಗೆ ಬಂದ ತಕ್ಷಣ ನಾನು ನೀತಿ ಭೋಧೆ ಪುಸ್ತಕದ ಬೈಂಡ್ ನಡುವೆ ಹಾಕಿಟ್ಟೆ, ಮನೆಗೆ ಹೋದ ಮೇಲೆ ಅಮ್ಮನಿಗೆ ಕೊಡೋಣವೆಂದು. ಆ ದಿನ ಮಧ್ಯಾಹ್ನದ ಮೊದಲ ಪೀರಿಯಡಿನಲ್ಲಿ ಸ್ನೇಹಾ ಎಂಬ ಹುಡುಗಿಯೊಬ್ಬಳು ಜೋರಾಗಿ ಅಳಲಾರಂಭಿಸಿದಳು. ಅವಳ ತಂದೆ ಸಾಕ್ಸ್ ಕೊಳ್ಳಲೆಂದು ಅವಳಿಗೆ ಹತ್ತು ರೂಪಾಯಿ ಕೊಟ್ಟಿದ್ದರಂತೆ. ಅದು ಕಳೆದುಕೊಂಡಿದ್ದಾಳೆ. ಕ್ಲಾಸು ತೆಗೆದುಕೊಳ್ಳುತ್ತಿದ್ದ ಸಿಸ್ಟರ್, ಮಕ್ಕಳೇ, ಸ್ನೇಹಾ ದುಡ್ದು ಯಾರು ತೆಗೆದಿದ್ದರೂ ಕೊಟ್ಟುಬಿಡಿ ಅಂದರು. ಯಾರೂ ಮುಂದೆ ಬರಲಿಲ್ಲ. ಅತ್ತೂ ಅತ್ತೂ ಅವಳ ಮುಖ ಕೆಂಪಾಗಿತ್ತು. ಇನ್ನೊಂದು ಪಿರಿಯಡ್ ಸ್ಟಾರ್ಟ್ ಆಗೋ ಮೊದಲು ಒಂದೈದು ನಿಮಿಷದ ಬ್ರೇಕ್ ಸಿಕ್ಕಿದಾಗ, ’ಅಪ್ಪ ಹೊಡಿತಾರೆ’ ಎನ್ನುತ್ತಾ ಬಿಕ್ಕುತ್ತಿದ್ದಳು.
ಅವಳನ್ನೇ ನೋಡುತ್ತಿದ್ದ ನಾನು, ಪುಸ್ತಕದ ಬೈಂಡಿನ ನಡುವಿದ್ದ ಹತ್ತು ರೂಪಾಯಿ ನೋಟನ್ನು ತೆಗೆದು ಅವಳಿಗೆ ಕೊಟ್ಟುಬಿಟ್ಟೆ.
ನಮ್ಮ ಕ್ಲಾಸಿನಿಂದ ಹೊರಹೋದ ಸಿಸ್ಟರ್, ಮುಂದಿನ ಪೀರಿಯಡ್ ತೆಗೆದುಕೊಳ್ಳಲು ಬರುತ್ತಿದ್ದ, ಶಾಲೆಗೆ ಹೊಸದಾಗಿ ಬಂದ ಟೀಚರರಿಗೆ ಸ್ನೇಹಾಳ ಹಣ ಕಳೆದ ವಿಷಯ ಹೇಳಿದ್ದಾರೆ. ಅವರು ಬಂದೊಡನೆ ದೊಡ್ಡ, ದಪ್ಪ ಸ್ವರದಲ್ಲಿ, “ಯಾರದು ಸ್ನೇಹಾಳ ದುಡ್ಡು ತೆಗೆದಿದ್ದು, ಕೊಟ್ಟು ಬಿಡಿ, ಇಲ್ಲಾ ಇಡೀ ಕ್ಲಾಸಿಗೆ ಬರೆ ಬೀಳುತ್ತೆ ಎಂದು ಗುಡುಗಿದರು. ಸ್ನೇಹಾ ಎದ್ದು ನಿಂತು “ಟೀಚರ್, ಸೌಮ್ಯ ಕದ್ದಿದ್ದಳು, ನೋಡಿ ವಾಪಸು ಕೊಟ್ಟಿದ್ದಾಳೆ”ಎಂದು ಆ ಹತ್ತರ ನೋಟು ತೋರಿಸಿದಳು. ಅವರೋ ಹತ್ತಿರ ಕರೆದು, ಮಾತನಾಡಲೂ ಅವಕಾಶ ಕೊಡದೆ, ದಪ್ಪ ಬೆತ್ತದಲ್ಲಿ ಹಿಂಗಾಲಿಗೆ ಬರೆ ಬೀಳುವಂತೆ ಹೊಡೆದಿದ್ದಲ್ಲದೇ ಉಳಿದ ಪಿರಿಯಡ್ ಇಡೀ ನನ್ನನ್ನು ಮೊಣಕಾಲೂರಿಸಿ ಬೋರ್ಡಿನ ಹತ್ತಿರ ನಿಲ್ಲಿಸಿದರು. ಆ ಹತ್ತು ರೂಪಾಯಿ ನೋಟು ಅವರ ಟೇಬಲ್ ಮೇಲೆ ಡಸ್ಟರ್ ಕೆಳಗಿತ್ತು. ಇಡೀ ಕ್ಲಾಸಿಗೆ ಅವತ್ತು ನನ್ನ ಬಗ್ಗೆ ನೀತಿ ಪಾಠ. ನಾನು ಎಲ್ಲರೆದುರು ಕಳ್ಳಿಯಾಗಿದ್ದೆ. ಹೊರಗಿನವರ ಬಳಿ ಒಂದೂ ದಿನವೂ ಬೈಸಿಕೊಳ್ಳದೇ, ಹೊಡೆಸಿಕೊಳ್ಳದವಳಿಗೆ ಅಂದಾದ ಗಾಯದ ಕಲೆ ಹಾಗೆ ಉಳಿದು ಹೋಗಿದೆ.
ಆ ಪೀರಿಯಡ್ ಮುಗಿಯುವ ಹೊತ್ತಿಗೆ ನಮ್ಮ ಕ್ಲಾಸ್ ಎದುರು ಹೆಡ್ ಮಿಸ್ ಹೋಗುತ್ತಿದ್ದವರು
ಮೊಣಕಾಲೂರಿ ನಿಂತ ನನ್ನನ್ನು ನೋಡಿ ಕ್ಲಾಸಿನ ಒಳಗೆ ಬಂದರು. ಟೀಚರ್ ಬಾಯಿಯಿಂದ ಇಡೀ ಪ್ರಹಸನ ಕೇಳಿ ನನ್ನ ಕಡೆ ತಿರುಗಿ "ಏನಮ್ಮ ಸೌಮ್ಯ, ಎಲ್ಲಿಂದ ಬಂತು ದುಡ್ಡು?” ಎಂದು ಕೇಳಿದರು. ಅಷ್ಟೂ ಹೊತ್ತು ತಲೆಯೆತ್ತದೆ ಅಳುವನ್ನು ತಡೆ ಹಿಡಿದು ಕೂತಿದ್ದವಳು, ಇನ್ನಷ್ಟು ಅಳುವನ್ನು ನುಂಗಿ, ಕತ್ತೆತ್ತಿ ನಡುಗುವ ಸ್ವರದಲ್ಲಿ “ ಇವತ್ತು ಅಜ್ಜಿ ಊರಿಂದ ಬಂದೆ ಮಿಸ್, ದೊಡ್ಡಮ್ಮ ನಂಗೂ, ಅಕ್ಕನಿಗೂ ಕೊಟ್ಟಿದ್ದರು” ಎಂದೆ.
ಕೂಡಲೇ ಅವರು ಅದೇ ಶಾಲೆಯಲ್ಲಿದ್ದ ಅಕ್ಕನನ್ನು ಕರೆಸಿದರು. ಅಕ್ಕನನ್ನು ನೋಡಿಯೇ ಕಣ್ಣೀರು ನನ್ನ ಮಾತು ಕೇಳದೇ ಉರುಳಲು ಆರಂಭಿಸಿತು, ನನ್ನನ್ನು ನೋಡಿ ಅವಳ ಕಣ್ಣಲ್ಲೂ ನೀರು ತುಂಬಿತು. ಹೆಡ್ ಮಿಸ್ ಕಡೆ ತಿರುಗಿ ಅವಳು ನಿಜವನ್ನು ತಿಳಿಸಿದಾಗ ಅವಳ ಕಂಠವೂ ನಡುಗುತ್ತಿತ್ತು. ಹೆಡ್ ಮಿಸ್ ಆ ಟೀಚರರಿಗೆ, “ ಅವರಮ್ಮ ಹೈಸ್ಕೂಲು ಟೀಚರ್, ಅವಳಕ್ಕ ಇದೇ ಶಾಲೆಯ ಒಳ್ಳೆ ವಿದ್ಯಾರ್ಥಿನಿ, ಇವಳೂ ಕ್ಲಾಸಿನಲ್ಲಿ ಮೊದಲು, ಅದು ಹೇಗೆ ಅವಳನ್ನು ಅನುಮಾನಿಸಿದಿರಿ? ಹೊಡೆದಿರಿ? ಅವರಮ್ಮ ಬಂದು ಕೇಳಿದರೆ ನಾನೇನು ಹೇಳಲಿ ? ” ಎಂದು ಕೇಳಿದರು. ಅದಕ್ಕವರು ವ್ಯಂಗ್ಯವಾಗಿ “ಅಯ್ಯೋ, ಕದಿಯದೇ ಹೋದ್ರೆ ಇವಳ್ಯಾಕೆ ಅವಳಿಗೆ ತೆಗೆದುಕೊಡಬೇಕಿತ್ತು?” ಎಂದರು. ನಾನು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಅವರನ್ನು ನೋಡಿ, ಗಟ್ಟಿಯಾಗಿ “ ಪಾಪ, ಅವಳು ಅಳ್ತಾ ಇದ್ದಳಲ್ಲ, ಮನೆಗೆ ಹೋದಾಗ ಅವರಪ್ಪ ಅವಳಿಗೆ ಹೊಡೆದ್ರೆ? ಅದಕ್ಕೆ ಕೊಟ್ಟಿದ್ದು” ಅಂದೆ.
ಮನೆಗೆ ಬರುತ್ತಿದ್ದಂತೆಯೇ ಅಮ್ಮನಿಗೆ ನನ್ನ ಸಪ್ಪೆ ಮುಖ ನೋಡಿ ಗಾಬರಿಯಾಯಿತು. ಹಣೆ, ಕುತ್ತಿಗೆ ಎಲ್ಲಾ ಮುಟ್ಟಿ ನೋಡಿ ಏನಾಯ್ತಮ್ಮ, ಯಾರಾದರೂ ಏನಾದರೂ ಅಂದರಾ? ಎಂದು ಇಬ್ಬರ ಮುಖ ನೋಡಿ ಕೇಳಿದರು. ಅಕ್ಕ ಎಲ್ಲಾ ವಿವರಿಸಿ ಹೇಳುತ್ತಿದ್ದಂತೆ, ನಾನು ಬೀಳುವ ಹೊಡೆತಕ್ಕೆ ರೆಡಿಯಾಗುತ್ತಿದ್ದೆ. ಅಮ್ಮ ಎಲ್ಲಾ ಕೇಳಿಸಿಕೊಂಡು ನನ್ನೆಡೆ ತಿರುಗಿದಾಗ ನಾನು ಅಮ್ಮಾ, ದೇವರಾಣೆ ನಾನವಳ ದುಡ್ಡು ಕದ್ದಿಲ್ಲ ಎಂದೆ. ನಾ ಹೆದರಿದಂತೆ ಹೊಡೆಯುವ ಬದಲು ಅಮ್ಮ, ಎತ್ತಿ ತೊಡೆಯಲ್ಲಿ ಕುಳಿತುಕೊಳ್ಳಿಸಿ, ಹಿಂಗಾಲಿಗಾದ ಬರೆಯನ್ನು ಹಗುರಕ್ಕೆ ಬೆರಳಲ್ಲಿ ಸವರಿ, "ನೋವಾಗ್ತಿದೆಯಮ್ಮ?" ಎಂದು ನಿಧಾನವಾಗಿ ಕೇಳಿದರು.

