Hurt people hurt people
― Yehuda Berg
ಬಸ್ಸಿಳಿಯುವಾಗಲೇ ಪೂರ್ತಿ ಕತ್ತಲು ಕವಿದಿತ್ತು. ಕೈಲಿದ್ದ ಮೊಬೈಲಿನ ಟಾರ್ಚು ಆನ್ ಮಾಡಿ ಕಲ್ಲಿನ ಚಪ್ಪಡಿಗಳ ಸಂಕದ ಮೇಲೆ ಕಾಲಿಟ್ಟು ನಡೆಯುವಾಗ ‘ಅರೇ ಈ ಚಪ್ಪಡಿಗಳು ಅದೆಷ್ಟು ವರ್ಷಗಳಿಂದ ಬಿದ್ದುಕೊಂಡಿವೆಯಲ್ಲಾ?, ಈ ಕೊಂಪೆಯಲ್ಲಿ ಏನೂ ಬದಲಾಗಿಲ್ಲ, ಆಗುವುದೂ ಇಲ್ಲ’ ಅಂದುಕೊಂಡೆ. ಬಂದು ಏಳು ವರ್ಷಗಳಾಯ್ತಲ್ಲ ಎಂದು ಆ ಕ್ಷಣಕ್ಕೇ ಹೊಳೆಯಿತು. ಅದರಿಂದ ಕೆಳಕ್ಕಿಳಿದು ನಡೆಯುತ್ತಿದ್ದಂತೆ ದಾರಿ ಮಹೇಶನ ಮನೆಯ ಪಕ್ಕಕ್ಕೆ ಹೊರಳಿತು. ಮಂದ ಬೆಳಕಿನಲ್ಲಿ ಆರಾಮವಾಗಿ ಬಿದ್ದುಕೊಂಡ ಅವರ ಮನೆಯ ನಾಯಿ ಬೊಗಳಲು ಶುರು ಮಾಡಿತು. ಮನೆಯೊಳಗಿಂದ “ಏರ್ ಅವು (ಯಾರದು)” ಎಂಬ ಪ್ರಶ್ನೆಗೆ “ನಾನು” ಎಂದಷ್ಟೇ ಹೇಳಿದೆ. “ಓಹ್! ಬಾಬಣ್ಣ ಈಗ ಬರುವುದಾ?, ಗಿರ್ಜತ್ತೆ ಹೇಗಿದ್ದಾರೆ ಈಗ? ಎಂಥ ತಡ ಮಾಡಿ ಹೊರಟ್ರಿಯಾ?” ಎಂಬ ಮಾತಿನೊಂದಿಗೆ ಮಹೇಶನ ಆಕೃತಿ ಮಸುಕಾಗಿ ಕುಂಟುತ್ತಾ ಹೊರಬಂದದ್ದು ಕಂಡಿತು. “ಹೂಂ, ಮಹೇಶಣ್ಣ, ಕಾಲೇಜು ಬಿಟ್ಟು ಮನೆಗೆ ಹೋಗಿ ಹೊರಟು ಬರುವಾಗ ತಡವಾಯ್ತು, ಅಮ್ಮ ಆರಾಮಿದ್ದಾಳೆ, ಕಾಲು ಹೇಗಿದೆ ಇವಾಗ?” ಎಂದು ನಡೆಯುತ್ತಲೇ ಕೇಳಿದೆ. ಅವನು “ಹೂಂ ಪರ್ವಾಗಿಲ್ಲ ಬಾಬಣ್ಣ, ಜಾಗ್ರತೆ ಹೋಗಿ”ಎಂದ. ಮಹೇಶ ಅಮ್ಮನ ದೂರದ ಸಂಬಂಧಿ, ಮಾಧ್ವಿಯತ್ತೆಯ ಎಲ್ಲಾ ಸಮಾಚಾರಗಳನ್ನು ಅಮ್ಮನಿಗೆ ತಿಳಿಸುವಾತ. ಅಡಿಕೆ ಮರಗಳ ಸಪೂರ, ಉದ್ದ ಕಪ್ಪು ನೆರಳುಗಳ ಮಧ್ಯೆ ನಡೆಯುತ್ತಾ ಹೋದಂತೆ, ಮಿಣುಕುಹುಳಗಳ ಮಿಂಚಿ ಮಾಯವಾಗುವ ಬೆಳಕು, ಜೀರುಂಡೆಗಳ ಸದ್ದು, ಕಪ್ಪೆಗಳ ವಟವಟಗಳ ನಡುವೆ ಈ ಕತ್ತಲ ಪ್ರಪಂಚದಲ್ಲಿ ಸುಖವೆನಿಸಿತು. ಕತ್ತಲಿದ್ದರೂ ಸುತ್ತಣ ಏನಿದೆ, ಏನಿಲ್ಲ ಎಂಬುದರ ಅರಿವು ಚೆನ್ನಾಗಿಯೇ ಮನಸ್ಸಿಗೆ ತಿಳಿದಿತ್ತು. ಜಯ, ಸುಧೀ ಇಬ್ಬರೂ ಹತ್ತಿ ಕೂತು ದಾರಿ ಕಾಯುತ್ತಿದ್ದ ಮಾವಿನ ಮರ, ಅದರಾಚೆಗೆ ಸಣ್ಣ ಹೊಂಡ, ಅದರ ಸುತ್ತ ಬೆಳೆದ ಜರಿ ಗಿಡ, ದಂಡೆಯಂಚಿಗೆ ಬೆಳೆದ ಕತ್ತರಿ ದಾಸವಾಳದ ಗಿಡ, ಅದರ ಪಕ್ಕದ ಜಂಬೂ ನೇರಳೆ ಮರ, ಮೈ ತುಂಬ ಹೂ ಬಿಡುತ್ತಿದ್ದ ಕರವೀರ ಮತ್ತದರ ಗಟ್ಟಿ ಕಾಯಿಗಳು ಎಲ್ಲವೂ ಬೆಳಕಿದ್ದಾಗ ಹೇಗೆ ಕಾಣಿಸುತ್ತಿತ್ತೋ ಅಷ್ಟೇ ನಿಚ್ಚಳವಾಗಿ ಮನದ ಕಣ್ಣಿಗೆ ಗೋಚರಿಸುತ್ತಿತ್ತು. ಆ ಕರವೀರದ ಕಾಯಿಗಳಲ್ಲಿ ಜಯಾ ಅದೆಷ್ಟು ಚೆನ್ನಾಗಿ ಪೊಕ್ಕ ಆಡ್ತಿದ್ದಳು!
ಅತ್ತೆ ಮನೆಯ ದೀಪದ ಬೆಳಕು ಕಾಣಿಸುತ್ತಿದ್ದಂತೆ ರಾಜನ್ ನಾಯಿ ಜೋರಾಗಿ ಬೊಗಳುತ್ತಾ ಸ್ವಾಗತಿಸಿದ. “ಎಂಥಾ ಮಾರಾಯ, ಅಜ್ಜ ಆಗಿದ್ದೀಯಲ್ಲಾ? ನನ್ನ ಗುರ್ತ ಸಿಗುವುದಿಲ್ಲ ಅಲ್ಲಾ ನಿಂಗೀಗ, ಕಾಟು ಎಲ್ಲಾದ್ರೂ ತಂದು” ಅನ್ನುತ್ತಾ ಬೈದು ಅದರ ಹತ್ತಿರ ಹೋದರೆ, ಬಾಲ ಆಡಿಸುತ್ತಾ, ಶೇಲೆ ಮಾಡುತ್ತಾ ಕಾಲು, ಕೈ ನೆಕ್ಕಲು ಶುರು ಮಾಡಿದ. ಅದರ ಸಂಭ್ರಮ ಮುಗಿದ ಮೇಲೆ, ತಪ್ಪಲೆಯಲ್ಲಿಟ್ಟಿದ್ದ ನೀರಿನಲ್ಲಿ ಕೈ ಕಾಲು ತೊಳೆಯುತ್ತಾ ಬಲಗಡೆ ಕಣ್ಣು ಹಾಯಿಸಿದರೆ, ದೊಡ್ಡ ಚಾವಡಿಯ ಮೂಲೆಯಲ್ಲಿ ರಾಶಿ ಬಟ್ಟೆಗಳಲ್ಲಿ ಮುಳುಗಿರುವ ತಲೆಯೊಂದು ಕಾಣಿಸಿತು. ನಾಯಿ ಬೊಗಳಿದರೂ ಕೇಳಲಿಲ್ವಾ ಇವಳಿಗೆ ಅಂದುಕೊಂಡು ಚಾವಡಿಯ ಕಡೆ ನಡೆದು ಮೆಟ್ಟಲು ಹತ್ತುತ್ತಿದ್ದಂತೆ ಎಮರ್ಜೆನ್ಸಿ ದೀಪದ ಹತ್ತಿರ ಕೂತು, ರಾಶಿ ರಾಶಿ ಬಟ್ಟೆಯ ತುಂಡುಗಳು, ಬೇರೆ ಬೇರೆ ಸೈಜಿನ ರಿಂಗುಗಳು, ಬಣ್ಣ ಬಣ್ಣದ ಹೊಳೆಯುವ ಮಣಿಗಳು, ಬಗೆ ಬಗೆಯ ದಾರಗಳು ಎಲ್ಲವನ್ನೂ ಪುಟ್ಟ ಪುಟ್ಟ ತಟ್ಟೆಗಳಲ್ಲಿ ಹರಡಿಸಿಕೊಂಡು ಅದರ ಮಧ್ಯೆ ಕಸೂತಿ ಹಾಕುತ್ತಾ ಕೂತಿದ್ದಳು ಮಾಧ್ವಿಯತ್ತೆ… ಯಾವುದೋ ಬೇರೆ ಲೋಕಕ್ಕೆ ಬಂದಂತನಿಸಿತು. “ಅತ್ತೆ!” ಎಂದಾಗ ತಲೆಯೆತ್ತಿದವಳ ಕಣ್ಣಲ್ಲಿ ಸಂತಸದೆಳೆ ಒಂದರೆಗಳಿಗೆ ಕಂಡಂತಾಯ್ತು. “ಬಾಬಣ್ಣ, ಬಂದ್ಯಾ, ತಡವಾಯ್ತಲ್ಲಾ ಮಗ?” ಎಂದಳು. ಮಹೇಶ ಹೇಳಿರಬೇಕು ಅಂದುಕೊಂಡು ತಲೆಯಾಡಿಸಿದೆ. “ಹೋಗು, ಸ್ನಾನ ಮುಗಿಸಿ ಬಾ, ಊಟ ಮಾಡುವೆಯಂತೆ, ಕಾಫಿ ಬೇಡ ಅಯ್ತಾ ಇಷ್ಟು ಹೊತ್ತಲ್ಲಿ” ಎನ್ನುತ್ತಾ ಕನ್ನಡಕ ತೆಗೆದು ಮೇಲೆಳಹೊರಟಳು. “ಬೇಡ, ಸಧ್ಯಕ್ಕೆ ಹಸಿವಿಲ್ಲತ್ತೆ, ನೀನು ಕೂತ್ಕೊ, ಕಾಲೇಜಿಂದ ಬಂದು ಸ್ನಾನ ಮುಗಿಸಿಯೇ ಹೊರಟೆ, ಬಸ್ಸಲ್ಲಿ ಏನೂ ಆಯಾಸವಾಗಿಲ್ಲ, ಸ್ನಾನ ನಾಳೆ ಮಾಡ್ತೆ, ಆಗ್ದಾ?” ಎಂದು ಒಂದು ನಿಮಿಷ ತಡೆದು, “ಸುಧೀ?” ಎಂದು ತಡವರಿಸುತ್ತಾ ಕೇಳಿದಾಗ ಅವಳು ಏನೂ ಭಾವನೆಗಳನ್ನು ತೋರದೆ “ಬಾಣಂತಿ ಕೋಣೆಯಲ್ಲಿ” ಎಂದಳು. “ಬಾಣಂತಿ ಕೋಣೆ?” ಎಂದು ಆಶ್ಚರ್ಯದ ಉದ್ಗಾರ ಬಾಯಿಂದ ಗೊತ್ತಿಲ್ಲದೆಯೇ ಹೊರಬಿತ್ತು, ಮಾಧ್ವಿಯತ್ತೆ ತಲೆಯೆತ್ತಲೂ ಇಲ್ಲ, ಮಾತೂ ಆಡದೇ ಮತ್ತೆ ಕನ್ನಡಕ ಧರಿಸಿ ತನ್ನ ಕೆಲಸ ಮುಂದುವರಿಸಿದಳು.
