ಮೊದಲೆಲ್ಲಾ ಸುಮಾರು ಒಂದು ಲಕ್ಷ ವರ್ಷಗಳಿಗೊಮ್ಮೆ ತನ್ನ ಒಡಲಲ್ಲಿ ಹುದುಗಿದ್ದ ಲಾವಾವನ್ನು ಹೊರ ಕಕ್ಕುತ್ತಿದ್ದ ಭೂಮಿ ಇತ್ತೀಚೆಗೆ ಅದನ್ನು ಇನ್ನೂರು ವರ್ಷಗಳಿಗೊಮ್ಮೆ ಮಾಡಲಾರಂಭಿಸಿದ್ದಾಳೆ. ತೀರಾ ಇತ್ತೀಚಿನವರೆಗೂ ಮನುಷ್ಯ ಮಾಡಿದ ಅನಾಚಾರಗಳನ್ನು ನುಂಗಿ ಉಷ್ಣತೆಯನ್ನು ನಿಯಂತ್ರಿಸುತ್ತಿದ್ದ ಸಾಗರಗಳು ಕೈಚೆಲ್ಲಿದ್ದರಿಂದ ಜಗತ್ತಿನ ಐಸ್ ಕ್ಯಾಪುಗಳು ನಿಧಾನಕ್ಕೆ ಕರಗಲಾರಂಭಿಸಿವೆ. ಜೀವ ಜಗತ್ತಿನ ವೈವಿಧ್ಯತೆ, ದಟ್ಟ ಕಾಡುಗಳು ಆತಂಕಕಾರಿಯಾಗಿ ಕ್ಷೀಣಿಸತೊಡಗಿವೆ. ಕೇವಲ ಮನುಷ್ಯನಿಂದ ಮನುಷ್ಯನಿಗೋಸ್ಕರ ಮಾತ್ರ ಈ ಜಗತ್ತು ಸುತ್ತುತ್ತಿದೆ.
ತನ್ನ ತೊಂಭತ್ತಮೂರು ವರ್ಷಗಳ ತುಂಬು ಬದುಕನ್ನು ಪ್ರಾಣಿ, ಪಕ್ಷಿ, ಗಿಡ, ಮರ ಹೀಗೆ ಪ್ರಕೃತಿಯ ವಿಸ್ಮಯಗಳ ಬಗ್ಗೆಯೇ ಸವೆಸಿದ ದೇವ ದೂತನೊಬ್ಬನ ಹತಾಶೆಯ ಕೂಗೇ a life on our planet. ಸರ್ ಡೇವಿಡ್ ಅಟೆನ್ ಬರ್ಗ್ ತನ್ನ ಚೆಂದದ ಆದರೆ ವಿಷಾದಭರಿತ ದನಿಯಲ್ಲಿ,
ಆತಂಕ ಭರಿತ ನೀಲಿ ಕಣ್ಣುಗಳಲ್ಲಿ ನಮ್ಮನ್ನೇ ದಿಟ್ಟಿಸುತ್ತಾ ಈ ಅಂಶಗಳನ್ನು ಹೇಳುತ್ತಾ ಹೋದಂತೆ ಕರಾಳ ಭವಿಷ್ಯದ ಚಿತ್ರಗಳು ಕಣ್ಣೆದುರಿಗೆ ಬರಲಾರಂಭಿಸುತ್ತವೆ.
