Sunday, July 15, 2018

ಚಿಟ್ಟೆ

ಬಣ್ಣಗಳ ಕಳಕೊಂಡ ಚಿಟ್ಟೆಯೊಂದು
ಮತ್ತೆ ಹೊಸ ರಂಗು ಹುಡುಕ ಹೊರಟಿತು.
ಬಣ್ಣಗಳ ರಾಣಿ ಹೂವನ್ನು  ಕೇಳಿತು 
ಹೂವು ಮುಖ ತಿರುಗಿಸಿತು.
ನೀಲಿ, ಬಿಳಿ, ಕೆಂಪು, ಬೂದು 
ಆಕಾಶವ ಕೇಳಿತು,
ಅದೋ ಕ್ಷಣಕ್ಕೊಮ್ಮೆ ಬಟ್ಟೆ 
ಬದಲಿಸಿರುವುದರಲ್ಲಿ ವ್ಯಸ್ತವಾಗಿತ್ತು.
ಆಸೆ ಬಿಡದೆ ನೀರಿನಾಳಕ್ಕಿಳಿದು 
ಮೀನ ಬೇಡಿತು.
ಮಾತಾಡಲೂ ಸಮಯವಿಲ್ಲದ ಅದು 
ಪುಳಕ್ಕನೆ ನೀರಲ್ಲಿ ಜಾರಿ ಹೋಯಿತು. 
ತಲೆಯೆತ್ತಿ ನೋಡಿದರೆ 
ನೂರು ವರ್ಣಗಳ ಹಕ್ಕಿ,
ಹಾರಿ ಅದರ ಬಳಿ ಹೋದರೆ
ಬಣ್ಣಗೆಟ್ಟ ಚಿಟ್ಟೆಯ ಕಂಡು
ಮುಖ ಸಿಂಡರಿಸಿ ಗಾಳಿಯಲ್ಲಿ ತೇಲಿ ಹೋಯಿತು.
ಪೂರ್ತಿ ಕುಸಿದ ತಥಾ ಕಥಿತ ಚಿಟ್ಟೆ
ಸುರಿವ ಮಳೆಯಲ್ಲಿ ಕೂತು 
ಮನ ಪೂರ್ತಿ ಅತ್ತಿತ್ತು,
ಕಪ್ಪು ಬಿಳುಪು ಚಿಟ್ಟೆಯ ಕಂಡು
ಆಗಷ್ಟೇ ಉದಿಸಿದ ಕಾಮನಬಿಲ್ಲು ಬಾಗಿ 
ಅಪ್ಪಿಕೊಂಡು ಸಂತೈಸಿತು, 
ಇದೀಗ ಚಿಟ್ಟೆ ರಂಗು ರಂಗಾಗಿ 
ನಕ್ಕಿತು, ಕಾಮನಬಿಲ್ಲ ಮೇಲೊಂದು 
ಹೊಸ ಹಚ್ಚೆಯ ನೀವು ಕಂಡೀರಾ
ಅವರಿಬ್ಬರೂ ಈಗ ಪ್ರಾಣ ಸ್ನೇಹಿತರು.

Tuesday, July 3, 2018

ಗುತ್ತಿನ ಮನೆ

ಗುತ್ತಿನ ಮನೆಯ ಬಗ್ಗೆ ಬರೆಯಬೇಕು ಅಂದುಕೊಂಡು ಸುಮಾರು ತಿಂಗಳುಗಳೇ ಕಳೆದು ಹೋದವು. ಆಗಿರಲಿಲ್ಲ. ಕಾಡುವ ಜ್ವರದಿಂದ ಏನೂ ಕೆಲಸ ಮಾಡಲಾಗದೆ ಸುಮ್ಮನೆ ಮಲಗಿದ್ದವಳಿಗೆ ಇದನ್ನಾದರೂ ಬರೆಯೋಣ ಅನಿಸಿತು. ಈ ವಿವರಣೆಗಳೊಂದಿಗೆ ಒಂದಿಷ್ಟು ಫೋಟೋಗಳು ಮತ್ತು ಪುಟ್ಟ ವಿಡಿಯೊಗಳನ್ನೂ ಹಂಚಿಕೊಂಡಿದ್ದೇನೆ. ಒಟ್ಟಾರೆ ಕಣ್ಣಿಗೆ ಕಂಡದ್ದು, ಬುದ್ಧಿಗೆ ತಿಳಿದಿದ್ದು ಹಾಗೂ ನೆನಪಿರುವಷ್ಟನ್ನು ಇಲ್ಲಿ ಬರೆದಿದ್ದೇನೆ. 
ಮಂಗಳೂರಿನ ಪಿಲಿಕುಳದಲ್ಲಿರುವ ಗುತ್ತಿನ ಮನೆಯ ಪ್ರತಿಕೃತಿ ಚೆಂದವಷ್ಟೇ ಅಲ್ಲ, ಅಚ್ಚುಕಟ್ಟಾಗಿ ಕೂಡಾ ನಿರ್ವಹಿಸಲ್ಪಟ್ಟಿದೆ. ವಿಸ್ತಾರವಾದ ಈ ಮನೆಯಲ್ಲಿ ಮೋಹನ್ ಎನ್ನುವ ವ್ಯಕ್ತಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸುಮಾರು ನೂರು ಮರದ ಕಂಬಗಳು ಹಾಗೂ ತೊಲೆ, ದಾರಂದ, ಕುರ್ಚಿ, ಮೇಜು ಇತ್ಯಾದಿ ಸಾಕಷ್ಟು ಮರದ ವಸ್ತುಗಳಿರುವ ಈ ಮನೆಯಲ್ಲಿ ಒಂದೂ ಕಂಚುಕಾರದ ಗೂಡಾಗಲಿ, ಜೇಡನ ಬಲೆಯಾಗಲೀ ಕಾಣುವುದಿಲ್ಲ. ಪ್ರತೀ ಮೂಲೆ ಮೂಲೆಯೂ ಒಂದು ಚೂರು ಕಸ ಕಡ್ಡಿಯಿಲ್ಲದೆ ನೀಟಾಗಿದೆ. ಇಬ್ಬರು ಸಹಾಯಕರು ಇದ್ದಾರಂತೆ.
ವಿಶಾಲವಾದ ಗುತ್ತಿನ ಮನೆಯ ಎದುರಿಗೆ ಒಂದು ದೊಡ್ಡ ತುಳಸಿ ಕಟ್ಟೆ ಹಾಗೂ ಬಾವಿಯಿದ್ದು ಅದರ ರಾಟೆ ಹಳೆಯ ಕಾಲದ್ದು, ಅಲ್ಲೊಂದು ಕಲ್ಲಿನ ಬಾನಿ, ಅದರಲ್ಲೊಂದು ಪುಟ್ಟ ಮೀನು. ನಾಯಿಗಳು ಮತ್ತು ಹಕ್ಕಿಗಳು ಅದರಿಂದ ನೀರು ಕುಡಿಯುತ್ತವಂತೆ. ಕಪ್ಪು ಮರದ ಕಂಬಗಳಿರುವ ದೊಡ್ಡ ಚಾವಡಿ, ಚಾವಡಿಯ ಬಲ ತುದಿಯಲ್ಲೊಂದು ದೈವ ಸ್ಥಾನದಂತಿರುವ ಕೋಣೆ. ಇಡೀ ಮನೆಯ ನೆಲಕ್ಕೆ ಹಾಸಿರುವ ಕೆಂಪು ಕಾಲಿಗೆ ತಂಪೆನಿಸುತ್ತದೆ. ಚಾವಡಿಯಲ್ಲೊಂದು ಮೇನೆ. ಅದಕ್ಕೆ ಹೊಂದಿಕೊಂಡಂತೆ ಇರುವ ಕೋಣೆಯಲ್ಲಿ ಒಂದು ಬಾಳೆಗೊನೆಯ ಪ್ರತಿಕೃತಿ , ಎರಡು ಕೋವಿಗಳು ಮತ್ತು ಬಗೆ ಬಗೆಯ ಕತ್ತಿಗಳನ್ನು ನೇತು ಹಾಕಲಾಗಿದೆ. ಮೆಟ್ಟಿಲಗಳ ಎರಡನೇ ಹಂತದಲ್ಲಿ ಮತ್ತೆ ಎರಡೂ ಕಡೆಗೆ ಇನ್ನೆರಡು ಕೋಣೆಗಳು. ಒಂದರಲ್ಲಿ ಒಂದು ಜೋಕಾಲಿಯಲ್ಲಿ ದೈವದ ಕತ್ತಿ, ಮುಖವಾಡಗಳನ್ನಿರಿಸಿದ್ದಾರೆ. ಆ ಕೋಣೆಯ ಹೊರ ಬರುತ್ತಿದಂತೆ ಗೋಡೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಮೂಲ ಗುತ್ತಿನ ಮನೆಗಳ ಹಲವಾರು ಚಿತ್ರಗಳನ್ನು ಅವುಗಳ ವಿವರಣೆಗಳೊಂದಿಗೆ ನೇತು ಹಾಕಿದ್ದಾರೆ. ಮಹಾ ದ್ವಾರದ ಬಾಗಿಲುಗಳ ಅಂದವಂತೂ ಹೇಳ ತೀರದು. ಬಾಗಿಲಿನ ಬಲಗಡೆ ಒಂದು ದೊಡ್ಡ, ಸಿಂಗಲ್ ಸೋಫಾದಂತಹ ಕುರ್ಚಿ. ಅದು ಸತ್ಯ ಪೀಠವಂತೆ. ಅದರ ಮೇಲೆ ಕೂತು ನ್ಯಾಯ ತೀರ್ಮಾನ ಹೇಳುತ್ತಿದ್ದರಂತೆ ಗುತ್ತಿನೊಡತಿ / ಒಡೆಯ.
ಒಳಗಡೆ ಕಾಲಿಡುತ್ತಿದಂತೆ ಎಡಗಡೆ ವಿಶಾಲವಾದ ಚಾವಡಿಯಂಥ ಜಾಗ. ಮೂಲೆಯಲ್ಲೊಂದು ಜೋಕಾಲಿ, ಅದರ ಮೇಲೆ ಮಾತ್ರ ಬೆಳಕು ಬಿದ್ದಿದೆ, ಅದರ ಮೇಲೆ ಅಜ್ಜಿ ಮೊಮ್ಮಕ್ಕಳಿಬ್ಬರು ಕೂತಿದ್ದಾರೆ, ಅರೆ! ಇವರ್ಯಾರು ಎಂದು ಹತ್ತಿರ ಹೋದರೆ ಅವು ಮಣ್ಣಿನ ಬೊಂಬೆಗಳು, ಆ ಇಡೀ ಜಾಗಕ್ಕೆ ಒಳ ಹೋಗದಂತೆ ಒಂದು ಕಬ್ಬಿಣದ ಸರಳಿನ ತಡೆ. ಅದಕ್ಕೆ ಅಂಟಿಕೊಂಡು ಅದೇನು ಎಂಬುದರ ವಿವರವುಳ್ಳ ಫಲಕ ಮತ್ತು ಒಂದು ಬಟನ್, ಒತ್ತುತ್ತಿದಂತೆ ಅದೆಲ್ಲೋ ಇಟ್ಟ ಸ್ಪೀಕರ್ ಇಂದ ಹೊಮ್ಮುವ ಒಂದು ಹಳೆ ಕಾಲದ ಕಥೆ, ಅದಕ್ಕೆ ಆ ಮಕ್ಕಳ ಪ್ರಶ್ನೆಗಳು, ಹೂಗುಟ್ಟುವಿಕೆ ಎಲ್ಲಾ ಸೇರಿ ನಿಜವಾಗಿಯೂ ಅವರಲ್ಲಿ ಇದ್ದಾರೇನೋ ಎಂಬ ಭ್ರಮೆ ಹುಟ್ಟಿಸಿಬಿಡುತ್ತದೆ. ಬಲಗಡೆಗೂ ಅಷ್ಟೇ ವಿಸ್ತಾರವಾದ ಜಾಗ ಹಾಗೂ ಮೂಲೆಯಲ್ಲೊಂದು ಕೊಠಡಿ. ಅಲ್ಲಿದ್ದವರು ಇವಾಗಷ್ಟೇ ಇಲ್ಲಿಂದ ಎದ್ದು ಹೋದರೋ ಎಂಬಂತಿರುವ ಬಟ್ಟೆ, ಬುಟ್ಟಿ, ಮಂಚ, ತೊಟ್ಟಿಲು ಹಾಗೂ ಕವಾಟುಗಳ ಜೋಡಣೆ. ಈ ಕೋಣೆಯನ್ನೂ ನೋಡಿ ಮುಗಿಸಿ, ಎರಡನೇ ಹಂತವನ್ನು ದಾಟಿ ಒಳ ಹೋದರೆ ಎದುರಿಗೆ ಕಣ್ಣಿಗೆ ಬೀಳುವ ವಿಶಾಲವಾದ ಅಂಗಳ, ಅದೊಂದು ಭವಂತಿ ಮನೆ. ಸೂರ್ಯನ ಬಿಸಿಲೂ, ಮಳೆ ಧಾರಾಳವಾಗಿ ಆ ಜಾಗಕ್ಕೆ ಬೀಳುತ್ತದೆ. ಎರಡು ಹೆಜ್ಜೆ ಇಳಿದರೆ ಆ ಅಂಗಳಕ್ಕೆ ಕಾಲಿಡಬಹುದು, ಆದರೆ ಅಲ್ಲಿಂದ ಏಳುವ ಧೂಳು ಹಾಗೂ ಹಕ್ಕಿಗಳು ಬಂದು ಗಲೀಜು ಮಾಡುತ್ತವೆ ಎಂದು ನೆಟ್ ಹಾಕಿ ಮುಚ್ಚಿದ್ದಾರೆ. ಬಾಗಿಲಿನ ಎರಡೂ ದಿಶೆಗಳಲ್ಲಿ ಬೇರೆ ಬೇರೆ ದೈವಗಳ ಪ್ರತಿಮೆಗಳು ಮತ್ತು ವಿವರಗಳ ಫಲಕಗಳು. ಮತ್ತೆ ಮುಂದೆ ಎಡಭಾಗಕ್ಕೆ ಸಾಗಿದರೆ ಒಂದು ಊಟಕ್ಕೆ ಕೂತುಕೊಳ್ಳುವ ಹಾಗಿರುವ ಹಜಾರದಂಥ ಜಾಗ. ಅಲ್ಲಿ ನೆಲದಲ್ಲಿ ಕೂತು ಸ್ವಲ್ಪ ಕುತ್ತಿಗೆ ಮೇಲೆ ಮಾಡಿ ನೋಡಿದರೆ ಅಲ್ಲೊಂದು ಟಿವಿಯಲ್ಲಿ ತಾಳೆ ಮರದಿಂದ ಹೆಂಡ ಇಳಿಸುವ ಒಂದು ಡಾಕ್ಯುಮೆಂಟರಿ ನೋಡಬಹುದು. ಅದೇ ಹಜಾರದ ಎಡಗಡೆ ಅಡುಗೆ ಮನೆ, ಥೇಟ್ ನನ್ನ ಅಜ್ಜಿಯ ಮನೆಯ ಅಡುಗೆ ಮನೆಯಂತೆ ಇದ್ದ ಇದರಲ್ಲಿ ಮಣ್ಣಿನ ಎಲ್ಲಾ ಪಾತ್ರೆ ಪಗಡಿಗಳು, ಭರಣಿಗಳು, ಹಾಲು ಮೊಸರು ತೂಗು ಹಾಕುವ ಸಾಮಗ್ರಿಗಳು, ಅಕ್ಕಿಮುಡಿ, ಅನ್ನ ಬಗ್ಗಿಸುವ ಬಾನಿ, ಕತ್ತಿಗಳು, ತುರಿಮಣೆ ಎಲ್ಲವೂ ಇವೆ. ಸಾಕಷ್ಟು ಕತ್ತಲಿದ್ದ ಒಲೆಯಲ್ಲಿ ಉರಿಯುವ ಕೃತಕ ಬೆಂಕಿಯ ಮಬ್ಬು ಬೆಳಕಲ್ಲಿ ಆ ಇಡೀ ಕೋಣೆಯನ್ನು ನಿಂತು ನೋಡುವುದು ಅದೆಷ್ಟು ಚೆಂದ. ಒಂದೆರಡು ಶತಮಾನಗಳು ಹಿಂದೆ ಹೋದ ಹಾಗಿನ ಅನುಭವ. ಮತ್ತೆ ಹಜಾರದಿಂದ ಕೆಳಗಿಳಿದು ಅಂಗಳದ ಅಂಚಿಗೆ ನಡೆಯುತ್ತಾ ಹೋದರೆ ಬಲಕ್ಕೆ ಹೊರಳುವಲ್ಲಿ ನಾಲ್ಕು ಯಕ್ಷಗಾನದ ವೇಷಗಳು. ಚೆಂದದ ಬಣ್ಣಗಳು ಹಾಗೂ ಉಡುಪುಗಳೊಂದಿಗೆ ನಿಂತಿರುವ ಮಾನವಾಕೃತಿಯ ಇವರನ್ನು ನೋಡುತ್ತಾ ಇರೋಣವೆನಿಸುತ್ತದೆ. ಅಲ್ಲೇ ಎಡಕ್ಕೆ ಮತ್ತೊಂದು ಕತ್ತಲೆ ಕೋಣೆ. ಏನಿದು ಎಂದು ಹೆದರುತ್ತಾ ಒಳ ಹೋದರೆ, ಫಲಕದ ಹತ್ತಿರ ಒಂದು ಬಟನ್, ಒತ್ತಿದ ಕೂಡಲೇ ಭಾಗವತರ ಆಲಾಪದೊಂದಿಗೆ ಎದುರಿನ ಗಾಜಿನ ಹಿಂದೆ ಒಬ್ಬಬ್ಬರೇ ಪಾತ್ರಧಾರಿಗಳು ನಿಧಾನಕ್ಕೆ ಮಂದ ಬೆಳಕಲ್ಲಿ ಕಾಣತೊಡಗುತ್ತಾರೆ. ಅದೊಂದು ಸುಂದರ ಅನುಭವ. ಅದೇ ಚಾವಡಿಯ ಕೊನೆಗಿರುವ ಇನ್ನೊಂದು ಕೋಣೆಯ ಆಟಿ ಕಳೆಂಜದ ಪಾತ್ರಧಾರಿಗಳೂ ಇದೇ ಥರ ಕಾಣಿಸಿಕೊಳ್ಳುತ್ತಾರೆ.
ಅಲ್ಲಿಂದ ಹೊರಬಿದ್ದು ಮತ್ತೆ ಅಂಗಳದ ಅಂಚಿಗೆ ನಡೆಯುತ್ತಾ ಹೋದಂತೆ ಖಾಲಿ ಜಾಗದಲ್ಲಿ ನೀಟಾಗಿ ಜೋಡಿಸಿಟ್ಟ ಬೇಸಾಯಕ್ಕೆ ಸಂಬಂಧಪಟ್ಟ ಸಾಮಾಗ್ರಿಗಳು, ತಲೆಯೆತ್ತಿದರೆ ಸಾಲಾಗಿ ಕಟ್ಟಿರುವ ಮಂಗಳೂರು ಸೌತೆಗಳು, ಇವೂ ಪ್ರತಿಕೃತಿಗಳೇ!
ಅದೆಷ್ಟು ಸಲ ನೆನಪಲ್ಲೇ ಈ ಮನೆಯನ್ನು ಮತ್ತೆ ಮತ್ತೆ ಸುತ್ತು ಹಾಕಿದ್ದೀನೋ ಗೊತ್ತಿಲ್ಲ, ಅಷ್ಟು ಇಷ್ಟವಾಯಿತು. ನಿಜವಾದ ಗುತ್ತಿನ ಮನೆಗಳನ್ನು ನೋಡಿ ಬರಬೇಕೆಂಬುದು ನೆಕ್ಸ್ಟ್ ಪ್ಲಾನ್.
ನೀವೂ ಒಂದ್ಸಲ ಹೋಗಿ ಬನ್ನಿ