Friday, February 22, 2019

ಹೀಗೊಂದು ವಿಚಿತ್ರ ಸಿನಿಮಾ!


ಒಂದು ವಿಚಿತ್ರ ಅನುಭವ ಕೊಡುವ ಈ ಸಿನಿಮಾ, ಅದನ್ನು ತೆಗೆದ ರೀತಿಗೆ ಮತ್ತು ಕಥೆ ಬರೆದ ರೀತಿಗೆ ಒಂದ್ಸಲ ನೋಡಲೇಬೇಕು. ಚೆಂದದ ಮುಖಗಳು, ಸೆಟ್ ಮತ್ತು ಈ ಲೋಕದಲ್ಲ ಅನಿಸುವ ಕಥೆ ಇದನ್ನು ಬೇರೆ ಅನಿಸುವಂತೆ ಮಾಡುತ್ತದೆ. ಹಾರರ್, ಕಾಮಿಡಿ, ಸೆಂಟಿಮೆಂಟಲ್, ಥ್ರಿಲರ್ ಹೌದು ಎಲ್ಲವೂ . ಒಂದೊಳ್ಳೆ ಪ್ರಯತ್ನ. ನಾನಿ ಎಂಬ ಹೆಸರಿನ ರೆಡ್ ಪಾರೆಟ್ ಮೀನು ಇದರಲ್ಲಿ ನಟಿಸಿದೆ (?!). ಇಡೀ ಸಿನಿಮಾದಲ್ಲಿ ಜಾಸ್ತಿ ಇಷ್ಟವಾಗಿದ್ದು ಅವನೇ! ಅದ್ಯಾರಿಗೆ ಹೀಗೆಲ್ಲಾ ಕಥೆ ಹೊಳೆಯುತ್ತೋ, ಅದನ್ನು ನಂಬಿ ಯಾರೋ ದುಡ್ಡು ಹಾಕಿ ಹೀಗೆ ಚಿತ್ರ ತೆಗೆಯುತ್ತಾರೋ ಎಂದೆನಿಸಿದ್ದು ಸುಳ್ಳಲ್ಲ!
೨೦೧೮ರ ಈ ಸಿನಿಮಾ ನೆಟ್ ಫ್ಲಿಕ್ಸಿನಲ್ಲಿದೆ. ಇದರ ಟ್ರೈಲರಿನ ಲಿಂಕ್ ಇಲ್ಲಿದೆ.

https://www.youtube.com/watch?v=xOEscQChX7M

Friday, January 11, 2019

ಕಪ್ಪು ಬಿಳುಪಿನ ನಡುವೆ

Life isn't black and white. It's a million gray areas, don't you find? 
                                                                                                                                                Ridley Scott



ದೀಪ್ತಿ ಬೆಡ್ರೂಮಿನ ಬಾಗಿಲು ತೆರೆದು ಒಳಗಿದ್ದ ಸೂಟುಕೇಸುಗಳನ್ನು ಎಳತರುತ್ತಿದ್ದಂತೆ ಅಣ್ಣ ಬಂದರು. "ಸರಿ ದೀಪು, ಎಲ್ಲಾ ರೆಡಿನಾ?" ಎಂದು ಸೂಟುಕೇಸುಗಳನ್ನು ದೂಡಿಕೊಂಡು ಮಥನ್ ಕಡೆ ತಿರುಗಿ "ಬರ್ತೀನಿ ಮಥನ್ ಸ್ವಲ್ಪ ಹೊತ್ತಲ್ಲೇ" ಎಂದವರೇ ಹೊರಹೋದರು. ಮಥನ್, ತೊಡೆಯಲ್ಲಿದ್ದ ನೀಹಾಳನ್ನೆತ್ತಿ ಚೇರಿನಲ್ಲಿ ಕೂರಿಸಿ, ಬಾಯಿಯಲ್ಲಿ ಸುರಿದ ಜೊಲ್ಲನ್ನು ಮೆತ್ತಗೆ ಕರ್ಚೀಫಿನಿಂದ ಒರೆಸಿ, ಮತ್ತವಳ ಕೂದಲನ್ನು ಸರಿಮಾಡಿ, ದೀಪ್ತಿ ಕಡೆ ತಿರುಗಿ ಅವಳನ್ನೊಮ್ಮೆ ಮೃದುವಾಗಿ ತಬ್ಬಿ, ಹಣೆ ಚುಂಬಿಸಿ, "ಗಾಡ್ ಬ್ಲೆಸ್ಸ್ ಯು ಪುಟ್ಟಿ" ಎಂದವನ ದನಿ ಹಸಿಯಾಗಿತ್ತು. ದೀಪ್ತಿ ಅವನ ತೋಳನ್ನು ಬಲವಾಗಿ ತಬ್ಬಿದವಳು ಕಣ್ಣುಮುಚ್ಚಿ ಅರೆ ಘಳಿಗೆ ಸುಮ್ಮನಿದ್ದು "ಚಿನ್ನು, ಒಟ್ಟಿಗೇ ಹೋಗೋಣ"ಎಂದಳು. ಮಥನ್ ಅವಳನ್ನು ನಿಧಾನಕ್ಕೆ ಸರಿಸಿ "ನಿಹಾಗೆ ಜ್ಯೂಸು ಕುಡಿಸೋ ವೇಳೆಯಾಯ್ತು" ಎಂದ. ಮುಷ್ಠಿ ಬಿಗಿದು, ಹಲ್ಲು ಕಚ್ಚಿ, ಕಣ್ಣುಮುಚ್ಚಿ ಭಾವನೆಗಳನ್ನು ನಿಯಂತ್ರಿಸಿಕೊಂಡ ದೀಪ್ತಿ ನೀಹಾಳ ಕಡೆಗೊಮ್ಮೆ ನೋಡಿ, ಅವಳನ್ನಪ್ಪಿ ಮುತ್ತಿಕ್ಕಿ, ಕಣ್ಣೊರೆಸುತ್ತಾ ಹೊರನಡೆದಳು, ಬಾಗಿಲು ಮುಚ್ಚುತ್ತಿದ್ದಂತೆ ಮಥನ್ ಮಿಕ್ಸಿಜಾರಿಗೆ ದಾಳಿಂಬೆಕಾಳುಗಳನ್ನು ಸುರಿಯುತ್ತಿದ್ದ.

ದೀಪ್ತಿ ಕೆಳಬಂದಾಗ ಕಾರಿನ ಡಿಕ್ಕಿಯಲ್ಲಿ ಲಗೇಜ್ ತುಂಬುತ್ತಿದ್ದ ಅಣ್ಣ,ತಲೆಯೆತ್ತಲಿಲ್ಲ. ಅಮ್ಮ ಹಿಂದಿನ ಸೀಟಿನಲ್ಲಿ ಕೂತಿದ್ದವರು ಅವಳ ತಲೆ ಸವರಿದರಷ್ಟೇ. ಕಾರಿನಲ್ಲಿ ಕೂತು ಹೊರಟರೂ ಮೂವರ ನಡುವೆ ಮೌನವಿತ್ತು. ವಿಮಾನ ನಿಲ್ದಾಣ ಮುಟ್ಟಿ, ಅವರನ್ನು ಒಂದೆಡೆ ಕುಳ್ಳಿರಿಸಿ "ಈಗ ಬಂದೆ ದೀಪು" ಎಂದು ಹೋದವರು ವಾಪಸು ಬಂದಾಗ ಅವರ ಕೈಲಿದಿದ್ದು ಅವಳಿಗಿಷ್ಟದ ರೋಶರ್ಸ್ ಚಾಕಲೇಟಿನ ದೊಡ್ಡ ಡಬ್ಬ. ಅವಳ ಕಣ್ಣಿನಲ್ಲಿ ನೀರು ತುಂಬಲು ಆರಂಭಿಸಿದೊಡನೆ ಅವಳ ವಿಮಾನದ ಬೋರ್ಡಿಂಗಿಗೆ ಅನೌನ್ಸ್ಮೆಂಟ್ ಕೇಳಿಬಂತು. ಡಬ್ಬಿಯನ್ನು ಅವಳ ಕೈಗಿರಿಸಿದ ಅಣ್ಣ ಅವಳನ್ನಪ್ಪಿ, ತಲೆ ಸವರಿ "ನೀನು ತೆಗೆದುಕೊಂಡ ನಿರ್ಣಯ ನಿನಗೆ ಸರಿ ಅನಿಸಿದೆಯಲ್ಲ, ಸಾಕು. ಆರೋಗ್ಯದ ಕಡೆ ಗಮನ ಕೊಡು" ಎಂದರು. ಇಬ್ಬರ ಕಾಲು ಹಿಡಿದು ನಮಸ್ಕರಿಸಿದವಳು, ಕಣ್ಣೀರು ಒರೆಸಿಕೊಂಡು ಲಗೇಜ್ ಟ್ರಾಲಿಯನ್ನು ನೂಕುತ್ತಾ ಕಾಲೆಳೆಯುತ್ತಾ ಮುಂದೆ ಸಾಗಿದಳು. 

