ಹನೇಹಳ್ಳಿಯ ಘಮ ಹೊತ್ತ ಚಿತ್ತಾಲರನ್ನೋ, ಮುಂಬಯಿಯಿಂದ ದಕ್ಷಿಣ ಕನ್ನಡಕ್ಕೆ ಒಂದೇ ಜೀಕಿನಲ್ಲಿ ತಳ್ಳಿಬಿಡುವ ಬಲ್ಲಾಳರನ್ನೋ, ಸದಾ ಮೋಹಿನಿಯಂತೆ ಕಾಡುವ ಇನಾಂಮಾದಾರರನ್ನೋ, ಹೆಜ್ಜಾಲದ ಚಂದುರಂಗರನ್ನೋ, ಮೇರಿಯ ಕಥೆ ಹೇಳುತ್ತಲೇ ತನ್ನೊಳಗಿನ ಕಥೆ ಹಂಚುವ ಸೋಮಾಯಾಜಿಯವರನ್ನೋ, ಮುಳುಗಡೆಯ ಆತಂಕದಲ್ಲೇ ಜೀವನ ಪ್ರೀತಿ ಹುಟ್ಟಿಸುವ ನಾ ಡಿಸೋಜರನ್ನೋ, ಶಾಮಣ್ಣನ ಬಗ್ಗೆ ಹೇಳುತ್ತಾ ಹೇಳುತ್ತಾ ಅಪ್ತವಾಗುವ ಕುಂ ವೀಯವರನ್ನೋ, ನೆನಪಿನಾಳದಲ್ಲಿ ಮಿಂಚಿ ಮರೆಯಾಗುವ ಎಂ ವ್ಯಾಸರನ್ನೋ, ಮೃತ್ಯಂಜಯ ಕಟ್ಟಿಕೊಟ್ಟ ನಿರಂಜನರನ್ನೋ, ಮೂರು ಮತ್ತಿಷ್ಟು ಬರೆದ ಗೋಪಾಲ ಕೃಷ್ಣ ಪೈಯವರನ್ನೋ, ದಾದರಿನ ಕತ್ತಲ ಬಣ್ಣಿಸಿ ಅಲ್ಲಿಂದಲೇ ಗೋಕರ್ಣಕ್ಕೆ ಹೈ ಜಂಪ್ ಮಾಡಿಸುವ ಜಯಂತರನ್ನೋ, ನೋವನ್ನೂ ನಗುವಿನಲೇ ಹೇಳುವ ತಿಂಮನನ್ನೋ, ಕುತೂಹಲ ಹುಟ್ಟಿಸಿ ಹಿಡಿದ ಪುಸ್ತಕ ಕೆಳಗಿಳಿಸದ ಹಾಗೆ ಮಾಡುವ ರಾಮರಾಯರನ್ನೋ, ನಾ ಕೊಂದ ಹುಡುಗಿ ಎಂದ ಖಾಸನೀಸರನ್ನೋ, ವಿಚಿತ್ರ ಅನುಭೂತಿ ಹುಟ್ಟಿಸುವ ವಿಚಿತ್ರ ಲೋಕದ ತೇಜಸ್ವಿಯನ್ನೋ, ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಹಸಿರು ಹೊನ್ನಿನ ಸ್ವಾಮಿಯವರನ್ನೋ, ಮೂಕಜ್ಜಿಯ ಕನಸ ತಾ ಕಂಡು ತಮ್ಮದೇ ಶೈಲಿಯಲ್ಲಿ ಹೇಳುವ ಕಾರಂತರನ್ನೋ, ಕೆಂಪು ಕಳವೆಯ ರುಚಿ ಹತ್ತಿಸಿದ ಗಟ್ಟಿಯವರನ್ನೋ, ಸಂಸ್ಕಾರ ತೋರಿಸಿದ ಅನಂತಮೂರ್ತಿಯವರನ್ನೋ, ಉಲ್ಲಂಘನೆಯ ರೂವಾರಿ ಮೊಗಸಾಲೆಯವರನ್ನೋ, ಎದ್ದೆಗೆ ಅಕ್ಷರಗಳ ಬಿತ್ತುವ ದೇವನೂರ ಅವರನ್ನೋ, ೨೦ ಸಲ ಓದಿದರೂ ಮತ್ತೆ ಮಳೆಯಲ್ಲಿ ನೆನೆಸುತ್ತಾ ಮಲೆಗಳಲ್ಲಿ ಮದುಮಗಳಾಗಿ ತಿರುಗಾಡಿಸುವ ಕುವೆಂಪು ಅವರನ್ನೋ, ಕಗ್ಗದಿಂದಲೇ ಜೀವನ ದರ್ಶನ ಕೊಡುವ ಮಂಕುತಿಮ್ಮನನ್ನೋ, ನಾಕು ತಂತಿ ಮೀಟಿದ ಬೇಂದ್ರೆಯವರನ್ನೋ, ಶಿಖರಸೂರ್ಯನ ದರ್ಶನ ಮಾಡಿಸಿದ ಕಂಬಾರರನ್ನೋ, ಬೆಕ್ಕಿನ ಕಣ್ಣಿನ ತ್ರಿವೇಣಿಯವರನ್ನೋ, ಅನಾಥೆಯ ಕೈ ಹಿಡಿದ ಗೋಪಾಲಕೃಷ್ಣ ಅಡಿಗರೋ ಅಥವಾ ಮನದ ತಂತು ಮೀಟುವ ಭೈರಪ್ಪ ಅವರನ್ನೋ, ಅಶ್ವಥರನ್ನೋ, ಆನಂದರೋ, ತರಾಸು, ಲಂಕೇಶ್ ಯಾರು ಯಾರನ್ನು ನೆನೆಯಲೀ ನಾ ? ಅರೇ, ಮರೆತೇ ಬಿಟ್ಟೆನಲ್ಲಾ ?
