Monday, September 3, 2012

ದಾರಿ ತಪ್ಪಿದ ಜನ್ನು - Part 2

ಇಲ್ಲಿಂದ ವಾಪಾಸು ಮನೆಗೆ ಪರಾರಿಯಾಗಬೇಕೆಂಬ ಆತುರದಲ್ಲಿ ಹಿಂದೆ ತಿರುಗಿದವನು ಯಾರಿಗೋ ಡಿಕ್ಕಿ ಹೊಡೆದು ಬಿದ್ದ!. ತಲೆಯೆತ್ತಿ ನೋಡಿದಾಗ ಕಂಡವಳು ಲವೀನಕ್ಕ. ಲವೀನಕ್ಕ ತುಂಬಾ ಚೆಂದ, ಬಿಳಿ ಬಣ್ಣ, ದೊಡ್ಡ ಕಪ್ಪು ಕಣ್ಣುಗಳು, ಉದ್ದದ ಜಡೆ ಎಲ್ಲಾ ಅಮ್ಮನ ಹಾಗೆ ಇದ್ದಾಳೆ. ಆದರೆ ಯಾಕೋ ಏನೋ ಹಣೆಗೆ ಅಮ್ಮ ಇಡ್ತಾರಲ್ಲ ಆ ಥರಾ ಉದ್ದ ನಾಮವಿಲ್ಲ. ಮೂಗಲ್ಲಿ ಅದೇನೋ ಇರುತ್ತಲ್ಲ, ಬಿಳಿ ಹೊಳೆಯುತ್ತಲ್ಲ ಅದೂ ಇಲ್ಲ ಅಂದುಕೊಂಡ ಒಳಗೊಳಗೆ. ಲವೀನಕ್ಕ " ಯಾಕೋ ಜನ್ನು, ಇವತ್ತು ನಮ್ಮನೆಗೆ ಬಂದು ಬಿಟ್ಟಿದ್ದೀಯಾ ?!" ಎಂದವಳೇ ಅವನನ್ನು ಎತ್ತಿ ಎರಡೂ ಕೆನ್ನೆಗಳ ತುಂಬಾ ಮುತ್ತಿಕ್ಕಿದಳು, ಆಯ್ತು ನಮ್ಮ ಜನ್ನುವಿಗೆ ಸಿಟ್ಟು, ನಾಚಿಕೆ  ಮತ್ತು ಅಳು ಎಲ್ಲಾ ಒಟ್ಟೊಟ್ಟಿಗೆ ಬಂತು. ’ ನಾನೇನು ಪಕ್ಕದ ಮನೆಯ ಗುಂಡು ಪಾಪುವೇ ? ನಾನು ದೊಡ್ಡ ಹುಡುಗ, ನಾನು ಶಾಲೆಗೆ ಹೋಗ್ತಾ ಇದ್ದೇನೆ, ಅಷ್ಟೂ ಗೊತ್ತಾಗಲ್ವಾ ಈ ಲವೀನಕ್ಕಗೆ ???’ " ಅಮ್ಮ ಮಾತ್ರ ಮುತ್ತು ಕೊಡೋದು ನಂಗೆ, ಬಿಡೀ ನನ್ನ, ಬಿಡೀ... "  ಅಂತ ಹೇಳುವಾಗಲೇ ಗಂಟಲು ಒತ್ತಿ ಬಂದ ಹಾಗೆ ಆಗಿ ದನಿ ತೆಗೆದು ಅಳಲಾರಂಭಿಸಿದ. ಜೊತೆಗೆ ಕೊಸರಾಡತೊಡಗಿದ. ಲವೀನಕ್ಕ ಬಿಡಲೇ ಇಲ್ಲ, ಅವನನ್ನೆತ್ತಿಕೊಂಡೇ ಮನೆಯೊಳಗೆ ನಡೆದಳು. ಜನ್ನು ಕೊಸರಾಡುವದನ್ನೂ, ಅಳುವುದನ್ನು ಮರೆತು ಬೆರಗಾಗಿ ಅವರ ಮನೆಯನ್ನು ನೋಡಲಾರಂಭಿಸಿದ. ’ ನಮ್ಮ ಮನೆ ಥರಾ ಇಲ್ಲವೇ ಇಲ್ಲ ಇವರ ಮನೆ, ಎದುರಿಗೆ ಏನೋ ದೊಡ್ಡ ಚಿತ್ರ ಹಾಕಿದ್ದಾರೆ. ಒಬ್ಬ ಮಾಮನನ್ನು ಕಟ್ಟಿಗೆ ತುಂಡೆರಡಕ್ಕೆ ನೇತು ಹಾಕಿ ಮೊಳೆ ಬೇರೆ ಹೊಡೆದಿದ್ದಾರೆ. ಕೈ ಕಾಲುಗಳಿಂದ ಕೆಂಪು ಬಣ್ಣದ ರಕ್ತ ಬೇರೆ ಸುರಿಯುತ್ತಿದೆ, ಅವನಿಗೆ ಎಷ್ಟು ನೋವಾಗುತ್ತಿರಬೇಕು’ ಅಂದುಕೊಂಡದ್ದೇ ತಡ ನಮ್ಮ ಮೃದು ಹೃದಯಿ ಪುಟಾಣಿಗೆ ಜೋರು ಅಳು ಬಂತು, " ಲವೀನಕ್ಕ, ಆ ಮಾಮಂಗೆ ಯಾರು ಹಾಗೆ ಮಾಡಿದ್ದು, ಯಾಕೆ ಮಾಡಿದ್ದು, ಪಾಪ ಅಲ್ವಾ ?..." ಅಂತ ಅಳುತ್ತಾ ಕೇಳಿದ.