ಎದ್ದು ಚಾವಡಿ ದಾಟಿ ನಡುಮನೆಗೆ ಬಂದರೆ ಮಾವ ಕತ್ತಲಲ್ಲಿ ಕೂತು ಮಣ ಮಣ ಮಾಡುತ್ತಿದ್ದದ್ದು ಕೇಳಿತು. “ಮಾವ, ನಾನು ಬಾಬು” ಎಂದೆ, ಉತ್ತರವಿಲ್ಲ. ಮತ್ತೆ ಚಾವಡಿ ಹಾದು, ಕೊಟ್ಟಿಗೆ ಮತ್ತು ಬಚ್ಚಲ ನಡುವೆಯಿದ್ದ ಬಾಣಂತಿ ಕೋಣೆಗೆ ನಡೆದೆ. ಬಾಗಿಲು ಸ್ವಲ್ಪವೇ ಸ್ವಲ್ಪ ತೆರೆದಿತ್ತು, ಜೀರೋ ಬಲ್ಬಿನ ಮಂದ ಬೆಳಕು ಹೊರಗೆ ಬರಲು ಸೆಣೆಸುತ್ತಿತ್ತು. ಮೆಲ್ಲಗೆ ಬಾಗಿಲು ದೂಡಿ ಕಾಲಿಟ್ಟು ಸುತ್ತ ನೋಡಿದರೆ, ಗೊರಬುಗಳು, ನೇಗಿಲು ಇತ್ಯಾದಿ, ಗದ್ದೆಗೆ ನೇಜಿ ನೆಡಲು, ಉಳಲು ಬೇಕಾದ ಎಲ್ಲಾ ವಸ್ತುಗಳಿದ್ದವು. “ಸುಧೀ” ಎಂದು ಮೆತ್ತಗೆ ಕರೆದರೆ, ಯಾವುದೋ ಮೂಲೆಯಿಂದ ಅವನ ಸ್ವರ ಕೇಳಿದಂತಾಯ್ತು. ಗೋಡೆ ತಡಕಾಡಿ ಲೈಟ್ ಸ್ವಿಚ್ ಆನ್ ಮಾಡಿದರೆ, ಮೂಲೆಯೊಂದರಲ್ಲಿ ಹಾಸಿಗೆಯ ಮೇಲೆ ಕೃಶಕಾಯ ಆಕೃತಿ ಮಲಗಿದೆ, ಸುಧೀ ಎಂದು ನಂಬಲಾರದಷ್ಟು ಬದಲಾಗಿದ್ದಾನೆ. ಮುಖಕ್ಕೆ ಯಾರೋ ರಪ್ ಎಂದು ಬಾರಿಸಿದಂತಾಯ್ತು. ಅಲ್ಲಿ ಕಾಣುತ್ತಿದ್ದದ್ದು, ಸುಮಾರು ಹದಿನೈದು ವರ್ಷಗಳಿಂದ ಭೀಮಸೇನ ಎಂದು ಕರೆಸಿಕೊಳ್ಳುತ್ತಿದ್ದ ಜೀವ ಎಂದು ನಂಬಲು ಆಗಲೇ ಇಲ್ಲ, ಕಣ್ಣಿಗೆ ಕಂಡದ್ದನ್ನು ಜೀರ್ಣಿಸಿಕೊಳ್ಳಲು ಒದ್ದಾಡಿದೆ. ಕಣ್ಣು ಮಂಜಾಗಿ, ಗಂಟಲು ಕಟ್ಟಿ ಬಂತು. ಹೇಗಿದ್ದ ಜೀವ, ಛೇ! ಮೊದಲೇ ಬಂದಿದ್ರೆ ಏನಾಗ್ತಿತ್ತು ನಂಗೆ? ಏಳು ವರ್ಷ ಕತ್ತೆ ಕಾಯ್ತಿದ್ದೆನಾ ಅನಿಸಿ ನನ್ನ ಮೇಲೆ ನನಗೇ ಸಿಟ್ಟು ಬಂತು. ಸ್ವಲ್ಪ ಸಾವರಿಸಿಕೊಳ್ಳುವಷ್ಟರಲ್ಲಿ ಸುಧೀ ತನ್ನ ನಿತ್ರಾಣ ದನಿಯಲ್ಲಿ “ಬಾಬಣ್ಣ, ನಿನ್ನ ನೋಡಬೇಕು ಅಂತ ತುಂಬಾ ಆಸೆಯಾಗಿತ್ತೋ”ಅಂದ. ಇಷ್ಟೂ ಹೊತ್ತು ಗಮನಕ್ಕೆ ಬಾರದ ಕಮಟು ವಾಸನೆ ಒಂದೇ ಸಲ ಮೂಗಿಗೆರಗಿತು. ಕೂರಲು ಜಾಗವೇ ಇರಲಿಲ್ಲ, ತಲೆ ಹತ್ತಿರ ಒಂದು ಚೊಂಬು, ಮತ್ತೊಂದು ಲೋಟವಿತ್ತು ಅಷ್ಟೆ. ಅಲ್ಲಿದ್ದ ಒಂದಿಷ್ಟು ಸಾಮಾನುಗಳನ್ನು ಬದಿಗೆ ಸರಿಸಿ, ಅವನ ಪಕ್ಕದಲ್ಲಿ ಹೋಗಿ ಕೂತೆ. ಕುರುಚಲು ಗಡ್ಡ, ಕೆದರಿದ್ದ ರಾಶಿ ತಲೆ ಕೂದಲು. ಅವನ ಕಟ್ಟಿಗೆಯ ಹಾಗಿದ್ದ ಕೈ ಹಿಡಿದು “ಹೇಗಿದ್ದೀ ಸುಧೀ?” ಎಂದರೆ, ಅವನು ನಿರ್ಭಾವುಕನಾಗಿ ಸುಮ್ಮಗೆ ದಿಟ್ಟಿಸಿದ. ಒಂದಿಷ್ಟು ಹೊತ್ತಾದ ಮೇಲೆ “ಗೊತ್ತಿಲ್ಲ ಬಾಬಣ್ಣ, ಓಬಯ್ಯ ಏನೋ ಮೂರೂ ಹೊತ್ತು ಅನ್ನ ಕಲೆಸಿ ತಿನ್ನಿಸುತ್ತಾನೆ, ಆ ಅಡಕೆಯ ಸೋಗೆ ಮೇಲೆ ಪಾಯಿಖಾನೆ ಆಗುತ್ತೆ. ನೀರು ತಲೆಯ ಹತ್ತಿರ ಉಂಟು, ಹಗಲು ರಾತ್ರಿ ಇಲ್ಲೇ ಬಿದ್ದಿರುವುದು. ಉರುವಾಗ್ತದೆ, ಹೊರಗೆ ಹೋಗಬೇಕು, ಗುಡ್ಡ ಸುತ್ತಬೇಕು ಅನಿಸ್ತದೆ” ಅಂದ. ಯಾವ ಮಾತೂ ಹೊಳೆಯಲಿಲ್ಲ, ತಲೆ ಬ್ಲಾಂಕ್ ಆಯ್ತು. ಸುಧೀ ಏಳಲು ಪ್ರಯತ್ನಿಸಿದ, ಗೋಡೆಗೆ ದಿಂಬು ಒರಗಿಸಿ, ಅವನನ್ನೆತ್ತಿ ಕೂರಿಸಿದೆ. “ನನ್ನ ಅಮ್ಮ ಎಂಬ ಮಹಾರಾಣಿಗೆ ಉಚ್ಚೆ, ಚಿಚ್ಚಿಗಳ ವಾಸನೆ ಮನೆಯಿಡೀ ಹರಡಿ ಊಟಕ್ಕೆ ಕೂತ್ರೆ ವಾಕರಿಕೆ ಬರ್ತದಂತೆ, ಅಪ್ಪನ ಕೆಲ್ಸ ಮಾಡಿಯೇ ಸಾಕಾಗಿರ್ತದೆ ಅವ್ಳಿಗೆ, ನನ್ನಿಂದ ಇನ್ನಷ್ಟು ಕಷ್ಟ ಯಾಕೆ, ನಾನೇ ಇಲ್ಲಿಗೆ ಹಾಸಿಗೆ ಹಿಡ್ಕೊಂಡು ಬಂದೆ, ಆರಾಮಾಗಿರ್ಲಿ ಅವ್ಳು ಅಲ್ಲಿ” ಎಂದ. ದನಿಯಲ್ಲಿನ ತಾತ್ಸಾರ, ಕಹಿ, ತಿರಸ್ಕಾರ ಅರ್ಥವಾಯಿತು. ನಾಲಿಗೆ ಹೊರಳಿಸುವ ಪ್ರಯತ್ನ ಮಾಡಿದರೂ ಶಬ್ದ ಹೊರಡಲಿಲ್ಲ. “ಜಯಾ ಕರೀತಾನೆ ಇರ್ತಾಳೆ, ಇಬ್ರೂ ಒಟ್ಟಿಗೆ ಆರಾಮಾಗಿರಬಹುದು, ಹೋದ್ರಾಯ್ತು ಅಲ್ಲಿಗೆ ಬೇಗ” ಎಂದವನು “ಇರ್ಲಿ ಬಾಬಣ್ಣ, ನೀ ಹೇಳು, ಕೇಶವ ಮಾಮ, ಗಿರ್ಜಾ ಮಾಮಿ ಹೇಗಿದ್ದಾರೆ? ನಂಗೇನಾದ್ರೂ ತಂದ್ಯಾ?” ಎಂದು ಸ್ವಲ್ಪ ಗೆಲುವಿನ ಸ್ವರದಲ್ಲಿ ಕೇಳಿದ.“ಹೌದು, ಅಮ್ಮ ಈವಾಗ ಆರಾಮಾಗಿದ್ದಾಳೆ, ನಿನ್ನ ತುಂಬಾ ನೆನಪಿಸಿಕೊಳ್ಳುತ್ತಾಳೆ, ಆಸ್ಪತ್ರೆಯಿಂದ ಬಂದು ಹದಿನೈದು ದಿನ ಆಯ್ತು, ಅವಳು ಎಲ್ಲೂ ಟ್ರಾವೆಲ್ ಮಾಡಬಾರದು ಒಂದು ತಿಂಗಳು, ಅದಕ್ಕೆ ಬಂದಿಲ್ಲ, ಈ ತಿಂಗಳ ಕೊನೆಗೆ ಬರ್ತಾಳೆ ನಿನ್ನ ನೋಡೋಕೆ, ಓಹ್! ಮರೆತೇ ಹೋಗಿತ್ತು, ತಡಿ” ಎಂದವನಿಗೆ ಹೇಳಿ, ಚಾವಡಿಗೆ ಓಡಿ ಬ್ಯಾಗಿನಲ್ಲಿದ್ದ, ತಿಂಡಿಯ ಚೀಲ, ಮತ್ತೆ ಒಂದಿಷ್ಟು ಪುಸ್ತಕಗಳನ್ನು ತೆಗೆದುಕೊಂಡೆ. ಅತ್ತೆ ಕಡೆ ನೋಡಬೇಕೆನಿಸಲಿಲ್ಲ. ತಿಂಡಿಯ ಚೀಲದಿಂದ ಡೈರಿ ಮಿಲ್ಕು, ಚಿಪ್ಸ್, ಹಣ್ಣುಗಳು ಮತ್ತು ಅವನಿಷ್ಟದ ಖಾರ ಶೇಂಗಾದ ಪ್ಯಾಕೆಟುಗಳನ್ನು ತೆಗೆಯುತ್ತಿದಂತೆ ಅವನ ಮುಖವರಳಿತು. ಮೊದಲಿನ ಪುಟ್ಟ ಭೀಮಸೇನ ಕಣ್ಮುಂದೆ ಬಂದು ನಕ್ಕಂತಾಯ್ತು. ಎಲ್ಲವನ್ನೂ ಬಾಚಿ ಅಪ್ಪಿಕೊಂಡ. ಡೈರಿಮಿಲ್ಕಿನ ರ್ಯಾಪರ್ ಬಿಚ್ಚಿ ತಿನ್ನುತ್ತಾ “ಇದೊಂದು ಮಾತ್ರ ಗಿರ್ಜಾ ಮಾಮಿ ಮರೆಯಲ್ಲ ನೋಡು, ನಂಗಿಪ್ಪತ್ತೆರಡು ವರ್ಷವಾದ್ರೂ ಅವರಿಗೆ ನಾನಿನ್ನೂ ಮಗೂನೇ” ಎಂದು ಪುಸ್ತಕಗಳಲ್ಲೊಂದನ್ನು ಎತ್ತಿಕೊಂಡು ನನ್ನ ಕಡೆಗೆ ಒಮ್ಮೆ ಧನ್ಯತೆಯಿಂದ ನೋಡಿ, “ನಾ ತಿಂತಾ ಓದ್ಲಾ ಬಾಬಣ್ಣ ?”ಎಂದಾಗ ಸರಿಯೆಂದು ನಕ್ಕು ಅಲ್ಲಿಂದೆದ್ದೆ. ಅದಷ್ಟನ್ನೂ ಗಿರ್ಜಾ ಮಾಮಿ ಕಳಿಸದ್ದಲ್ಲ, ನಾನೇ ತಂದೆ ಎನ್ನಲು ಮನಸ್ಸಾಗಲಿಲ್ಲ.
ಹೊರಬರುವಷ್ಟರಲ್ಲಿ ರಾಜನ್ ಗುರ್ರ್ ಎಂದಿದ್ದೂ, ಅದರ ಹತ್ರ ತುಳುವಿನಲ್ಲಿ ಮಾತಾಡಿದ ಓಬಯ್ಯನ ಸ್ವರವೂ, ಅವನ ಸ್ಲಿಪರ್ರಿನ ಶಬ್ದವೂ ಕೇಳಿ ನಂತರ ಅವನ ದೃಢಕಾಯವೂ ಕಾಣಿಸಿಕೊಂಡಿತು. “ಓಬಯ್ಯ…ಸೌಖ್ಯಾ ?”ಎಂದೆ.ಅವನೂ “ಹಾಂ” ಎಂದ. ಅವನು ಹತ್ತಿರ ಬರುವುದನ್ನೇ ಕಾದು, ಮೆಲು ದನಿಯಲ್ಲಿ, “ನಾಳೆ ಆ ಕೋಣೆ ಪೂರ್ತಿ ಸ್ವಚ್ಛ ಮಾಡಿ, ಎಲ್ಲಾ ಗದ್ದೆ, ನಾಟಿ ಸಾಮಾನುಗಳನ್ನು ಬಚ್ಚಲ ಮೇಲೆ ಅಟ್ಟಕ್ಕೆ ಹಾಕಿ, ಅಲ್ಲಿ ಸುಧೀಗೊಂದು ಮಂಚ ಹಾಕಲು ಜಾಗ ಆಗಬೇಕು” ಎಂದೆ. ನನ್ನ ದನಿಯಲ್ಲಿದ್ದ ಅಪ್ಪಣೆ ಕೇಳಿ ಅವನಿಗೆ ಆಶ್ಚರ್ಯವಾಗಿರಬೇಕು. “ಅಲ್ಲ, ಅಮ್ಮ…”ಎಂದು ಏನೋ ಮಾತನಾಡಲು ಹೊರಟ.ತಡೆದು, “ ಆ ಮಹೇಶನ ತಮ್ಮ ಉಜಿರೆಯಲ್ಲಿ ಓದೋದಲ್ವಾ, ನಾಳೆ ಅವ್ನು ಕಾಲೇಜಿಗೆ ಹೋಗಿ ಬರುವಾಗ ಒಂದು ಬೆಡ್ ಪಾನ್ ತರೋಕೆ ಹೇಳು” ಎಂದು ಸ್ವಲ್ಪ ದನಿ ಎತ್ತರಿಸಿಯೇ ಹೇಳಿದೆ. “ಸರಿ ಬಾಬಣ್ಣ” ಎಂದ ಅವನು.
