Tuesday, October 28, 2014

ಭೀತ

ಭೇಟಿಯಾಗಿ ಗಂಟೆಯೂ ಕಳೆದಿಲ್ಲ
ತಿಂಗಳ ಖರ್ಚಿಗೆಂದು ನೀ ಕೊಟ್ಟ ಖುಷಿಯ ಗಂಟು 
ದಾರಿಯಲ್ಲೇ ಖಾಲಿಯಾಗಿ ಬಿಟ್ಟಿದೆಯಲ್ಲೇ ಹುಡುಗಿ!
ಈ ದಾರಿ ಹೊರಳಿ ಮನೆ ಕಡೆ ತಿರುಗುವಷ್ಟರಲ್ಲಿ
ನಾ ತಿರುಗೋಡಿ ಬರಲೇ ನೀನಿರುವಲ್ಲಿ.
ಅಲ್ಲಿ ಮನೆಯಲ್ಲಿ ಕುಳಿತಿಹುದು 
ಹಸಿದ ಸೀಳು ನಾಯಿಯಂತಹ ಏಕಾಂತ 
ನಿನ್ನೆ ತಿಂದ ಬಿಟ್ಟಿದ್ದ ನನ್ನ ಮಾಂಸದ ತುಣುಕುಗಳು 
ಅದಾಗಲೇ ಮುಗಿಸಿಬಿಟ್ಟಿರಬೇಕು.
ಇಂದು ಇನ್ನಷ್ಟು ದಾಹಿಯಾಗಿರಬೇಕು 
ಹಸಿದಿರಬೇಕು ನನ್ನ ರಕ್ತ ಚಪ್ಪರಿಸಲು. 
ಮೂಲೆಯಲ್ಲಿ ಕುಳಿತ ಭಯಭೀತ ದೇವನೂ
ಬಾರದಿರಲಿ ಮನೆಗೆ ಇವನೆಂದು 
ಅರೆಗಣ್ಣು ಮುಚ್ಚಿ ಪ್ರಾರ್ಥಿಸಿರಬೇಕು. 
ದೇವನನ್ನೂ ಕ್ರೂರಾತಿಕ್ರೂರ ನೋಟದಿಂದ 
ದಿಟ್ಟಿಸಿ ನಕ್ಕ ನಗು ಇಲ್ಲಿಯವರೆಗೂ ಅಪ್ಪಳಿಸಿತಲ್ಲೆ 
ನೀ ತೊಟ್ಟ ದಿರಿಸೂ, ಹಣೆಗಿಟ್ಟ ಚುಕ್ಕಿ 
ಯಾವುದರ ರಂಗೂ ನೆನಪಾಗದೇ ಹುಡುಗಿ
ಸೀಳು ನಾಯಿಯ ಬಾಯಲ್ಲಿ ಉಳಿವ 
ನನ್ನ ಜಿಡ್ಡು ರಕ್ತದ ಬಣ್ಣವಷ್ಟೇ ನೆನಹು.
ಹೇಳೇ, ನೀ ಬರುವೆಯೇನು ನನ್ನ ಜತೆ
ದೇವನಿಗೆ ಧೈರ್ಯ ತುಂಬಿ ಕಣ್ಣ ಬಿಡಿಸಲು
ಸೀಳು ನಾಯಿಯ ಬಡಿದೋಡಿಸಲು ??

2 comments:

  1. 'ದೇವನಿಗೆ ಧೈರ್ಯ ತುಂಬಿ ಕಣ್ಣ ಬಿಡಿಸಲು'
    ವಿಭಿನ್ನ ಹೂರಣದ ಕವನ.
    ಮನ ಮುಟ್ಟಿತು.

    ReplyDelete