ಲವೀನಕ್ಕ ಮೆಲ್ಲಗೆ ನಕ್ಕು ಏನೂ ಉತ್ತರಿಸದೆ ಅವನನ್ನು ಉದ್ದದ ಮೆತ್ತಗಿನ ಆದರೆ ಹಿಂದೆ ಒರಗಲು ಇದ್ದ ಮಂಚದ ಥರಹಾ ಇದ್ದ ಎಂಥಹುದೋ ಮೇಲೆ ಕೂರಿಸಿದಳು. ಕಣ್ಣ ತುಂಬಾ ನೀರು ತುಂಬಿದ್ದ ಜನ್ನು ಚಿತ್ರದಲ್ಲಿದ್ದ ಮಾಮನ ಬಗ್ಗೆ ಮರೆತು ತಾನು ಕೂತ ವಸ್ತುವಿನ ಕಡೆ ಗಮನ ಹರಿಸಿದ. ಅದು ಅಮ್ಮನ ತೊಡೆಯಲ್ಲಿ ಕೂತಂತೆ ಇತ್ತು, ಒಂದು ಸಲ  ಕೂತಲ್ಲೇ ಜಿಗಿಯೋಣ ಅನಿಸಿತು, ಜಿಗಿದ. ಖುಷಿ ಅನಿಸಿತು, ಮತ್ತೊಮ್ಮೆ ಜಿಗಿದ, ಮಗದೊಮ್ಮೆ.....ಜಿಗಿಯುತ್ತಲೇ ಇದ್ದ. ನಮ್ಮ ಜನ್ನುವಿಗೆ ಖುಷಿಯೋ ಖುಷಿ, ತಡೆಯಲಾರದಷ್ಟು ನಗು ಬೇರೆ! ನಕ್ಕು ನಕ್ಕು ಸುಸ್ತಾಗಿ ಕೊನೆಗೊಮ್ಮೆ ಅಲ್ಲೇ ಮಲಗಿದ, ಲವೀನಕ್ಕನ ಮುಖ ನೋಡುತ್ತಾನೆ, ಅವಳೋ ಕಣ್ಣು ಮುಚ್ಚುವುದನ್ನೂ ಮರೆತು ಇವನನ್ನೇ ನೋಡುತ್ತಿದ್ದಾಳೆ. ’ ಓ! ಲವೀನಕ್ಕಾಗೆ ಸಿಟ್ಟು ಬಂದಿದೋ ಏನೋ ’ ಅನಿಸಿ  ಎದ್ದು ಸುಮ್ಮಗೆ ಕೂತ. ಒಂದು ನಿಮಿಷ ಅಷ್ಟೇ! ಅವನ ಗಮನ ಅಲ್ಲಿದ್ದ ಪುಟಾಣಿ ಮೇಜಿನ ಮೇಲೆ ಹರಿಯಿತು. ಅದರ ಮೇಲೆ ಬಿಳಿಯ ಹೊದಿಕೆ,ಅದೆಷ್ಟು ಚೆಂದವಿತ್ತೆಂದರೆ ಜನ್ನು ಕೂತಲ್ಲಿಂದ ಓಡಿ ಅದರ ಹತ್ತಿರ ಹೋಗಿ ತನ್ನ ಪುಟ್ಟ ಕೈಗಳಲ್ಲಿ ಅದನ್ನು ಮೃದುವಾಗಿ ಮುಟ್ಟಿದ, ಅದು ಅವನ ಅಮ್ಮನ ಕೂದಲಿನ ಹಾಗೆ ಮೆತ್ತ ಮೆತ್ತಗಿತ್ತು. ಬಿಳಿ ಬಿಳಿ ಬಟ್ಟೆಯಲ್ಲಿ ತೂತಿನ ಚೆಂದದ ಚಿತ್ತಾರವಿತ್ತು. ಅದರ ಮೇಲೊಂದು ಸಣ್ಣ ಆದರೆ ಚೆಂದ ಅಂದರೆ ಭಯಂಕರ ಚೆಂದದ ಗಾಜಿನ ಹಾಗೆ ಹೊಳೆಯುವ ಬೊಂಬೆ. ಅದೊಂದು ಹುಡುಗಿ ಬೊಂಬೆ, ಗುಂಡು ಪಾಪು ಹಾಗೆ ನಗು ಅದರದ್ದು, ಇನ್ನೇನು ಅದನ್ನು ಮುಟ್ಟಬೇಕು ನಮ್ಮ ಜನ್ನು ಅಷ್ಟರಲ್ಲೇ ಸಾಂತಯ್ಯ ಪೊರ್ಬುಗಳು " ಲವೀನಾ, ಬೇಬಿ...." ಅಂತ ಕರೆಯುತ್ತಾ ಒಳ ಬಂದರು. ಮೊದಲವರ ಕಣ್ಣಿಗೆ ಬಿದ್ದದ್ದು ದೊಡ್ಡ ಕಣ್ಣಿನ ಬೆರಗಾಗಿ ಅವರನ್ನು ನೊಡುತ್ತಿರುವ ಜನ್ನು!

No comments:

Post a Comment