ಟೇಕಾಫ್ ಆಗುತ್ತಿದಂತೆ ಅವಳ ಮುಚ್ಚಿದ ಕಣ್ಣುಗಳ ಮುಂದೆ ನೆನಪಿನ ತೇರು ಸಾಗತೊಡಗಿತು. ಅನಿಮೇಶನ್ ಕಂಪೆನಿಯೊಂದರಲ್ಲಿ ಕ್ರಿಯೇಟಿವ್ ಹೆಡ್ ಆಗಿದ್ದ ಮಥನ್ ಸಿಕ್ಕಿದ್ದು ಗೆಳತಿಯೋರ್ವಳ ಮಗುವಿನ ಬರ್ತ್ ಡೇ ಪಾರ್ಟಿಯೊಂದರಲ್ಲಿ. ತನ್ನ ಕೋಡಿಂಗ್, ಅವನ ಬಣ್ಣದ ಲೋಕ ಮ್ಯಾಚ್ ಆಗುತ್ತಾ ಎಂದು ಅಳೆದೂ ಸುರಿಯುವ ಮುನ್ನವೇ ಇಬ್ಬರೂ ಪ್ರೀತಿಯಲ್ಲಿ ಮುಳುಗಿದ್ದರು. ವಿದ್ಯೆ, ರೂಪ, ಕೆಲಸ ಎಲ್ಲದರೂ ಮ್ಯಾಚ್ ಆಗುತ್ತಿದ್ದ ಇಬ್ಬರನ್ನು ನೋಡಿ ಈರ್ವರ ಹೆತ್ತವರೂ ಖುಷಿಪಟ್ಟು ಮದುವೆಗೆ ಒಪ್ಪಿಗೆ ನೀಡಿದ್ದರು. ಬದುಕು ಎಷ್ಟು ಸುಂದರವಪ್ಪ ಎಂದುಕೊಳ್ಳುವಷ್ಟರಲ್ಲಿ ಮಥನ್ ತಾಯಿ ಕ್ಯಾನರ್‌ಗೆ ತುತ್ತಾಗಿ ನಿಧಾನಕ್ಕೆ ಜೀರ್ಣಾವಸ್ಥೆಗೆ ಜಾರತೊಡಗಿದ್ದರು. ಹದಿನೆಂಟು ತಿಂಗಳುಗಳ ಅವಧಿಯಲ್ಲಿಯೇ ಕಣ್ಣುಮುಚ್ಚಿದ್ದರು. ಹುಟ್ಟಿದಾಗಿಂದ ತಂದೆಯನ್ನೇ ನೋಡದ, ಪ್ರಪಂಚವಿಡೀ ತಾಯಿಯೆಂದೇ ನಂಬಿದ್ದ ಮಥನ್ ತೀರಾ ಅಸ್ವಸ್ಥಗೊಂಡಿದ್ದ. ಹದಿನೆಂಟು ತಿಂಗಳೂ ಮನೆಯಿಂದಲೇ ಕೆಲಸ ಮಾಡುತ್ತಾ ಅಮ್ಮನನ್ನು ಮಗುವಿನಂತೆ ನೋಡಿಕೊಂಡಿದ್ದ, ದೀಪ್ತಿ ಅಣ್ಣ,ಅಮ್ಮ ಇಬ್ಬರೂ ಅವನಿಗೆ ಸಾಥ್ ನೀಡಿದ್ದರು. ದೀಪ್ತಿ ಅಮ್ಮನಂತೂ ದಿನಾಬೆಳಿಗ್ಗೆ ಅಡುಗೆ ಮಾಡಿಕೊಂಡು ಅಣ್ಣನೊಂದಿಗೆ ಬರುತ್ತಿದ್ದರು. ಶಕ್ಕುಅಕ್ಕ ಎಂದು ಅವರನ್ನು ಸಂಭೋದಿಸುತ್ತಾ ಅವರ ಕೊನೆಯ ದಿನಗಳನ್ನು ಸಹನೀಯಗೊಳಿಸಲು ಯತ್ನಿಸುತ್ತಿದ್ದರು. ಮೂವರೂ ಕೂತು ಯಾವುದಾದರೂ ಹಳೆಯ ಸಿನೆಮಾಗಳನ್ನು ನೋಡುತ್ತಲೋ, ಪುಸ್ತಕ ಓದುತ್ತಲೋ ಇದ್ದರೆ ಅವರೆಲ್ಲಾ ಕೆಲಸಗಳನ್ನು ಮಥನ್ ಮಾಡುತ್ತಿದ್ದ. ದೀಪ್ತಿ ಬಾಗಿಲ ಬಳಿಯೇ ನಿಂತು ಮಾತನಾಡುತ್ತಿದ್ದಳೇ ಹೊರತು ಅಂಟಿಯೂ ಅಂಟದಂತಿದ್ದಳು, ಒಮ್ಮೆ ಅವಳಮ್ಮ ಕೇಳಿದಾಗ ಅವಳ ಉತ್ತರ ಅಳುವಾಗಿತ್ತು. 

