ಚೆಲುವ ಪ್ರತಿಮೆ ನೀನು...
ಪ್ರೇಮ ಲೋಕದಿಂದ ತಂದ ಪ್ರೇಮದ ಸಂದೇಶ...
ಆಹಾ, ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ...
ವಲೆಂಟೈನ್ಸ್ ಡೇಯ ರಾತ್ರಿ ಹೀಗೆಲ್ಲಾ ಹಾಡಿ ಕುಣಿರಬಹುದೇ ಈ ಕಣ್ಣು ಮೂಗು ಕಾಣದ ಹಾಗೆ ಬಣ್ಣ ಬಳಿದ ಬೊಂಬೆಗಳು?
ಹುಬ್ಬು, ರೋಮ, ಕೂದಲು, ಏನೂ ಇಲ್ಲದ ಈ ಬೊಂಬೆಗಳು ದಿನವಿಡೀ ಅಲುಗದೆ ನಿಂತು ರಾತ್ರಿಯೆಲ್ಲ ಮಾಲ್ ಪೂರ್ತಿ ಸುತ್ತಿರಬಹುದೇ? ಲಿಫ್ಟ್, ಎಸ್ಕಲೇಟರ್ಗಳಲ್ಲಿ ಸುಮ್ಮಸುಮ್ಮನೆ ಮೇಲೆ ಕೆಳಗೆ ಓಡಾಡಿ ಗಾಜಿನಲ್ಲಿ ಬಂದಿಯಾದ ರಂಗ್ ಭಿ ರಂಗೀ ಡೊನಟ್, ಚಾಕಲೇಟ್, ಕುಕೀಸ್ ಗಳಿಗೆ ಆಸೆ ಮಾಡಿರಬಹುದೇ? ಐನಾಕ್ಸಿನ ಸೀಟುಗಳಲ್ಲಿ ಕೂತು, ಎದ್ದು, ಖಾಲಿ ಸ್ಕ್ರೀನನ್ನು ನೋಡಿ, ನಕ್ಕಿರಬಹುದೇ? ಮಾಲಿನ ರೂಫಿನ ಮೇಲಿಂದ ನೇತಾಡುವ ತೂಗು ದೀಪಗಳ ಬೆಳಕಲ್ಲಿ ಒಬ್ಬರನ್ನೊಬ್ಬರು ನೋಡಿ ಪ್ರೀತಿಸಿರಬಹುದೇ? ಲಿಫ್ಟಿನ ಸಂಗೀತಕ್ಕೆ, ಅದರ ಗೋಡೆಗಳಿಗೆ ಅಂಟಿರುವ ಕನ್ನಡಿಯಲ್ಲಿ ಕಾಣುವ ತಮ್ಮದೇ ಪ್ರತಿಬಿಂಬಕ್ಕೆ ಮಾರು ಹೋಗಿರಬಹುದೇ? ಬಟ್ಟೆ -ಬರೆ, ಇಲೆಕ್ಟ್ರೋನಿಕ್ಸ್, ಸೌಂದರ್ಯವರ್ಧಕಗಳು, ಪುಸ್ತಕಗಳು, ಆಟಿಕೆಗಳು, ಪರ್ಸ್, ಬ್ಯಾಗು ಇವೆಲ್ಲವನ್ನೂ ನೋಡಿ ಅಬ್ಬಾ! ಮನುಷ್ಯರಿಗೆ ಏನೆಲ್ಲಾ ಬೇಕಿದೆಯಲ್ಲ ಎಂದು ಆಶ್ಚರ್ಯ ಪಟ್ಟಿರಬಹುದೇ?
No comments:
Post a Comment