Wednesday, March 27, 2013
ನನ್ನ ಆತ್ಮಕಥೆ
ನಾನು ಅಮಂದಾ ಟಾಡ್. ನೀವೀಗ ಓದುತ್ತಿರುವುದು ಎಂದೂ ಮುಗಿಯದ ನನ್ನ ಆತ್ಮಕಥೆ.
ಮಲಗಿದ್ದೇನೆ ನಿಶಬ್ಧವಾಗಿ ಗೋರಿಯೊಳಗೆ
ಇಲ್ಲ್ಯಾರೂ ಹಂಗಿಸುವವರಿಲ್ಲ ಎನಗೆ.
ಹೌದು. ನಾನೀಗ ಈ ಪ್ರಪಂಚದಲ್ಲಿಲ್ಲ. ನನ್ನ ಫೋಟೋ, ನನ್ನ ವಿಡಿಯೋಗಳಲ್ಲಷ್ಟೇ ಬದುಕಿರುವ ನಾನು ನಿಮ್ಮ ಮನೆಯಲ್ಲಿರುವ ಮಗಳಂತೆ ತುಂಬು ಕನಸುಗಳಿದ್ದ ಹುಡುಗಿ. ನನಗೆ ಹಾಡುವುದೆಂದರೆ ತುಂಬಾ ಇಷ್ಟವಿತ್ತು. ಅಂದ ಹಾಗೆ ನನ್ನ ಪರಿಚಯ ಮಾಡಿಕೊಳ್ಳಲೇ ಇಲ್ಲವಲ್ಲ ನಾನು.... ನಾನು ಹುಟ್ಟಿದ್ದು ಬ್ರಿಟಿಷ್ ಕೊಲಂಬಿಯಾದಲ್ಲಿ, ನವೆಂಬರ್ ೨೭ರ ೧೯೯೬ರಂದು. ಎಲ್ಲಾ ಹೆಣ್ಣು ಮಕ್ಕಳಂತೆ ನಾನು ಮುದ್ದಾಗಿದ್ದೆ. ನನ್ನ ಅಮ್ಮನ ಹೆಸರು ಕಾರೊಲ್. ನಾನು ಏಳನೇ ತರಗತಿಯಲ್ಲಿದ್ದೆ. ಫ್ರೆಂಡ್ಸ್ ಒಟ್ಟಿಗೆ ಸೈಬರ್ ಕೆಫೆಗೆ ಹೋಗಿದ್ದೆ, ಚಾಟ್ ಮಾಡೋದಿಕ್ಕೆ. ಹೌದು, ನನ್ನ ವಯಸ್ಸಿಗೆ ಹುಡುಗರ ಜೊತೆ ಮಾತಾಡೋದಂದ್ರೆ ಒಂಥರಾ ಥ್ರಿಲ್ ಅನಿಸ್ತಾ ಇತ್ತು. ಯಾರೋ ಒಬ್ಬ ಪರಿಚಯವಾದ. ನನ್ನ ಎಷ್ಟು ಇಷ್ಟಪಟ್ಟ ಗೊತ್ತಾ? ನಾನು ಖುಷಿಯಲ್ಲಿ ಇದ್ದೆ. ತುಂಬಾ ಹೊತ್ತು ಮಾತನಾಡಿದೆವು. ಇವಾಗಂತೂ ಎಲ್ಲರಿಗೂ ಬಾಯ್ ಫ್ರೆಂಡ್ ಇರ್ತಾರೆ ಅಲ್ವಾ ? ಯಾರೋ ಎಲ್ಲೋ ಕೂತು ನನ್ನನ್ನು ನೋಡಿ ಹೊಗಳಿದರೆ ಎಷ್ಟು ಖುಷಿ ಅನಿಸಿತು ಗೊತ್ತಾ ? ನಾನು ಪರ್ಪ್ಫೆಕ್ಟ್, ಸುಂದರಿ ಅಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು. ಅವನನ್ನು ಎಷ್ಟು ಹೊಗಳಿದ ಅಂದರೆ, ಅವನ ಮಾತಿಗೆ ಮರುಳಾಗಿ ಹೋದೆ. ಅವನು ವೆಬ್ ಕ್ಯಾಮ್ ಮುಂದೆ ನನ್ನೆದೆಯನ್ನು ತೋರಿಸಲು ಕೇಳಿಕೊಂಡಾಗ ಯಾವುದೋ ಹುಚ್ಚು ಉತ್ಸಾಹದಲ್ಲಿ ಹಾಗೆಯೇ ಮಾಡಿದೆ. ಆವಾಗಷ್ಟೇ ನಾನು ನೋಡಲಾರಂಭಿಸಿದ ಪ್ರಪಂಚದಲ್ಲಿ ಎಲ್ಲವೂ ಸುಂದರವಾಗಿ ಕಾಣುತ್ತಿತ್ತು, ನಾನೂ ಸುಂದರವಾಗಿರುವೆನೆಂಬ ಅನಿಸಿಕೆಯ ಜೊತೆ ಅದರ ಪ್ರದರ್ಶನ ತಪ್ಪೇನಿಲ್ಲ ಅನಿಸಿತ್ತು.
