Monday, September 23, 2013

ಎಂದೂ ಮುಗಿಯದ ಯುದ್ಧ

ಜಗದೀಶ್ ಕೊಪ್ಪ ಅವರ ನಕ್ಸಲ್ ಇತಿಹಾಸ ಕಥನ, ಎಂದೂ ಮುಗಿಯದ ಯುದ್ಧ ಓದಿದೆ. ರಕ್ತಸಿಕ್ತ ಹೆಜ್ಜೆ ಗುರುತುಗಳ ಬಳಿ ಕೂತು, ಪ್ರತೀ ಹೆಜ್ಜೆಯ ಹಿಂದಿನ ಕಥೆಯನ್ನಾಲಿಸಿದಂತಾಯ್ತು. ಚಾರು ಮುಜಮ್ದಾರ್, ವೆಂಟಟಾಪು ಸತ್ಯನಾರಾಯಣ, ಕೊಬಡ್ ಗಾಂಡಿ, ಅನುರಾಧ, ಕೊಂಡಪಲ್ಲಿ ಸೀತಾರಾಮಯ್ಯ ಎಲ್ಲರ ಜೀವನ, ಹೋರಾಟಗಳ ಪರಿಚಯವಿದೆ ಇದರಲ್ಲಿ. ಪ್ರತೀ ಮಾಹಿತಿಯನ್ನೂ, ಅದಕ್ಕೆ ಸಂಬಂಧಿಸಿದ ಅಂಕಿ -ಅಂಶಗಳನ್ನು ಕೊಪ್ಪ ಅವರು ಕಲೆ ಹಾಕಿದ ರೀತಿ ಆಶ್ಚರ್ಯ ಹುಟ್ಟಿಸುತ್ತದೆ. ಕಥನದದ್ದುಕ್ಕೂ ಕಾಡುವ ವಿಷಾದವನ್ನು ಕೊಪ್ಪ ಓದುಗರೊಂದಿಗೆ ಹಂಚಿಕೊಳ್ಳುತ್ತಾ ಹೋಗುತ್ತಾರೆ. ಕೂಲಿ ಕಾರ್ಮಿಕರ, ಆದಿವಾಸಿಗಳ , ಸಣ್ಣ ಹಿಡುವಳಿದಾರರ , ಗೇಣಿದಾರರ , ಬಡ ರೈತರ ಹೀಗೆ ಎಲ್ಲರ ಅಸಹನೆ-ಆಕ್ರೋಶಕ್ಕೂ, ಅಷ್ಟೇ ಅಲ್ಲ, ನಿಟ್ಟುಸಿರು - ಕಣ್ಣೀರಿಗೂ ಸಕಾರಣಗಳನ್ನು ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ. ಬೇರೆ ಬೇರೆ ಆಯಾಮಗಳಲ್ಲಿ ನಕ್ಸಲರ, ಮಾವೋವಾದಿಗಳ ಧೋರಣೆ, ಅಭಿಪ್ರಾಯಗಳನ್ನು ತೆರೆದಿಡುತ್ತದೆ. ಕೇವಲ ನಕ್ಸಲರಷ್ಟೇ ಅಲ್ಲ, ಜಮೀನುದಾರರ, ಪೋಲಿಸರ ಹತ್ಯೆಗಳ ಬಗೆಯೂ ನಿಖರವಾಗಿ ಹೇಳುತ್ತಾರೆ ಕೊಪ್ಪ ಅವರು. ಜಿಜ್ಞಾಸೆ, ತರ್ಕ, ವಿವೇಚನೆಗಳಿಗೆ ನಿಲುಕದ ಕೊಲೆಗಳು, ಅಮಾನುಷ ಮುಖಗಳೂ ಪುಸ್ತಕ ಮಡಚಿಟ್ಟ ಮೇಲೂ ಕಾಡುತ್ತವೆ, ಬೊಬ್ಬಿಲಿ ಕಥಾ ಕಿವಿಯಲ್ಲಿ ಬೊಬ್ಬಿರಿಯುತ್ತದೆ. ಗದ್ದಾರ್ ಹಾಡೂ ಕೇಳಿ ಬರುತ್ತದೆ. ವಿಷಾದದ ನಿಟ್ಟುಸಿರೂ ಹೊರ ಹೊಮ್ಮುತ್ತದೆ. ಕೋಶಿಯ ಜೀವನ ಕಥೆ, ವ್ಯಥೆಯೂ ಮನಸ್ಸ ಹಿಂಡಿತು.