Monday, July 2, 2018

The age of Adaline

ಓಹ್ ಅಲ್ಲೊಂದು ಬೆಳ್ಳಿ ಕೂದಲು, ಇಲ್ಲೊಂದು ನೆರಿಗೆ, ಕಣ್ಣ ಅಂಚಿನಲ್ಲಿ ಒಂದು ಗೆರೆ ಛೆ, ಯಾಕಾದರೂ ವಯಸ್ಸಾಗುತ್ತದೆಯೋ ಎಂದು ನಿಟ್ಟಸಿರು ಬಿಡದವರುಂಟೆ? ಒಂದು ವೇಳೆ ಉರುಳುವ ವರ್ಷಗಳು ಯಾವ ಗುರುತನ್ನೂ ಮುಖದ ಮೇಲೆ ಗೀರದೆ ಇದ್ದಲ್ಲಿ ಹೇಗಿರುತ್ತಿತ್ತು? ಮಕ್ಕಳು ನಮ್ಮೆದಿರೆ ನಮಗಿಂತ ವೃದ್ಧರಾದರೆ, ಅದನ್ನು  ಒಪ್ಪಿಕೊಳುವುದಾದರೂ ಹೇಗೆ? ವರವೆಂದು ನಾವೀಗ ಅಂದುಕೊಳ್ಳುವ ನಮ್ಮ  ಬಯಕೆ ಘೋರ ಶಾಪವಾದರೆ?

ಅವಳು ಅತೀ ಚೆಂದದ ಹೆಣ್ಣು, ಎಂಟು ದಶಕಗಳ ಕಾಲ ಅವಳ ಅಂದ ಒಂದಿನಿತೂ ಮಾಸಿಲ್ಲ, ಕಾಲರಾಯ ಅವಳ ಸೌಂದರ್ಯವನ್ನು ಕುಗ್ಗಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ, ಸಂಗಾತಿ ದೂರವಾಗಿ ಇದ್ದೋರ್ವ ಮಗಳು ಇವಳ ಅಜ್ಜಿಯಂತೆ ಕಾಣತೊಡಗಿದರೂ ಇವಳಲ್ಲಿ ಸ್ವಲ್ಪವೂ ಬದಲಾವಣೆಯಿಲ್ಲ. ಸಾಯುವ ಮನಸ್ಸಿಲ್ಲದ, ಬದುಕುವ ಅದಮ್ಯ ಪ್ರೀತಿಯ ಹೊತ್ತವಳು ಹೆಸರು, ವೇಷ ಬದಲಿಸಿ ಜನರಿಂದ, ಪ್ರೀತಿಸುವ ಮನಗಳಿಂದ ದೂರ, ಬಲು ದೂರ ಓಡತೊಡಗುತ್ತಾಳೆ. ಹೀಗೊಂದು ಅತೀ ವಿಚಿತ್ರ ಕಥೆ. ಲೀ ತೋಲಾಂಡ್ ಕ್ರೀಗರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ “The Age of Adaline” ನ ಕಥಾ ಹಂದರವಿದು. ಅಡಲೈನ್ ಫಿಲಂ ರೀಲ್ ನೋಡುತ್ತಾ ಕೂತಿರುವ ದೃಶ್ಯದೊಂದಿಗೆ  ಆರಂಭವಾಗುವ ಕಥೆ ಇತಿಹಾಸದ ಹಲವು ಘಟನೆಗಳೊಂದಿಗೆ ನಮ್ಮ ಸುಂದರಿಯ ಕಥೆಯನ್ನೂ ಬಿಚ್ಚಿಡುತ್ತಾ ಹೋಗುತ್ತದೆ. ಪ್ರಕೃತಿಯ ವಿಚಿತ್ರ ವಿದ್ಯಮಾನದಿಂದ ಸತ್ತೇ ಹೋಗಿದ್ದ  ೨೯ರ ಅಡಲೈನ್ ಗೆ ಮತ್ತೆ ಜೀವನ ದಾನವಾಗಿ ಸಿಗುವುದಲ್ಲದೆ ವಯಸ್ಸೇ ಆಗುವುದಿಲ್ಲ. ೧೦೭ ವರ್ಷಗಳ ನಂತರವೂ ೨೯ರ ಹರೆಯದಲ್ಲೇ ಕಾಲಿಟ್ಟವಳಿಗೆ ಸಿಗುವ ಜೀವನ ಸಂಗಾತಿ ಅದೆಲ್ಲವನ್ನೂ ಬದಲಿಸುತ್ತಾನೆ. ತಂದೆ, ಮಗ ಇಬ್ಬರನ್ನೂ  ಪ್ರೀತಿಸುವ ಹೆಣ್ಣು ನಮ್ಮ ರಂಗನಾಯಕಿಯನ್ನು ನೆನಪಿಗೆ ತಂದಳು. ಎಲ್ಲೋ ಯಯಾತಿಯೂ ನೆನಪಾದ.
ಯಾವುದೋ ಚಂದಮಾಮದ ಕಥೆಯಂತಿದ್ದರೂ ಚಿತ್ರ ಒಂದು ಒಳ್ಳೆ ಕಾದಂಬರಿ ಓದಿ ಮುಗಿಸಿದ ಭಾವನೆ ಕೊಡುತ್ತದೆ. ಸುಮಾರು ೨ ಘಂಟೆಗಳ ಕಾಲವಿರುವ, ಈ ಚಿತ್ರ  netflix ಅಲ್ಲಿ ಲಭ್ಯವಿದೆ. ನೀವೂ ನೋಡಿ.

