Saturday, July 4, 2015

ಬಾಬ್ಲಿ

 (ಈ ಬರಹ ಜುಲೈ ತಿಂಗಳ ಸಖಿಯಲ್ಲಿ ಪ್ರಕಟವಾಗಿದೆ)

ಶಾಲೆಯ ಕೊನೆ ದಿನ ಮುಗಿಸಿ ಅಜ್ಜಮ್ಮೂರಿಗೆ ಹೊರಟ ಗಳಿಗೆಯಿಂದ ಒಂದೇ ಪ್ರಶ್ನೆ ಬಾಬ್ಲಿದ್ದು. " ಅಮ್ಮರಾಜು ನಾಯಿಚಾಮಿ ಬೆಕ್ಕುಗೌರಿ ಹಸು ಎಲ್ಲರೂ ನನ್ನ ನೆನಪಿಟ್ಟುಕೊಂಡಿದ್ದಾರಾನಾನು ಹೋದ ಕೂಡಲೇ ನನ್ನೊಟ್ಟಿಗೆ ಆಡ್ತಾರ ? " ಅಂತಕಂಡಕ್ಟರ್ನಿಂದ ಚಿಲ್ಲರೆ ವಾಪಸು ಪಡೆಯುತ್ತಿದ್ದ ಅಮ್ಮ "ಹೌದಮ್ಮಆಡ್ತಾರೆಪಮ್ಮಿ ನೋಡು ಸುಮ್ಮನೆ ಕಿಟಕಿಯಿಂದ ಹೊರಗೆ ನೋಡ್ತಾ ಇದ್ದಾಳೆನೀನೂ ಜಾಣ ಮಗಳ ಹಾಗೆ ಕೂತ್ಕೋಅಂದರುಬಸ್ ಹತ್ತಿ ೧೦ ನಿಮಿಷವಾಗಿರಬೇಕುಅದರ ಶಬ್ದದ ಜೋಗುಳ ಹಾಗೂ ಗಾಳಿಗೆ ತೂಕಡಿಸಿ ತೂಕಡಿಸಿ ಅಮ್ಮನ ಮೇಲೆ ಬಿದ್ದಳು ಬಾಬ್ಲಿ. ಅವಳನ್ನು ಸರಿಯಾಗಿ ಮಲಗಿಸಿಕೊಂಡು ಪಮ್ಮಿಯನ್ನು ನೋಡಿ ನಕ್ಕರು ಅಮ್ಮ. "ಯಾಕಮ್ಇವಳು ಬಸ್ ಹತ್ತಿದ ಕೂಡಲೇ ನಿದ್ದೆ ಮಾಡ್ತಾಳೆ? " ಅಂದ ಪಮ್ಮಿಗೆ ಚಿಕ್ಕವಳಲ್ವ ಅವಳುನಿದ್ದೆ ಜಾಸ್ತಿ ಅಂತ ಅಮ್ಮ ನಕ್ಕು ಉತ್ತರಿಸಿದರುಅವಳು ಎಚ್ಚರವಿದ್ದರೆ ಕಿಟಕಿಯಲ್ಲಿ ಅರ್ಧ ಪಾಲು ಕೇಳ್ತಾಳೆನನ್ನ ಮೇಲೆ ಪೂರ್ತಿ ಬಗ್ಗಿ ಮುಖಕ್ಕೆ ಅವಳ ಜುಟ್ಟು ತಂದಿಟ್ಟು ಬಿಡ್ತಾಳೆನೋಡೋದು ಹೋಗಲಿಅವಳ ಕೂದಲು ಕಣ್ಣುಬಾಯಿಗೆ ಹೋಗೋದನ್ನ ತಪ್ಪಿಸಿಕೊಳ್ಳೋದೇ ಕಷ್ಟ ಸಧ್ಯ ಬಚಾವಾದೆ ಅಂತ ಪಮ್ಮಿಗೆ ಖುಷಿ. ಪಮ್ಮಿಗೆ ಒಂಭತ್ತು ವರ್ಷ ಮತ್ತು ಬಾಬ್ಲಿಗೆ ಐದು, ಇಬ್ಬರನ್ನು ಕಟ್ಟಿಕೊಂಡು ಅಮ್ಮ ತವರುಮನೆಗೆ ಹೊರಟಿದ್ದರು.

ಘಟ್ಟವಿಳಿದು ಬಂದಿದ್ದೂ ಆಯಿತು ಅಜ್ಜಮ್ಮ ಊರಿಗೆಇಳಿಯುವ ಸಮಯಕ್ಕೆ ಸರಿಯಾಗಿ ಎದ್ದಳು ಬಾಬ್ಲಿ. . . ಗದ್ದೆಹಳ್ಳ ತಿಟ್ಟುಗಳಲ್ಲಿ ಇಳಿದು ಹೋಗಬೇಕು ಅಜ್ಜಮ್ಮ ಮನೆಗೆಪಮ್ಮಿಅಮ್ಮ ಬ್ಯಾಗ್ಗಳನ್ನೂ ಹಿಡಿದುಕೊಂಡು ಬಂದರೆ ಇವಳು ದಾರಿಯಲ್ಲಿ ಸಿಗುವ ಮಿಠಾಯಿ ಹೂವುಕತ್ತರಿ ದಾಸವಾಳಎಳೆ ಭತ್ತದ ತೆನೆ ಎಲ್ಲವನ್ನೂ ಅದಕ್ಕೆ ನೋವಾಗದಂತೆ ಮುಟ್ಟಿಕೊಂಡು ಹಾರುತ್ತಾ ನಡೆಯುತ್ತಿದ್ದಳುಅಮ್ಮನ ಹತ್ತಿರ ಕುಶಲೋಪರಿ ಮಾತಾಡುವ ಗದ್ದೆಯ ಕೆಲಸದಾಳುಗಳ ಮುಖವನ್ನೇ ನೋಡುತ್ತಾಅವರು ಮಾತಾಡುವ ತುಳುವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾಇವಳತ್ತ ತಿರುಗಿ ಅವರೇನೆ ಕೇಳಿದರೂ ತನಗೆ ಗೊತ್ತಿದ್ದ ಒಂದೇ ಒಂದು ತುಳು ಪದ "ಅಂದು ಅಂದು(ಹೌದುಹೌದು)" ಎಂದು ಮುಂದೆ ಓಡಿ ಬಿಡುತ್ತಿದ್ದಳುಅವರಿಗೆಲ್ಲ ಭಾರೀ ಖುಷಿಪೂರ್ಣಿಮಕ್ಕನ ಚಿಕ್ಕ ಮಗಳು ಚೆಂದ ತುಳು ಮಾತಾಡ್ತಾಳೆ ಅಂತಮನೆ ಹತ್ತಿರ ಬರುತ್ತಿದ್ದಂತೆ ಓಡಿ ಬಂದ ರಾಜು ನಾಯಿ ಕೈಕಾಲುಮುಖ ಎಲ್ಲ ನೆಕ್ಕಿ ಬಿಟ್ಟಬಾಬ್ಲಿಗೆ ಅಸಾಧ್ಯ ಖುಷಿ ಇವ ನನ್ನ ಮರೆಯಲಿಲ್ಲ ಅಂತ. ಕೊಟ್ಟಿಗೆಗೆ ಓಡಿ ಆವಾಗಷ್ಟೆ ಗುಡ್ಡದಿಂದ ವಾಪಸು ಬಂದ ಗೌರಿ ಹಸುವನ್ನೂ ನೋಡಿಅದರ ಹಣೆಯ ಬಿಳಿ ನಾಮವನ್ನು ನೇವರಿಸಿಯೂ ಆಯಿತುಚಾವಡಿಯಲ್ಲಿ ರಾಮನಾಮ ಹಾಡಿಕೊಳ್ಳುತ್ತಿದ್ದ ಅಜ್ಜನನ್ನು ಅಲ್ಲೇ ಕೂತು ಅಜ್ಜನಿಗಾಗಿ ಎಲೆ ಅಡಕೆ ಕುಟ್ಟುತ್ತಿದ್ದ ಅಜ್ಜಮ್ಮನನ್ನುಬಟ್ಟೆ ಮಡಿಸುತ್ತಿದ್ದ ಮಾಮಿಯನ್ನುಕೂತು ಬತ್ತಿ ಹೊಸೆಯುತ್ತಿದ್ದ ದೊಡ್ದಮ್ಮನ್ನನ್ನೂ ಮಾತಾಡಿಸಿ ಕಡೆಗೆ ಅಡುಗೆಮನೆಗೆ ಹೊರಟಿತು ಬಾಬ್ಲಿ ಸವಾರಿ.


