Saturday, January 18, 2020

ವೈಲ್ಡ್ ಕರ್ನಾಟಕ

ಸರ್ ಡೇವಿಡ್ ಅಟೆನ್ ಬರ್ಗ್  ನಿರೂಪಣೆಯನ್ನು ಅಸ್ವಾದಿಸುತ್ತಾ, ಪ್ರತೀ ಸೀನ್ ಅನ್ನು ಕಣ್ಣು ತುಂಬಿಕೊಳ್ಳುತ್ತಾ, ಕಿವಿಗಿಂಪಾದ ರಿಕಿ ಕೇಜ್ ಸಂಗೀತವನ್ನು ಸವಿಯುತ್ತಾ ಚಿತ್ರವನ್ನು ನೋಡುವುದೇ ಒಂದು ಸುಂದರ ಅನುಭೂತಿ.  ಶುಕ್ರವಾರ ಪಿವಿ ಆರ್ ಗಳಲ್ಲಿ ಬಿಡುಗಡೆಯಾದ
ವೈಲ್ಡ್ ಕರ್ನಾಟಕ ಒಂದು ಅದ್ಭುತ ಚಿತ್ರ. ವನ್ಯಜೀವಿ ಪ್ರೇಮಿಗಳಿಗೆ ಒಂದು ಖುಷಿಯ ವಿಚಾರ!

ಟ್ರೈಲರ್ ನೋಡಿದಾಗಿಂದ ತುದಿಗಾಲಲ್ಲಿ ನಿಂತಿದ್ದ ನಾನು, ಇಲ್ಲಿಯವರೆಗೂ ಯಾವ ಹೀರೋ ಚಿತ್ರಕ್ಕೂ ಫಸ್ಟ್ ಡೇ ಫಸ್ಟ್ ಶೋ ಹೋಗದವಳು ಈ ಚಿತ್ರವನ್ನು ಮೊದಲನೇ ದಿನ ಮೊದಲ ಶೋ ನೋಡಿದ್ದಾಯ್ತು. ಚಿತ್ರದ ಪ್ರತೀ ದೃಶ್ಯವನ್ನೂ ಪ್ರಿಂಟ್ ತೆಗೆದು ಫ್ರೇಮ್ ಹಾಕಿ ಗೋಡೆಯಲ್ಲಿ ತೂಗುಹಾಕಬಹುದು. ಹಂಪಿ, ಶಿವನಸಮುದ್ರ, ಪಶ್ಚಿಮ ಘಟ್ಟಗಳ ಕಾಡು ಹಾಗೂ ಇದುವರೆಗೂ ಹೆಚ್ಚು ಗೊತ್ತಿರದ ನೇತ್ರಾಣಿಯ ನೀರಿನೊಳಗಿನ ದೃಶ್ಯಗಳನ್ನು ಅದ್ಭುತವಾಗಿ, ಸುಂದರವಾಗಿ ಸೆರೆ ಹಿಡಿದಿದ್ದಾರೆ. ಪೂರ್ತಿ ತುಂಬಿದ್ದ ಥಿಯೇಟರ್ ನಲ್ಲಿ , ತೆರೆಯ ಮೇಲೆ ಪ್ರತಿ ಜೀವಿ ಪ್ರತ್ಯಕ್ಷವಾದಾಗೆಲ್ಲಾ ಸಂತಸದ ಉದ್ಗಾರದ ಅಲೆಗಳು ಏಳುತ್ತಿದ್ದವು. ಅಮೋಘವರ್ಷ, ಕಲ್ಯಾಣ್ ವರ್ಮ ಹಾಗೂ ಅದೆಷ್ಟು ವನ್ಯಜೀವಿ ಛಾಯಾಗ್ರಾಹಕರು ಇದಕ್ಕಾಗಿ ಶ್ರಮಿಸಿದ್ದಾರೋ ಅವರೆಲ್ಲರಿಗೂ ಒಂದು ಸಲಾಮ್! ಭಾರತದ ಅದರಲ್ಲೂ ಕನ್ನಡದ ಹೆಮ್ಮೆಯಿದು.  ವಾಕಿಂಗ್ ವಿಥ್ ದ ವೂಲ್ಫ್ಸ್ ಮತ್ತು ವೈಲ್ಡ್ ಡಾಗ್ ಡೈರಿಸ್ ನೋಡಿದಾಗ ಆದ ಖುಷಿ ಇನ್ನೊಮ್ಮೆ ಮರುಕಳಿಸಿತು. ನಾಲ್ಕು ವರ್ಷಗಳ ಅವರೆಲ್ಲರ ಪರಿಶ್ರಮದ ಈ ಚಿತ್ರದಲ್ಲಿ ತೋರಿಸಲಾದ ಪುಟ್ಟ ಪುಟ್ಟ ಘಟನೆಗಳು, ಕಥೆಗಳು ಪ್ರಾಣಿ ಪ್ರಪಂಚದ ಎಂದೂ ಮುಗಿಯದ ದಿನ ನಿತ್ಯದ ಹೋರಾಟದ ಬದುಕನ್ನೂ, ನಾವುಗಳು ಕಾಡನ್ನು ಉಳಿಸಲೇಬೇಕಾದ ಅನಿವಾರ್ಯತೆಯನ್ನೂ ಮತ್ತೊಮ್ಮೆ ತಿಳಿಸುತ್ತದೆ.