Let it go

ಇವತ್ತಿಗೂ ಸುಲಭವೇನಲ್ಲ

ಬಿಟ್ಟು ಕೊಡುವುದು ಅಷ್ಟು ಸುಲಭವೇನಲ್ಲ

ಬಿಟ್ಟು ಕೊಡುವುದು ಅಷ್ಟು ಸುಲಭವೇನಲ್ಲ
ಇಷ್ಟೂ ದಿನ ತಪ್ಪದೇ ಕನಸುಗಳಲ್ಲಿ ಬಂದವರು
ಎಚ್ಚರ ಭ್ರಮೆಗಳ ಸುಳಿಯಲ್ಲಿ ಒದ್ದಾಡುತ್ತಿದ್ದಾಗ
ಎದೆಗಪ್ಪಿ ಸಂತೈಸಿ ನಾನಿಲ್ಲಿಯೆ ಇದ್ದೇನೆ ಎಂದವರು
ಕಣ್ಣು ಬಿಟ್ಟು ಅತ್ತಾಗಿನಿಂದ ಪ್ರತೀ ಹೆಜ್ಜೆ ಹೆಜ್ಜೆಗೂ
ಎಡವದಂತೆ ಸಾವರಿಸಿದವರು ಇನ್ನಿಲ್ಲವೆಂದು
ಮುಚ್ಚಿದ ಕಣ್ಣುಗಳ ಹಿಂದೆ
ಸರ ಭರ ಓಡುವ ಸಿನೆಮಾ ರೀಲುಗಳಲ್ಲಿ
ಮಿಂಚಿ ಮರೆಯಾದವರು.
ಇನ್ನೆಂದಿಗೂ ಸ್ಪರ್ಶಕ್ಕೆ, ನೋಟಕ್ಕೆ, ಮಾತಿಗೆ
ನಿಲುಕಲಾರರು ಎಂಬುದು ಅರ್ಥವಾಗಬೇಕು
ತಲೆಗಷ್ಟೇ ಅರ್ಥವಾದದ್ದು ಮನಸ್ಸಿನಾಳಕ್ಕೂ
ಇಳಿಯಬೇಕು.
ಮುಂದೆ ನಡೆಯುವ ಎಲ್ಲಾ ಶುಭ ಸಂಧರ್ಭಗಳಲ್ಲಿ
ಚಿತ್ರದಲ್ಲಿ ಕೂತು ನಗುವ ಚೆಲ್ಲುವವರು ಇವರು.
ತುಳಸಿ ನೀರು ಬಾಯಿಯಂಚಲ್ಲಿ ಇಳಿದು ಹೋಗಿದ್ದು
ಕೈಯಾರೆ ಸುರಿದ ಬಿಸಿ ನೀರು, ತಣ್ಣೀರು
ಸುಮ್ಮನೆ ಮೆತ್ತಿದ ಅರಸಿನ ಕುಂಕುಮ
ಮೈಮೇಲೆ ಇರಿಸಿದ ಕರಿಮಣಿ, ಬಳೆ
ಅಂಚಿನ ಹಳದಿ ಧಾರೆ ಸೀರೆ
ಯಾವುದೂ, ಯಾವುದೂ, ಯಾವುದೂ ಸುಳ್ಳಲ್ಲ...
ಕಾಡುವ ನೆನಪುಗಳ ಬಿರುಡೆ ಮುಚ್ಚಿ
ಅದುಮಲಾಗುವುದಿಲ್ಲ , ಪದೇ ಪದೇ ಕಣ್ಣು ತುಂಬಬೇಕು
ಜಿಟಿ ಜಿಟಿ ಮಳೆ ಸುರಿದಂತೆ.
ಕಣ್ಣ ನೀರಿನಿಂದ ಎಷ್ಟು ತುಂಬಿದರು
ತುಂಬಲಾಗದ ಬಾವಿಯೊಂದು ಎದೆಯಲ್ಲಿ
ಇನ್ನೆಂದೂ ಸರಿಯಾಗದಂತೆ ಪೂರ್ತಿ ಬದಲಾಗಿ ಹೋದ ನಾವುಗಳು.

ಬೊಬ್ಬಿರಿದು ಅಳಲು ಆಸ್ಪದ ಕೊಡದಂತೆ
ನಮ್ಮದೇ ತುಂಡು ನಮ್ಮನ್ನೇ ದಿಟ್ಟಿಸಿ ನೋಡುತ್ತಿರಲು
ಬಿಟ್ಟು ಕೊಡುವುದು ಅಷ್ಟು ಸುಲಭವೇನಲ್ಲ

stories of Rabindranath Tagore

ಚೆಂದ ಚೆಂದದ ಕಾಟನ್ ಸೀರೆಯುಟ್ಟು, ಕಿವಿಗೆ ರಿಂಗ್ ತೊಟ್ಟು ಓಡಾಡುವ ಹರೆಯದ ಹುಡುಗಿಯರು, ಕೆಂಪು ಹಣೆಬೊಟ್ಟು, ಸಿಂಧೂರವನ್ನು ಬೈತಲೆಗೆ ಬಳಿದ ಮದುವೆಯಾದ ಸ್ತ್ರೀಯರು, ಕಂಡೂ ಕಾಣದ ಮೇಕ್ ಅಪ್, ಬದಿಗೆ ಬೈತಲೆ ತೆಗೆದು ಎಣ್ಣೆ ಬಳಿದು ಬಾಚಿದ ಕೂದಲು, ಸದಾ ಜುಬ್ಬಾ ಪೈಜಾಮ ಅದಕ್ಕೊಂದು ಖಾದಿ ಕೋಟು ತೊಟ್ಟು, ದೊಡ್ಡ ಫ್ರೇಮಿನ ಕನ್ನಡಕದೊಳಗೆ ಮರೆಯಾದ ಮುಖ ಹೊತ್ತ ಸುಂದರರು. ಇವಿಷ್ಟೂ ಪಾತ್ರಧಾರಿಗಳ ವಿವರಣೆಯಾದರೆ, ಅವರಿರುವ ಜಾಗಗಳು ಇನ್ನಷ್ಟು ಚಂದ. ಸುಮ್ಮನೆ ತನ್ನ ಪಾಡಿಗೆ ಹರಿಯುವ ನದಿ, ಹಸಿರು ಉಟ್ಟ ಪರಿಸರ, ಅಲ್ಲಲ್ಲಿ ಗುಡಿಸಲುಗಳು, ಅಲ್ಲೊಂದು ಕೋಳಿ, ಮರಕ್ಕೆ ಕಲ್ಲೆಸೆಯುವ ಹುಡುಗರು. ಮನೆಗಳೋ ಅತೀ ಚೆಂದದವು, ಅವುಗಳಿಗೆ ಸುಂದರ ಬಾಲ್ಕನಿಗಳು, ಕಿಟಕಿಗಳು, ಅಲ್ಲಿಂದ ಇಣುಕುವ ಚೆಂದ ಚೆಂದದ ಮುಖಗಳು. ಊಟದ ಹಿತ್ತಾಳೆ ತಟ್ಟೆಗಳು, ಲೋಟಗಳು, ದಾದಾ ಬಾಬು, ಕಾಕಾ ಬಾಬು, ಕಾಕಿ ಮೊನಿ, ಶೋನ ಮುನಿ, ಪೊಧಿ(ಅತ್ತಿಗೆ) ಹೀಗೆ ಬಗೆ ಬಗೆ ಕಿವಿಗೆ ಹಿತವೆನಿಸುವ ಸಂಬೋಧನೆಗಳು. ಇಡೀ ಪರಿಸರ ಮನುಷ್ಯರ ಸಾದಾ ಸೀದಾ ಉಡುಗೆ ತೊಡುಗೆಯೊಂದಿಗೆ ಎಷ್ಟೊಂದು ಚೆನ್ನಾಗಿ ಹೊಂದುತ್ತಿತ್ತಲ್ಲ, ಆ ಕಾಲವೆಷ್ಟು ಚೆನ್ನವಿತ್ತು, ನಾನಿರಬಾರದಿತ್ತೇ ಆವಾಗ ಎಂದು ಖಂಡಿತಕ್ಕೂ ಅನಿಸುತ್ತದೆ . ಅನುರಾಗ್ ಬಸು ಎಪಿಕ್ ಚಾನೆಲ್ಲಿಗೋಸ್ಕರ ನಿರ್ದೇಶಿಸಿದ್ದ ‘ಸ್ಟೋರೀಸ್ ಒಫ್ ರವೀಂದ್ರ ನಾಥ್ ಟಾಗೋರ್” ನ ಪುಟ್ಟ ಪರಿಚಯವಿದು. ಟಾಗೋರರ ಕಥೆಗಳನ್ನ ಎಷ್ಟು ಬೇಕೋ ಅಷ್ಟೇ ನೀಟಾಗಿ ಕತ್ತರಿಸಿ ಇನ್ನಷ್ಟು ಚೆನ್ನಾಗಿ ಹೇಳಿದ್ದಾರೆ ಬಸು. ಟಾಗೋರರ ಕಥೆಗಳ ಬಗ್ಗೆ ಹೊಸತೇನೂ ಹೇಳುವಂತಿಲ್ಲ, ಅಷ್ಟು ಚೆಂದದ ಕಥೆಗಳನ್ನು ಅಷ್ಟೇ ಚೆನ್ನಾಗಿ ನಮ್ಮ ಕಣ್ಣಿಗೆ, ಮನಸ್ಸಿಗೆ ಕಟ್ಟಿಕೊಡುವಲ್ಲಿ ಬಸು ಗೆದ್ದಿದ್ದಾರೆ.   ಇಂಪಾದ ಸಂಗೀತ, ಉತ್ತಮ ಛಾಯಾಗ್ರಹಣ ಮನಸ್ಸಿಗೆ ಖುಷಿ ಕೊಡುತ್ತದೆ. ಇನ್ನು ಪಾತ್ರದಾರಿಗಳಂತೂ ಅದ್ಭುತವಾಗಿ ನಟಿಸಿದ್ದಾರೆ, ಕಾಬೂಲಿವಾಲಾದ ಮುದ್ದು ಮಿನಿ ಮನಸ್ಸಲ್ಲಿ ಮನೆ ಮಾಡಿಬಿಟ್ಟಳು. ಇನ್ನು ಬಹುತೇಕ ಎಪಿಸೋಡುಗಳಲ್ಲಿ  ಕಥೆಯ ಅಂತ್ಯದೊಡನೆ ಮುಂದಿನ ಕಥೆ ಶುರುವಾಗುತ್ತದೆ. ಈ ಪ್ರಯೋಗ ಖುಷಿ ಕೊಟ್ಟಿತು.