ಒಂದು ವರ್ಷದ ನಂತರ ನನ್ನ ಫೇಸ್ ಬುಕ್ ಗೆ ಒಂದು ಮೇಸೆಜ್ ಬಂತು . ಆ ಮೇಸೇಜ್ ಅಲ್ಲಿ ಇದ್ದದ್ದು ನೀನು ಒಂದು ಶೋ ಕೊಡದಿದ್ದಲ್ಲಿ ನಿನ್ನ ಬಗ್ಗೆ ಪ್ರಪಂಚಕ್ಕೆ, ನಿನ್ನಫ್ರೆಂಡ್ಸ್ ಗೆ ನಿನ್ನ ಚಿತ್ರವನ್ನು ಕಳುಹಿಸುತ್ತೇನೆ ಅಂತ. ಅವತ್ತು ನಾನ್ಯಾರೊಂದಿಗೆ ಚಾಟ್ ಮಾಡಿದ್ದೇನೋ ಅವನಿಂದ, ನನ್ನ ಬಗ್ಗೆ ಅವನಿಗೆ ಹೇಗೆ ತಿಳಿಯಿತು ಅಂತ ಗೊತ್ತಾಗಲಿಲ್ಲ ಅಷ್ಟೇ ಅಲ್ಲ, ಅವನಿಗೆ ನನ್ನ ವಿಳಾಸ, ಸ್ಕೂಲ್ ಹೆಸರು, ಸಂಬಂಧಿಗಳು,ಫ್ರೆಂಡ್ಸ್ ಎಲ್ಲರೂ ಗೊತ್ತಿತ್ತು.
ಕ್ರಿಸ್ ಮಸ್ ಸಮಯ, ಬೆಳಗ್ಗೆ ನಾಲ್ಕು ಗಂಟೆಗೆ ನನ್ನ ಮನೆ ಬಾಗಿಲು ಬಡಿದವರು ಪೋಲೀಸರು. ನನ್ನ ಆ ಚಿತ್ರ ಎಲ್ಲರಿಗೂ ಕಳುಹಿಸಲ್ಪಟ್ಟಿತ್ತು. ನನ್ನ ಸ್ಥಿತಿ ಹದಗೆಟ್ಟಿತು.ತೀವ್ರ ಮಾನಸಿಕ ಖಿನ್ನತೆ, ಆತಂಕದ ದಿನಗಳಗಾಗಿದ್ದವು ಅವು. ತಡೆಯಲು ಶಕ್ತಿ ಇಲ್ಲದೆ ಡ್ರಗ್ಸ್ ಮತ್ತು ಮದ್ಯಪಾನದ ಮೊರೆಹೋದೆ. ಅದರಿಂದ ನನ್ನ ಖಿನ್ನತೆ ತೀವ್ರವಾಯಿತೇ ವಿನಹ ಏನೂ ಪ್ರಯೋಜನವಾಗಲಿಲ್ಲ. ಎಲ್ಲೂ ಹೊರಗಡೆ ಹೋಗುವಂತಿರಲಿಲ್ಲ. ಪ್ರತಿ ರಾತ್ರಿಯೂ ಅಳುತ್ತಿದ್ದೆ. ಎಲ್ಲ ಫ್ರೆಂಡ್ಸ್ ಹಾಗೂ ಗೌರವವನ್ನು ನಾ ಕಳೆದುಕೊಂಡಿದ್ದೆ. ಯಾರೂ ನನ್ನನ್ನು ಇಷ್ಟಪಡುತ್ತಿರಲಿಲ್ಲ, ನನ್ನನ್ನು ಹೀಯಾಳಿಸುತ್ತಿದ್ದರು, ಹಂಗಿಸುತ್ತಿದ್ದರು. ನಾನು ನನ್ನ ಆ ಚಿತ್ರವನ್ನೆಂದೂ ಮರಳಿ ಪಡೆಯಲಾರೆ, ಅದು ಎಂದೆಂದೆಗೂ, ಎಲ್ಲೆಡೆಯೂ ಹರಡಿತ್ತು. ನನಗೆ ನಾನೇ ನೋವು ಮಾಡಿಕೊಳ್ಳಲಾರಂಭಿಸಿದೆ, ನಾನು ಪ್ರಾಮಿಸ್ ಮಾಡ್ತೇನೆ. ಇನ್ನೊಂದು ಸಲ ಈ ರೀತಿ ಮಾಡುವುದಿಲ್ಲ ಎಂದು ಬಾರಿ ಬಾರಿ ಅಂದುಕೊಂಡೆ, ಆದರೆ ಯಾರೂ ನನ್ನ ಹತ್ತಿರ ಸುಳಿಯುತ್ತಿರಲಿಲ್ಲ. ಒಬ್ಬಳೇ ಕೂತು ಮಧ್ಯಾಹ್ನದ ಊಟ ಮಾಡಬೇಕಿತ್ತು ನನ್ನ ಹೊಸ ಸ್ಕೂಲ್ ನಲ್ಲಿಯೂ. ಮತ್ತೆ ಮತ್ತೆ ಶಾಲೆಗಳು ಬದಲಾಯಿಸಲ್ಪಟ್ಟವು. ಲೈಬ್ರೆರಿ, ಮೆಸ್ ಎಲ್ಲಿ ಹೋದರೂ ಒಬ್ಬಳೇ ಇರುತ್ತಿದ್ದೆ.
ನನ್ನ ಹಳೇ ಗೆಳೆಯನೋರ್ವ ನನ್ನನ್ನು ಮಾತನಾಡಿಸಲು ಆರಂಭಿಸಿದ. ನನ್ನನ್ನು ಇಷ್ಟಪಡುತ್ತಿದ್ದೇನೆಂದೂ ಹೇಳಿದ. ನಾವು ಒಬ್ಬರಿಗೊಬ್ಬರು ಹತ್ತಿರವಾದಂತೆ ನನ್ನ ಒಂಟಿತನವೂ ದೂರವಾಗತೊಡಗಿತು. ನಮ್ಮ ಸಂಬಂಧ ಮುಂದುವರಿಯುತ್ತಲೇ ಹೋಯಿತು. ಆದರೆ ಅವನಿಗಾಗಲೇ ಓರ್ವ ಸಂಗಾತಿಯಿದ್ದಳು. ನಾನು ಮತ್ತೆ ಮೋಸ ಹೋಗಿದ್ದೆ ನನ್ನನ್ನು ಎಂದೂ ಅವನು ಪ್ರೀತಿಸಿರಲೇ ಇಲ್ಲ. ದೊಡ್ಡ ತಪ್ಪು ಮಾಡಿದ್ದೆ ನಾನು. ಒಂದು ವಾರದ ನಂತರ ನನಗೆ ಒಂದು ಮೇಸೆಜ್ ಬಂತು ಶಾಲೆಯಿಂದ ಹೊರಹೋಗುವಂತೆ. ಅದೇ ದಿನ ಊಟದ ಸಮಯದಲ್ಲಿ ಆತ, ಆತನ ಗೆಳತಿ ಹಾಗೂ ೧೫ ಇತರೇ ಜನರು ನನ್ನ ಬಳಿ ಬಂದರು. ನನ್ನ ಹೊಸ ಸ್ಕೂಲ್ ನ ಸುಮಾರು ೫೦ ಜನ ಸಹಪಾಠಿಗಳೆದುರು ಅವರು ನನ್ನ ಹೀಯಾಳಿಸಿದರು, ನನ್ನನ್ನು ಯಾರೂ ಇಷ್ಟಪಡುವುದಿಲ್ಲವೆಂದರು. ಆ ಹುಡುಗ ನನ್ನ ಮೇಲೆಯೇ ಕೂಗಾಡಿ ತನ್ನ ಗೆಳತಿಗೆ ನನ್ನ ಮೇಲೆ ಕೈ ಮಾಡುವಂತೆ ಹೇಳಿದ. ಅಂತೆಯೇ ಅವಳು ನನ್ನ ಹೊಡೆದು ಕೆಳಗೆ ಬಿಳಿಸಿ ಮತ್ತೆ ಮತ್ತೆ ಹೊಡೆದಳು. ಅಲ್ಲಿದ್ದ ವಿದ್ಯಾರ್ಥಿಗಳು ಅದನ್ನೂ ರೆಕಾರ್ಡ್ ಮಾಡಿಕೊಂಡರು, ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ನಾನಲ್ಲಿ ಬಿದ್ದಿದ್ದೆ ಒಬ್ಬಳೇ ಹತಾಶಳಾಗಿ.