ಕೊಟ್ಟಿಗೆಯಲ್ಲಿ ದನಗಳು ಮೆಲುಕು ಹಾಕುವ, ಅವುಗಳ ಕೊರಳಿನ ಘಂಟೆಯ ಸದ್ದು ಕೇಳುತ್ತಾ ಚಾವಡಿಯ ಮೆಟ್ಟಲ ಮೇಲೆ ಕೂತೆ. ದೊಡ್ಡ ತುಳಸಿಕಟ್ಟೆಯಲ್ಲಿ ದೀಪ ಗಾಳಿಗೆ ಓಲಾಡುತ್ತಾ ಉರಿಯುತ್ತಿತ್ತು. ಅದರ ಬೆಳಕಲ್ಲಿ ಕಟ್ಟೆಯ ಮೇಲೆ ಕೆತ್ತಿದ್ದ ಲಕ್ಷ್ಮಿ ಸುಂದರವಾಗಿ ಕಾಣುತ್ತಿದ್ದಳು. ದೂರದಲ್ಲಿ ಕಾಣುತ್ತಿದ್ದ ಬಾವಿಕಟ್ಟೆ, ಮಾವಿನ, ತೆಂಗಿನ, ಅಡಿಕೆ ಮರದ ಛಾಯೆಗಳು. ವರ್ಷಕ್ಕೆರಡು ಸರ್ತಿ ರಜೆಯಲ್ಲಿ ಇಲ್ಲಿಗೆ ಬಂದಾಗ ಆ ಬಾವಿಕಟ್ಟೆಯಲ್ಲಿ ಅಮ್ಮ ಬಟ್ಟೆ ಒಗೆಯುತ್ತಿದ್ದದ್ದು, ನಾನು, ಜಯ, ಸುಧೀ ಮೂರೂ ಜನ ಸುತ್ತ ಆಟವಾಡುತ್ತಾ ಅಮ್ಮನಿಗೆ ಉಪದ್ರ ಕೊಟ್ಟು ಬೈಸಿಕೊಳ್ಳುತ್ತಿದ್ದದ್ದು, ಪಕ್ಕದ ಹಳ್ಳದಲ್ಲಿ ಬೈರಾಸಿನಲ್ಲಿ ಮೀನು ಹಿಡಿಯುತ್ತಾ, ಗದ್ದೆ, ಗುಡ್ಡ, ತೋಟ, ನಾಗಬನ, ಕೆರೆದಂಡೆ, ಬೆಟ್ಟುಗದ್ದೆ ಸುತ್ತುತ್ತಿದ್ದದ್ದು ಎಲ್ಲವೂ ಕಣ್ಮುಂದೆ ಸಿನಿಮಾ ರೀಲಿನ ಥರಾ ಸಾಗಿ ಹೋಯ್ತು. ಜಯಾ ಅದೆಷ್ಟು ಚೆಂದವಿದ್ದಳು, ಎರಡು ಜಡೆ ಕಟ್ಟಿ ಕೆಂಪು ರಿಬ್ಬನ್ ಹಾಕಿ, ಹಣೆಗೆ ಲಾಲ್ ಗಂಧ ಇಟ್ಟರೆ ಮುದ್ದು ಮುದ್ದು ಬೊಂಬೆಯಂತೆ ಕಾಣುತ್ತಿದ್ದಳು. ಸುಧೀ ದೊಡ್ಡ ಜೀವ, ನಮ್ಮಿಬ್ರಿಗೂ ಅವನೇ ರಕ್ಷಕ, ಎಲ್ಲಾ ಕಿತಾಪತಿಗಳೂ ಅವನ ಸುಪರ್ದಿಯಲ್ಲೇ ನಡೆಯಬೇಕು. ತೆಂಗಿನ ಸೋಗೆಯಲ್ಲಿ ನಮ್ಮನ್ನು ಕೂರಿಸಿ ಎಳೆಯೋದೂ ಅವನೇ. ಗೇರು , ಕುಂಟಾಳ, ಮಾವಿನ ಹಣ್ಣು ಕೊಯ್ಯೋದೂ ಅವನೇ. ವಯಸ್ಸಿನಲ್ಲಿ ಜಯಾ ದೊಡ್ಡವಳು, ಆದರೆ ಸ್ವಲ್ಪ ಕಡ್ಡಿಯೇ, ಅವಳಿಗಿಂತ ಎರಡು ವರ್ಷಕ್ಕೆ ಚಿಕ್ಕವನಾದ ನಾನೂ ಹಾಗೇ. ನನಗಿಂತ ಒಂದು ವರ್ಷ ಚಿಕ್ಕವನಾದ ಸುಧೀಗೆ ಮಾತ್ರ ಭೀಮಬಲ. ಒಂದ್ಸಲ ಅದು ಹೇಗೋ ಅವನಿಗೆ ಕೆಸುವಿನ ಎಲೆ ತಿನ್ನಿಸಿ ಅಳುವಂತೆ ಮಾಡಿದ್ದೆ ಅಲ್ಲಾ, ಆಮೇಲೆ ಅಮ್ಮ ಬೈದ್ರೆ ಜಯಾ ಬಂದು ತಾ ಮಾಡಿದ್ದೆಂದು ಸುಳ್ಳು ಹೇಳಿದರೂ ಮಾಧ್ವಿಯತ್ತೆ ದಡ್ಡನೇನೋ ನೀನು ಅಂತ ಸುಧೀಗೆ ಹೊಡೆದಿದ್ದು…ಎಲ್ಲಾ ನೆನಪುಗಳೂ ತಾ ಮುಂದು ತಾ ಮುಂದು ಅಂತ ಬರತೊಡಗಿದವು, ಆದರೀಗ? ಜಯಾ ಇಲ್ಲ, ಸುಧೀ ಅವಳೆಡೆಗೇ ಜಾರಿ ಹೋಗುತ್ತಿದ್ದಾನೆ, ಅತ್ತೆ ಅವರದ್ದೇ ಲೋಕದ್ದಲ್ಲಿದ್ದರೆ, ಮಾಮ ಇದ್ದೂ ಇಲ್ಲದ ಹಾಗೆ… ಅಯ್ಯೋ ಈ ಮನೆಯ ಅವಸ್ಥೆಯೇ ಅನಿಸಿ ಅರಿವಿಲ್ಲದೆಯೇ ನಿಟ್ಟುಸಿರು ಹೊರಬಿತ್ತು.
ಅತ್ತೆ ಊಟಕ್ಕೆ ಕರೆದರು, ಅಷ್ಟು ದೊಡ್ಡ ಅಡುಗೆಮನೆಯಲ್ಲಿ ನಾವಿಬ್ಬರೇ, ಒಂದು ಕಾಲದಲ್ಲಿ ಯಾವಾಗಲೂ ತಿರುಗುತ್ತಿದ್ದ ದೊಡ್ಡ ಗ್ರೈಂಡರ್, ಎಲೆಯ ಸುತ್ತಮುತ್ತ ತಿರುಗುತ್ತಿದ್ದ ಚಾಮಿಯ ವಂಶದ ಕುಡಿಗಳು, ನಿಂಗೆ ದೊಡ್ಡ ಎಲೆ, ನಂಗೆ ಸಣ್ಣ ಎಲೆ ಎಂದು ಕೋಳಿ ಜಗಳವಾಡಿ ತಿನ್ನುತ್ತಿದ್ದ ಸುಧೀ, ಜಯಾ, ಹೆಚ್ಚು ಮಾತನಾಡದೇ ಸುಮ್ಮನೆ ದೊಡ್ಡ ದೊಡ್ಡ ತುತ್ತುಗಳನ್ನು ಇಳಿಸುತ್ತಿದ್ದ ಮಾಮ, ಅಡುಗೆಮನೆಯ ಹಿಂದಣ ಬಾಗಿಲಿನ ಹತ್ತಿರ ಬೆಳೆದಿದ್ದ ಬಿಂಬುಳಿ ಮರ ಮತ್ತದರ ಸುತ್ತ ತಿರುಗುತ್ತಿದ್ದ ಗಿರಿರಾಜ ಕೋಳಿ ಎಲ್ಲಾ ಕಣ್ಮುಂದೆ ಸರಿದವು. ಅಯಾಚಿತವಾಗಿ ತಲೆ ಎತ್ತಿ ನೋಡಿದರೆ, ತೂಗುತ್ತಿದ್ದ ಬೆಣ್ಣೆ ಮಡಕೆಗಳು ಕಾಣಲಿಲ್ಲ. ನನ್ನನ್ನೇ ನೋಡುತ್ತಿದ್ದ ಅತ್ತೆ ಅರ್ಥವಾದಂತೆ ತಲೆಯಲುಗಿಸಿದರು. ಕಪ್ಪು ಹಿಡಿದಿದ್ದ ಗೋಡೆಗಳನ್ನು ಬೆಳಗುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ ಬಲ್ಬ್ ಮಂಕಾಗಿತ್ತು. ಅರ್ಧಕ್ಕರ್ಧ ಅಡುಗೆ ಮನೆ ಖಾಲಿ, ಒಂದು ಮೂಲೆಯಲ್ಲಿ ಪಾತ್ರೆ ಪಗಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರು ಅತ್ತೆ. ನಾನು ತಿನ್ನುವ ಶಬ್ದ ನನಗೇ ಕೇಳಲು ಅಸಹನೆಯೆನಿಸಿ “ಮಾಮ ಮತ್ತೆ ಸುಧೀಗೆ ಊಟ?” ಎಂದು ಕೇಳಿದೆ. “ಇಬ್ಬರದ್ದು ಆಯ್ತು” ಎಂದರು ಅತ್ತೆ. ಹೊಂಚು ಹಾಕಿದ್ದ ಮೌನ ಮತ್ತೆ ಎರಗಿತು. ಊಟ ಮುಗಿಸಿ ಅವಳು ಮುಗಿಸುವವರೆಗೆ ಕಾದು, “ನಾಳೆ ಓಬಯ್ಯನಿಗೆ ಹೇಳಿ ಸುಧೀ ಮಲಗಲು ಅಲ್ಲೊಂದು ಮಂಚ ಹಾಕಿಸಿ ಆ ಕೋಣೆ ಸ್ವಲ್ಪ ಖಾಲಿ ಮಾಡಿಸ್ತೀನಿ” ಎಂದು, ಅವಳ ಉತ್ತರದ ನೀರೀಕ್ಷೆಯಿಲ್ಲದೆ ಹೊರನಡೆದೆ. ಚಾವಡಿಯ ಎಡಭಾಗಕ್ಕಿದ್ದ ಕೋಣೆಯ ಒಳಗೆ ಆಗಲೇ ಹಾಸಿಗೆ ಹಾಸಿತ್ತು. ಕೈಲಿ ಮೊಬೈಲ್ ಹಿಡಿದು ಕೂತೆ. ಮನೆಯ ವಿಷಾದ ತನ್ನಲ್ಲೂ ಇಳಿಯುತ್ತದೆಯೆನಿಸಿ ಜೋರಾಗಿ ತಲೆ ಕೊಡಹಿದೆ. ತಲೆದಿಂಬಿನ ಮೇಲೂ ಕಸೂತಿಯ ಹೂವಿನ ಚಿತ್ತಾರಗಳು, ಅದನ್ನು ಕೈಲೊಮ್ಮೆ ಸವರಿದೆ. ಸರಿಯಾಗಿ ನೋಡಿದರೆ, ದಿಂಬು ಮಾತ್ರವಲ್ಲ, ಹೊದಿಕೆಗಳು, ಮಂದ್ರಿ, ಕರ್ಟನ್ ಎಲ್ಲದರ ಮೇಲೆಯೂ ಹೂವು, ಬಳ್ಳಿಗಳ ಚಿತ್ತಾರಗಳು. ಸುಧೀ ರೂಮಲ್ಲಿದ್ದವುಗಳ ಮೇಲೂ ಇದೇ ಚಿತ್ತಾರವಿತ್ತು, ಅರೇ! ಅತ್ತೆ ಸೀರೆ, ರವಕೆಯಲ್ಲೂ ಇದ್ದದ್ದು ಇವೇ ಚಿತ್ತಾರಗಳು ಎಂದು ನೆನಪಾಯ್ತು. ಬಟ್ಟೆ ಅಂತ ಕಾಣಿಸಿದ್ದರ ಮೇಲೆಲ್ಲಾ ಕಸೂತಿಯ ಚಿತ್ತಾರಗಳೇ ತುಂಬಿಕೊಂಡಿದ್ದವು.