ಯಾತನೆಯ ಪರ್ವ ಮುಗಿದು ವರುಷವಾಗಿರಬೇಕು, ಮಥನ್ ಮತ್ತೆ ಆಫೀಸಿಗೆ ಹೋಗಲಾರಂಭಿಸಿದ್ದ. ಅಷ್ಟರಲ್ಲಿ ದೀಪ್ತಿ ಗರ್ಭಿಣಿಯಾಗಿದ್ದಳು. ಮಥನ್, ಅಣ್ಣಅಮ್ಮ ಎಲ್ಲರೂ ಖುಷಿಪಟ್ಟರೆ ಅವಳಿಗ್ಯಾಕೊ ಒಂದಿನಿತೂ ಕುಶಿಯಾಗಿರಲಿಲ್ಲ. ತನ್ನದೇ ಸ್ವಂತ ಟೀಮ್ ಕಟ್ಟಿಕೊಂಡು ಮಲ್ಟಿಮಿಲಿಯನೇರ್ ಪ್ರಾಜೆಕ್ಟ್‌ಲ್ಲಿ ಬ್ಯುಸಿಯಾಗಿದ್ದವಳಿಗೆ ಒಲ್ಲದ ಹೊರೆ ಅನಿಸತೊಡಗಿತ್ತು. ಸಾಲದಕ್ಕೆ ಮಾರ್ನಿಂಗ್ ಸಿಕ್‌ನೆಸ್,ಅಸಿಡಿಟಿ ತಾಪತ್ರಯಗಳು. ’ನಂಗೆ ಬೇಡ ಚಿನ್ನೂ’ ಎಂದು ಮಥನ್ ಎದೆಯಲ್ಲಿ ಮುಖ ಹುದುಗಿಸಿ ಅತ್ತರೆ "ಹಂಗೆಲ್ಲಾ ಅನ್ನಬಾರದು ಪುಟ್ಟಿ, ಅಮ್ಮನೇ ಮತ್ತೆ ಬರ್ತಿದ್ದಾರೆ ನೋಡು" ಅನ್ನುತ್ತಿದ್ದ. ಮತ್ತಷ್ಟು ಕಿರಿಕಿರಿಯಾಗಿ ಅಳುತ್ತಿದ್ದಳು. ನೋವನ್ನು ನೋಡುವುದೂ, ಅನುಭವಿಸುವುದೂ ಅವಳಿಗಾಗದ ಮಾತು. ಅವಳ ಅಳು ನೋಡಲಾಗದೆ "ಇವಳು ಕಷ್ಟ ಪಡೋದು ನೋಡೋಕಾಗಲ್ಲ ಅಮ್ಮ" ಎಂದರೆ ಅವಳಮ್ಮ "ಸಲ್ಪದಿನ ಅಷ್ಟೇ, ಸರಿಯಾಗುತ್ತೆ. ಅವಳೇನೂ ಚಿಕ್ಕವಳಲ್ಲ, ಲೇಟಾದ್ರೆ ಕಷ್ಟ, ನಾನು ಗಟ್ಟಿ ಇದ್ದಾಗಲೇ ಮಗುವಾಗಲಿ, ನಾನು, ದೀಪ್ತಿಯಣ್ಣ ನೋಡಿಕೊಳ್ಳುತ್ತೇವೆ, ಶಕ್ಕುಅಕ್ಕ ಹುಟ್ಟಿ ಬರ್ತಾರೆ" ಎನ್ನುತ್ತಿದ್ದರು. "ಅಮ್ಮನೂ ಮಥನ್ ಕಡೆ ಸೇರಿಕೊಳ್ತಾರೆ, ನಂಗ್ಯಾರೂ ಇಲ್ಲ ನೋಡಣ್ಣ" ಎಂದು ದೂರು ಅಣ್ಣನ ಬಳಿ ಹೋಗುತ್ತಿತ್ತು. ಯಾವಾಗಲೂ ನಕ್ಕು ತಲೆ ಸವರುತ್ತಿದ್ದ ಅಣ್ಣ ಒಂದಿನ "ನಿಜ ಹೇಳು ದೀಪು, ನಿಜಕ್ಕೂ ನಿಂಗೆ ಬೇಡ್ವಾ ಮಗು? ಇವಾಗಿನ್ನೂ ೨.೫ತಿಂಗಳು, ಮಥನ್ ಹತ್ರ ಮಾತಾಡ್ತೀನಿ" ಎಂದರು. ಸುಮ್ಮನಾದವಳು ಮುಂದೆ ಮಾತನಾಡಲಿಲ್ಲ. ಆದರೆ ಅಮ್ಮನ ಬಳಿ "ನಿಂಗೆ, ಮಥನ್‌ಗೆ ಆಲ್ವಾ ಬೇಕಿದಿದ್ದು, ನೀವಿಬ್ಬರೇ ಎಲ್ಲ ಮಾಡಬೇಕು" ಅಂದಿದ್ದಳು. ಅಂತೆಯೇ ನಡೆದುಕೊಂಡಿದ್ದಳು ಕೂಡ. ದಿನಾ ಬೆಳಗ್ಗೆ ಅಮ್ಮನ ಮನೆಯಲ್ಲಿ ನೀಹಾಳನ್ನು ಬಿಟ್ಟು ಹೋಗುತ್ತಿದ್ದಳು. ಸುಮಾರು ಒಂಭತ್ತು ತಿಂಗಳ ನಂತರ ಕೆಲಸಕ್ಕೆ ಮತ್ತೆ ಜಾಯಿನ್ ಆದವಳಿಗೆ ಸಿಕ್ಕಿದ್ದು ಮೊದಲಿಗಿಂತ ಕೆಳಗಿನ ಪೊಸಿಷನ್ ಹಾಗೂ ಹೈಕ್ ಹಾಗೂ ಬೋನಸ್ ಕೂಡಾ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆ ಒಂಭತ್ತು ತಿಂಗಳು ಅವಳ ಕರಿಯರ್ ಗ್ರಾಫಿನಲ್ಲಿ ತುಂಬದ ಬಿಟ್ಟ ಸ್ಥಳದಂತೆ ಅವಳನ್ನು ಅಣಕಿಸುತಿತ್ತು. ಅವಡು ಕಚ್ಚಿ ಹಗಲೂ ರಾತ್ರಿ ಜೀವತೇದು ಮತ್ತೆ ಕಂಪೆನಿಯ ಹಾಟ್ ಫೇವರಿಟ್ ಆಗಲು ಸುಮಾರು ಒಂದೂವರೆ ವರ್ಷಗಳು ಬೇಕಾಗಿದ್ದವು. ಅದೊಂದು ದಿನ, ರಾತ್ರಿ ಹನ್ನೆರೆಡೂವರೆಗೆ ಬಂದವಳಿಗೆ ಆಶ್ಚರ್ಯ ಕಾದಿತ್ತು, ಬಾಗಿಲು ತೆಗೆದ ಅಣ್ಣನ ಕಾಳಹೀನ ಮುಖ ನೋಡಿ ಗಾಬರಿಯಾಯ್ತು. ಅಣ್ಣ ಏನೂ ಮಾತಾಡದೆ, ಸುಮ್ಮನೆ ಒಳ ನಡೆದರೆ, ಅಮ್ಮ ಸೋಫಾ ಮೇಲೆ ಇವಳು ಬಂದಿದ್ದರ ಪರಿವೆಯೇ ಇಲ್ಲದಂತೆ ಕೂತಿದ್ದರು. ಡೈನಿಂಗ್ ಟೇಬಲ್ ಎದುರು ತಲೆ ಹಿಡಿದು ಕೂತಿದ್ದ ಮಥನ್. "ಏನಾಯ್ತು ಚಿನ್ನೂ?" ಎಂದದ್ದೇ ಅವಳನ್ನಪ್ಪಿ ಅಳಲಾರಂಭಿಸಿದ, ಇನ್ನಷ್ಟು ಗಾಬರಿಯಾಯ್ತು ಅವಳಿಗೆ "ಜಾಬ್ ಏನಾದ್ರೂ ಹೋಯ್ತಾ? ಪರ್ವಾಗಿಲ್ಲ, ಬೇರೆ ಹುಡುಕಿದ್ರಾಯ್ತು " ಅಂದೆಲ್ಲಾ ಬಡಬಡಿಸುತ್ತಿದ್ದವಳನ್ನು ತಡೆದ ಮಥನ್ "ನಮ್ಮ ನೀಹಾ ಸ್ಪೆಷಲ್ ಮಗು ಪುಟ್ಟಿ" ಎಂದು ಬೊಬ್ಬಿರಿದು ಕೂದಲು ಕಿತ್ತುಕೊಂಡು ಅಳಲಾರಂಭಿಸಿದ. ದೀಪ್ತಿ ಕಲ್ಲಂತೆ ನಿಂತಿದ್ದಳು.