Walking with wolves

1 year ago,

ವಿಶ್ವವಾಣಿ ವಿರಾಮದಲ್ಲಿ ಪ್ರಕಟವಾದದ್ದು , thanks to Raghu Apara.
ಇದುವರೆಗೂ ತೋಳಗಳನ್ನ ಬೇಟೆಯಾಡಿಯೇ ಗೊತ್ತಿದ್ದ ಅಂಬರೀಷ ಇವತ್ತು ಒಂದು ವಾರದ ಹಿಂದೆಯಷ್ಟೇ ಸತ್ತ ಯುವ ತೋಳಗಳ ಎಲುಬುಗಳನ್ನು ಪರೀಕ್ಷಿಸುತ್ತಿದ್ದ ಗುಂಪಿನಿಂದ ಬೇರೆಯಾಗಿ ನಿಂತು ಯೋಚಿಸುತ್ತಿದ್ದಾನೆ. ಸುಮಾರು ಹದಿನೆಂಟು ತಿಂಗಳುಗಳಿಂದ ಹಿಂಬಾಲಿಸುತ್ತಿದ್ದ ಮರಿಗಳು ಇಂದು ಕೇವಲ ಎಲುಬುಗಳಾಗಿವೆ ಅನ್ನುವುದು ಅವನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಅವನ ಎದೆಯಾಳದಲ್ಲಿ ಏನು ನಡೆದಿರಬಹುದು? ಬಂಡೆಕಲ್ಲಿನ ರೂಪದಲ್ಲಿ ಕೂತ ದೇವರಿಗೆ ಕಾಯಿ ಒಡೆದು ನಮಸ್ಕರಿಸುತ್ತಾನೆ, ಯಾವುದೋ ದೇವಳದ ಕಲ್ಲಿನ ನಂದಿಯ ಕಾಲಿಗೆ ತಲೆಯಿಡುತ್ತಾನೆ. ಅವೆಲ್ಲವೂ ಮನದ ಕಲ್ಲನ್ನು ಕರಗಿಸುವ ಯತ್ನವೇ ಅಥವಾ ಪೂರ್ವ ಕರ್ಮಗಳಿಗೆ ಪ್ರಾಯಶ್ಚಿತವೇ?ತನಗೆ ತೊಂದರೆ ಬಂದೆಂತು ದ್ವೇಷ ಸಾಧಿಸುವ, ವಿನೋದಕ್ಕೆಂದು ಬೇಟೆಯಾಡುವ ಮನುಷ್ಯ ಜೀವಿಯ ಮನಕ್ಕೂ ಅಂಬರೀಷನ ಮನಕ್ಕೆ ಹೊಳೆದಿರಬಹುದಾದ ಭಾವ ತಟ್ಟಬಹುದೇ? ಈ ದೃಶ್ಯ ವನ್ಯಜೀವಿ ರಕ್ಷಣೆ ಹಾಗೂ ಉತ್ತಮ ಛಾಯಾಗ್ರಹಣಕ್ಕಾಗಿ ಪ್ರಶಸ್ತಿ ಪಡೆದಿರುವ  ಸಾಕ್ಷ್ಯ ಚಿತ್ರದ್ದು.
ಭಾರತ ದಕ್ಷಿಣ ಭಾಗಗಳಲ್ಲಿರುವ ತೋಳಗಳ ಮೇಲೆ ಸುಮಾರು ಮೂರು ವರ್ಷಗಳ ಕಾಲ ಕೃಪಾಕರ-ಸೇನಾನಿ ಜೋಡಿ ಮತ್ತು ಜೋಸೆಫ್ ರಾಜ ನಡೆಸಿರುವ ಸಂಶೋಧನೆಯ ಫಲವೇ 'ವಾಕಿಂಗ್ ವಿಥ್ ವೂಲ್ವ್ಸ್ ' ಸಾಕ್ಷ್ಯ ಚಿತ್ರ. ಕಾಲಗರ್ಭಕ್ಕೆ ಸೇರಿ ಹೋಗುತ್ತಿರುವ ಅಲೆಮಾರಿ ಕುರಿಗಾಹಿಗಳು ಹಾಗೂ ಮಡುಚು ಕಿವಿಯ ತೋಳರಾಯನ ಸಂಸಾರದ ಕಥೆಯನ್ನು ಕಲಾತ್ಮಕ ಹಾಗೂ ಕುತೂಹಲಕಾರಿಯಾಗಿ ಚಿತ್ರರೂಪಕ್ಕೆ ತಂದ ಹೆಗ್ಗಳಿಕೆ ಈ ತಂಡದ್ದು. ಕುರುಚಲು ಗಿಡಗಳ ಬಯಲಿನ  ನಡುವೆ ಮಣ್ಣಿನ ಮಧ್ಯದಿಂದ ಪ್ರತ್ಯಕ್ಷವಾಗುವ ಚಿತ್ರದ ಹೀರೊ ಮಡುಚು ಕಿವಿ ಹಾಗೂ ಅವನ ಮಕ್ಕಳ ಒಡನಾಟ, ಬೇಟೆಯ ವಿಧಾನಗಳು, ಅಸಾಧ್ಯ ಬುದ್ಧಿಶಕ್ತಿ ಅತೀ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಮಡಚು ಕಿವಿಯ ಮಗ ಮತ್ತು ಬೇಲಿಯೊಳಗೆ ಭದ್ರವಾಗಿರಿಸಿರುವ ಚಿಕ್ಕ ಮರಿಗಳು ಹಾಗೂ ಹುಷಾರಿಲ್ಲದ ಕುರಿಗಳ ಮುಖಾಮುಖಿಯಂತೂ ರೋಮಾಂಚನ ಹುಟ್ಟಿಸುತ್ತದೆ. ಅದನ್ನು ಅತ್ಯದ್ಭುತವಾಗಿ ತಂಡ ಚಿತ್ರೀಕರಿಸಿದೆ.
ಕುರಿಗಾಹಿಗಳ ತಂಡದ ಮುಖಂಡ ರಾಮಪ್ಪನ ತೋಳರಾಯನ ಬಗೆಗಿನ ಪ್ರೊಟೆಕ್ಟಿವ್ ನೆಸ್ ಹಿಂದಿರುವ ಒಂದು ಸುಂದರ (ಖಂಡಿತಾ ಮೂಢವಲ್ಲದ) ನಂಬಿಕೆ ಮನಸ್ಸು ತಟ್ಟುತ್ತದೆ. ಅದೇ ವೇಳೆ, ಮನುಷ್ಯರಿಟ್ಟ ವಿಷ ತಿಂದು ಸಾಯುವ ಮಡುಚು ಕಿವಿಯ ಯುವ ಮಕ್ಕಳ ಎಲುವುಗಳು ಕಣ್ಣಿಗೆ ಕಟ್ಟುತ್ತವೆ.

ಅದಾಗಲೇ ಕಾಡು ನಾಯಿಗಳ 'ದಿ ಪ್ಯಾಕ್' ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಪ್ರಸಿದ್ಧಿ ಪಡೆದ ವೈಟ್ಲಿ ಅವಾರ್ಡ್ ಪಡೆದ ಕೃಪಾಕರ-ಸೇನಾನಿ ಜೋಡಿಯ, ಸಹಬಾಳ್ವೆಯ ಬಗ್ಗೆ ಮಾತನಾಡುವ ೫೧ ನಿಮಿಷಗಳ ಈ ಚಿತ್ರ ಒಂದು ಸುಂದರ ಕಾವ್ಯ. ತಪ್ಪದೆ ನೋಡಿ.

Bheemannana maga

' ನಾನು ಭೀಮಸೇನರ ಮಗ' ಎಂದು ಹೇಳಿದಾಗಲೂ ಅಲ್ಲಿದ್ದವರೊಬ್ಬರು 'ಹೌದೇನು? ಹೆಂಗ ನಂಬೋಣು?' ಎಂದು ಕೇಳಿದರು. ನಾನು ನಿರ್ವಿಕಾರನಾಗಿ 'ಭಾರತದೊಳಗ ಅಪ್ಪನ ಸುಳ್ಳ ಹೆಸರ ಹೇಳೋ ಪದ್ಧತಿ ಇಲ್ಲ' ಎಂದು ಹೇಳಿದೆ. 
ಭೀಮಸೇನ ಜೋಶಿ ಹಾಗೂ ಅವರ ಮೊದಲನೇ ಪತ್ನಿ ಸುನಂದರವರ ಹಿರಿಯ ಪುತ್ರ ರಾಘವೇಂದ್ರರ ಆತ್ಮಕಥನದ ಸಾಲುಗಳಿವು. ಲೋಕ ವಿಖ್ಯಾತ ಗಾಯಕ ತಂದೆಯ ಕುರಿತು ತನ್ನ ನೆನಪುಗಳು, ಅವರೆಡೆಗಿನ ಅತೀವ ಪ್ರೀತಿ, ಸಿಗದೇ ಹೋದಾಗ ಒದ್ದಾಡಿದ ರೀತಿ, ಪಟ್ಟ ಅವಮಾನಗಳು ಮತ್ತು ಎಲ್ಲವನ್ನೂ ಎದುರಿಸಿ ಬೆಳೆದ ರೀತಿಯನ್ನು ರಾಘವೇಂದ್ರರರು ನಿರ್ವಿಕಾರವಾಗಿ ಹೇಳುತ್ತಾ ಹೋದಂತೆ ಮನಸ್ಸು ವ್ಯಥೆಯಿಂದ ತುಂಬಿ ಹೋಯಿತು. 
ಭೀಮಸೇನರು ಎರಡನೇ ಮದುವೆಯಾದ ಮೇಲೆ ಮೊದಲ ಪತ್ನಿ ಹಾಗೂ ಅವರ ಮಕ್ಕಳು ಪಟ್ಟ ಯಾತನೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ ಈ ಪುಸ್ತಕ. ತಂದೆಯದೇ ರೂಪ ಅಚ್ಚು ಒತ್ತಿದಂತಿದ್ದರೂ ಪದೇ ಪದೇ ತಾನು ಅದೇ ತಂದೆಯ ಮಗ ಎನ್ನುವುದನ್ನು ಜೀವನದುದ್ದಕ್ಕೂ ಸಾರಿ ಸಾರಿ ಹೇಳಬೇಕಾಗಿ ಬಂತು. ಎಲ್ಲವೂ ಸುರಳೀತವಾಗಿದ್ದಲ್ಲಿ ಅವರೂ ತನ್ನ ತಂದೆಯವರಂತೆ ಶ್ರೇಷ್ಠ ಗಾಯಕರಾಗುತ್ತಿದ್ದರೋ ಏನೋ. ಹಾಗಾಗಲಿಲ್ಲ. ದೇವರು ಕೊಟ್ಟ ಸಿರಿ ಕಂಠವಿದ್ದರೂ, ಪ್ರಪಂಚದ ಅತ್ಯುತ್ತಮ ಗಾಯಕ ತಂದೆಯಿದ್ದರೂ ಕೊನೆಯವರೆಗೂ ಅವರಿಂದ ಗಾಯನ ಕಲಿಯಲಾಗಲೇ ಇಲ್ಲ. ಹೆತ್ತ ತಂದೆಯಿಂದ ಸಿಗಬೇಕಾದ ವಿದ್ಯೆ, ಆಸರೆ, ರಕ್ಷಣೆ ಇವೆಲ್ಲವೂ ಬೇರೆಯವರ ಪಾಲಾಗಿ, ಎಂದೋ ಒಮ್ಮೊಮ್ಮೆ ಸಿಕ್ಕಾಗ ಅದಷ್ಟೇ ಅದೃಷ್ಟ ಎಂದು ಸ್ವೀಕರಿಸಿ ಕಹಿಯಿಲ್ಲದೆ ಅವರನ್ನು 'ಶಾಪಗ್ರಸ್ತ ಗಂಧರ್ವ' ಎಂದೇ ನಂಬಿ, ಅವರದೇ ರಾಗಗಳಲ್ಲಿ ಮುಳುಗಿ ಏಳುತ್ತಾ ಬದುಕ ಕಟ್ಟಿಕೊಂಡ ರಾಘವೇಂದ್ರರು ಭೀಮಸೇನರಷ್ಟೇ ಗೌರವ ಹುಟ್ಟಿಸುತ್ತಾರೆ. ತಂದೆಯ ಬಗೆಗಿನ ಅಸಾಧ್ಯ, ಅಪರಿಮಿತ, unconditional ಪ್ರೀತಿಯಿಂದ ಓದುಗರಿಗೆ ಹತ್ತಿರವೂ ಆಗುತ್ತಾರೆ. ಹಿರಿಯ ಮಗನಾಗಿ ಅತೀ ಚಿಕ್ಕ ವಯಸ್ಸಿನಲ್ಲೇ ತಾಯಿಯ ಕಷ್ಟ ಅರಿತು ಅದಕ್ಕಾಗಿ ಅವರು ಹಾಕುವ ಪ್ರಯತ್ನಗಳು ಹಾಗೂ ತಾಯಿಯ ಸಂಕಟವನ್ನು ಅವರು ಬಣ್ಣಿಸುವ ಪದಗಳು ಮೂಕರನ್ನಾಗಿಸುತ್ತವೆ. ಜಲಶೋಧನೆಯನ್ನು ಒಲಿಸಿಕೊಂಡ ರಾಘವೇಂದ್ರರು, ಆಳವಾದ ಬಾವಿಯ ತಳಕ್ಕಿಳಿದು ಸ್ವತಃ ಡ್ರಿಲ್ಲಿಂಗ್ ಮಾಡುತ್ತಾ, ಧೂಳನ್ನು ಮೆತ್ತಿಕೊಳ್ಳುತ್ತಾ ಕಂಪ್ರೆಸ್ಸರಿನ ಧ್ವನಿಯಲ್ಲಿ ಸ್ವರಗಳನ್ನು ಮಿಳಿತಗೊಳಿಸಿ ಭೀಮಣ್ಣರ ಹಾಡುಗಳನ್ನೇ ಹಾಡುತ್ತಾ ಬದುಕ ಸವೆಸುತ್ತಾರೆ. ಅವರೇ ಹೇಳುವಂತೆ ಭೀಮಣ್ಣರಿಂದಲೇ ನೋವಾದಾಗ ಅವರದೇ ರಾಗಗಳ ಮುಲಾಮು ಹಚ್ಚಿಕೊಳ್ಳುತ್ತಾರೆ. ಅವಮಾನ, ದುಃಖದಲ್ಲೇ ಬದುಕಿದ ರಾಘವೇಂದ್ರರು ನೆಮ್ಮದಿ ಹೊಂದುತ್ತಿದ್ದದ್ದು ತಂದೆಯ ಪ್ರೀತಿ ತುಂಬಿದ ಕಣ್ಣೋಟ ಹಾಗೂ ಅವರ ಕಾಲ ಸ್ಪರ್ಶದಿಂದ. ಕೃತಿಯುದ್ದಕ್ಕೂ ಪದೇ ಪದೇ ಅದರ ಪ್ರಸ್ತಾಪ ಬರುತ್ತದೆ. ತನ್ನ ತಂಗಿ, ತಮ್ಮಂದಿರ, ತಾಯಿಯ ಅಸಹಾಯಕತೆ ನೋಡುತ್ತಲೇ ಅದರ ಬಗ್ಗೆ ಹೇಳುತ್ತಲೇ ಅದಕ್ಕೆ ಕಾರಣರಾದವರ ಮೇಲೆ ಯಾವುದೇ ಕೆಟ್ಟ ಪದಗಳನ್ನು ಬಳಸದೆ 'ಅವರು' ಎಂದಷ್ಟೇ ಸಂಬೋಧಿಸುತ್ತಾರೆ. ಸಾಮಾಜಿಕ, ಆರ್ಥಿಕ ಭದ್ರತೆಯಿಲ್ಲದೆ ಅವಮಾನಗಳನ್ನಷ್ಟೇ ಉಂಡ ಓರ್ವ ವ್ಯಕ್ತಿ ಅಷ್ಟು ಉತ್ತಮವಾಗಿ ಬೆಳೆಯಬಲ್ಲನೆಂದರೆ, ಉಳಿಯಬಲ್ಲನೆಂದರೆ ಅದೊಂದು ಸಾಧನೆಯೇ. 
ತಂದೆಯ ಬಾಲ್ಯದ ತುಣುಕುಗಳು, ಸಂಗೀತವನ್ನು ಅವರು ಹಠ ಕಟ್ಟಿ ಕಲಿತ ಪರಿ, ಸಂಸಾರದೊಂದಿಗೆ ಕಳೆದ ದಿನಗಳ, ಅವರ ಅವಲಕ್ಕಿ ಪ್ರೀತಿ, ಕಾರಿನ ವೇಗದ ಹುಚ್ಚು, ಕಬ್ಬಿಣದ ಸೌಟಿನ ಒಗ್ಗರಣೆ ಪ್ರೀತಿ, ಆರೋಗ್ಯದ ಬಗ್ಗೆ ಅವರಿಗಿದ್ದ ಕಾಳಜಿ, ಅಸಾಧ್ಯ ಜ್ಞಾನ ಇವೆಲ್ಲವನ್ನೂ ಹೇಳುತ್ತಾ ಭೀಮಸೇನರ ವ್ಯಕ್ತಿತ್ವದ ಮಜಲುಗಳನ್ನು ಪರಿಚಯಿಸುತ್ತಾರೆ. ಅವರ ನಿರ್ಧಾರದಿಂದ ಆದ ಘಟನೆಗಳು ಹಾಗೂ ಸಂಭಂದಪಟ್ಟ ಎಲ್ಲರೂ ಆಯುಷ್ಯವಿಡೀ ಒದ್ದಾಡಿದ ರೀತಿಗೆ ಅವರು ಒಳಗೊಳಗೇ ಪರಿತಪಿಸಿದ್ದನ್ನೂ ರಾಘವೇಂದ್ರರು ಗುರುತಿಸುತ್ತಾರೆ. 
"ಇವರೆಲ್ಲಾ ನನ್ನ ಒಂದು ಸಾಕಿದ ಕರಡಿ ಮಾಡಿ ಇಟ್ಟಾರ. ಕೂಡು ಅಂದಕೂಡ್ಲೆ ಮೋಟಾರ್ ಸೈಕಲ್ ಮೇಲೆ (ಅಂದ್ರ ಸ್ಟೇಜ್ ಮ್ಯಾಲೆ) ಕೂಡಬೇಕು ಮತ್ತು ಸುತ್ತು ಹಾಕಬೇಕು (ಅಂದ್ರ ಹಾಡಬೇಕು) "
"ನಾ ಹಾಡಿ ಮನೆಗೆ ರೊಕ್ಕ ತರಲಿಲ್ಲ ಅಂದ್ರ ನನ್ನ ( ಮನೆಯ ನಾಯಿ) ಅದರ ಜಾಗಕ್ಕ ಕಟ್ಟತಾರ"
ಇವು ಭಾರತ ರತ್ನ ಭೀಮಸೇನ ಜೋಶಿಯವರ ಮಾತುಗಳೆಂದರೆ ನಂಬಲಾದೀತೇ? ಭೀಮಣ್ಣನ ಕೊನೆಯ ದಿನಗಳ ನೋವು ಓದುಗನನ್ನು ಅತೀ ಸಂಕಟಗೊಳಿಸುತ್ತದೆ. ಭಾರತರತ್ನ ಪ್ರಶಸ್ತಿಯ ಪ್ರಧಾನದ ವಿವರಗಳಂತೂ ಯಾರಿಗೂ ದುಃಖ ತರಿಸೀತು. ಹರಕು ಜಮಖಾನದ ಮೇಲೆ ಮಲಗಿದ ಭೀಮಸೇನರ ಪಾರ್ಥಿವ ಶರೀರ, ಚಪ್ಪಲು ಕಾಲುಗಳಿಂದ ಸುತ್ತ ಓಡಾಡುತ್ತಿದ್ದ ಜನ....ಛೆ! ಆ ಗಾನ ಗಂಧರ್ವನಿಗೂ ಇಂತಹ ಯಾತನೆಗಳು ಬೇಕಿದ್ದವೇ? ಗೊತ್ತಿಲ್ಲ...
ಈ ಪುಸ್ತಕ ಓದುತ್ತಾ ನನಗೆ ಭೀಮಸೇನರ ಬಗ್ಗೆ, ಅವರ ನಿರ್ಧಾರಗಳ ಬಗ್ಗೆ ಸಾವಿರಾರು ಪ್ರಶ್ನೆಗಳು ಹುಟ್ಟಿದವೇ ಹೊರತು ಕೋಪ ಬರಲಿಲ್ಲ. ರಾಘವೇಂದ್ರರು ತನ್ನ ಸಾಧನೆಗಳು, ಪತ್ನಿ, ಮಕ್ಕಳು, ತಾಯಿ ಎಲ್ಲರ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಾರೆ. ಈ ತಂದೆ - ಮಗನ ಜುಗಲಬಂದಿಯಲ್ಲಿ ನಿಮಗ್ಯಾರು ಆಪ್ತರಾಗುತ್ತಾರೆ ಹೇಳುವುದು ಕಷ್ಟ.... ಬದುಕನ್ನು, ಮನುಷ್ಯರನ್ನು ಇನ್ನಷ್ಟು ಸರಳವಾಗಿ ನೋಡಲು, ರಾಗ ದ್ವೇಷಗಳಿಗೆ ಒಳಗಾಗದೆ ಇರಲು ಸಹಾಯ ಮಾಡಿತು ಈ ಕೃತಿ. ತಂದೆ ಮಗನ ವಾತ್ಸಲ್ಯವನ್ನು ಇದಕ್ಕಿಂತ ಚೆನ್ನಾಗಿ ವಿವರಿಸಿದ ಬೇರೆ ಪುಸ್ತಕ ನೆನಪಿಲ್ಲ ನನಗೆ