ಹೊಗೆ ಹಿಡಿದ ಕಪ್ಪು ಗೋಡೆಗಳ ಅಡುಗೆಮನೆಯಲ್ಲಿ, ಮಂದ ಬೆಳಕಿನಲ್ಲಿ ಚಾಮಿ ಬೆಕ್ಕು ಒಲೆಯ ಶಾಖಕ್ಕೆ ಬೆಚ್ಚಗೆ ಮಲಗಿತ್ತುಇವಳ ಕಾಲ ಸಪ್ಪಳಕ್ಕೆ ಹೌದೊ ಅಲ್ಲವೋ ಅಂತ ಮೆಲ್ಲಗೆ ಕಣ್ಣು ಬಿಟ್ಟಿತುಅದರ ಹತ್ತಿರ ಕುಕ್ಕರಗಾಲಲ್ಲಿ ಕೂತು ಹಣೆ ಮುಟ್ಟಲು ಹೋದಳು ಅಷ್ಟೇನಿದ್ದೆಯಿಂದ್ದೆದ್ದ ಚಾಮಿ ಹತ್ತಿರ ಬಂದ ಕೈ ನೋಡಿ ಬೆದರಿತೋ ಏನೋತನ್ನ ಹಸಿರು ಕಣ್ಣುಗಳನ್ನು ಕ್ರೂರವಾಗಿ ಅಗಲಿಸಿ ವಿಚಿತ್ರವಾಗಿ ಧ್ವನಿ ಹೊರಡಿಸಿ ತನ್ನ ಪಂಜದಿಂದ ಅವಳ ಕೈಯ ಪರಚಿಯೇ ಬಿಟ್ಟಿತುಕಿರುಚಲೂ ದನಿಯಿಲ್ಲದೆ ಹಿಂದೆ ಹಿಂದೆ ಸರಿದು ಹತ್ತಿರದ ಗೋಡೆಗೆ ಸರಿದು ಕೂತಳು ಬಾಬ್ಲಿ. .ಅವಳ ಮೈಯೀಡೀ ಕಂಪಿಸುತ್ತಿತ್ತುಕಣ್ಣುಗಳು ಚಾಮಿಯ ಕಣ್ಣುಗಳಲ್ಲೇ ನೆಟ್ಟು ಹೋಗಿದ್ದವುಚಾಮಿ ಎದ್ದು ಏನೂ ಆಗದಂತೆ ನಿಧಾನವಾಗಿ ತೆರೆದ ಬಾಗಿಲಿಂದ ಹೊರ ಹೋಯ್ತುಹೂತು ಹೋದ ದನಿಯನ್ನು ಕಷ್ಟಪಟ್ಟು ಎತ್ತಿ ಬಾಬ್ಲಿ ಹಾಕಿದಬೊಬ್ಬೆಗೆ ಕೊಟ್ಟಿಗೆಯ ದನಗಳೂ ಮೆಲುಕು ಹಾಕುತ್ತಿದ್ದನ್ನು ಒಂದು ಅರೆ ಘಳಿಗೆ ನಿಲ್ಲಿಸಿದವುಅಮ್ಮಪಮ್ಮಿಮಾಮಿದೊಡ್ಡಮ್ಮ, ಅಜ್ಜಮ್ಮ ಎಲ್ಲರೂ ಓಡಿ ಬಂದು ಸಂತೈಸಿಯಾಯ್ತು. ಎಲ್ಲರೂ ಮುದ್ದು ಮಾಡಿದ್ದೇ ಮಾಡಿದ್ದು. ಅಮ್ಮ ಹೇಳಿದರು ಆಗ, " ಬಾಬ್ಲಿರಾಜು ನಾಯಿ ಇದ್ದಾನಲ್ಲಅವನೊಟ್ಟಿಗೆ ಆಡುಚಾಮಿ ಬೆಕ್ಕಿಗೆ ಸ್ವಲ್ಪ ಸಿಟ್ಟು ಜಾಸ್ತಿಅದಕ್ಕೆ ನಿನ್ನೊಟ್ಟಿಗೆ ಆಡಲು ಇಷ್ಟವಿರಲಿಲ್ಲವೋ ಏನೋಯಾಕೆ ನೀನು ಮುಟ್ಟಿದ್ದುಅದೂ ಬಾಲ, ಗೀಲ ಮುಟ್ಟಿದಿಯಾ ಹೇಗೆ? " ಅಂತ. ಬಿಕ್ಕಳಿಸುತ್ತಿದ್ದ ಬಾಬ್ಲಿ ಇಲ್ಲವೆಂಬಂತೆ ತಲೆಯಾಡಿಸಿದಳೇ ಹೊರತು ಏನೂ ಮಾತಾಡಲಿಲ್ಲ. ಅವಳಿಗೆ ಕೈಗಾದ ಗಾಯದ ಉರಿಗಿಂತ ಇಷ್ಟು ದಿನ ಕೊಟ್ಟ ಊಟ, ಗೀಟ ಎಲ್ಲ ತಿಂದ ಚಾಮಿ ಇವತ್ತು ಗುರುತೇ ಇಲ್ಲದಂತೆ ಕಣ್ಣಗಲಿಸಿ ಕ್ರೂರವಾಗಿ ಹಲ್ಲು ತೋರಿಸಿದ್ದು ಜಾಸ್ತಿ ನೋವಾಗಿತ್ತು.

ಸ್ವಲ್ಪ ಹೊತ್ತಿಗೆ ಶಾಲೆ ಮುಗಿಸಿ ಬಂದ ಮಾವನ ಮಕ್ಕಳು ಆನಂದ, ಗಿರಿ ಇಬ್ಬರನ್ನೂ ನೋಡುತ್ತಲೇ ಗಾಯ, ಚಾಮಿ ಎಲ್ಲ ಮರೆತು ಹೋಯಿತು ಅವಳಿಗೆ. ಅವರಿಬ್ಬರಿಗೂ ಈ ಪುಟ್ಟ ರಾಜಕುಮಾರಿಯನ್ನು ಕಂಡರೆ ಅಸಾಧ್ಯ ಪ್ರೀತಿ. ನೇರಳೆ ಬಣ್ಣದ ಕುಂಟಾಲ ಹಣ್ಣು, ಬಚ್ಚಲ ಮನೆಯ ಒಲೆಯಲ್ಲಿ ಸುಟ್ಟ ಗೇರುಬೀಜ, ಕೆಂಪು ಕೆಂಪು ಕೇಪುಳದ ಹಣ್ಣು, ಚೊಗರು ಚೊಗರಾದ ಮಿಡಿ ಸೌತೆ....ಏನೆಲ್ಲಾ ಕಾದಿತ್ತು ಪಮ್ಮಿ, ಬಾಬ್ಲಿಗೆ! ಅಂತೂ ನಾಲ್ಕೂ ಜನರ ಕೂಟ ಮಾತಾಡಿ, ಕುಣಿದು, ತಿಂದು ಎಲ್ಲಾ ಆಯಿತು. ಕತ್ತಲು ಬೀಳುವಾಗ ಬೆವರಿ ಬೆವರಿ ಹೋದ ಮಕ್ಕಳು, ದೊಡ್ದವರು ಎಲ್ಲರ ಸ್ನಾನವೂ ಮುಗಿದು ಭಜನೆ-ಗಿಜನೆ ಮುಗಿದು ಅಡುಗೆಮನೆಯಲ್ಲಿ ಊಟಕ್ಕೆ ಕುಳಿತರು ಎಲ್ಲರೂ, ಮೊದಲು ಮಕ್ಕಳ ಸರದಿ. ಬಾಬ್ಲಿ ಮಾತ್ರ ಒಳಗೇ ಬರಲೇ ಇಲ್ಲ, ಅಷ್ಟರವರೆಗೂ ರೆಕ್ಕೆ ಕಟ್ಟಿ ಹಾರುತ್ತಿದ್ದವಳಿಗೆ ಈಗ ಸಂಕಟ. ಅಮ್ಮ, ಅಜ್ಜಮ್ಮ ಎಷ್ಟೇ ಮುದ್ದು ಮಾಡಿದರೂ, ಬೆದರಿಸಿದರೂ, ಗದರಿಸಿದರೂ ಅವಳಿಗೆ ಊಟ ಗಂಟಲಿನಿಂದ ಇಳಿಯುತ್ತಿರಲಿಲ್ಲ. ಕಾರಣವಿಷ್ಟೇ, ಮನೆಯಲ್ಲಿ ಬಿಳಿ ಅನ್ನ ತಿಂದು ಅಭ್ಯಾಸವಿದ್ದವಳಿಗೆ ಇಲ್ಲಿನ ಕೆಂಪು ಬಣ್ಣದ ಅನ್ನ ಸಪ್ಪೆ ಸಪ್ಪೆ ಅನಿಸುತ್ತಿತ್ತು. ಅದಕ್ಕೆ ರಾಶಿ ಮೊಸರು ಸುರಿದರೂ ಅಷ್ಟೇ, ಸಾರು ಹಾಕಿದರೂ ಅಷ್ಟೇ ಅದನ್ನು ಮುಟ್ಟುತ್ತಿರಲಿಲ್ಲ ಅವಳು. ‘ ಅವಳು ಕುಚ್ಚಿಗೆ ತಿನ್ನಲ್ಲ, ಇನ್ನು ಒಂದು ತಿಂಗಳು ಏನು ಮಾಡಲಿ ಎಂಬ ಸಂಕಟಕ್ಕೆ ಅಮ್ಮ ತಲೆ ಮೇಲೆ ಕೈ ಹೊತ್ತು ಕುಳಿತರು. “ಅತ್ತಿಗೆ, ಯಾಕೆ ತಲೆಬಿಸಿ ಮಾಡ್ತ್ರಿ, ನಾಳೆಯಿಂದ ಅವಳಿಗೋಸ್ಕರ ಒಂದು ಮುಷ್ಟಿ ಬೆಳ್ತಿಗೆ ಇಟ್ಟರಾಯ್ತು” ಎಂದ ಮಾಮಿ ಬಡ ಬಡ ಅವಲಕ್ಕಿ-ಮೊಸರು ಕಲೆಸಿ ಕೊಟ್ಟರು. ಅಡುಗೆಮನೆಗೆ ತಾಗಿಯೇ ಇದ್ದ ಅಜ್ಜ ಮಲಗುವ ಕೋಣೆಯ ಕಟ್ಟೆಯ ಮೇಲೆ ಕೂತು, ಖುಷಿಯಲ್ಲಿ ಗಬಗಬ ತಿಂದು ಬಟ್ಟಲನ್ನು ಬಾಗಿಲಲ್ಲಿ ನಿಂತ ಅಮ್ಮನ ಕೈಗೆ ಕೊಟ್ಟು ಓಡಿದಳು ಪೋರಿ. ‘ ಪಮ್ಮಿ, ಆನಂದ, ಗಿರಿ ಎಲ್ಲರಿಗಿಂತ ನಾನೇ ಮೊದಲು ಊಟ ಮುಗಿಸಿದ್ದು ’ ಅಂತ ಅವಳು ಜಂಭ ಕೊಚ್ಚಿಕೊಂಡಿದ್ದೂ ಆಯ್ತು. ಆನಂದ ಒಂದಿಷ್ಟು ಬಾಲ ಮಂಗಳ ಓದಿದ, ಎಲ್ಲರೂ ಕೂತು ಕೇಳಿ, ಡಿಂಗನ ಬಗ್ಗೆ ಹರಟಿ ಪಾಂಡು ಮಾಮ ಮನೆಗೆ ಬರುವ ಹೊತ್ತಿಗೆ ಮಕ್ಕಳೆಲ್ಲಾ ನಿದ್ದೆಗೆ ಜಾರಿದ್ದರು.

ಚಾವಡಿಯ ಗಡಿಯಾರ ಒಂದು ಹೊಡೆದಿರಬೇಕು, ಯಾಕೋ ಅಮ್ಮನಿಗೆ ಬಾಬ್ಲಿ ಮಾತಾಡುತ್ತಿರುವಂತೆ ಅನಿಸಿ ಎದ್ದು ನೋಡುತ್ತಾರೆ. ಮಲಗಿದ್ದವಳು ಏನೇನೋ ಕನವರಿಸುತ್ತಿದ್ದಾಳೆ, ಮೈ ಮುಟ್ಟಿ ಎಚ್ಚರಿಸ ಹೋದರೆ ಕುದಿಯುತ್ತಿದೆ. ರಾತ್ರಿಯಿಡೀ ಮನೆಯ ಎಲ್ಲರೂ ಜಾಗರಣೆಯಿದ್ದು ಅವಳಿಗೆ ತಣ್ಣೀರಪಟ್ಟಿ ಹಾಕಿದ್ದಾಯ್ತು. ಹೇಗೋ ಅವಳನ್ನೆಬ್ಬಿಸಿ ಮನೆಯಲ್ಲಿದ್ದ ಅರಿಷ್ಟವನ್ನು ಕುಡಿಸಿದ್ದಾಯ್ತು.  ‘ ಬಸ್ಸು ಪ್ರಯಾಣವಲ್ವಾ, ಸುಸ್ತಾಗಿರಬೇಕು, ಪಟ ಪಟ ಮಾತಾಡ್ತಾಳಲ್ಲ ದೃಷ್ಟಿಯಾಗಿರಬೇಕು ಅಂತೆಲ್ಲಾ ಮಾತಾಡಿಕೊಂಡರು ದೊಡ್ಡವರೆಲ್ಲಾ. ಯಾರೂ ಅವಳ ಕನವರಿಕೆಗೆ ಕಿವಿ ಕೊಡಲೇ ಇಲ್ಲ. ತಣ್ಣೀರುಪಟ್ಟಿಗೋ, ಅರಿಷ್ಟಕ್ಕೋ ಬೆಳಗಾಗುವಾಗ ಜ್ವರ ಬಿಟ್ಟಿತ್ತು. ಅಲ್ಲಿದ್ದ ಒಂದು ತಿಂಗಳೂ ನೀರು, ತಿಂಡಿ, ಊಟ ಮತ್ತು ಮಜ್ಜಿಗೆ ಕಡೆದ ಕೂಡಲೇ ಸಿಗುತ್ತಿದ್ದ, ಅವಳು ತುಂಬ ಇಷ್ಟಪಡುತ್ತಿದ್ದ ತಾಜಾ ಬೆಣ್ಣೆ ಎಲ್ಲವನ್ನೂ ಅವಳದೇ ಜಾಗ ಎಂಬಂತೆ ಕಟ್ಟೆಯ ಮೇಲೆಯೇ ಕೂತು ತಿಂದಳೇ ಹೊರತು ಅಡುಗೆಮನೆಗೆ ಕಾಲೇ ಇಡಲಿಲ್ಲ. ಚಾಮಿ ಬೆಕ್ಕನ್ನಂತೂ ಮುಟ್ಟಲೂ, ನೋಡಲೂ ಹೋಗಲಿಲ್ಲ.

 ಒಂದು ತಿಂಗಳು ಪೂರ್ತಿ ಗಮ್ಮತ್ತೇ ಗಮ್ಮತ್ತು ನಾಲ್ಕು ಮಕ್ಕಳದ್ದೂ, ಗುಡ್ಡ ತಿರುಗಿ, ಹೊಳೆಯಲ್ಲಿ ನೀರಾಟವಾಡಿ, ಮರದ ಮೇಲೆ ನೇತಾಡಿ ಎಲ್ಲವೂ ಆಯ್ತು. ಗದ್ದೆ ಕೆಲಸಕ್ಕೆ ಬರುತ್ತಿದ್ದ ಓಬಯ್ಯನ ಜೀವ ತಿಂದು ಅವನನ್ನ ತೆಂಗಿನ ಮರಕ್ಕೆ ಹತ್ತಿಸಿ, ನಾಲಿಗೆ ಜುಮ್ ಅನಿಸುವಷ್ಟು ಸಿಹಿಯಾದ, ತಂಪು-ತಂಪಾದ ಎಳೆನೀರನ್ನು ಅವಳಿಷ್ಟ ಬಂದಷ್ಟು ಕುಡಿದಳು.  ಒಣ ತೆಂಗಿನ ಮಡಲ ಮೇಲೆ ಈ ಬಾಬ್ಲಿ ಮಹಾರಾಣಿ ಕೂತು ಅದನ್ನು ಇಬ್ಬರು ಹುಡುಗರೂ ಎಳೆಯಬೇಕು, ರಾಜು ನಾಯಿ ಅವರೊಂದಿಗೆ ತಾನೂ ಸೇರಿ ಕುಣಿಯುತ್ತಿತ್ತು. ಪಮ್ಮಿ ದೂರ ಕೂತು ನಕ್ಕೂ ನಕ್ಕೂ ಇಡುತ್ತಿದ್ದಳು. ಸಂಜೆಯಾದರೆ ಆನಂದ ಸೈಕಲ್ ಅಲ್ಲಿ ಎಲ್ಲರನ್ನೂ ಸುತ್ತು ಹಾಕಿಸಲೇ ಬೇಕು. ದಿನಗಳು ಉರುಳೇ ಹೋಯ್ತು. ಹೊರಡುವ ದಿನವಂತೂ ಬಾಬ್ಲಿ ಸುರಿಸಿದ ಕಣ್ಣೀರಿಗೆ ಬಹುಶಃ ಬಾವಿಯಾದರೆ ಅರ್ಧ ತುಂಬುತ್ತಿತ್ತೋ ಏನೋ!

ಅಜ್ಜಮ್ಮ ಮನೆಯಿಂದ ವಾಪಾಸ್  ಮೂಡಿಗೆರೆಯಲ್ಲಿ ಬಸ್ ನಿಂದ ಇಳಿಯುತ್ತಿದ್ದಂತೆ ಬಸ್ ಸ್ಟಾಂಡ್ ಅಲ್ಲಿ ಕಾಯುತ್ತಿದ್ದ ಅಣ್ಣನನ್ನು ನೋಡಿ ಅವರ ಬಳಿ ಓಡಿದಳುಮಗಳನ್ನು ಎತ್ತಿಕೊಂಡ ಅಣ್ಣ ಇಷ್ಟೂ ದಿನ ಬಿಟ್ಟಿದ್ದಕ್ಕೆ ಇವಾಗ ಮುದ್ದು ಮಾಡ್ತಾಳೆ, ಗಡ್ಡ ಚುಚ್ಚಿದ ಕೂಡಲೇ ‘ಎಂಥ ಅಣ್ಣ ನಿನ್ನ ಗಡ್ಡ ಚುಚ್ಚುತ್ತೆ, ಮತ್ತಿನ್ನು ಶುರು ವರದಿ ಒಪ್ಪಿಸಲಿಕ್ಕೆ’ ಅಂತ ಅಂದುಕೊಂಡರೆ ಅವಳು ಅವರ ಹೆಗಲೇರಿ ಕುತ್ತಿಗೆ ಸುತ್ತ ಕೈ ಹಾಕಿ ಅಪ್ಪಿಕೊಂಡು ಅವರ ಕಿವಿಯಲ್ಲಿ ಗುಟ್ಟಿನಂತೆ ಹೇಳಿದ್ದಿಷ್ಟು. " ಅಣ್ಣನಂಗೆ ಬೆಕ್ಕು ಇಷ್ಟ ಇಲ್ಲ". ಸಣ್ಣ ಇರುವೆ ಕಂಡರೂ ಎಲೆಗೆ ಹತ್ತಿಸಿ ಅದನ್ನು ಬೇರೆಡೆಗೆ ಎತ್ತಿಡುವ ಪ್ರಾಣಿ ದಯಾ ಸಂಘದ ಅಧ್ಯಕ್ಷೆಗೆ ಏನಾಯ್ತಪ್ಪ ಅಂತ ಅಚ್ಚರಿಯಾಯಿತು ಅಣ್ಣನಿಗೆ. ಅಷ್ಟರಲ್ಲಿ ಪಮ್ಮಿ ಬಂದು ಕಾಲು ಬಳಸಿ ಅಪ್ಪಿಕೊಂಡಿದ್ದರಿಂದ ಆ ವಿಷಯ ಆಮೇಲೆ ಮಾತಾಡೋಣ ಎಂದುಕೊಂಡರು. ಮನೆಗೆ ಬಂದಿದ್ದೇ ತಡ, ವಿಕ್ರಂ, ಜಗ್ಗು, ಗಾಯತ್ರಿ, ವಿಜಿ, ಪಲ್ಲಿ, ದರ್ಶನ್ ಎಲ್ಲರೂ ಹಾಜರಾದರು. ಅವರೊಟ್ಟಿಗೆ ಆಡಿ ಕುಣಿಯುತ್ತಿದ್ದವಳನ್ನು ಕರೆಯಲು ಮನಸ್ಸಾಗಲಿಲ್ಲ ಅಣ್ಣನಿಗೆ. ಆ ವಿಷಯ ಅಲ್ಲೇ ಉಳಿದು ಹೋಯಿತು. ಊರಿಂದ ವಾಪಾಸಾಗಿ ಒಂದು ವಾರ ಉರುಳಿರಬೇಕು, ಇನ್ನೂ ಯಾರೂ ಬಂದಿಲ್ಲ ಆಡೋಕೆ ಅಂತ ಹಿಮ್ಮಡಿ ಮೇಲೆ ಭಾರ ಹಾಕಿ ನಿಂತಲ್ಲೇ ಸುತ್ತುತ್ತಾ ಮಣ್ಣಿನಲ್ಲಿ ಚಿತ್ತಾರ ಬಿಡಿಸುತ್ತಿದ್ದಳು ಬಾಬ್ಲಿ. ಪಮ್ಮಿ ಯಥಾ ಪ್ರಕಾರ ಪುಸ್ತಕ ಹಿಡಿದು ಗಂಭೀರವಾಗಿ ಓದುವ ಪ್ರಯತ್ನ ಮಾಡುತ್ತಿದ್ದಳು, ಅವಳನ್ನು ಆಟಕ್ಕೆ ಕರೆದೂ ಕರೆದೂ ಸಾಕಾಗಿತ್ತು ಬಾಬ್ಲಿಗೆ. ಅಷ್ಟರಲ್ಲಿ ವಿಜಿ ವಿಕ್ರಂ ಮನೆಯ ಬೇಲಿ ಹತ್ತಿರ ಬಂದು ಗಟ್ಟಿಯಾಗಿ ಕಿರುಚಿದ, “ ಏ ಬನ್ರೇ, ವಿಕ್ರಂ ಮನೇಲಿ ಬೆಕ್ಕಿನ ಮರಿ ತಂದಿದ್ದಾರೆ” ಅಂತ. ಪಮ್ಮಿ ಪುಸ್ತಕ ಎತ್ತಿಟ್ಟು ಸ್ಲಿಪ್ಪರ್ ಹಾಕಿ ಹೊರಟಳು, “ ಬಾಬ್ಲಿ, ಚಪ್ಪಲ್ ಹಾಕು ಬಾರೇ” ಎಂದರೆ ಅವಳು ತಲೆಯೆತ್ತದೆ “ಬರಲ್ಲ” ಎಂದುಸುರಿದಳು. ಇಡೀ ಮಕ್ಕಳ ಗ್ಯಾಂಗ್ ವಿಕ್ರಂ ಮನೇಲಿ ಬೆಕ್ಕಿನ ಮರಿ ನೋಡೋಕೆ ನೆರೆದಿತ್ತು. ಇವಳೊಬ್ಬಳೇ ತನ್ನ ಪಾಡಿಗೆ ತಾನು ಮಣ್ಣಲ್ಲಿ ಆಡುತ್ತಿದ್ದಳು. 

ಸ್ವಲ್ಪ ಹೊತ್ತಿನ ನಂತರ ಎಲ್ಲರೂ ಅವಳಾಡುತ್ತಿದ್ದಲ್ಲಿಗೆ ಬಂದರು, ವಿಕ್ರಂ ಆ ಮರಿಯನ್ನೆತ್ತಿಕೊಂಡು ಬಂದಿದ್ದ. “ ಏ ಬಾಬ್ಲೀ, ನೋಡೇ, ಎಷ್ಟು ಮುದ್ದಾಗಿದೆ ಮರಿ” ಎಂದ. ಅವಳೊಮ್ಮೆ ಅದರ ಕಡೆ ನೋಡಿದಳು. ಮುಟ್ಟಲು ಹೋಗಲಿಲ್ಲ. “ಇದಕ್ಕೇನು ಹೆಸರಿಡೋಣ, ಹೇಳು, ನೀ ಹೇಳಿದ ಹೆಸರೇ ಇಡ್ತೀನಿ ಕಣೇ, ಪ್ರಾಮಿಸ್ “ ಎಂದ. ಆ ಮರಿ ಚೂರೇ ಚೂರು ಕಣ್ಣು ಬಿಡುತ್ತಿತ್ತು, ಹತ್ತಿಯ ಬೊಂಬೆಯ ಥರವಿತ್ತು ನೋಡೋಕೆ, ‘ ಈ ಮುದ್ದು ಮರಿ ಚಾಮಿಯ ಹಾಗೆ ಇರಲಿಕ್ಕಿಲ್ಲ, ಅದೊಂದು ಕೆಟ್ಟ ಬೆಕ್ಕು, ಇದಿನ್ನೂ ಚಿಕ್ಕ ಪಾಪು ಎಂದುಕೊಂಡು ಹತ್ತಿರಕ್ಕೆ ಬಂದು ಹಗುರಕ್ಕೆ ಒಂದು ಬೆರಳಲ್ಲಿ ಅದರ ಮೈಯನ್ನು ತೀಡಿದಳು, ಅದು ಹೌದೋ ಅಲ್ಲವೋ ಎಂಬಂತೆ ಮೈಯಲುಗಿಸಿ ಮಿಯಾಂಗುಟ್ಟಿತು. ಬಾಬ್ಲಿಗೆ ಖುಷಿ ಅನಿಸಿ ಮುದ್ದು ಉಕ್ಕಿ ಬಂತು. ಅದರ ಹೆಸರು ಚಾಮಿ ಎಂದು ಹೇಳಲೇ ಒಂದು ಅರೆ ಘಳಿಗೆ ಯೋಚಿಸಿದಳು, ಬೇಡ, ಅದರ ಥರಾ ಇದೂ ಕೆಟ್ಟ ಬುದ್ಧಿ ಕಲಿತರೆ ಅನಿಸಿ “ಪಾಚು ಅಂತ ಇಡೋಣ?” ಎಂದಳು. ವಿಕ್ರಂಗೂ, ಮಕ್ಕಳಿಗೂ ಒಪ್ಪಿಗೆಯಾಗಿ ಸರ್ವಾನುಮತದಿಂದ ಪಾಚುವಿನ ನಾಮಕರಣವಾಯಿತು. ಪಾಚು ಬೇಗ ಬೇಗ ಬೆಳೆದು ದೊಡ್ಡವನಾದ, ಎಲ್ಲ ಮಕ್ಕಳು ಕುಡಿಯುವ ಹಾಲಿನಲ್ಲಿ ಅವನಿಗೂ ಒಂದು ಪಾಲಿರುತ್ತಿತ್ತಲ್ಲ!. 