"ಮ್ಯಾಮ್, ನಿಮ್ಮ ಊಟದ ಆರ್ಡರ್ ಹೇಳ್ತೀರಾ?" ಎಂದು ಎಚ್ಚರಿಸಿದಳು ರಕ್ತ ಕೆಂಪು ಬಣ್ಣ ಬಳಿದ ಚೆಲುವೆ. ಮೆನು ಜಾಲಾಡಿ ಏನೋ ಹೇಳಿದ ದೀಪ್ತಿ ಕಿಟಕಿಯ ಕಡೆ ಮುಖತಿರುಗಿಸಿ ಕಾಣದ ಮೋಡಗಳ ಹುಡುಕಲಾರಂಭಿಸಿದಳು. ಶಕ್ಕು ಆಂಟಿ ನೋವನ್ನೇ ನೋಡಲಾಗದವಳಿಗೆ ಇದನ್ನ್ಯಾವುದನ್ನೂ ನೋಡುವ ಮನಸ್ಸಿರಲಿಲ್ಲ, ಒಂದಷ್ಟು ತಿಂಗಳುಗಳು ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳ ಸುತ್ತು ಹೊಡೆದಿದ್ದಾಯ್ತು, ಇದ್ದ ಬಿದ್ದವರ ಸಲಹೆ ಸೂಚನೆಗಳನ್ನು ಒತ್ತಾಯಪೂರ್ವಕವಾಗಿ ಕೇಳಿದ್ದಾಯ್ತು. ಉಹೂ,ಬದುಕು ಬದಲಾಗಲಿಲ್ಲ. ಮಥನ್, ಅಮ್ಮ, ಅಣ್ಣ ಎಲ್ಲರೂ ಸತ್ಯವನ್ನು ಅರಗಿಸಿಕೊಂಡು ನೀಹಾ ಬದುಕಿಗೆ ಬಣ್ಣ ತುಂಬಲು ಪ್ರಯತ್ನ ನಡೆಸುತ್ತಿದ್ದರೆ ಇವಳು ಮಾತ್ರ ಪ್ರತೀ ನಿಮಿಷವೂ ಸತ್ಯದಿಂದ ದೂರ ಓಡುತ್ತಿದ್ದಳು. 
ಒಂದೇ ಒಂದು ಸಲ "ಪುಟ್ಟಿ, ಕೆಲಸ ಬಿಡ್ತೀಯ, ನೀಹಾಗೆ ಹೆಚ್ಚು ಗಮನ ಬೇಕಿದೆ, ಅಣ್ಣಅಮ್ಮನಿಗೆ ಸಾಕಾಗ್ತಿದೆ, ಈ ಪ್ರಾಯದಲ್ಲಿ ಅವ್ರಿಷ್ಟು ಮಾಡೋದು ನಂಗೆ ನೋಡೋಕಾಗ್ತಿಲ್ಲ, ಅವರು ನೋಡಿಕೊಳ್ಳಲಿ ಅಂತ ನಾವು ನೀಹನನ್ನು ಬರ ಮಾಡಿಕೊಂಡಲ್ಲ ಅಲ್ವ?" ಎಂದಿದ್ದ. ಅವತ್ತಷ್ಟೇ ಕಷ್ಟುಪಟ್ಟು ತನ್ನದಾಗಿಸಿಕೊಂಡ ಪೊಸಿಷನ್ ಯಾರಿಗೋ ಬಿಟ್ಟುಕೊಟ್ಟು, ಅಲ್ಲಿ ಯಾರಿಗೂ ನೀಹಾ ಬಗ್ಗೆ ಏನೂ ಹೇಳದೆ ಮುಚ್ಚಿಟ್ಟ ದೀಪ್ತಿ, "ನಂಗ್ಯಾವಾಗಲೂ ಬೇಡ ಇತ್ತು, ನಿನ್ನಿಂದಾಗೆ ಆಗಿದ್ದು ಇವೆಲ್ಲಾ" ಅಂದುಬಿಟ್ಟಳು. ಮಥನ್ ಮಾತನಾಡಲಿಲ್ಲ, ಅದಾದ ನಂತರ ಆಫೀಸಿನಲ್ಲಿ ಕಾಡಿ ಬೇಡಿ ಬರುತ್ತಿದ್ದಕ್ಕಿಂತ ಕಡಿಮೆ ಸಂಬಳಕ್ಕೆ ವರ್ಕ್‌ಫ್ರಮ್‌ಹೋಂ ಆಯ್ಕೆಯನ್ನು ತನ್ನದಾಗಿಸಿಕೊಂಡಿದ್ದ. ತಿಂಗಳಿರೆಡು ಸಲ ಹೋಗಿ ಬರಬೇಕಿತ್ತು, ಅಣ್ಣಅಮ್ಮ ಮನೆಯಲ್ಲಿ ನೀಹಾಳನ್ನು ಬಿಡುವಾಗ ಓರ್ವ ನುರಿತ ನರ್ಸ್ ಕೂಡಾ ಆ ಎರಡು ದಿನಗಳಲ್ಲಿ ಅಲ್ಲಿರುವಂತೆ ನೋಡಿಕೊಂಡಿದ್ದ. 

ಅವಳಾಯ್ಕೆ ಮಾಡಿದ್ದ ಊಟ ಅವಳೆದುರು ಬಂದಿತ್ತು, ಸರಿಯಾಗಿ ಬೇಯದ ಆ ವಸ್ತುವನ್ನು, ಪ್ರತೀ ಗುಕ್ಕಿನೊಂದಿಗೂ ನೀರು ಕುಡಿಯುತ್ತಾ ಕಷ್ಟಪಟ್ಟು ಮುಗಿಸಿದಳು. ಹಸಿವಿರದೆ ಇದ್ದಿದ್ದರೆ ಇದನ್ನು ಮುಟ್ಟುತ್ತಲೇ ಇರಲಿಲ್ಲ ಅನಿಸಿತು. ಮತ್ತೆ ಮಥನ್ ಕಣ್ಣೆದಿರು ಸುಳಿದ.