ಮೊಬೈಲಿನಲ್ಲಿ ಡೌನ್ಲೋಡ್ ಮಾಡಿಟ್ಟಿದ್ದ ವಿಡಿಯೋಗಳನ್ನು ನೋಡುತ್ತಾ ಅದ್ಯಾವಾಗ ನಿದ್ದೆ ಹೋದೆನೋ ತಿಳಿಯಲಿಲ್ಲ, ಎಚ್ಚರಿಸಿದ್ದು ಒಂದು ವಿಚಿತ್ರ ಕನಸು. ತಲೆಯ ಬಳಿಯಿದ್ದ ಚೆಂಬಿನ ನೀರು ಕುಡಿದು ಸಾವರಿಸಿಕೊಂಡು ಕತ್ತಲೆಯನ್ನೇ ನೋಡುತ್ತಾ ಕೂತೆ. ಕನಸಲ್ಲಿ ಜಯಾ, ನಾನು, ಸುಧೀ ಇದೇ ಮನೆಯ ಅಂಗಳದಲ್ಲಿ ಕುಣಿಯುತ್ತಿದ್ದೇವೆ, ಇದ್ದಕ್ಕಿದ್ದ ಹಾಗೆ ಮಾಮ ಎಲ್ಲಿಂದಲೋ ಓಡಿ ಬಂದು ನನ್ನ ಬಿಟ್ಟು ಅವರಿಬ್ಬರನ್ನು ಹಿಡಿದು ತಬ್ಬುವ ಪ್ರಯತ್ನ ಮಾಡುತ್ತಿದ್ದರೆ, ಅತ್ತೆ ಇಬ್ಬರನ್ನೂ ತನ್ನ ಎಂಬ್ರಾಯ್ಡರಿ ರಿಂಗುಗಳ ಮಧ್ಯೆ ಬಂಧಿಸಿ ರೇಶಿಮೆಯ ದಾರಗಳಿಂದ ಹೊಲೆಯುತ್ತಿದ್ದಾರೆ. ಬಿಡಿಸಲು ಹೋದ ನನ್ನನ್ನು ದೊಡ್ಡ ಕೆಂಪು ಕಣ್ಣುಗಳಿಂದ ದುರುಗಟ್ಟಿ ತೆಂಗಿನ ಮರದಷ್ಟು ದೊಡ್ಡ ಸೂಜಿಯಲ್ಲಿ ಚುಚ್ಚಲು ಬರುತ್ತಿದ್ದಾರೆ. ಮಾಮ ಕಿರುಚುತ್ತಾ ಅತ್ತೆಯನ್ನು ದೂಡಲು ಪ್ರಯತ್ನಿಸುತ್ತಿದ್ದಾರೆ, ಕೊನೆಗೆ ಅತ್ತೆ ಬೆಳೆದು ಹೆಮ್ಮರವಾಗಿದ್ದಾಳೆ. ಮಕ್ಕಳಿಬ್ಬರೂ ಕಸೂತಿಯ ಹೂವುಗಳಾಗಿ ಬದಲಾಗುತ್ತಾ ನೋವಿನಲ್ಲಿ ಕಿರುಚುತ್ತಿದ್ದಾರೆ. ಅಬ್ಬಾ! ಎಂಥಾ ಕನಸು! ಭಯಕ್ಕೆ ಇಡೀ ಮೈ ಬೆವೆತು ಹೋಗಿತ್ತು. ಮೊಬೈಲ್ ಸ್ಕ್ರೀನ್ ಆನ್ ಮಾಡಿ ನೋಡಿದರೆ ನಾಲ್ಕೂವರೆ, ಇನ್ನು ನಿದ್ದೆ ಹತ್ತಿದ ಹಾಗೆ ಎಂದುಕೊಂಡು ಹೊರಬಂದು ಚಾವಡಿಯ ಕಡೆ ನಡೆದೆ. ಮಾಮನ ಮಣ ಮಣ ಕೇಳುತ್ತಲೇ ಇತ್ತು. ಮಾಧ್ವಿಯತ್ತೆ ಎಮರ್ಜನ್ಸಿ ಲ್ಯಾಂಪಿನ ಹತ್ತಿರಕ್ಕೆ ಕೂತು ದಾರವನ್ನು ಎಳೆಯುತ್ತಲೇ ಇದ್ದಳು.ಆಶ್ಚರ್ಯವಾಗಿ ಹತ್ತಿರ ಹೋಗಿ “ಅತ್ತೆ ನಿದ್ದೆನೇ ಮಾಡುದಿಲ್ವಾ ನೀನು?” ಕೇಳಿದೆ. ಒಮ್ಮೆಗೆ ಬೆಚ್ಚಿಬಿದ್ದು ನೋಡಿದಳು, ಅವಳ ಕಣ್ಣುಗಳಲ್ಲಿ ಚೂರೂ ನಿದ್ದೆಯಿರಲಿಲ್ಲ. “ನೀನ್ಯಾಕೆ ಇಷ್ಟು ಬೇಗ ಎದ್ದೆ?, ನೀರು ಇಟ್ಟಿದ್ನಲ್ಲಾ, ಎಂಥ ಬೇಕಿತ್ತು?” ಎಂದು ಕೇಳಿದಳು. ಇವಾಗಷ್ಟೇ ಕನಸಲ್ಲಿ ರಾಕ್ಷಸಿಯಾಗಿದ್ದಳಲ್ಲ, ಹೇಗೆ ಹೀಗಾದಳು ಅನಿಸಿ ಕೂಡಲೇ ಇವಳ ಈ ಪ್ರೀತಿ, ಅಂತಃಕರಣ ಸುಧೀ ಮೇಲೆ, ಅದೂ ಅವನು ಈ ಸ್ಥಿತಿಯಲ್ಲಿದ್ದಾಗಲೂ ಹರಿದಿಲ್ಲವಲ್ಲಾ ಅನಿಸಿತು. ಇಲ್ಲ ಅಂತ ತಲೆಯಾಡಿಸಿ, ಅಲ್ಲೇ ಇದ್ದ ಈಸೀಚೇರಲ್ಲಿ ಮೈ ಚೆಲ್ಲಿದೆ.
ಬಂದಾಗಿಂದ ಅಪ್ಪ ಅಮ್ಮನ ಬಗ್ಗೆ ಏನೂ ಕೇಳದವಳು, ಇದ್ದಕ್ಕಿದ ಹಾಗೆ, “ಅಣ್ಣ ನನ್ನ ನೆನಪಿಸ್ಕೊತಾನಾ? ಅತ್ತಿಗೆ ಯಾವತ್ತಾದ್ರೂ ಮಹೇಶನಿಗೆ ಫೋನ್ ಮಾಡಿ ಕೇಳ್ತಾಳಂತೆ” ಎಂದಳು. �“ಮೊಬೈಲಾದ್ರೂ ತೊಗೋ ಅತ್ತೆ, ಅಮ್ಮ, ಅಪ್ಪನ ಹತ್ತಿರ ಮಾತಾಡಬಹುದು, ಸುಧೀಗೂ ಟೈಮ್ ಪಾಸಾಗುತ್ತೆ” ಎಂದರೆ ಕೇಳದವಳಂತೆ ಸುತ್ತಣ ತಟ್ಟೆಗಳಲ್ಲಿ ಏನೋ ಹುಡುಕಲಾರಂಭಿಸಿದಳು. �ಸ್ವಲ್ಪ ಹೊತ್ತು ಬಿಟ್ಟು ಸ್ವಗತವೆಂಬಂತೆ “ಜಯಾ ಹೋದಾಗ ಅಣ್ಣ ಅತ್ತಿಗೆ ಬಂದಿದ್ದು, ನೀನೂ ಕಾಲೇಜು ಸೇರಿದ ಮೇಲೆ ಬಂದೇ ಇಲ್ಲ.” ಎಂದಳು. �ಅಷ್ಟರಲ್ಲಿ ಮಾಮ ಜೋರಾಗಿ “ಮಾಧ್ವೀ, ಎಲ್ಲೋದ್ಯೆ, ನನ್ನ ಬಿಟ್ಟು ತಿರುಗಲು ಹೋಗ್ತಾಳೆ, ಯಾರೊಟ್ಟಿಗೆ ಸುತ್ತಿ ಹಾಳಾಗಿದ್ಯೇ? ಅಯ್ಯೋ ಬಾರೆ ಇಲ್ಲಿ, ನಂಗೇನೋ ಆಗ್ತಿದೆ” ಎಂದು ಬೊಬ್ಬೆ ಹಾಕಿದರು. �ನಂಗೆ ಗಾಭರಿಯಾಗಿ ಏಳಲು ಹೊರಟರೆ, “ಸುಮ್ನಿರು ಬಾಬು, ಆ ಮನುಷ್ಯನದ್ದು ಇದ್ದಿದ್ದೇ, ನಾ ಹದಿನೆಂಟು ವರ್ಷದವಳಿದ್ದಾಗ್ಲೇ ಓಡಿ ಹೋಗಲಿಲ್ಲ, ಇವಾಗೆಲ್ಲಿ ಹೋಗ್ಲಿ?” ಎಂದವಳು ಮಾಮನ್ನುದ್ದೇಶಿಸಿ, “ಒಂದ್ಸಲ ಸುಮ್ನಿರಕ್ಕಾಗ್ದಾ? ಇಲ್ಲೇ ಇದ್ದೇನೆ, ಹೊರಕಡೆ ಹೋಗೋ ಟೈಮಾಗಿಲ್ಲ, ಬಿದ್ಕೊಳ್ಳಿ ” ಎಂದು ದಪ್ಪ ಸ್ವರದಲ್ಲಿ ಆದೇಶಿಸಿದಳು. �“ರಕ್ತನೇ ಸರಿಯಿಲ್ಲ, ಮನುಷ್ಯ ಹೇಗೆ ಸರಿಯಿರೋದು?, ಇವನಮ್ಮ, ಆ ತಾಟಗಿತ್ತಿ ಬದುಕಿರೋವರೆಗೂ ನನ್ನ ಹುರಿದು ಮುಕ್ಕಿದಳು, ಈ ಮನುಷ್ಯ ಜೀವಂತ ಹೆಣ ಮಾಡಿದ, ಇನ್ನೇನು ಉಳೀತು, ಹಾಗೇ ಆಗಬೇಕು, ಅಲ್ಲಾದ್ರೂ ಆರಾಮಾಗಿರ್ಲಿ. ಅದೊಂದು ಪಾಪದ ಕೂಸು, ಲಗಾಡಿ ತೆಗೆದ್ರು ಎಲ್ರೂ ಸೇರಿಕೊಂಡು.” ಎಂದು ಪಿತ್ತ ನೆತ್ತಿಗೇರಿದವಳಂತೆ ಬಡಬಡಿಸಿದಳು. �“ಅತ್ತೆ, ಸುಮ್ನಿರು” ಎಂದು ಪದೇ ಪದೇ ಹೇಳಿದ ಮೇಲೆ ತೆಪ್ಪಗಾದಳು. �
ಆ ದಿನವನ್ನಾದರೂ ಹೇಗೆ ಮರೆಯೋದು? ಆಫೀಸಿನಿಂದ ನೇರ ಸ್ಕೂಲಿಗೆ ಬಂದು ಅಪ್ಪ ನನ್ನನ್ನು ಕರ್ಕೊಂಡು ಸೀದಾ ಮನೆಗೆ ಹೋಗಿ ಅಮ್ಮನನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದರು. ಮೊದಲು ಏನೂ ಅರ್ಥವಾಗದ ಅಮ್ಮ ‘ಏನು ಅಂತ ಹೇಳಿದ್ರೆ ಮಾತ್ರ ಹೊರಡ್ತೀನಿ’ ರಚ್ಚೆ ಹಿಡಿದು ಕೂತಿದ್ದಳು. �ಅಪ್ಪ “ಬಾಬು, ಇಲ್ಲೇ ಇದ್ದಾನೆ ಅಮೇಲೆ ಹೇಳ್ತೀನಿ ಗಿರ್ಜಾ” ಎಂದರೂ ಅವಳು ಕೇಳದೇ ಕೂತಿದ್ದು… ಕೊನೆಗೆ ತಡೆಯಲಾಗದೇ “ಆ ಪ್ರಾಣಿ ಮಗು ಜೀವ ತೆಗೆದೇ ಬಿಡ್ತೇ” ಎಂದು ಕಿರುಚಿದ್ದೂ, ಅಮ್ಮನಿಗೆ ಅರ್ಥವಾಗದಾಗ, “ಭಾವ ಮತ್ತೆ ಅವರಮ್ಮ ಸೇರಿ ಆ ಜಯಾನ ಕೊಂದುಬಿಟ್ರೇ…” ಎಂದಿದ್ದರು. ಅಮ್ಮ ಕುಸಿದು ಕೂತವಳು ಅದೆಷ್ಟೋ ಹೊತ್ತು ಮಾತೇ ಆಡಲಿಲ್ಲ. �ಏನೂ ತೋಚದೇ, ಅರ್ಥವಾಗದೇ ಕೂತ ನನ್ನನ್ನು ಅಪ್ಪ “ಹೊರಡು ಬಾಬು, ನಿನ್ನ ಬಟ್ಟೆ ಬ್ಯಾಗಲ್ಲಿ ಹಾಕ್ಕೋ” ಎಂದಿದ್ದರು. ಜಯಾ ಸತ್ತು ಹೋದ್ಲು ಅಂದ್ರೆ ಏನು? ಎಲ್ಲಿಗೆ ಹೋಗ್ತಾಳೆ ಅವಳು? ಸುಧೀ ಏನು ಮಾಡ್ತಾನೆ ಇನ್ನು?ಮಾಧ್ವಿಯತ್ತೆ ಏನು ಮಾಡ್ತಾಳೆ…ತಲೆ ತುಂಬಾ ಪ್ರಶ್ನೆಗಳಿದ್ದವು ಆ ದಿನ. ಅತ್ತೆಯೂರು ಮುಟ್ಟಿದಾಗ ಅತ್ತೆ ಅಕ್ಷರಶಃ ಹುಚ್ಚಿಯಾಗಿದ್ದಳು. ಅಮ್ಮ ಹೋಗಿ ಅಪ್ಪಿಕೊಂಡರೂ ಒಂದೂ ಹನಿ ಕಣ್ಣೀರು ಹಾಕದವಳು, ಜಯಾಳನ್ನು ಅಂತಿಮ ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಮಾತ್ರ ಮಾಮನಿಗೆ ಮುಟ್ಟಲು ಬಿಡದೇ, ಹುಲಿಯಂತೆ ಅಬ್ಬರಿಸಿ ಹಾರಾಡಿದ್ದಳು. ಕೊನೆಗೆ ಅಪ್ಪನೇ ಬೆಂಕಿಕೊಟ್ಟಿದ್ದರು. ಜಯಾ ಮುಖ ಅಚ್ಚಳಿಯದೇ ನನ್ನ ಎದೆಯಲ್ಲಿ ಉಳಿದುಬಿಟ್ಟಿತ್ತು. ಮೈ ಹೊಡೆದೇಟುಗಳಿಂದ ನೀಲಿಗಟ್ಟಿ ಹೋಗಿತ್ತು, ಅಷ್ಟು ಸಣ್ಣವನಾದ ನನಗೂ ಜಯಾ ಮಾಯದ ನೋವಾಗಿ ಉಳಿದಿರಬೇಕಾದರೆ ಅತ್ತೆ ಅದು ಹೇಗೆ ತಡೆದುಕೊಂಡಿರಬೇಕು. �ಅಮ್ಮ ಅಪ್ಪನೊಂದಿಗೆ ಜಗಳವಾದಾಗೆಲ್ಲಾ ಅತ್ತೆ ಬಗ್ಗೆ ಬೈಯುತ್ತಾಳೆ. “ಹೇಡಿ ನೀವು, ಯಾರೋ ಅಯೋಗ್ಯರು ಬರೆದ ಹೆಸರಿಲ್ಲದ ಪತ್ರಗಳು ಬಂದ ಕೂಡಲೇ, ಓದು ನಿಲ್ಲಿಸಿ ಆ ರಾಕ್ಷಸನಿಗೆ ನಿಮ್ಮ ತಂಗಿಯನ್ನು ಕಟ್ಟಿ ಅವಳ ಜೀವನ ಬಲಿ ತೊಗೊಂಡ್ರಿ, ಅದ್ರ ಹೊಟ್ಟೆಯಲ್ಲಿ ಹುಟ್ಟಿದವಕ್ಕೂ ಗ್ರಹಚಾರ ತಪ್ಪಿಲ್ಲ” ಎನ್ನುತ್ತಾ ಸಂಕಟಪಟ್ಟು ಅಳುತ್ತಾಳೆ. �ಅಪ್ಪ ಸುಮ್ಮನೇ ಹೊರಹೋಗುತ್ತಾರೆ.
ಅಮ್ಮ ಹೇಳಿದ ಮೇಲೆ ತಿಳಿದಿದ್ದು ಇಷ್ಟು, ತುಂಬಾ ಚೆಂದದ ಮಾಧ್ವಿಯತ್ತೆ ಕಾಲೇಜು ಮೆಟ್ಟಿಲು ಹತ್ತಿದ್ದೇ ತಡ ಮನೆಗೆ ಪತ್ರಗಳು ಬರಲಾರಂಭಿಸಿದ್ದವು. ಹಾಸಿಗೆ ಹಿಡಿದಿದ್ದ ಅಜ್ಜ ಅಜ್ಜಿಯದ್ದು ಒಂದೇ ವರಾತ, ಅವಳಿಗೆ ಮದ್ವೆ ಮಾಡಿಬಿಡು ಅಂತ. ಕೊನೆಗೆ ಸುಮಾರು ೨೦ ವರ್ಷ ದೊಡ್ಡವರಾಗಿದ್ದ ಮಾವನಿಗೆ ಅತ್ತೆಯನ್ನು ಮದುವೆ ಮಾಡಿಕೊಟ್ಟಿದ್ದರು ಅಪ್ಪ. ಒಂಚೂರು ಓದು, ನಯನಾಜೂಕಿನ ಗಂಧ ಗಾಳಿಯಿಲ್ಲದ ಗಂಡ, ಮಾತು ಮಾತಿಗೂ ಹುರಿದು ಮುಕ್ಕುತ್ತಿದ್ದ ಅತ್ತೆಯೊಡನೆ ಮೂಕಪಶುವಿನಂತೆ ಜೀವನ ಸಾಗಿಸುತ್ತಿದ್ದ ಮಾಧವಿ ಜಯಾ ಹುಟ್ಟಿದ ಮೇಲೆ ಬದುಕೋ ಪ್ರಯತ್ನ ಒಂದಿಷ್ಟು ಮಾಡಲಾರಂಭಿಸಿದ್ದಳು. ಆದರೆ ಅವಳತ್ತೆ ಮತ್ತು ಗಂಡನಿಗೆ ಅದೂ ಸಮ್ಮತವಿರಲಿಲ್ಲ, ಹೆಣ್ಣು ಮಗುವೆಂದು ಅದನ್ನೂ, ಹೆತ್ತ ಅವಳನ್ನೂ ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೂ ಬೈಗುಳಗಳಲ್ಲೇ ಮುಳುಗೇಳಿಸುತ್ತಿದ್ದರು. ನಂತರ ಹುಟ್ಟಿದ ಸುಧೀ ಜಯಾಳಿಗಿಂತ ಸ್ವಲ್ಪ ಅದೃಷ್ಟವಂತನಾದರೂ ಏಟುಗಳು ಇಬ್ಬರಿಗೂ ಸಮನಾಗಿ ಬೀಳುತ್ತಿದ್ದವು. ಅಮ್ಮ ಇಲ್ಲಿಗೆ ಬಂದಾಗೆಲ್ಲಾ ಆ ಅಜ್ಜಿಗೆ, ಮಾವನಿಗೆ ಸೂಕ್ಷ್ಮವಾಗಿ ಏನಾದರೂ ಹೇಳುವ ಪ್ರಯತ್ನ ಮಾಡುತ್ತಿದ್ದದ್ದು ಇನ್ನೂ ನೆನಪಿದೆ. ಆದರೆ ಅದರಿಂದ ಪರಿಸ್ಥಿತಿ ಇನ್ನೂ ಕೆಡುತ್ತಿತ್ತು ಎಂದು ಅಮ್ಮ ಸುಮ್ಮಗಾಗುತ್ತಿದ್ದಳು.
