ನಾನು ನಿರಾಶಾವಾದಿ ಖಂಡಿತಾ ಅಲ್ಲ. ಮುಗಿದ ವರ್ಷದ ಕ್ರೌರ್ಯ ಕಂಡು ಈ ಸಾಲುಗಳೂ, ಮನಸ್ಸಿನೊಳಗಡೆ ಭೀತಿಯೂ ಹುಟ್ಟಿವೆ.
ನಗಾರಿ ಸದ್ದಿನ ಎದೆ ಬಡಿತದೊಂದಿಗೆ
ಕಂಪಿಸುವ ಮೈಯ ನಾದದೊಂದಿಗೆ
ತಾಳ ಹಾಕುವ ನಡುಗುವ ಕೈಗಳಿಂದ,
ಹೆಬ್ಬಾಗಿಲನ್ನೂ, ಅದರ ಹಿಂದಿದ್ದ
ಅಕರಾಳ ವಿಕರಾಳ, ಕಹಿ ಕಹಿ
ಜೀವ ಹಿಂಡುವ ಯಾತನೆಯ
ಉಸಿರುಗಟ್ಟಿಸುವಷ್ಟು ಅಳು ತರುವ
ವಿಧ ವಿಧ ನೋವುಗಳ ಸಂಪುಟಗಳನ್ನೂ
ಮುಚ್ಚಿಯಾಯಿತು.
ಮುಚ್ಚಿದ ಬಾಗಿಲಿಂದ ಕೇಳುವ
ರೋದನೆಯ ದನಿಗಳಿಗೆ ಹಾಗೂ ಹೀಗೋ
ಕಲ್ಲಾದ್ದದಾಯ್ತು.
ಅಗೋ!,
ಎದುರು ಮುಚ್ಚಿದ ಇನ್ನೊಂದು ಬಾಗಿಲು
ಈಗಷ್ಟೆ ಮುಚ್ಚಿದ ಬಾಗಿಲಿನ ಹಿಂದಿದ್ದ
ಯಾತನೆಗಳು ಇದರ ಹಿಂದಿದ್ದರೆ?
ಬಾಗಿಲು ತೆಗೆದು ಹೆಜ್ಜೆಯಿಡುವಾಗಲೇ
ಹಾರಬಹುದೇ ಕ್ರೂರಾತಿ ಕ್ರೂರ ರಣ ಹದ್ದುಗಳು
ಯಾರದೋ ಜೀವವನ್ನು ಹಸಿ ಹಸಿಯಾಗಿ ಕಚ್ಚಿ ತಿನ್ನಲು ?
ಎಳೆ ಎಳೆ ಹಾಲುಗಲ್ಲದ ರಕ್ತ ಹೀರಲು?
ಕಬ್ಬಿಣದ ಸರಳುಗಳು, ಕಾದಿರಬಹುದು
ಯಾರದೋ ಕರುಳನ್ನು ಹೊರಬಗೆಯಲು....
ಅದೆಷ್ಟು ಸುನಾಮಿಗಳೋ, ಜ್ವಾಲಾಮುಖಿಗಳೋ
ಎಲ್ಲೆಲ್ಲಿ ಸುಟ್ಟು ಕರಕಲಾಗುತ್ತಾವೋ ಜೀವಗಳು
ಎಂಥೆಂಥಹ ಅವಘಡಗಳು ಕೈ ಕಟ್ಟಿ ಕಾದು ಕುಳಿತಿಯುವೆಯೋ
ಯಾರು ಯಾರು ಬಿಟ್ಟು ಹೋಗುವರೋ ಇಹವನ್ನು
ದೇವರೇ, ಈ ವರ್ಷವನ್ನವಾದರೂ ಸುಂದರಗೊಳಿಸು....