ದಿನಾ ಸಂಜೆ ತಂದೆ, ಮಗಳು ಅವರಿದ್ದ ಅಪಾರ್ಟ್ಮೆಂಟಿನ ಸುತ್ತ ವಾಕ್ ಮಾಡುತ್ತಿದ್ದರು, ಎದುರಿಗೆ ಸಿಕ್ಕಿದ ಎಲ್ಲರೂ ಚೆನ್ನಾಗಿಯೇ ಮಾತನಾಡಿಸುತ್ತಿದ್ದರು. "ಎಷ್ಟು ಇಂಪ್ರೂವ್ ಆಗ್ತಿದ್ದಾಳೆ ಗೊತ್ತಾ? ಇವತ್ತು ತಾರಾ ಆಂಟಿಯನ್ನು ಗುರುತಿಸಿ ನಕ್ಕಳು, ಬಾಲ್ ತೆಗೆದುಕೊಳ್ಳಲು ಪ್ರಯತ್ನಿಸಿದಳು" ಎಂದೋ ಮಥನ್ ಉತ್ಸಾಹದಿಂದ ವಿವರಿಸುತ್ತಿದ್ದರೆ ದೀಪ್ತಿ ನೋಟ ಅವನನ್ನೂ ದಾಟಿ ಗೋಡೆಯ ಮೇಲೆ ಚಿತ್ರದಲ್ಲಿ ಕೂತ ದೇವರಲ್ಲಿ ನೆಡುತಿತ್ತು. ’ಯಾಕೆ ಪುಟ್ಟಿ, ಮಾತಾಡು ’ಎಂದು ಮಥನ್ ಹೇಳಿದ್ದರೆ ಹೆಪ್ಪುಗಟ್ಟಿದ್ದ ಹಿಮ ಒಂಚೂರಾದರೂ ಕರಗುತ್ತಿತ್ತೋ ಏನೋ. ಎಂದಾದರೂ ಬೇಗ ಬಂದರೆ ದೀಪ್ತಿ ಕೂಡಾ ಇವರೊಂದಿಗೆ ವಾಕಿಂಗ್ ಬಂದರೆ ಯಾರೋ ಒಬ್ಬರಾದರೂ "ನಿಮ್ಮ ಆಫೀಸಿನಲ್ಲಿ ವರ್ಕ್ ಫ್ರಮ್ ಹೋಂ ಇಲ್ವಾ, ಇವಳು ದೊಡ್ಡವಳಾದ ಮೇಲೆ ಕಷ್ಟ ಆಲ್ವಾ?" ಎಂದೆಲ್ಲಾ ಹೇಳಿದಾಗ ಹುಚ್ಚು ಹಿಡಿದಂತಾಗುತಿತ್ತು. ಅಣ್ಣಅಮ್ಮನ ಬಳಿಯೂ ಮಾತು ಕಡಿಮೆ ಮಾಡಿದ್ದವಳಿಗೆ ಆಫೀಸಿನ ಗೋಡೆಗಳು, ಸ್ಯಾಲರಿ ಹೈಕುಗಳು, ಏರುತ್ತಲೇ ಇದ್ದ ಬ್ಯಾಂಕ್ ಬ್ಯಾಲೆನ್ಸ್, ಪಾರ್ಟಿಗಳು ನಶೆಯಂತೆ ಸುಖ ನೀಡುತ್ತಿದ್ದವು. ನೀಹಾ ಬಗ್ಗೆ ಯೋಚಿಸಿದಾಗೆಲ್ಲ ಎದೆಯಲ್ಲಿ ಅಸಾಧ್ಯ ನೋವೇಳುತ್ತಿತ್ತು, ಬಾತ್‌ರೂಮಿನ ನಲ್ಲಿಗಳು, ಬಕೆಟ್, ಮಗ್ಗುಗಳಿಗೆ ಸಾಧ್ಯವಿದ್ದರೆ ಅವಳ ಕಣ್ಣೀರಿನ ಅಳತೆ ಕೊಡುತ್ತಿದ್ದವೋ ಏನೋ. ಯಾವುದೋ ಪೇಯ್ನ್ ಕಿಲ್ಲರ್ ನುಂಗಿ ನೀರು ಕುಡಿದು ಮಲಗುತ್ತಿದ್ದಳು. 

ನೀಹಾ ಪ್ರತೀ ಹುಟ್ಟುಹಬ್ಬವನ್ನೂ ಅಪಾರ್ಟ್ಮೆಂಟಿನ ಮಕ್ಕಳನ್ನು ಕರೆದು ಕೇಕ್ ಕಟ್ ಮಾಡಿ ಆಚರಿಸುತ್ತಿದ್ದ ಮಥನ್, "ನಾಡಿದ್ದು ಜನವರಿ ೬, ಈ ಸಲ ಯಾವ ಥೀಮ್ ಮಾಡೋಣ ಕೇಕ್ ಅನ್ನ" ಎಂದ ಮಥನ್. ಅಷ್ಟೇ! ಕೈಲ್ಲಿದ್ದ ಮಗ್ ಅನ್ನು ಗೋಡೆಗೆ ಅಪ್ಪಳಿಸುವಂತೆ ಬಿಸುಟ ದೀಪ್ತಿ "ನಿಂಗೇನಾಗಿದೆ, ಒಂದ್ಸಲಾನಾದ್ರೂ ನಿಮ್ಮಮ್ಮನಿಗೆ, ಈ ಮಗೂಗೆ ಮಾಡಿದಷ್ಟು ಪ್ರೀತಿ ನಂಗೆ ಮಾಡಿದ್ಯಾ ಒಂದಿನ ಆದ್ರೂ, ಯಾವಾಗ್ಲೂ ನಾನ್ಯಾಕೆ ನಿಂಗೆ ಸೆಕೆಂಡ್ ಪ್ರಿಯಾರಿಟಿ, ಕೆಳಗೆ ಕರ್ಕೊಂಡು ಹೋಗ್ತಿಯಲ್ಲ ಇವಳನ್ನ, ಏನೆಲ್ಲಾ ಮಾತಾಡ್ತಾರೆ ಗೊತ್ತಾ? ಒಂಚೂರಾದ್ರೂ ಐಡಿಯಾ ಇದೆಯಾ? ಎಲ್ಲರ ಮನೆಗೆ ಫ್ರೆಂಡ್ಸ್, ರಿಲೇಟಿವ್ಸ್ ಬರ್ತಾರೆ, ನಮ್ಮನೆಗೆ ಯಾರೂ ಯಾರೂ ಬರಲ್ಲ...ನಂಗೂ ಎಲ್ಲರ ಥರ ಎಲ್ಲೆಲ್ಲೋ ತಿರುಗಾಡಬೇಕು, ಯು.ಎಸ್ ಅಲ್ಲೇ ಸೆಟ್ಲ್ ಆಗಬೇಕು ಅಂತಿದೆ, ನಾನೇನು ಮಾಡಿದೆ ಅಂತ ಇಂಥಹ ಶಿಕ್ಷೆ ಕೊಟ್ಟ ದೇವ್ರು? ಅಮ್ಮ ಹಾಗಾದ್ರು, ಇವಳು ಹೀಗೆ. ಇನ್ನು ಅಣ್ಣಅಮ್ಮನನ್ನೂ ನರಳೋದು ನೋಡೋದು ಬಾಕಿಯಿದೆ, ನನ್ನ ಕೈಲಾಗಲ್ಲ, ಬರೀ ನೋವಷ್ಟೇ ಬದುಕಾ? ಎಲ್ಲರೂ ಒಟ್ಟಿಗೆ ಸಾಯೋದೆ ಒಳ್ಳೇದು ಇದಕ್ಕಿಂತ" ಅಂದವಳೇ ಜೋರಾಗಿ ಅಳಲಾರಂಭಿಸಿದಳು. 