ಆ ಅಜ್ಜಿಯ ಹತ್ತಿರವಿದ್ದ ಬೆಳ್ಳಿಯ ಎಲೆಯಡಿಕೆಯ ಸಂಚಿಯನ್ನು ತರುವಾಗ ಎತ್ತಿ ಹಾಕಿ ನಜ್ಜುಗುಜ್ಜು ಮಾಡಿದ್ದಾಳೆಂಬುದು ಒಂದು ನೆಪ, ಅದೆಷ್ಟು ಹೊಡೆದರೋ, ಎಲ್ಲಿಗೆ ಏಟು ಬಿತ್ತೋ ಪುಟ್ಟ ಜಯಾ ಉಸಿರಿಲ್ಲದೇ ಮಲಗಿದ್ದಳು. ಕೆರೆಗೆ ಜಾರಿಬಿದ್ದಳು ಅಂದೇನೋ ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರು ಮಾಮ. ಸುಧೀ ಮಂಕಾಗಿ ಕೂತಿದ್ದ, ಅವನ ಹತ್ತಿರ ಏನು ಮಾತಾಡಬೇಕು ಗೊತ್ತಿಲ್ಲದೇ ನಾನೂ ಸುಮ್ಮನೇ ಕೂತಿದ್ದೆ. ಇಲ್ಲಿದ್ದ ಒಂದು ವಾರದಲ್ಲಿ ಅತ್ತೆ ಸುಧೀಯ ಬಳಿ ಒಂದೂ ಮಾತನಾಡಿರಲಿಲ್ಲ ಎಂದು ಮೊದಲು ಗಮನಿಸಿದ್ದು ಅಮ್ಮ, ಸುಧೀಯನ್ನು ಕರೆದುಕೊಂಡು ಬಂದು ಊಟ ಮಾಡಿಸು, ಮಲಗಿಸು ಎಂದು ಹೇಳಿದಾಗೆಲ್ಲಾ ಅತ್ತೆ ಕಿವುಡಾಗಿದ್ದಳು. ಪುಟ್ಟ ಸುಧೀ ಆ ಕಡೆ ತಾಯಿಯೂ ಇಲ್ಲದೇ, ಸದಾ ಬೆನ್ನಿಗಿದ್ದ ಅಕ್ಕನೂ ಇಲ್ಲದೇ ಕಂಗಾಲಾಗಿದ್ದ. �ಹೊರಡುವ ದಿನ “ಮಾಧ್ವಿ, ಇನ್ನೊಂದು ಮಗುವಿದೆ ನಿಂಗೆ, ಸ್ವಲ್ಪ ಗಟ್ಟಿಯಾಗು, ಅದಕ್ಕಾಗಿಯಾದರೂ ಬದುಕಬೇಕಲ್ವೇ” ಎಂದಾಗಲೂ ಅತ್ತೆ ತುಟಿ ಬಿಚ್ಚಿರಲೇ ಇಲ್ಲ. �ಕೊನೆಗೆ ಅಮ್ಮ ಅವನನ್ನು ಕರ್ಕೊಂಡು ಬಂದು ಒಂದಿಷ್ಟು ತಿಂಗಳು ನಮ್ಮೊಟ್ಟಿಗೇ ಇಟ್ಟುಕೊಂಡಿದ್ದೂ ಆಗಿತ್ತು. ವಾಪಾಸು ಬಿಡಲು ಬಂದದ್ದು ಆ ಅಜ್ಜಿ ತೀರಿಕೊಂಡಾಗ. ಅಷ್ಟು ನರಕಯಾತನೆ ಕೊಟ್ಟ ಮುದುಕಿ ಅದೆಷ್ಟು ಆರಾಮಾಗಿ ಸತ್ತು ಹೋದಳು ಎಂದು ಗದ್ದೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ಹೇಳುತ್ತಿದ್ದದ್ದೂ ನೆನಪಿದೆ. ಆಮೇಲೆ ಅಪ್ಪ ಬಂದೇ ಇಲ್ಲ ಇಲ್ಲಿಗೆ, ಅಮ್ಮ ಮಾತ್ರ ನನ್ನ ಕಟ್ಟಿಕೊಂಡು ಆಗಾಗ ಬರುತ್ತಿದ್ದಳು. ಜಯಾ ಹೋದ ಮೇಲೆ, ಮಾಧ್ವಿಯತ್ತೆ ಮೊದಲಿನ ಹಾಗೆ ಆಗಲೇ ಇಲ್ಲ, ಸುಧೀ ಈ ಕಡೆ ತಂದೆ-ತಾಯಿ ಇದ್ದೂ ಅನಾಥನೇ ಆಗಿ ಹೋದ. ಗೊತ್ತಿದ್ದೋ ಗೊತ್ತಿಲ್ಲದೆಯೇ ಅತ್ತೆ ಎರಡೂ ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡಳೇನೋ ಎಂದು ಅಮ್ಮ ಹೇಳುತ್ತಿದ್ದಳು. ಅವನಿಗೆ ನಾವು ಮೂವರೇ ಪ್ರಪಂಚದಲ್ಲಿದ್ದ ಬಂಧುಗಳು. ಅದೆಷ್ಟೋ ಸಲ ಈ ಮನುಷ್ಯನನ್ನು ಬಿಟ್ಟು ಬಾ ಅಂತಲೋ, ಈ ಮಗುವನ್ನು ನನಗಾದರೋ ಕೊಟ್ಟುಬಿಡು ಅಂತಲೋ ಅಮ್ಮ ಜಗಳವಾಡಿದ್ದೂ ಇದೆ. ಅದ್ಯಾವುದೂ ಅತ್ತೆ ಮಾಡಲಿಲ್ಲ. ಜಯಾ ಹೋದ ಮೇಲೆ ಅತ್ತೆ ಮನೆ ಬಿಟ್ಟು ಎಲ್ಲಿಗೂ ಹೋಗದೆ ಸ್ವಯಂ ಗೃಹಬಂಧನ ಶಿಕ್ಷೆ ಕೊಟ್ಟುಕೊಂಡಿದ್ದಳು. ಎಷ್ಟೇ ಬೈದುಕೊಂಡಾದರೂ ಅಮ್ಮ ನನ್ನನ್ನು ಕರ್ಕೊಂಡು ಬರುವುದನ್ನು ಬಿಡಲಿಲ್ಲ, ಪ್ರತೀಸಲ ಸುಧೀಗೆ ಇಷ್ಟವಾಗುವ ಎಲ್ಲವನ್ನೂ ಹೊತ್ತು ತರುತ್ತಿದ್ದಳು.
ಕಾಲೇಜಿನ ಮೆಟ್ಟಲು ಹತ್ತಿ ಎರಡು ವರ್ಷವಾಗುವಷ್ಟರಲ್ಲಿ ಸುಧೀಗೆ ಕ್ಯಾನ್ಸರ್ ಅಂತೆ ಅಂತ ಅಮ್ಮ ಹೇಳಿದಾಗ ಹುಚ್ಚು ಹಿಡಿದಂತಾಗಿತ್ತು. ಮಹೇಶನೊಟ್ಟಿಗೆ ಅವನೇ ಜಿಲ್ಲಾಸ್ಪತ್ರೆಗೆ ಹೋಗಿ ಬಂದಿದ್ದನಂತೆ, ಏನೂ ಮಾಡಲಾಗಲ್ಲ ಅಂತ ವೈದ್ಯರೂ ಕೈ ಚೆಲ್ಲಿದ್ದರಂತೆ. ಜಯಾ ಮಾಯದ ಗಾಯವಾಗಿ ಉಳಿದು ಹೋಗಿದ್ದಳು, ಈವಾಗ ಮತ್ತೊಂದು ಗಾಯ ಮಾಡಿಕೊಳ್ಳಲು ಹೆದರಿ ಸ್ನೇಹಿತರು, ಕಾಲೇಜು, ಗೇಮು, ಮೊಬೈಲ್ ಅಂತೆಲ್ಲಾ ಮುಳುಗಿ ನನ್ನ ಪ್ರಪಂಚವನ್ನು ಕಿರಿದುಗೊಳಿಸಿಕೊಂಡಿದ್ದೆ. ಇಲ್ಲಿಗೆ ಬರಬೇಕು ಅನಿಸಿರಲಿಲ್ಲ. ಅಮ್ಮ ಅದೆಷ್ಟು ಸಲ ಗೋಗೆರೆದಿದ್ದಳು, ಹೋಗಿ ನೋಡಿ ಬರೋಣ ಬಾರೋ ಅಂತ, ಉಹೂಂ, ಧೈರ್ಯವಾಗುತ್ತಿರಲಿಲ್ಲ. ಈವಾಗ ಹಂಗಾಮಿ ಶಿಕ್ಷಕನಾಗಿ ಓದಿದ ಕಾಲೇಜಿನಲ್ಲೇ ಕೆಲಸಕ್ಕೆ ಸೇರಿಕೊಂಡು, ಕಂಡ ಕಂಡ ವಿದ್ಯಾರ್ಥಿಗಳ ಮುಖದಲ್ಲೆಲ್ಲಾ ಸುಧೀ, ಜಯಾರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದೆ. ಮಾಧ್ವಿಯತ್ತೆಯ ನೆನಪೂ ಸದಾ ಬರುತ್ತಿತ್ತು. ಕನಿಷ್ಠ ಆರು ಕುಟುಂಬಗಳಿಗೆ ಹಂಚುವಷ್ಟು ನೋವನ್ನು ಮಾಧ್ವಿಯತ್ತೆ ಒಬ್ಬಳಿಗೇ ದೇವರು ಸುರಿದಿದ್ದಾನೆ ಎಂದು ಅಮ್ಮ ಅಲವತ್ತುಕೊಳ್ಳುತ್ತಿದ್ದದ್ದು ನಿಜ ಅನಿಸುತ್ತಿತ್ತು. ಅವಳ ಮೇಲೆ ಯಾಕಿಷ್ಟು ದ್ವೇಷ ವಿಧಿಗೆ? ಅವಳೋ ಆ ವಿಧಿಯ ಮೇಲೆಯೇ ಯುದ್ಧ ಸಾರುತ್ತಾ ಬದುಕುವ ಸೋಗು ಹಾಕುತ್ತಿದ್ದಾಳೆ. ತನ್ನದು ಅಂತ ಉಳಿದ ಒಂದು ಜೀವವನ್ನೂ ಅಪ್ಪಿಕೊಂಡು ಹೇಗೋ ಬದುಕಬಹುದಿತ್ತು. ಅದೂ ಮಾಡ್ತಿಲ್ಲ. ಅಮ್ಮನಿಗೆ ಹೃದಯ ಶಸ್ತ್ರಚಿಕಿತ್ಸೆಯಾದಾಗ ಅವಳು ಕೇಳಿದ್ದು ಒಂದೇ. �“ ನಿಮ್ಮಪ್ಪ ಹೇಡಿ ಬಾಬು, ಅವಳನ್ನು, ಆ ಹುಡುಗನನ್ನ ಎದುರಿಸೋ ಧೈರ್ಯ ಅವರಿಗಿಲ್ಲ, ನೀನಾದ್ರೂ ಸುಧೀನ ಇಲ್ಲಿಗೆ ಕರ್ಕೊಂಡು ಬಾರೋ, ಅವಳು ಮರಗಟ್ಟಿ ಜೀವನ ಲಗಾಡಿ ತೆಗೆದುಕೊಂಡಳು, ಅವನನ್ನ ಇಲ್ಲಿ ಹಾಸ್ಪಿಟಲ್ಲಾಗಾದ್ರೂ ತೋರಿಸೋಣ” ಅಂತ. �ಅಪ್ಪನ, ಅತ್ತೆಯ ಮರಗಟ್ಟುವಿಕೆ ಕಾಯಿಲೆ ನಂಗೂ ಹರಡಿತ್ತು.