Putta

ಹೀಗೆಲ್ಲ ಮಾಡೋ ಪುಟ್ಟ ಇವಾಗ ಪ್ರತೀ ಸಲ ಧೋನಿಯನ್ನು  ನೋಡಿ, ಯಾಕೆ ರಿಟೈರ್ ಆದ ಅಂತ ಅಳುತ್ತಾನೆ.

1. ಡೋರೆಮಾನ್ ಎಂಬ ರೋಬೊ ಬೆಕ್ಕಣ್ಣ ಮತ್ತು ಉಡಾಳ ಹುಡುಗ ನೊಬಿಟಾನ ದೊಡ್ಡ ಅಭಿಮಾನಿ ನನ್ನ ಪುಟ್ಟ. ಸುಮಾರು ೯ ವರ್ಷದಿಂದ ಡೋರೆಮಾನ್ ಪುಟ್ಟನ ಜೀವನದ ಭಾಗವಾಗಿದ್ದಾನೆ. ಒಂದು ದಿನ ಎಪಿಸೋಡ್ ನೋಡುತ್ತಾ ಕೂತಿದ್ದವನು ಅಳಲಾರಂಭಿಸಿದ. ಎಷ್ಟು ಸಮಾಧಾನ ಮಾಡಿದರೂ ಅಳು ನಿಲ್ಲುತ್ತಲೇ ಇಲ್ಲ, ಸುಮಾರು ಅರ್ಧ ಮುಕ್ಕಾಲು ಗಂಟೆ ಅತ್ತ ಮೇಲೆ ಅವನು ಹೇಳಿದ್ದಿಷ್ಟು. "ನೊಬಿಟಾ ದೊಡ್ಡವನಾಗಿದ್ದಾನೆ, ಅವನಿಗೊಬ್ಬ ಮಗನೂ ಇದ್ದಾನೆ, ಆದರೆ ಡೋರೆಮಾನ್ ಮಾತ್ರ ಹಾಗೆ ಇದ್ದಾನೆ, ಅವನು ರೋಬೊ ಅಲ್ವ? ನೊಬಿಟಾ ಕೆಲಸ ಮುಗಿಸಿ ಬಂದಿದ್ದಾನೆ, ರಾತ್ರಿಯಾಗಿದೆ. ಡೋರೆಮಾನ್ ಅವನನ್ನು ಕೇಳುತ್ತಾನೆ. ನೊಬಿಟಾ, ಹೋಂ ವರ್ಕ್ ಮುಗಿಸಿದ್ಯಾ? " ಅಂತ. ಅದು ಹೇಳುತ್ತಾ ಮತ್ತಿಷ್ಟು ಅತ್ತ. ಅದಕ್ಕೆ ನೀನ್ಯಾಕೆ ಅಳಬೇಕು ಅಂದೆ. "ನಿಂಗೇನೂ ಅನಿಸಲ್ವಾ, ನಿಂಗರ್ಥ ಆಗಲ್ಲ, ಹೋಗು" ಎಂದು ಸಿಟ್ಟಲ್ಲಿ ಕಿರುಚಿದ. ಆಮೇಲೆ ನಂಗರ್ಥ ಆಯ್ತು ಪುಟ್ಟ ನಿನ್ನ ಫೀಲಿಂಗ್ಸ್, ಡೋರೆಮಾನ್ ಪಾಪ, ಅವನೆಷ್ಟು ಇನ್ನೋಸೆಂಟ್ ಅಂದಾದ ಮೇಲೆ ಮಾತಾಡಿದ್ದು.

2. ಪೋಕೆಮೊನ್ ಪುಟ್ಟನ ಇಷ್ಟದ ಇನ್ನೊಂದು ಕಾರ್ಟೂನು. ಅದ್ರಲ್ಲಿ ಪಿಕಾಚು ಅಂತ ಮುದ್ದು ಮುದ್ದಾಗಿರುವ ಅದೆಂತದೋ ಜೀವಿಯಿದೆ. ಒಬ್ಬ ಹುಡುಗನೊಟ್ಟಿಗೆ ಇರುವ ಅದನ್ನು ದೂರದ ಕಾಡಿಗೆ ತೆಗೆದುಕೊಂಡು ಹೋಗಿ ಅದರ ಹಾಗೆಯೇ ಇರುವ ಪಿಕಾಚುಗಳೊಂದಿಗೆ ಬಿಡುವ ಎಪಿಸೋಡಿಗೂ ಒಂದು ರಾಶಿ ಅತ್ತ. ನಾನು ಕೇಳಿದಾಗ ಮತ್ತದೇ ಡೈಲಾಗ್" ಹೋಗಮ್ಮ , ನಿಂಗೆ ಅರ್ಥ ಆಗಲ್ಲ".

3. ಹೊಪ್ಪ ಝುನ್ಯ ಝುನ್ಯ ಅಂತ ಈ ಪುಟಾಣಿ ಪಿಗ್ಗಣ್ಣ (https://youtu.be/j5yKCUToLSw) ಕುಕಿಗೆ ಆಸೆ ಮಾಡಿ ಕುಣಿದು ಕುಪ್ಪಳಿಸಿ ಒದ್ದಾಡೋದನ್ನು ನೋಡಿ ನಕ್ಕರೂ, ಕೊನೆಗೆ ಅವನ ಕೈಗೆ ಕುಕಿ ಸಿಕ್ಕರೂ ತಿನ್ನಲಾಗದ ಹಾಗೆ ಅವನ ಮುಖಕ್ಕೆ ಗಾಜಿನ ಜಾಡಿ ಬಿದ್ದಾಗ ಅಯ್ಯೋ ಪಾಪ ಎಂದೆ. "ಅಮ್ಮ, ನಿಂಗೆ ಬೇಜಾರಾಯ್ತಾ?, ಬೇಜಾರು ಮಾಡ್ಕೋಬೇಡಮ್ಮ ಅದು ಅನಿಮೇಷನ್ " ಅಂದ ನನ್ನ ಪುಟ್ಟ!

ಮೈಸೂರು ಜೂ ಬಗ್ಗೆ ಹೀಗೊಂದು ಚೆಂದದ ಡಾಕ್ಯುಮೆಂಟರಿ.