ಮನುಷ್ಯನನ್ನು ಹೊರತುಪಡಿಸಿ ಪ್ರಕೃತಿಯಲ್ಲಿರುವ ಉಳಿದೆಲ್ಲಾ ಜೀವಜಂತುಗಳಿಗೂ ಅವುಗಳದ್ದೇ ಆದ ಉದ್ದೇಶವಿದೆ, ಅದರೊಂದಿಗೆ ಚೆಲ್ಲಾಟವಾಡಲು ಮನುಷ್ಯನಿಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟವಾಗಿ ನುಡಿಯುವ ಸರ್ ಅಟೆನ್ ಬರ್ಗ್ ಈ ಭೂಮಿಗೆ ಖಂಡಿತಕ್ಕೂ ಮನುಷ್ಯನ ಅವಶ್ಯಕತೆಯಿಲ್ಲ ಎಂದೂ ಸೇರಿಸುತ್ತಾರೆ. ಕಡಿಮೆಯಾಗುತ್ತಿರುವ ಮರಗಳು, ಏರುತ್ತಿರುವ ಕಾರ್ಬನ್, ಉಷ್ಣತೆಯಷ್ಟೇ ಅಲ್ಲದೇ ತೀವ್ರವಾಗಿ ಇಳಿಮುಖವಾಗುತ್ತಿರುವ ವನ್ಯಜೀವಿಗಳಿಂದ ಪರಿಸರ ಮತ್ತು ಹವಾಮಾನದ ಮೇಲಾಗುತ್ತಿರುವ ಅತೀ ಭಯಂಕರ ಪರಿಣಾಮಗಳನ್ನು ಎಳೆಎಳೆಯಾಗಿ ಅಂಕಿ ಅಂಶಗಳೊಂದಿಗೆ ವಿವರಿಸುತ್ತಾರೆ. ಬಹುಶಃ ಅವರು ನೋಡದ ಕಾಡುಗಳಿಲ್ಲ, ಅವರಿಗೆ ತಿಳಿಯದ ಜೀವ ವೈವಿಧ್ಯವಿಲ್ಲ. ತನ್ನ ಹರೆಯದ ದಿನಗಳಿಂದ ಇಲ್ಲಿಯವರೆಗೂ ಬದಲಾದ ಭೂಮಿಯ ಪರಿಸ್ಥಿತಿ ಹೇಳುತ್ತಿದ್ದಂತೆ ಅವರು ಹತಾಶರಾಗುತ್ತಾರೆ.
ಹಾಗಿದ್ದಲ್ಲಿ ಇದು ಏಕಮುಖ ದಾರಿಯೇ, ಇದಕ್ಕೆ ಯೂ ಟರ್ನುಗಳಿಲ್ಲವೇ, ನಾವೇನೂ ಮಾಡಲಾಗುವುದಿಲ್ಲವೇ, ಮುಂದಿನ ಮಕ್ಕಳ ಭವಿಷ್ಯದ ಗತಿಯೇನು ಎಂದೆಲ್ಲಾ ಪ್ರಶ್ನೆಗಳು ನಮ್ಮಲ್ಲಿ ಹುಟ್ಟುತ್ತಿದ್ದಂತೆಯೇ ಸರ್ ಅಟೆನ್ ಬರ್ಗ್ ಸುಲಭ ಉಪಾಯಗಳನ್ನು ತಿಳಿಸಿಕೊಡುತ್ತಾರೆ. ರಣ ವಿಷದ ವಿಕಿರಣ ಹೊರಸೂಸಿ ಬದುಕಲು ಯೋಗ್ಯವಲ್ಲದಂತಾದ ಚರ್ನೋಬಿಲ್ ನಲ್ಲಿ ಮತ್ತೀಗ ನಿಧಾನಕ್ಕೆ ಪ್ರಕೃತಿ ಹಸಿರಾಗುತ್ತಿದ್ದಾಳೆ, ಹಕ್ಕಿಗಳು ಉಲಿಯತೊಡಗಿವೆ, ಮೆತ್ತಗೆ ಒಂದೊಂದೇ ಪ್ರಾಣಿಗಳು ಓಡಾಡುತ್ತಿವೆ.
ಅದೇ ರೀತಿ ನಾವೂ ಒಂದಿಷ್ಟು ವಿರಾಮ ನೀಡಿದಲ್ಲಿ ಭೂಮಿಯ ಗಾಯಗಳೂ ಮಾಯಬಹುದು, ನಾವು ಮಾಡಬಹುದಾಗಿಷ್ಟು.
1. ಜನಸಂಖ್ಯೆಯ ನಿಯಂತ್ರಣ
2. ಕಾಡು ಕಡಿದು ಕೃಷಿಭೂಮಿ ಮಾಡುವುದು ಹಾಗೂ ಆ ಪರಿಸರಕ್ಕೆ ಹೊಂದದ, ಕೇವಲ ಲಾಭಕ್ಕಾಗಿ ಮರಗಳನ್ನು ಬೆಳೆಸುವುದನ್ನು ಪೂರ್ಣವಾಗಿ ನಿಲ್ಲಿಸುವುದು
3. ಅವಶ್ಯಕತೆಗಿಂತ ಜಾಸ್ತಿ ಮತ್ತು ಪದೇ ಪದೇ ಸಮುದ್ರದಿಂದ ಜಲಚರಗಳನ್ನು ತೆಗೆಯುವುದನ್ನು ಕಡಿಮೆ ಮಾಡುವುದು
4. ಧಂಡಿಯಾಗಿ ಭೂಮಿಗೆ ಸುರಿಯುತ್ತಿರುವ ಸೂರ್ಯನ ಬೆಳಕನ್ನು ಬಳಸುವುದು, ಸಾಧ್ಯವಾದಷ್ಟು ವಿಂಡ್ ಮಿಲ್ಲುಗಳನ್ನು ಸ್ಥಾಪಿಸುವುದು ಇತ್ಯಾದಿ.