ಅಮ್ಮನಿಗೆ ಸ್ವಲ್ಪ ಆರಾಮಾದ ಮೇಲೆ ಕೊಟ್ಟ ಮಾತಿನಂತೆ ಹೊರಟಾಗ ಆಕೆಗೆ ಅದೆಷ್ಟು ಖುಷಿಯಾಗಿತ್ತು. ಅಪ್ಪನೂ ಥ್ಯಾಂಕ್ಸ್ ಅಂತ ಕಣ್ಣಲ್ಲೇ ಹೇಳಿದಂತೆ ಅನಿಸಿತ್ತಲ್ಲಾ? ಕೂತಲ್ಲೇ ಜೋಂಪು ಹತ್ತಿದಂತಾಯ್ತು. ಎಚ್ಚರವಾದಾಗ ಬೆಳಕು ಹರಿದಿತ್ತು. ಎಮರ್ಜೆನ್ಸಿ ಲ್ಯಾಂಪ್ ಈಗ ಉರಿಯುತ್ತಿರಲಿಲ್ಲ, ಅತ್ತೆ ಕಾಣಲಿಲ್ಲ, ಅಡುಗೆ ಮನೆಯಲ್ಲಿರಬೇಕು. ಬಚ್ಚಲ ಹತ್ತಿರ ಓಬಯ್ಯನ ಸ್ವರ ಕೇಳಿತು. ಸುಧೀಗೆ ಬೆಳಗ್ಗಿನ ಕೆಲ್ಸಕ್ಕೆ ಸಹಾಯ ಮಾಡಲು ಬಂದಿರಬೇಕು ಅನಿಸಿತು. ಬಾಣಂತಿ ಕೋಣೆಯಲ್ಲಿದ್ದ ಎಲ್ಲವನ್ನೂ ಕ್ಲೀನ್ ಮಾಡಿಸಿ ಮಂಚ ಹಾಕಿಸಿ, ಪಕ್ಕದಲ್ಲೊಂದು ಮೇಜು, ಸಣ್ಣ ಕಪಾಟು ಎಲ್ಲವನ್ನೂ ಇಡಿಸಿದೆ. ನಾನೇ ಕೂತು ಅವನ, ಗಡ್ಡ, ಕೂದಲು ಕತ್ತರಿಸಿ ಅವನನ್ನು ಸ್ವಲ್ಪ ನೋಡುವ ಹಾಗೆ ಮಾಡಿದೆ. ಮಹೇಶನ ತಮ್ಮ ತಂದ ಬೆಡ್ ಪಾನ್ ಬಳಸಲು ಹೇಳಿ ಕೊಟ್ಟೆ. ಅವನ ಮುಖದಲ್ಲೊಂದು ಕಿರುನಗು. “ಮುಂದಿನ ತಿಂಗಳು ಬರುವಾಗ ಇನ್ನಷ್ಟು ಪುಸ್ತಕ ತನ್ನಿ ಬಾಬಣ್ಣ” ಅಂದ. “ಹೂಂ, ನಾಳೆ ಬೆಳಗ್ಗೆ ಹೊರಡ್ತೀನಿ, ಮುಂದಿನ ಹದಿನೈದು ದಿನದಲ್ಲಿ ಬರ್ತೀನೋ, ಅಲ್ಲಿಯವರೆಗೆ ಸಾಕಲ್ಲ ಇಷ್ಟು? ಆಮೇಲೆ ನಮ್ಮನೆಗೆ ಹೋಗೋಣ ಆಗ್ದಾ?, ಅಲ್ಲಿ ಇಡೀ ಲೈಬ್ರೆರಿ ನಿಂದೇ ”ಅಂದೆ. ಅವನು ಖುಷಿಯಲ್ಲಿ ಚಿಕ್ಕ ಮಗುವಿನಂತೆ ನಕ್ಕ.
ಮರುದಿನ ಬೆಳಗ್ಗೆ ಬೇಗ ಎದ್ದು ಹೊರಟು ಅತ್ತೆ ಕಾಲಿಗೆ ಬಿದ್ದಾಗ ತಲೆಸವರಿದಳು, �“ಅತ್ತೆ, ಸುಧೀ ಕಡೆ ಸ್ವಲ್ಪ ಗಮನ ಕೊಡು ಈವಾಗಾದ್ರೂ, ಎಷ್ಟು ದಿನ ಇರುತ್ತಾನೋ ಖುಷಿಯಲ್ಲಿರಲಿ” ಅಂದೆ. �ಏನೂ ಉತ್ತರಿಸದೆ, ಕೈಗೆ ಒಂದು ಬಟ್ಟೆಯ ಚೀಲ ಕೊಟ್ಟಳು, ತೆಗೆದು ನೋಡಿದರೆ ಕಸೂತಿಯ ಹೂವಿನ ಚಿತ್ತಾರಗಳ ಅಂಚಿರುವ ಒಂದು ಡಬಲ್ ಬೆಡ್ ಶೀಟ್ ಮತ್ತು ತಲೆದಿಂಬಿನ ಕವರುಗಳ ಸೆಟ್. ಅವಳ ಮುಖ ನೋಡಿದರೆ ವಿಚಿತ್ರವಾಗಿ ನಕ್ಕಳು. �“ಚೆಂದ ಉಂಟು, ಥ್ಯಾಂಕ್ಸ್ ಅತ್ತೆ” ಎಂದು ನಡುಮನೆಗೆ ಕಡೆ ತಿರುಗಿ �“ಮಾಮ ಹೊರಡ್ತೀನಿ” ಎಂದು ಗಟ್ಟಿಯಾಗಿ ಹೇಳಿದರೆ, ಸಿಕ್ಕಿದ್ದು ರಾಮ ನಾಮ ಪಾಯಸಕ್ಕೆ ಹಾಡು. ಮೆಲ್ಲಗೆ ಸುಧೀ ಕೋಣೆಗೆ ಇಣುಕಿ ಹಾಕಿದರೆ, ಸ್ವಚ್ಛವಾದ ಕೋಣೆಯಲ್ಲಿ ಹೂವಿನ ಚಿತ್ತಾರದ ಮಧ್ಯೆ ನೀಟಾಗಿ ಮಲಗಿದ್ದ. ಹತ್ತಿರ ಹೋಗಿ ಕೈ ಸವರಿ ಹೊರಟೆ, ಮುಂದಿನ ಸರ್ತಿ ನೋಡ್ತೀನೋ ಇಲ್ವೋ ಅನಿಸಿ ಗಂಟಲುಬ್ಬಿ ಬಂತು. ಮೇಲಿನವರೆಗೆ ನಡೆದು ಬರುತ್ತಿದ್ದಂತೆ ಪಕ್ಕದಲ್ಲೇ ಜಯಾ ಉದ್ದ ಲಂಗ ತೊಟ್ಟು ಕೆಂಪು ಕೇಪುಳ ಹೂವಿನ ಗೊಂಚಲು ತಿರುಗಿಸುತ್ತಾ ಬಂದಂತೆ ಅನಿಸಿತು. ನಿಂತು ತಿರುಗಿ ನೋಡಿದರೆ, ಗದ್ದೆಯಲ್ಲಿ ಅವಳೂ, ಸುಧೀಯೂ ಒಬ್ಬರ ಹಿಂದೆ ಒಬ್ಬರು ಓಡುತ್ತಿದ್ದಂತೆ ಅನಿಸಿತು. ಇಬ್ಬರ ಮೈಮೇಲೂ ಹೂವಿನ ಚಿತ್ತಾರವಿರುವ ಅಂಗಿಗಳು, ತಲೆ ಕೊಡಹಿ ನಡೆದೆ. ಬಸ್ಸು ನಿಲ್ಲುವ ತಾಣಕ್ಕೆ ಬಂದರೆ, ಮಹೇಶ ಅಲ್ಲಿಗೆ ಬಂದು ಕಾಯುತ್ತಾ ನಿಂತಿದ್ದ. �“ಬಾಬಣ್ಣ, ಸುಧೀಯಣ್ಣನಿಗಾದ್ರೂ ಬರ್ತಾ ಇರಿ” ಅಂದ. ಹೂಂ ಅಂದೆ.
ಮಂಗಳೂರಿಗೆ ಡೈರೆಕ್ಟ್ ಬಸ್ ಬರಲೇ ಇಲ್ಲ, ಸರಿ ಬೆಳ್ತಂಗಡಿಗೆ ಹೋಗಿ ಅಲ್ಲಿಂದ ಎಕ್ಸ್ಪ್ರೆಸ್ ಹಿಡಿದರಾಯ್ತು ಅಂತ ಸಿಕ್ಕಿದ ಶಟಲ್ ಬಸ್ಸಿಗೆ ಹತ್ತಿ ಕೂತೆ. ಭಾವಗಳು, ನೆನಪುಗಳು ಪದೇ ಪದೇ ಧಾಳಿಯಿಡುತ್ತಿದ್ದವು. ಮರಗಟ್ಟಿದ ಮನಸ್ಸು ಕರಗುತ್ತಿದ್ದಂತೆ ಭಾಸವಾಗುತ್ತಿತ್ತು. ಕಣ್ಣು ಮುಚ್ಚಿ ಕೂತೆ. ಬೆಳ್ತಂಗಡಿಯಲ್ಲಿಳಿದು ಎಕ್ಸ್ಪ್ರೆಸ್ ಬಸ್ಸು ಹತ್ತಿ ಟಿಕೇಟು ತೊಗೊಂಡು ಮೂರು ನಾಲ್ಕು ನಿಮಿಷಗಳಾಗಿರಬೇಕು. ಪಾಕೇಟಿನಲ್ಲಿದ್ದ ಮೊಬೈಲ್ ರಿಂಗಾಯ್ತು. ತೆಗೆದು ನೋಡಿದರೆ, ಮಹೇಶನ ನಂಬರ್. ಕೈ ನಡುಗಲಾರಂಭಿಸಿತು.
(ವಿಸ್ತಾರ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದೆ.)