Wednesday, March 18, 2015

ನಿದ್ರಾಯಣ


ಘಟೋತ್ಕಚ ಅರೆ ನಿಮಿಷದಲ್ಲೇ ಬೆಳೆದದ್ದಾಯ್ತು
ಅಮರ ಚಿತ್ರಕಥೆ ಪುಸ್ತಕ ಮೂಲೆಗೆ ಬಿತ್ತು.
ಅಮ್ಮನ ಮುಖ ನೋಡಿ ಮತ್ತೆ ಚೌಕಾಶಿ ಶುರು
ಇನ್ನು ಒಂದೇ ಕಥೆ, ಕಾಡಿನ ಕಥೆ ಹೇಳು,
ಮಲಗ್ತೇನೆ ಅಮ್ಮಾ, ನಿಜ ನಿಜ.
ಸರಿ, ಅಮ್ಮ ಮಗ ಅಮೆಜಾನ್ ಕಾಡಿಂದ
ಬಂಡೀಪುರ, ಮದುಮಲೈ ಸುತ್ತಿದ್ದಾಯ್ತು.
ಆದರೂ ಪುಟ್ಟಣ್ಣರಾಯರಿಗೆ ಕಣ್ಣು ತೂಗಿಲ್ಲ.
ಲೈಟ್ ಆರಿಸಿದರು ಅಮ್ಮ
ಟ್ಯಾಬಿನಿಂದ ಹಾಡು ಹೊರ ಹೊಮ್ಮಿತು.
ವಿಷ್ಣುವರ್ಧನ್ ಹಾಡಿದರು ಜೋ ಜೋ ಲಾಲಿ.
ಕೊರಳ ಸುತ್ತ ಕೈ ಹಾಕಿದ ಪುಟ್ಟಣ್ಣ
ಮುಖಕ್ಕೆ ಮೂಗೊತ್ತಿ, ಕಣ್ಣು ಅರೆಮುಚ್ಚಿದ
ಅಮ್ಮನ ಮುಖದ ಪರಿಮಳ ಹೀರಿದ.
ಎಣಿಸಿ ಹದಿಮೂರು ಲಾಲಿಗಳು ಮುಗಿದವು.
ಎದ್ದು ಕೂತ ಪುಟ್ಟಣ್ಣರಾಯ, ನೀರು ಎಂದ
ಅಮ್ಮ ತಂದ ಲೋಟದ ದ್ರವ ಎರಡೇ ಹನಿ ಗಂಟಲಿಗಿಳೀತು.
ಮತ್ತೆ ದೀಪವಾರಿತು, ಎರಡೇ ನಿಮಿಷ, ಸುಸ್ಸು ಅಂದ.
ಸರಿ ಮುಗಿದ ಮೇಲಾದರೂ ಮಲಗುತ್ತಾನೆಯೇ ಕಳ್ಳ?
ಅಮ್ಮ, ನಾಳೆ ಬಾಕ್ಸಿಗೆ ಏನು ಕೊಡ್ತೀಯ?
ಅಮ್ಮ ಮೆಲು ದನಿಯಲಿ ಗದರಿದರು
ಮಲಗಿದಿದ್ರೆ ಪಪ್ಪನ ಹತ್ತಿರ ಹೇಳುತ್ತೇನೆ.
ಕತ್ತಲಲ್ಲೂ ಮುಖ ಬಿಸ್ಕುಟ್ ಅಂಬಡೆಯಾಯ್ತು.
ಮಂದ್ರಿ ಹೊದ್ದವನು ಅದರೊಳಗಿಂದಲೇ ಗೊಣಗಿದ
ಅಮ್ಮ ನೀ ಜೋರು, ನಾ ಯಾರ ಹತ್ತಿರನೂ ಮಾತಾಡಲ್ಲ.
ಒಳ್ಳೆದಾಯ್ತು ಅಂದ ಅಮ್ಮ, ಇಸ್ತ್ರಿ ಮಾಡಲಿಕ್ಕಿರುವ
ಸಮವಸ್ತ್ರವ, ನೆನೆ ಹಾಕಲಿಕ್ಕಿರುವ ಹೆಸರು ಕಾಳುಗಳ,
ಸ್ವಚ್ಚಗೊಳಿಸಬೇಕಿರುವ ಒಲೆ ಕಟ್ಟೆಯ ಧ್ಯಾನಿಸಿದರು.
ಈ ಪುಟ್ಟ ಮಲಗಿದರೆ ಸಾಕಪ್ಪ ಎಂದು ನಿಟ್ಟುಸಿರು ಬಿಡ
ಹೊರಟವರು ನೋಡಿದರೆ ಮಂದ್ರಿಯ ಒಳಗಿಂದ ಒದ್ದಾಟ.
ಮುಸುಕ ತೆಗೆದವನು ಮತ್ತೆ ಅಮ್ಮನನ್ನ ನೋಡಿ
ಮರುಳುಗೊಳಿಸುವ ನಗೆ ನಕ್ಕ, ಅಮ್ಮನಿಗೂ ನಗು.
ಅದರ ಹಿಂದೆಯೇ ಅಲ್ಲೇ ಲ್ಯಾಪ್ಟಾಪ್ ಹಿಡಿದು
ಕೂತ ಅಪ್ಪನ ಗೊಣಗಾಟ. ಪುಟ್ಟನ ಬೇಡಿಕೆ,
ಅಮ್ಮ, ಹಾಡು ಹೇಳುತ್ತಾ ತಟ್ಟು!
ಅಪ್ಪನ ಭರತನಾಟ್ಯ, ಯಕ್ಷಗಾನ, ಕಥಕ್ಕಳಿ
ಯ ಪ್ರದರ್ಶನ, ಒಡನೆಯೇ ಪುಟ್ಟನ
ಪುಟಾಣಿ ಕಣ್ಣಲ್ಲಿ ಕುಂಭ ದ್ರೊಣಮಳೆಯ ಆಗಮನ.
ಹಗುರಕ್ಕೆ ತಟ್ಟಿದರು, ಜೊತೆಗೊಂದು ಗುನುಗಿನೊಂದಿಗೆ
ಕೋಣೆಯ ಗಡಿಯಾರಕ್ಕೂ, ತಿರುಗುವ  ಪಂಖಕ್ಕೂ
ಈಗ ಸುಸ್ತಿನ ನಿದ್ದೆಯ ಅಮಲು.
ತಟ್ಟುವಿಕೆ ನಿಂತಿತು, ಮಂದ್ರಿಯ ಸರಿಯಾಗಿ ಹೊದಿಸಿ
ಅಮ್ಮ ಬಾಬುಗೆ ಮುತ್ತಿಕ್ಕಿ ಪುಟಿದೆದ್ದ
ಪುಟ್ಟ ಓಡಿದ ಅಪ್ಪನ ಬಳಿ.

4 comments:

  1. ಹಹ್ಹಹ್ಹ ಇದನ್ನು ಓದಿತ್ತಿದ್ದ ಹಾಗೆ ನಮ್ಮೊಳಗಿನ ನೋವುಗಳೆಲ್ಲ ಪಟಾಪಂಚಲಾದವು!
    ಮಗ ಬೆಳೆದರೇನಂತೆ ಮನೆಗವ ಮಗುವೇ...

    ReplyDelete