ಮಕ್ಕಳೆಲ್ಲಾ ಶಾಲೆ ಮುಗಿಸಿ ಬಂದೊಡನೆ ವಠಾರದ ಪಕ್ಕದಲ್ಲಿದ್ದ ಸುನಂದಾ ಆಂಟಿ ಮನೆಯ, ರಾಕಿ ನಾಯಿಯ ಜೊತೆ ಆಟ ಆಡುತ್ತಿದ್ದರು, ಅಷ್ಟೂ ಮನೆಗಳ ಎದುರಿದ್ದ ಉದ್ದನೆ ಖಾಲಿ ಜಾಗದಲ್ಲಿ. ರಾಕಿಯೂ ಮಕ್ಕಳೊಟ್ಟಿಗೆ ಸೇರಿಸಿಕ್ಕಾಪಟ್ಟೆ ಕುಣಿಯುತ್ತಿದ್ದ.  ರಾಕಿ, ಪಾಚು ಇಬ್ಬರೂ ಒಂದನ್ನೊಂದು ಇಷ್ಟಪಡದಿದ್ದರೂ ಜಗಳವಾಡುತ್ತಿರಲಿಲ್ಲ. ಅವರ ಪಾಡಿಗೆ ಅವುಗಳಿರುತ್ತಿದ್ದವು. ಬಾಬ್ಲಿಗೆ ಪಾಚುವೂ ಇವಾಗಿವಾಗ ರಾಕಿಯಷ್ಟೇ ಇಷ್ಟವಾಗುತ್ತಿದ್ದ. 
ಅದೊಂದು ದಿನ, ಬಾಲವಾಡಿಯಿಂದ ಬಂದು ಊಟ ಮಾಡಿ ಮಲಗಿದ್ದ ಬಾಬ್ಲಿ ನಿದ್ದೆಯಿಂದ ಎದ್ದು ಹೊರ ಬಂದು ಕೂತಳು. ಇನ್ನೂ ಪಮ್ಮಿ ಅಥವಾ ಬೇರೆ ಮಕ್ಕಳ್ಯಾರೂ ಶಾಲೆಯಿಂದ ಬಂದಿರಲಿಲ್ಲ. ಯಾಕೋ ಸುಮ್ಮನೆ ಮೆಟ್ಟಲ ಮೇಲೆ ಕೂತವಳಿಗೆ ಬೇಲಿ ಬದಿಯ ಹೂವೊಂದರ ಮೇಲೆ ಏನೋ ಅಲುಗಾಡಿದಂತಾಯ್ತು. ಅದನ್ನೇ ನೋಡುತ್ತಿದ್ದವಳಿಗೆ ದೊಡ್ಡ- ಅತೀ ದೊಡ್ಡ ಚಿಟ್ಟೆಯೊಂದು ಕಾಣಿಸಿತು. ಉದ್ವೇಗ, ಉದ್ರೇಕದಿಂದ ಜಿಗಿದು, ಓಡಿ ಹೋಗಿ ಬಟ್ಟೆ ಮಡಚುತ್ತಿದ್ದ ಅಮ್ಮನನ್ನು ಕರೆದುಕೊಂಡು ಬಂದಳು. ಅಷ್ಟು ದೊಡ್ಡ ಚಿಟ್ಟೆಯನ್ನೆಂದೂ ಬಾಬ್ಲಿ ನೋಡಿರಲಿಲ್ಲ.  ಅದು ಪತಂಗ ಎಂದರು ಅಮ್ಮ. ಇಬ್ಬರೂ ನೋಡುತ್ತಿದ್ದಂತೆ ಅದು ಅತ್ತಿಂದಿತ್ತ ಹಾರತೊಡಗಿತು. ಅದರ ಬಣ್ಣಗಳು, ಚುಕ್ಕೆಗಳು ಅದೆಷ್ಟು ಆಕರ್ಷಕವಾಗಿದ್ದವೆಂದರೆ ಅದನ್ನು ಮುಟ್ಟಬೇಕೆಂಬ ಆಸೆ ಬಾಬ್ಲಿಗಾಯ್ತು. ಆದರೆ ಅಮ್ಮ - ಅಣ್ಣ ಹೇಳಿದ್ದರಲ್ಲ, ಅದನ್ನು ಮುಟ್ಟಿದರೆ ಅದಕ್ಕೆ ತೊಂದರೆಯಾಗಬಹುದು, ಅದು ಸತ್ತೂ ಹೋಗಬಹುದು ಅಂತ. ಮಿತಿ ಮೀರಿದ ಖುಷಿಯಿಂದ ತೆಪ್ಪಗೆ ನಿಲ್ಲಲಾರದೆ ಕುಣಿದು, ಜಿಗಿದು, ಕಿರುಚಾಡಿ ಕಿರುಚಾಡಿ ಇಟ್ಟಳು. ಅಷ್ಟರಲ್ಲೇ ಎಲ್ಲಾ ಮಕ್ಕಳೂ ಬಂದರು. ಎಲ್ಲರಿಗೂ ಅಸಾಧ್ಯ ಖುಷಿ ಅಷ್ಟು ದೊಡ್ಡ ಪತಂಗವೊಂದನ್ನು ನೋಡಲು ಸಿಕ್ಕಿದ್ದು. ಎಲ್ಲರ ಸಂಭ್ರಮ, ಖುಷಿಯ ಮಧ್ಯೆಯೇ ಹಾಲು ಕುಡಿಯಲು ಬಟ್ಟೆ ಬದಲಾಯಿಸಲು ಅವರವರ ಅಮ್ಮಂದಿರು ಕರೆಯಲಾರಂಭಿಸಿದರು. ಎಲ್ಲರೂ ಹೊರಟರು, ಪಮ್ಮಿ ಯೂ, ಬಾಬ್ಲಿಯೂ ಹೋದರು ಒಳಗೆ ಅಮ್ಮನೊಟ್ಟಿಗೆ. ಯಾವತ್ತೂ ಹಾಲು ಕುಡಿದು ತಿಂಡಿ ತಿನ್ನಲು ಹಟ ಮಾಡುವವಳು ಗಬಗಬ ಎಲ್ಲಾ ಮುಗಿಸಿ ಎಲ್ಲರಿಗಿಂತಲೂ ಮೊದಲು ಅವಳೇ ಹೊರಗೋಡಿ ಬಂದಳು. ಅವಳು ಹೊರಗೆ ಬರುವುದಕ್ಕೆ ಸರಿಯಾಗಿ ಪಾಚು ಬೆಕ್ಕು ಆ ಬೇಲಿಯ ಮುಂದಿಂದ ಸರಿದು ಇವಳ ಹತ್ತಿರ ಬರುವುದಕ್ಕೂ ಸರೀ ಹೊಯ್ತು. ಅದರ ಬಾಯಲ್ಲಿ ಏನೋ ಇತ್ತು, “ಏನೋ ಪಾಚು ಏನ್ ತಿಂತಾ ಇದ್ದೀಯಾ” ಎಂದು ನೋಡಲು ಬಗ್ಗಿದವಳಿಗೆ ಕಂಡದ್ದು ಅಷ್ಟು ಹೊತ್ತೂ ಕನಸಿನ ಬಣ್ಣಗಳನ್ನು ಹೊತ್ತು ಹಾರುತ್ತಿದ್ದ ಪತಂಗದ ಒಂದು ರೆಕ್ಕೆ! ನಂಬಲಾಗದೇ ಪಾಚುವನ್ನು ಕೈಲಿ ಹಿಡಿದು ಅದರ ಬಾಯಲಿದ್ದ ವಸ್ತುವನ್ನು ಸರಿಯಾಗಿ ನೋಡಿದಳು. ಹೌದು, ಅದು ಪತಂಗದ ರೆಕ್ಕೆ! ಅಂದರೆ ಪಾಚು ಅದನ್ನು ತಿಂದುಬಿಟ್ಟಿದೆ...