Thursday, June 20, 2013

ಪುಟ್ಟನಿಲ್ಲದ ಹೊತ್ತು...



ಇದು ನನ್ನೊಬ್ಬಳ ಹಾಡಲ್ಲ, ಪ್ರಪಂಚದ ಎಲ್ಲಾ ತಾಯಂದಿರ ಪಾಡು! ಪ್ಲೇ ಹೋಮ್ ಹೋಗುತ್ತಿದ್ದ ನನ್ನ ಪುಟ್ಟ ಇದೀಗ ಇಡೀ ದಿನದ ಶಾಲೆಗೆ! ಪ್ರತೀ ರಜೆ ಮುಗಿದ ಮೇಲೂ ಅವನನ್ನು ಕಳಿಸಲು ಮತ್ತೆ ಮತ್ತೆ ಒದ್ದಾಟ. ಮಧ್ಯಾಹ್ನ ಬಟ್ಟೆ ಒಗೆಯುವಾಗ, ಅವನ ಬಟ್ಟೆಗಳನ್ನು ನೋಡುವಾಗ, ಊಟ ಮಾಡುವಾಗ, ಅವನದೇ ನೆನಪು. 

ಅಯ್ಯೋ, ಪಾಪು ವಾಗ ನಿದ್ದೆ ಮಾಡ್ತಿದ್ದ ಪಾಪ,
ಬಿಸಿಲಿಗೆ ನಿದ್ದೆ ಬರದೆ ಹೋದಿತೆ?
ಮಧ್ಯಾಹ್ನದ ಊಟ ಮುಗಿಸಿದನೋ ಇಲ್ಲವೋ
ಸರಿಯಾಗಿ ನೀರು ಕುಡಿದನೋ ಕಂದ?

ಇದು ಮೊನ್ನೆ ಮೊನ್ನೆ ತೆಗೆದುಕೊಂಡ ಅಂಗಿ ಚಡ್ಡಿ
ಮತ್ತಿವಾಗಲೇ ಚಿಕ್ಕದಾಯಿತಲ್ಲ
ಎತ್ತರ ಬೆಳೆದಿದ್ದಾನೆ, ಕಳ್ಳ
ಸಧ್ಯ, ಅಜ್ಜಂದಿರ ಹಾಗಾಗದಿದ್ದರೆ ಸಾಕು

ಇದು ಕಳ್ಳನ ಯುನಿಫಾರಮ್ಮು
ಮುದ್ದು ಬಾಬು, ನನ್ನ ಕಣ್ಣೇ ತಾಗುತ್ತೆ
ಇದೋ ಅವನ ಪುಟ್ಟ ಸಾಕ್ಸ್
 ಇದರೊಳಗೆ ಕೆಂಪು ಕೆಂಪು ಮೃದು ಪಾದ
ಅಹ್! ಪುಟ್ಟಣ್ಣ ಮಿಸ್ ಮಾಡ್ತೀನೋ ನಿನ್ನ
 
ಟೈ, ಬೆಲ್ಟ್ ಹಾಕಿ ಹೊರಟವನು
ಏನೋ ಹೊಸತು ಸಾಧಿಸಿದ ಭಾವ
ಹೊಸ ಶೂಸ್, ಬ್ಯಾಡ್ಜ್ ಬೇರೆ
ದೊಡ್ಡವನಾಗಿ ಬಿಟ್ಟಪ್ಪ ಎಷ್ಟು ಬೇಗ

ಬೆಳಗ್ಗೆ ಹೋದವನು ಬರುವುದೇ ಸಂಜೆ ಹೊತ್ತಿಗೆ
ಕರ್ಮವೇ, ಇಷ್ಟು ಪುಟ್ಟ ಮಕ್ಕಳಿಗೆ ಸ್ಕೂಲಾದರೂ ಯಾಕೆ?
ಇವತ್ತು ಅತ್ತಿದ್ದ ಬೆಳಗ್ಗೆ ಬೆಳಗ್ಗೆ ಪಾಪಚ್ಚಿ
ಬುತ್ತಿಗೆ ಅವನಿಷ್ಟದ ಬೆಂಡೆ ಪಲ್ಯ,
ಚಪಾತಿ ಗಟ್ಟಿಯಾಗಿರದಿದ್ದರೆ ಸಾಕಪ್ಪ


