ಎಲ್ಲಾ ಅಮ್ಮಂದಿರಂತೆ ನಾನೂ ನನ್ನ ಪುಟ್ಟನಿಗೆ ಕೃಷ್ಣನ ವೇಷ ಹಾಕಿಸಿ ಹಿಂಸೆ
ಕೊಟ್ಟಿದ್ದೀನಿ. ನನ್ನ ಪುಟ್ಟ ಕೊಳಲು ಹಿಡಿದು ಅಪ್ಪನನ್ನು ಓಡಿಸಿಕೊಂಡೇ ಹೊರಟಿದ್ದ
ಉಪದ್ರ ಕೊಟ್ಟಿದ್ದಕ್ಕೆ!!!!! ಈ ಕೃಷ್ಣಾಷ್ಟಮಿಗೆ ಅಮ್ಮಂದಿರ ಸಂತಸ, ಸಂಭ್ರಮ ನೋಡಿ ಈ
ಸಾಲುಗಳು ಹೊಳೆದವು. ಚರ್ವಿತ ಚರ್ವಣವೆನಿಸಿದರೆ ಕ್ಷಮಿಸಿ.
ಇಂದು ಗೋಕುಲಾಷ್ಟಮಿಯಂತೆ, ಊರಿನ ಬೀದಿ ಬೀದಿಗಳಲ್ಲಿ
ಚಿಲ್ಟಾರಿ ಕೃಷ್ಣ - ರಾಧೆಯರ ಮೆರೆದಾಟ
ಕಚ್ಚೆಯೊಳಗಿಂದ ಇಣುಕುವ ಜೀನ್ಸ್
ಚಡ್ಡಿ ಕೃಷ್ಣನದ್ದಾದರೆ
ಬಿಗಿದಿದೆ ಮಿರ ಮಿರ ಮಿಂಚುವ ಬೆಲ್ಟು ರಾಧೆಯ ಲಂಗಕ್ಕೆ
ಟವಲ್ಲು, ತಿಂಡಿ, ನೀರು ತುಂಬಿದ ಟೊಣಪ ಬ್ಯಾಗು ಅಮ್ಮನ ಹೆಗಲಿಗೆ.
ಕಣ್ಣಿನವರೆಗೆ ಜಾರಿದ ಕಿರೀಟ, ಸೊಂಟದಲ್ಲಿ
ಸಿಕ್ಕಿಸಿದ ಕೊಳಲು
ಕಣ್ಣು, ಮೂಗು, ಬಾಯಿಂದ ಜಾರಿದ ನೀರ
ಮೇಲೆ ಬಳಿದ ಪೌಡರ್ ಗುರುತು
ಮುಕ್ಕಾಲಂಶ
ಕಂದಮ್ಮಗಳೆಲ್ಲಾ ಓರೆ
ನಾಮದ ವಿಠಲರೆ!
ಬೇರೆ ದಿನ ಸಿಗದ ಅಮ್ಮನ ಕೆಂಪು ಲಿಪ್ಸ್ಟಿಕ್ ತುಟಿಗಲ್ಲದೆ ಕೆನ್ನೆಗೂ
ಬಳಿದ ರಾಧೆ
ಕಿವಿಯ ದೊಡ್ಡ ಲೋಲಾಕು ಕುಣಿಸುತ್ತಾ, ತನಗೂ ಉದ್ದನೆಯ ಜಡೆ ಎಂಬ ಸಂತಸದಲಿ
ಅದಕೆ ಸುತ್ತಿದ್ದ ಮಲ್ಲಿಗೆ ಹಾರವ ಕೀಳಲೆತ್ನಿಸುವಾಕೆ .
ಅದೋ ಅಲ್ಲೊಬ್ಬಳು ರಾಧೆಯ ಗಲಾಟೆ, ಕೃಷ್ಣನಾಗಬೇಕಂತೆ ಅವಳಿಗೆ
ಯಾಕಮ್ಮ ಅಂದರೆ ಬೇಡವಂತೆ ಕೈಯಲ್ಲಿನ
ಕೊಡಪಾನ
ಬೇಕೆ ಬೇಕಂತೆ ಕೊಳಲು
ಮತ್ತು ಜುಟ್ಟಿಗೊಂದು ನವಿಲು
ಗರಿ!
ದಾರಿಗಳಲ್ಲಿ,
ಸ್ಕೂಲುಗಳಲ್ಲಿ , ದೇವಸ್ಥಾನಗಳಲ್ಲಿ
ಕೊನೆಗೆ ಫೋಟೋ ಸ್ಟುಡಿಯೋಗಳಲ್ಲೂ
ಕಣ್ಣಲ್ಲಿ ನಿದ್ದೆ, ಕೈಯಲ್ಲಿ ಬಿಸ್ಕತ್ತು ಹಿಡಿದ ಕೃಷ್ಣ
- ರಾಧೆಯರ ದಂಡು.
ಮುಖದಲ್ಲಿ ನಗುವರಳಿಸಲು ಲಂಚ ಕೊಡುವ ಅಮ್ಮಂದಿರ ಹೆಣಗಾಟ
ಸುರಿಯುವ ಬೆವರೊರೆಸಿಕೊಳ್ಳಲು ಫೋಟೋಗ್ರಾಫರನ ಪೇಚಾಟ
ಎಲ್ಲದರ ನಡುವೆ, ಹಿಂಸೆ ಕೊಡುವ ಬಟ್ಟೆಯೊಡನೆ ಪುಟಾಣಿಗಳ ಗುದ್ದಾಟ.
ಕೃಷ್ಣ ಹುಟ್ಟಿದ್ದಕ್ಕೆ, ನಡೆವುದಂತೆ ಗೋಕುಲಾಷ್ಟಮಿ ಪೂಜೆ.
ರಾಧೆಯೊಬ್ಬಳು ಕೇಳಿದಳು ಅಮ್ಮನಿಗೆ,
ರಾಧಾಷ್ಟಮಿ ಯಾವಾಗಮ್ಮ ? ರಾಧೆಯ ಬರ್ಥ್ ಡೇ ಯಾವಾಗ ?
ಸಾವಿರ ಸಾವಿರ ಗೋಪಿಯರ ಮಧ್ಯೆ ನಿಂತಿದ್ದನಂತೆ ಕೃಷ್ಣನಲ್ಲಿ
ಇಂದು ಹತ್ತಾರು ಕೃಷ್ಣರ ನಡುವೆ ನಿಂತಿದ್ದಾಳೆ ಒಬ್ಬಳು ರಾಧೆಯಿಲ್ಲಿ!