Tuesday, July 3, 2018

ಗುತ್ತಿನ ಮನೆ

ಗುತ್ತಿನ ಮನೆಯ ಬಗ್ಗೆ ಬರೆಯಬೇಕು ಅಂದುಕೊಂಡು ಸುಮಾರು ತಿಂಗಳುಗಳೇ ಕಳೆದು ಹೋದವು. ಆಗಿರಲಿಲ್ಲ. ಕಾಡುವ ಜ್ವರದಿಂದ ಏನೂ ಕೆಲಸ ಮಾಡಲಾಗದೆ ಸುಮ್ಮನೆ ಮಲಗಿದ್ದವಳಿಗೆ ಇದನ್ನಾದರೂ ಬರೆಯೋಣ ಅನಿಸಿತು. ಈ ವಿವರಣೆಗಳೊಂದಿಗೆ ಒಂದಿಷ್ಟು ಫೋಟೋಗಳು ಮತ್ತು ಪುಟ್ಟ ವಿಡಿಯೊಗಳನ್ನೂ ಹಂಚಿಕೊಂಡಿದ್ದೇನೆ. ಒಟ್ಟಾರೆ ಕಣ್ಣಿಗೆ ಕಂಡದ್ದು, ಬುದ್ಧಿಗೆ ತಿಳಿದಿದ್ದು ಹಾಗೂ ನೆನಪಿರುವಷ್ಟನ್ನು ಇಲ್ಲಿ ಬರೆದಿದ್ದೇನೆ. 
ಮಂಗಳೂರಿನ ಪಿಲಿಕುಳದಲ್ಲಿರುವ ಗುತ್ತಿನ ಮನೆಯ ಪ್ರತಿಕೃತಿ ಚೆಂದವಷ್ಟೇ ಅಲ್ಲ, ಅಚ್ಚುಕಟ್ಟಾಗಿ ಕೂಡಾ ನಿರ್ವಹಿಸಲ್ಪಟ್ಟಿದೆ. ವಿಸ್ತಾರವಾದ ಈ ಮನೆಯಲ್ಲಿ ಮೋಹನ್ ಎನ್ನುವ ವ್ಯಕ್ತಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸುಮಾರು ನೂರು ಮರದ ಕಂಬಗಳು ಹಾಗೂ ತೊಲೆ, ದಾರಂದ, ಕುರ್ಚಿ, ಮೇಜು ಇತ್ಯಾದಿ ಸಾಕಷ್ಟು ಮರದ ವಸ್ತುಗಳಿರುವ ಈ ಮನೆಯಲ್ಲಿ ಒಂದೂ ಕಂಚುಕಾರದ ಗೂಡಾಗಲಿ, ಜೇಡನ ಬಲೆಯಾಗಲೀ ಕಾಣುವುದಿಲ್ಲ. ಪ್ರತೀ ಮೂಲೆ ಮೂಲೆಯೂ ಒಂದು ಚೂರು ಕಸ ಕಡ್ಡಿಯಿಲ್ಲದೆ ನೀಟಾಗಿದೆ. ಇಬ್ಬರು ಸಹಾಯಕರು ಇದ್ದಾರಂತೆ.