 ಇಲ್ಲಿ ನೀವು ಹ್ಯಾಂಡ್ಸಮ್ ಪೃಥ್ವಿ ಅವರಮ್ಮ ಮಾನ್ಯ, ಮ್ಯೂಸಿಷಿಯನ್ ಥರ ಕೈ ತಿರುಗಿಸೋ ಮೇಸನ್, ಗಳಿಗೆಗೊಮ್ಮೆ ಹುಲ್ಲಿನ ಹ್ಯಾಟ್ ತಲೆಗಿಟ್ಟು ಮತ್ತೆ ಬೀಳಿಸಿ ಮತ್ತೊಂದು ಹೊಸ ಹ್ಯಾಟ್ ಮಾಡಿಕೊಳ್ಳೋ ಅಭಿ, ಸುಮ್ಮನೆ ಬೋರ್ ಆದಾಗ ಜಗಳವಾಡೋ ಗಣೇಶ್ ಹಾಗೂ ದುರ್ಗಿ, ಸ್ನಾನ ಚೆನ್ನಾಗಿ ಮಾಡಿಸು ಅಂತ ಡಿಮ್ಯಾಂಡ್ ಮಾಡೋ ವಿರಾಟ್, ಹಲ್ಲುಜ್ಜಿಸಿಕೊಂಡು ಸರಿಯಾಗಿ ಬಾಯಿ ಕ್ಲೀನ್ ಮಾಡಿಸಿಕೊಳ್ಳುವ ಕೃಷ್ಣ,  ತನ್ನ ಊಟ ಮುಗಿಸಿ ಬೇರೆಯವರ ಲಂಚ್ ಬಾಕ್ಸಿಗೆ ದಾಳಿಯಿಡುವ ಚಾಮುಂಡಿ, ಬೆನ್ನು ತುರಿಸಿಕೊಳ್ಳಲು ಟೊಂಗೆಯನ್ನೇ ಸ್ಕ್ರಬ್ ಮಾಡಿಕೊಳ್ಳುವ ಜಾಣ ಆನೆ  ಎಲ್ಲರನ್ನೂ ನೋಡಬಹುದು. ಇವರೆಲ್ಲರ ಊಟದಲ್ಲಿ ಪಾಲು ಕೇಳಲು ಬರುವ ಅತಿಥಿಗಳನ್ನೂ ನೋಡಬಹುದು. 😊
ಇವಿಷ್ಟೂ ಅಲ್ಲದೆ ಅಷ್ಟು ಪ್ರಾಣಿಗಳ ಊಟ, ಉಪಚಾರ, ಆರೈಕೆ ಎಲ್ಲವನ್ನೂ ಸಂಕ್ಷಿಪ್ತವಾಗಿ ಆದರೆ ಸಮರ್ಥವಾಗಿ ಈ ವಿಡಿಯೋ ದಾಖಲಿಸಿದೆ. ಚೆಂದದ ನಿರೂಪಣೆ, ಸಂಗೀತ ಹಾಗೂ ಒಳ್ಳೆ ಕ್ವಾಲಿಟಿ ಇರುವ ಡಾಕ್ಯುಮೆಂಟರಿ.  ಮಕ್ಕಳು ಇದನ್ನು ಖಂಡಿತಕ್ಕೂ ಇಷ್ಟಪಡುತ್ತಾರೆ.

https://youtu.be/MuB7HHeuNbc

102 notout

೧೦೨ ನಾಟ್ ಔಟ್

ವೃದ್ಧ ಮನಸುಳ್ಳ ತರುಣರು ನೋಡಲೇಬೇಕಾದ ಚಿತ್ರವಿದು.
ನೂರಾಎರಡು ವರ್ಷದ ತರುಣ ಹಾಗೂ ಎಪ್ಪತ್ತೈದು ವರ್ಷದ ಅಜ್ಜ ಮಗ, ಇಬ್ಬರ ನಡುವಿನ ಜಟಾಪಟಿ ಈ ಚಿತ್ರದ ತಿರುಳು. ಯಾವಾಗಲೂ ಸಪ್ಪೆ ಮುಖ ಹಾಕಿ ಕೂರುವ, ಅವಶ್ಯಕತೆಯಿಲ್ಲದಿದ್ದರೂ ದಿನವೂ ವೈದ್ಯರನ್ನು  ಭೇಟಿಯಾಗುವ ಸಿಡುಕ ಮಗನಾಗಿ ರಿಷಿ ಕಪೂರ್ ಹಾಗೂ ಕಿಡಿಗೇಡಿ, ಚಿರ ಬಾಲಕನಾಗಿ ಅಮಿತಾಭ್ ಅದ್ಭುತವಾಗಿ ನಟಿಸಿದ್ದಾರೆ. ಬಗೆ ಬಗೆ ಸ್ಟೈಲಿಶ್ ಉಡುಪು, ತಕ್ಕಂತೆ ಕೇಶ ಶೈಲಿ, ಟೊಪ್ಪಿ, ಕೋಟು ಎಂದೆಲ್ಲ ಅಮಿತಾಭ್ ಮಿಂಚಿದರೆ, ಸಾದಾ ಬಟ್ಟೆಗಳಲ್ಲಿ ಡುಮ್ಮ ಹೊಟ್ಟೆಯ ರಿಷಿ ಕಾಣಿಸಿಕೊಳ್ಳುತ್ತಾರೆ. ಈ ಘಟಾನುಘಟಿಗಳ ಮಧ್ಯೆ ಮೂರನೇ ಪಾತ್ರವಾಗಿರುವ ಬೆರಗು ಕಣ್ಣಿನ, ಸಾದಾ ಸೀದಾ ಹುಡುಗ ಧೀರು (ಜಿಮೀತ್) ಕೂಡ ಇಷ್ಟವಾಗುತ್ತಾನೆ.
ಚಿತ್ರದ ಕಥೆ, ಜಾರುತ್ತಿರುವ ವಯಸ್ಸು ಅದರೊಂದಿಗೆ ಬದುಕುವ ರೀತಿ, ಮುರಿದೇ ಹೋದರೂ ಇದೆಯೆಂದು ಭ್ರಮೆ ಹುಟ್ಟಿಸುವ ಸಂಬಂಧಗಳ ಬಗ್ಗೆ  ಸ್ಪಷ್ಟವಾಗಿ ಮಾತನಾಡುತ್ತಾ ‘ಲೆಟ್ ಗೋ’ ಅನ್ನು ಹೇಳಿಕೊಡುತ್ತದೆ.
ಸಾವಿನ ಸೀನ್ ನೇರ ಇಲ್ಲದೆ ಹೋದರೂ ತನ್ನ ಭಾರ ಸ್ವರದಲ್ಲಿ, ಹತಾಶೆಯ ಮುಖಭಾವದಲ್ಲಿ ಅಮಿತಾಭ್ ಅದರ ನೆನಪನ್ನು  ಬಿಚ್ಚಿಡುವ ಭಾಗವಂತೂ ಅತ್ಯದ್ಭುತ. ವಿಷಾದ ರಸವನ್ನು ಮನದಲ್ಲಿ ಕಡೆದು ತೆಗೆಯುತ್ತದೆ ಆ ಸಂಭಾಷಣೆ. ಇಡೀ ಚಿತ್ರದಲ್ಲಿ ತುಂಬಿ ತುಳುಕುವ ಹಾಸ್ಯ ಈ ಭಾಗದಲ್ಲಿ ಮುಖ ಮುಚ್ಚಿ ಬಿಕ್ಕಳಿಸಿ ಅತ್ತುಬಿಡುತ್ತದೆ.
ಚಿತ್ರ ಶುರುವಾಗಿ ಮುಗಿದದ್ದೂ ಗೊತ್ತೇ ಆಗುವುದಿಲ್ಲ. ನಂಗಿಷ್ಟ ಇಲ್ಲ ದೊಡ್ಡವರ ಸಿನೆಮಾ ನೋಡೋದು ಎಂದು ದಪ್ಪ ಮುಖ ಹೊತ್ತು ಬಂದ ಹನ್ನೊಂದು ವರ್ಷದ ಪುಟ್ಟ ಕಿಟಿಕಿಟಿ ನಗುತ್ತಲೇ, ತುಂಬಾ ಖುಷಿಯಿಂದ ನೋಡಿದ.

Laura

ಚುಕ್ಕುಬುಕ್ಕುವಿಗಾಗಿ 4 ವರ್ಷದ ಹಿಂದೆ ಬರೆದಿದ್ದು.

ನನ್ನ ಲಾರಾ

ಲಾರಾ ನನ್ನ ಜೀವನಕ್ಕೆ ಬಂದು ಎಷ್ಟು ವರ್ಷಗಳಾದವೋ ನೆನಪಿಲ್ಲ. ನನ್ನ ಜೀವನದ ಭಾಗ ಅವಳು. ಮೊದಲು ನನಗೆ ಆ ಪುಸ್ತಕ ಸರಣಿಯ ಕೆಲವು ಭಾಗಗಳು ಮಾತ್ರ ದೊರಕಿದ್ದವು. ಅನಂತರ, ಮುದ್ರಣವಾಗಿರದ ಪುಸ್ತಕಗಳಿಗೆ ಅಲೆಯದ ಜಾಗವಿಲ್ಲ. ಯಾರ್ಯಾರ ಕಾಲು ಹಿಡಿದೆನೋ ನನಗೇ ತಿಳಿಯದು! ಉಡುಪಿಯಿಂದ ಮಂಗಳೂರು, ಮೂಡಿಗೆರೆ, ಮೈಸೂರು, ಬೀದರ್, ಬೆಂಗಳೂರು ಎಲ್ಲಾ ಜಾಲಾಡಿ ಮುಗಿಸಿದರೂ ಪುಸ್ತಕವೆಲ್ಲೂ ಸಿಗಲೇ ಇಲ್ಲ. ತುಂಬಾ ವರ್ಷಗಳು ಹುಡುಕಾಡಿದೆ ಲಾರಾಳಿಗಾಗಿ, ನೆನೆದಾಗೆಲ್ಲಾ ಬೇಸರವೆನಿಸುತ್ತಿತ್ತು. ನಾಲ್ಕು ವರ್ಷದ ಹಿಂದೆ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿಯವರು ಕೇವಲ ಮುಖಪರಿಚಯ ಮತ್ತು ಅವಾಗಲೇ ನೂರು ಸಲ ಪೀಡಿಸಿ ಪೀಡಿಸಿ ಇಟ್ಟಿದ್ದರಿಂದ ಅವರ ಬಳಿ ಹಳೇ ಕಾಪಿಗಳು ಇವೆ ಅಂದರು. ಅವರ ದಯೆಯಿಂದ ಅದನ್ನು ಜೆರಾಕ್ಸ್ ಮಾಡಿಸಿ (ಅವರು ನನಗೆ ಜೆರಾಕ್ಸ್ ಮಾಡಲು ಕೊಟ್ಟದ್ದೇ ನನ್ನ ಸಂತೋಷಕ್ಕೆ ಮಿತಿಯಲ್ಲದಂತಾಗಿತ್ತು, ನಾನ್ಯಾವತ್ತೂ ಋಣಿ ಅವರಿಗೆ) ಎಲ್ಲಾ ಪುಸ್ತಕಗಳನ್ನು ಒಟ್ಟಿಗೇ ಅಪ್ಪಿಕೊಂಡಾಗ ಆದ ಖುಷಿ ಹೇಳಲು ನನ್ನಲ್ಲಿ ಪದಗಳಿಲ್ಲ. ಅವನ್ನು ಓದಿ ಮುಗಿಸುವವರೆಗೆ ಮಾತು-ಕಥೆ ಎಲ್ಲಾ ಮರೆಯುತ್ತಿದ್ದೆ. ಇಂದಿಗೂ, ಲಾರಾ ಪುಸ್ತಕಗಳು ನನಗೆ ಚಟವಿದ್ದಂತೆ, ೨-೩ತಿಂಗಳಿಗೊಮ್ಮೆ ಓದದಿದ್ದರೆ ಏನೋ ಕಳಕೊಂಡ ಭಾವನೆ. ಸ್ವಭಾವತಃ ಪುಸ್ತಕ ಪ್ರ‍ೇಮಿಯಾದ ನನಗೆ ಈ ಪುಸ್ತಕಗಳು, ಅತೀ ಅಪರೂಪದ ಮಿಠಾಯಿಯೊಂದನ್ನು ಮುಚ್ಚಿಟ್ಟು ಪದೇ ಪದೇ ಕದ್ದು ಸವಿದ ಭಾವ. ಅಷ್ಟು ರುಚಿಯಾದ ಪುಸ್ತಕಗಳಿವು.

ಲಾರಾ ಕೊಡುವ ಜೀವನಾನುಭವ ತೀರಾ ದೊಡ್ಡದು, ಅವಳ ಬದುಕು, ಹೋರಾಟ, ಗಟ್ಟಿಗತನ ಎಂದೂ ಆದರ್ಶಪ್ರಾಯವೇ. ಅವಳ ಜೀವನ ಪಯಣ, ಆಗಿನ ಕಾಲದ ಜೀವನ ಶೈಲಿ, ಗೌರವಯುತ ನಡವಳಿಕೆ, ಮಕ್ಕಳಿಗೆ ಕಲಿಸುವ ಬಗೆ, ಮಕ್ಕಳು ಕಲಿಯುವ ಬಗೆ ಎಲ್ಲವನ್ನೂ ಒಂದೇ ಸಲಕ್ಕೆ ಹೇಳುವ ರೀತಿ ತೀರಾ ಆಪ್ತವೆನಿಸುತ್ತದೆ. ಓರ್ವ ತಾಯಿ ಅಥವಾ ತಂದೆಯ ಸ್ಥಾನದಲ್ಲಿ ನಿಂತು ನೋಡಿದಾಗ ಮಕ್ಕಳಿಗೆ ಒಳ್ಳೆಯ ವಿಚಾರ, ಶಿಸ್ತು, ಜೀವನ ಸಹಿಷ್ಣುತೆಯನ್ನು ಹೇಳುವ ಬಗೆಯನ್ನು ಅರ್ಥ ಮಾಡಿಕೊಡಿಸುವ ಈ ಕೃತಿ, ಮಕ್ಕಳ ಸ್ಥಾನದಲ್ಲಿ ನಿಂತು ನೋಡಿದಾಗ ಅವರ ಭಾವನೆಗಳು, ಅವರಿಗೆ ಹಿರಿಯರ ಭಾವಗಳು ಅರ್ಥವಾಗುವ ಪರಿಯನ್ನು ಎಳೆ ಎಳೆಯಾಗಿ, ಮೃದುವಾಗಿ ಬಿಡಿಸಿಕೊಡುತ್ತದೆ.  ಬಹುಶಃ ಅವಳು ಪಟ್ಟ ಪ್ರತಿಯೊಂದು ನೋವು-ನಲಿವುಗಳು ಎಂದಿಗೂ ಪ್ರಸ್ತುತವೆನಿಸುವ ಜೀವನ ಪಾಠಗಳು. ನೋವನ್ನು ವೈಭವೀಕರಿಸದೇ ನಲಿವನ್ನು ಎತ್ತಿ ಹಿಡಿಯುವ ಅವಳ ಬರಹ ಅನನ್ಯ. ಎಲ್ಲೂ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಭಾಗಗಳು ಅವಳೊಂದಿಗೆ ನಮ್ಮನ್ನೂ ದೊಡ್ಡ ಪ್ರಯರಿಯಲ್ಲಿ, ಸಿಲ್ವರ್ ಲೇಕ್ ದಡದಲ್ಲಿ, ವಿಸ್ಕಾನ್ಸ್ ಸನ್ನಿನಲ್ಲಿ, ದಟ್ಟ ಕಾಡುಗಳಲ್ಲಿ, ಪ್ಲಮ್ ನದಿ ತೀರದಲ್ಲಿ, ದೊಡ್ಡ ತೋಳಗಳೊಂದಿಗೆ, ಮಂಜಿನ ವಾತಾವರಣದಲ್ಲಿ ನಡೆದಾಡಿಸುತ್ತವೆ. ಹೆಜ್ಜೆ ಹೆಜ್ಜೆಗೂ ಅವಳ ಸಂತಸ, ದುಗುಡ, ಬಿದ್ದಲ್ಲೇ ಮತ್ತೆದ್ದು ನಡೆಯುವ ಛಲವನ್ನು ನಮ್ಮೊಳಗೇ ಪಡಿ ಮೂಡಿಸುತ್ತದೆ.

