ಇಲ್ಲೇ ಓಡಾಡಿರಬಹುದು ರಾಣಿಯೊಬ್ಬಳು, ಸದ್ದಿಲ್ಲದಂತೆ ಅತ್ತಿರಬಹುದು
ಸೇವಕಿಯೋರ್ವಳು ಗಂಧ ತೀಡಿರಬಹುದು, ರಾಣಿಯ ಬಗ್ಗೆ ಮರುಕಪಟ್ಟಿರಬಹುದು
ಯಾರದೋ ಕಣ್ಣಿನ ತಂಪ ನೆಳಲಲ್ಲಿ ಬೆಳೆದು ಕಟ್ಟುಪಾಡಿಗಳಿಲ್ಲದೆ
ಹಾರಿದ ಹಕ್ಕಿಯ ತಂದು ಚಿನ್ನದ ಪಂಜರದಲ್ಲಿರಿಸಹರಲ್ಲಾ
ಕಳೆದ ಕಾಲ ಕನಸೇ, ಮತ್ತೆಂದೂ ತಿರುಗಿ ಬಾರದಲ್ಲ ?
ಬದುಕು ಇಷ್ಟವಿಲ್ಲದನ್ನು ಮಾಡುವ ಬಲವಂತದ ಊಟವೇ
ಇದೇ ಬಾವಿಗೆ, ಆ ಪಂಜರದಿಂದ ಹೊರಬಿದ್ದು ಹಾರಿರಬಹುದೇ ಯುವತಿ
ಹಾರುವಾಗ ಕಲ್ಲಿಗೆ ಬಡಿದ ಶಬ್ದಕ್ಕೆ ಕಿಂಚಿತ್ತಾದರೂ ಅಂಜಿರಬಹುದೇ ರಾಜನ ಹೃದಯ
ಅಂತ:ಪುರದ ತುಂಬಾ ರಾಣಿಯರ ಜಾತ್ರೆ, ಓರ್ವರಾದರೂ ಕೇಳಿರಬಹುದೇ ಅವರ ಮನದ ಯಾತನೆ
ಕೋಟೆ-ಕೊತ್ತಲಗಳೂ ಮಣ್ಣಾಗುತ್ತಿವೆ, ಯಾವ ವ್ಯಾಮೋಹವಿತ್ತೋ ಆ ಸಾಮ್ರಾಟನಲ್ಲಿ ತನ್ನ ಬಗ್ಗೆಯೇ
ತಾ ಇಲ್ಲವಾದರೆ ಅವರೂ ಸಾಯಗೊಡಬೇಕೆಂಬ ಕ್ರೂರತನ ಏಕೋ
ಬದುಕುವ ಆಸೆ ಅವರಿಗಿಲ್ಲವಾಗಿತ್ತೇ, ಅಥವ ಹೊತ್ತು ತಂದು ಅಗ್ನಿಗೆ ಆಹಾರವೀಯುತ್ತಿದರೇ
ಒಂದೇ ಒಂದು ಸುಳಿವು ನೀಡಿರಿ ಓ ಗೋಡೆಗಳೆ? ಏನೇನು ನಡೆದಿತ್ತು ಇಲ್ಲಿ
ಮೂಕ ಸಾಕ್ಷಿಗಳಾಗಿ ಏಕೆ ನಿಂತಿದ್ದೀರಿ? ರಾಜಂದಿರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋದರು
ಇನ್ನಾದರೂ ಮಾತನಾಡಿ, ದೌರ್ಜನ್ಯವ ಹೇಳಲು ಇಷ್ಟವಿರದಿದ್ದಲ್ಲಿ ವೈಭವವನ್ನಾದರೂ ಹೇಳಿ
ಇಲ್ಲಿ ಆನೆ-ಕುದುರೆಗಳ ಹೆಜ್ಜೆ ಗುರುತಿಹುದಲ್ಲ, ಅವಾದರೂ ಸಂತಸದಲ್ಲಿದ್ದವೇ
ನೂರಾರು ನರ್ತಕಿಯರು-ವಿದೂಷಕರಿದ್ದರಲ್ಲ, ಅವರು ನಿಮ್ಮ ರಂಜಿಸಿದರೇ
ಅಥವಾ ಅವರ ಕಣ್ಣಲಿ ತುಂಬಿದ್ದ ವಿಷಾದದ ಛಾಯೆಯ ನೀವು ಕಂಡಿರಾ
ಕಾಲ ಚಕ್ರ ಒಮ್ಮೆ ಹಿಂತಿರುಗು, ನಡೆದಿದ್ದು ಏನೆಂದು ಒಂದು ತುಣುಕು ತೋರಿಸು.
No comments:
Post a Comment