 ಬಂದ ಕೂಡಲೇ ನಗು, ಮುದ್ದು
 ಜಡಿ ಮಳೆ ಸುರಿದಂತೆ ಮಾತು
ಮಿಸ್ಡ್ ಯೂ ಅಮ್ಮ, ತುಂಬಾ ನೆನಪು ಬಂತು
ಎಲ್ಲಾ ಮ್ಯಾಮ್ ಗಳು ಅಮ್ಮನಷ್ಟೇ ಚೆಂದವಂತೆ!
 
ಇಂದು ಅವನಿಗಿಷ್ಟದ ಪುಲಾವು
ಅದರೊಂದಿಗೆ ಚೆಂದ ಕಥೆ
 ಮತ್ತೆ ತುಂಬಾ ಆಟ, ಊಟ, ನಿದ್ದೆ
ಅಯ್ಯಬ್ಬ ಇಂದಿಗೆ ನಾ ಗೆದ್ದೆ!
ನಾಳೆಯೂ ಮತ್ತಿದೇ ಕಥೆ
 
ದಿನಗಳೂ, ವಾರಗಳೂ, ತಿಂಗಳೂ
ಯಾಕಪ್ಪ ದೇವರೇ ನಿನಗಿಷ್ಟು ಆತುರ
ಪ್ರತೀ ಗಳಿಗೆಯೂ ನಿಧಾನಕ್ಕೆ ಓಡಿಸಪ್ಪ
ನಮ್ಮೀ ಬದುಕಿನ ಬಂಡಿ
ಪುಟ್ಟ ಇನ್ನಷ್ಟು ಹೊತ್ತು ಮಗುವಾಗಿರಲಿ
 
ಮಧ್ಯಾಹ್ನದ ಊಟಕ್ಕೆ ಯಾರೂ ಇಲ್ಲ ಪಕ್ಕ
ಇದ್ದರೆ ಇರುತಿತ್ತು ಸಣ್ಣ ತಟ್ಟೆ, ಸಣ್ಣ ಮರಿ
ಗಲಾಟೆ ಮಾಡಿ, ಕಥೆ ಹೇಳಿಸಿಕೊಂಡು
ಮೊಸರನ್ನವೂ ಖಾರ ಆಗಿ
 ನೂರು ಸಲ ನೀರು ಕುಡಿದು
ಅಯ್ಯೋ! ದಿನಗಳು ಮತ್ತೆ ಬಾರವಲ್ಲ ?

ಅವನದೇ ಪ್ರಪಂಚ, ಅವನದೇ ಆಟಗಳು
ಅಮ್ಮನಿಲ್ಲವೇ ಇಲ್ಲವಲ್ಲ ಅಲ್ಲಿ
ಕಣ್ಣಿಂದ ಜಾರಿತು ಒಂದು ಹನಿ
ಆದರೆ ತುಟಿಯ ಮೇಲೊಂದು ಸಂತೃಪ್ತ ನಗೆ

ಕಾಲವೇ, ಮತ್ತೆ ತಿರುಗಿ ಬಾರೆ.....

3 comments:

  1. ಮುದ್ದು ಹುಡುಗ ಮುದ್ದು ಅಮ್ಮ... ಮೊಸರನ್ನವೂ ಖಾರ ಆಗದೆ ಇನ್ನೇನಾಗುತ್ತೆ?!

    ReplyDelete
  2. thumba chendavagide..! :-)

    Putta doddavanaada mele idannu odidaaga, avana kannalu ondu hani haagu thutiya mele ondu santrupta nagu baruvudu kanditha..!!

    ReplyDelete