ಬೇರೆ ದೇಶದ ಕಥೆಯಾದರೂ ನಮ್ಮ ನೆಲದ ಛಾಯೆ ಈ ಕತೆಗಳಲ್ಲಿ ಸುಳಿದಾಡುತ್ತಿರುತ್ತದೆ. ದನ-ಕರು ಸಾಕುವುದು, ಕಸೂತಿ-ಹೆಣಿಗೆ, ಬೆಣ್ಣೆ-ಮಜ್ಜಿಗೆ, ಕುಂಬಳಕಾಯಿಯ ಖಾದ್ಯಗಳು, ಚೀಸ್ ಮಾಡುವ ರೀತಿ, ಹಳೇ ಉಡುಪುಗಳಿಂದ ತಯಾರಿಸಿದ ಕರ್ಟನ್ ಗಳೂ, ಟೇಬಲ್ ಕ್ಲಾತ್ ಗಳೂ, ಲೇಸ್ ಗಳೂ, ಹೊರ ಜಗತ್ತಿಗೆ ಬರುವ ಮೊದಲು ಮನೆಯಿಂದ ಹೊರಡುವ ರೀತಿ, ಮನೆಯ ಹೊರಗಿನವರೊಂದಿಗೆ ನಡೆದುಕೊಳ್ಳಬೇಕಾದ ರೀತಿ-ನೀತಿಗಳು, ಊಟ-ತಿಂಡಿ, ಅದಕ್ಕೆ ಕೊಡಬೇಕಾದ ಗೌರವ, ಶಿಕ್ಷಣದ ಅಗತ್ಯತೆ ಮತ್ತು ಅದಕ್ಕೆ ಕೊಡುವ ಪ್ರಾಧಾನ್ಯತೆ ಹೀಗೆ ಎಲ್ಲವೂ, ಎಲ್ಲವೂ ನಮ್ಮದೇ ನೆಲದ ಕಥೆ ಅನಿಸಿಬಿಡುತ್ತದೆ.

ಅತೀ ಭೀಕರ ಚಳಿಗಾಲದ ಸುಳಿಯಲ್ಲಿ ಅವಳ ಕುಟುಂಬ ಸಿಕ್ಕಿಬಿದ್ದಾಗ ಪಡುವ ಕಷ್ಟಗಳು, ಹಕ್ಕಿಗಳ ಧಾಳಿ, ಬೆಳೆ ನಾಶವಾದಾಗ ಅವರು ಒದ್ದಾಡುವ ರೀತಿ ಇವೆಲ್ಲಾ ನಿಮ್ಮಲ್ಲಿ ಅನುಕಂಪ ಹುಟ್ಟಿಸುವುದಿಲ್ಲ, ಬದಲಿಗೆ ಅವರು ಜೀವನ ಎದುರಿಸುವ ರೀತಿಗೆ ಸಲಾಮ್ ಹೊಡೆಯುವಂತೆ ಮಾಡುತ್ತದೆ. ಪದೇ ಪದೇ ಅಂಕಲ್ ಸ್ಯಾಮ್(ಸರಕಾರ) ನ ಪಣ ತೀರಿಸಲು ಹೋರಾಡುವ ಪಾ ಮತ್ತು ಲಾರಾಳ ಪತಿ ಅಲ್ಮಾಂಜೋ ವೈಲ್ಡರ್, ಪತಿಗೆ ಸಹಕಾರ ನೀಡುವ ಮಾ ಮತ್ತು ಲಾರಾ ಅಷ್ಟೇ ಅಲ್ಲ, ತಂದೆ-ತಾಯಿಗೆ ಮನೆ ನಡೆಸಲು ಸಹಾಯಕಳಾಗಿ ನಿಲ್ಲುವ ಲಾರಾ ಭಾರತದ ಯಾವುದೇ ಸಂಸಾರದ ಬಿಂದುಗಳು ಅನಿಸುವುದರಲ್ಲಿ ಒಂದಿನಿತೂ ಅಚ್ಚರಿಯಿಲ್ಲ. ತಗಡಿನ ಲೋಟ, ಕಲ್ಕಂಡು ಮಿಠಾಯಿಗಳಿಂದ ಕ್ರಿಸ್ ಮಸ್ ಆಚರಿಸುವ ಬಗೆ, ವಾರದ ದಿನಗಳಲ್ಲಿ ಕೆಲಸದ ಹಂಚಿಕೆ, ಲಾರಾಳ ಚಾರ್ಲಟ್ - ಅದನ್ನು ಕಳೆದು ಮತ್ತೆ ಪಡೆದದ್ದು, ಜಾಕ್ ಮತ್ತು ಲಾರಾಳ ಬಂಧ, ಮೊದಲ ರೈಲಿನ ಪಯಣವನ್ನು ಮಿಠಾಯಿಯಿಂದ ಆಚರಿಸಿದ ರೀತಿ, ಮೇರಿಗೆ ಲಾರಾ ಬೆಳಕಾಗುವ ಪರಿ, ಓಹ್! ಒಂದೇ ಎರಡೇ ಯಾವುದನ್ನು ಯೋಚಿಸಿದರೂ  ನಿಜಕ್ಕೂ ವಿಭಿನ್ನ ರೀತಿಯ ಖುಷಿ, ಸ್ಪಂದನೆ, ಭಾವಗಳನ್ನು ಕೊಡುವ ಬರಹಗಳಿವು.

ಲಾರಾ-ಮೇರಿಯಂತೆ ಹುಲ್ಲುಗಾವಲಿನಲ್ಲಿ ಬಿದ್ದು ಹೊರಳಾಡಬೇಕೆನಿಸುವ, ನದೀ ತೀರದಲ್ಲಿ ಪ್ಲಮ್ ಆರಿಸುವ, ಏಡಿಯೊಡನೆ ಆಟವಾಡುವ, ನದಿಯಲ್ಲಿ ಮೀನು ಹಿಡಿಯುವ, ಅಲ್ಮಾಂಜೋವಂತೆ ಬೇಸಿಗೆಯಲ್ಲಿ ಐಸ್ಕ್ರೀಮ್ ಮಾಡಿ ಸವಿಯುವ, ಅವನಂತೆ ಕುದುರೆ ಪಳಗಿಸುವ ಆಸೆ ಪ್ರತೀ ಸಲ ಓದುವಾಗ ನನ್ನಲ್ಲೂ ಉಕ್ಕುತ್ತದೆ. ಮಿ ಬೋಸ್ಟ್, ನೆಲ್, ರೆವೆರೆಂಡ್ ಆಲ್ಡೆನ್, ನೆಲ್ಲಿ, ಕ್ಯಾಪ್ ಗಾರ್ಲೆಂಡ್, ಐಡಾ, ಜಾಕ್, ಶೆಪ್, ಮಿಸ್ ವೈಲ್ಡರ್, ಬಿಗ್ ಸ್ಯಾಮ್ ಎಲ್ಲಾ ಪಾತ್ರಗಳೂ ಕಣ್ಣ ಮುಂದೆ ಹೋಗುತ್ತವೆ. ಆ ವ್ಯಕ್ತಿಗಳ ಜೊತೆ ಲಾರಾಳಂತೆ ನನಗೂ ಒಡನಾಟವಿದೆ. ಜಾಕ್ ಅಂತೂ ನನ್ನದೇ ಜತೆಗಾರನಾಗಿ ಬಿಟ್ಟಿದ್ದಾನೆ, ಅವನ ಪರಲೋಕ ಪಯಣ ಮನಸ್ಸನ್ನು ಪ್ರತೀಸಲ ಪೀಡಿಸುತ್ತದೆ.

ಮೂಲತಃ ಸಸ್ಯಾಹಾರಿಗಳಾದ ನಮಗೇ ಬಾಯಿಯಲ್ಲಿ ನೀರೂರಿಸುವಂತೆ ಮಾಡಿದ್ದಾಳೆ ಲಾರಾ, ಅವಳು ವಿವರಿಸಿದ ಹಂದಿ ಮಾಂಸವನ್ನು ಒಮ್ಮೆ ತಿನ್ನಬೇಕು ಅನಿಸಿತ್ತು ಎಂದು ಪ್ರಕಾಶ್ ಹಾಗೂ ಪ್ರಭಾ ದಂಪತಿಗಳು ನನ್ನಲ್ಲಿ ಹೇಳಿದ್ದು ನೆನಪಿದೆ. ಅಷ್ಟು ಚೆಂದದ ವಿವರಣೆ ಲಾರಳದ್ದು ಹಾಗೂ ನನಗೂ ಹಾಗೆಯೇ ಅನಿಸಿದ್ದು ಸುಳ್ಳಲ್ಲ! ಚೀಸ್, ಹಂದಿ ಮಾಂಸದ ಸಾಸೆಜ್,  ಹಿಕರಿ ಹೊಗೆಯಾಡಿಸಿದ ಜಿಂಕೆ ಮಾಂಸ, ಜಜ್ಜಿದ ಈರುಳ್ಳಿ, ಬೇಯಿಸಿದ ಬಿಳಿಯಾದ ಆಲೂಗಡ್ಡೆ, ಆಪಲ್ ಪೈ, ಕುಂಬಳ ಕಾಯಿ ಪೈ, ಬ್ಲಾಕ್ ಬರ್ಡ್ ಪೈ, ಟೊಮೇಟೊ ಮುರಬ್ಬ, ಕರಡಿ ಮಾಂಸ, ಕ್ಯಾರೆಟ್ ತುರಿಯಿಂದ ಬಣ್ಣಗೊಳಿಸಿದ ಹೊಂಬಣ್ಣದ ಬೆಣ್ಣೆ, ಕೆಂಪು ಕಪ್ಪು ಶುಂಠಿ ಖಾರ ಬಗೆ ಬಗೆ ಸ್ವಾದದ ಕಲ್ಕಂಡು ಮಿಠಾಯಿಗಳು, ಪ್ಲಂ ಹಣ್ಣುಗಳು, ಟರ್ನಿಪ್, ಮೇಪಲ್ ಸಕ್ಕರೆ, ಆಯಿಸ್ಟರ್ ಮೀನು-ಸೂಪು, ಪಾಪ್ ಕಾರ್ನ್ ಎಲ್ಲಾ ಬಿಡಿ ಕೊನೆಗೆ ಕೈಲ್ಲಿ ಬೀಸಿದ ಗೋಧಿಯಿಂದ ಮಾಡಿದ ಕಂದು ಒರಟು ಬ್ರೆಡ್ ಹೀಗೆ ಲಾರ ಬರೆದಿರುವ ತಿನಿಸುಗಳೆಲ್ಲವೂ ಓದುಗರ ಬಾಯಿಯಲ್ಲಿ ನೀರೂರಿಸುವಂತಿದೆ.

ಪ್ರತೀ ಮಗುವಿಗೂ, ತಾಯಿ-ತಂದೆಗೂ, ಗೆಳೆಯ-ಗೆಳತಿ ಯಾರಿಗೂ ಕೊಡಬಹುದಾದ ಅತೀ ಸುಂದರ ಉಡುಗೊರೆಯೆಂದರೆ ಈ ಪುಸ್ತಕಗಳು. ಎಷ್ಟು ಸಲ ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ, ಮತ್ತೂ ಹೊಸ ಹೊಸ ವಿಷಯಗಳನ್ನು ತಿಳಿಸಿಕೊಡುವ, ಕಷ್ಟಗಳ ಸರಮಾಲೆ ಎದುರಾದರೂ ಮುನ್ನುಗ್ಗಿ ನಡೆಯುವ ರೀತಿ ಹೇಳಿಕೊಡುವ ಅಪರೂಪದ ಪುಸ್ತಕಗಳಿವು.