ಕೇವಲ ೫೪ ನಿಮಿಷಗಳ ಈ ಚಿತ್ರ ಪ್ರಾಣಿಪ್ರಿಯರಿಗೆ ಸ್ವರ್ಗದ ಬಾಗಿಲು ಒಂದು ಘಳಿಗೆ ತೆಗೆದು ತೋರಿಸಿ ಮತ್ತೆ ಮುಚ್ಚಿದ ಅನುಭವ ಕೊಡುತ್ತದೆ. ನಾಲ್ಕು ನೂರು ಘಂಟೆಗಳಿಂದ ಕನಿಷ್ಠ ನಾಲ್ಕು ಹೋಗಲಿ ಮೂರು ಕೊನೆಪಕ್ಷ ಎರಡು ಘಂಟೆಗಳಿಗಾದರೂ ಚಿತ್ರವನ್ನಿಳಿಸಬಹುದಿತ್ತು ಎಂದು ಬಲವಾಗಿ ಅನಿಸಿತು. ತಾಯಿ ಹುಲಿ ಮತ್ತದರ ಮರಿಗಳ ಪಯಣ, ಢೋಲ್ ಪ್ಯಾಕಿನ ಆಹಾರದ ಹುಡುಕಾಟ, ರಿವರ್ ಟರ್ನ್ ಮರಿಗಳ ಮೊದಲ ಹಾರಾಟ ಎಲ್ಲವೂ ಕವರ್ ಆಗಿದ್ದರೆ ಚೆನ್ನಾಗಿತ್ತೇನೋ! ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಪ್ರಾಣಿಗಳಲ್ಲದೇ ಕಾಡಿನ ಇನ್ನೂ ಒಂದಿಷ್ಟು ಜೀವ ವೈವಿಧ್ಯತೆ ಬಗ್ಗೆ ಹೇಳಬೇಕಿತ್ತು ಅನಿಸಿತು. ತಂದೆ ತಾಯಂದಿರು ಮಕ್ಕಳಿಗೆ ಇಂಥಹ ಚಿತ್ರಗಳನ್ನು ತೋರಿಸಿದರೆ ಅವರೆಲ್ಲರೂ ಹುಲಿ ಸಂರಕ್ಷಣೆ ಬಗ್ಗೆ ಆಸಕ್ತಿ ವಹಿಸದಿದ್ದರೂ ದಾರಿಯಲ್ಲಿ ಹೋಗುವ ನಾಯಿಗಳಿಗೆ ಕಲ್ಲು ಬಿಸಾಡುವುದೋ, ನೆಲದಲ್ಲಿ ತೆವಳುವ ಇರುವೆಗಳನ್ನು ಹೊಸಕಿ ಸಾಯಿಸುವುದೋ ಅಥವಾ ಪ್ರಪಂಚದ ಎಲ್ಲಾ ಸಹಜೀವಿಗಳನ್ನು ಸಮಾನಭಾವದಿಂದ ನೋಡುವ ಮನಸ್ಥಿತಿ ಬೆಳೆಸಿಕೊಳ್ಳಬಹುದೇನೋ! ನಮ್ಮ ಬಾಲ್ಯದಲ್ಲಿ ಈ ಥರಹದ ಚಿತ್ರಗಳು ಬಂದಾಗ ಶಾಲೆಯಿಂದ ಕರೆದುಕೊಂಡು ಹೋಗುವುದೋ ಅಥವಾ ಶಾಲೆಯಲ್ಲೇ ಪ್ರದರ್ಶನವನ್ನು ಏರ್ಪಡಿಸುವುದೋ ಮಾಡುತ್ತಿದ್ದರು. ಪಾಪ! ಈಗಿನ ಮಕ್ಕಳಿಗೆ ಆ ಭಾಗ್ಯವಿಲ್ಲ.

ಕೊನೆಯದಾಗಿ ಅಷ್ಟೂ ಕಾಡು, ಜೀವಗಳನ್ನು ಕಾಪಾಡಲು ಹೆಣಗುವ ಕರ್ನಾಟಕ ಅರಣ್ಯ ಇಲಾಖೆಗೆ ಧನ್ಯವಾದಗಳು.

ನಾನು ಪ್ರಾಣಿ ದ್ವೇಷಿ ಎಂದು ಎದೆ ತಟ್ಟಿ ಹೇಳುವವರ ಸಂಖ್ಯೆ ಕಡಿಮೆಯಾಗಲಿ ಎನ್ನುತ್ತಾ ಇಂಥಹ ಕಾಡುಗಳು, ಪ್ರಾಣಿಗಳು, ಜೀವ ವೈವಿಧ್ಯತೆ ಸಾವಿರ ಕೋಟಿಯಾಗಲಿ, ಅದರ ರಕ್ಷಣೆಗೆ ನಿಲ್ಲುವವರು ಹೆಚ್ಚಾಗಲಿ  ಮತ್ತು ಇನ್ನೆಂದೂ ಅಸ್ಟ್ರೇಲಿಯಾದಂಥ ದುರಂತ ಮರುಕಳಿಸದೇ ಇರಲಿ ಎಂದು ಆಶಿಸುತ್ತೇನೆ.
ಇನ್ನೂ ನೋಡಿರದಿದ್ದರೆ ಹೋಗಿ ನೋಡಿ!