ನಾನು ತಮಾಶೆಯ ವಸ್ತುವಾಗಿ ಬಿಟ್ಟಿದ್ದೆ ಈ ಜಗಕ್ಕೆ, ನನ್ನ ಸ್ಥಿತಿ ಯಾರಿಗೂ ಬರಬಾರದು ಎಂದುಕೊಂಡೆ. ಯಾವುದೋ ಕೊಳಚೆ ಗುಂಡಿಯಲ್ಲಿ ಬಿದ್ದಿದ್ದೆ, ನಾನಂದುಕೊಂಡಿದ್ದೆ ಅವನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನೆಂದು. ನನ್ನ ತಂದೆ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ನಾನು ಸಾಯಬೇಕೆಂದು ಎಷ್ಟು ತೀವ್ರವಾಗಿ ಅನಿಸಿತ್ತೆಂದರೆ ನಾನು ಬ್ಲೀಚ್ ಕುಡಿದುಬಿಟ್ಟೆ. ನನ್ನನ್ನು ಕೂಡಲೇ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿದ್ದರಿಂದ ಮತ್ತೆ ಬದುಕಿ ಬಂದೆ.
ಅಲ್ಲಿಂದ ಹೊಸ ಸ್ಕೂಲ್ ಗೆ ಸೇರಿದೆ ಮತ್ತು ಹೊಸ ಜೀವನ ನಡೆಸಲು ಬಯಸಿದೆ. ಅಮ್ಮನ ಬಳಿ ಹೇಳಿದೆ ಕೂಡಾ ಮತ್ತೆ ಸಂಗೀತದ ಕ್ಲಾಸ್ ಗಳನ್ನು ಶುರು ಮಾಡುತ್ತೇನೆಂದು. ಆದರೆ ಮನೆಗೆ ಬಂದು ನೋಡಿದರೆ ನನ್ನ ಫೇಸ್ ಬುಕ್ ವಾಲ್ ಮೇಲೆ ನನ್ನ ಹೊಡೆದ ಚಿತ್ರದ ತುಣುಕುಗಳಿದ್ದವು..... ಅದಕ್ಕಿಂತ ಭೀಕರವಾದುದು ನಾನು ಯಾಕೆ ಸಾಯಲಿಲ್ಲ ಸಾಯಲು ಇನ್ನೂ ಸ್ಟ್ರಾಂಗ್ ಬ್ಲೀಚ್ ಕುಡಿಯಬೇಕೆಂಬುದನ್ನು ಬರೆದಿದ್ದರು. ನನ್ನ ಬಗ್ಗೆ ಅತೀ ಕೆಟ್ಟ, ಅಸಹ್ಯ ಹಾಗೂ ಅಶ್ಲೀಲವಾಗಿ ಜನಗಳು ಮಾತನಾಡಿಕೊಂಡಿದ್ದರು. ನಾನು ಅತೀ ಕೆಟ್ಟ ಸ್ಥಿತಿಯಲ್ಲಿದ್ದೆ, ೨ ದಿನ ಆಸ್ಪತ್ರೆಯಲ್ಲಿರಬೇಕಾಯಿತು ಖಿನ್ನತೆಯಿಂದಾಗಿ. ನನ್ನ ಅತೀ ಕಡಿಮೆ ಅಂಕಗಳಿಂದಾಗಿ ಸ್ಕೂಲ್ ಮತ್ತೆ ಬದಲಾಯಿಸಲ್ಪಟ್ಟಿತ್ತು.