ವಿಶಾಲವಾದ ಗುತ್ತಿನ ಮನೆಯ ಎದುರಿಗೆ ಒಂದು ದೊಡ್ಡ ತುಳಸಿ ಕಟ್ಟೆ ಹಾಗೂ ಬಾವಿಯಿದ್ದು ಅದರ ರಾಟೆ ಹಳೆಯ ಕಾಲದ್ದು, ಅಲ್ಲೊಂದು ಕಲ್ಲಿನ ಬಾನಿ, ಅದರಲ್ಲೊಂದು ಪುಟ್ಟ ಮೀನು. ನಾಯಿಗಳು ಮತ್ತು ಹಕ್ಕಿಗಳು ಅದರಿಂದ ನೀರು ಕುಡಿಯುತ್ತವಂತೆ. ಕಪ್ಪು ಮರದ ಕಂಬಗಳಿರುವ ದೊಡ್ಡ ಚಾವಡಿ, ಚಾವಡಿಯ ಬಲ ತುದಿಯಲ್ಲೊಂದು ದೈವ ಸ್ಥಾನದಂತಿರುವ ಕೋಣೆ. ಇಡೀ ಮನೆಯ ನೆಲಕ್ಕೆ ಹಾಸಿರುವ ಕೆಂಪು ಕಾಲಿಗೆ ತಂಪೆನಿಸುತ್ತದೆ. ಚಾವಡಿಯಲ್ಲೊಂದು ಮೇನೆ. ಅದಕ್ಕೆ ಹೊಂದಿಕೊಂಡಂತೆ ಇರುವ ಕೋಣೆಯಲ್ಲಿ ಒಂದು ಬಾಳೆಗೊನೆಯ ಪ್ರತಿಕೃತಿ , ಎರಡು ಕೋವಿಗಳು ಮತ್ತು ಬಗೆ ಬಗೆಯ ಕತ್ತಿಗಳನ್ನು ನೇತು ಹಾಕಲಾಗಿದೆ. ಮೆಟ್ಟಿಲಗಳ ಎರಡನೇ ಹಂತದಲ್ಲಿ ಮತ್ತೆ ಎರಡೂ ಕಡೆಗೆ ಇನ್ನೆರಡು ಕೋಣೆಗಳು. ಒಂದರಲ್ಲಿ ಒಂದು ಜೋಕಾಲಿಯಲ್ಲಿ ದೈವದ ಕತ್ತಿ, ಮುಖವಾಡಗಳನ್ನಿರಿಸಿದ್ದಾರೆ. ಆ ಕೋಣೆಯ ಹೊರ ಬರುತ್ತಿದಂತೆ ಗೋಡೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಮೂಲ ಗುತ್ತಿನ ಮನೆಗಳ ಹಲವಾರು ಚಿತ್ರಗಳನ್ನು ಅವುಗಳ ವಿವರಣೆಗಳೊಂದಿಗೆ ನೇತು ಹಾಕಿದ್ದಾರೆ. ಮಹಾ ದ್ವಾರದ ಬಾಗಿಲುಗಳ ಅಂದವಂತೂ ಹೇಳ ತೀರದು. ಬಾಗಿಲಿನ ಬಲಗಡೆ ಒಂದು ದೊಡ್ಡ, ಸಿಂಗಲ್ ಸೋಫಾದಂತಹ ಕುರ್ಚಿ. ಅದು ಸತ್ಯ ಪೀಠವಂತೆ. ಅದರ ಮೇಲೆ ಕೂತು ನ್ಯಾಯ ತೀರ್ಮಾನ ಹೇಳುತ್ತಿದ್ದರಂತೆ ಗುತ್ತಿನೊಡತಿ / ಒಡೆಯ.
ಒಳಗಡೆ ಕಾಲಿಡುತ್ತಿದಂತೆ ಎಡಗಡೆ ವಿಶಾಲವಾದ ಚಾವಡಿಯಂಥ ಜಾಗ. ಮೂಲೆಯಲ್ಲೊಂದು ಜೋಕಾಲಿ, ಅದರ ಮೇಲೆ ಮಾತ್ರ ಬೆಳಕು ಬಿದ್ದಿದೆ, ಅದರ ಮೇಲೆ ಅಜ್ಜಿ ಮೊಮ್ಮಕ್ಕಳಿಬ್ಬರು ಕೂತಿದ್ದಾರೆ, ಅರೆ! ಇವರ್ಯಾರು ಎಂದು ಹತ್ತಿರ ಹೋದರೆ ಅವು ಮಣ್ಣಿನ ಬೊಂಬೆಗಳು, ಆ ಇಡೀ ಜಾಗಕ್ಕೆ ಒಳ ಹೋಗದಂತೆ ಒಂದು ಕಬ್ಬಿಣದ ಸರಳಿನ ತಡೆ. ಅದಕ್ಕೆ ಅಂಟಿಕೊಂಡು ಅದೇನು ಎಂಬುದರ ವಿವರವುಳ್ಳ ಫಲಕ ಮತ್ತು ಒಂದು ಬಟನ್, ಒತ್ತುತ್ತಿದಂತೆ ಅದೆಲ್ಲೋ ಇಟ್ಟ ಸ್ಪೀಕರ್ ಇಂದ ಹೊಮ್ಮುವ ಒಂದು ಹಳೆ ಕಾಲದ ಕಥೆ, ಅದಕ್ಕೆ ಆ ಮಕ್ಕಳ ಪ್ರಶ್ನೆಗಳು, ಹೂಗುಟ್ಟುವಿಕೆ ಎಲ್ಲಾ ಸೇರಿ ನಿಜವಾಗಿಯೂ ಅವರಲ್ಲಿ ಇದ್ದಾರೇನೋ ಎಂಬ ಭ್ರಮೆ ಹುಟ್ಟಿಸಿಬಿಡುತ್ತದೆ. ಬಲಗಡೆಗೂ ಅಷ್ಟೇ ವಿಸ್ತಾರವಾದ ಜಾಗ ಹಾಗೂ ಮೂಲೆಯಲ್ಲೊಂದು ಕೊಠಡಿ. ಅಲ್ಲಿದ್ದವರು ಇವಾಗಷ್ಟೇ ಇಲ್ಲಿಂದ ಎದ್ದು ಹೋದರೋ ಎಂಬಂತಿರುವ ಬಟ್ಟೆ, ಬುಟ್ಟಿ, ಮಂಚ, ತೊಟ್ಟಿಲು ಹಾಗೂ ಕವಾಟುಗಳ ಜೋಡಣೆ. ಈ ಕೋಣೆಯನ್ನೂ ನೋಡಿ ಮುಗಿಸಿ, ಎರಡನೇ ಹಂತವನ್ನು ದಾಟಿ ಒಳ ಹೋದರೆ ಎದುರಿಗೆ ಕಣ್ಣಿಗೆ ಬೀಳುವ ವಿಶಾಲವಾದ ಅಂಗಳ, ಅದೊಂದು ಭವಂತಿ ಮನೆ. ಸೂರ್ಯನ ಬಿಸಿಲೂ, ಮಳೆ ಧಾರಾಳವಾಗಿ ಆ ಜಾಗಕ್ಕೆ ಬೀಳುತ್ತದೆ. ಎರಡು ಹೆಜ್ಜೆ ಇಳಿದರೆ ಆ ಅಂಗಳಕ್ಕೆ ಕಾಲಿಡಬಹುದು, ಆದರೆ ಅಲ್ಲಿಂದ ಏಳುವ ಧೂಳು ಹಾಗೂ ಹಕ್ಕಿಗಳು ಬಂದು ಗಲೀಜು ಮಾಡುತ್ತವೆ ಎಂದು ನೆಟ್ ಹಾಕಿ ಮುಚ್ಚಿದ್ದಾರೆ. ಬಾಗಿಲಿನ ಎರಡೂ ದಿಶೆಗಳಲ್ಲಿ ಬೇರೆ ಬೇರೆ ದೈವಗಳ ಪ್ರತಿಮೆಗಳು ಮತ್ತು ವಿವರಗಳ ಫಲಕಗಳು. ಮತ್ತೆ ಮುಂದೆ ಎಡಭಾಗಕ್ಕೆ ಸಾಗಿದರೆ ಒಂದು ಊಟಕ್ಕೆ ಕೂತುಕೊಳ್ಳುವ ಹಾಗಿರುವ ಹಜಾರದಂಥ ಜಾಗ. ಅಲ್ಲಿ ನೆಲದಲ್ಲಿ ಕೂತು ಸ್ವಲ್ಪ ಕುತ್ತಿಗೆ ಮೇಲೆ ಮಾಡಿ ನೋಡಿದರೆ ಅಲ್ಲೊಂದು ಟಿವಿಯಲ್ಲಿ ತಾಳೆ ಮರದಿಂದ ಹೆಂಡ ಇಳಿಸುವ ಒಂದು ಡಾಕ್ಯುಮೆಂಟರಿ ನೋಡಬಹುದು. ಅದೇ ಹಜಾರದ ಎಡಗಡೆ ಅಡುಗೆ ಮನೆ, ಥೇಟ್ ನನ್ನ ಅಜ್ಜಿಯ ಮನೆಯ ಅಡುಗೆ ಮನೆಯಂತೆ ಇದ್ದ ಇದರಲ್ಲಿ ಮಣ್ಣಿನ ಎಲ್ಲಾ ಪಾತ್ರೆ ಪಗಡಿಗಳು, ಭರಣಿಗಳು, ಹಾಲು