ನಾಲ್ಕು ದಶಕಗಳ ನನ್ನದೇ ಬದುಕಲ್ಲಿ ಅದೆಷ್ಟು ಬದಲಾವಣೆಗಳನ್ನು ನಾನೂ ನೋಡಿದ್ದೇನೆ. ಅಣ್ಣ ಅಮ್ಮನ ವರ್ಗಾವಣೆಗಳಿಂದ ಸುತ್ತಿದ ಊರುಗಳನ್ನು ಮತ್ತೆ ಸಂದರ್ಶಿಸಿದಾಗ ಗುರುತೇ ಸಿಗದಷ್ಟು ಬೆಳೆದು ಹಸಿರು ಮಾಯವಾಗಿರುವುದನ್ನು ಗಮನಿಸಿದ್ದೇನೆ. ರಥೋತ್ಸವಕ್ಕೆ ಮಳೆ ಬಂದೇ ಬರುತ್ತದೆ, ಈ ಬೆಳೆಗೆ ಇಷ್ಟು ಮಳೆ ಸಾಕು ಎಂದುಕೊಂಡ ಹಿರಿಯರ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದು ಕಂಡಿದ್ದೇನೆ. ಮಳೆಗಾಲ, ಬೇಸಿಗೆಗಾಲಗಳು ವಿಚಿತ್ರವಾಗಿ ವರ್ತಿಸುವುದನ್ನು ನೋಡಿದಾಗ ರೈತರ, ಬೆಳೆಗಾರರ ಬಗ್ಗೆ ಯೋಚಿಸಿದ್ದೇನೆ. ಕರಾವಳಿಯ ಗದ್ದೆ, ಕಾಡುಗಳು ಮಾಯವಾಗಿ ಕಾಂಕ್ರೀಟ್ ಕಾಡುಗಳಾಗುತ್ತಿದ್ದಂತೆ ಬೇಸಿಗೆಯಲ್ಲಿ ಕಾಲು ಹೊರಗಿಡಲಾರದಷ್ಟು ತಾಪಮಾನ ಏರಿದ್ದು ಅರಿವಾಗಿದೆ.
ಟಿಕ್ ಟಾಕ್, ರೀಲ್ಸ್, ಗೇಮ್ಸ್, ಯೂ ಟ್ಯೂಬುಗಳಲ್ಲಿ ಮುಳುಗೇಳುವ, ಬುದ್ಧಿ ಶಕ್ತಿಗಿಂತ ಬಾಹ್ಯ ರೂಪ, ಅದಕ್ಕಾಗಿ ಕಾಲ ವ್ಯಯಿಸುವ ಈಗಿನ ಯುವಕ / ಯುವತಿಯರಿಗೆ ಸುತ್ತಲಿನ ಪ್ರಪಂಚದ / ಆಗು ಹೋಗುಗಳ ಅರಿವಿದೆಯೇ?
ಸುಮಾರು ಎರಡು ಘಂಟೆಗಳಿಷ್ಟಿರುವ ಡಾಕ್ಯುಮೆಂಟರಿ ನೋಡುತ್ತಿದ್ದಾಗ ಮುಂದಿನ ತಿಂಗಳು ಹದಿನಾಲ್ಕಕ್ಕೆ ಕಾಲಿಡುತ್ತಿರುವ ನನ್ನ ಮಗ ಮೂರು ನಾಲ್ಕು ಸಲ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ. ಬೆಂಕಿಪೊಟ್ಟಣದ ಥರ ಇರುವ ಅಪಾರ್ಟುಮೆಂಟುಗಳಲ್ಲಿ ಬದುಕುತ್ತಾ, ಬೆಳಗೆದ್ದರೆ ಹಾಲಿನ ಪ್ಲಾಸ್ಟಿಕ್ ಕತ್ತರಿಸುತ್ತಾ, ಪಕ್ಕಕ್ಕೆ ಕಾರಿನ ಶೋರೂಮಿನ ಕಾರುವಾಶು, ಮನೆ ಮುಂದೆ ಹಾದುಹೋಗುವ ಮೆಟ್ರೋ ಮತ್ತು ಟನ್ನುಗಟ್ಟಲೆ ವಾಹನಗಳ ಶಬ್ದದ ಮಧ್ಯೆ
ಬದುಕುತ್ತಿರುವ ನನ್ನಂತಹ ತಾಯಂದಿರು ಮಕ್ಕಳಿಗೆ ಪರಿಸರದ ಸಂರಕ್ಷಣೆ ಬಗ್ಗೆ ಏನು ಹೇಳಿಕೊಡಬಹುದು ನಿಜಕ್ಕೂ ಗೊತ್ತಿಲ್ಲ.