ಬಾಬ್ಲಿ ಕೈಲಿದ್ದವನನ್ನು ಬಿಟ್ಟು ಬಿಟ್ಟಳು. ಅಷ್ಟರಲ್ಲಿಯೇ ಬಾಗಿಲಿಗೆ ಬಂದ ಪಮ್ಮಿಯೂ ಅದನ್ನು ನೋಡಿದವಳೇ, “ ಅಯ್ಯೋ, ಅಮ್ಮ, ಆ ಪತಂಗವನ್ನ ಪಾಚು ತಿಂದು ಬಿಟ್ಟಿತಮ್ಮ “ ಎಂದು ಕಿರುಚಿದಳು. ಪಾಚು ಬಾಯಲಿದ್ದದ್ದನ್ನು ಪೂರ್ತಿ ತಿಂದು ವಿಕ್ರಂ ಮನೆ ಕಡೆ ಆರಾಮಾಗಿ ನಡೆದು ಹೋಯ್ತು. ಅಮ್ಮ ಹೊರಗೆ ಬಂದವರು “ ಹೌದಾ! ಛೇ, ಪಾಪ, ಬೆಕ್ಕುಗಳು ಚಿಕ್ಕ ಪುಟ್ಟ ಹಕ್ಕಿ, ಚಿಟ್ಟೆಯನ್ನು ಹಿಡಿದು ಬಿಡುತ್ತವೆ, ಪಾಪ ಆ ಪತಂಗ” ಎಂದರು.  ಮಕ್ಕಳೆಲ್ಲಾ ಬಂದರೂ ಬಾಬ್ಲಿ ಸುಮ್ಮನೇ ಕುಳಿತಿದ್ದಳು ಅಷ್ಟೇ! ಎಲ್ಲರ ಬಾಯಲ್ಲೂ ಪತಂಗ ಮತ್ತೆ ಪಾಚುವಿನ ಚರ್ಚೆ ನಡೆದು ಮತ್ತೆ ಬೇರೆ ಕಡೆಗೆ ವಾಲಿ ಆಟ ಶುರುವಾದರೂ ಬಾಬ್ಲಿ ಹೋಗಲೇ ಇಲ್ಲ, ಕಟ್ಟೆ ಮೇಲೆ ಕೂತು ಎಲ್ಲರನ್ನೂ ನೋಡುತ್ತಿದ್ದಳು. ಜ್ವರ ಏನಾದರೂ ಬಂದಿದೆಯಾ ಎಂದು ಅಮ್ಮ ಮತ್ತೆ ಮತ್ತೆ ಹಣೆ ಮುಟ್ಟಿ ನೋಡಿದರು, ಹಾಗೇನೂ ಆಗಿರಲಿಲ್ಲ. ಕತ್ತಲು ಬೀಳುವಾಗ ಇಬ್ಬರೂ ಒಳಬಂದು ಕೈ ಕಾಲು ಮುಖ ತೊಳೆದು ಭಜನೆ ಎಲ್ಲಾ ಮುಗಿಸುವ ಹೊತ್ತಿಗೆ ಅಣ್ಣ ಬಂದರು. ಎಲ್ಲರದೂ ಊಟವಾಯ್ತು, ಮಾಮೂಲಿನಂತೆ ಅಣ್ಣನಿಗೆ ನೀನೇ ತಿನ್ನಿಸು, ಕಲೆಸಿದ್ದು ಸರಿ ಆಗಿಲ್ಲ, ಉಪ್ಪು ಕಡಿಮೆ, ತುಪ್ಪ ಬೇಡ ಇವೆಲ್ಲಾ ರಾಗಗಳು, ದೂರುಗಳು ಬಾಬ್ಲಿಯಿಂದ ಬರದೇ ಕಲೆಸಿ ಕೊಟ್ಟದ್ದನ್ನು ಸುಮ್ಮನೇ ತಿಂದದ್ದನ್ನು ನೋಡಿ ಅವರಿಗೂ ಆತಂಕವಾಯಿತು. ಅಮ್ಮನೂ “ಸಂಜೆಯಿಂದ ಹೀಗೆ ಇದ್ದಾಳೆ” ಅಂದರು. ಊಟ ಆದ ಮೇಲೆ ಮೊಸರಿಗೆ ಸಕ್ಕರೆ ಹಾಕಿ ಬಾಗಿಲಲ್ಲಿ ಕೂತು ಇಬ್ಬರಿಗೂ ಒಂದೊಂದು ಸ್ಪೂನ್ ತಿನ್ನಿಸುವುದು ಅಮ್ಮನ ರೂಢಿ. ಇವತ್ತು ಹೊರಗೆ ಹಾಗೆ ಕೂತಾಗ, ಮೃದುವಾಗಿ ಬಾಬ್ಲಿಯನ್ನು ಬಳಸಿ ಅಣ್ಣ ಕೇಳಿದರು. “ ಏನಾಯ್ತಮ್ಮ ಬಾಬ್ಲಿ, ಜ್ವರ ಬಂದ ಹಾಗೆ ಅಗ್ತಾ ಇದೆಯಾ? ಸುಸ್ತಾಗ್ತಾ ಇದೆಯಾ? “ “ ಊಹೂಂ “ ಅಂದಳು ಬಾಬ್ಲಿ. “ಯಾರಾದರೂ ಬೈದರಾ? ಯಾಕಮ್ಮ ಇಷ್ಟು  ಡಲ್ ಇದ್ದೀಯಾ “ ಎಂದು ಕೇಳಿದರು ಮತ್ತೆ. ಆಗ ಬಂದ ಉತ್ತರ “ ಪಾಚು ನಂಗಿಷ್ಟ ಇಲ್ಲ ಅಣ್ಣ, ಬೆಕ್ಕುಗಳೇ ನಂಗಿಷ್ಟ ಇಲ್ಲ, ಚಾಮಿ ಅದು ಹೇಗೆ ಮಾಡಿದ್ದ ಅವತ್ತು ನಂಗೆ! ರಾಕ್ಷಸ ಅದು “ ಎಂದು ಹೇಳಿ ಗಂಟಲು ಕಟ್ಟಿ ಜೋರಾಗಿ ಅಳಲಾರಂಭಿಸಿದಳು. ಪಮ್ಮಿ , ಅಮ್ಮ ಸಂಜೆ ನಡೆದ ಕಥೆ ಮತ್ತು ಚಾಮಿ ಕಥೆ ಎರಡೂ ಹೇಳಿದರು ಅಣ್ಣನಿಗೆ. ಅಣ್ಣ ಹೇಳಿದರು, “ ಅದರ ಸ್ವಭಾವ ಬಾಬ್ಲಿ ಅದು, ಅದಕ್ಕೆ ನೀನು ಬೇಜಾರು ಮಾಡಿಕೊಳ್ಳಬಾರದು ಅಲ್ವಾ, ಬೆಕ್ಕುಗಳಿರುವುದೇ ಹಾಗೆ, ಮನುಷ್ಯನ ಹಾಗಿರಲು ಅವಕ್ಕೆ ಬರಲ್ಲ, ನಾಯಿಗಳ ಹಾಗೆಯೂ ಇರುವುದಿಲ್ಲ, ಎಲ್ಲವೂ ಬೇರೆ ಬೇರೆ. ನೀನು ಅದರ ಹತ್ತಿರ ದ್ವೇಷ ಬೆಳೆಸಿಕೊಳ್ಳಬಾರದು.  ಅದಕ್ಕೆ ಅದು ಆಹಾರ ಅಲ್ವಾ “ ಅಂತ. ಅದಕ್ಕೆ ಬಾಬ್ಲಿ, “ ಪತಂಗ ಯಾಕೆ ಆಹಾರ ಅಗಬೇಕು ಅದಕ್ಕೆ, ಹಾಲು ಕುಡಿಯುತ್ತಲ್ಲ, ಅನ್ನ ತಿನ್ನುತ್ತಲ್ಲ, ಮತ್ತು ಬೆಣ್ಣೆನೂ ತಿನ್ನುತ್ತೆ, ಅದೆಲ್ಲಾ ಬಿಟ್ಟು ಅಷ್ಟು ಚೆಂದದ ಪತಂಗ ಯಾಕೆ ತಿನ್ನಬೇಕಿತ್ತು , ಪಾಚುವನ್ನ ನಾನ್ಯಾವತ್ತೂ ಪ್ರೀತಿ ಮಾಡಲ್ಲ, ಅದೂ ಚಾಮಿ ಬೆಕ್ಕಿನ ಹಾಗೆಯೇ ಕೆಟ್ಟದ್ದು” ಎಂದು ಹೇಳಿ ಮತ್ತೆ ಜೋರಾಗಿ ಅತ್ತು ಬಿಟ್ಟಳು. ಆ ದಿನದಿಂದ ಪಾಚು ಅದಾಗೇ ಅವಳ ಹತ್ತಿರ ಬಂದರೂ ಅವಳದನ್ನು ಮುಟ್ಟುತ್ತಿರಲಿಲ್ಲ. ಪ್ರೀತಿಯೂ ತೋರಿಸುತ್ತಿರಲಿಲ್ಲ.

