Friday, November 20, 2015

ಅಮ್ಮ

ತಂತಿಯ ಮೇಲೆ ಒಣಗಿಸಿದ ಗುಲಾಬಿ ಸೀರೆ
ಮತ್ತದರ ರವಕೆ ಅತ್ತಿತ್ತ ನೋಡಿ, ಹಾರಿ ಹುಡುಕುತಿದೆ,
ಇಸ್ತ್ರಿಯಾಗಿ ಮಡೆಸಿಕೊಂಡು ಕಪಾಟ ಸೇರಲು.
ಬಸಳೆ ಚಪ್ಪರ ಸ್ವಲ್ಪ ಜರುಗಿದೆ, ಎಲ್ಲಿಗೆ ಹೋದಳು
ಎಂದು ನೋಡಲು ತಲೆಯ ವಾಲಿಸಿರಬೇಕು,
ಅಷ್ಟರಲ್ಲೇ ಉಳುಕಿರಬೇಕು ಕತ್ತು!
ಬಾವಿಗಿಳಿಬಿಟ್ಟ  ಕೊಡಪಾನದಿಂದ
ಅಳುವ ಸದ್ದು, ಅಮ್ಮಾ, ಬಾಮ್ಮ
ನನ್ನ ಎತ್ತು, ಈ ಹಗ್ಗಣ್ಣ ನನ್ನ
ಕೈ ಬಿಡುತ್ತಾನೆ, ಎಲ್ಲಿದ್ದಿ?
ಮಾಡಿ ಮೇಲೆ ಇಡೀ ದಿನ ಕಾದು
ಬಳಲಿ ಬೆಂಡಾದ ಸೆಂಡಿಗೆ, ಹಪ್ಪಳಗಳು
ತವಕದಿ ಕಾದಿವೆ ಡಬ್ಬ ಸೇರಲು.
ರಾಜು ನಾಯಿ, ಚಾಮಿ ಬೆಕ್ಕಿನ
ಗೋಳಂತೂ ಆಕಾಶಕ್ಕೆ ಮುಟ್ಟಿದೆ.
ತೆಂಗಿನ ಮರವೂ ಸ್ವಲ್ಪ ಕೆಳಕ್ಕೆ
ಬಾಗಿ ಮನೆಯೊಳಗೆ ಇಣುಕಿ ಹಾಕುತ್ತಿದೆ.
ಕನಕಾಂಬರವೂ ಜಂಭ ಬಿಟ್ಟು ಕೇಳುತ್ತಿದೆ
ಗೊರಟೆಯಲ್ಲಿ, ಎಲ್ಲಿ ಹೋದಳು ಈ ಮಹಾತಾಯಿ!
ಚಪ್ಪರದವರೆ ಮತ್ತು ಮನಿ ಪ್ಲಾಂಟಿನ ಚರ್ಚೆ,
ಅಷ್ಟರಲ್ಲಿ  ಹಮ್ಮು ಬಿಮ್ಮಿನ ಸುಗಂಧಿಯೂ ತಲೆ ಹಾಕಿತು.
ವೀರನ ಹಾಗೆ ನಿಂತ ಕರವೀರಕ್ಕೂ ಇಂದು ಹೆದರಿಕೆ,
ಸದಾ ನಗುವ ಸದಾಪುಷ್ಪವೂ, ಪಕ್ಕದ
ಶಂಖಪುಷ್ಪಗಳೆರಡೂ ಮುಖ ಬಾಡಿಸಿ ನಿಂತಿವೆ.
ಸಂಜೆ ಮಲ್ಲಿಗೆ ನಗುವೂ ಮಂಕಾಗಿದೆ ಇಂದು.
ಕರೆದಾಗೊಮ್ಮೆ ಎಲೆಯುದುರಿಸುವ
ಕರಿಬೇವು ಸುಮ್ಮಗಾಯ್ತು ಈಗ.
ಯಾರಿಗೂ ತಿಳಿಯುತ್ತಿಲ್ಲ ಅಮ್ಮ ಎಲ್ಲಿದ್ದಾಳೆಂದು,
ಎಂದು ಬರುವಳೆಂದು.
ಬೆಳಗ್ಗಿನ ರಂಗೋಲಿ ಸಾಕಾಯ್ತು, ಬೇರೆ ಹಾಕು
ಎಂದಿತು ಮನೆ ಎದುರು ಮೈ ಚೆಲ್ಲಿದ ಅಂಗಳ,
ಕುಂದಗಳ ಮಧ್ಯೆ ಬಂಧಿಯಾದ
ಗೇಟು ಮಹಾಶಯನಿಗೆ ಒಳ ಹೋಗುವಾಸೆ,
ಮುರಕಲ್ಲ ಹುದುಗಿಸಿಕೊಂಡು ಕೆಂಪು
ಮುಖ ಹೊತ್ತ ಪಾಗರಕ್ಕೂ
ಇದೀಗ ಇರುಸು ಮುರುಸು,
ಅಮ್ಮನ ಮೈ ಸ್ಪರ್ಶವಿಲ್ಲವೆಂದು.
ಇಸಿಚೇರು ರಾಯನಿಗೆ ಕೂತಲ್ಲೇ ಜೋಂಪು
ಎಚ್ಚರಿಸುವವರಿಲ್ಲದೆ.
ಇಷ್ಟೆಲ್ಲಾ ನಡೆದರೂ ಒಳಗಿದ್ದ ಅಮ್ಮನಿಗೆ
ಕೇಳದಲ್ಲ, ನೋವೆಂದು ಕುಳಿತವಳು
ಅಲ್ಲೇ ಮಲಗಿದಳಲ್ಲ
ಮತ್ತೆಂದೂ ನಡೆಯದ ಹಾಗೆ
ಹೊರಗೆ ಎಲ್ಲರ ಗಲಾಟೆಗೂ
ಅದಾರು ಉತ್ತರಿಸುವವರು, ಮೈದಡವವರು????