ಮಾಲ್ಗುಡಿಯಲ್ಲಿ ಸ್ವಾಮಿಯೊಂದಿಗೆ ಆಟವಾಡಿಸುವ ಲಕ್ಷಣ್, ದೊಡ್ಡ ಕಾಡಿನಲ್ಲಿ ಕೈ ಹಿಡಿದು ನಡೆಸುವ ಲಾರಾ, ನಿರುದ್ವಿಗ್ನಳಾಗಿ ಮೆಲು ದನಿಯಲ್ಲಿ ಕಾದಂಬರಿ ಹೇಳುತ್ತಾ ಹೋಗುವ ಮಾರ್ಗರೆಟ್ ಮಿಶಲ್, ಅವಳನ್ನು ಚೆಂದಕ್ಕೆ ಕನ್ನಡಕ್ಕೆ ತಂದ ಶ್ಯಾಮಲಾ, ನೀರ್ ಮಾದಳ ಹೂವಿನ ಕಂಪು ಕನ್ನಡಕ್ಕೆ ಪಸರಿಸಿದ ಕಮಲಾದಾಸ್, ಚೆಮ್ಮೀನಿನ ಚೆಂದ ತೋರಿಸಿಕೊಟ್ಟ ತಕಳಿಯವರು, ಚೌಕಟ್ಟಿನ ಮನೆಯ ವಾಸುದೇವ ನಾಯರ್, ಗೋದಾನದ ಪ್ರೇಮಚಂದ್ರರು, ಬೇರೆಯ ಆಯಾಮ ಹುಟ್ಟು ಹಾಕಿದ ಸತ್ಯಜಿತ್ ರೇ, ಪಕ್ಷಿ ಲೋಕ ದೊರಕಿಸಿಕೊಟ್ಟ ಸಲೀಂ ಆಲಿ, ಪೆದ್ದಚೆರುವಿನಲ್ಲಿ ಉಸಿರು ಬಿಗಿ ಹಿಡಿಸಿದ ಕೆನೆತ್ ಆಂಡರ್ಸನ್, ಭಾರತದಲ್ಲೇ ಆಯುಷ್ಯ ಕಳೆದ ಜಿಮ್ ಕಾರ್ಬೆಟ್, ಪ್ಯಾಪಿಲಾನ್ ಹಾರಾಟ ತೋರಿಸಿದ ಹೆನ್ರಿ ಝರಾರೇ....ತಮಿಳಿನ ಅಖಿಲನ್, ತೆಲುಗಿನ ಸ್ವರ್ಣ ಕಮಲಗಳ ಇಲ್ಲಿಂದಲ ಸರಸ್ವತೀ ದೇವಿ, ಕಾಡಿನ ದಾವೇದಾರನನ್ನು ಪರಿಚಯಿಸಿದ ಮಹಾಶ್ವೇತಾ ದೇವಿ, ಅತೀ ವಿಶಿಷ್ಟವಾಗಿ ಬರೆದ ಜಯವಂತ ದಳವಿ, ಲಜ್ಜಾದ ತಸ್ಲೀಮಾ, ವೈಕಂ ಬಶೀರ್, ಚಂದು ಮೆನೋನ್, ನೀಲ ಪದ್ಮನಾಭನ್, ಮಲಯಾಳಂ ಲೋಕದ ಬೀಗದ ಕೈ ಪಾರ್ವತಿ ಜಿ ಐತಾಳ್, .... ಹಿಂದಿ, ಓರಿಯಾ, ಬೆಂಗಾಲಿ, ಮರಾಠಿ, ಉರ್ದು, ಸ್ಪಾನಿಶ್, ಅರಬ್ಬಿ, ಫ್ರೆಂಚ್, ರಷ್ಯನ್ .... ಹೀಗೆ ಬೇರೆ ಬೇರೆಯದೇ ಜಗತ್ತುಗಳನ್ನು ಮುಟ್ಟಿ ನೋಡಲು ಅವಕಾಶ ಒದಗಿಸಿದ ಎಲ್ಲಾ ಅನುವಾದಕರನ್ನೂ, ಮೂಲ ಬರಹಗಾರರನ್ನೂ ನಾ ನೆನೆಯುವೆ.
ಒಂದೇ ಬಿಂದುವಿನ ರುಚಿ ನೋಡಿದ್ದಾಗಿದೆ ಇನ್ನೂ ಉಳಿದದ್ದು ಸಾಗರದಷ್ಟು....
ಎಲ್ಲಕ್ಕೂ ಮೊದಲು ಏಳನೇ ವಯಸ್ಸಿನಲ್ಲೇ ಮೊದಲು ಕಾದಂಬರಿ ಓದಿಸಿದ ಉಷಾ ನವರತ್ನರಾಮ್ ಅವರನ್ನೂ ಅದನ್ನು ಕೊಟ್ಟು ಓದಿನ ರುಚಿ ಹತ್ತಿಸಿ ನಾ ಆಟಕ್ಕೆಳೆಯದ ಹಾಗೆ ಬಚಾವಾದ ನನ್ನ ಪ್ರೀತಿಯ ಅಕ್ಕನನ್ನು....