ದೊಡ್ಡ ಶಬ್ದ, ಅಮ್ಮ ಕಿರುಚಿದ್ದಕ್ಕೆ ಕುರ್ಚಿಯಲ್ಲಿ ಕೂತಿದ್ದ ನೀಹಾ ಬೆಚ್ಚಿ ಬಿದ್ದು ಅಳಲೂ ಆಗದೆ ಹೆದರಿ ತಾಯಿಯನ್ನೇ ನೋಡುತ್ತಿದ್ದಳು. ಎದುರಿದ್ದ ಕುರ್ಚಿಯಿಂದ ಎದ್ದು ಬಂದು ದೀಪ್ತಿ ತಲೆಸವರಿದ ಮಥನ್ ಅವಳನ್ನಪ್ಪಿಕೊಂಡ. ಅವಳ ಅಳು ತಹಬಂದಿಗೆ ಬರುವವರೆಗೂ ತಟ್ಟಿ ಅವಳ ಪಕ್ಕದಲ್ಲೇ ಮೊಣಕಾಲೂರಿ ಕೂತು ಹೇಳಲಾರಂಭಿಸಿದ. "ಹೌದು ಪುಟ್ಟಿ, ನನಗೂ ಅನಿಸಿತ್ತು, ಆಮೇಲೆ ಯಾವುದು ಬದಲಾಗಲಾರದು ಎಂದು ಅರಿವಾದಾಗ ದೇವರ ವಿರುದ್ಧ ಯುದ್ಧ, ಅದೂ ಮುಗಿದ ಮೇಲೆ ಹತಾಶೆ, ನೋವು, ಕಣ್ಣೀರು. ಅಮ್ಮ ನನ್ನ ಪ್ರಪಂಚ ಆಗಿದ್ದರು ಪುಟ್ಟಿ, ನೀಹಾ ಬಗ್ಗೆ ಗೊತ್ತಾದಾಗ ಮತ್ತದೇ ನೋವು. ಎರಡೂ ನೋವುಗಳೂ ಪ್ರಚಂಡವಾದವುಗಳು, ಒಂದು ಎಲ್ಲರೂ ಅನುಭವಿಸಲೇಬೇಕಾದ ನೋವುಗಳಾದರೆ ಇನ್ನೊಂದು ದೇವರು ಚೂಸ್ ಮಾಡಿದವರಿಗೆ ಸಿಗುವ ನೋವು. ನಿನ್ನಂತೆ ನಾನೂ ದೂರ ಓಡಿದರೆ ನೀಹಾಗ್ಯಾರು? ನಮ್ಮದೇ ತುಣುಕಲ್ಲವೇ? ನಿಂಗೆಷ್ಟು ಕಷ್ಟ ಆಗ್ತಿದೆ ಗೊತ್ತು. ಅಣ್ಣಅಮ್ಮನನ್ನೇ ನೋಡು, ಅವರಿಗೂ ನೋವಿದೆಯಲ್ಲವೇ? ಇದ್ದಿದ್ದನ್ನು ಇದ್ದ ಹಾಗೆಯೇ ಒಪ್ಪಿಕೊಳ್ಳುವುದೇ ಬದುಕು, ಸೋಲನ್ನು ಒಪ್ಪಿಕೊಳ್ಳುವುದಲ್ಲ. ನಿಜ, ಅಣ್ಣಅಮ್ಮನೂ ಹೋಗುತ್ತಾರೆ, ಯಾರಿಗಿಲ್ಲ ಹೇಳು ಈ ನೋವು ಜಗತ್ತಿನಲ್ಲಿ, ನಮಗೆ ಮಾತ್ರವಲ್ಲವಲ್ಲ. ನಿಜಕ್ಕೂ ನಿನಗನಿಸುತ್ತಾ ನೀನು ಸೆಂಕಡ್ ಪ್ರಿಯಾರಿಟಿ ಅಂತ. ನಾನೇನೂ ಹೇಳಬೇಕಿಲ್ಲ, ಉತ್ತರ ನಿಂಗೇ ಗೊತ್ತಿದೆ. ಮತ್ತೆ ಯಾರೆಷ್ಟು ಆಡಿಕೊಳ್ಳುತ್ತಾರೋ ಗೊತ್ತಿದೆ ನಂಗೆ, ಹೆದರಿದರೆ ನೀಹಾ ಜೀವನ ಇನ್ನಷ್ಟು ಕಷ್ಟ, ಅವಳು ಎಲ್ಲದರ ಮಧ್ಯೆಯೇ ಬೆಳೆಯಬೇಕಾದವಳು, ಅವಳು ಬಾರ್ನ್‌ಸೋಲ್ಜರ್. ಅಷ್ಟೂ ಜನರಲ್ಲಿ ಒಂದೆರಡಾದರೂ ಒಳ್ಳೆಮನಸುಗಳಿವೆ, ನಮ್ಮನ್ನು ಪ್ರೋತ್ಸಾಹಿಸಿ ಬದುಕಲು ಸಹಾಯ ಮಾಡುತ್ತವೆ, ಅವನ್ನು ಗುರುತಿಸಬೇಕು, ನೀಹಾ ಕೂಡಾ ಕಲಿಯಬೇಕು ಅವನ್ನ ಗುರುತಿಸೋಕೆ. ಚೀರ್ ಅಪ್. ಈ ಸಲ ನೀಹಾ ಪಾರ್ಟಿಗೆ ನಿನ್ನ ಕಲೀಗ್ಸ್, ಎಲ್ಲಾ ರಿಲೇಟಿವ್ಸ್ ಅನ್ನೂ ಕರೆಯೋಣ, ನಾವೇ ನಮ್ಮ ಮಗುವನ್ನು ಒಪ್ಪಿಕೊಳ್ಳದಿದ್ದರೆ ಬೇರೆ ಯಾರು ಮಾಡ್ತಾರೆ?" ಎಂದ. 
ಹೌದು, ಬದುಕು ಎಷ್ಟು ಬದಲಾಗಿ ಹೋಯ್ತು, ಒಪ್ಪಿ ಗಟ್ಟಿಯಾದ ಕೂಡಲೇ ಕಾಲೂರಿ ಕೂತು ಬಿಟ್ಟಿತು, ನಿಜವಾದ ಸ್ನೇಹಿತರಾರು ಅನ್ನುವದನ್ನು ಕಾಲವೇ ತಿಳಿಸಿತು. ಆದರೆ ಕೈಲಿದ್ದ ಯು.ಎಸ್  ಪ್ರಾಜೆಕ್ಟ್ ಮಾತ್ರ ಬಿಡಲಾಗಲೇ ಇಲ್ಲ. ಇನ್ನೊಂದೆರಡು ವರ್ಷ, ಉಸಿರುಗಟ್ಟಿ ಬದುಕಿದರಾಯ್ತು, ದಿನಾ ಫೇಸ್ ಟೈಮ್ ಮಾಡಿದರಾಯ್ತು, ಅಣ್ಣ ಅಮ್ಮ ಇನ್ನು ಅಲ್ಲೇ ಬಂದಿರುತ್ತಾರೆ. ನನ್ನೀ ಕನಸು ನನಸಾದ ಕೂಡಲೇ ಬೇರೆ ಕೆಲಸ ನೋಡಬೇಕು. ಸಾಕಷ್ಟು ಕಾಂಟ್ಯಾಕ್ಟ್ಸ್ ಇದೆ, ಕನ್ಸನ್ಸಿ ಮಾಡಬೇಕು. ದುಡಿದ ಒಂದಿಷ್ಟು ಹಣವಿದೆ, ನೀಹನ ಕರ್ಕೊಂಡು ಒಂದಿಷ್ಟು ಸುತ್ತಾಡಬೇಕು.... ಕನಸು ಕಟ್ಟುತ್ತಲೇ ರೆಕ್ಕೆಬಿಚ್ಚಿ ಹಾರುತ್ತಿದ್ದ ಹಕ್ಕಿಯ ಮಡಿಲಲ್ಲಿ ದೀಪ್ತಿ ನಿದ್ದೆ ಹೋದಳು. ಬಾಲ್ಕನಿಯಲ್ಲಿ ಚೇರ್ ಅಲ್ಲಿ ಕೂತು ಬಾಯಿ ತುಂಬಾ ಅನ್ನ ತುಂಬಿದ್ದ ನೀಹಾಗೆ ದೂರದಲ್ಲಿ ಹಾರುತ್ತಿದ್ದ ವಿಮಾನ ತೋರಿಸಿ "ನೋಡು ನೀಹಾ, ಅದ್ರಲ್ಲಿ ಅಮ್ಮ ಇದ್ದಾರೆ!" ಅನ್ನುತ್ತಿದ್ದ ಮಥನ್.