ನಾನೆಂದೂ ನೋಡದ, ತಿಳಿಯದ ಇಂತಹ ಮಾಹಿತಿಗಳ ಕೊಟ್ಟಿದುದ್ದಕ್ಕಾಗಿ ಧನ್ಯವಾದಗಳು ಸರ್

Wednesday, September 18, 2013

ಎಂದೂ ಮಾತಾಡದ ಹುಡುಗಿ



ತೇಜಸ್ವಿಯವರ ಜುಗಾರಿ ಕ್ರಾಸ್ ಅಲ್ಲಿ ಮೇದರಹಳ್ಳಿಯ ದ್ಯಾವಮ್ಮನ ಮಗಳ ಪ್ರಸಂಗ ಬರುತ್ತದೆ. ಮೂಕಿ ದ್ಯಾವಮ್ಮನ ಮಗಳಾದ, ಹೆಸರೂ ಇಲ್ಲದ ಹುಡುಗಿ  ಮೂಕಿಯೇ ಎಂದು ಎಲ್ಲರೂ ತೀರ್ಮಾನಪಟ್ಟಿರುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಪವಾಡವೆಂಬಂತೆ ಸರಾಗವಾಗಿ ಮಾತನಾಡುತ್ತಾಳೆ ಹುಡುಗಿ.

 ತೇಜಸ್ವಿ ಅವಳನ್ನು ಎಂದೂ ಮಾತಾಡದ ಹುಡುಗಿ ಎಂದು ಕರೆದಿದ್ದಾರೆ. ದಾರಿ ಬದಿಯಲ್ಲಿ ನಿಂತು ರೆಂಜ ಹೂಗಳ ಮಾಲೆ ಮಾರುವ ಹೆಸರಿಲ್ಲದ ಈ  ಹುಡುಗಿಗೆ, ತನ್ನ ಬುಟ್ಟಿಯಲ್ಲಿದ ಎಲ್ಲಾ ಮಾಲೆಗಳನ್ನು ಮಾರುವ ಆಸೆ.
ತೇಜಸ್ವಿಯೇ ಹೇಳುವಂತೆ ಹೃದಯಹೀನ ಪ್ರಪಂಚದ ಮೇಲೆ ದುಃಖಗೊಂಡಿದ್ದ ಪುಟ್ಟ ಹುಡುಗಿಗೆ ಕೊನೆಗೆ ರಸ್ತೆಯಲ್ಲಿ ಕಾಣುವ ವಾಹನದಲ್ಲಿ ಇದ್ದವರಾದರೂ ಎಂತವರು? ಸಾಕ್ಷಾತ್ ಯಮನ ದೂತರು, ಕೊಲೆಗುಡಕರು. ನೆತ್ತಿಯ ಮೇಲೆ ಮುಷ್ಠಿಯಿಂ ಒಂದೇ ಒಂದು ಗುದ್ದಿ ಹುಡುಗಿಯನ್ನು ಕೊಲ್ಲುವಷ್ಟು ಕ್ರೋಧ, ಆಕ್ರೋಶದಲ್ಲಿದ್ದವರು

ಮುಂದಿನ ಚಿತ್ರಣವನ್ನು ತೇಜಸ್ವಿ ಯಾವ ಪರಿಯಲ್ಲಿ ಎಳೆ ಎಳೆಯಾಗಿ ಬಿಡಿಸಿತ್ತಿದಾರೆಂದರೆ, ಅವರ ಮಾತುಗಳಲ್ಲಿ ಓದಿ.
ದೌಲತ್ ರಾಮ್ ಚಕ್ಕನೆ ಒಂದು ನೋಟು ತೆಗೆದು ಹುಡುಗಿ ಕೈಲಿ ಕೊಟ್ಟು, ಕೈಲಿದ್ದ ಬುಟ್ಟಿ ಕಿತ್ತುಕೊಂಡಂತೆ ತೆಗೆದುಕೊಂಡು, " ಹೋಗು, ಹೋಗು " ಎಂದು ಗದರಿದ