ನಮ್ಮ ತೇಜಸ್ವಿ, ಕೃಪಾಕರ-ಸೇನಾನಿ, ಜಿಮ್ ಕಾರ್ಬೆಟ್, ಕೆನೆತ್ ಆಂಡರ್ ಸನ್, ಸರ್ ಅಟೆನ್ ಬರ್ಗ್ ಹೀಗೆ ವನ್ಯಜೀವಿ ಸಂರಕ್ಷಣೆ, ಪರಿಸರ ಪ್ರೀತಿ ಹುಟ್ಟಿಸುವ ಸಂತರೆಲ್ಲರ ಪರಿಚಯ ಮಾಡಿಕೊಟ್ಟಿದ್ದೇನೆ. ಸಂಬಂಧಿಸಿದ ಸಾಕ್ಷ್ಯ ಚಿತ್ರಗಳನ್ನು ಹಾಕಿ ತೋರಿಸುತ್ತೇನೆ. ನೀರು, ಲೈಟು ಬಳಸದಿದ್ದಾಗ ಅವನಾಗೇ ಆಫ್ ಮಾಡುವಂತೆ, ಅನಾವಶ್ಯಕವಾಗಿ ಹಾಳೆಗಳನ್ನು ಹಾಳು ಮಾಡದಂತೆ, ಹಸಿ ಮತ್ತು ಒಣ ಕಸದ ಬಗ್ಗೆ ಪದೇ ಪದೇ ಹೇಳುತ್ತಲೇ ಇರುತ್ತೇನೆ. ಮನೆ ತುಂಬ ತುಂಬಿಟ್ಟ ಗಿಡಗಳನ್ನು, ಪ್ರತಿಯೊಂದರ ತಳಿಗಳ ಬಗ್ಗೆ, ಅವಕ್ಕೆ ಬರುವ ಚಿಟ್ಟೆ, ಹುಳಗಳ ಬಗ್ಗೆ ಗಮನ ಸೆಳೆಯುತ್ತೇನೆ. ಸುತ್ತಾಡಲು ಹೊರಹೋದಾಗ ಕಾಣುವ ಮರ, ಗಿಡ, ಪ್ರಾಣಿಗಳ ಬಗ್ಗೆ ಹೇಳುವುದು ಇವಿಷ್ಟೂ ನಾನು ಮಾಡಬಹುದಾಗಿದ್ದು ಅಷ್ಟೇ.
ತಂದೆ-ತಾಯಂದಿರೇ, ದಯವಿಟ್ಟು ನಿಮ್ಮ ಮಕ್ಕಳಿಗೆ ಇಂತಹ ವಿಡಿಯೋಗಳನ್ನು ತೋರಿಸಿ. ಶಾಲೆಯ ಆಡಳಿತ ಮಂಡಳಿಗಳೇ, ಇಂತಹ ಚಿತ್ರಗಳನ್ನು ಪಾಠದೊಂದಿಗೆ ಸೇರಿಸಿ. ನಮ್ಮ ಮಕ್ಕಳೂ ತೇಜಸ್ವಿ, ಅಟೆನ್ ಬರ್ಗ್ ಅವರಂತೆ ಪರಿಸರ ಪ್ರೇಮಿಗಳಾಗಲಿ. ಇತ್ತೀಚೆಗೆ ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕ ಪಡೆದು ಅರಣ್ಯ ಇಲಾಖೆ ಸೇರುತ್ತೇನೆಂದು ಹೇಳಿದ ಅನುಷ್ ಥರಹ ನಮ್ಮ ಮಕ್ಕಳೂ ಆಗಲಿ ಎಂಬುದು ನನ್ನಾಸೆ.
ಈ ಸಾಕ್ಷ್ಯಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ.
Dancing with birds ಮತ್ತು our planet ಕೂಡಾ ನೋಡಲೇ ಬೇಕಾದ ಇತರ ವಿಡಿಯೋಗಳು.