ಅದಾಗಿ ಒಂದೆರಡು ತಿಂಗಳು ಕಳೆದಿರಬೇಕು, ಬಾಬ್ಲಿ ಮನೆ ಎದುರು ಹಬ್ಬಿಸಿದ ಮನಿ ಪ್ಲಾಂಟ್ ಬಳ್ಳಿ ಮೇಲೆ ಎರಡು ಅತೀ ಪುಟಾಣಿ ಗುಬ್ಬಚ್ಚಿಗಳು ಸಂಸಾರ ಶುರು ಮಾಡಿಕೊಂಡವು. ಕಡ್ಡಿ ಕಡ್ಡಿ ಜೋಡಿಸಿ ಗೂಡು ಕಟ್ಟಿದವು. ಸ್ವಲ್ಪ ದಿನದಲ್ಲಿ ಮೊಟ್ಟೆ ಕೂಡಾ ಇಟ್ಟಾಯ್ತು. ಮಕ್ಕಳೆಲ್ಲಾ ಅದರ ತಂಟೆಗೇ ಹೋಗದೇ ದೂರದಲ್ಲೇ ನಿಂತು ಅದನ್ನು ನೋಡೋದೇ ನೋಡೋದು. ತುಂಬಾ ಖುಷಿ ಎಲ್ಲರಿಗೂ. ಆ ಮೊಟ್ಟೆ ಒಡೆದು ಮರಿ ಹೊರಕ್ಕೆ ಬಂತು, ಅದರ ಕಿರುಚಾಟ ಕೇಳೋದು, ಅದರ ಅಪ್ಪ, ಅಮ್ಮ ಅದಕ್ಕೆ ಬಾಯಿಗೆ ತುತ್ತು ಕೊಡೋದು ಎಲ್ಲವನ್ನೂ ಬಾಬ್ಲಿ ನೋಡಿದಕ್ಕೆ ಲೆಕ್ಕ ಇಲ್ಲ. ಅದನ್ನು ರಾತ್ರಿ ಅಣ್ಣನಿಗೆ ಒಂದು ಘಂಟೆ ವರದಿ ಒಪ್ಪಿಸುತ್ತಿದ್ದಳು. ದಿನಾ ಬೆಳಗ್ಗೆ ಅದನ್ನು ನೋಡೋಕೆ ಓಡೋದು ಬೇರೆ, ಚಳಿಯಾಗುತ್ತದೆ ಅದಕ್ಕೆ ಅಂತ ಅಮ್ಮ ಹೊಲೆದು ಉಳಿದ ಬಟ್ಟೆ ಚೂರುಗಳನ್ನು ಅದರ ಗೂಡಿನ ಹತ್ತಿರ ಇಟ್ಟು ಬರುತ್ತಿದ್ದಳು. ಆ ಸಂಸಾರದಲ್ಲಿ ಕಿಚಿಪಿಚಿ ಮಾತುಗಳು ಯಾವಾಗಲೂ, ಬಾಬ್ಲಿ ಅವುಗಳ ಹತ್ತಿರ ಗಂಟೆಗಟ್ಟಲೆ ನಿಂತು ಬಿಡುತ್ತಿದ್ದಳು. ಒಂದು ದಿನ ಮರಿ ಹಕ್ಕಿಗೆ ಹಾರಲು ಅದರ ಅಪ್ಪ ಅಮ್ಮ ಕಲಿಸಿ ಕೊಡುತ್ತಿದ್ದರು. ಬಾಬ್ಲಿ ಬಾಲವಾಡಿಯಿಂದ ಬಂದವಳು ಯಾವಾಗಿನಂತೆ ಗೂಡಿನ ಕಡೆ ಬಂದಳು, ಅಲ್ಲಿ ಅಪ್ಪ ಅಮ್ಮ ಹಕ್ಕಿ ಚೀರುತ್ತಿವೆ, ಮರಿ ಹಕ್ಕಿ ಎಲ್ಲೂ ಕಾಣಲಿಲ್ಲ. ಹಕ್ಕಿಗಳು ಗೂಡ ಸುತ್ತ ಕೆಳಗೆ ಮೇಲೆ ಹಾರುತ್ತಿವೆ, ಇವಳಿಗೆ ಏನೆಂದು ಗೊತ್ತಾಗಲಿಲ್ಲ. ಅಮ್ಮನ ಬಳಿ ಓಡಿ ಹೋಗಿ ಕೇಳಿದರೆ ಅಮ್ಮ ಆ ಪ್ರಶ್ನೆ ಕೇಳದವರಂತೆ ಸುಮ್ಮನಿದ್ದರು. ಮತ್ತೆ ಮತ್ತೆ ಅಮ್ಮನನ್ನು ಕೇಳಿಕೇಳಿ ಇಟ್ಟಳು, ಅಮ್ಮ ಉತ್ತರಿಸಲೇ ಇಲ್ಲ, ವಿಕ್ರಂ ಮನೇಲಿದ್ದ ಅಜ್ಜಿನಾ ಕೇಳೋಕೆ ಅಂತ ಹೋದಳು. ಆ ಅಜ್ಜಿ ತೊಡೆಯ ಮೇಲೆ ಪಾಚು ಮಲಗಿದ್ದ. ತುಂಬಾ ಕ್ಲೀನಾಗಿ, ಹೊಳೆಯುತ್ತಿದ್ದ ಡುಮ್ಮ ಡುಮ್ಮ ಆಗಿದ್ದ ಅವನೀಗ. ಅವನನ್ನು ಒಮ್ಮೆ ನೋಡಿ ಅಜ್ಜಿಯನ್ನು ಕೇಳಿದಳು “ ಅಜ್ಜಿ, ನಮ್ಮ ಮನೆ ಗಿಡದಲ್ಲಿದ್ದ ಮರಿ ಗುಬ್ಬಿ ಕಾಣ್ತಿಲ್ಲ, ಎಲ್ಲ್ ಹೋಯ್ತು ಗೊತ್ತಾ ಅಜ್ಜಿ “ ಅಂತ. ಅಜ್ಜಿ ಜಪಮಣಿಯನ್ನು ಎಣಿಸುತ್ತಿದ್ದವರು ಒಂದು ನಿಮಿಷ ನಿಲ್ಲಿಸಿ, “ ಅಯ್ಯೋ, ಬೆಳಗ್ಗೆ ಆ ಮರಿ ಹಾರೋಕೆ ಹೋಗಿ ಕೆಳಕ್ಕೆ ಬಿದ್ದು ಬಿಟ್ಟಿದೆ, ನಮ್ಮ ಪಾಚು ಅದನ್ನು ತಿಂದು ಬಿಟ್ಟನಂತೆ” ಅಂದರು. ಎರಡು ನಿಮಿಷ ಸುಮ್ಮನೆ ನಿಂತಿದ್ದ ಬಾಬ್ಲಿ ಪಾಚುವನ್ನು ದುರುದುರು ನೋಡಿದವಳೇ, “ ಅಜ್ಜಿ , ಇನ್ನು ಮೇಲೆ ಪಾಚೂನ ನಮ್ಮನೆಗೆ ಕಳಿಸಬೇಡಿ “ ಎಂದು ಅಲ್ಲಿಂದ ಸೀದಾ ಮನೆಗೆ ಬಂದಳು. ಅವಳಂದು ಅತ್ತೂ ಅತ್ತೂ ಬೆಕ್ಕಿನ ಇಡೀ ಕುಲಕ್ಕೆ ಹಾಕಿದ ಶಾಪಕ್ಕೆ ಶಕ್ತಿಯಿದಿದ್ದರೆ ಬಹುಶಃ ಪ್ರಪಂಚದದಲ್ಲಿ ಬೆಕ್ಕುಗಳೆಲ್ಲಾ ಬೇರೆ ಗ್ರಹಕ್ಕೆ ಪ್ರಯಾಣಿಸುತ್ತಿರಬೇಕಿತ್ತು. ಅಮ್ಮ, ಅಣ್ಣ ಆಮೇಲೆ ಅವಳನ್ನು ಸಂತೈಸಲು ಕಲಿತ ಬುದ್ಧಿಯೆಲ್ಲಾ ಖರ್ಚು ಮಾಡಬೇಕಾಯಿತು. ಆ ಅಪ್ಪ ಅಮ್ಮ ಗುಬ್ಬಚ್ಚಿಗಳು ಆ ಗೂಡು ಬಿಟ್ಟೂ ಹೋದವು.  ಪಾಚು ಅವರ ಮನೆಯ ಬೇಲಿ ಕಡೆ ಬಂದರೆ ಒಂದು ಕೋಲು ಹಿಡಿದು ಓಡಿಸಿ ಬಿಡುತ್ತಿದ್ದಳು ಬಾಬ್ಲಿ. ಯಾರೆಷ್ಟು ಹೇಳಿದರೂ ಪಾಚುವನ್ನು ಮುಟ್ಟುತ್ತಿರಲಿಲ್ಲ ಅವಳು. ಆದರೆ ರಾಕಿ ಮತ್ತೆ ಅವಳ ಸ್ನೇಹ ಮೊದಲಿಗಿಂತ ಜಾಸ್ತಿಯಾಗಿತ್ತು. 