ಅಂಕಿತ ಪುಸ್ತಕ ಸರಣಿಯ ಎಲ್ಲಾ ಪುಸ್ತಕಗಳನ್ನು ಮುದ್ರಿಸಿದೆ.

satyajit ray

ಯಾವ ಇಸವಿ ನೆನಪಿಲ್ಲ, ತುಷಾರದಲ್ಲಿ ಕಾರ್ವಸ್ ಎಂಬ ಜಾಣ ಕಾಗೆಯೊಂದರ ಕಥೆ ಓದಿದ್ದೆ. ಒಳ್ಳೆಯ ಮನಸ್ಸಿನ, ಭಾವುಕ ವಿಜ್ಞಾನಿಯೊಬ್ಬ ಕಾಗೆಯ ಜೊತೆಗೆ ಸ್ನೇಹ ಬೆಳೆಸಿ, ಅದನ್ನು ತರಬೇತಿಗೊಳಿಸಿ ಜಾಣನನ್ನಾಗಿಸುವ ಫ್ಯಾಂಟಸಿ ಕಥೆಯದು. ಮೊದಲ ಓದಿಗೆ ಅನಿಸಿದ್ದು, ಇದು ಖಂಡಿತಾ ಇಂಗ್ಲಿಷ್ ಕಥೆ, ಅದನ್ನು ಯಾರೋ ಅನುವಾದಿಸಿದ್ದಾರೆ ಎಂದು. ಆಮೇಲೆ ಅದೆಷ್ಟು ಸಲ ಓದಿದ್ದೇನೋ ತಿಳಿದಿಲ್ಲ, ಆ ಕಥೆ ತಲೆಯಲ್ಲಿ ಅಚ್ಚೊತ್ತಿದಂತೆ ಕುಳಿತುಬಿಟ್ಟಿತ್ತು, ಸಾಲದೆಂಬಂತೆ ಮನೆ ಹಿತ್ತಿಲಿಗೆ ಬರುವ ಕಾಗೆಗಳನ್ನೆಲ್ಲ ಗಮನವಿಟ್ಟು ನೋಡೋದು, ಯಾರಿಗೊತ್ತು ನನಗೂ ಒಂದು ಕಾರ್ವಸ್ ಸಿಗಬಹುದು, ಅದೂ ನನ್ನ ಜತೆ ಮಾಥ್ಸ್, ನಂಬರ್ಸ್ ಎಲ್ಲಾ ಕಲೀಬಹುದು ಎಂಬ ಕನಸುಗಳು ಬೇರೆ. ಆ ತುಷಾರವನ್ನು ನನ್ನ ನೋಟ್ ಬುಕ್ಕಿನೊಳಗೆ ಅಡಗಿಸಿ ಕದ್ದು ತಿನ್ನುವ ಬೆಲ್ಲದಂತೆ ಪದೇ ಪದೇ ಓದಿ ಖುಷಿಪಡುತ್ತಿದ್ದೆ. (ತರುವ ಪ್ರತೀ ಮಾಸಪತ್ರಿಕೆಗಳನ್ನು ತಿಂಗಳು ಹಾಗೂ ವರ್ಷಗಳ ಪ್ರಕಾರ ನೀಟಾಗಿ ಜೋಡಿಸಿ ಇಡುತ್ತಿದ್ದರು ನನ್ನ ತಂದೆ) ಸ್ವಲ್ಪ ಬುದ್ಧಿ ಬಂದ ಮೇಲೆ, ಆ ಕಥೆಯ ಬರಹಗಾರನ ಬರೆದ ಬೇರೆ ಕಥೆಗಳನ್ನೂ ಓದಬೇಕೆಂಬ ಹುಚ್ಚು ಬಲಿಯಲಾರಂಭಿಸಿತು. ಆ ಕಥೆಗಾರನ ಬಗ್ಗೆ ಆಗೊಮ್ಮೆ ಈಗೊಮ್ಮೆ ದೂರದರ್ಶನದಲ್ಲಿ ಕೇಳಿದ, ನೋಡಿದ ನೆನಪು. ಆತ ಸತ್ಯಜಿತ್ ರೇ. ಒಬ್ಬ ಒಳ್ಳೆ ಚಿತ್ರ ನಿರ್ದೇಶಕ ಎಂಬ ಮಾಹಿತಿ ಬಿಟ್ಟರೆ ಬೇರೆ ಏನೂ ತಿಳಿಯಲಿಲ್ಲ. ಯಥಾಪ್ರಕಾರ ಉಡುಪಿಯಲ್ಲಿ ಇದ್ದ ಕಾಮತ್ ಲೈಬ್ರರಿ, ಸಾರ್ವಜನಿಕ ಗ್ರಂಥಾಲಯಗಳನ್ನು ತಲೆ ಕೆಳಗೆ ಮಾಡಿದರೂ ಯಾವುದೇ ಪುಸ್ತಕವೂ ನನಗೆ ಸಿಗಲಿಲ್ಲ. ಮಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಧಾರವಾಡ, ಸಾಹಿತ್ಯ ಸಮ್ಮೇಳನಗಳು, ಬೆಂಗಳೂರಿನ ಎಲ್ಲಾ ಪುಸ್ತಕ ಮಳಿಗೆಗಳು ಹೀಗೆ ಹೋದ ಕಡೆಯೆಲ್ಲಾ ಜಾಲಾಡಿದೆ, ಇಂಗ್ಲೀಷಿನಲ್ಲಿ ಬೇರೆ ಬೇರೆ ಪುಸ್ತಕಗಳು ದೊರೆತವೇ ಹೊರತು, ಅನುವಾದಿತ ಕಥಾ ಸಂಕಲನ ಸಿಗಲಿಲ್ಲ. ಆ ವ್ಯಕ್ತಿಯ ಬಗ್ಗೆ, ಪಥೇರ್ ಪಾಂಚಾಲಿಯ ಬಗ್ಗೆ ಇನ್ನಷ್ಟು ತಿಳಿಯಿತು, ಎಂತಹ ಅದ್ಭುತ ವ್ಯಕ್ತಿ ಎಂಬುದು ಅರಿವಾದಂತೆ ಕನ್ನಡಕ್ಕೆ ಅನುವಾದವಾದ ಅವರ ಎಲ್ಲ ಕಥೆಗಳನ್ನೂ ಓದಬೇಕೆಂಬ ಚಡಪಡಿಕೆ ಶುರುವಾಯಿತು. ಇವೆಲ್ಲದರ ಮಧ್ಯೆ ನಾನು ಅಡಗಿಸಿಟ್ಟ ಪ್ರತಿ ಕಳೆದು ಹೋಗಿ ಅನುವಾದಕರ ಹೆಸರೂ ತಿಳಿಯದೆ ಒದ್ದಾಡುವಂತಾಯಿತು. ಇಂಟರ್ನೆಟ್, youtube ಬಂದ ಮೇಲೆ ಅವರ ಇಂಡಿಗೋ ಕಥೆಯನ್ನು ಇಂಗ್ಲೀಷಿನಲ್ಲಿ ಓದಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಇದರ ಮಧ್ಯೆ ಸಾಹಿತ್ಯ ಸಮ್ಮೇಳನವೊಂದರಲ್ಲಿ ಸತ್ಯಜಿತ್ ರೇ ಕಥೆಗಳು ಎಂಬ ಪುಸ್ತಕ ಕಣ್ಣಿಗೆ ಬಿದ್ದಾಗ ಕುಣಿಯುವುದೊಂದೇ ಬಾಕಿ. ಈ ಪುಸ್ತಕ ಕೈಗೆ ಬಂದ ನಂತರ ಕಡಿಮೆಯೆಂದರೆ ೨೦ ಸಲವಾದರೂ ಓದಿರಬೇಕು. ಪ್ರತೀ ಸಲವೂ ಅದೇ ಬೆರಗು, ಕೌತುಕವನ್ನು ಹುಟ್ಟಿಸುತ್ತದೆ. ಎಂತೆಂತ ಕಥೆಗಳಪ್ಪ! ಈ ಮನುಷ್ಯನಿಗೆ ಈ ಥರದ ಯೋಚನೆಯಾದರೂ ಹೇಗೆ ಹುಟ್ಟಿತ್ತು ?
ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ, ಅನುವಾದಕ ಹೇಳುವಂತೆ ಕಲ್ಪನೆ, ವಾಸ್ತವ, ಫ್ಯಾಂಟಸಿ, ವೈಜ್ಞಾನಿಕ ಸತ್ಯ, ಮನುಷ್ಯ ಸ್ವಭಾವದ ನಿಗೂಢತೆ ಹೀಗೆ ಅನೇಕ ಸಂಗತಿಗಳನ್ನು ಉಚಿತ ಪ್ರಮಾಣದಲ್ಲಿ ಬಳಸಿ ರಚಿತವಾದ ಕಥೆಗಳಿವು.
ಖಗಂನಲ್ಲಿ ಹಾವಾಗುವ ಮನುಷ್ಯ, ಸಿನಿಮಾದಲ್ಲಿ ಅಭಿನಯಿಸುವ ಪಟೊಲ್ ಬಾಬು (youtube ಅಲ್ಲಿ ಕಾಮಿಕ್ ಬುಕ್ ಇದೆ), ತುಳಸಿಬಾಬುವಿನ ಬಿಲ್ ಎಂಬ ಹಕ್ಕಿ, ಅಶಮಂಜ ಬಾಬುವಿನ ನಗುವ ಬ್ರೌನಿ, ತದ್ರೂಪಿಯ ರತನ್ ಬಾಬು - ಮಣಿಲಾಲ್, ಪದೇ ಪದೇ ಕಾಡುವ ನೀಲಿ ತೋಟದ ಇರುಳು (ಇಂಡಿಗೋ), ದ್ವಂದ ಯುದ್ಧ, ಮೊದಲೇ ಹೇಳಿದ ಜಾಣ ಕಾರ್ವಸ್, ಅದ್ಭುತ ಟೆಲಸ್, ಸಹಾರಾ ರಹಸ್ಯದ ಡೆಮಿಟ್ರಿಯಸ್ ಎಂಬ ಜೀವವಿಜ್ಞಾನಿ, ಕಂಡೂ ಕಾಣದ ಏಕ ಶೃಂಗಿ ಎಲ್ಲರೂ ಈ ಪುಸ್ತಕದ ಪಯಣದ ಸಹಪಯಣಿಗರು. ಪ್ರತೀ ಕಥೆಯನ್ನೂ ನಿಧಾನವಾಗಿ ಹನಿಹನಿಯಾಗಿ ಚಪ್ಪರಿಸಿಕೊಂಡು ಓದಬಹುದು. ಕಣ್ಣು ಮುಚ್ಚಿದರೆ ಅತಿಮಾನುಷ ಲೋಕಕ್ಕೆ ತೆರಳಿದ ಅನುಭವ. ವಾಸ್ತವ ಮತ್ತು ಫ್ಯಾಂಟಸಿ ನಡುವಿನ ಗೆರೆಯನ್ನು ಅಲ್ಲಲ್ಲಿ ಸತ್ಯಜಿತ್ ರೇ ಅಳಿಸಿಬಿಡುತ್ತಾರೆ. ಪ್ರಾಣಿ, ಪಕ್ಷಿಗಳು ಮತ್ತು ಪರಿಸರದ ಅವರ ಅಪಾರ ಜ್ಞಾನ ಪದೇ ಪದೇ ಈ ಕಥೆಗಳಲ್ಲಿ ಕಂಡುಬರುತ್ತದೆ. ಆಸಕ್ತಿದಾಯಕ ವಿಚಾರಗಳನ್ನು ತಿಳಿಸುತ್ತದೆ. ಮಾನಸ ಸರೋವರದಲ್ಲಾಚೆಯೆಲ್ಲೋ ಇರಬಹುದಾದ ಡುಂಗ್-ಲುಂಗ್-ಡೋ ಕೈಬೀಸಿ ಕರೆಯುತ್ತದೆ! ಪುಸ್ತಕ ಕೆಳಗಿಟ್ಟ ಮೇಲೆ ಒಂದು ಚಿಕ್ಕ ನಿಟ್ಟುಸಿರು,' ಅಯ್ಯೋ, ಕಥೆಗಳು ಮುಗಿದೇ ಹೋದವಲ್ಲ? '
ತದ್ರೂಪಿ ಕಥೆಯನ್ನು ನಾನು ಓದಿ ರೆಕಾರ್ಡ್ ಮಾಡಿಕೊಂಡು ನನ್ನ ಮಗನಿಗೆ ಕೇಳಿಸಿದ್ದೇನೆ. ದೊಡ್ಡವರಿಗಷ್ಟೇ ಅಲ್ಲದೆ ಮಕ್ಕಳಿಗೆ ಕಾಣಿಕೆಯಾಗಿ ನೀಡಬಹುದಾದ ಒಂದೊಳ್ಳೆ ಪುಸ್ತಕ.
ಪ್ರಿಸಂ ಬುಕ್ಸ್ ಇದನ್ನು ಪ್ರಕಟಿಸಿದ್ದು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿರುವವರು ಎನ್ ಶ್ರೀನಿವಾಸ್ ಉಡುಪ.