ಮೊಸರು ತೂಗು ಹಾಕುವ ಸಾಮಗ್ರಿಗಳು, ಅಕ್ಕಿಮುಡಿ, ಅನ್ನ ಬಗ್ಗಿಸುವ ಬಾನಿ, ಕತ್ತಿಗಳು, ತುರಿಮಣೆ ಎಲ್ಲವೂ ಇವೆ. ಸಾಕಷ್ಟು ಕತ್ತಲಿದ್ದ ಒಲೆಯಲ್ಲಿ ಉರಿಯುವ ಕೃತಕ ಬೆಂಕಿಯ ಮಬ್ಬು ಬೆಳಕಲ್ಲಿ ಆ ಇಡೀ ಕೋಣೆಯನ್ನು ನಿಂತು ನೋಡುವುದು ಅದೆಷ್ಟು ಚೆಂದ. ಒಂದೆರಡು ಶತಮಾನಗಳು ಹಿಂದೆ ಹೋದ ಹಾಗಿನ ಅನುಭವ. ಮತ್ತೆ ಹಜಾರದಿಂದ ಕೆಳಗಿಳಿದು ಅಂಗಳದ ಅಂಚಿಗೆ ನಡೆಯುತ್ತಾ ಹೋದರೆ ಬಲಕ್ಕೆ ಹೊರಳುವಲ್ಲಿ ನಾಲ್ಕು ಯಕ್ಷಗಾನದ ವೇಷಗಳು. ಚೆಂದದ ಬಣ್ಣಗಳು ಹಾಗೂ ಉಡುಪುಗಳೊಂದಿಗೆ ನಿಂತಿರುವ ಮಾನವಾಕೃತಿಯ ಇವರನ್ನು ನೋಡುತ್ತಾ ಇರೋಣವೆನಿಸುತ್ತದೆ. ಅಲ್ಲೇ ಎಡಕ್ಕೆ ಮತ್ತೊಂದು ಕತ್ತಲೆ ಕೋಣೆ. ಏನಿದು ಎಂದು ಹೆದರುತ್ತಾ ಒಳ ಹೋದರೆ, ಫಲಕದ ಹತ್ತಿರ ಒಂದು ಬಟನ್, ಒತ್ತಿದ ಕೂಡಲೇ ಭಾಗವತರ ಆಲಾಪದೊಂದಿಗೆ ಎದುರಿನ ಗಾಜಿನ ಹಿಂದೆ ಒಬ್ಬಬ್ಬರೇ ಪಾತ್ರಧಾರಿಗಳು ನಿಧಾನಕ್ಕೆ ಮಂದ ಬೆಳಕಲ್ಲಿ ಕಾಣತೊಡಗುತ್ತಾರೆ. ಅದೊಂದು ಸುಂದರ ಅನುಭವ. ಅದೇ ಚಾವಡಿಯ ಕೊನೆಗಿರುವ ಇನ್ನೊಂದು ಕೋಣೆಯ ಆಟಿ ಕಳೆಂಜದ ಪಾತ್ರಧಾರಿಗಳೂ ಇದೇ ಥರ ಕಾಣಿಸಿಕೊಳ್ಳುತ್ತಾರೆ.
ಅಲ್ಲಿಂದ ಹೊರಬಿದ್ದು ಮತ್ತೆ ಅಂಗಳದ ಅಂಚಿಗೆ ನಡೆಯುತ್ತಾ ಹೋದಂತೆ ಖಾಲಿ ಜಾಗದಲ್ಲಿ ನೀಟಾಗಿ ಜೋಡಿಸಿಟ್ಟ ಬೇಸಾಯಕ್ಕೆ ಸಂಬಂಧಪಟ್ಟ ಸಾಮಾಗ್ರಿಗಳು, ತಲೆಯೆತ್ತಿದರೆ ಸಾಲಾಗಿ ಕಟ್ಟಿರುವ ಮಂಗಳೂರು ಸೌತೆಗಳು, ಇವೂ ಪ್ರತಿಕೃತಿಗಳೇ!
ಅದೆಷ್ಟು ಸಲ ನೆನಪಲ್ಲೇ ಈ ಮನೆಯನ್ನು ಮತ್ತೆ ಮತ್ತೆ ಸುತ್ತು ಹಾಕಿದ್ದೀನೋ ಗೊತ್ತಿಲ್ಲ, ಅಷ್ಟು ಇಷ್ಟವಾಯಿತು. ನಿಜವಾದ ಗುತ್ತಿನ ಮನೆಗಳನ್ನು ನೋಡಿ ಬರಬೇಕೆಂಬುದು ನೆಕ್ಸ್ಟ್ ಪ್ಲಾನ್.
ನೀವೂ ಒಂದ್ಸಲ ಹೋಗಿ ಬನ್ನಿ

No comments:

Post a Comment