================================================
ಸಣ್ಣ ಸಣ್ಣ ಪೇಪರ್ ಗಳಲ್ಲಿ ಈ ಮೇಸಜ್ ಗಳನ್ನು ಬರೆದಿಟ್ಟು ಅದನ್ನು ಯೂ ಟ್ಯೂಬ್ ಅಲ್ಲಿ ಸೆಪ್ಟೆಂಬರ್ ೭ ರಂದು ಹಾಕಿದ ಅಮಂದಾ ಅಕ್ಟೋಬರ್ ೧೦ ರಂದು ನೇಣು ಹಾಕಿಕೊಂಡಿದ್ದಳು.
ಅಮಂದಾ ತಪ್ಪು ಮಾಡಿದ್ದಳು ನಿಜ.ಆದರೆ ೧೫ನೇ ವರ್ಷಕ್ಕೆ ನರಳಿ ಸಾಯುವುದು ಸರಿಯೇ? ನಾನು ಈ ಲೇಖನವನ್ನು ಬರೆಯುವ ಮೂಲಕ ಯಾವ ರೀತಿಯಿಂದಲೂ ಅಮಂದಾ ಮಾಡಿದ್ದು ಸರಿ ಎಂದು ಹೇಳುತ್ತಿಲ್ಲ. ಎಷ್ಟೋ ಜನ ಯುವಕ-ಯುವತಿಯರು ಈ ಸೈಬರ್ ಯುಗದಲ್ಲಿ ಹೀಯಾಳಿಕೆಗೆ ಒಳಗಾಗುವುದನ್ನು ನಾನು ವಿರೋಧಿಸುತ್ತಿದ್ದೇನೆ. ಈ ಲೇಖನ ತಂದೆ-ತಾಯಂದಿರು, ತರುಣ ತರುಣಿಯರಲ್ಲಿ ಸಾಮಾಜಿಕ ಪ್ರಜ್ಞೆ ಹುಟ್ಟಿಸಿದರೆ ಸಾಕು.
ನಮ್ಮ ಜಗತ್ತು, ಊರು, ನಗರಗಳಲ್ಲಿ ಯಾವುದೋ ಒಂದು ಘಳಿಗೆಯಲ್ಲಿ ತಪ್ಪು ಎಸಗಿದ ಅಮಂದಾರಿರಬಹುದು. ದಯವಿಟ್ಟು ಅವರನ್ನು ಬದುಕಲು ಬಿಡಿ. ಅವರನ್ನು ಹೀಯಾಳಿಸುವ, ಕೆಟ್ಟದಾಗಿ ನೋಡುವ ಯಾವ ಹಕ್ಕೂ ನಮಗಿಲ್ಲ. ನಿಮ್ಮ ಸಹಪಾಠಿಗಳು ಇದರ ಬಲಿಪಶುವಾಗಿದ್ದರೆ ಅದರಿಂದ ಹೊರಬರಲು ಸಹಾಯ ಮಾಡಿ. ಹೀಗೆಳೆಯಬೇಡಿ. ತಪ್ಪು ಎಲ್ಲರಿಂದಲೂ ಆಗುವುದು ಸಹಜ.
ತಂದೆ-ತಾಯಂದಿರೇ, ನಿಮ್ಮ ಮಕ್ಕಳು ಕಂಪ್ಯೂಟರ್ ಮುಂದೆ ಏನು ಮಾಡುತ್ತಿದ್ದಾರೆ ಎನ್ನುವುದರ ಗಮನವಿರಲಿ. ಮಕ್ಕಳು ತಪ್ಪು ಮಾಡಿದರೆ ಬೈಯುವ, ಹೊಡೆಯುವ ಮೊದಲು ತಾಳ್ಮೆಯಿಂದ ಕೇಳಿದಲ್ಲಿ ಅವರು ಅಪಾಯಕ್ಕೀಡಾಗುವುದನ್ನು ತಡೆಯಬಹುದು.
ಇವಾಗ ಅವಳ ಹೆಸರಲ್ಲಿ ಸಾವಿರಾರು ಸಂಸ್ಥೆಗಳಿವೆ, ಆದರೆ ಯಾವುದಾದರೂ ಅವಳ ಜೀವವನ್ನು ವಾಪಸು ತರಬಲ್ಲವೇ?
Subscribe to:
Posts (Atom)