ಅದೊಂದು ಭಾನುವಾರ, ಎಲ್ಲಾ ದೊಡ್ಡ ಮಕ್ಕಳಿಗೂ ಶಾಲೆಯ ಕಡೆಯಿಂದ ಟೂರು. ಬೆಳಿಗ್ಗೆ ಎಲ್ಲರೂ ಹೋದ ಮೇಲೆ ವಠಾರ ಖಾಲಿ ಖಾಲಿ ಕಾಣುತ್ತಿತ್ತು, ಬಾಬ್ಲಿಯೊಬ್ಬಳೇ ಏನು ಮಾಡುವುದು ಗೊತ್ತಾಗದೇ ಮಣ್ಣಲ್ಲಿ ಅಡುಗೆ ಆಟ ಆಡುತ್ತಿದ್ದಳು. ವಿಕ್ರಂ ಮನೇಲಿ ಅಜ್ಜಿ “ ಪಾಚೂ, ಪಾಚು “ ಅಂತ ಕರೆಯೋದು ಕೇಳಿತು ಅವಳಿಗೆ, ಸುಮಾರು ಹೊತ್ತಾದರೂ ಅಜ್ಜಿ ಕರೆಯುತ್ತಲೇ ಇದ್ದಾರೆ. ಏನಾಯ್ತು ಅಂತ ನೋಡಲು ಬೇಲಿಯ ಬದಿಗೆ ಬಂದು ಇಣುಕಿ ನೋಡಿದಳು ಬಾಬ್ಲಿ. ಇವಳನ್ನ ಕಂಡವರು ಅಜ್ಜಿ, “ ಬಾಬ್ಲಿ, ನೋಡೇ ನಿನ್ನ ಸಂಜೆಯಿಂದ ಪಾಚು ಕಾಣಿಸ್ತಿಲ್ಲ, ಎಲ್ಲೂ ಇಲ್ಲ” ಅಂದರು. ಸರಿ, ಅಜ್ಜಿ ಕೇಳ್ತಾ ಇದ್ದಾರಲ್ಲಾ ಅಂತ ಬಾಬ್ಲಿ ಸವಾರಿ ಹೊರಟಿತು ಪಾಚುವನ್ನು ಹುಡುಕಲು ಇಷ್ಟವಿಲ್ಲದಿದ್ದರೂ. ಬೇಲಿ, ಹಿತ್ತಲು, ವಠಾರದ ಎಲ್ಲಾ ಮನೆಗಳನ್ನು ಹುಡುಕಿದರೂ ಪಾಚು ಎಲ್ಲೂ ಇಲ್ಲ. ಸುನಂದಾ ಆಂಟಿ ಮನೆಯವರೆಲ್ಲಾ ಅವರೂರಿಗೆ ಹೋಗಿದ್ದರು ರಾಕಿಯನ್ನೂ ಕರೆದುಕೊಂಡು, ಹಾಗಾಗಿ ಅಲ್ಲಿ ಹೋಗುವ ಅವಕಾಶವಿಲ್ಲ , ಎಲ್ಲಿ ಹೋಗಿರಬಹುದು ಎಂದು ಅಜ್ಜಿ, ಬಾಬ್ಲಿ ಇಬ್ಬರೂ ಮಾತನಾಡಿಕೊಂಡರು. ಸುಮ್ಮನೆ ಸುಮಂಗಲಾ ಆಂಟಿ ಮನೆ ಹತ್ರ ನೋಡ್ತೀನಿ ಅಂತ ಬಂದಳು ಬಾಬ್ಲಿ. ಇಡೀ ಮನೆ ಹೊರಗಿಂದ ಸುತ್ತು ಹಾಕಿದಳು, ಬೆಡ್ ರೂಮಿನ ಕಿಟಕಿಯ ಬಳಿ ಬರುತ್ತಿದ್ದಂತೆ ಕ್ಷೀಣವಾಗಿ ಪಾಚುವಿನ ಮಿಯಾಂವ್ ಕೇಳಿತು. ಎತ್ತರದಲ್ಲಿದ್ದ ಆ ಕಿಟಕಿಯನ್ನು ಕಷ್ಟಪಟ್ಟು ಹತ್ತಿದಳು ಬಾಬ್ಲಿ. ಹತ್ತುವಾಗ ಅಮ್ಮ ನೋಡಿದರೆ ಅಷ್ಟೇ ನನ್ನ ಗತಿ ಅಂತನೂ ಅಂದುಕೊಂಡಳು. ಎಲ್ಲಾ ಕಿಟಕಿಗಳೂ ಭದ್ರವಾಗಿ ಹಾಕಲ್ಪಟ್ಟಿತ್ತು, ಹಿಂದಿನ ದಿನ ಮಧ್ಯಾಹ್ನವೇ ಒಳಗೆ ಸೇರಿಕೊಂಡಿದ್ದ ಪಾಚು ಹೊರ ಬರಲು ದಾರಿಯಿಲ್ಲದೇ ಒಳಗೇ ಸಿಕ್ಕಿ ಹಾಕಿಕೊಂಡಿದ್ದ. ಹಸಿವೆಯಿಂದ ಒದ್ದಾಡುತ್ತಾ ಕಿರುಚುತ್ತಿದ್ದ. ಬಾಬ್ಲಿ ಎಲ್ಲಾ ಕಡೆ ನೋಡಿದಳು ಬೆಡ್ ರೂಮಿನ ಇನ್ನೊಂದು ಮೂಲೆಗಿದ್ದ ಕಿಟಕಿಯ ಮೇಲ್ಭಾಗದ ಬೋಲ್ಟ್ ಸ್ವಲ್ಪ ಜಾರಿದಂತೆ ಕಾಣಿಸಿತು ಬಾಬ್ಲಿಗೆ. ಈ ಕಿಟಕಿಯಿಂದ ಕೆಳಕ್ಕಿಳಿದು, ಹೋಗಿ  ಸರ್ಕಸ್ ಮಾಡುತ್ತಾ ಆ ಕಿಟಕಿಯೇರಿ ಕಿಟಕಿ ಬಾಗಿಲು ಅಲುಗಾಡಿಸಿ ಅಲುಗಾಡಿಸಿ, ಒಂದಿಪ್ಪತ್ತು ನಿಮಿಷ ಒದ್ದಾಡಿ ಕೊನೆಗೂ ಮೇಲಿನ ಬೋಲ್ಟ್ ತೆಗೆದಳು, ಪಾಚು ಅಷ್ಟು ಮೇಲೆ ಹತ್ತಲಾರದು ಅನಿಸಿ ಮೇಲಿನಿಂದ ಕೈ ಹಾಕಿ ಕೆಳಕ್ಕಿನ ಬೋಲ್ಟ್ ತೆಗೆದು ಕಿಟಕಿ ಬಾಗಿಲು ತೆಗೆದಳು. ಅವನು ಹೇಗೋ ಹಾರಿ ಹೊರ ಬಂದ. ಬಂದವನೇ ಇವಳ ಕಾಲ ಹತ್ತಿರ ಮುಖವಿಟ್ಟು ಮುದ್ದು ಮಾಡಲು ಹೋದ. ದೂರ ಸರಿದ ಬಾಬ್ಲಿ “ ನಾನ್ಯಾವತ್ತೂ ನಿನ್ನ ಇಷ್ಟ ಪಡಲ್ಲ, ನಿನ್ನ ನೀನು ಬಿಡಿಸಿಕೊಳ್ಳೋಕ್ಕಾಗಲ್ಲ ಅಂತಷ್ಟೇ ಬಿಡಿಸಿದ್ದು ನಾನು , ನನ್ನ ಹತ್ರ ಬರಬೇಡ ಮತ್ತೆ ಮತ್ತೆ” ಎಂದು ಹೇಳಿ ಮನೆಗೋಡಿದಳು.