ಬೆಳಗ್ಗಿಂದ ನಿಂತೂ ನಿಂತೂ, ಪ್ರತಿಯೊಂದು ವಾಹನ ಬಂದಾಗಲೂ ಪ್ರತೀಕ್ಷೆಯಿಂದ ಕಾದೂ, ಕಾದೂ ಹತಾಶೆಯಲ್ಲಿ ದುಃಖದಲ್ಲಿ ತನ್ನ ಕೈಯಲ್ಲಿ ಒಣಗುತ್ತಿದ್ದ ಕೊನೆಯ ಹೂ ಮಾಲೆಯನ್ನು ಎತ್ತಿ ಹಿಡಿದ ದ್ಯಾವಮ್ಮನ ಮಗಳಿಗೆ ದೌಲತ್ ರಾಮನ ವರ್ತನೆ ಎಷ್ಟು ದುಃಖ ತಂದಿತೆಂದರೆ ನೆತ್ತಿಯ ಮೇಲೆ ಮುಷ್ಠಿಯಿಂ ಅಪ್ಪಳಿಸಿದ ಹಾಗೇ ಆಯ್ತು! ಮರಗಳೆಲ್ಲ ಹುಚ್ಚರ ಹಾಗೆ ತಲೆ ಕೆದರಿಕೊಂಡು ಗಾಳಿಗೆ ತೂರಾಡುತ್ತ ಹಿಯ್ಯಾಳಿಸಿ ನಗುವಂತೆ, ನೋಡಿದಷ್ಟುದ್ದಕ್ಕೂ ಹಾಸಿ ಬಿದ್ದಿರುವ ರಸ್ತೆ ಕಠೋರ ಜೀವನದಂತೆ, ಮೋಡ ಕಿಕ್ಕಿರಿದಿದ್ದ ಆಕಾಶ, ಅವಳನ್ನು ಮುಚ್ಚಿ ಕೂಡಿಹಾಕಿದ ಡಬ್ಬಿ ಮುಚ್ಚಲದಂತೆ ಅಸಹನೀಯವಾಗಿ ಕಂಡಿತು. ಬೆಳಗ್ಗೆ ಬರುತ್ತಾ ಬುಟ್ಟಿಯ ತುಂಬಾ ಮಾಲೆಗಳೊಂದಿಗೆ ಹೊತ್ತು ತಂದಿದ್ದ ಅವಳ ಕಿನ್ನರ ಕನಸುಗಳೆಲ್ಲ ಧೂಳು ಹಿಡಿದು ಮುರುಟಿ ದುರ್ಭರವಾದವು. ಹುಡುಗಿಯ ಕಣ್ಣೊಳಗೆ ನೀರು ತುಂಬಿ ಪ್ರಪಂಚವೆಲ್ಲಾ ಮಂಜು ಮಂಜಾಯ್ತು.

ಹುಡುಗಿ ಹುಲ್ಲಿನ ಮಧ್ಯೆ ಬೈತಲೆ ಎಳೆದಂತಿದ್ದ ಕಾಲು ದಾರಿಯಲ್ಲಿ ಮೌನವಾಗಿ ಮ್ಲಾನವದನದಲ್ಲಿ ತಿರುಗಿ ಮಾತೇ ಆಡದೆ ಹೊರಟು ಹೋದಳು. ಬಂದಿದ್ದ ಮಾತು ಮತ್ತೊಮ್ಮೆ ಶಾಶ್ವತವಾಗಿ ನಿರ್ಗಮಿಸಿತ್ತು.

ಹುಡುಗಿ ನನಗೆ ಪದೇ ಪದೇ ಕಾಡುತ್ತಾಳೆ. ಮತ್ತೆ ಮುಂದುವರೆದ ಅವಳ ಮೂಕ ಪ್ರಪಂಚವೂ ಕಾಡುತ್ತದೆ. ಮಗಳು ಮಾತನಾಡುತ್ತಾಳೆ ಎಂದು ಸಂಭ್ರಮಿಸಿದ ದ್ಯಾವಮ್ಮ ನೆನಪಿಗೆ ಬರುತ್ತಾಳೆ. ಮಗಳೇನೋ ಚಿರಪರಿಚಿತ ಸನ್ನೆಯ ಭಾಷೆಗೆ ಮತ್ತೆ ಮೊರೆ ಹೋಗಿ ಆದುದ ಹೇಳಿಕೊಳ್ಳಬಹುದೋ ಏನೋ ಒಂದು ದಿನ. ಆದರೆ ಮಾತು ಮತ್ತೆ ಕಳೆದುಕೊಂಡ ಮಗಳ, ಜೀವನ ಪೂರ್ತಿ ಮಾತನಾಡದ ದ್ಯಾವಮ್ಮ ಅದೆಂತು ಸಂತೈಸುತ್ತಾಳೆ ?!? ಪ್ರಪಂಚ ಹೀಗೆಯೇ, ಎಂದು ಅದು ಹೇಗೆ ಸಮಾಧಾನಪಡಿಸಬಲ್ಲಳು

ಕೊನೆಗೂ ಬಾಯಿ ಬರದ ಹಸು ತನ್ನ ಕರುವನ್ನು ನೆಕ್ಕಿ ಸಂತೈಸುವ ಪರಿ ಕಣ್ಣಿಗೆ ಬರುತ್ತದೆ.

ಭಾಷೆಗೆ ನಿಲುಕದ ಸಂಕಟವನ್ನು, ತಳಮಳವನ್ನು ನಮ್ಮೊಳಗೆ ತೇಜಸ್ವಿ ಹುಟ್ಟು ಹಾಕುವ ಪರಿಯಿದು

ಎಂದೋ ನಿಮಗೆ ಹುಡುಗಿ ಸಿಗಬಹುದು, ನೋಯಿಸಬೇಡಿ ಎಂದಿದ್ದಾರೆಯೇ ತೇಜಸ್ವಿ?

Sunday, September 8, 2013